Tuesday, April 13, 2021

ಒಗ್ಗರಣೆಯ ಘಮಲಿನ ಜಾಡು ಹಿಡಿದು

Samatha R
♦ ಸಮತಾ ಆರ್.
response@134.209.153.225
newsics.com@gmail.com

 

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಪ್ರಾರಂಭವಾದ ಬಳಿಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅತ್ಯಂತ ಕಠಿಣ ಅವಧಿ ಎಂದರೆ ಬೆಳಗಿನ ಅವಧಿಯ ನಾಲ್ಕನೇ ಪಿರಿಯಡ್ ಆಗಿಬಿಟ್ಟಿದೆ. ಒಗ್ಗರಣೆಯ ಘಮ ಘಮಿಸುವ ಪರಿಮಳ ತೇಲಿ ಬಂದರೆ ಶಾಲೆಯ ಶಿಕ್ಷಕರು,  ವಿದ್ಯಾರ್ಥಿಗಳನ್ನು ಏಕಾಗ್ರಚಿತ್ತರಾಗಿಸಲು ಬ್ರಹ್ಮನೇ ಬಂದರೂ ಸಾಧ್ಯವಾಗದು.

===

“ಅಮ್ಮ, ಇವತ್ತು ಸಾರು ಚೆನ್ನಾಗಿಲ್ಲ, ಊಟ ಬೇಡ” ಎಂದು ವರಾತ ತೆಗೆದ ಮಗಳ ಕಡೆಗೆ ಕಣ್ಣುಬಿಟ್ಟು, ಹೆದರಿಸುತ್ತಾ,” ದಿನಾ ನಿಂದೊಂದು ರಾಗ ಊಟ ಮಾಡುವಾಗ್ಲೇ ಶುರುವಾಗುತ್ತೆ, ಎಲ್ಲರೂ ಸುಮ್ಮನೆ ತಿಂತಾ ಇದ್ದಾರೆ, ನಿಂದೇನೆ ಗೋಳು” ಎಂದು ಸಿಡುಕಿದಾಗ, ಪತಿರಾಯರು ಕೂಡ ಮಗಳೊಂದಿಗೆ ದನಿಗೂಡಿಸಿ “ಏನೋ ಕಮ್ಮಿಯಾಗಿದೆ ಅನ್ನಿಸ್ತಿದೆ ಕಣೆ” ಎಂದು ಹೇಳಿದರು.
ಹೇಗೆ ಅಡುಗೆ ಮಾಡಿದರೂ ಗಂಡ ಮಕ್ಕಳನ್ನು ಒಪ್ಪಿಸುವುದು ಹರಸಾಹಸವೇ ಸರಿ. ಹಾಗಾಗಿ “ಇವರದ್ದು ಇದ್ದಿದ್ದೆ ” ಎಂದು ಗೊಣಗಿಕೊಳ್ಳುತ್ತಾ, ನಾನು ಕಲಸಿದ ತುತ್ತು ಬಾಯಿಗಿ ಟ್ಟಾಗ್ಲೇ ತಿಳಿದಿದ್ದು ಸಾರಿಗೆ ಒಗ್ಗರಣೆ ಹಾಕಲು ಮರೆತಿದ್ದೇನೆ ಎಂದು.
ನೀವು ಏನೇ ಹೇಳಿ, ಎಷ್ಟೇ ಹದಹಾಕಿ ಸಾರು ಮಾಡಿದರೂ ಅದಕ್ಕೆ ಕಟ್ಟಕಡೆಯ ಅಲಂಕಾರದಂತೆ, ಫಿನಿಶಿಂಗ್ ಟಚ್ ಅಂತಾರಲ್ಲ ಹಾಗೆ, ಒಗ್ಗರಣೆ ಹಾಕದೆ ಹೋದರೆ ಅದರ ರುಚಿ ಅಪೂರ್ಣವೇ ಸರಿ.
ನಮ್ಮ ಭಾರತೀಯ ಖಾದ್ಯಗಳಲ್ಲಿ ಒಗ್ಗರಣೆಯ ಅಲಂಕಾರ ಭೂಷಿತ ಖಾದ್ಯಗಳು ವೈವಿಧ್ಯಮಯ ರೂಪ, ರುಚಿ ಗಳಿಂದ ನಮ್ಮ ಜಿಹ್ವಾ ಚಾಪಲ್ಯವನ್ನು ಅನಾದಿಕಾಲದಿಂದಲೂ ತಣಿಸುತ್ತಲೇ ಬಂದಿವೆ. ಮಾಂಸಾಹಾರವೇ ಆಗಲಿ, ಸಸ್ಯಾಹಾರವೇ ಆಗಲಿ, ವಿಧವಿಧ ಅಡುಗೆಗಳಿಗೆ ಹಾಕುವ ತರಹ ತರಹದ ಒಗ್ಗರಣೆಗಳ ಬಗ್ಗೆ ತಿಳಿಯದೇ ಹೋದರೆ ಅಡುಗೆ ಕೆಲಸಕ್ಕೆ ನಾಲಾಯಕ್ ಎಂದು ತಿಳಿಯುವುದೇ ಸರಿ.
ಒಗ್ಗರಣೆ ಎಂಬುದು ಅತ್ಯಂತ ಸರಳ ತಾಂತ್ರಿಕ ಅಂಶವಾದರೂ ಅಡುಗೆಯ ರುಚಿಯ ಕೀಲಿಕೈ ಇರುವುದು ಇದರ ಕೈಯಲ್ಲಿ ಅಲ್ಲವೇ?
ಈ ಸರಳ, ನಮ್ರ, ಸುಲಭದ ಒಗ್ಗರಣೆ ಹೆಚ್ಚಿನ ಸಾಮಗ್ರಿಗಳೆನನ್ನು ಬಯಸದು. ಎಣ್ಣೆ, ಸಾಸಿವೆ ಇಂಗು, ಕರಿಬೇವು ಅತ್ಯಂತ ಸರಳ ಮೂಲಭೂತ ಸಾರಿಗೆ ಒದಗುವ ಸಾಮಗ್ರಿಗಳಾದರೆ, ಇವುಗಳೊಂದಿಗೆ ಕಡಲೆಬೇಳೆ, ಉದ್ದಿನಬೇಳೆ, ಶೇಂಗಾ ಹಸಿರು ಇಲ್ಲವೇ ಒಣಮೆಣಸಿನಕಾಯಿ, ಜೀರಿಗೆ ಇತ್ಯಾದಿಗಳು ನಮ್ಮ ಉದ್ಯೋಗಸ್ಥ ಮಹಿಳೆಯರ ಆಪದ್ಬಾಂಧವ ತಿಂಡಿಗಳಾದ ಚಿತ್ರಾನ್ನ, ಪುಳಿಯೋಗರೆ, ಉಪ್ಪಿಟ್ಟು, ಅವಲಕ್ಕಿ, ಮಂಡಕ್ಕಿ ಉಸಲಿಗಳಂತಹ ತಿಂಡಿಗಳಿಗೆ ಬೇಕಾಗುವ ಪದಾರ್ಥಗಳಾಗಿವೆ. ಈ ತಿಂಡಿಗಳು ಇರದೇ ಹೋಗಿದ್ದಿದ್ದರೆ ದಿನಾ ದೋಸೆ, ಇಡ್ಲಿ, ರೊಟ್ಟಿ, ಚಪಾತಿಗಳನ್ನು ಮಾಡಿ ಮಾಡಿ ಹೈರಾಣಾಗಿ ಹೋಗಬೇಕಾಗಿತ್ತು. ಒಂದು ಒಗ್ಗರಣೆ ಹಾಕಿದರೆ ಸಾಕು ಕೆಲವೇ ನಿಮಿಷಗಳಲ್ಲಿ ತಯಾರಾಗುವ ಈ ತಿಂಡಿಗಳು ಸಮಯವನ್ನು ಉಳಿಸಿ, ರುಚಿಯನ್ನು ಕೆಣಕಿ ,ಜೇಬಿಗೂ ಅಂತಹ ಕತ್ತರಿ ಹಾಕದೆ, ಬೆಳಗಿನ ಉಪಾಹಾರದ ಚಿಂತೆಯನ್ನು ಕ್ಷಣಾರ್ಧದಲ್ಲಿ ದೂರಮಾಡುವ ಯಕ್ಷಿಣಿ ವಿದ್ಯೆ ಉದ್ಯೋಗಸ್ಥ ಮಹಿಳೆಯರಿಗೆ ಕರಗತವಾಗಿದೆ.
ಜತೆಗೆ ಒಮ್ಮೊಮ್ಮೆ ರಾತ್ರಿಯ ಹೊತ್ತು ಊಟ ಮುಗಿಸಿ, ಪಾತ್ರೆಗಳನ್ನೆಲ್ಲ ತೊಳೆದು ಮಗುಚಿ, ಇನ್ನೇನು ಮಲಗಲು ಹೋಗುವ ಎಂದು ಸಿದ್ಧವಾಗುವಾಗ, ದಿಡೀರನೆ ಪ್ರತ್ಯಕ್ಷವಾಗುವ ನೆಂಟರು ಇಲ್ಲವೇ ಸ್ನೇಹಿತರ ಹೊಟ್ಟೆಯನ್ನು ಶೀಘ್ರವಾಗಿ ತಣಿಸಲು ಕೂಡ ಒಗ್ಗರಣೆ ತಿಂಡಿಗಳುಸಮಯಕ್ಕೆ ಒದಗುತ್ತವೆ.
ಎಲ್ಲಿಯಾದರೂ ಸಣ್ಣ ಸಣ್ಣ ಕಿರು ಪ್ರವಾಸ ಹೊರಟಾಗ ಬುತ್ತಿಕಟ್ಟಲು ಕೂಡ, ಒಂದು ಚಿತ್ರಾನ್ನ, ಒಗ್ಗರಣೆ ಹಾಕಿದ ಮೊಸರನ್ನ ಇದ್ದರೆ ಎಷ್ಟು ಸುಲಭ. ಹೋಟೆಲಿಗೆ ಸುಮ್ಮನೆ ದುಡ್ಡು ದಂಡ ಹಾಕುವುದು ತಪ್ಪುತ್ತದೆ, ಜತೆಗೆ ಕೊಂಡೊಯ್ಯಲು ಕೂಡ ತುಂಬಾ ಸುಲಭ.
ಒಗ್ಗರಣೆಯ ಪರಿಮಳಕ್ಕೆ ಬಾಯಲ್ಲಿ ನೀರು ಒಡೆಯದೇ, ಹೊಟ್ಟೆಯಲ್ಲಿ ಹಸಿವು ಕೆರಳದೆ ಇರುವವರು ಯಾರು? ಅದರಲ್ಲೂ ಹೊಟ್ಟೆಯ ಹಸಿವು ಹೆಚ್ಚಾಗಿರುವ ಯಾವುದಾದರೂ ಸಂದರ್ಭದಲ್ಲಿ ಒಗ್ಗರಣೆಯ ಘಮ ಘಮಿಸುವ ಪರಿಮಳ ತೇಲಿ ಬಂದರೆ ಆಗುವ ಸಂತೋಷವನ್ನು ವರ್ಣಿಸಲು ಸಾಧ್ಯವೇ? ಇನ್ನೇನು ಅಡುಗೆ ಮುಗಿದು ಊಟದ ಸಮಯ ಆಯಿತೆಂದು ಸೂಚಿಸುವ, ಊಟದ ಬೆಲ್ಲಿನ ಕೆಲಸವನ್ನು ಮಾಡುವ, ಅಡುಗೆಯ ಅತ್ಯಂತ ಕೊನೆಯ ಕಾರ್ಯವಾದ ಒಗ್ಗರಣೆಯ ಚೊಯ್ ಶಬ್ದ ಹಸಿದು ಕುಳಿತವರೆಲ್ಲಾ ಲಗುಬಗನೆ ಎದ್ದು ಊಟಕ್ಕೆ ಸಿದ್ಧರಾಗಲು, ಕೈತೊಳೆದು ಬರಲು ಸೂಚಿಸುತ್ತದೆ.
ಈಗೀಗ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಪ್ರಾರಂಭವಾದ ಬಳಿಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅತ್ಯಂತ ಕಠಿಣ ಅವಧಿ ಎಂದರೆ ಬೆಳಗಿನ ಅವಧಿಯ ನಾಲ್ಕನೇ ಪಿರಿಯಡ್ ಆಗಿಬಿಟ್ಟಿದೆ. ಅದು ಮಧ್ಯಾಹ್ನ ಹನ್ನೆರಡರಿಂದ ಹನ್ನೆರಡು ನಲವತ್ತರ ಈ ಅವಧಿಯಲ್ಲಿ ಅಕ್ಷರ ದಾಸೋಹದ ಅಡುಗೆ ಮನೆಯಲ್ಲಿ ಅಡುಗೆಯ ಕೈಂಕರ್ಯ ಎಲ್ಲ ಮುಗಿದು, ಬಾಣಸಿಗರು ಮಾಡಿರುವ ಸಾಂಬಾರಿಗೆ ಅಂತಿಮ ಅಲಂಕಾರ ಒಗ್ಗರಣೆ ಹಾಕುವ ಸಮಯ. ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುವ ಅಡುಗೆಗೆ ಹಾಕುವ ಒಗ್ಗರಣೆಯ ಪ್ರಮಾಣವು ಅಧಿಕವಾಗ ಬೇಕಾಗಿರುವುದರಿಂದ, ಆ ಪ್ರಮಾಣದ ಎಣ್ಣೆ , ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಒಣಮೆಣಸುಗಳು ಹದವಾಗಿ ಕಾಯ್ದು ಒಗ್ಗರಣೆ ಯಾಗಿ ತಯಾರಾಗುವಾಗ ಮೇಲೇಳುವ ಪರಿಮಳದ ಮೋಡ ಅಡುಗೆಮನೆಯಿಂದ ಹಾಯ್ದು, ತರಗತಿ ಕೋಣೆಗಳ ಕಿಟಕಿಗಳ ಮೂಲಕ ನುಗ್ಗಿ, ಬೆಳಗಿನಿಂದ ಪಾಠಗಳ ಹೊಡೆತಕ್ಕೆ ಸಿಕ್ಕಿ ನುಗ್ಗಿ ನುಗ್ಗೆಕಾಯಿ ಆಗಿರುವ ವಿದ್ಯಾರ್ಥಿಗಳು ಎಷ್ಟು ತಡೆದರೂ ತೂಗಿ ತೂಗಿ ಬರುವ ನಿದ್ದೆಯನ್ನು ಓಡಿಸುವಂತೆ ಅವರ ಮೇಲೆ ಪರಿಮಳದ ಮಳೆಗರೆದು ಎಚ್ಚರಿಸುತ್ತದೆ. ಪರಿಮಳದ ಜಾಲಕ್ಕೆ ಸಿಲುಕಿದ ಪಾಠ ಕೇಳುವವರು, ಹೇಳುವವರು, ಜಿಹ್ವಾ ಚಾಪಲ್ಯ ಗೆದ್ದಿರುವ ಋಷಿಮುನಿಗಳಾಗಿದ್ದರೆ ಮಾತ್ರ ಪಾಠದ ಕಡೆಗೆ ಗಮನಹರಿಸಲು ಸಾಧ್ಯ.
ಶಾಲೆ ಏನಾದರೂ ಊರಾಚೆಗಿದ್ದು, ದೊಡ್ಡ ಆಟದ ಮೈದಾನ, ತಡೆಗೋಡೆಗಳಿಂದ ರಕ್ಷಿತವಾಗಿದ್ದರೆ ಬರೀ ಶಾಲೆಯ ಅಡುಗೆಮನೆಯ ಒಗ್ಗರಣೆ ಆಮಿಷ ಸಹಿಸಿಕೊಂಡರೆ ಸಾಕು. ಅಕಸ್ಮಾತ್ ಏನಾದರೂ ಊರ ಮಧ್ಯದ ಶಾಲೆಯಾಗಿದ್ದು, ಶಾಲಾ ಆವರಣದ ಸುತ್ತ ವಾಸದ ಮನೆಗಳಿದ್ದ ಪಕ್ಷದಲ್ಲಿ, ಮಧ್ಯಾಹ್ನದ ಸಮಯದಲ್ಲಿ, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಏಕಾಗ್ರಚಿತ್ತರಾಗಿಸಲು ಬ್ರಹ್ಮನೇ ಬಂದರೂ ಸಾಧ್ಯವಾಗದು.
ಒಗ್ಗರಣೆಗೆ ಎಂಥ ಮಾಂತ್ರಿಕ ಶಕ್ತಿ ಇದೆ ಅಂದರೆ ಅವಲಕ್ಕಿ ಮಂಡಕ್ಕಿ ಅಂತಹ ಸರಳ-ಸುಲಭ ಲಭ್ಯ ವಸ್ತುಗಳಿಗೂ ಅಮೋಘ ರುಚಿಯನ್ನು ಕೊಟ್ಟುಬಿಡುತ್ತದೆ. ಉತ್ತರ ಕರ್ನಾಟಕದ ಚೂಡಾ, ಒಗ್ಗರಣೆ ಮಂಡಕ್ಕಿಗಳ ಬಲೆಗೆ ಬೀಳದವರಾರು? ಸಂಜೆಯ ಚಹಾದೊಂದಿಗೆ ಹಿಡಿ ಚೂಡಾ ಇಲ್ಲವೇ ಒಗ್ಗರಣೆ ಹಚ್ಚಿದ ಮಂಡಕ್ಕಿ ಇದ್ದರೆ ಇನ್ಯಾವ ಪರಮಾನ್ನವೂ ಬೇಡ.
ಅದರಲ್ಲೂ ನಮ್ಮೂರು ಸಾಲಿಗ್ರಾಮದ (ಶಿವರಾಮಕಾರಂತರ ಊರು ಸಾಲಿಗ್ರಾಮ ಅಲ್ಲ, ಮೈಸೂರು ಜಿಲ್ಲೆಯ, ಕೆ ಆರ್ ನಗರ ತಾಲೂಕಿನ ಒಂದು ದೊಡ್ಡ ಊರು) ಒಗ್ಗರಣೆ ಮಂಡಕ್ಕಿ ತನ್ನ ವಿಶಿಷ್ಟ ರುಚಿ, ಪರಿಮಳದಿಂದ ತನ್ನ ಸುತ್ತಮುತ್ತಲಿನ ಸೀಮೆಯಲ್ಲಿ ಪ್ರಸಿದ್ಧಿಯಾಗಿದೆ.
ಈ ಒಗ್ಗರಣೆ ಪುರಿ ತಯಾರಿಸುವ ವಿಧಾನವು ವಿಶಿಷ್ಟವಾದದ್ದು. ಈರುಳ್ಳಿ ಬೆಳ್ಳುಳ್ಳಿಗಳನ್ನು ದಪ್ಪನಾಗಿ ಹೆಚ್ಚಿ ಚೆನ್ನಾಗಿ ಸೀದು ಹೋಗುವಂತೆ ಒಗ್ಗರಣೆಯಲ್ಲಿ ಬಾಡಿಸಿ, ಹುರಿದ ನೆಲಗಡಲೆ ಬೀಜ, ಒಣಕೊಬ್ಬರಿ ಚೂರುಗಳನ್ನು ಜತೆಗೆ ಸೇರಿಸಿ, ಮೈಸೂರು ಪುರಿಯೊಂದಿಗೆ ಮಿಶ್ರ ಮಾಡಿದರೆ ಒಗ್ಗರಣೆ ಪುರಿ ತಯಾರಾದಂತೆ ಸರಿ. ಊರಿನಲ್ಲಿರುವ ಏಕೈಕ ಥಿಯೇಟರ್ನ ಪ್ರಮುಖ ಆಕರ್ಷಣೆ ಸಿನಿಮಾಗಳೊಂದಿಗೆ ಒಗ್ಗರಣೆ ಪುರಿಯೂ ಒಂದು. ಪಾಪ್ಕಾರ್ನ್ ಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಆದರೆ ಹೆಚ್ಚು ರುಚಿಕರವಾದ ಈ ಪುರಿ ಯ ಪ್ಯಾಕೆಟ್ ಥಿಯೇಟರ್ ಒಳನುಗ್ಗುವ ಪ್ರತಿಯೊಬ್ಬರ ಕೈಯಲ್ಲೂ ರಾರಾಜಿಸುತ್ತಿರುತ್ತದೆ. ಎಲ್ಲೋ ಎರಡು-ಮೂರು ಮನೆಗಳವರು ಮಾತ್ರ ಮಾಡುವ ಈ ತಿಂಡಿಯನ್ನು ಮನೆಯಲ್ಲಿ ಮಾಡೋಣವೆಂದು ಹೊರಟರೆ ಎಷ್ಟೇ ತಿಪ್ಪರಲಾಗ ಹಾಕಿದರೂ ಬರುವುದಿಲ್ಲ .ಅದಕ್ಕೆ ಊರಿಗೆ ಹೋದಾಗೆಲ್ಲ ಕನಿಷ್ಠವೆಂದರೂ ಎರಡು ಸೇರು ಒಗ್ಗರಣೆ ಪುರಿ ಕೊಂಡುಕೊಂಡು, ಮೈಸೂರಿಗೆ ಬರುವ ತನಕವೂ ಬಸ್ಸಿನಲ್ಲಿ ಕುಳಿತುಕೊಂಡು ಮುಕ್ಕುತ್ತ ಬರುತ್ತೇನೆ.
ನನ್ನ ಮಕ್ಕಳಿಗೆ ಕೊಡಲು ಕೂಡ ನನಗೆ ಕೈಬಾರದು. ಮಕ್ಕಳಿಬ್ಬರು “ಅಮ್ಮ ನಿಂಗೆ ಸ್ವಲ್ಪವೂ ನಾಚಿಕೆಯಿಲ್ಲ, ಬಸ್ಸಲ್ಲಿ ಹೇಗೆ ಬಕಾಸುರಿ ತರಹ ಎಲ್ಲರೆದುರು ತಿನ್ನುತ್ತ ಇರ್ತಿಯಲ್ಲ “ಎಂದರೆ ನನ್ನ ಉತ್ತರ ಒಂದೇ “ಒಗ್ಗರಣೆ ಪುರಿ ವಿಚಾರಕ್ಕೆ ಬಂದರೆ ನಾಚಿಕೆ ಗೀಚಿಕೆ ಎಲ್ಲಾ ನಾಗಮಂಗಲದಾಚೆಗೆ” ಅಂತ.
ಇಂತಹ ವಗ್ಗರಣೆಯ ಮಹಿಮೆ ಪಾಪ ಇತರೆ ದೇಶದವರಿಗೆ ತಿಳಿಯದೆ ಇರುವುದು ಅವರ ದುರಾದೃಷ್ಟವೇ ಸರಿ. ಇಲ್ಲದೆ ಹೋಗಿದ್ದರೆ ಅವರ ಸೂಪುಗಳೆಲ್ಲ ಅಷ್ಟೊಂದು ರಸಹೀನ ವಾಗುತ್ತಿರಲಿಲ್ಲ. ಆ ಸೂಪುಗಳೂ ನನ್ನ ಪ್ರಕಾರವಂತೂ ಕಾಲು ತೊಳೆದ ನೀರಿಗೂ ಸಮವಲ್ಲ. ಲಕ್ಷಣವಾಗಿ ಒಗ್ಗರಣೆ ಹಾಕಿ, ಸಣ್ಣಗೆ ಕೊಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಾಡಿದ ಟೊಮೆಟೊ ತಿಳಿಸಾರಿನ ಮುಂದೆ ಯಾವ ಸೂಪು ಗೀಪು ನಿಲ್ಲಲಾರದು.
ಇನ್ನು ಯಾರೇ ಆಗಲಿ ಅಡುಗೆ ಕಲಿಯಲು ಹೊರಟಾಗ ಕಲಿಯುವ ಮೊದಲ ಹಂತವೇ ಒಗ್ಗರಣೆ ಹಾಕುವುದು. ಎಣ್ಣೆ ಎಷ್ಟು ಹದಕ್ಕೆ ಕಾಯಬೇಕು, ಸಾಸಿವೆ ಯಾವಾಗ ಹಾಕಬೇಕು, ಸಾಸಿವೆ ಸಿಡಿದ ನಂತರ ಕರಿಬೇವು, ಒಣಮೆಣಸು ಹಾಕು ,ಇತ್ಯಾದಿ ಸೂಕ್ಷ್ಮ ತಾಂತ್ರಿಕ ಅಂಶಗಳನ್ನು ಮನದಟ್ಟು ಮಾಡಿಕೊಂಡರೆ ಸಾಕು, ಅರ್ಧ ಅಡುಗೆಯ ಯುದ್ಧ ಗೆದ್ದಂತೆಯೇ ಸರಿ.
ನನ್ನ ಅಣ್ಣನ ಗೆಳೆಯನೊಬ್ಬ ಹುಡುಗಿ ನೋಡಲು ಹೋಗಿದ್ದಾಗ ಹುಡುಗಿ ಚೆನ್ನಾಗಿದ್ದರೂ ಅಡುಗೆ ಮಾಡಲು ತಿಳಿಯದು ಎಂದಿದ್ದಕ್ಕೆ ಅವರಮ್ಮ “ಹುಡುಗಿ ಬೇಡ ಕಣೋ” ಎಂದು ತಿರಸ್ಕರಿಸಿದರು. ಈತನಿಗೋ ಆ ಹುಡುಗಿಯೇ ಮೆಚ್ಚುಗೆ. ಆತನ ಹಟಕ್ಕೆ ಮಣಿದ ಅವನಮ್ಮ “ಕನಿಷ್ಠ ಹುಡುಗಿಗೆ ಒಗ್ಗರಣೆಯಾದರೂ ಹಾಕಲು ಕಲಿಯಲು ಹೇಳು. ಉಳಿದದ್ದು ಆಮೇಲೆ ನಾನು ಹೇಳಿಕೊಡುತ್ತೇನೆ” ಎಂದು ಕಂಡೀಶನ್ ಹಾಕಿದರು. ಆಮೇಲೆ ಆ ಹುಡುಗಿ ಒಂದೇ ವಾರದಲ್ಲಿ ಒಗ್ಗರಣೆ ಹಾಕುವುದನ್ನು ಕಲಿತು, ಅವಳ ಭಾವಿ ಅತ್ತೆಗೆ ಒಂದು ದಿನ ಉಪ್ಪಿಟ್ಟು ಮಾಡಿ, ಕಾಫಿ ಜತೆಗೆ ಸತ್ಕರಿಸಿದ ಮೇಲೆಯೇ ಅತ್ತೆ ಮದುವೆಗೆ ಅಸ್ತು ಎಂದಿದ್ದು. ಹೀಗೆ ಒಗ್ಗರಣೆಯ ಮಹಿಮೆಗಳನ್ನು ಹೇಳುತ್ತಾ ಹೋದರೆ ಭಾರತದ ಮೂಲೆ ಮೂಲೆಗಳಿಂದ ಕಥೆಗಳು ಎದ್ದು ಬಂದಾವು.
ಒಗ್ಗರಣೆ ಬರಿ ಅಡುಗೆಗೆ ಮಾತ್ರ ಸೀಮಿತವಲ್ಲ. ಮಾತಿನಲ್ಲಿ ಒಗ್ಗರಣೆ ಹಾಕಿ ರಸವತ್ತಾಗಿ ಮೋಡಿ ಮಾಡುವಂತೆ ಮಾತನಾಡುವವರು ಎಷ್ಟಿಲ್ಲ. ಅದರಲ್ಲೂ ಗಾಸಿಪ್ ಗಳನ್ನು ಹರಟೆ ಕೊಚ್ಚುವಾಗ ಗಾಸಿಪ್ ಗೆ ತುತ್ತಾದ ಮಿಕಗಳ ಬಗ್ಗೆ ಚೆನ್ನಾಗಿ ಆಡಿ, ಅಂದು, ಸಾಕಾಗಿ ಕೊನೆಗೆ ನಿಲ್ಲಿಸುವಾಗ “ಅಯ್ಯೋ ಕಂಡೋರ ಸುದ್ದಿ ನಮಗ್ಯಾಕೆ, ಮಾಡಿದವರ ಪಾಪ ಆಡಿದವರ ಬಾಯಲ್ಲಿ, ಹೋಗ್ಲಿ ಬಿಡಿ ಮಾಡಿದವರು ಅನುಭವಿಸುತ್ತಾರೆ” ಇತ್ಯಾದಿ ಒಗ್ಗರಣೆ ಹಾಕಿ ನಿಲ್ಲಿಸುತ್ತಾರೆ. ಇನ್ನು ನಾನು ಕೂಡ ಇಲ್ಲಿಗೆ ಈ ಒಗ್ಗರಣೆ ನಿಲ್ಲಿಸಿ ಹೊರಟೆ, ಒಗ್ಗರಿಸಲು ಮರೆತ ಸಾರಿಗೆ ಒಗ್ಗರಣೆ ಹಾಕಿ ರಿಪೇರಿ ಮಾಡಲು. ನೀವು ಕೂಡ ಜೋಪಾನ, ಒಗ್ಗರಣೆ ಪ್ರಹಸನ ಓದುತ್ತಾ ಓದುತ್ತಾ ನಿಮ್ಮ ಒಗ್ಗರಣೆ ಸೀದು ಗೀದು ಹೋದಾತು.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!