ಪುಸ್ತಕ ಪರಿಚಯ
• ದೀಪ್ತಿ ಭದ್ರಾವತಿ
ವೃತ್ತಿಯಲ್ಲಿ ಸಾಫ್ಟ್ವೇಕರ್ ಎಂಜಿನಿಯರ್ ಆಗಿರುವ ಮಧೂಸೂಧನ್ ವೈ.ಎನ್ ರ ಮೊದಲ ಕಥಾ ಸಂಕಲನ “ಕಾರೇಹಣ್ಣು” ಸರಳ ಭಾಷೆಯ ಅತ್ಯುತ್ತಮ ನಿರೂಪಣೆಯ ಹತ್ತು ಕಥೆಗಳು ಇಲ್ಲಿವೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ಓದಿಯಾದ ತಕ್ಷಣಕ್ಕೆ ಕಾಡುವ, ಕಲಕುವ. ಅರೇ ಇದು ಬರೆದದ್ದು ಹೇಗಪ್ಪ ಎನ್ನುವಂತಹ ಪ್ರಶ್ನೆಯೊಂದನ್ನು ಇಲ್ಲಿನ ಕತೆಗಳು ನಮ್ಮ ಮುಂದೆ ತಂದಿಡದೆ ಇರಲಾರವು.
ಸಂಕಲನದ ಮೊದಲ ಕತೆ “ನನ್ನ ಪ್ರೀತಿಯ” ಓದುತ್ತ ಹೋದಂತೆಲ್ಲ ಆವರಿಸಿಕೊಳ್ಳುತ್ತಲೇ ಹೋಗುತ್ತದೆ. ಕೊನೆಯಲ್ಲಿ ಅದು ಓದುಗನ ಲೆಕ್ಕಾಚಾರನ್ನೇ ಮಗುಚಿ ಹಾಕಿ ಹೀಗೊಂದು ವ್ಯಕ್ತಿ ಇರಲು ಸಾಧ್ಯವಾ? ಎನ್ನುವಂತ ಅಚ್ಚರಿಯೊಂದನ್ನು ತೆರೆದಿಡುತ್ತದೆ. ಅದೇ ರೀತಿ ಬೋಣಿ ಮತ್ತು ಮುಲಾಮು ಎರಡು ವಿಭಿನ್ನ ಮೂಲ ವಸ್ತುವನ್ನು ಹೊಂದಿದ್ದರೂ ಎರಡೂ ಕತೆಗಳು ಮಾನವನ ಸಂಬಂಧಗಳನ್ನು ಮತ್ತಷ್ಟು ಮತ್ತಷ್ಟು ಸಹನೀಯಗೊಳಿಸುತ್ತ ಹೋಗುತ್ತವೆ.ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಬದುಕುನ್ನು ನೋಡುತ್ತ ಸಂಬಂಧಗಳನ್ನು ಗಟ್ಟಿ ಬೆಸೆಯುತ್ತವೆ.
ಹುಡುಕಾಟ ಎನ್ನುವ ಮತ್ತೊಂದು ಕತೆ ತೀವ್ರವಾಗಿ ಹಿಡಿದಿಡುವ ಕತೆ. ಅದೇ ಕಾರಣಕ್ಕೆ ಇದಕ್ಕೆ ಮುನ್ನುಡಿ ಬರೆದಿರುವ ಸುನಂದ ಕಡಮೆಯವರು “ತೀರಿಹೋದ ಎಂದು ತಿಳಿದ ವ್ಯಕ್ತಿಯೊಬ್ಬನನ್ನು ಆತನ ಮಗ ಬದುಕಿದ್ದಾನೆಂದು ಭ್ರಮಿಸಿ, ಹುಡುಕಾಟ ನಡೆಸುತ್ತಲೇ ತನ್ನ ತಂದೆಯ ನೆನಪುಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವುದು ತುಂಬ ಸೂಕ್ಷ್ಮ ವಿವರಗಳಲ್ಲಿ ಮೂಡಿ ಬಂದಿದೆ. ತಂದೆಯ ಬದುಕಿನ ಏರಿಳಿತದ ಘಳಿಗೆಗಳೆಲ್ಲ ಕಥಾ ನಾಯಕನಿಗೆ ಒಂದು ಮಾದರಿಯಾಗಿ ಕಂಡುಬರುವುದು ಅವನ ಬದುಕಿನ ಮೌಲ್ಯಗಳನ್ನು ಹೆಚ್ಚಿಸಿದಲ್ಲದೇ ಕತೆಯ ಮಾರ್ಧವತೆಯನ್ನು ಹೆಚ್ಚಿಸಿದೆ” ಎಂದಿದ್ದಾರೆ.
ಯುಗಯುಗಗಳ ದಾಟಿ ಮನಸ್ಸೆಳೆವ ಮತ್ತು ನಾವು ಕಾಣದ ಲೋಕವನ್ನು ಕಾಣಿಸುವ ಕತೆ. ಇದರಲ್ಲಿ ಮಧುರವರ ಕಲ್ಪನಾ ಶಕ್ತಿಯನ್ನು ಢಾಳಾಗಿ ಕಾಣಬಹುದು.
ಒಂದು ವೇಳೆ ಲೇಖಕ ಸ್ವತ: ಇದು ತನ್ನ ಮೊದಲ ಅಕೃತಿ ಎಂದು ಹೇಳದೇ ಹೋದರೆ ಅದು ತಿಳಿಯುವಂತಹ ಸಾಧ್ಯತೆಯೇ ಇಲ್ಲದಂತ ಪ್ರಬುದ್ಧ ಆಲೋಚನೆಯ, ಮಾಗಿದ ಕತೆಗಳು ಇಲ್ಲಿವೆ.
ಇವರಿಂದ ಮತ್ತಷ್ಟು ಇಂತಹ ಕತೆಗಳು ಕನ್ನಡ ಸಾಹಿತ್ಯ ಲೋಕಕ್ಕೆ ದಕ್ಕಲಿ ಎಂದು ಆಶಿಸುವೆ.
=====
(ಕಾರೇಹಣ್ಣು ಕಥಾಸಂಕಲನದ ಆಯ್ದ ಕಥೆ)
ಯುಗ ಯುಗಗಳ ದಾಟಿ
ತುಸು ಏರು ತಗ್ಗುಗಳಿಂದ ಕೂಡಿದ್ದು ಚಿಕ್ಕ ಮೈದಾನದಂತೆ ಹರಡಿರುವ ಆ ಬಂಡೆ ಅಲ್ಲಿರುವ ನಾಲ್ಕು ಪರ್ವತಗಳಲ್ಲಿ ಅತ್ಯಂತ ಎತ್ತರವಾದ ಪರ್ವತದ ಮೇಲಿದೆ. ಅಲ್ಲಲ್ಲಿ ಇರುವ ಸಣ್ಣ ಗುಂಡಿಗಳಲ್ಲಿ ಪಾಚಿ ಕಟ್ಟಿ ಸೊಲ್ಪ ಹೊತ್ತು ಮುಂಚೆ ಸುರಿದ ಧಾರಾಕಾರ ಮಳೆಯಿಂದಾಗಿ ನೀರು ತುಂಬಿದೆ. ಮಳೆ ನಂತರದ ಬಿಸಿಲಿನಿಂದಾಗಿ ಬಂಡೆ ಒಣಗಿದೆ. ನಿಂತ ನೀರಲ್ಲಿ ಬಾಲವಿರುವ ಕಪ್ಪೆ ಮರಿಗಳು ಯಾರ ಹಂಗೂ ಇಲ್ಲದೆ ಆಟವಾಡಿಕೊಳ್ಳುತ್ತಿವೆ. ನಾಲ್ಕೂ ಪರ್ವತಗಳ ನಡುವೆ ಆಳವಾದ ಕಣಿವೆ. ಚೂಪಾದ ಮರಗಳಿಂದ ಕೂಡಿದ ದಟ್ಟವಾದ ಕಾಡು ಪರ್ವತಗಳನ್ನೂ ಕಣಿವೆಯನ್ನೂ ಆವರಿಸಿದೆ. ಬಂಡೆಯ ಅಂಚಿನಲ್ಲಿ ಒಂದೆರಡು ದೊಡ್ಡ ಗಾತ್ರದ ಕಲ್ಲುಗಳಿದ್ದು ನಡುವೆ ಬೇರು ಬಿಟ್ಟು ಕಣಿವೆಯ ಕಡೆ ಚಾಚಿ ವೃಕ್ಷವೊಂದು ಬೆಳೆದು ನಿಂತಿದೆ. ಮರದ ತುದಿಯಲ್ಲಿ ನಿಂತು ಕೆಳಗೆ ಕಣ್ಣು ಹಾಯಿಸಿದರೆ ಕಣಿವೆಯ ನಡುವೆ ತೇಲುತ್ತಿರುವ ತೆಳುವಾದ ಹತ್ತಿಯಂತಹ ಮೋಡಗಳು ಕಾಣುತ್ತಿವೆ.
ಅದಾಗಲೇ ಸಂಜೆ ಹೊತ್ತು. ಕೆಂಪು ಸೂರ್ಯ ಆತುರಾತುರವಾಗಿ ಪರ್ವತಗಳ ನಡುವೆ ಇಳಿದು ಮರೆಯಾಗುತಲಿದ್ದ. ಎಳೆ ಬಿಸಿಲು. ಬಂಡೆಯ ತುದಿಯಲ್ಲಿ ಎರಡು ಬೆತ್ತಲೆ ದೇಹಗಳು ಸೆಟೆದು ನಿಂತು ಆ ಕೆಂಪು ಸೂರ್ಯನನ್ನು ದಿಟ್ಟಿಸಿ ನೋಡುತ್ತಿವೆ. ಎಳೆ ಬಿಸಿಲಿನ ಕಿರಣಗಳು ಅವರಿಬ್ಬರ ಮುಖದ ಮೇಲೆ ರಾಚಿ ಇಬ್ಬರೂ ತೇಜೋಮಯವಾಗಿ ಕಾಣುತ್ತಿದ್ದಾರೆ. ಅವರ ಅಪಾರ ಆತ್ಮವಿಶ್ವಾಸ ಸೂಸುತ್ತಿರುವ ಕಿರುನಗೆ ಹೊತ್ತ ತುಟಿಗಳು, ಅವನ ಬಲಿಷ್ಠ ಬಾಹುಗಳು,ಅವಳ ಸೌಮ್ಯ ಸ್ತನಗಳು, ನೆತ್ತಿಯಿಂದ ಬೆನ್ನ ತನಕ ಇಳೆಬಿದ್ದಿರುವಗಂಟು ಗಂಟಾದ ಕೂದಲುಗಳು, ಕಟ್ಟು ಮಸ್ತಾದ ಕಾಲ್ಗಳು, ಬರಿದಾದ ದಪ್ಪ ಚರ್ಮದ ಪಾದಗಳು, ನೋಡಲಿಕ್ಕೆ ಹೇಳಿ ಮಾಡಿಸಿದಂತ ಜೋಡಿಯದು. ಸುಮಾರು ಇಪ್ಪತ್ತರ ವಯಸ್ಸಿನ ಆಸುಪಾಸಿನವರಾದ ಅವರು ಆ ಪರ್ವತಗಳ ಮಗ್ಗುಲಲ್ಲಿರುವ ಬಯಲಿನಲ್ಲಿ ವಾಸಿಸುತ್ತಿರುವರು. ಅಲ್ಲಿ ದೊಡ್ಡ ದಂಡೇ ಇದೆ. ಅವರಿಬ್ಬರದು ಆಟವೋ ಆಟ. ಮಕ್ಕಳಂತೆ. ಒಬ್ಬರಾದ ಮೇಲೆ ಒಬ್ಬರು ಎದುರಿಗಿರುವ ಬೆಟ್ಟಗಳ ಕಡೆ ಕೂಗುವುದಂತೆ. ಪ್ರತಿಧ್ವನಿಗೋಸ್ಕರ ಕಾಯುವುದಂತೆ. ಯಾರ ಧ್ವನಿ ದೀರ್ಘ ಕಾಲ ಪ್ರತಿಧ್ವನಿಸುವುದೋ ಅವರು ಗೆದ್ದಂತೆ. ಜೋರಾಗಿ ಕೂಗುವುದು. ಮಾರ್ಧನಿಗೆ ಕಾಯುವುದು. ತಿರುಗಿ ಬಂದ ಧ್ವನಿ ಎಷ್ಟು ಹೊತ್ತು ಬದುಕುವುದು ಅನ್ನುವುದನ್ನು ಕುತೂಹಲದಿಂದ ಆಲಿಸುವುದು. ಮತ್ತದೇ.
ಹೊತ್ತು ಕಳೆದಂತೆ ಇಬ್ಬರಿಗೂ ಸುಸ್ತಾಗಿ ಒಂಟಿ ಮರದ ಬುಡದಲಿರುವ ಕಲ್ಲಿನ ಮೇಲೆ ಉಸ್ಸಪ್ಪಾ ಅಂತ ಕುಳಿತರು. ಮಳೆ ನಿಂತ ಮೇಲೆ ತಂಪಾದ ಎಳೆ ಗಾಳಿಯೊಂದು ಬೀಸುತಿತ್ತು. ಕಲ್ಲು ತಣ್ಣಗಿತ್ತು. ಇದು ಬೆತ್ತಲೆ ಚರ್ಮದ ಅರಿವಿಗೂ ಬಂತು. ಒಬ್ಬರನೊಬ್ಬರ ಕೈ ಹಿಡಿದಿದ್ದರು. ಕೂಗಿ ಕೂಗಿ ಬಾಯಿ ಒಣಗಿ ಹೊಟ್ಟೆ ಹಸಿದಿತ್ತು. ತಾವು ಕುಳಿತ ಕಲ್ಲಿನ ಮೇಲೆ ತಮ್ಮ ಬೆನ್ನ ಹಿಂದೆ ಸಣ್ಣ ಗುಂಡಿಯೊಂದು ನೀರು ತುಂಬಿಕೊಂಡಿದ್ದು ಇಬ್ಬರೂ ತಿರುಗಿ ಎರಡೂ ಅಂಗೈಗಳನ್ನು ಜೋಡಿಸಿ ಗುಂಡಿಯೊಳಗೆ ಕೈಯಿಟ್ಟು ಬೊಗಸೆಯಲ್ಲಿ ನೀರು ತುಂಬಿಸಿಕೊಂಡು ಗೊಳಕ್ ಗೊಳಕ್ಕನೆ ಕುಡಿದು ಮೂತಿ ಒರೆಸಿಕೊಂಡು ದೀರ್ಘ ಉಸಿರು ಬಿಟ್ಟರು. ಅವಳು ಇಳ. ಅವನು ಬಾನು.
ಅವರಿಬ್ಬರೂ ಹೀಗೆ ಕೂಡಿ ಆಟವಾಡಿ ದಣಿದು ಹಸಿದ ಕಣ್ಣುಗಳು ಆಹಾರ ಹುಡುಕುತ್ತಿರಲುಬಾನಿನ ಕಣ್ಣಿಗೆ ಮರದ ಪೊಟರೆಯಲ್ಲಿ ಬೆಳ್ಳಗೆ, ಗುಚ್ಚಿಗೆ ಆಗ ತಾನೆ ಭೂಮಿಯೊಡಲಿಂದ ಅರಳಿದ್ದ ಅಣಬೆ ದಿಂಡು ಕಂಡಿತು. ಬಾನು ತಾನು ಕುಳಿತಿರುವ ಕಲ್ಲಿನಿಂದ ಇಳಿದು ಪೊಟರೆಯತ್ತ ನಡೆದು ಅಣಬೆಯ ಗುಚ್ಚಿಯನ್ನು ಕಿತ್ತು ಅಲ್ಲಿಂದಲೇ ಇಳಗೆ “ಇಗಾ ನೋಡು” ಎಂದು ತೋರಿಸಿದನು. ಅವಳು ನಕ್ಕಳು. “ನೀನೂ ಬಾ” ಎಂಬಂತೆ ಕೈ ಬೀಸಿ ಸನ್ನೆ ಮಾಡಲು ಅವಳು ಇಳಿದು ಧಡ ಧಡ ಓಡೋಡಿ ಬಂದಳು. ಅಣಬೆಯನ್ನು ಅವಳ ಕೈಗಿತ್ತ ಬಾನು ಕಣಿವೆಯ ಕಡೆ ಬಾಗಿದ ಮರವನ್ನು ಹತ್ತಲಾರಂಭಿಸಿದನು. ಕೆಳಗೆ ಕಣ್ಣು ಮಂಜಾಗುವಂತ ಆಳವಿದ್ದರೂ ಸರಾಗವಾಗಿ ಸರ ಸರನೆ ಮರದ ತುದಿ ಏರಿ ಇಳೆಯ ಕಡೆ ತಿರುಗಿ ಹಣಬೆ ಗುಚ್ಚಿಯನ್ನು ಎಸೆಯೆಂದು ಸನ್ನೆ ಮಾಡಲು ಅವಳು ತನ್ನ ಎಡಗಾಲನ್ನು ಮುಂದೆ ಊರಿ ಬಲಗಾಲನ್ನು ಹಿಂದೆ ಊರಿ ಕೋನಾಕಾರದಲ್ಲಿ ನಿಂತು ಬಲಗೈ ಬೀಸಿ ಅಣಬೆ ಗುಚ್ಚಿಯನ್ನು ಮರದ ತುದಿಗೆ ಎಸೆದಳು. ಸುಯ್ಯನೆ ಗಾಳಿ ಬೀಸುತ್ತಿದ್ದರಿಂದ ಅಣಬೆ ಗುಚ್ಚಿ ಗಾಳಿ ಬೀಸಿದ ಕಡೆ ವಾಲಿ ಇನ್ನೇನು ಕೆಳಕ್ಕೆ ಬೀಳುತಿತ್ತು, ಕಣ್ಣ ರೆಪ್ಪೆ ಬಡಿಯುವ ವೇಗದಲ್ಲಿ ಬಾನುತನ್ನ ಎರಡೂ ಕೈಗಳಿಂದ ತುದಿಯಲಿರುವ ಟೊಂಗೆಯನ್ನು ಹಿಡಿದು ತನ್ನ ತಾನೆ ಸಾಣೆಯಂತೆ ಬೀಸಿಕೊಂಡನು. ಆ ಕ್ಷಣದಲ್ಲಿ ಅಮಡೆ ಕಚ್ಚಿನರನರಗಳೆಲ್ಲ ಸೆಟೆಯುವಂತೆ ಜಗ್ಗಿ, ಕಾಲುಗಳ ಬೆರಳ ಸಂದಿಯಲ್ಲಿ ಗುಚ್ಚಿ ಸಿಕ್ಕಿ ಅದೇ ವೇಗದಲ್ಲಿ ಟೊಂಗೆಯನ್ನು ಪುನಃ ಆಲಂಗಿಸಿ, ಸಮತೋಲನ ಕಂಡುಕೊಳ್ಳುವ ಮುಂಚೆಯೆ ಎವೆಯಿಕ್ಕದೆ ದಿಟ್ಟಿಸುತ್ತಿದ್ದ ಇಳೆಯ ದೃಷ್ಟಿ ಸಂಧಿಸಿದಾಗಮತ್ತದೇ ನಗು. ಅಲ್ಲಿದ್ದ ನಾಲ್ಕೂ ಪರ್ವತಗಳು ನಾಚುವಂತೆ.
ಇತ್ತ ಬೆಟ್ಟದ ಬಲಭಾಗದಲ್ಲಿಅಂದರೆ ಪಶ್ಚಿಮಕ್ಕೆಆಗ ತಾನೆ ಮುಳುಗಿದ್ದ ಸೂರ್ಯ ಬಾನಿನಂಗಳದಲ್ಲಿ ಬಣ್ಣದೋಕುಳಿಯಾಡಿ ಹೋಗಿದ್ದನು. ಇವರಿಬ್ಬರು ಪಶ್ಚಿಮಕ್ಕೆ ಮುಖ ಮಾಡಿ ಕೊಂಬೆಯ ಮೇಲೆ ಕುಳಿತುಕಾಲುಗಳನ್ನು ಕೊಂಬೆಯಿಂದ ಕೆಳಗೆ ಇಳಿಬಿಟ್ಟು ಹಿಂದೆ ಮುಂದೆ ಜೋಕಾಲಿಯಾಡಿಸುತ್ತಲೋಕಾಭಿರಾಮವಾಗಿ ಗುಚ್ಚಿಯಿಂದ ಒಂದೊಂದೆ ಅಣಬೆಯನ್ನು ಬಿಡಿಸಿ ಮಣ್ಣು ಕೊಡವಿ ಜಗಿಯುತ್ತಿದರು.
“ಇವುನೆ, ರಾತ್ರಿ ನಂಗೊಂದು ಕನಸು ಬಿದ್ದಿತ್ತು ಕಣೋ”.
ದವಡೆಯಲಿದ್ದ ಅಣಬೆಯನ್ನು ಲೊಚಲೊಚನೆ ಜಗಿಯುತ್ತ, “ಎಂತದ್ದೋ?”
“ಒಂದು ಸತಿ ಹಿಂಗೆ ಮಳೆ ಸುರಿದೂ ಸುರಿದೂ ನಾವು ಹಿಂಗೆ ಇದೇ ಮರದ ಮೇಲೆ ಕುಂತು ಕೆಳಗೆ ಕಾಲು ಆಡಿಸಿದಾಗ ಕಾಲಿಗೆ ಸಿಗೋವಷ್ಟು ಈ ಕಣಿವೇಲಿ ನೀರು ತುಂಬಿ ನಾನು ನಿನ್ನ ಮ್ಯಾಲೆ ನೀನು ನನ್ನ ಮ್ಯಾಲೆ ನೀರು ಎರಚೋಆಟ ಆಡ್ತಿರ್ತಿವಂತೆ”
“ಹ್ಹಿ ಹ್ಹಿ ಅಂದ್ರೆ ಈ ಬೆಟ್ಟಗಳೆಲ್ಲಾ ದ್ವೀಪಗಳಾಗಿದ್ದವು ಅನ್ನು… ಅಮೇಲೆ..?“
“ಅಮೇಲೆ, ಒಂದು ತೆಪ್ಪ ಮಾಡಿಕೊಂಡು ಈ ಬೆಟ್ಟದ ತುದಿಯಿಂದ ಆ ಬೆಟ್ಟದ ತುದಿಗೆ, ಆ ತುದಿಯಿಂದ ಇನ್ನೊಂದು ತುದಿಗೆತೇಲಿಕೊಂಡು ಹೋಗಿ ಬತ್ತೀವಂತೆ. ಕ್ಕಿ ಕ್ಕಿ..”
“ಈಗೇನು ಹಗ್ಗ ಕಟ್ಟೋನೇನು… ಮಂಗನಂಗೆ ಹಾರಕೊಂಡು ಹೋಗುವಂತೆ…” ಅಂತ ಅವನು ಛೇಡಿಸಲು,
“ಹೋಗೋ ಮಂಗ…” ಎಂದು ಇವಳು ತಿವಿದಳು.
ಮಾತಿನೊಂದಿಗೆ ಅಣಬೆಗಳು ಸಹ ಮುಗಿಯುತ್ತ ಬಂದು ಮಣ್ಣಾಗಿದ್ದ ಕೈಗಳನ್ನು ಇಬ್ಬರೂ ತಮ್ಮತಮ್ಮ ವೃಷ್ಟಕ್ಕೆ ಒರೆಸಿಕೊಂಡರು. ಪ್ರಕೃತಿಯು ಪೂರ್ವ ದಿಕ್ಕಿನಿಂದ ಆಕಾಶಕ್ಕೆ ಕಪ್ಪು ಬಣ್ಣ ಹೊಡಕೊಂತ ಅದರ ಮೇಲೆ ಬಿಳಿ ಚುಕ್ಕೆ ಬರಕೋಂತ ಬರುತ್ತಿತ್ತು. ಹಕ್ಕಿ ಪಕ್ಕಿಗಳು ಕೂಕ್ ಕೂಕ್ ಕೂಕ್ ಅಂತನೋ… ಟಿವ್ ಟಿವ್ ಟಿವ್ ಅಂತನೋ ಚಿಕ್ ಚಿಕ್ ಚಿಕ್ ಅಂತಾನೋ ಸಂಜೆರಾಗದಲ್ಲಿ ಹಾಡಿಕೊಳ್ಳುತ್ತ ಆಕಾಶದ ತುಂಬ ಉರುಳಾಡುತ್ತ ಲಲ್ಲೆಗರೆಯುತ್ತ ಪರಸ್ಪರ ಚಿವುಟುತ್ತ ಹಾರಿಬರುತ್ತಿರಲು, ಎಲ್ಲಿಂದಲೋ ಧಡ್ ಅಂತ ಶಬ್ಧ ಕೇಳಿಬಂತು. ಕಾಡು ಕ್ಷಣಕಾಲ ಗಪ್ ಚುಪ್.
“ಇವುಳೇ, ಅಲ್ನೋಡೇ… ಬೆಳಕು”
“ಎಲ್ಲೋ?”
“ಕೆಳಗೆ ನೋಡೇ… “
“ಕಾಲು ಮಡಚಿ ನೋಡೇ… “
ಇವಳು ಜೋಕಾಲಿಯಾಡುತಿದ್ದ ಕಾಲುಗಳನ್ನು ನಿಲ್ಲಿಸಿ ಮಡಚಿ ದೃಷ್ಟಿ ಕೆಳಗೆ ಹಾಯಿಸಿದಳು. ಹೌದಲ್ಲಾ, ಕಣಿವೆಯ ಗೌವ್ಗತ್ತಲಲ್ಲಿ ಚುಕ್ಕಿ ತರಹ ಬೆಳಕು ಉದ್ಭವಿಸಿದೆ. ಆಳದಲ್ಲಿ, ಪ್ರಪಾತದಲ್ಲಿ. ಹಿಂದೆಂದೂ ಕಂಡಿರದದ್ದು.
“ಏನೋ ಇದು. ನಂಬಕಾಗ್ತಿಲ್ವಲ್ಲೋ. ಅಲ್ಲಿಗೆ ಹ್ಯಾಗೆ ಹೋಯಿತು ಚುಕ್ಕಿ“
“ನಂಗೂ ನಂಬಕಾಗ್ತಿಲ್ಲ ಕಣೆ. ನಾವು ಅಣಬೆ ತಿನ್ನಬೇಕಾದರೆ ಏನಾರ ನಮ್ಮ್ ಕಣ್ ತಪ್ಪಿಸಿ ಮ್ಯಾಲಿಂದ ಕೆಳಕ್ಕೆ ಬಿತ್ತಾ… ಅದುಕ್ಕೇನೆ ಆ ಪಾಟಿ ಶಬ್ಧ ಬಂತಾ ”
“ಏನೋಪ್ಪಾ. ಬಾ ಎಲ್ರಿಗೂ ಹೇಳಣ.”
“ಯಾರು ಮೊದಲು ಹೇಳ್ತಾರೋ” ಎನ್ನುತ್ತ ಬಾನು ಎದ್ದರೂ, ಬುಡದ ಮಗ್ಗುಲಿಗೆ ಕೂತಿದ್ದ ಇಳ ಮೊದಲು ಇಳಿದು ಇಬ್ಬರೂಬಂಡೆಯನ್ನೇರಿ ಗುಂಡಿ ಏರು ತಗ್ಗುಗಳ ಲೆಕ್ಕಿಸದೆ ಓಡತೊಡಗಿದರು. ಇಳ ಮುಂದೆ ಮುಂದೆ. ಬಾನು ಹಿಂದೆ ಹಿಂದೆ. ಓಡುತ್ತ ಓಡುತ್ತ ಇಳ ಇವನು ಎಲ್ಲಿ ಬರ್ತಾವ್ನೇ ಎಂದು ಹಿಂದೆ ತಿರುಗಿ ನೋಡಲಿಕ್ಕೆ.ಇವಳು ಎಷ್ಟು ದೂರ ಹೋದಳಪ್ಪ ಅಂತ ಬಾನು ಮುಂದೆ ಮುಂದೆ ನೋಡಲಿಕ್ಕೆ. ನೋಟ ಸಂಧಿಸಲು ಕುಲುಕುಲು ನಗಲಿಕ್ಕೆ.
***
ಬೆಟ್ಟದಿಂದೀಚೆಗೆ ಅಗಲವಾಗಿ ಸಮತಟ್ಟಾಗಿ ಹರಡಿಕೊಂಡಿರುವ ಬಯಲು. ನಿಂತು ನೋಡಿದರೆ ಸುಮಾರು ಇಪ್ಪತ್ತು ಕಿಲೋ ಮೀಟರ್ ಸರಹದ್ದನ್ನು ಬರಿಗಣ್ಣಲ್ಲೇ ಕಾಣಬಹುದು. ಆ ಬಯಲಿನ ಮೂಲೆಯಲ್ಲಿ ಅಂದಾಜು ಮೂವತ್ತು ಗುಡಿಸಲುಗಳು ಗುಂಪಾಗಿ ಕಟ್ಟಲ್ಪಟ್ಟಿವೆ. ಗುಡಿಸಲುಗಳ ನಡುಮಧ್ಯದಲ್ಲಿ ಸೌದೆಗಳ ಗುಡ್ಡೆ ಚಟ ಚಟ ಸದ್ದು ಮಾಡುತ್ತಾ ಉರಿಯುತ್ತಿದೆ. ಉರಿಯ ಸುತ್ತ ಮುದುಕ ಮುದುಕಿಯರು ಚರ್ಮದ ಕಂಬಳಿ ಹೊದ್ದು ಬೆಂಕಿ ಕಾಯಿಸುತ್ತಿದ್ದಾರೆ. ಕುಂತಿರುವ ಮಹನೀಯರಿಗೆ ಅಡ್ಡವಾಗಿ ಬೆಂಕಿಯ ಅಕ್ಕ ಪಕ್ಕ ಎರಡು ಗಡುಸಾದ ಕಂಬಗಳನ್ನು ನೆಟ್ಟಿದ್ದಾರೆ. ಕಂಬಗಳ ನಡುವೆಚರ್ಮ ಸುಲಿದ ದಢೂತಿ ಪ್ರಾಣಿಯನ್ನು ಕಾಲು ಮೇಲಕ್ಕೆ ಮಾಡಿ ಕಟ್ಟಿ ಬೆಂಕಿಯ ಉರಿ ತಾಗುವಂತೆ ನೇತು ಹಾಕಿದ್ದಾರೆ. ಸ್ವಲ್ಪ ದೂರದಲ್ಲಿ ಇನ್ನೆರಡು ಕಂಬಗಳಿದ್ದು ಅವುಗಳ ನಡುವೆ ಪ್ರಾಣಿ ಚರ್ಮದಚೀಲವನ್ನು ನೇತುಹಾಕಿದ್ದಾರೆ. ಬಹುಶಃ ಅದರಲ್ಲಿ ಕುಡಿಯುವ ನೀರು ತುಂಬಿರಬೇಕು. ವಯಸ್ಕ ಗಂಡಸರು ಸುಮಾರಾಗೇ ದೊಡ್ಡದಿರುವ ಮರದ ದಿಮ್ಮಿಯನ್ನು ಜಜ್ಜಿ ಜಜ್ಜಿ ಸಿಗಿಯುತ್ತಿದ್ದಾರೆ. ಅವರ ಎದುರಿಗೆಬೆಂಕಿ ಕೊಳ್ಳಿಯಾಚೆಗೆ ಅನತಿ ದೂರದಲ್ಲಿ ಹೆಂಗಸರು ಸೊಪ್ಪು ಸೆದೆಯನ್ನು ಸೋಸುತ್ತಿದ್ದಾರೆ. ಕಳ್ಳಾರೆ ಪಿಳ್ಳಾರೆ ಮಕ್ಕಳು ಬೆಂಕಿ ಸುತ್ತ ಹಿರೀಕರ ಸುತ್ತ ಹೆತ್ತವರ ಸುತ್ತ ಗುಡಿಸಲಿನ ಸುತ್ತ ಸುತ್ತುತ್ತಾ ಮುಟ್ಟಿಸುವಾಟಆಡುತಿದ್ದಾರೆ. ಛೋಟಾ ಕರುಗಳು ಹಿರೀಕರ ಹಿಂದುಗಡೆಯಿಂದ ಅವರ ಕಂಬಳಿಯನ್ನೋಕೂದಲನ್ನೋ ಜಗ್ಗುವುದುಕ್ಕೆ.ಆವಜ್ಜ ಅಜ್ಜಿಯರು “ಹೊಯ್ ಹೊಯ್ ಕೊಟ್ರೆ ನೋಡಿವಾಗ” ಎಂದು ಗುಟುರು ಹಾಕುವುದಕ್ಕೆ. ಹೈಕಳು ಕುಲಾರೆ ನಕ್ಕು ದೂರ ಓಡಿ, ತಿರುಗ ಬಂದು ಮತ್ತದನ್ನೆ ಮಾಡುವುದಕ್ಕೆ. ಮತ್ತೆ ಅಜ್ಜ ಅಜ್ಜಿಯರು ಹೊಯ್ ಎಂದು ಗದರುತ್ತ, ಮುಗುಧ ಮಕ್ಕಳು ಹಿರೀಕರ ಬೊಂಬಡಾ ಬಜಾಯಿಸುತ್ತಿದ್ದ ಅದು ಒಟ್ಟು ಮೂವತ್ತು ನಲವತ್ತು ಜನರ ಸಂಸಾರ.
ಬೆಂಕಿಯಿಂದ ಹರಿದ ಬೆಳಕು ಸುತ್ತಲೂ ಪಸರಿಸಿ ಕತ್ತಲಿಗೆ ಸೋತು ನಿಂತ ಜಾಗದಿಂದ ಇಳ ಬಾನು ಬುಸುಗುಡುತ್ತಾ ಪ್ರತ್ಯಕ್ಷರಾದರು.
“ಎಹ್ಹೆಹ್ಹೆ.”
“ಹ್ಹಿಹ್ಹಿಹೀ…”
“ಎಂಥದೋ ಆಟ, ಕೂಳು ಜಾಸ್ತಿ ಆಯಿತೇಂದ್ರೋ”
“ಇಲ್ಲ ಕಣ ತಾತ ಇವುನೇ…”
“ನಿಂಗೆ ಗೊತ್ತಲ್ಲಾ ಅಜ್ಜಾ. ಇವುಳೆ ಯಾವಾಗಲೂ ಅಂತಾ”
‘ಬರ್ರಿ ಇಲ್ಲಿ. ಒಯ್ ಆ ಕಡ್ಡಿಲಿರೊ ಮಾಂಸ ಸೀತಿದೆ. ಅತ್ತ ಕಡೆಯಿಂದ ತಿರುವಿಹಾಕ. ಅಹ್ಹಹ್ಹಹ್ಹಾ. ಯೇನು ಛಳಿಯೋ ಯೇನೋ. ಈ ಕಾಲಕ್ಕೆ ಸಾಯಿಸಬೇಕು ಅಂತ ಮಾಡೈತೇನೋ”
“ಅವ್ವ ನೀ ಯೇನ ಮಾಡ್ತಿದೀಯೇ?”, ಬಾನು ಹೆಂಗಸರ ಗುಂಪಿನ ಕಡೆ ನಡೆದ.
“ಕಾಣ್ತಿಲ್ವೇನೋ ಕಂದಾ, ಸೊಪ್ಪು ಸೋಸುತಾ ಇದೀನಿ. ಎಳೇ ಮಾಂಸಕಾ ಎಳೇ ಸೊಪ್ಪನು ಬೇಸಿ ಮಾಂಸದ ತುಣಕ ಜೊತಿ ಬೆರೆಸಿ ಒಂದು ಉಪ್ಪಿನಣ್ಣು ಒಂದು ಮೆಣಸಿನಕಾಯಿ ಒಂದು ಈರುಳ್ಳಿ ಜೊತಿ ಕಡಿದರಾ ಏನು ರುಚಿ ಅಂತೀಯ. ಅಪರೂಪಕ್ಕೆ ಸಿಕ್ಕೈತೆ ಸೊಪ್ಪು. ತಕ್ಕ ಇದನ್ನ ನೀರನಾಗೆ ತೊಳಿ.ಮಣ್ಣೆಲ್ಲ ಗಲುಗಿಸಿ ಸೊಚ್ಚ ಮಾಡಿ ತಗಂಬ”.
ಗುಂಪಿನ ಅತ್ಯಂತ ಹಿರೀಕ ನೇತು ಹಾಕಿದ್ದ ಪ್ರಾಣಿಯಿಂದ ಉಗುರಲ್ಲೆ ಚೂರು ಮಾಂಸ ಕಿತ್ತು ಬಾಯಲಿಟ್ಟು ಬೆಂದಿದೆಯೋ ಇಲ್ಲವೋ ನೋಡುತ್ತಿರುವಾಗ,”ಅಜ್ಜಾ ಮರತೆ, ಆ ಕಣಿವೇಲಿ ಇದ್ಕಿದಂಗೆ ಧಡ್ ಅಂತ ಶಬ್ಧ ಬಂತು ಅಜ್ಜ. ಇದ್ಕಿದಂತೆ ಕೆಳಗೆ ಕಣಿವೆಲಿ ಚುಕ್ಕಿ ಕಾಣಿಸ್ತು. ನಿಮಗೆಲ್ಲ ಕೇಳುಸ್ತೇನಜ್ಜ?” ಅಂದಳು ಇಳ.
ದೂರದಿಂದ “ನಾ ಮೊದ್ಲ ನೋಡಿದ್ದು ಅಜ್ಜ “ಅಂತಬಾನು. “ನಾನು ಮೊದ್ಲು ಹೇಳಿದ್ದು” ಅಂತ ಇಳ. ಇವರ ಕಿತ್ತಾಟದ ನಡುವೆಯೆ ಗುಂಪಿನ ಹಿರಿಯಜ್ಜಗಂಭೀರನಾಗಿ ಚಿಂತಾಕ್ರಾಂತನಾದ. ಹಣೆಯಲ್ಲಿ ಸುಕ್ಕು. ಕಣ್ಣಂಚಿನಲ್ಲಿ ಭಯ. ಸುತ್ತ ಬಯಲನ್ನು ಮೇಲಿನ ಆಕಾಶವನ್ನು ಪರ್ವತ ಸಮೂಹವನ್ನು ದಿಗಿಲಿನಿಂದ ನೋಡಿದ. ನರಿ ಆನೆ ಹುಲಿಗಳು ಅಪರೂಪಕ್ಕೆಅಳುತ್ತಿರುವವೋ. ಕೇಡುಗಾಲದ ಸನ್ನೆ ನೀಡುತ್ತಿರುವವೋ ಎಂಬಂತೆ ಕಿವಿ ಅಗಲಿಸಿ ಆಲಿಸಿದ..
“ಏನಾಯ್ತಜ್ಜ?”, ಗಲಾಟೆ ನಿಲ್ಲಿಸಿ ಬಾನು ವಿಚಾರಿಸಲು, “ಏನು ಇಲ್ಲಪ್ಪ. ಯವ್ವ ತಾಯಂದಿರ ಮಕ್ಕಳಿಗೆಲ್ಲ ಉಂಬಕಿಕ್ಕಿ ಮಲಗಿಸಿ ಬಿರಬಿರನೆ ಎಲ್ಲಾನು ಮುದುರಿಕ್ಕಿ ಗುಡ್ಳುಸೇರ್ಕಳಿ. ಹುಡುಗ್ರಾ ಹುಡಿಗಿರ್ರಾ. ಯಾವನಾರ ಆತು ನನ್ನ ಕೇಳದೇನೇ ಹಟ್ಟಿಯಿಂದ ಕಾಲು ತೆಗಿದೀರಾ ಜೋಕೇ.“ ಎಂದು ಅಂತಿಮ ತೀರ್ಪನಿತ್ತ ಅಜ್ಜ. ಅಜ್ಜನ ದುಗುಡದಿಂದ ನೆರೆದಿದ್ದವರು ಕಕ್ಕಾಬಿಕ್ಕಿ.“ಗೊತ್ತಾತೇನೂ ” ಹಿರೀಕ ಇನ್ನೊಮ್ಮೆ ಗುಟುರಿಸಿದ. ಮರುಮಾತಾಡದೆ ಮಂದಿ ಹರಡಿದ್ದೆಲ್ಲವನ್ನೂ ಎತ್ತಿಟ್ಟು ಮಡಚಿಟ್ಟು ಗಂಡಸರು ಹೆಂಗಸರು ಮಕ್ಕಳು ತಂತಂಮ್ಮ ಗುಡಿಸಲು ಹೊಕ್ಕರು. ಈಗ ಎನಾಗಿದೆಯೆಂದು, ಏನಾಗುವುದಿದೆಯೆಂದು, ಆಕಾಶದಿಂದ ಬಿದ್ದಿರುವ ಚುಕ್ಕಿಯೇ ಇರಬೇಕೆಂದು, ಕಾಡಿಗೆಲ್ಲಾ ಬೆಂಕಿಯಿಡುತ್ತದೇನೋ ಎಂದು, ನಿದ್ದೆ ಹತ್ತದ ಅವರು ತರತರನಾಗಿ ಚಿಂತಿಸಿ ಭಯಗ್ರಸ್ತರಾದರು. ಯಾರಾದರೂ ಬಂದು ಹೊತ್ತುಕೊಂಡು ಹೋದಾರೇನೋ ಎಂಬ ಭೀತಿಯಿಂದ ತಾಯಂದಿರು ಎಳೆ ಮಕ್ಕಳನ್ನು ಅವುಚಿಕೊಂಡು ಮಲಗಿದರು.
***
ಬೆಳಕರಿಯಿತು.
ಮಂದಿ ಒಬ್ಬೊಬ್ಬರಾಗಿ ಗುಡಿಸಲಿನಿಂದ ಕಣ್ಣುಜ್ಜುತ್ತಾ ಆಕಳಿಸುತ್ತಾ ಹೊರಬಂದರು. ರಾತ್ರಿ ಹಚ್ಚಿದ್ದ ಕೆಂಡ ಇನ್ನೂ ಹೊಗೆಯಾಡುತಿತ್ತು. ಗುಡಾಣದಂತಿದ್ದ ಗುಡಿಸಲಿನಿಂದ ಒಂದಿಬ್ಬರು ಮೆದೆ ಹಸಿ ಕಡಲೆ ಪಪ್ಪಿನ ಬಳ್ಳಿಯನ್ನು ಹೊತ್ತು ತಂದು ಕೆಂಡದ ಮೇಲೆ ಹರಡಲು ಉಳಿದವರು ಬೆಂಕಿಯನ್ನು ಸುತ್ತುವರಿದು ಹರಡಿದ್ದನ್ನು ತಿರುವಿಹಾಕುತ್ತ ಹದವಾಗಿ ಸುಡಲಾರಂಬಿಸಿದರು. ಹಸಿ ಹಸಿ ಬಳ್ಳಿಯಾದ್ದರಿಂದ ಕಡಲೆ ಬುಡ್ಡುಗಳು ಕಾವಿಗೆ ಚಟ ಚಟ ಸದ್ದು ಮಾಡುತ್ತಿದ್ದವು. ಸುಟ್ಟ ಕಡಲೆ ಬುಡ್ಡನು ಬಳ್ಳಿಯಿಂದ ಬಿಡಿಸಿ ಸುಲಿದು ಸುಡುತಿದ್ದ ಬೀಜಗಳನ್ನೇ ಉರುವಿಕೊಂಡು ಬಾಯಿಗೆಸೆದು ಅಗಿಯುತಿದ್ದರು ಅವರು. ಬಾಯಾರಿದಾಗ ಎದ್ದು ಕಂಬಕ್ಕೆ ನೇತು ಹಾಕಿದ್ದ ಚರ್ಮದ ಚೀಲದಲ್ಲಿದ್ದ ನೀರನ್ನು ಗಟ ಗಟ ಕುಡಿದು ತಿರುಗ ಕೂತು ಬುಡ್ಡನು ಸುಲಿಯುತಿದ್ದರು. ಎಲ್ಲರದು ಮುಗಿಯೊಷ್ಟತ್ತಿಗೆ ಪಕ್ಕದಲ್ಲಿ ತಿಂದು ಬಿಟ್ಟ ಸಿಪ್ಪೆ ಮತ್ತು ಸುಟ್ಟ ಬಳ್ಳಿಯಿಂದ ಸಣ್ಣ ಬಣವೆ ಸೃಷ್ಟಿಯಾಗಿತ್ತು. ರಾತ್ರಿ ಘಟಿಸಿದ್ದರ ಬಗ್ಗೆ ಏನೊಂದು ಮಾತಾಡದೆ ತಿಂದು ಮುಗಿಸಿ ಎದ್ದು ಚದುರಲುಅಜ್ಜ ಅಜ್ಜಿಯರು ಹುಳಗಳಂತೆ ಹರಿದಾಡುವ ಕಂದಮ್ಮಗಳನ್ನು ಹಿಡಿದಿಡುವುದು. ಆಗ ತಾನೆ ನಡೆಯಲು ಕಲಿತಿರುವ ಹೈಕಳುಕೈತಪ್ಪಿಸಿ ಓಡಿಹೋಗುವುದು, ದೊಡ್ಡವರು ಬುಟ್ಟಿ ಭರ್ಜಿ ಬಾಣಗಳಂತ ಹತಾರಗಳನ್ನು ಹಿಡಿದು ಕಾಡಿನತ್ತ ತೆರಳುವುದು ಮಾಡುತ್ತಿರಲುಇಳ ಬಾನು ಕಾಣೆಯಾಗಿರುವುದು ತಡವಾಗಿ ಗಮನಕ್ಕೆ ಬಂದು ಗಿಜ ಗಿಜಗುಡುತಿದ್ದ ವಾತಾವರಣ ಇದ್ದಕಿದ್ದಂತೆ ಸ್ತಬ್ಧವಾಯಿತು. ಒಬ್ಬರ ಮುಖವ ಇನ್ನೊಬ್ಬರು ನೋಡಿಕೊಂಡರು. ಸಣ್ಣ ಮಕ್ಕಳು ಏನಾಯ್ತೆಂದು ನಿಂತಲ್ಲೇ ನಿಂತು ಮೂಗು ಬಾಯಿಗಳಲ್ಲಿ ಏನನ್ನೋ ಮತ್ತಿನ್ನೇನನ್ನೋ ಶೋಧ ಮಾಡುತ್ತಿರಲು ಹಿರೀಕ ಪುನಃ ತಲೆ ಮೇಲೆ ಕೈಹೊತ್ತು ಕುಳಿತನು. ಅರೆಬರೆ ಹಿರೀಕರುಅವನನ್ನು ಅನುಸರಿಸಿದರು.
“ಅವರು ವಾಪಸ್ಸು ಬರಲ್ಲ. ಎಲ್ಲಾರು ಇವತ್ತಿಗೆ ಅವರನ್ನ ಮರತ್ಕಂಬಿಡಿ. ಇಂಗೆ ಅದನ್ನ ಹುಡುಕ್ಕಂಡೋದಂತ ನಮ್ಮ ಪೂರ್ವಿಕರು ಯಾರೂ ಇಲ್ಲಿವರೆಗೆ ಹಿಂದಿರುಗಿಲ್ಲ. ಹಂಗೆನೆ ಇದನ್ನ ಪಾಠವಾಗಿ ಅರಿತ್ಕಳಿ. ಮನುಷಂಗೆ ಕೆಟ್ಟ ಕುತೂಹಲ ಇರಬಾರದಂತೆ. ಭಾಳಾ ಬೇಗ ಅದು ಅವನ ಕಬಳಿಸಿಬಿಡುತ್ತಂತೆ.”
***
“ಹ್ಹೆಹ್ಹೇಹ್ಹೆ… ಹ್ಹಹ್ಹಾಹ್ಹ.. “
“ಯೇ ನಿಲ್ಲೋ ಬಿಟ್ಟೋಗಬೇಡ.ಹೊಟ್ಟೆಗೇನು ತಿಂದಿಲ್ಲ. ಸುಸ್ತಾಗ್ತಿದೆ“.
“ಮುಂದೆ ಏನಾರಸಿಕ್ತದೆ ಬಾ ನೋಡನ.“
“ಇಷ್ಟೊತ್ತಿಗೆ ಅಲ್ಲೆಲ್ಲ ಏನೇನಾಗೈತೋ”
“ನಿಂಗ್ಯಾಕೆ ಚಿಂತೆ. ನಾನಿದ್ದೀನಲ್ಲಾ. ಬೇಗ ವಾಪಸು ಹೋಗೋಣಂತೆ “
ಅವರಿಬ್ಬರು ಸರುವಿಳಿದು ಕಣಿವೆಯತ್ತ ಓಡುತ್ತಿದ್ದರು, ನೆನ್ನೆ ಕಂಡ ಚುಕ್ಕಿಯ ಸೋಜಿಗವನ್ನು ಭೇದಿಸಲಿಕ್ಕೆ. ಒಂದು ವೇಳೆ ಅಜ್ಜ ಅದರ ಬಗ್ಗೆ ಅಷ್ಟು ಗಂಭೀರವಾಗದಿದ್ದರೆಏನೋ ಅಂದುಕೊಂಡು ಸುಮ್ಮನಾಗುತಿದ್ದರೇನೋ. ಅಜ್ಜನ ನಿರ್ಬಂಧ ಅವರ ನಿದ್ದೆ ಕಸಿದಿತ್ತು. ಪರಸ್ಪರ ಗೊತ್ತಿರದೆ ರಾತ್ರಿಯಿಡಿಎಚ್ಚರದಿಂದಿದ್ದರು. ಮುಂಜಾನೆ ಬಾನು ಹೊರಬಂದು ಸಮಯ ತಿಳಿಯಲಿಕ್ಕೆ ಆಕಾಶ ನೋಡತೊಡಗಿದಾಗಇಳೆಯೂ ಗಕ್ಕಂತ ಎದ್ದು ಹೊರಬಂದಿದ್ದಳು.ಇಬ್ಬರಲ್ಲು ಅದೇ ಪ್ರಶ್ನೆ, ಕುತೂಹಲ. ಹವಣಿಕೆ. ತಕ್ಷಣ ಬಾನು ಅವಳನ್ನು ಎಳಕೊಂಡು ಬೆಟ್ಟದ ಕಡೆ ನಡೆದು ತಾನು ಬೇಟೆಗೋಸ್ಕರ ಯಾವಾಗಲೂ ತುಳಿಯುತಿದ್ದ ಜಾಡು ಹಿಡಿದು ಬೆಟ್ಟ ಇಳಿಯತೊಡಗಿದ್ದ. ಮೈಲಿ ಇಳಿಯುವಷ್ಟರಲ್ಲಿ ಬೆಳಕು ಮೂಡಿತ್ತು. ಅವನ ಶಕ್ತಿಯಿನ್ನು ಕರಗಿರಲಿಲ್ಲ. ಧಡ ಧಡ ಇಳಿಯುತಿದ್ದ. ಅವಳಿಗೆ ಹೊಟ್ಟೆ ಬರಿದಾಗಿ ತೊಳೆಸುತಿತ್ತು. ಕಾಲ್ಗಳು ತಂತಾನೇ ಬಿದ್ದಂಗಾಗುತಿತ್ತು. ಇನ್ನೇನು ಸಿಕ್ತು ಸಿಕ್ತು ಅಂತ ಸುಳ್ಳು ಸುಳ್ಳೇ ಆಶ್ವಾಸನೆ ಕೊಡುತ್ತ ಅವನು ಅವಳನ್ನು ತಳ್ಳುತ್ತಲೆ ಇದ್ದ. ಮತ್ತೆರಡು ಮೈಲಿ, ಇನ್ನು ಆಗಲ್ಲಪ್ಪಾ ಅಂತ ಅವಳು ಕೂತುಬಿಟ್ಟಳು. ಮಾರುದ್ದ ಮುಂದೆಯಿದ್ದ ಅವನು ತಿರುಗಿ ಬಂದ. ಕುಳಿತಾಗ ಅವನ ಮಾಂಸಖಂಡಗಳು ಅನಿಯಂತ್ರಿತವಾಗಿ ನಡುಗುತ್ತಿದ್ದವು. ಮೈಯೆಲ್ಲಾ ಬೆವರ ನೀರಿನಿಂದ ನೆಂದಿತ್ತು. ಕಣ್ಣು ರೆಪ್ಪೆಗಳು ತಂತಾನೇ ಮುಚ್ಚುತಿದ್ದವು. ಹೃದಯಗಳು ತಮಟೆ ಬಡಿದಂಗೆ ಢವ ಢವ ಬಡಿದುಕೊಳ್ಳುತ್ತಿದ್ದವು. ಸೂರ್ಯ ನೆತ್ತಿಮೇಲೇರಿದ್ದ. ಚೂಪಾದ ಮರಗಳಾಗಿದ್ದುದರಿಂದ ಕಿರಣಗಳು ತೂರಿ ಒಳಕ್ಕೆ ಬರುತಿದ್ದವು. ಕಾಡು ದಟ್ಟವಾಗಿದ್ದರೂ ಬೆಳಕಿಗೇನೂ ಕಮ್ಮಿಯಿರಲಿಲ್ಲ.
ಬರಿದಾಗಿದ್ದ ಶ್ವಾಸವನ್ನು ತುಂಬಿಸಿಕೊಳ್ಳಲು ಅವರು ತಾವು ಕುಳಿತಿದ್ದ ಕಲ್ಲಿನ ಮೇಲೆ ಅಂಗಾತ ಮಲಗಿದರು. ನಿಧಾನವಾಗಿ ದೇಹದ ಸಮಸ್ತ ಅಂಗಾಂಗಗಳು ಒಂದೊಂದಾಗಿ ದಣಿವಾರಿಸಿಕೊಂಡು ಕ್ರಮೇಣ ಛಿದ್ರವಾಗಿದ್ದಶಕ್ತಿ ಕ್ರೋಢೀಕರಿಸಿಉಸಿರಾಟ ಹದಕ್ಕೆ ಸಿಕ್ಕಿತು. ಒಣಗಿದ್ದ ಬಾಯಲ್ಲಿ ಉಗುಳು ಬಂತು. ಕಣ್ಣು ತೆರೆದುಕೊಂಡವು. ಬೆವರು ಕರಗಿ ಸುಯ್ಯನೆ ಥಂಡಿ ಗಾಳಿ ಹಾಯ್ದುಶರೀರ ತಂಪಾಯಿತು. ಏನೇನಿದ್ದರೂಉದರಕ್ಕೆ ಗಾಳಿ ತುಂಬಲಾಗುತ್ತದೆಯೇ? ಅದು ಖಾಲಿಯಿದ್ದು ಟಿವ್ಗುಡುತಿತ್ತು. ಬಾನು ಎದ್ದು ಏನನ್ನಾದರೂ ಹುಡುಕಿ ತರ್ತೀನಿ ಅಂತ ಹೊರಟ. ಇಳೆಯೂ ಎದ್ದು ಕೂತಳು.
ತಾನು ಮಲಗಿದ್ದ ಕಲ್ಲಿನ ಸಂದುಗೊಂದಿನಲ್ಲಿ ಕವಳೆ ಹಣ್ಣಿನ ಗಿಡದ ಬಳ್ಳಿ ಹರಡಿಕೊಂಡಿತ್ತು. ಗಿಡದ ತುಂಬ ಬರೀ ಹಸಿರು ಕಾಯಿಗಳಿದ್ದರೂ ಅಲ್ಲಲ್ಲಿ ಕೆಂಪಾಗಿದ್ದ ಹಣ್ಣುಗಳೂ ಇದ್ದವು. ಮುಳ್ಳಿನ ಗಿಡವಾದ್ದರಿಂದ ಇಳ ಜೋಪಾನವಾಗಿ ಒಂದೊಂದೆಹಣ್ಣನ್ನು ಬಿಡಿಸಿ ತಿನ್ನಲಾರಂಭಿಸಿದಳು. ಒಂದು ತಾನು ತಿಂದರೆ ಇನ್ನೊಂದು ಅವನಿಗೆ ಎತ್ತಿಡುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಬಾನು ಹಿಂದಿರುಗಿದ. ಎಡಗೈನಲ್ಲಿ ಜೇನಿನ ರಸ ತುಂಬಿದ ಮುತ್ತುಗದೆಲೆ.ಬಲಗೈನಲ್ಲಿ ಜೇನಿನ ರೊಟ್ಟಿ. ಕೈಬೆರಳುಗಳ ಸೊಂದಿಯಿಂದ ಜೇನು ಸೋರಿ ಮುಂಗೈಮೇಲೆಲ್ಲ ಹರಡಿಅಲ್ಲಲ್ಲಿ ಸತ್ತ ಜೇನು ಹುಳುಗಳು ಅಂಟಿಕೊಂಡಿದ್ದವು. ಮುದುರು ಮಾಡಿದ್ದ ಎಲೆಯನ್ನು ಅವಳ ಕೈಗಿಟ್ಟು ಅದರೊಳಗೆ ಜೇನಿನ ರೊಟ್ಟಿಯನ್ನು ಸಣ್ಣ ಸಣ್ಣ ತುಕಡಿ ಮಾಡಿ ಹಾಕಿ ಬೆರಳು ಇಟ್ಟು ಕಲಕಿ “ತಗ ಸದ್ಯಕ್ಕೆ ಇದನ್ನೆ ತಿನ್ನು” ಎಂದನು. ಅವಳು ಕೂಡಿಟ್ಟ ಕವಳೆ ಹಣ್ಣುಗಳ ಗುಡ್ಡೆಯನ್ನು ಅವನಿಗೆ ತಿನ್ನಲು ಸೂಚಿಸಿ ತಾನು ರೊಟ್ಟಿಯನ್ನು ಜೇನಿನಲ್ಲಿ ಅದ್ದಿ ರಸ ಹೀರುವವರೆಗೆ ಕಚಕಚನೆ ಜಗಿದು ಥುಪಕ್ಕನೆ ಉಗಿಯುವ ಆಟಕ್ಕಿಳಿದಳು. ಅವನು ಮೊದಲು ಮುಂಗೈಯನ್ನು ನೆಕ್ಕಿ ನಂತರ ರೊಟ್ಟಿ ಜಗಿದು ಥುಪಕ್ ಆಟದಲ್ಲಿ ಅವಳ ಜೊತೆಗೂಡಿದನು. ಇಬ್ಬರೂ ಅಷ್ಟು ಅಗಲ ಹೆಜ್ಜೇನನ್ನು ಸರಾಗವಾಗಿ ಹೊಟ್ಟೆಗಿಳಿಸಿ ಕೈ ಬಾಯಿಗಳನ್ನು ಅಂಟಂಟು ಮಾಡಿಕೊಂಡರು. ತೊಳೆದುಕೊಳ್ಳಲು ನೀರು ಸಿಗದಿರಲು ಹಸಿರಾಗಿದ್ದ ಇಬ್ಬನಿಮಯ ಹುಲ್ಲು ಹಾಸಿನ ಮೇಲೆ ಹಾಗೊಮ್ಮೆ ಹೀಗೊಮ್ಮೆ ಕೈಯಾಡಿಸಿ ಇಷ್ಟು ಸಾಕು ಎಂಬಂತೆ ಒರೆಸಿಕೊಂಡರು. ಬಾನು ಕವಳೆ ಹಣ್ಣುಗಳನ್ನು ಒಂದೆ ಗುಕ್ಕಿಗೆ ಬಾಯಿಗೆ ತುಂಬಿಕೊಂಡ, ಇವಳು ‘ಬೂತಪ್ಪ’ ಎಂದು ಆಡಿಕೊಂಡಳು.
“ಇನ್ನೆಷ್ಟು ದೂರ ಇರ್ಬೋದೋ ”
“ಸೊಲ್ಪ ದೂರ ಅಷ್ಟೆ ಕಣೆ. ನಾನು ಇದುಕ್ಕೂ ಮುಂಚೆ ಬೇಟೆಗೆ ಅಂತ ಎಷ್ಟೋ ಸಲ ಬಂದಿದೀನಿ. ಇದಕ್ಕಿಂತ ಕೆಳಗಿಳಿದಿದ್ದೀನಿ”, ತನ್ನನ್ನೆ ಯಾಮಾರಿಸಿಕೊಳ್ಳುವಂತ ಸುಳ್ಳನ್ನ ತೇಲಿ ಬಿಟ್ಟ ಬಾನು. ರುಚಿ ರುಚಿಯಾದ ಜೇನನ್ನು ಇಳಿಸಿ ಇಬ್ಬರೂ ಮೊದಲಿನಷ್ಟೆ ಚೈತನ್ಯರಾಗಿದ್ದರು. ಸುಮಾರು ಇನ್ನೂ ಒಂದು ಮೈಲಿ ಇಳಿದರು. ಬರು ಬರುತ್ತಾ ಇಳಿಜಾರು ಕಡಿಮೆಯೆನಿಸಿ ನೆಲವು ಸಮತಟ್ಟಾಯಿತು. ಚೂಪಾದ ಮರಗಳ ಬದಲು ಅಗಲವಾಗಿ ಹರಡಿಕೊಂಡ ಬೃಹದಾಕಾರದ ಮರಗಳು ಎದುರಾದವು. ಮರಗಳ ಕೊಂಬೆಗಳು ಒಂದಕೊಂದು ಒತ್ತಿಕೊಂಡಿದ್ದವು. ಮೇಲೆ ಹಸಿರು ಮಾಳಿಗೆ ಕಟ್ಟಿದಂತಿತ್ತು. ಆಕಾಶದ ಸುಳಿವಿರಲಿಲ್ಲ. ಬೆಳಕು ಇಲ್ಲವಾಗಿ ಮಬ್ಬಾವರಿಸಿತು. ಅಲ್ಲೇ ಅವರಿಗೆ ಮೊದಲ ದಿಗಿಲು ಆವರಿಸಿಕೊಂಡಿದ್ದು.
“ಅರೆ, ಇದೇನಿದು ಕೆಸರು. ಛೀಛೀ” ಎಂದು ಹಾರಿಬಿದ್ದಳು ಇಳ.
ಮುಂದೆ ಇರುವುದೆಲ್ಲ ಉಸುಬಿನಂತ ನೆಲ. ಕಾಲುಗಳಿಗೆ ಕೆಸರು ಮೆತ್ತಿಕೊಳ್ಳುತ್ತಿದೆ. ಗಿಡಗೆಂಟೆಗಳು ಕಾಣೆಯಾಗಿ ಬೃಹದಾಕಾರದ ಮರದ ಬುಡಗಳು ಎದುರಾಗುತ್ತಿವೆ. ಗಟ್ಟಿ ನೆಲವೆಂಬುದೆ ಇಲ್ಲ. ಎತ್ತ ನೋಡಿದರೂ ಬುರುಜೆ. ಜೊತೆಗೆ ಟುವ್ ಟುವ್ ಕ್ರೀಕ್ ಕ್ರೀಕ್ ಕಿಕಿಕೆ ಕಿಕಿಕೆ ಎಂಬಂತ ವಿಚಿತ್ರ ಪ್ರಾಣಿಗಳ ವಿಚಿತ್ರ ಶಬ್ಧಗಳು.
“ಬಾನು ಅಲ್ನೋಡೋ”, ಇಳ ಆಕಾಶದತ್ತ ಬೊಟ್ಟು ಮಾಡಿದಳು.ಬಾನು ತಲೆಯೆತ್ತಿದ.
ಕಣ್ಣುಗಳು. ನೂರಾರು ಸಾವಿರಾರು ಹೊಳೆಯುತ್ತಿರುವ ಕಣ್ಣುಗಳು. ನೀರಿನ ಮೇಲಿನ ಗುಳ್ಳೆಗಳಂತೆ ಅತ್ತಿಂದಿತ್ತ ಇತ್ತಿಂದತ್ತ ಹರಿದಾಡುತ್ತಿವೆ. ದೇಹವು ಅದೃಶ್ಯ. ಎಲ್ಲ ಕಣ್ಣುಗಳು ನಮ್ಮನ್ನೆ ನೋಡುತ್ತಿರುವಂತಿದೆ. ಯಾವ ವಿಚಿತ್ರ ಪ್ರಾಣಿಯಪ್ಪ ಇದು, ಭಯವಾಗ್ತಿದೆ. ಮುಂದಕ್ಕೆ ಹೋಗಬಹುದೋ ಬೇಡವೋ? ಇವೇನು ಕಚ್ಚುವ ಪ್ರಾಣಿಗಳೋ ನುಂಗುವ ಪ್ರಾಣಿಗಳೋ ತುಳಿಯುವ ಪ್ರಾಣಿಗಳೋ!
ಬಾನು ಇಳೆಯ ಕೈಹಿಡಿದು ಜೋಪಾನವಾಗಿ ಹೆಜ್ಜೆ ಇಡಲಾರಂಭಿಸಿದ. ಇಳ ಅವನನ್ನು ಅನುಸರಿಸಿದಳು. ಹತ್ತಿರತ್ತಿರ ಸುಳಿದಂತೆ ತೆರೆದುಕೊಳ್ಳುತ್ತಿದೆ, ಅವು ಒಂದೆ ತರಹದ ಪ್ರಾಣಿಗಳಲ್ಲ. ವಿಭಿನ್ನ. ವಿಚಿತ್ರ. ಆಕಾರ ವಿಕಾರ, ಇಲ್ಲಿ ಹಗಲೆಂಬುದೆ ಇಲ್ಲ. ಸಾಗರದಂತ ಕತ್ತಲೆ. ಅದಕ್ಕೆ ಒಗ್ಗಿಕೊಂಡಿರುವ ನಿಶಾಚರಿಗಳು. ಕುವ್ ಕುವ್ ಗುಟರ್ ಗುಟರ್ ಶಬ್ಧಗಳು!
“ಬಾನು ಭಯ ಕಣೋ. ಇದು ನಾವಂದುಕೊಂಡಷ್ಟು ಸುಲಭ ಇಲ್ಲ. ಈ ಬಗ್ಗಡದಲ್ಲಿ ಮೊಸಳೆ ಹಾವುಗಳೇನಾದರೂ ಸೇರಿಕೊಂಡಿದ್ದರೆ? ಇದ್ದರೂ ಗೊತ್ತಾಗೋದು ಹ್ಯಾಗೆ?”
“ಹೆದರಬೇಡ.ನನಗನ್ಸುತ್ತೆ ನಾವು ತಲುಪಬೇಕಾಗಿರುವ ಜಾಗಕ್ಕೆ ಬಂದಿದ್ದೀವಿ. ಇನ್ನೆರಡು ಹೆಜ್ಜೆ ದೂರ.“. ಅವರ ಮಾತು ಸುತ್ತ ದಢೂತಿ ಮರಗಳಿಗೆ ಬಡಿದು ಮಾರ್ಧನಿಸುತ್ತಿತ್ತು. ಮಬ್ಬಿನಲಿ ತಡವರಿಸುತ್ತಲೆಅವರು ಪರ್ವತದ ತಳಕ್ಕೆ ಬಂದಿದ್ದರು. ಇಳಿಜಾರು ಕಳೆದು ಎಷ್ಟೋ ದೂರ ಸಾಗಿದ್ದರು. ಬರುಬರುತ್ತ ಬುರುಜೆಯ ಆಳ ಹೆಚ್ಚಾಗಿ ಹೆಜ್ಜೆ ಎತ್ತಿಡುವುದು ಕಷ್ಟವಾಗುತ್ತಿತ್ತು. ಹೆಚ್ಚುಕಮ್ಮಿ ಕಾಲುಗಳು ಮೊಣಕಾಲಿನವರೆಗೆ ಕೌಸಿಕೊಳ್ಳುತ್ತಿದ್ದವು.
“ಬಾನೂ ಕಾಲಿಗೆ ಏನೋ ಕಚ್ಚಿದಂಗೆ ಆಯ್ತೊ.“
“ಸುಮ್ನೆ ಬಾರೆ ಎಲ್ಲಾ ನಿನ್ನ ಭ್ರಮೆ “
ಹೋಗ್ತ ಹೋಗ್ತ ಕಾಲು ಇನ್ನೂ ಆಳಕ್ಕೆ ಕೌಸಿಕೊಳ್ಳುತ್ತಿದೆ. ಬೀಳೋ ಹಂಗೆ ಆಗುತ್ತಿದೆ. ಹಿಡಿದುಕೊಳ್ಳಲು ಅತಾರವಿಲ್ಲ. ಎತ್ತ ನೋಡಿದರೂ ಹೆಮ್ಮರಗಳೇ. ಮರವನ್ನು ತಬ್ಬಲು ಕನಿಷ್ಟ ಒಂದೈದು ಜನರಾದರೂ ಬೇಕು.
“ಅಯ್ಯೋ ಅಮ್ಮಾ…ಬಾನೂ..! “
ಏನಾಯ್ತೆಂದು ಅವನು ತಿರುಗಿ ನೋಡುವಷ್ಟರಲ್ಲಿ ಇಳ ಮೆಲ್ಲಗೇ ಉಸುಬಿನಲ್ಲಿ ಇಳಿದು ಹೋಗುತಿದ್ದಳು. ಬಾನು ಬಹಳ ಮುಂದೆ ಸಾಗಿದ್ದ. ಅದು ಮಾಮೂಲಿ ಬುರುಜೆಯಾಗಿರದೆ ಕಳ್ಳಬುರುಜೆಯಾಗಿತ್ತು.ಆ ಪರ್ವತಗಳಿಂದ ಒಳಮಖವಾಗಿ ಹರಿದು ಬರುವ ನೀರು ಹೊರಹೋಗಲು ಸಲೀಸು ಮಾರ್ಗವಿಲ್ಲದೆ ತಾನುಹೊತ್ತು ತರುವ ಕೊರಕಲು ಮಣ್ಣಿನ ಜೊತೆ ಮಿಶ್ರಣವಾಗಿ ಕಣಿವೆಯಲ್ಲಿ ನೂರಾರು ಎಕರೆಯಷ್ಟು ಕಳ್ಳಬುರುಜೆ ಹುಟ್ಟಿಕೊಂಡಿತ್ತು. ಬಹುಶಃ ಇಲ್ಲಿಯ ತನಕ ಕಣಿವೆಗೆ ಇಳಿದುಬಂದವರೆಲ್ಲರೂ?
ಅದಾಗಲೆ ಅವಳ ಕಾಲುಗಳು ತೊಡೆಗಳವರೆಗೆ ಹೂತು ಹೋಗಿದ್ದವು. ಹಿಡಿಯಲು ಯಾವ ಆಧಾರವೂ ಸಿಗದೆ ಹಿಂದಕ್ಕೆ ಮುಂದಕ್ಕೆ ವಾಲಾಡುತ್ತಿದ್ದಳು. ಒಂದು ಕಾಲು ಎತ್ತಲು ಯತ್ನಿಸಿದರೆ ಇನ್ನೊಂದು ಕಾಲು ಇನ್ನೂ ಆಳಕ್ಕೆ ಕುಸಿದು ಎದೆ ಝಲ್ಲೆನ್ನುತ್ತಿತ್ತು.ಬಾನು ಎಷ್ಟು ಸಾಧ್ಯವೋ ಅಷ್ಟು ಬೇಗ ಅವಳನ್ನು ತಲುಪಬೇಕಿತ್ತು. ತಾನು ಕೂಡ ಬುರುಜೆಯೊಳಗೆ ಸಿಕ್ಕಿಕೊಳ್ಳದಂತೆ. ಅವನು ನಡೆದು ಬಂದ ಹೆಜ್ಜೆಗಳು ಬುರುಜೆಯಲ್ಲಿ ಪೂರ್ತಿ ಕದರದೆ ಅಸ್ಪಷ್ಟವಾಗಿ ಕಾಣುತಿದ್ದವು. ಅದೇ ಹೆಜ್ಜೆಗಳನ್ನು ಅನುಸರಿಸಿ ಅವಳತ್ತ ಧಾವಿಸಲಾರಂಭಿಸಿದ. ಏನೇಬಲ ಪ್ರಯೋಗ ಮಾಡಿದರೂ ಅವನ ನಡಿಗೆಯ ವೇಗ ಅವಳ ಕುಸಿಯುವ ವೇಗವನ್ನು ಮೀರಲಾಗಲಿಲ್ಲ.ಇಳ ಸೊಂಟಮಟ್ಟ ಮುಳುಗಿದ್ದಳು. ಅಲುಗಾಡಿದರೆ ಇನ್ನೂ ವೇಗವಾಗಿ ಇಳಿಯುತ್ತಿದ್ದಳು. ಅವಳ ಸಮೀಪ ಬರುಬರುತ್ತಿದ್ದಂತೆ ಆಳ ಹೆಚ್ಚಾಗಿ ಬಾನುವಿಗೆ ತಾನು ಅವಳನ್ನು ತಲುಪುವುದು ಅಸಾಧ್ಯವೆಂಬುದು ಮನದಟ್ಟಾಯಿತು. ಇಬ್ಬರ ಮುಖದಲ್ಲೂ ಸಾವಿನ ಖಚಿತತೆಯ ಭಯ. ಅಸಹಾಯಕತೆ. ಅಳು. ಮೀರುತ್ತಿರುವ ಸಮಯ.
“ಇಳ ಕಳ್ಳಬುರುಜೆ ಎಷ್ಟು ಅಗಲ ಇದೆಯೋ ಗೊತ್ತಿಲ್ಲ. ನಾನು ಅಲ್ಲಿಗೆ ಬಂದರೆ ಇಬ್ಬರೂ ಸಿಕ್ಕಿಹಾಕಿಕೊಳ್ತೀವಿ. ನಾನು ಹೇಳದಂಗೆ ಮಾಡು. ಮುಂದಕ್ಕೆ ಬಾಗಿ ಕೈ ಅಗಲಿಸಿ ಮಕಾಡೆ ಮಲಗಿಬಿಡು. ಮಲಗ್ತಾ ನಿಧಾನಕ್ಕೆ ಎರಡೂ ಕಾಲುಗಳನ್ನ ಹಿಂದಕ್ಕೆ ಎತ್ತು. ನೀರಿನಲ್ಲಿ ಈಜುವ ಹಂಗೆ. ನಾನು ಆದಷ್ಟು ಹತ್ತಿರ ಬಂದು ನಿನ್ನ ಎತ್ತಿಕೊಳ್ತೀನಿ ”
ಮಾರ್ಗವೇ ಇಲ್ಲದ ಕಡೆ ಯಾವ ಪ್ರಯತ್ನವೂ ಸಹ್ಯ ಮಾರ್ಗವೇ. ಅಂತೆಯೆ ಅವಳು ತನ್ನ ಎರಡೂ ಕೈಗಳನ್ನು ಮುಂದಕ್ಕೆ ಚಾಚಿ ಸೊಂಟ ಬಗ್ಗಿಸಿ ಮುಖವನ್ನು ಬುರುಜೆಯೊಳಗಿಟ್ಟು ಉಸಿರುಗಟ್ಟಿ ಬಲವಾಗಿ ಅದುಮಿ ಸೊಂಟದ ಪಟ್ಟು ಹಿಡಿದು ಕಾಲುಗಳನ್ನುಹಿಮ್ಮುಖ ಎತ್ತಲು ಪ್ರಯತ್ನಿಸಿದಳು. ಆಳಕ್ಕೆ ಹುದುಗಿದ್ದ ಕಾಲುಗಳನ್ನುಬಿಡಿಸಿಕೊಳ್ಳುವುದೆ ಕಷ್ಟವಾಯಿತು. ತನ್ನೆಲ್ಲ ಶಕ್ತಿಯನ್ನು ಚೆಲ್ಲಿ ಮತ್ತೊಮ್ಮೆ ತನ್ನನ್ನು ತಾನೆ ಬುರುಜೆಯೊಳಗೆ ಒತ್ತಿಕೊಂಡು ಕೊಸರಾಡಿದಳು. ಕಾಲುಗಳು ಕೊಂಚ ಸಡಿಲಗೊಂಡವು. ಬದುಕಿದಷ್ಟೆ ಸಂತೋಷ. ಕ್ರಮೇಣ ದೇಹ ಸಂಪೂರ್ಣ ಮೇಲೆ ಬಂದು ಬಲಕ್ಕೆ ವಾಲಿ ಅಂಗಾತ ಮಲಗಿ ಕಟ್ಟಿದ್ದ ಉಸಿರು ಬಿಟ್ಟಳು. ಮುಖದ ತುಂಬೆಲ್ಲ ಬಗ್ಗಡ. ಮೂಗಿನ ಮೇಲಿದ್ದ ಬಾಯಿಯ ಮೇಲಿದ್ದ ಕೆಸರಿನ ಚೂರು ಪಿಚಕ್ಕೆನೆ ಹಾರಿ ಕೆಳಗೆ ಬಿತ್ತು. ಇನ್ನೆರಡು ಬಾರಿ ಸಾವಧಾನದಿಂದ ಉಸಿರನ್ನು ಎಳೆದು ಎಳೆದು ಬಿಟ್ಟಳು. ತನ್ನ ದೇಹವು ಬುರುಜೆ ಮೇಲೆಸಮತಟ್ಟಾಗಿ ಮಲಗಿದೆ. ಮೆತ್ತಗಿದೆ, ತೇಲಿದಂತೆ ಅನಿಸುತ್ತಿದೆ. ಬದುಕಿದೆ. ಇನ್ನು ಬಾನು ಬಂದು ಎತ್ತೊಯ್ದು ರಕ್ಷಿಸುತ್ತಾನೆ. ಚಿಂತೆ ಪಡಬೇಕಿಲ್ಲ. ಹಿಂದೆ ವಾಲಿ ಅವನೆಡೆಗೆ ನಗು ಬೀರಿದಳು. ಬಾನು ಖುದ್ದು ಕಳ್ಳಬುರುಜೆಯ ಹಿಡಿತಕ್ಕೆ ಸಿಲುಕಿದ್ದ.ಅವನ ದೇಹದ ತೂಕದ ಪರಿಣಾಮ ಇಳಗಿಂತ ವೇಗವಾಗಿಮುಳುಗುತ್ತಿದ್ದ. ಇವಳು ತನ್ನನ್ನು ತಾನೆ ರಕ್ಷಿಸಿಕೊಳ್ಳುವ ಭರದಲ್ಲಿದ್ದಾಗ ಧಸಕ್ಕನೆ ಕುಸಿದಿದ್ದ ಬಾನು ಅವಳ ಗಮನ ಸೆಳೆಯದಿರಲೆಂದು ಬಾಯಿ ತೆರೆದಿರಲಿಲ್ಲ. ಏನು ಮಾಡುವುದೆಂದು ತೋಚಲಿಲ್ಲ ಇಳಗೆ. ಅದಾಗಲೆ ಎದೆ ಮಟ್ಟ ಮುಳುಗಿದ್ದರಿಂದ ಬಾನು ಬಹುತೇಕ ಬದುಕುವಾಸೆ ಕೈಬಿಟ್ಟಂತೆ ಅನಿಸಿತು. ಅವಳು ತನ್ನ ದೇಹದ ಸಮತೋಲನವನ್ನು ಕಾಯ್ದುಕೊಂಡು ಮೆಲ್ಲಗೆ ಅವನೆಡೆ ಉರುಳಲಾರಂಭಿಸಿದಳು. ಇಬ್ಬರ ನಡುವೆ ಮಾತು ಕಡಿತ. ಸಮಯದ ಬಿಗಿತ. ಬಾನುವಿನ ತಲೆ, ಭುಜ, ಕೈಗಳು ಮಾತ್ರ ಹೊರಗಿದ್ದವು. ಅವಳು ತನ್ನನ್ನು ಹಿಡಿದುಕೊಳ್ಳಲು ಸೂಚಿಸಿದಳು. ಅಂತೆಯೆ ಅವನು ಅವಳ ಒತ್ತಾಸೆ ಪಡೆಯಲು ಕೈ ಊರಿದಾಗ ಇಳ ಸಮತೋಲನ ಕೂಡ ತಪ್ಪಿ ಇವಳನ್ನೂ ಮುಳುಗಿಸಿಬಿಡುವೆ ಎಂದು ಭಯವಾಗಿ ಒಲ್ಲೆನೆಂದು ಕೈ ತೆಗೆದ ಬಾನು. ಇಳ ನೇರ ಸೆಟೆದುಕೊಂಡು ಅವನ ಒಂದು ಕೈಯನ್ನು ತನ್ನ ಎದೆ ಮೇಲಿಟ್ಟಕೊಂಡು ಇನ್ನೊಂದು ಕೈಯನ್ನು ತೊಡೆ ಮೇಲಿಟ್ಟು, “ಈಗ ಪ್ರಯತ್ನಿಸು” ಎಂದಳು. ಬಾನು ಮೇಲೇಳಲು ಪುನಃ ಯತ್ನಿಸಿದ. ಆಗಲಿಲ್ಲ. ತನ್ನ ಗಾತ್ರ ಅವಳ ಗಾತ್ರವನ್ನು ಮೀರಿಸಿ ಮೇಲೇರಬೇಕಾದರೆ ಅವಳನ್ನ ತನ್ನ ಸೊಂಟ ಮಟ್ಟ ಬುರುಜೆಯೊಳಗೆ ಒತ್ತಬೇಕಾಗುತ್ತದೆಂಬ ಗಣಿತದ ಅರಿವಾಗಿ ಪ್ರಯತ್ನ ನಿರರ್ಥಕ ಎನಿಸಿತು.
ಬದಲಾಗಿ ಅವಳನ್ನು ಆಧಾರವಾಗಿಸಿಕೊಂಡು ಅಕ್ಕ ಪಕ್ಕ ಸರಿಯಬಹುದೇನೋ, ಯೋಚಿಸಿದ. ಇಡೀ ದೇಹ ಬುರುಜೆಯನ್ನು ತಳ್ಳಿಕೊಂಡು ನಡೆಯಬೇಕು. ಅಸಾಧ್ಯವೆನಿಸಿತು. ಕಾಲುಗಳನ್ನು ಕೊಸರಾಡಿಸಿ ಬಂದ ದಾರಿಯಲ್ಲಿ ತುಸುವೇ ಹಿಂದೆ ಸರಿದ. ಅಚಾನಕ್ಕಾಗಿ ಕಾಲುಗಳಿಗೆ ಘನ ವಸ್ತು ತಾಕಿದಂತ ಅನುಭವ. ಆಸೆ ಚಿಗುರಿ ಅತುರದಲ್ಲಿ ಗಬರಾಡಿಸಲು ಘನ ವಸ್ತು ದೂರ ಜರುಗಿ ಇದು ಬುರುಜೆಯೊಳಗೆ ತೇಲುತ್ತಿರುವ ಮರದ ಹಣ್ಣೋ ಕಾಯೋ ಎಂದೆನಿಸಿ ನಿರಾಸೆ ಕವಿಯಿತು. ಕೇವಲ ಸ್ಪರ್ಷದ ಅನುಭವಕ್ಕೋಸ್ಕರ ಪುನಃ ವಸ್ತುವನ್ನು ತಡಕಿದ. ಘನ ವಸ್ತು ಮತ್ತೆ ತಾಕಿತು. ಈ ಬಾರಿ ಅದು ಅಷ್ಟು ಜರುಗಲಿಲ್ಲ. ಮತ್ಯಾವುದೋ ಆಸರೆಗೆ ಒತ್ತಿಕೊಂಡಂತೆ. ಹೆಬ್ಬೆರಳ ತುದಿಯಿಂದ ತಳ್ಳಿ ಪರೀಕ್ಷಿಸಿದ. ಅಲುಗಾಡಲಿಲ್ಲ. ಇಳ ಸಹಾಯದಿಂದ ಇಷ್ಟಿಷ್ಟೇ ಅತ್ತ ಸರಿದ. ಹೆಬ್ಬೆರಳುಗಳ ಮೇಲೆ ನಿಲ್ಲುವಷ್ಟು ಒತ್ತಾಸೆ ದೊರಕಿತು. ಕಲ್ಲು ಗುಡ್ಡೆಯಂತಿದೆ. ಅದೇ ದಿಕ್ಕಿನಲ್ಲಿ ಸರಿದಂತೆಲ್ಲ ಗುಡ್ಡೆಯ ಎತ್ತರ ಹೆಚ್ಚಾಗಿ ತಾನು ಗುಡ್ಡೆ ಹತ್ತುತ್ತಿರುವಂತೆನಿಸಿ ಮೇಲೆ ಬರಲಾರಂಭಿಸಿದ. ಅಂಗಾತ ಉರುಳುತ್ತಿದ್ದ ಇಳ ಬಾನು ಅರ್ಧ ತೇಲಿದಾನಂತರ ತಾನೂ ಎದ್ದು ನಿಂತಳು. ಪರಸ್ಪರ ನೋಡಿಕೊಳ್ಳಲು ಮುಖಗಳು ಗುರುತು ಸಿಗದಷ್ಟು ರಾಡಿಯಾಗಿದ್ದವು. ನಕ್ಕರು. ಅತ್ತರು.ತಬ್ಬಿಕೊಂಡರು. ನಿಟ್ಟುಸಿರಿಟ್ಟರು.
“ವಾಪಸ್ಸು ಹೋಗೋಣ. ಬದುಕಿ ಎಲ್ಲರನ್ನು ಸೇರಿಕೊಂಡರೆ ಸಾಕು ಅನಿಸ್ತಿದೆ.” ಎಂದ ಬಾನು. ಅನ್ಯಾಯವಾಗಿ ತಾನು ಇವಳನ್ನು ಇಲ್ಲಿವರೆಗೆ ಎಳಕೊಂಡು ಬಂದೆನಲ್ಲ, ತಪ್ಪಿತಸ್ಥನ ಪ್ರಜ್ಞೆ ಅವನಿಗೆ.
ಇಳ ಮೌನಿಯಾಗಿ ಬಿದ್ದು ಹೊರಳಾಡಿ ಬಂದ ಬುರುಜೆಯತ್ತ ಅಂತರ್ಮುಖಿಯಾಗಿದ್ದಳು. ಮನಸ್ಸು ಮಾತ್ರ ಅಲ್ಲೇ ಇತ್ತು ಅನ್ನಲಾಗದು. ಬದುಕಿನ ಸಂತೋಷ ಸಾಹಸದ ಉತ್ತುಂಗದಲ್ಲಿದ್ದಾಗ ಇದ್ದಕ್ಕಿದ್ದಂತೆ ಸಾವಿನ ಮನೆಯ ಕದಬಡಿದ ಅನುಭವ. ವಾಪಸು ಓಡಿಹೋಗೋಣವೇ, ಹೋದರೆ ಇಂಥ ಸಾವು ಮುಂದೆ ಮತ್ತೆಂದೂ ಬರದೇ ಹೋಗುತ್ತದೆಯೆ, ಬಂದರೂ ಆವಾಗಲೂ ಮತ್ತೆ ಸಾವಿನಿಂದ ತಪ್ಪಿಸಿಕೊಂಡು ಓಡಿಹೋಗುತ್ತೇವೆಯೇ? ಆಗಿದ್ದಾಗಲಿ ಮನಸ್ಸು ಗಟ್ಟಿ ಮಾಡಿ ಮುನ್ನುಗ್ಗಿಬಿಡೋಣವೇ?ಮುಂದೆ ಏನಿದೆ? ಮರ. ಬುರುಜೆ. ವಿಚಿತ್ರ ಪ್ರಾಣಿ. ಅವುಗಳ ಕೀರಲುವಿಕೆ. ಭಯ ಹುಟ್ಟಿಸುವ ಕಣ್ಣುಗಳು. ಮೊದಲಾಗಿ ಏನು ಹುಡುಕಲಿಕ್ಕೆ ಬಂದಿದ್ದೀವಿ ಅನ್ನೋದೇ ಗೊತ್ತಿಲ್ಲ. ಇಲ್ಲಿ ಏನೋ ಇದೆ ಎಂದಷ್ಟೆ ಗೊತ್ತು. ಗೊತ್ತು ಮಾಡಿಕೊಂಡರೂ ಅದರಿಂದ ಸಿಗುವ ಮೋಜೇನು? ಹಿಂದೆ ಮುಂದೆ ಎತ್ತ ಸಾಗುವುದೂ ಅರ್ಥಹೀನವೆಂಬ ಜಿಜ್ಞಾಸೆ. ಯೋಚನಾಮಗ್ನಳಾಗಿದ್ದವಳು ಅಂಗಾಲುಗಳನ್ನು ಹಾಗೊಮ್ಮೆ ಹೀಗೊಮ್ಮೆ ನೆಲಕ್ಕೆ ಉಜ್ಜುತ್ತಿದ್ದಳು. ಇದ್ದಕಿದ್ದಂತೆ ವಾಸ್ತವ ಪ್ರಜ್ಞೆಗೆ ಮರಳಿ ತನ್ನ ಅಂಗಾಲಿನ ಸ್ಪರ್ಷಕ್ಕೆ ಸಿಗುತ್ತಿರುವ ವಸ್ತುವಿನಾಕಾರ ಮನಸ್ಸಿಗೆ ಬಂದು ನಡುಕ ಹುಟ್ಟಿತು. ಒರಟು. ದುಂಡು. ಚುಚ್ಚುವಂತವು. ಮೆಲ್ಲಗೆ ಬಾನುವಿನ ಭುಜವನ್ನು ತಿವಿದು ತನ್ನ ದುಗುಡ ಹಂಚಿಕೊಂಡಳು. ಅವನಿಗೂ ಅದೇ ಅನುಭವ. ಅವು ತಲೆಬುರುಡೆಗಳು. ಮನುಷ್ಯನ ತಲೆಬುರುಡೆಗಳು.
ಮುಳುಗುತಿದ್ದ ಬುರುಜೆಯಲ್ಲಿ ಆಸರೆಯಾಗಿ ಸಿಕ್ಕಿದ್ದು ತಲೆಬುರುಡೆಗಳ ರಾಶಿ.ನಿಸ್ಸಂಶಯವಾಗಿ ಇಲ್ಲಿಗೆ ಈಗಾಗಲೇ ಸಾಕಷ್ಟು ಜನ ಬಂದಿದ್ದಾರೆ.ಇದೇ ಹಾದಿಯಲ್ಲಿ. ಬಹುಶಃ ಇಲ್ಲಿಂದ ಮುಂದೆ ಯಾರಿಗೂ ಹೋಗಲಿಕ್ಕೆ ಸಾಧ್ಯವಾಗಿಲ್ಲ. ಮುಂದೆ ಸಾಗಲು ಬುರುಜೆ ಬಿಟ್ಟಿಲ್ಲ. ಹಿಂದೆ ಹೋಗಲೂ ಬಿಟ್ಟಿಲ್ಲ. ಹಿರೀಕನ ಆತಂಕ ಈಗ ಅರ್ಥವಾಗುತ್ತಿದೆ. ನಮಗೆ ಲೆಕ್ಕವಿಲ್ಲ ನಾವೆಷ್ಟು ಮಂದಿ ಇದ್ದೆವು ಅಂತ. ಎಷ್ಟೋ ದಿನಗಳಾದ ಮೇಲೆ ಗೊತ್ತಾಗುತ್ತಿತ್ತು ಕೆಲವರು ಗುಂಪಿನಿಂದ ಮಾಯವಾಗುತ್ತಿದ್ದುದು. ಹೀಗೆ ಆಗಾಗ ಯಾರಾದರೂ ಇಲ್ಲವಾಗುವುದು ನಮಗೆ ಸಾಮಾನ್ಯವಾಗಿಬಿಟ್ಟಿದೆ. ಯಾರು ಯಾವ ಪ್ರಾಣಿಗೆ ಯಾವಾಗ ಬಲಿಯಾಗುತ್ತಾರೋ ಹೇಳಲಾಗದು. ಎಲ್ಲ ಸಮಯದಲ್ಲೂ ರಕ್ಷಿಸಲಾಗದು. ನಮ್ಮ ರಕ್ಷಣಾ ಕಾಳಜಿ ಏನಿದ್ದರೂ ಮಕ್ಕಳ ಮೇಲೆ. ದೊಡ್ಡವರಾದ ಕೂಡಲೆ ಅವರವರ ಪಾಡಿಗೆ ಅವರು. ಗುಡಿಸಲುಗಳಲ್ಲಿ ಉಳಿದುಕೊಳ್ಳುತ್ತಿದ್ದುದು ಮಕ್ಕಳು, ಮುದುಕ ಮುದುಕಿಯರು. ಪರಂಪರೆಯ ಪ್ರಕಾರ ವಯಸ್ಸು ಮೀರಿದವರು ತಮಗೆ ತೋಚಿದ ಸಮಯದಲ್ಲಿ ಯಾರಿಗೂ ಪೂರ್ವಮಾಹಿತಿ ಕೊಡದೆ ಗುಡಿಸಲನ್ನು ತ್ಯಜಿಸುತ್ತಿದ್ದರು. ಅಲ್ಲಿಗೆ ಅವರ ಅಧ್ಯಾಯ ಮುಗಿದಂತೆ. ನಾವು ಮಕ್ಕಳಂತೆ ಯಾವತ್ತಾದರೂ ಕುತೂಹಲದಿಂದ ಮುದಿತನ ಸಾವು ಅಂತ್ಯ ಇವುಗಳ ಬಗ್ಗೆ ಪ್ರಶ್ನಿಸಿದರೆ, ಕಾಲ ಕಳೆದಂತೆ ನಿಮಗೇ ಗೊತ್ತಾಗುವುದು ಎನ್ನುತ್ತಿದ್ದರು ದೊಡ್ಡವರು. ಆ ವಿಷಯದಲ್ಲಿ ಅವರೇ ಅಜ್ಞಾನಿಗಳಾಗಿರುವುದು ನಮಗೆ ಗೊತ್ತಾಗುತ್ತಿತ್ತು. ಬಹುಶಃ ದೇಹ ಕೃಶಗೊಂಡು ನಿವೃತ್ತಿಯಾಗಿ ಗುಡಿಸಲಲ್ಲಿ ಉಳಿದುಕೊಳ್ಳಲಾರಂಭಿಸಿದ ಮೇಲೆ ನಿರ್ಗಮನದ ವಿದ್ಯೆಯಾಗುತ್ತದೆ ಅನಿಸುತ್ತೆ. ನಿವೃತ್ತಿಯ ಹಂತ ತಲುಪಿದಾಗಲೇ ನಾವು ಆ ವಿದ್ಯೆಗೆ ಅರ್ಹರು ಎಂಬ ನಿಯಮ. ಮೊದಲೇ ಕಲಿಸಿಬಿಟ್ಟರೆ ಮಂದಿ ಪೂರ್ಣ ಬಾಳು ಬಾಳದೆ ಕಾಣೆಯಾಗಿಬಿಟ್ಟರೆ? ಸಮುದಾಯ ಉಳಿಯುವುದು ಹೇಗೆ? ಬೆಳೆಯುವುದು ಹೇಗೆ?
ಈಗ ಎಲ್ಲ ಅರ್ಥವಾಗುತ್ತಿದೆ. ನಮ್ಮ ಗುಂಪಿನ ತಿಳುವಳಿಕೆಗಳು. ವಾಡಿಕೆಗಳು. ನಿಯಮಗಳು. ನಾವು ಈ ಬಯಲಲ್ಲಿ ಬಿಡಾರ ಹೂಡಿದ್ದು ತಾನು ಸಣ್ಣವನಿದ್ದಾಗ. ಅದಕ್ಕು ಮೊದಲು ನಮ್ಮ ಬಾಲ್ಯವನ್ನೆಲ್ಲ ಮರಳುಗಾಡಿನಲ್ಲಿ ಕಳೆದಿದ್ದೆವು. ಅದಕ್ಕೂ ಮುನ್ನ ಎಲ್ಲಿದ್ದೆವೋ ಗೊತ್ತಿಲ್ಲ. ಒಂದೇ ಕಡೆ ನಿಲ್ಲದೆ ಇಂತಿಷ್ಟು ವರ್ಷಗಳ ಅಂತರದಲ್ಲಿ ಸ್ಥಳಾಂತರ ಮಾಡುವುದು ನಮ್ಮ ವಾಡಿಕೆಯಂತೆ. ಒಂದೇ ಕಡೆ ಇದ್ದರೆ ಸಮುದಾಯ ನಾಶವಾಗಿಬಿಡುವುದೆಂಬ ಭಯವಂತೆ. ಯಾವಾಗ ಒಂದು ಸ್ಥಳದಲ್ಲಿ ಹುಟ್ಟುಗಳಿಗಿಂತ ಸಾವುಗಳು ಹೆಚ್ಚಾಗುತ್ತವೋ, ಆಗ ವಲಸೆ ಹೋಗಲು ಸೂಕ್ತ ಸಮಯವೆಂಬ ತಿಳುವಳಿಕೆಯಂತೆ. ಈಗಲೂ ನೆನಪಿದೆ, ಕಣ್ಣು ಹಾಯಿಸಿದಷ್ಟೂ ಬೆಳ್ಳನೆ ಮರಳು. ಅಲ್ಲೊಂದು ತಿಳಿ ನೀರ ನದಿ. ಯಾವ ಜೇನೂ ಅದಕ್ಕೆ ಸಮನಲ್ಲ. ವರ್ಷಕ್ಕೊಮ್ಮೆ ತುಂಬಿ ಹರಿದು ನಂತರ ಸಣ್ಣದಾಗುತ್ತ ಕೆಲವಾರು ದಿನ ಬರಿದಾಗಿ ಪುನಃ ತುಂಬಿಕೊಳ್ಳುತ್ತಿತ್ತು. ಒಮ್ಮೆ ಅದು ಮರುತುಂಬದೇ ಹೋದಾಗ, ಹಸಿವೆಯಿಂದ ಸತ್ತು, ನಮ್ಮನ್ನು ಎತ್ತಿಕೊಂಡು ಇವರೆಲ್ಲ ಜಾಗ ಖಾಲಿ ಮಾಡಿದರು. ನೆನಪಿದೆ, ಎತ್ತ ಹೋಗಬೇಕೆಂಬ ಆಗಿನ ಪರದಾಟ. ಆಗ ಹಿರೀಕ ಹೇಳಿದ್ದ – ತಲೆ ಬುರುಡೆ ಎದುರಾದರೆ ನಿಲ್ಲಿ. ಅಲ್ಲಿಂದ ಪೂರ್ವಕ್ಕೆ ತಿರುಗಿ ನಡೆಯಿರಿ. ಮತ್ತೆ ಬುರುಡೆ ಎದುರಾದರೆ ಮತ್ತದೇ. ಮಾರ್ಗ ಮಧ್ಯ ಯಾವುದೋ ಇರುಳಲ್ಲಿ ನನಗೆ ನಿದ್ದ ಹತ್ತದೆ ಕಣ್ಣು ಮುಚ್ಚಿದ್ದಾಗ ಹಿರೀಕ ನಿವೃತ್ತಿ ಆದವರನ್ನೆಲ್ಲ ಸುತ್ತ ಕೂರಿಸಿಕೊಂಡು ಆಡಿದ ಮಾತು- ಸಮುದಾಯದ ರಕ್ಷಣೆ ಮುಖ್ಯ. ನಮ್ಮ ಸಾವೂ ಅರ್ಥಪೂರ್ಣವಾಗಿರಬೇಕು. ಇನ್ನೂ ಕೈ ಕಾಲಿನಲ್ಲಿ ಶಕ್ತಿ ಇರುವಾಗಲೇ, ಎದೆಯಲ್ಲಿ ಸತ್ವ ಇರುವಾಗಲೇ ಗುಂಪು ತೊರೆಯಬೇಕು. ಹಿಂದೆ ತೊರೆದವನ ಪೂರ್ವ ಮಾಹಿತಿಯ ಆಧಾರದ ಮೇಲೆ, ನಾವು ಇನ್ನೊಂದು ದಿಕ್ಕಿನಲ್ಲಿ ನಡೆಯಬೇಕು. ಎಲ್ಲಿ ನಮ್ಮ ಅಂತ್ಯವಾಗುತ್ತದೆಯೋ ಅಲ್ಲಿ ಆಗಲಿ. ಹೇಗೆ ಆಗುತ್ತದೆಯೇ ಅಂತೆಯೇ ಆಗಲಿ. ನಮ್ಮ ತಲೆಬುರುಡೆಯೇ ಗುಂಪಿಗೆ ದಿಕ್ಸೂಚಿಯಾಗಲಿ. ಆಪತ್ತಿನ ಎಚ್ಚರಿಕೆ. ಗುರುತು. ನಿಮ್ಮಿಚ್ಛೆ ಬಂದ ಕಡೆ ಹೊರಡಿ. ಹೊರಡುವ ಇಂಗಿತವನ್ನಷ್ಟೇ ಹಂಚಿಕೊಳ್ಳಿ. ಯಾವ ದಿಕ್ಕಿಗೆ ಎಂಬ ಮಾಹಿತಿ ಉಳಿದವರಿಗೆ ಗೊತ್ತಿರಲಿ. ಯಾರ ಅರಿವಿಗೂ ಬಾರದಂತೆ ಕಾಣೆಯಾಗಿ. ಮನಸ್ಸು ಅಷ್ಟು ಮಾಗಿರಲಿ. ಗಟ್ಟಿಯಾಗಿರಲಿ. ಬರುವಾಗ ತಾಳ ಮೇಳ ಸಹ್ಯ. ಹೋಗುವಾಗ ಸಲ್ಲದು. ಬಾಳಿ ಬದುಕಬೇಕಾದವರ ಧೃತಿ ಕೆಡಿಸಬಾರದು.
ಎಂದೋ ಕನಸಿನಲ್ಲಿ ಘಟಿಸಿದಂತ ಸ್ಮೃತಿಯಿಂದ ಮಾಸಿಹೋಗಿದ್ದ ನೆನಪೆಲ್ಲ ಮರುಕಳಿಸಿದಂತಾಗಿ ಬಾನು ವಿಹ್ವಲಗೊಂಡನು. ಇಳಗೆ ಎಲ್ಲ ವಿವರಿಸಿದನು. ಬಹುಶಃ ನಾವು ಕಂಡ ಬೆಳಕಿನ ವಿಸ್ಮಯಕ್ಕೆ ಈಗಾಗಲೆ ನಮ್ಮ ಹಿರೀಕರು ಸಾಕ್ಷಿಯಾಗಿದ್ದಾರೆ. ಈ ದಿಕ್ಕಿನಲ್ಲಿ ಆಕರ್ಷಿತರಾದವರೆಲ್ಲರು ಇಲ್ಲಿವರೆಗೆ ಬಂದು ಹತರಾಗಿದ್ದಾರೆ. ಅವರಿಬ್ಬರಿಗೂ ಹಿಮ್ಮೇಳದಲ್ಲಿದ್ದ ಪ್ರಾಣಿಗಳ ಕೀರಲು ಈಗಹಿಂದಿಗಿಂತಲೂ ಹೆಚ್ಚು ಕರ್ಕಶವಾಗಿ ಭಯಾನಕವಾಗಿ ಆರ್ತವಾಗಿಕೇಳಿಸತೊಡಗಿತು. ಯಾವುದೋ ಪ್ರಾಣಿ ತಲೆ ಮೇಲೆಯೆ ಹಾರಿಹೋದಂತೆ. ಮತ್ಯಾವುದೋ ಕಿವಿ ಹತ್ತಿರ ಬಂದು ಅರಚಿ ಹೋದಂತೆ. ಗೌವ್ವೆನ್ನುವ ಕತ್ತಲೆ. ತಲೆ ಎತ್ತಲು ನಡುಕ. ಕಾಲು ಊರಿದರೆ, ಬುರುಡೆಗಳ ಸ್ಪರ್ಷ.
ಇಬ್ಬರೂ ಮೆಲ್ಲಗೆ ಪಾದಗಳಿಂದ ನೆಲ ತಡಕುತ್ತಲೆ ನಡೆಯಲಾರಂಭಿಸಿದರು. ಭಯಗ್ರಸ್ತರಾಗಿ ಯೋಚಿಸುವ ತ್ರಾಣವನ್ನೆ ಕಳೆದುಕೊಂಡು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆಂಬ ಅರಿವಿರಲಿಲ್ಲ. ಹತ್ತಾರು ದಢೂತಿ ಮರಳಗಳನ್ನು ದಾಟಿದ ನಂತರ ಬೆಳಕು ಗೋಚರಿಸಿತು. ಹಾಲಿನಷ್ಟು ಬೆಳ್ಳಗೆ. ಕೋರೈಸುವಷ್ಟು ಪ್ರಜ್ವಲ. ನೆಲದ ಮೇಲೆ ಹರಡಿಕೊಂಡಿದೆ. ಹತ್ತಿರ ಸರಿದಂತೆ ಮಂಜಾಗಿದ್ದ ಕಣ್ಣುಗಳು ಬೆಳಕಿಗೆ ಹೊಂದಿಕೊಂಡು ದೃಶ್ಯ ಮತ್ತಷ್ಟು ತಿಳಿಯಾಯಿತು. ಕೊಳ. ಸುತ್ತ ಮರಗಳು. ಕೊಳದ ತುಂಬ ಗಿಡ ಗೆಂಟೆ. ಹೂಗಳು. ಹುಳ ಚಿಟ್ಟೆಗಳು. ಕೆರೆಗೆ ಕೆರೆಯೆ ಹೊಳೆಯುತ್ತಿದೆ. ಬೆಳಕು ಭೂಮಿಯಿಂದ ಮೇಲಕ್ಕೆ ಚಿಮ್ಮಿದಂತೆ. ದೈತ್ಯ ಮರಗಳ ರೆಂಬೆ ಕೊಂಬೆಗಳು, ಅದರ ಮೇಲೆ ಕೂತಿರುವ ಪ್ರಾಣಿಗಳು. ಅವುಗಳ ಬಣ್ಣ ಆಕಾರ. ಎಲ್ಲವೂ ಪ್ರತ್ಯಕ್ಷ. ಬೆಳಕು ಹೂಗಳಿಂದ ಚಿಮ್ಮುತ್ತಿದೆ. ಬೃಹದಾಕಾರದ ಹೂಗಳು. ವಿಧ ವಿಧವಾದ ಬಣ್ಣದ ಹೂಗಳು. ಆಯಾ ಹೂಗಳು ಆಯಾ ಹೂವಿನ ಬಣ್ಣವನ್ನು ಬೀರುತ್ತಿವೆ. ಒಟ್ಟಾರೆ ಪ್ರಕಾಶವು ದೂರದಿಂದ ಬೆಳ್ಳಗೆಕಂಡಿದೆ. ಹೊರಗಡೆ ಇಷ್ಟೊತ್ತಿಗೆ ಸೂರ್ಯ ಉರಿಯುತ್ತಿರಬಹುದು, ಚರ್ಮ ಬಿರಿಯುವ ಹಾಗೆ ಸುಡುತ್ತಿರಬಹುದು. ಆದರೆ ಇಲ್ಲಿ ಸುತ್ತಲೂ ಗಾಡಾಂಧಕಾರ. ನಡುವೆ ಬೆಳಕಿನ ಕಾರಂಜಿ. ಆಪ್ಯಾಯಮಾನವಾಗಿದೆ.
ಸಾವಿನ ಭಯದಿಂದ ತತ್ತರಿಸಿಹೋಗಿದ್ದ ಅವರಿಬ್ಬರು ಮೈಮರೆತು ಕೊಳದ ತೀರದ ಬಳಿ ನಡೆದು ಬಂದರು. ಮೇಲೆ ಆಕಾಶ ಗೋಚರಿಸಿತು. ತಮಗೆ ಕಂಡ ಚುಕ್ಕಿ ಇದೇ ಎಂದು ಹೊಳೆಯಿತು. ಅಡ್ಡಡ್ಡ ಉರುಳಿ ಆನೆಯಂತೆ ಮಲಗಿದ್ದ ಮರ, ಧೊಪ್ಪನೆ ಶಬ್ಧ ಇದ್ದಕಿದ್ದಂತೆ ಗೋಚರಿಸಿದ ಚುಕ್ಕಿಯ ಕತೆ ಸಾರಿತು. ಕೊಳದಾಚೆಸುತ್ತಗಲ ಅವೇ ಹೂಗಳು. ಮರಗಳ ಚಪ್ಪರದ ಸಲುವಾಗಿ ಹೊರಗೆ ಇಣುಕದ ಅದೇ ಬೆಳಕು. ಅವರಿಗೆ ಹಸಿವಿನ ನೆನಪಾಯಿತು. ಬೆಳಗಿನಿಂದ ಜೇನು ಬಿಟ್ಟರೆ ಏನನ್ನೂ ತಿಂದಿರಲಿಲ್ಲ. ಮೇಲಾಗಿ ಕಣಿವೆ ಇಳಿದು ಬುರುಜೆಯಲ್ಲಿ ಮಾಗಾಡಿ ವಿಪರೀತ ದಣಿದಿದ್ದರು. ಬಾನು ಹೂವಿನ ಎಲೆಯನ್ನು ಕಿತ್ತು ಮುದುರಿ ಹಾರಾಡುತ್ತಿದ್ದ ಹುಳುವನ್ನು ಹಿಡಿದು ಅದರೊಳಗಿಟ್ಟು ಬಾಯಿಯೊಳಗೆ ಸೇರಿಸಿ ಜಗಿಯಲಾರಂಭಿಸಿದ. ಇಳ ಅನುಸರಿಸಿದಳು. ಹಸಿ ಹಸಿ. ಕಸಿ ಕಸಿ. ನಂತರ ಕೊಳದನೀರು ಕುಡಿದರು.
ವಿರಾಮದಿಂದ ಮನಸ್ಸು ತಂಪಾಗಿತ್ತು. ಇಳ ಹೊಳೆಯುವ ಹೂವೊಂದನ್ನು ಕಿತ್ತು ತನ್ನ ಮುಖದ ಬಳಿ ಹಿಡಿದಳು. ಹೂವಿನ ಪ್ರಕಾಶದಲ್ಲಿ ಬೆವೆತ ಮುಖ, ಅಂಟಿಕೊಂಡ ಕೂದಲು, ಚುರುಕು ನೋಟದ ಕಣ್ಣು. ಜೇನಿನ ತುಟಿ. ಪಾತಾಳ ನಾಡಿನಲ್ಲಿ ಮನಸ್ಸಿನ ಭಾವನೆಗಳು ಹರಿದಷ್ಟೆ ವೇಗದಲ್ಲಿ ನಡೆದು ಆಸೆ ತೀರಿಸಿಕೊಳ್ಳಲಾಗದೆಂದುಕೊಂಡ ಬಾನು ನಿಯಂತ್ರಣ ಹೇರಿಕೊಂಡು ಮೆಲ್ಲಗೆ ಅವಳ ಬಳಿ ನಡೆದ. ಮುಖದ ಮೇಲಿನ ಕೆಸರು ನೆನಪಿಗೆ ಬಂತು. ಬಗ್ಗಿ ನೀರನ್ನು ಮುಖದ ಮೇಲೆ ಎರಚಿ ತೊಳೆದುಕೊಂಡ. ಅವಳೂ ತೊಳೆದುಕೊಂಡಳು.ಒಂದು ದೀರ್ಘಇರುಳು ದೀರ್ಘ ಹಗಲಿನ ವಿರಾಮದ ನಂತರ ಉನ್ಮತ್ತಾಗಿ ಆಲಂಗಿಸಿ ನಿಂತಲ್ಲೇ ಆಸೆ ತೀರಿಸಿಕೊಂಡರು. ಮೈಗೆ ಮೈ ಘರ್ಷಣೆ. ಎಲುಬು ಲಟಲಟನೆ ಮುರಿವಂತ ಕ್ರಿಯೆ. ಬಿಲ್ಲಿನಂತೆ ಬಾಣ.
ಅವರು ಬಯಲಿಗೆ ಮರಳಿದರೇ? ಗೊತ್ತಿಲ್ಲ.