Wednesday, May 31, 2023

ಹುಲುಸಾದ ಬೆಳೆಸಾಲು

Follow Us

ಪುಸ್ತಕ ಪರಿಚಯ
ಕವನ ಸಂಕಲನ- ಅಕ್ಕಡಿ ಸಾಲು

ಲೇಖಕರು: ಮಕಾನ್ ದಾರ್

ದೀಪ್ತಿ ಭದ್ರಾವತಿ

ವಿ ಮಕಾನ್‍ದಾರ್ ಅವರ ಅಕ್ಕಡಿಯ ಸಾಲುಗಳನ್ನು ಎರಡೆರಡು ಬಾರಿ ಓದಿದ ನಂತರವೂ ಅವುಗಳ ಕುರಿತಾಗಿ ಬರೆಯಲು ಕೂತ ಕ್ಷಣಕ್ಕೆ ಎಲ್ಲಿಂದ ಆರಂಭಿಸಬೇಕೆನ್ನುವ ಗೋಜಲಿನಲ್ಲಿ ಅರೆ ಈ ಪದ್ಯ ಮತ್ತೇನನ್ನೋ ಹೇಳುತ್ತದೆಯಲ್ಲ ಎನ್ನುವ ಗೌಜಿಗೆ ಬಿದ್ದು ಅರೆ ಇದನ್ನು ನಾನು ಗಮನಿಸಲೇ ಇಲ್ಲ ಅನ್ನುವ ಹಳಹಳಿಕೆಗೆ ಹಚ್ಚುತ್ತಿತ್ತು. ಓದುತ್ತ ಹೋದಂತೆಲ್ಲ ಇಡಿಯಾಗಿ ಆವರಿಸುತ್ತ “ಅರೆ ನಾನು ಹೇಳ ಹೊರಟದ್ದು ಇದು” ಎನ್ನುತ್ತ, ನಿಂತು ಕಾಡುತ್ತ ಹೋದವು.
ಯಾವುದೇ ಕಾವ್ಯದ ಶಕ್ತಿಯೇ ಅಂತದ್ದು ಅದು ಎದುರು ನಿಂತಾಗೆ ಅರೆ ಹಿಡಿದುಬಿಡಬಹುದಲ್ಲ ಎನ್ನುವ ಸರಳಿಕೆಯನ್ನು ಹುಟ್ಟು ಹಾಕುತ್ತದೆಯಾದರೂ ಹಿಡಿಯಹೊರಟರೆ ನೀರ ಹನಿಯಂತೆ ಬೆರಳಿಗೆ ಅಂಟಿಯೂ ಅಂಟದೆ ಓಡಿಬಿಡುತ್ತದೆ. ಅದೇ ಮಾತು ಇಲ್ಲಿನ ಕವಿತೆಗಳಿಗೂ ಅನ್ವಯಿಸುತ್ತದೆ. ಹಾಗೆ ನೋಡಿದರೆ ನನಗೆ ಈ ಅಕ್ಕಡಿ ಸಾಲು ಎನ್ನುವ ಶೀರ್ಷಿಕೆಯ ಬೆರಗು ಹುಟ್ಟಿಸಿದ್ದು ಸುಳ್ಳಲ್ಲ. ಬಯಲು ಸೀಮೆಯಲ್ಲಿ ಯಥೇಚ್ಛವಾಗಿ ಉಪಯೋಗಿಸುವ ಈ ಪದ ನನ್ನ ಅರಿವಿಗೆ ಬಂದಿರಲೇ ಇಲ್ಲ. ವಿವಿಧ ಕಾಳುಗಳ ಜೊತೆಯಲ್ಲಿಯೇ ಬಿತ್ತಿ ಹುಲುಸಾದ ಬೆಳೆ ತೆಗೆಯುವ ಕ್ರಮದಂತೆಯೇ ಇಲ್ಲಿನ ಕವಿತೆಗಳು ಭಿನ್ನ ಭಿನ್ನವಾಗಿಯೇ ಕಾಣಿಸುತ್ತ ಹಸಿರು ಉಕ್ಕಿಸುತ್ತವೆ. ಸುಮಾರು ಮೂರು ದಶಕದ ಇಲ್ಲಿನ ಕವಿತೆಗಳನ್ನು ಹೀಗೆ ಕೆಲವು ಸಾಲುಗಳಲ್ಲಿ ಗ್ರಹಿಸಿ ಇದು ಹೀಗೆ ಇದೆ ಎಂದು ಹೇಳುವುದು ನನ್ನಿಂದ ಸಾಧ್ಯವಿಲ್ಲದ್ದು. ಕಾರಣಗಳು ಆಯಾ ಕಾಲಘಟ್ಟವನ್ನು ಪ್ರತಿನಿಧಿಸುತ್ತಲೇ ಸಮಕಾಲೀನದಲ್ಲಿಯೂ ಸಮಾನಂತರದಲ್ಲಿಯೇ ಸಾಗುತ್ತವೆ. ಇಲ್ಲಿನ ಕವಿತೆಗಳಿಗೂ ಕೂಡ ಈ ಮಾತು ಅನ್ವಯಿಸುತ್ತದೆ.
“ನಂಜು ಕುಡಿದರೂ ಅವ್ವನಿಗೆ
ಸದಾ ಅಮೃತ ಹಂಚುವ ಇರಾದೆ”

“ಅಮ್ಮ ಬಿಕ್ಕಳಿಸುತ್ತಿದ್ದಾಳೆ
ಪೆನ್ನಿನ ನಿಬ್ಬು ತಬ್ಬಲಿಯಾಗಿದ್ದಕ್ಕೆ
ತೂಗುವ ತೊಟ್ಟಿಲು ಮಸಣವಾಗಿದ್ದಕ್ಕೆ”

ಎನ್ನುವ ಸಾಲು ಅದು ಕವಿ ತನ್ನ ಅಮ್ಮನನ್ನು ಕುರಿತು ಹೇಳಿದ್ದು ಅನ್ನಿಸಿದರೂ
ಅದು ಇಡೀ ವಿಶ್ವದ ತಾಯಂದಿರನ್ನು
ಕಟ್ಟಿಕೊಡುತ್ತದೆ. ಮತ್ತು ಯಾವ ಕಾಲಘಟ್ಟದಲ್ಲಿಯೂ ಕೂಡ ಯಾವುದೇ ತಾಯಿಯ
ಆ ಆಶಯಗಳು ಬದಲಾಗುವುದಿಲ್ಲ..

ಅದೇ ರೀತಿ ಇಲ್ಲಿನ “ಹೊಸ ಸೂರ್ಯ ಬಂದ” “ಎದೆ ಸುಡುವ ನೆನಪುಗಳು” “ಭೀಮ ದೀಪ” ಎಲ್ಲವೂ ಸರ್ವಕಾಲಕ್ಕೂ ಸಲ್ಲುವಂತವು.
ಇನ್ನು ಈ ಎಲ್ಲ ಕವಿತೆಗಳ ಮೂಲ ಆಶಯ ಬದುಕನ್ನು ಹಸನಾಗಿಸುವಂತದ್ದೇ ಆಗಿದೆ. ಕವಿಗೆ ಇರುವ ನೂರೆಂಟು ನೋವುಗಳ ನಡುವೆಯೇ ನಲಿವನ್ನು ಹುಡುಕುವ ಅದಮ್ಯ ಬಯಕೆ. ಹೀಗಾಗಿಯೇ ಆತ ಎಲ್ಲಿಯೂ ಎದೆಗುಂದುವುದಿಲ್ಲ ಹಳಹಳಿಸುತ್ತ ಕೂರುವುದಿಲ್ಲ. ದಿಕ್ಕುತಪ್ಪಿಸುವ ಕಗ್ಗತ್ತಲ ನಡುವೆಯೂ ಒಲವೆಂಬ ಮಿಂಚು ಹುಳುವಿನಾಸರೆಯಲ್ಲಿ ಇರುಳ ಕಡಲ ದಾಟುವಾಸೆ. ಹೀಗಾಗಿಯೇ ಇದೇ ಆಶಯದ ಅನೇಕ ಪದ್ಯಗಳು ಇಲ್ಲಿವೆ. ಜೀವನ ಪ್ರೀತಿ ಇಲ್ಲಿನ ಕವಿತೆಗಳ ಮೂಲ ದ್ರವ್ಯ ಎಂತಲೇ ಹೇಳಿದರೆ ತಪ್ಪಾಗಲಾರದು.
“ನೂಲೋಣ ಬಾ ಗೆಳತಿ ಪ್ರೇಮದೆಳೆಯ ಎದೆಗೆ ಎದೆಗೊಟ್ಟು”
“ಕತ್ತಲಲ್ಲಿ ಎದ್ದು ಹೋದವನೆ ಭರವಸೆಯ ದೀಪ ಹಚ್ಚಿಟ್ಟಿದ್ದೇನೆ
ಬೆಳಕಿನತ್ತ ಬಾ”
ಎನ್ನುವ ಸಾಲುಗಳು ಗಾಯಗೊಂಡು ನರಳುತ್ತಿರುವ ಮನುಷ್ಯತ್ವದ ನೆಲೆಗೆ ತಂಪಿನ ಮುಲಾಮಿನಂತೆ ಗೋಚರಿಸುತ್ತವೆ.
ಕವಿತೆಗಳಿಗಿದು ಕಾಲವಲ್ಲ ಎನ್ನುವಂತಹ ಮನೋಭಾವ ಹೆಚ್ಚುತ್ತಿರುವ ಕಾಲಘಟ್ಟದಲ್ಲಿಯೇ ಇಂತಹದ್ದೊಂದು ಮಹತ್ವದ ಸಂಕಲನ ಹೊರಬಂದಿದೆ. ರೂಪಕಗಳ ರಾಶಿ ರಾಶಿಯನ್ನೇ ಮೊಗೆದು ಕೊಟ್ಟಿರುವ ಈ ಕೃತಿ ಬರವಣಿಗೆಯ ಕ್ರಮದಿಂದಾಗಿ ಕೆಲವೊಮ್ಮೆ ಕೆಲವೊಂದು ಕವಿತೆಗಳು ಬರವಣಿಗೆಯ ಕ್ರಮದಿಂದಾಗಿ ಸಣ್ಣಗೆ ಗುರುತಿಸಬಹುದು ಎಂದುಕೊಂಡರು ಒಟ್ಟಾರೆ ಅದರ ಹರವನ್ನು ನೋಡಿದಾಗ ಎಲ್ಲಿಯೂ ಅಬ್ಬರಿಸದೆ ಪ್ರಾಮಾಣಿಕವಾಗಿ ಪ್ರಹರಿಸುತ್ತ ತಾನು ಕಂಡಿದ್ದು ಇದಿಷ್ಟೇ ಎನ್ನುವ ವಿನೀತ ಭಾವದಲ್ಲಿ ನನ್ನೊಳಗನ್ನು ಪ್ರವೇಶಿಸುತ್ತದೆ. ಇಂತಹ ಜೀವಪರ ಕವಿತೆಗಳನ್ನು ನೀಡಿದ್ದಕ್ಕಾಗಿ ಮಕಾನ್‍ದಾರ್ ಸರ್‍ಗೆ ಧನ್ಯವಾದಗಳು

(ಮಕಾನ್‍ದಾರ್ ಅವರ ಒಂದು ಕವಿತೆ)ಬದುಕು ಕಟ್ಟುವ ತವಕ
ಹದವಾದ ಕತ್ತಲು ಭೂಮಿಗೆ
ಬೆಳಕ ಬೀಜ ಬಿತ್ತುವ ತವಕ!
ಬದುಕ ಬಟ್ಟಲಲಿ ತುಂಬಿರುವ ನೋವ
ನಂಜುಗಳ ಹಿಂಡಿ ಗುಟುಕರಿಸುವ ತವಕ!
ನಿನ್ನೆದೆಯಲಿ ಅರಳಿರುವ ಸಾವಿರ ಕನಸುಗಳಿಗೆ
ಏಕತಾರಿ ಮೀಟುವ ತವಕ!
ಲೌಕಿಕ-ಅಲೌಕಿಕಗಳ ತರ್ಕ ಮೀರಿ
ನಿರಂತರ ಹುಡುಕಾಡುವ ತವಕ!
ಭೂತ-ಭವಿಷ್ಯತ್ತಿನ ಗೊಡವೆ ಬಿಟ್ಟು
ವರ್ತಮಾನದ ತಲ್ಲಣಗಳಿಗೆ ತಣ್ಣೀರ ಎರೆಚುವ ತವಕ!
ಹುಣ್ಣಿಮೆ ಚಂದ್ರ-ಆಗಸದ ನಕ್ಷತ್ರಗಳು
ನಾಚುವಂತೆ ಮಕರಂದನಿಗೆ ಹೊಸ ಬದುಕ ಕಟ್ಟುವ ತವಕ!

ಮತ್ತಷ್ಟು ಸುದ್ದಿಗಳು

vertical

Latest News

Weekend With Ramesh; ಸಾಧಕರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್!

newsics.com ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ. ಭಾನುವಾರದ ಎಪಿಸೋಡ್...

ತರಬೇತಿ ವಿಮಾನ ತುರ್ತು ಭೂಸ್ಪರ್ಶ; ತಪ್ಪಿದ ಭಾರೀ ಅನಾಹುತ

newsics.com ಬೆಳಗಾವಿ: ತರಬೇತಿ ವಿಮಾನವೊಂದು ತಾಂತ್ರಿಕ ತೊಂದರೆಯಿಂದ  ತುರ್ತು ಭೂಸ್ಪರ್ಶ ಆಗಿದೆ. ಈ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದಲ್ಲಿ ನಡೆದಿದೆ. ರೆಡ್‌ಬರ್ಡ್  ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ...

ಆಪರೇಷನ್ ಪಠ್ಯ ಪುಸ್ತಕ; ಪಠ್ಯಗಳ ಪರಿಷ್ಕರಿಸ್ತೇವೆಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ

newsics.com ಬೆಂಗಳೂರು:  ಪಠ್ಯ ಪುಸ್ತಕ  ಪರಿಷ್ಕರಣೆ ನಾವು ಮಾಡ್ತೀವಿ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಪರಿಷ್ಕರಣೆ ಮಾಡ್ತೀವಿ. ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುವ ಪಠ್ಯ ಕೈ ಬಿಡ್ತೀವಿ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಚರ್ಚಿಸಿ...
- Advertisement -
error: Content is protected !!