‘ಬೊಗಸೆಯಲ್ಲೊಂದು ಹೂ ನಗೆ’ ಅಂಜನಾ ಹೆಗಡೆ ಅವರ ನೆನಪುಗಳ ಲಹರಿ. ಈ ಲಹರಿಯಲ್ಲಿ ಓದುಗ ಸ್ವತಃ ತಾನು ಕಳೆದುಹೋಗುತ್ತಾನೆ. ಇದು ಅಂಜನಾ ಹೆಗಡೆ ಬರಹದ ತಾಕತ್ತು. ಭಾನುವಾರ(ಏ.18) ಬೆಳಗ್ಗೆ 10 ಗಂಟೆಗೆ ಬಸವನಗುಡಿಯ ವರ್ಲ್ಡ್ ಕಲ್ಚರ್ ನಲ್ಲಿ ಆಯೋಜನೆಯಾಗಿರುವ 2021ರ ಮೈತ್ರಿ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿರುವ ಸಂಕಲನ ‘ಬೊಗಸೆಯಲ್ಲೊಂದು ಹೂ ನಗೆ’.
ಇದು ನೆನಪುಗಳ ಲಹರಿ
♦ ಸುಮನಾ ಲಕ್ಷ್ಮೀಶ
newsics.com@gmail.com
ಯಾವತ್ತೂ ಹಾಗೆ. ಮನುಷ್ಯನ ಬಾಲ್ಯಕಾಲ ಬದುಕಿನಲ್ಲಿ ಸುಂದರವಾದೊಂದು ಛಾಪನ್ನು ಮೂಡಿಸಿ ಜೀವನದುದ್ದಕ್ಕೂ ಪೊರೆಯುತ್ತದೆ. ವಾಸ್ತವದ ಘಟನೆಗಳಿಗೂ ಹಿಂದಿನದ್ದೊಂದು ನೆನಪನ್ನು ಜೋಡಿಸುತ್ತದೆ. ಬಾಲ್ಯ ಅದೆಂಥ ಬಡತನದ್ದೇ ಆಗಲಿ, ಹಳ್ಳಿಗಾಡು, ನಗರ… ಯಾವುದೇ ಸ್ಥಳವಾಗಿರಲಿ. ಹೆಚ್ಚು ಜನರೊಂದಿಗೆ ಸೇರಿದ ಅನುಭವ ಒಂದು ರೀತಿಯದ್ದಾದರೆ, ಮಲೆನಾಡಿನ ಒಂಟೊಂಟಿ ಮನೆಗಳಲ್ಲಿ ಬೆಳೆಯುವ ಮಕ್ಕಳದ್ದು ಇನ್ನೊಂದು ರೀತಿಯ ಪ್ರಪಂಚ. ಅಂಜನಾ ಹೆಗಡೆಯವರ ‘ಬೊಗಸೆಯಲ್ಲಿ ಹೂ ನಗೆ’ ಲಲಿತ ಪ್ರಬಂಧ ಸಂಕಲನವೂ ಇಂಥ ನೂರಾರು ಅನುಭವಗಳನ್ನು ತೆರೆದಿಡುತ್ತ ಕಚಗುಳಿ ಮೂಡಿಸುತ್ತದೆ.
ಯಾವ ಅನುಭವ, ಘಟನೆಗಳೂ ಅಪ್ರಸ್ತುತವಲ್ಲವೆನ್ನುವುದಕ್ಕೆ ಈ ಪ್ರಬಂಧಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಬಾಲ್ಯಕಾಲದ ಘಟನೆಗಳಿಗಂತೂ ತಮ್ಮದೇ ಆದ ವೈಭವವಿದೆ. ಅವು ಸ್ಥಿರವಾಗಿ ಮನದಲ್ಲಿ ನೆಲೆ ನಿಲ್ಲುತ್ತವೆ. ಮನಸ್ಥಿತಿ ರೂಪಿಸುವಲ್ಲಿ ಕಾರಣವಾಗುತ್ತವೆ. ಅಪ್ಪ-ಅಮ್ಮನ ದಿನಚರಿಯಿಂದ ಹಿಡಿದು ಸಕಲ ಆಗುಹೋಗುಗಳೂ ಬೆರಗುಗಣ್ಣಿನ ನೋಟದಲ್ಲಿ ದಾಖಲಾಗುತ್ತಿರುತ್ತವೆ. ಅಂಜನಾ ಹೆಗಡೆ ಅವರ ಸಂಕಲನದಲ್ಲೂ ಕೂದಲಿನಿಂದ ಹಿಡಿದು, ಶಾಲೆ, ನದಿ-ಹಳ್ಳ-ಕೊಳ್ಳ, ಜಗುಲಿ, ಅದ್ಯಾವುದೋ ಬೀದಿ, ಚಾದರ, ದುಪ್ಪಟಿಯವರೆಗೆ ಬಾಲ್ಯದ ಎಲ್ಲ ನೆನಪುಗಳೂ ನುಗ್ಗಿ ಬಂದಿವೆ. ಕೇವಲ ಗತಕಾಲದ್ದಷ್ಟೇ ಅಲ್ಲ, ತಾವು ಪ್ರಸ್ತುತ ನೆಲೆ ನಿಂತಿರುವ ಬೆಂಗಳೂರು, ಅದರ ಟ್ರಾಫಿಕ್ಕು, ಆಫೀಸು ಎಲ್ಲವೂ ಮನದಲ್ಲಿ ಮೂಡಿಸಿದ ಚಿತ್ತಾರವನ್ನು ಯಥಾವತ್ ತೆರೆದಿಟ್ಟಿದ್ದಾರೆ. ಹೀಗಾಗಿಯೇ ಇವು ‘ನಮ್ಮದೂ’ ಎನಿಸುತ್ತವೆ. ನಮ್ಮಲ್ಲೂ ಇವೆಲ್ಲ ಭಾವಗಳಿದ್ದವಲ್ಲ ಎನಿಸುವಂತೆ ಹತ್ತಿರವಾಗುತ್ತವೆ. ಅವರ ನೆನಪುಗಳಲ್ಲಿ ಆಫೀಸಿನ ನಿರ್ಲಿಪ್ತ ಕಂಗಳ ಹುಡುಗನಿಗೂ ಹಸಿರು ಬಣ್ಣಕ್ಕೂ ಸಂಬಂಧದ ಆಶ್ರಯವಿದೆ. ಅಜ್ಜಿಯ ಮನೆ, ದೇವಸ್ಥಾನ, ಬಸ್ ಸ್ಟ್ಯಾಂಡು, ಫ್ರಾಕು ಎಲ್ಲವೂ ಇವೆ!
ಸುಮ್ಮನೆ ಸಾಲೊಂದನ್ನು ನೋಡಿ.
‘ರಾತ್ರಿ ಬಸ್ಸಿನಲ್ಲಿ ಎಷ್ಟೆಲ್ಲ ಕನಸುಗಳು ಪಯಣಿಸುತ್ತಿರುತ್ತವೆ. ತಲುಪಬೇಕಾದ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ಹವಾಮಾನಕ್ಕೆ ತಕ್ಕ ಬಟ್ಟೆ ತೊಟ್ಟು ಬೆಳಗೆನ್ನುವ ಬೆರಗಿಗೆ ಕಣ್ಣುಬಿಡಲು ತಯಾರಾಗಿ ಹೊರಟುನಿಂತಿರುತ್ತವೆ! ಬಗಲಲ್ಲೊಂದು ಹಗುರವಾದ ಪರ್ಸ್, ಕೈಯಲ್ಲೊಂದು ಭಾರವಾದ ಬ್ಯಾಗು, ಕೂದಲನ್ನು ಮೇಲೆತ್ತಿ ಕಟ್ಟಿದ ರಬ್ಬರ್ ಬ್ಯಾಂಡು ಎಲ್ಲವೂ ಆ ಕನಸುಗಳೊಂದಿಗೆ ಹೆಜ್ಜೆಹಾಕುತ್ತಿರುತ್ತವೆ’…. ರಾತ್ರಿ ಬಸ್ಸುಗಳ ಕುರಿತು ಇಂಥದ್ದೊಂದು ಭಾವ ಮೂಡಬೇಕಾದರೆ ಪ್ರತಿಯೊಂದನ್ನೂ ಅವರು ಅದೆಷ್ಟು ಬೆರಗುಗಣ್ಣುಗಳಿಂದ ವೀಕ್ಷಿಸಿರಬೇಕು!
‘ಕನಸು ಕಾಣುವುದೊಂದು ಮನಸ್ಥಿತಿ ಅಥವಾ ಭಾವನೆಗಳಿಗೆ ಸಂಬಂಧಪಟ್ಟಿದ್ದು. ರಾತ್ರಿ ಬಿದ್ದ ಕನಸೊಂದು ಬೆಳಗ್ಗೆ ಎದ್ದೇಳುವಷ್ಟರಲ್ಲಿ ಮರೆತುಹೋಗುವುದುಂಟು; ಬಾಲ್ಯದ ಅವೆಷ್ಟೋ ಕನಸುಗಳು ಯೌವನಾವಸ್ಥೆಯಲ್ಲಿ ಅಥವಾ ಯೌವನದ ಅವೆಷ್ಟೋ ಕನಸುಗಳು ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಮರೆಯಾಗುವುದುಂಟು. ಆದರೆ ಈ ಕನಸಿನ ಪ್ರಕ್ರಿಯೆ ಮಾತ್ರ ನಿರಂತರ. ಕಾಲೇಜಿನ ದಿನಗಳಲ್ಲಿ ಕುಡಿಮೀಸೆಯಂಚಿನಲ್ಲಿ ಸೊಗಸಾಗಿ ನಕ್ಕು ಕನಸಿನಂತೆ ಮರೆಯಾಗುತ್ತಿದ್ದ ಹುಡುಗನೊಬ್ಬ ಎರಡು ಮಕ್ಕಳ ತಂದೆಯಾಗಿ ಮಾರ್ಕೆಟ್ಟಿನಲ್ಲೆಲ್ಲೋ ಎದುರಾಗಿಬಿಡಬಹುದು. ಹಳೆಯ ಕನಸೊಂದು ಇಂದಿನ ವಾಸ್ತವವಾಗಿ, ಇವತ್ತಿನ ಸುಂದರ ಬದುಕೊಂದು ನಾಳೆಯ ಕನಸಾಗಿ, ಏನೆಲ್ಲವೂ ಆಗಿಬಿಡಬಹುದು’ ಎನ್ನುತ್ತಾರೆ ಅಂಜನಾ.
ಪುಸ್ತಕದ ಮುನ್ನುಡಿ ಬರೆದಿರುವ ಸೇತುರಾಂ, ‘ಇಡಿಯಾಗಿ ಓದಿ ಮುಗಿಸಿದಾಗ ವಿಷಾದದ ಭಾವ ಕಾಡಿದ್ದಂತೂ ಸತ್ಯ’ ಎನ್ನುವ ಮಾತೊಂದು ಗಮನ ಸೆಳೆಯುತ್ತದೆ. ಬದುಕು, ಬಂಧಗಳ ಕುರಿತು ಆಳವಾದ ಭಾವ ಹೊಂದಿರುವವರಲ್ಲಿ ಒಂದಿಷ್ಟು ವಿಷಾದವೂ ಉಕ್ಕುವುದು ಸತ್ಯವಾದ ಮಾತು. ಇದು ಅನೇಕ ಬರಹಗಳಲ್ಲೂ ಮೂಡಿಬಂದಿದೆ.
ಬೆನ್ನುಡಿಗೆ ಬರಹ ನೀಡಿರುವ ಕಥೆಗಾರ ಕೇಶವರೆಡ್ಡಿ ಹಂದ್ರಾಳ, ಅಂಜನಾ ಹೆಗಡೆ ಗದ್ಯ ಕಾವ್ಯದ ಮಾಧುರ್ಯತೆ ಹೊಂದಿರುವುದಾಗಿ ಹೇಳಿರುವುದು ಬರಹ ಓದಿ ಮುಗಿಸಿದಾಗ ಸತ್ಯವೆನ್ನಿಸುವುದು ಖರೆ.
ಈ ನಿಟ್ಟಿನಲ್ಲಿ ಸಹೃದಯ ಓದುಗರನ್ನು ಸೆಳೆಯುವ ಕೃತಿ ‘ಬೊಗಸೆಯಲ್ಲೊಂದು ಹೂ ನಗೆ’. ಬಾಲ್ಯಕಾಲದ ನೆನಪುಗಳಲ್ಲಿ, ಎಂದೋ ಮರೆತುಹೋದ ಚಿಕ್ಕ ಪುಟ್ಟ ವಿಚಾರಗಳನ್ನು ಮತ್ತೆ ನೆನಪಿಸಿ ರೋಮಾಂಚಿತರನ್ನಾಗಿ ಮಾಡುವಲ್ಲಿ ಬರಹ ಸಾರ್ಥಕವಾಗುತ್ತದೆ.
—
ಬೊಗಸೆಯಲ್ಲೊಂದು ಹೂ ನಗೆ- ಲಲಿತ ಪ್ರಬಂಧ
ಪ್ರಕಾಶಕರು: ಮೈತ್ರಿ ಪ್ರಕಾಶನ, ಬೆಂಗಳೂರು
ಹೆಚ್ಚಿನ ಮಾಹಿತಿಗಾಗಿ: 9902099299/ 8317396164