Wednesday, May 31, 2023

ಗಮ್ಯ, ರೋಚಕ ಹಾಣಾದಿ

Follow Us

ಪುಸ್ತಕ ಪರಿಚಯ
‘ಹಾಣಾದಿ’ ಕಾದಂಬರಿ
(ಲೇಖಕರು: ಕಪಿಲ ಪಿ. ಹುಮನಾಬಾದೆ )

  • ಕಲ್ಲೇಶ್ ಕುಂಬಾರ್

‘ಹಾಣಾದಿ’ (ಲೇ: ಕಪಿಲ್ ಹುಮನಾಬಾದೆ ) ಕಾದಂಬರಿಯಲ್ಲಿ ಓದುಗನಿಗೆ ತೋರಿರುವ ಈ ಹಾಣಾದಿಯ ಹಾದಿ ಇದೆಯಲ್ಲ.. ಅದೆಷ್ಟು ಗಮ್ಯ ಮತ್ತು ರೋಚಕವಾಗಿದೆಯೆಂದರೆ, ಆ ಹಾದಿಯನ್ನು ಒಳಗೊಂಡಂತೆಯೇ ಲೇಖಕ ಕಟ್ಟಿಕೊಟ್ಟಿರುವ ನಿಜವೆಂದರೆ ನಿಜ; ಭ್ರಮೆಯೆಂದರೆ ಭ್ರಮೆ ಎಂಬಂಥ ಲೋಕದಲ್ಲಿ ಕಳೆದು ಹೋಗಿರುವ ನಾನು, ಆ ಲೋಕದಲ್ಲಿ ಕಾಣಿಸಿಕೊಂಡಿರಬಹುದಾದ ಯಾವುದೋ ಒಂದು ಚರಾಚರ ವಸ್ತುವಾಗಿರುವೆನೇನೋ ಎಂಬ ಭಾವ ಕಾಡುತ್ತಿದೆ! ‘ಮಾಂತ್ರಿಕ ವಾಸ್ತವತೆ’ (ಮ್ಯಾಜಿಕ್ ರಿಯಲಿಸಮ್) ತಂತ್ರದಲ್ಲಿ ಹೆಣೆದಿರುವ ಈ ಕಾದಂಬರಿಯನ್ನು ಓದುತ್ತ ಓದುತ್ತ ಹೋದಂತೆ ಮಾಯದ ಲೋಕವೊಂದು ಕಣ್ಮುಂದೆ ತೆರೆದುಕೊಂಡು, ‘ಗುಬ್ಬಿ ಆಯಿ’ಯಂಥ ಆಯಿ ನಿಜದಲಿ ಈಗಲೂ ಅಲ್ಲೆಲ್ಲೋ ಕಥೆ ಹೇಳಲೆಂದೇ ಅಡ್ಡಾಡುತ್ತಿರಬೇಕೇನೋ ಎಂದೆನಿಸುತ್ತದೆ!..
..ಆ ನಿಶಾಚರ ರಾತ್ರಿಯಲ್ಲಿ ಗುಬ್ಬಿ ಆಯಿಯೊಂದಿಗೆ ಹೆಜ್ಜೆ ಹಾಕುತ್ತಿದ್ದ ಕಥೆಯ ಮುಖ್ಯಪಾತ್ರದ ಕಣ್ಮುಂದೆ ತೆರೆದುಕೊಳ್ಳುತ್ತ ಹೋಗುವ ಮಾಯಾಲೋಕದಲ್ಲಿ ಯಾರ ಊಹೆಗೂ ನಿಲುಕದ, ನಾವು ಕನಸಲ್ಲೂ ಕೂಡ ಕಾಣಲಸಾಧ್ಯವಾದ ಕಲ್ಪಿತ ಗ್ರಾಮವೊಂದರಲ್ಲಿ ಸಂಭವಿಸುವ ಘಟನೆಗಳು ಓದುಗನನ್ನು ಮಾಂತ್ರಿಕ ಲೋಕಕ್ಕೆ ಕರೆದೊಯ್ಯುತ್ತವೆ! ಆ ಗ್ರಾಮದಲ್ಲಿ ಎಂದೋ ಸಂಭವಿಸಿದ ವಿಷಮ ಸಂಗತಿಗಳ ನೆನಪುಗಳ ನೆರಳಿನಲ್ಲಿಯೇ ಈ ಕ್ಷಣದ ವರ್ತಮಾನದಲ್ಲಿ ಸಂಭವಿಸುತ್ತಿರುವ ಸಂಗತಿಗಳ ಅನುಭವವನ್ನು ಪಡೆಯುತ್ತಿರುವಾಗಲೇ ಆತನಿಗೆ ಗುಬ್ಬಿ ಆಯಿಯು ನಶಿಸಿ ಹೋದ ಗ್ರಾಮದ ಕಥೆ ಹೇಳುವುದರ ಮೂಲಕ ಇಡಿಯಾಗಿ ಇಲ್ಲಿ ಎಲ್ಲ ದುರಂತಗಳಿಗೂ ಕಾರಣವಾದ ಬಾದಾಮ ಗಿಡದಂತೆ ಈ ಲೋಕದಲ್ಲಿ ಆಗಾಗ ಸಂಭವಿಸುವ ಇಂಥ ಕ್ರಿಯೆಗಳಿಗೆ ಮನುಷ್ಯನ ವಿಕಾರ ಮನೋಸ್ಥಿತಿಯೇ ಕಾರಣ ಎಂಬರ್ಥವನ್ನು ಧ್ವನಿಸುತ್ತದೆ ಎಂದೆನಿಸುತ್ತದೆ..!! ಗುಬ್ಬಿ ಆಯಿ ಹೇಳಿದ ಕಥೆಯನ್ನು ನೆನಪಿಟ್ಟುಕೊಳ್ಳುತ್ತಿರುವಾಲೇ, ಇನ್ನೊಂದು ಕಥೆಯನ್ನು ಕೇಳಿಸಿಕೊಳ್ಳುತ್ತ, ಹಿಂದಿನ ಕಥೆಯು ಸ್ಮೃತಿಪಟಲದಿಂದ ಜಾರಿ ಹೋದೀತೆಂಬ ಸಂಕಟದ ಭಾವ ಕಾಡುತ್ತದೆ..
..ಹೀಗೆ, ಕಥೆ ಹೇಳುತ್ತ ಹೇಳುತ್ತ ಅಕ್ಷರಗಳಲ್ಲಿ ರೂಪುಗೊಂಡಿರುವ ಗುಬ್ಬಿ ಆಯಿ ಓದುಗನ ಕಣ್ಮುಂದೆ, ಅದೇ ಮೂಳೆಗಂಟಿದ ಚರ್ಮದಲ್ಲಿ ಜೀವಪಡೆದು ಎದುರು ನಿಲ್ಲುತ್ತಾಳೆ! ಆ ನಂತರದಲ್ಲಿ ಇಡಿಯಾಗಿ ಆ ಗ್ರಾಮದಲ್ಲಿನ ಸಕಲವೂ ಜೀವಪಡೆದು ಆಕೆಯ ಬೆನ್ನಿಂದೆ ಬಂದು ನಿಂತಂತೆ ಭಾಸವಾಗುತ್ತದೆ..! ಇದರಿಂದಾಗಿ, ಗುಬ್ಬಿ ಆಯಿಯಂಥ ಆಯಿ ಈಗಲೂ ನಮ್ಮ ನಿಮ್ಮ ನಡುವೆ ಇಂಥ ಕಥೆಗಳನ್ನು ಹೇಳಲೆಂದೇ ಅಗೋಚರ ಸ್ಥಿತಿಯಲ್ಲಿ ಜೀವಂತವಾಗಿದ್ದಾಳೆ ಎಂಬ ನಂಬಿಕೆ ಬಲವಾಗುತ್ತ ಹೋಗುತ್ತದೆ!!..
.. ಈ ಕಾದಂಬರಿಯ ಲೇಖಕ ಕಪಿಲ್ ವಯಸ್ಸಿನಲ್ಲಿ ಕಿರಿಯ! ಅಗಾಧ ಓದು, ಅಕ್ಷರಗಳೊಂದಿಗಿನ ಒಡನಾಟ ಇಂಥದೊಂದು ಕಾದಂಬರಿಯನ್ನು ಬರೆಯಲು ಪ್ರೇರಣೆಯಾಗಿದೆ ಎಂಬ ಮಾತನ್ನು ಬದಿಗಿಟ್ಟು, ಈ ಕಾದಂಬರಿ ಒಳಗೊಂಡಿರುವ ಭಾಷೆ, ವಸ್ತು ಮತ್ತು ಆ ವಸ್ತು, ಕಪಿಲ್ ಮೂಲಕ ರೂಪಿಸಿಕೊಂಡಿರುವ ತಂತ್ರದ ವಿಚಾರಕ್ಕೆ ಬಂದಾಗ ಅಚ್ಚರಿ ಎನಿಸುತ್ತದೆ. ಜೊತೆಗೆ, ಕಪಿಲ್ ವಿಚಾರದಲ್ಲಿ ನಿರೀಕ್ಷೆಯನ್ನು ಹುಟ್ಟಿಸುತ್ತದೆ.

‘ಹಾಣಾದಿ’ ಕಾದಂಬರಿಯ ಆಯ್ದ ಭಾಗ..

..ಊರ ಜನ ಬಟ್ಟೆ ಒಗೆಯಲು ಹೋಗುವ ಗುಂಡ ಈಗಲೂ ಹಾಗೇ ಇತ್ತು. ಅದು ಹೇಗೆ ನಿಂತಿತ್ತೆಂದರೆ ಬುಟ್ಟಿಯೊಂದರ ತಳ ಗೋಡೆಗೆ ಸ್ವಲ್ಪ ಒರೆ ಮಾಡಿ ತಾಕಿಸಿಡುವ ಆಕಾರದಲ್ಲಿತ್ತು. ಇದರ ಮೇಲೊಂದು ದೆವ್ವಿನಷ್ಟಗಲದ ಬೇವಿನ ಗಿಡ ಈಗಲೋ ಆಗಲೋ ಕುಸಿದು ಬೀಳುವಂತೆ ನಿಂತಿತ್ತು. ಎಲೆಗಳಿಲ್ಲದ ಮರ ಚರ್ಮ ಬಿಚ್ಚಿಟ್ಟು ಮೂಳೆ ತೋರಿಸುತ್ತ ನಿಂತ ಮನುಷ್ಯನಂತೆ ಕಾಣುತ್ತಿತ್ತು. ಅದರ ಬೇರುಗಳೆಲ್ಲ ಮೊದಲು ನೀರಿನಲ್ಲಿ ತೇಲುತ್ತಿದ್ದವು. ನಮ್ಮಜ್ಜಿ ಆ ಉದ್ದುದ್ದ ಬೇರುಗಳನ್ನು ತೋರಿಸಿ ಅವು ಭೂತದ ಉಗುರುಗಳೆಂದು ಹೇಳುತ್ತಿದ್ದಳು. ಅವುಗಳನ್ನು ಮುಟ್ಟಲು ಭಯಪಟ್ಟು ನಾವು ನೀರಿಗೆ ಇಳಿಯುತ್ತಲೇ ಇರಲಿಲ್ಲ. ಈಗ ನೀರು, ಬೇರುಗಳೆಲ್ಲ ಒಣಗಿ ಹೋಗಿದ್ದವು. ಅಲ್ಲಿದ್ದ ಮೀನುಗಳು, ಏಡಿಗಳು, ಕಪ್ಪೆಗಳು, ಹಾವುಗಳು ಎಲ್ಲವೂ ಮಖ್ಯವಾಗಿದ್ದವು. ಅಲ್ಲಿದ್ದ ನೀರಿನ ಝರಿಗಳು ಎಂದೋ ಸತ್ತು ಹೋಗಿದ್ದವು.
ಗುಂಡದ ಎಡಭಾಗದ ಮೂಲೆಯಲ್ಲಿ ಗುಹೆಯಂತಹ ರಂಧ್ರ ಇತ್ತು. ಸಾಮಾನ್ಯವಾಗಿ ಜನ ಈ ಗವಿ ಹೊಕ್ಕು ನಡೆದರೆ ನೇರ ಶ್ರೀಶೈಲಕ್ಕೆ ಹೋಗುವುದೆಂಬ ಪ್ರತೀತಿ ಇತ್ತು. ನಮ್ಮಜ್ಜಿಗೆ ಕೇಳಿದರೆ ‘ಅದು ಒಳ್ಳೆಯವರ ಕಾಲ ಹೋದವರು ಬಂದರೂ, ಇತ್ತಿಚೀನವರು ಏನೇ ಮಾಡಲಿ ಗುಲ್ಲೆಬ್ಬಿಸುವುದೇ ಜಾಸ್ತಿ ನೋಡು’ ಅದಕ್ಕೆ ದಾರಿ ಮುಚ್ಚಿದೆ ಅಂತ ಹೇಳಿದ ನೆನಪು.
ಒಳಗೊಂದು ಸಲ ಹೋಗಿ ಬರಬೇಕೆನಿಸಿತು, ಸುತ್ತ ಮುತ್ತ ಯಾರೂ ಇರಲಿಲ್ಲ. ಬಿಸಿಲಿನ್ನೂ ಬಿದ್ದಿರಲಿಲ್ಲ. ಯಾವ ಪ್ರಾಣಿಯ ವಾಸನೆಯೂ ಗಾಳಿಯಲ್ಲಿ ತೇಲಿ ಬರುತ್ತಿರಲಿಲ್ಲ. ಒಬ್ಬನೆ ಇದ್ದರೂ ತುಸು ಧೈರ್ಯ ಬಂತು. ಕೆಲವು ಸಲ ಒಂಟಿತನಗಳೇ ಹುಚ್ಚು ಸಾಹಸಕ್ಕೆ ಕೈಹಾಕಿಸುತ್ತವೆ ಎಂದು ನಿರ್ಧರಿಸಿ, ನಾನು ಒಳಗೆ ನಡೆದೆ. ಕಣ್ಣು ತಿನ್ನಲು ಕೂತ ಕತ್ತಲು ಹಸಿವಿನಿಂದ ಬಳಕುತ್ತಿತ್ತು. ಒಳಗೆ ಯಾವುದಾದರೂ ಅಡಿ ಪ್ರಾಣಿ ಇದ್ದರೆ? ಬೆವರಿಳಿಯಲು ಶುರುವಾಯ್ತು. ಮೊಬೈಲ್ ಬೆಳಕು ಹಾಕಿದೆ, ಕಾಲ ಕೆಳಗಿನ ಕೆಂಪು ನೆಲ ಕಾಣುತ್ತಿತ್ತು. ಬೆನ್ನು ಬಾಗಿಸಿ ಒಂದು ಕೈಯಲ್ಲಿ ಮೊಬೈಲ್ ಹಿಡಿದು ನಡೆದೆ. ಒಂದಿಷ್ಟು ಅಂಬೆಗಾಲಿಟ್ಟು ನಡೆದ ಮೇಲೆ, ಇಸ್ಪೀಟ್ ಎಲೆಗಳು, ಗಾಜಿನ ಬಿಯರ್ ಬಾಟಲಿಗಳು ಕಂಡವು. ತುಸು ಧೈರ್ಯ ಬಂದು ಹಾಗೇ ಮುಂದೆ ಕಣ್ಣು ಹಾಕುತ್ತಿದ್ದೆ.
ಮುಂದೆ ಹಾಗೇ ನಡೆದೆ. ಯಾವುದೋ ಹೊಳೆಯುವ ಕಣ್ಣುಗಳು ಬೆಳಕಿಗೆ ಮಿಂಚುತ್ತಿದ್ದವು. ಆದರೆ ಅದು ಏನೆಂದು ಗೊತ್ತಾಗಲಿಲ್ಲ, ಇದುವರೆಗೂ ಬಂದಿದ್ದೇನೆ ನೋಡಿಯೇ ಹೋಗೋಣವೆಂದು ಭಯವಾದರೂ ಅದುಮಿಟ್ಟುಕೊಂಡು ಸುಮ್ಮನೆ ಮೊಣಕಾಲೂರಿ ಮೈಮುಂದೆ ನೂಕುತ್ತಿದ್ದೆ. ಪಕ್ಕದ ಗೋಡೆಯ ಮೇಲೆ ಯಾವುದೋ ಗಿಡದ ಕೆಳಗೆ ತಲೆ ಎತ್ತಿ ಕೂತವನ ಹಿಂದೆ ಹೆಂಗಸೊಬ್ಬಳು ಬೆಂಕಿಯಲ್ಲಿ ಮೈಸುಟ್ಟುಕೊಳ್ಳುವ ಚಿತ್ರವೊಂದು ಯಾರೋ ಗಾಢವಾಗಿ ಕೊರೆದಿದ್ದರು. ಹೀಗೆ ಅಲ್ಲಿ ಎಡ ಬಲದ ಗೋಡೆ ಮೇಲೆ ಚಿತ್ರಗಳ ಮೆರವಣಿಗೆಯೇ ಇತ್ತು. ನನಗೆ ಏನೊಂದೂ ಹೊಳೆಯಲಿಲ್ಲ. ಹಿಂದಿನಿಂದ ಮಣ್ಣು ಉದುರಿ ಬೀಳುತ್ತಿರುವ ಸದ್ದು ಬಂತು. ಮುಂದೆ ಕೆಂಪುಗಲ್ಲುಗಳು ಬಿದ್ದ ದಾರಿ, ದಟ್ಟ ಕತ್ತಲಿತ್ತು. ಯಾಕೋ ಮುಂದೆ ಹೆಜ್ಜೆ ಇಡಲು ಭಯವಾಯಿತು. ತಿರುಗಿ ಮೊಣಕಾಲ ಮೇಲೆ ಓಡುತ್ತಲೇ ಹೊರ ಬಂದೆ.
ಮೈಧೂಳೆದ್ದು ಹೋಗಿತ್ತು. ಗವಿ ಕಡೆ ಹಿಂತಿರುಗಿಯೂ ನೋಡದೆ ಭರಭರ ಮನೆ ಹಾದಿಗೆ ಹೆಜ್ಜೆ ಹಾಕಿದೆ. ತಿರುಗಿ ಮನೆಕಡೆ ಬರುವಾಗ ಸಂದಿಯಿಂದ ಬರುವ ಮನಸ್ಸಾಯ್ತು. ಇದೊಂದು ನಮ್ಮ ಓಣಿಗೆ ಹೋಗಲು ಇರುವ ಶಾರ್ಟಕಟ್ ದಾರಿ ಅಷ್ಟೆ. ಹಿಂದೊಮ್ಮೆ ಈ ದಾರಿಯಿಂದ ಬರುವಾಗ, ಯಾರದೋ ಮನೆಯ ಹಿತ್ತಿಲಲ್ಲಿ ಅರಳಿದ ದುಂಡುಮಲ್ಲಿಗೆಯ ಬಳ್ಳಿ ಮಾಳಗಿಯ ಮೇಲೆ ಹರಿ ಬಿಟ್ಟಿದ್ದರು. ಅದರ ತಳದಲ್ಲಿ ನಾಯಿಕುನ್ನಿಗಳಿದ್ದವು. ಒಟ್ಟು ಐದು ಇರಬಹುದು. ಅವುಗಳ ಬಣ್ಣ ನೆನಪಿಲ್ಲ. ನಾ ಅಲ್ಲಿಂದ ಮನೆ ಕಡೆ ಹೋಗುತ್ತಿದ್ದೆ. ಕುಂಯಿ ಕುಂಯಿ ಅನ್ನುವ ಶಬ್ದ ಕೇಳಿಸುತ್ತಿತ್ತು. ನಾಯಿಕುನ್ನಿಗಳ ನೋಡಿದವನ ಮುಖ ಇಷ್ಟಗಲ ಹಲ್ಕಿಸಿಯಿತು. ಸ್ವಲ್ಪವೂ ಶಬ್ದ ಮಾಡದೆ ಆ ಕಡೆ ಈ ಕಡೆ ನೋಡಿದೆ, ಒಂದು ಕಡೆ ಕುಳ್ಳುಗಳ ದೊಡ್ಡ ಕುಂಪಿ ಹಾಕಿದ್ದರು. ಅಲ್ಲೊಬ್ಬಳು ಕುಳ್ಳು ಆರಿಸುತ್ತಿದ್ದಳು. ಅವಳು ಬಿಟ್ಟರೆ ಯಾರೂ ಇರಲಿಲ್ಲ.
ಸದ್ದಿಲ್ಲದೇ ಕೈಗಳು ಆ ಕುನ್ನಿಗಳಿರುವ ಸಣ್ಣ ಬೇಲಿಯೊಳಗೆ ಚಾಚಿ ತಡಕಾಡಿದವು, ಒಂದು ನಾಯಿ ಕುನ್ನಿ ಕೈಗೆ ತಗುಲಿತು, ಅದನ್ನು ಹಾಗೇ ಕೈಯಲ್ಲಿ ಹಿಡಿದುಕೊಂಡು ಗಂಡೋ ಹೆಣ್ಣೋ ಎತ್ತಿ ನೋಡಬೇಕೆನ್ನುವಷ್ಟರಲ್ಲಿಯೇ ಎಲ್ಲಿತ್ತೋ ಏನೋ ಅದರ ತಾಯಿ ಬಂತು. ಅದು ಮಾಸಿದ ಕೇಸರಿ ಬಣ್ಣದು ಇಂದಿಗೂ ನೆನಪಿದೆ. ಬೆನ್ನು ಹತ್ತಿತು. ಮರಿ ಅಲ್ಲಿಯೇ ಬಿಟ್ಟೆ. ನಾಯಿ ಎಂದರೆ ಅಂಜುಪುಕುಲ ನಾ. ಆ ಮರಿ ನೋಡಿದರೆ ಮುದ್ದಾಗಿ ಕಾಣುತ್ತಿತ್ತು. ಈ ತಾಯಿ ನೋಡಿದರೆ ಇಡೀ ಊರು ಸುತ್ತಾಕಿಸಿತು. ಕೊನೆಗೆ ತನ್ನ ಮುಂಗಾಲಿನಿಂದ ಚಡ್ಡಿಯ ಎಡ ತೊಡೆಯಲ್ಲಿ ಗೀರಿತು. ಅಲ್ಲೊಂದು ಅದರ ಹಲ್ಲು ಬಿದ್ದ ಗುರುತಿತ್ತು. ಹಲ್ಲು ನಾಟಿರಲಿಲ್ಲ. ತರಚಿದಂತೆ ಸಣ್ಣದಾಗಿ ರಕ್ತ ಚಿಮ್ಮುತ್ತಿತ್ತು. ಒರೆಸಿಕೊಂಡು ಹೋದೆ. ಆ ಗುಟ್ಟು ಇಂದಿಗೂ ಹೊರ ಬಿದ್ದಿಲ್ಲ. ಅಪ್ಪನಿಗೆ ಗೊತ್ತಾಗಿದ್ದರೆ ಸೂಜಿ ಹೊಡೆಸದೆ ಬಿಡುತ್ತಿರಲಿಲ್ಲ.
ಆ ದುಂಡುಮಲ್ಲಿಗೆ ಬಳ್ಳಿ ಈಗ ಅಲ್ಲಿರಲಿಲ್ಲ. ಆದರೆ ಆ ಬಳ್ಳಿ ಇದ್ದ ಜಾಗದಡಿ ಒಂದಿಷ್ಟು ಮಾಸಿದ ಯಾವುದೋ ಕಾಲದ ಮೂಳೆಗಳು ಬಿದ್ದಿದ್ದವು. ಅವುಗಳ ಸುದ್ದಿಗೆ ಹೋಗದೆ ಮನೆ ಹಾದಿ ಹಿಡಿದೆ. ಇವೆಲ್ಲ ಚಿತ್ರಗಳು ನಿನ್ನೆ ಮೊನ್ನೆ ನಡೆದಂತೆ ಅನಿಸುತ್ತಿದ್ದವು. ಜನ ತುಂಬಿರುತ್ತಿದ್ದ ಊರು ಈಗ ಖಾಲಿಯಾಗಿದೆ. ಈ ನೆನಪುಗಳು ಕೇಳುವ ಜೊತೆಗಾರರಿಲ್ಲ. ನೆಲದ ಮೇಲೆ ಇಟ್ಟ ನೆನಪಿನ ಜೋಳಿಗೆ ಹೆಗಲಿಗೇರಿಸಿಕೊಂಡು ಮನೆಗೆ ಬಂದೆ..
(ಕಾದಂಬರಿಯ ಏಳನೆಯ ಅಧ್ಯಾಯದಿಂದ..)

ಮತ್ತಷ್ಟು ಸುದ್ದಿಗಳು

vertical

Latest News

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹರೀಶ್ ಪೆಂಗನ್ ನಿಧನ

newsics.com ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ...

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ದುಷ್ಕೃತ್ಯ ಸಂಚು: ದಕ್ಷಿಣ ಕನ್ನಡದ 16 ಕಡೆ NIA ದಾಳಿ

newsics.com ಮಂಗಳೂರು: ಪ್ರಧಾನಿ ಮೋದಿಯವರ ಬಿಹಾರ ಕಾರ್ಯಕ್ರಮದ ವೇಳೆ ದುಷ್ಕೃತ್ಯ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಕ್ಷಿಣ ಕನ್ನಡ ಜಿಲ್ಲೆಯ 16‌ ಕಡೆ ದಾಳಿ‌ ನಡೆಸಿದೆ. ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ,...

ಸಮುದ್ರಕ್ಕೆ ಬಿತ್ತು ಉತ್ತರ ಕೊರಿಯಾ ಉಡಾಯಿಸಿದ ‘ಗೂಢಚರ್ಯೆ ಉಪಗ್ರಹ’

newsics.com ಸೋಲ್: ಉತ್ತರ ಕೊರಿಯಾ ಬುಧವಾರ ಉಡಾವಣೆ ಮಾಡಿದ ಗೂಢಚರ್ಯೆ ಉಪಗ್ರಹ ಸಮುದ್ರದ ಪಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಂತ್ರಿಕ ಕಾರಣಗಳಿಂದಾಗಿ ಗೂಢಚರ್ಯೆ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ ಎಂದು ಉತ್ತರ ಕೊರಿಯಾ ಮಾಧ್ಯಮಗಳು ತಿಳಿಸಿವೆ. ಮೊದಲು...
- Advertisement -
error: Content is protected !!