Monday, August 8, 2022

ನೂರು ವರ್ಷಗಳ ಬಳಿಕ…

Follow Us

3019 ಎಡಿ

ಇತ್ತೀಚೆಗೆ ಮೈಲ್ಯಾಂಗ್ಸ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ “3019 ಎಡಿ’ ವೈಜ್ಞಾನಿಕ ಕಾದಂಬರಿಯನ್ನು ಹೊರತಂದಿದೆ. ಮೈಲ್ಯಾಂಗ್ಸ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಆಡಿಯೋ ಹಾಗೂ ಡಿಜಿಟಲ್ ಪುಸ್ತಕವನ್ನು ಖರೀದಿ ಮಾಡಬಹುದು.


♦ ಸುಮನಾ ಲಕ್ಷ್ಮೀಶ
newsics.com@gmail.com

ಹಿಂದಿನ ಬಾಲಿವುಡ್ ಆ್ಯಕ್ಷನ್ ಚಿತ್ರಗಳಲ್ಲಿ ಬರುತ್ತಿದ್ದ ಕೆಲವು ರೋಚಕ ಸಂಗತಿಗಳು ಇಂದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಸಣ್ಣದೊಂದು ಉದಾಹರಣೆ ಎಂದರೆ, ಸಿಸಿ ಕ್ಯಾಮರಾ. ಹಿಂದಿನ ಚಿತ್ರಗಳಲ್ಲಿ (ಸಾಮಾನ್ಯವಾಗಿ ವಿಲನ್ ಪಾತ್ರ ಮಾಡಿದವರು) ಎಲ್ಲೋ ಕ್ಯಾಮರಾ ಇಟ್ಟು, ಇನ್ನೆಲ್ಲೋ ಅದನ್ನು ವೀಕ್ಷಿಸುತ್ತ ಕುಳಿತಿರುವುದು ಪ್ರಪಂಚದ ಅದ್ಭುತವೆನಿಸುತ್ತಿತ್ತು. ಆದರೆ, ಇಂದು ಸಿಸಿ ಕ್ಯಾಮರಾ ನಮ್ಮ ಮನೆಮನೆಗಳಿಗೆ ಹೆಜ್ಜೆಯಿಟ್ಟಿದೆ. ಸುರಕ್ಷತೆಗೆ ಅಗತ್ಯವೆನಿಸಿದೆ. ಹಾಗೆಯೇ, ಇಂದಿನ ಅದ್ಯಾವುದೋ ಕಲ್ಪನೆಯೊಂದು ಮುಂದೆ ಸತ್ಯವಾಗಲೂಬಹುದು. ಅದರಲ್ಲೂ ವೈಜ್ಞಾನಿಕ ಆವಿಷ್ಕಾರಗಳ ಮಟ್ಟಿಗೆ ಈ ಮಾತು ಅತ್ಯಂತ ಸತ್ಯವಾದದ್ದು.
ಇತ್ತೀಚೆಗೆ ಕನ್ನಡ ಸಾರಸ್ವತ ಲೋಕಕ್ಕೊಂದು ಮೈನವಿರೇಳಿಸುವ ಹೊಸ ಸೈನ್ಸ್ ಫಿಕ್ಷನ್ ಪ್ರವೇಶವಾಗಿದೆ. “3019 ಎಡಿ” ಹೆಸರಿನ ಈ ವೈಜ್ಞಾನಿಕ ಕಾದಂಬರಿ ನಮ್ಮನ್ನು ಕಲ್ಪನಾ ವಿಲಾಸದಲ್ಲಿ ತೇಲಿಸುವಂತೆ ಮಾಡಬಲ್ಲದು. ಡಾ. ಶಾಂತಲ ಅವರು ರಚಿಸಿರುವ “3019 ಎಡಿ’, ಇಂದಿನ ದಿನಗಳಲ್ಲಿ ವಿನೂತನವಾದ ಓದಿನ ರುಚಿ ನೀಡುವುದರಲ್ಲಿ ಸಾಕಷ್ಟು ಯಶಸ್ವಿಯಾಗಿದೆ.
ಇಂದಿಗೆ ನೂರು ವರ್ಷಗಳ ನಂತರ ಈ ಭೂಮಿ ಹೇಗಿರಬಹುದು? ಸುಮ್ಮನೆ ಕಲ್ಪನೆ ಮಾಡಿ. ವೈಜ್ಞಾನಿಕವಾಗಿ ರೋಚಕವಾಗಿ ಯೋಚಿಸಿದರೆ ಏನೆಲ್ಲ ಹೊಳೆಯುತ್ತದೆ. ಇಂದಿನ ವೈಜ್ಞಾನಿಕ ಪ್ರಗತಿ ಗಮನಿಸಿದರೆ ಇನ್ನು ನೂರು ವರ್ಷಗಳಲ್ಲಿ ಏನೆಲ್ಲ ಸಾಧ್ಯವಾಗಬಹುದು. ಜೀನ್ ಎಡಿಟಿಂಗ್ ಈಗಾಗಲೇ ಕೈಗೆಟುಕುತ್ತಿರುವ ಸಂಗತಿ. ಮುಂದೆ ಇದು ಅತಿ ಸಾಧಾರಣ ಪ್ರಕ್ರಿಯೆಯಾಗಿ, ಪಾಲಕರು ತಮಗೆ ಬೇಕಾದಂತೆ ಜೀನ್ ಅನ್ನು ತಿದ್ದಿತೀಡಿ ಮಕ್ಕಳನ್ನು ಹುಟ್ಟಿಸಿಕೊಳ್ಳಬಹುದು. ಇನ್ನು, 21ನೇ ಶತಮಾನದ ಆದಿಭಾಗದಲ್ಲೇ ಮಾನವ ತಾಂತ್ರಿಕ ಸಲಕರಣೆಯನ್ನು ತನ್ನಲ್ಲಿ ಜೋಡಿಸಿಕೊಳ್ಳಲು ಆರಂಭಿಸಿದ್ದಾನೆ. ಇಂಥವನನ್ನು ಸೈಬಾರ್ಗ್ ಎನ್ನಲಾಗಿದೆ. ಮಾನವ ಮತ್ತು ತಂತ್ರಜ್ಞಾನದ ಮಿಶ್ರತಳಿಯಿಂದ ಅತ್ಯಪೂರ್ವ ಸಾಧನೆ ಮಾಡಲು ಸಾಧ್ಯ ಎನ್ನುವ ನಂಬಿಕೆಯಿದೆ.
“ಸೈಬಾರ್ಗ್ ಆದ ಮೇಲೆ ನಾನು ಪೂರ್ತಿ ಶೇ.100ರಷ್ಟು ಮಾನವನಲ್ಲ’ ಎಂದಿದ್ದಾನೆ ನಾವು ಬದುಕುತ್ತಿರುವ ಈ ಶತಮಾನದ ಸೈಬಾರ್ಗ್ ನೀಲ್ ಹರ್ಬಿಸನ್. ಸದ್ಯ ಈ ಜಗತ್ತಿನ ಏಕೈಕ ಸೈಬಾರ್ಗ್ ಈತ. ಸರ್ಕಾರದಿಂದ ಅಧಿಕೃತವಾಗಿ “ಸೈಬಾರ್ಗ್’ ಮಾನ್ಯತೆ ಪಡೆದಿದ್ದಾನೆ. ಬ್ರಿಟಿಷ್-ಐರಿಷ್ ಕಲಾವಿದನಾಗಿರುವ ನೀಲ್, ತಲೆಬುರುಡೆಗೆ ಆಂಟೆನಾ ಕಸಿ ಮಾಡಿಸಿಕೊಂಡಿದ್ದಾನೆ. ಇದರಿಂದ ಆತನಿಗೆ ಕೆಲವು ವಿಚಾರಗಳಲ್ಲಿ ಮನುಷ್ಯನಿಗಿಂತ ಅಧಿಕ ಗ್ರಹಿಕೆ ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಖಂಡಿತವಾಗಿ ಈ ತಂತ್ರಜ್ಞಾನ ಜನಪ್ರಿಯವಾಗುತ್ತದೆ.
ಹೀಗೆ, ಡಾ. ಶಾಂತಲ ರಚಿಸಿರುವ “3019 ಎಡಿ’ ಕಾದಂಬರಿಯಲ್ಲಿ ಅದೆಷ್ಟೋ ಮಾನವರ ಗುಂಪುಗಳು ಸೃಷ್ಟಿಯಾಗಿದೆ. ಹಿಂದೆ ಅನೇಕ ರಾಜರುಗಳು ರಾಜ್ಯವಾಳಿದ್ದರೂ, ಬಳಿಕ ವಿವಿಧ ದೇಶಗಳು ಅಸ್ತಿತ್ವಕ್ಕೆ ಬಂದ ಹಾಗೆ ಮುಂದೆ ದೇಶದ ಪರಿಕಲ್ಪನೆಯೂ ಮಾಯವಾಗಿ ಇಡೀ ಭೂಮಂಡಲಕ್ಕೊಂದೇ ಸರ್ಕಾರವಾಗಿ, ಭೂಮಿಯ ಜನರು ಬಾಹ್ಯಾಕಾಶದ ಇತರ ಜೀವಿಗಳೊಂದಿಗೆ ಸ್ಪರ್ಧೆಗಿಳಿಯುತ್ತಾರೆ!
ತಂತ್ರಜ್ಞಾನದಲ್ಲಿ ಅದೆಷ್ಟೇ ಸಾಧನೆ ಮಾಡಿದ್ದರೂ ಸಾವಿನ ಪರಿಕಲ್ಪನೆಯೊಂದನ್ನು ಬದಲಿಸಲು ಅದುವರೆಗೂ ಜನರಿಗೆ ಸಾಧ್ಯವಾಗಿರಲಿಲ್ಲ. ಕೊನೆಗೊಂದು ದಿನ ಅದೂ ಸಾಧ್ಯವಾಗಿಬಿಡುತ್ತದೆ. ಪುರಾತನ ನಂಬಿಕೆಯಂತೆ ಆತ್ಮ ಅವಿನಾಶಿ. ಅದನ್ನೇ ಆಧಾರವಾಗಿಟ್ಟುಕೊಂಡು ಜೀವಚೈತನ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಿ, ತಮಗೆ ಬೇಕಾದ ಹೊಸ ದೇಹ ಪ್ರವೇಶಿಸಲು ಸಾಧ್ಯವಾಗುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯೋಗಗಳು ಯಶಸ್ವಿಯಾಗಿದ್ದರೂ ಸಾಮಾನ್ಯರ ಬದುಕಿಗೆ ಈ ತಂತ್ರಜ್ಞಾನವಿನ್ನೂ ಪ್ರವೇಶವಾಗಿರುವುದಿಲ್ಲ. ಆದರೆ, ಸಾವನ್ನು ಜಯಿಸುವ ಉತ್ಸಾಹದಲ್ಲಿರುವ ಜನರಿಗೆ ಇದೊಂದು ಅದ್ಭುತ ಅವಕಾಶ ಎನಿಸುತ್ತದೆ.
ಇನ್ನು, ಜೀನ್ ಅನ್ನು ತಿದ್ದಿತೀಡಿ ಬೆಳೆಸಿದ “ವಿನ್ಯಾಸಿಗ’ರಲ್ಲಿ ಸೋಂಕು ಎನ್ನುವುದೇ ಇರುವುದಿಲ್ಲ. ಆದರೂ ಏಕಾಏಕಿ ಅವರು ಅನಾರೋಗ್ಯಕ್ಕೀಡಾಗುವುದು ಹೆಚ್ಚುತ್ತದೆ. ತಂತ್ರಜ್ಞಾನದ ಸಹಾಯದಿಂದ ಯಾವುದೇ ರೋಗ-ರುಜಿನ ಬಾರದಂತೆ ಅವರು ಸೃಷ್ಟಿಯಾಗಿದ್ದರೂ “ಸೃಷ್ಟಿ ನಿಯಮ’ದ ವಿರುದ್ಧ ಹೋಗದಂತೆ ಮನುಕುಲಕ್ಕೆ ಎಚ್ಚರಿಕೆಯ ಸನ್ನಿವೇಶ ನಿರ್ಮಾಣವಾಗುತ್ತದೆ.
ಇವೆಲ್ಲದರ ನಡುವೆ, ನಮ್ಮನಿಮ್ಮಂಥ ಗಾಂಪರಿರುತ್ತಾರೆ. ಅವರು ಯಾವುದೇ ತಂತ್ರಜ್ಞಾನದ ನೆರವೂ ಬೇಡ, ಮಕ್ಕಳ ಹುಟ್ಟು, ಅವರ ಜೀವನ ಸಾಮಾನ್ಯವಾಗಿರಲಿ ಎನ್ನುವವರು. ಆದರೆ, ಸಮಾಜದಲ್ಲಿ ಈ ಗುಂಪು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿರುತ್ತದೆ. ಕೊನೆಗೊಮ್ಮೆ ಗಾಂಪರು ಮತ್ತೆ ಶ್ರೇಷ್ಠರೆನಿಸಿಕೊಳ್ಳುವ ಸನ್ನಿವೇಶವೂ ಬರುತ್ತದೆ.
ಮಾನವರ ನಡುವಿನ ಸಂಬಂಧವನ್ನೂ ಅನಾವರಣಗೊಳಿಸುತ್ತ ಸಾಗುವ ಕಾದಂಬರಿ ಖಂಡಿತವಾಗಿ ಒಮ್ಮೆ ಓದುವಂಥದ್ದು. ಒಮ್ಮೆ ಕೈಗೆತ್ತಿಕೊಂಡರೆ ಪೂರ್ತಿ ಓದಿ ಮುಗಿಸುವವರೆಗೂ ಸಮಾಧಾನವಿರದಂತೆ ಮಾಡುವ ಮೂಲಕ ಓದುಗರನ್ನು ಹಿಡಿದಿಡುತ್ತದೆ.

ಮತ್ತಷ್ಟು ಸುದ್ದಿಗಳು

vertical

Latest News

ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಕಸರತ್ತು

newsics.com ಪಾಟ್ನ: ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ರಾಜಕೀಯ ಮೈತ್ರಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಂಗಳವಾರ ಸಂಯುಕ್ತ ಜನತಾ ದಳದ ಮಹತ್ವದ ಚರ್ಚೆ ಪಾಟ್ನದಲ್ಲಿ ನಡೆಯಲಿದೆ. ಈ...

ಪ್ರವೀಣ್ ಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

newsics.com ಮಂಗಳೂರು: ಬೆಳ್ಳಾರೆಯ ಪ್ರವೀಣ್ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು  ಅಬೀದ್ ಮತ್ತು ನೌಫಾಲ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಹತ್ಯೆ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ...

ಏಳು ವರ್ಷದ ಮಗುವಿನಲ್ಲಿ ಮಂಕಿ ಫಾಕ್ಸ್ ರೋಗ ಲಕ್ಷಣ ಪತ್ತೆ

newsics.com ತಿರುವನಂತಪುರಂ: ಕೇರಳದಲ್ಲಿ ಏಳು ವರ್ಷದ ಮಗುವಿನಲ್ಲಿ  ಮಂಕಿ ಫಾಕ್ಸ್ ರೋಗದ ಲಕ್ಷಣ ಕಂಡು ಬಂದಿದೆ. ಇದೀಗ ಸ್ಯಾಂಪಲ್ ನ್ನು  ಉನ್ನತ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಮಗುವನ್ನು ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ  ದಾಖಲಿಸಲಾಗಿದ್ದು,  ಚಿಕಿತ್ಸೆ ಮುಂದುವರಿದಿದೆ ಬ್ರಿಟನ್ ನಿಂದ...
- Advertisement -
error: Content is protected !!