Saturday, June 10, 2023

ಅಣ್ಣ ಮಹಾಬಲ… ಸಾರ್ಥಕ ಬದುಕಿನ ಅನಾವರಣ   

Follow Us

ಎಂ ಎ ಹೆಗಡೆ ಜೀವನ ಭಾವನ ಸಾಧನ

.


♦ ರಾಜಶೇಖರ ಜೋಗಿನ್ಮನೆ
newsics.com@gmail.com
ನಾಡು ಕಂಡ ಅಪರೂಪದ ವ್ಯಕ್ತಿತ್ವ ಪ್ರೊ. ಎಂ. ಎ. ಹೆಗಡೆ. ಅವರು ಯಕ್ಷಗಾನ ತಜ್ಞರಾಗಿದ್ದರು, ಸಂಸ್ಕೃತ ವಿದ್ವಾಂಸರಾಗಿದ್ದರು, ಸಾಹಿತಿಯಾಗಿದ್ದರು, ಯಕ್ಷಕವಿಯಾಗಿದ್ದರು. ಹೀಗೆ ತಮ್ಮ ಬಹುಮುಖಿ ಪಾಂಡಿತ್ಯದಿಂದಾಗಿ ಹೆಸರಾಗಿದ್ದವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ, ಅಧ್ಯಕ್ಷರಿಗೆ ಸರ್ಕಾರ ನೀಡುವ ಗೌರವಧನವನ್ನೂ ಸ್ವಂತಕ್ಕೆ ಬಳಸದೇ, ಕಲೆಗಾಗಿಯೇ ವ್ಯಯಿಸಿ ಆದರ್ಶ ಮೆರೆದವರು. ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮಾತ್ರವಲ್ಲ, ಅದ್ವೈತ ವೇದಾಂತ, ಭಾರತೀಯ ದರ್ಶನ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಗಮನಾರ್ಹವೇ. ಅವರ ಅಲಂಕಾರ ತತ್ತ್ವ, ಹಿಂದೂ ಸಂಸ್ಕಾರಗಳು, ಧ್ವನ್ಯಾಲೋಕ ಮತ್ತು ಲೋಚನ, ಶಬ್ದ ಮತ್ತು ಜಗತ್ತು, ಭಾರತೀಯ ತತ್ತ್ವ ಶಾಸ, ಸಿದ್ದಾಂತ ಬಿಂದು ಮೊದಲಾದ ಗ್ರಂಥಗಳು ವಿದ್ವತ್ ಮತ್ತು ಸಾಹಿತ್ಯ ವಲಯದ ಗಮನ ಸೆಳೆದಿದ್ದರೆ, ಸೀತಾ ವಿಯೋಗ, ರಾಜಾ ಕರಂಧಮದಂಥ 20 ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳ ಮೂಲಕ ಯಕ್ಷಕವಿಯೂ ಆಗಿ ಸಂದವರು. ನೇರ ಮಾತು, ಸರಳ ವ್ಯಕ್ತಿತ್ವ ಹಾಗೂ ದಿಟ್ಟ ನಡೆಯಿಂದ ಸ್ವಚ್ಛ ಬದುಕು ಬಾಳಿದವರು. ಅವರು ನಿಧನರಾಗಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಅವರ ಬದುಕಿನ ಪ್ರಮುಖ ಘಟ್ಟಗಳನ್ನು ದಾಖಲಿಸುವ ಪುಸ್ತಕವೊಂದು ಹೊರಬಂದಿದೆ. ಆ ಮೂಲಕ ಹೆಗಡೆಯವರ ಸಾರ್ಥಕ ಬದುಕಿನ ಅನಾವರಣವಾಗಿದೆ.
ಬೆಂಗಳೂರಿನ ಪದ್ಮಾವತಿ ಮತ್ತು ಎನ್. ರಾಮನಾಥ್ ಅವರ ತೇಜು ಪಬ್ಲಿಕೇಷನ್ಸ್ ಈ ಪುಸ್ತಕ ಪ್ರಕಟಿಸಿದೆ. ಹೆಗಡೆಯವರ ಜೀವನದ ಅಪರೂಪದ ವಿವರಗಳು, ಅವರೊಂದಿಗೆ ಒಡನಾಡಿದವರ ನೆನಪುಗಳು, ಅವರ ಕೃತಿಗಳ ಕುರಿತಾದ ಅಭಿಪ್ರಾಯಗಳು, ಅವರ ಚಿಂತನೆಯ ಮಾದರಿಗಳು ಎಲ್ಲವನ್ನೂ ಒಳಗೊಂಡ ಪುಸ್ತಕವಿದು. ನಾನು ‘ ಅಣ್ಣ ಮಹಾಬಲ’ ಕೃತಿಯಲ್ಲಿ ದಾಖಲಿಸಿದ್ದೇನೆ. ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ನಿರೂಪಿಸಿದ್ದೇನೆ. ಸಾಹಿತಿ, ಚಿಂತಕ ಕೆ.ವಿ. ಅಕ್ಷರ ಅವರ ಮುನ್ನುಡಿಯಿದೆ.

—————————————-

ಪುಸ್ತಕದ ಆಯ್ದ ಭಾಗ

ಪೋಲಿಸ್ ಠಾಣೆಗೆ ಹೋದ ಲವ-ಕುಶ!

ಇದೊಂದು ಸ್ವಾರಸ್ಯಕರ ಪ್ರಸಂಗ. ಯಕ್ಷಗಾನದ ಕ್ಯಾಸೆಟ್ ಜಗತ್ತಿನಲ್ಲಿ ನಡೆದ ಕಥೆ. ಎಂ. ಎ. ಹೆಗಡೆ ಅವರು ರಚಿಸಿದ ಸೀತಾವಿಯೋಗ ಅಥವಾ ಲವ ಕುಶ ಪ್ರಸಂಗ ಒಮ್ಮೆ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಹತ್ತಿಬಿಟ್ಟಿತ್ತು.
ಅದು ಕ್ಯಾಸೆಟ್ ಪ್ರಪಂಚ ವಿಡಿಯೋ ಸಿ.ಡಿ. ಗೆ ಹೊರಳುತ್ತಿದ್ದ ಕಾಲಘಟ್ಟ. ರಂಗ ನಿರ್ದೇಶಕ, ಯಕ್ಷಗಾನ ಸಂಘಟಕ, ಕಿರುಚಿತ್ರ ನಿರ್ದೇಶಕ ಹೀಗೆಬಹುಮುಖ ಪ್ರತಿಭೆಯ ವ್ಯಕ್ತಿ ರಮೇಶ್ ಬೇಗಾರ್ ಅವರು ಒಮ್ಮೆ ಉಡುಪಿಯ ಗಾನಮ್ ಸಂಸ್ಥೆಗೆ ಒಂದಷ್ಟು ಪೌರಾಣಿಕ ಪ್ರಸಂಗಗಳ ವಿಡಿಯೋ ಸಿಡಿ ತಯಾರಿಸಿದ್ದರು.ಇದರಲ್ಲಿ ಎಂ.ಎ. ಹೆಗಡೆ ಅವರು ರಚಿಸಿದ ಲವಕುಶವೂ ಇತ್ತು. ಸಾಧಾರಣವಾಗಿ ಪೌರಾಣಿಕ ಪ್ರಸಂಗಗಳ ರಚನಾಕಾರರ ಬಗ್ಗೆಒಂದು ನಿರ್ಲಕ್ಷ್ಯಯಕ್ಷಗಾನ ಕ್ಷೇತ್ರದಲ್ಲಿ ಮೊದಲಿನಿಂದಲೂ ಇದೆ. ಪ್ರಸಂಗ ಕವಿಯ ಹೆಸರು ಹಾಕುವುದೂ ಕಡಿಮೆಯೇ, ಭಾಗವತ ಪ್ರಸಂಗ ಪಟ್ಟಿ ತಂದಿರುತ್ತಾನೆ. ಅದರಷ್ಟಕ್ಕೆ ಯಾಂತ್ರಿಕವಾಗಿ ಕ್ಯಾಸೆಟ್ ಅಥವಾ ಸಿಡಿ ದಾಖಲೀಕರಣ ನಡೆಯುತ್ತದೆ.ಹೀಗೆ ಆ ಲವಕುಶಕಾಳಗವೂ ಸಿಡಿ ರೂಪ ತಾಳಿತ್ತು.
ವಿಸಿಡಿ ಬಿಡುಗಡೆಯಾಯಿತು.ಇದನ್ನು ಗಮನಿಸಿದ ಎಂ.ಎ.ಹೆಗಡೆ ಅವರು ಅದರಲ್ಲಿ ಪ್ರಸಂಗಕರ್ತನ ಹೆಸರಿಲ್ಲದ್ದನ್ನು ಗಮನಿಸಿದರು. ನಿರ್ಮಾಣ ಸಂಸ್ಥೆ ಗೆ ಹಾಗೂ ಅದನ್ನು ಸಂಯೋಜಿಸಿದ್ದ ಶ್ರೀ ಭಾರತೀತೀರ್ಥ ಕಲ್ಚರಲ್ ಟ್ರಸ್ಟ್ ನ ಅಧ್ಯಕ್ಷರಾದ ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ. ವಿ. ಆರ್. ಗೌರೀಶಂಕರ್ ಮತ್ತು ನಿರ್ದೇಶಕ ರಮೇಶ್ ಬೇಗಾರ್ ಅವರಿಗೆ ಎಚ್ಚರಿಕೆಯ ಪತ್ರವನ್ನು ಪೋಸ್ಟ್ ಕಾರ್ಡ್ ನಲ್ಲಿ ಬರೆದು ಕಳಿಸಿದರು. ಆಗ ಅದನ್ನು ರಮೇಶ್ ಬೇಗಾರ್ ಗಂಭೀರವಾಗಿ ಪರಿಗಣಿಸದೇ ಒಂದು ಬಗೆಯ ಉಢಾಫೆಯಲ್ಲಿ ಕಾಲಕಳೆದರು.ಇದು ತನ್ನ ತಪ್ಪಲ್ಲವೆಂದೂ , ಭಾಗವತನದೆಂದೂ ವಿತಂಡ ವಾದ ಮಾಡಿ ದಿನದೂಡಿದರು. ಈ ನಿರ್ಲಕ್ಷ್ಯ ಹೆಗಡೆ ಅವರಿಗೆ ಸಿಟ್ಟು ತರಿಸಿತ್ತು.ಅದರ ಪರಿಣಾಮವಾಗಿ ಒಂದು ದಿನ ಇದ್ದಕ್ಕಿದ್ದ ಹಾಗೆ ಸಿದ್ಧಾಪುರ ಪೋಲಿಸ್ ಸ್ಟೇಷನ್ ನಿಂದ ಬೇಗಾರ್ ಅವರಿಗೆ ಕರೆಬಂತು. ಅವರು ಮಾಡಿದ್ದು ಎಂಥ ಅಪರಾಧವೆನ್ನುವುದನ್ನು ಇನ್ಸ್ ಪೆಕ್ಟರ್ ತಿಳಿಸಿ ಹೇಳಿದಾಗ ಪರಿಸ್ಥಿತಿಯ ಗಂಭೀರತೆ ಅರಿವಾಗಿತ್ತು. ಬೇಗಾರರಿಗೋ ಜೀವಮಾನದಲ್ಲಿ ಮೊದಲ ಬಾರಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕಾದ ಸ್ಥಿತಿ. ಮೇಲಿಂದ ಕೆಳಗಿನವರೆಗೆ ನಡುಗಿ ಹೋದರು!. ಏನು ಮಾಡುವುದೆಂದು ತೋಚದೆ ಕಂಗಾಲಾದರು. ನಂತರ ಎಂ.ಎ. ಹೆಗಡೆ ಅವರ ಶಿಷ್ಯರೂ ಆದ ತಮ್ಮ ಸ್ನೇಹಿತ ಯಕ್ಷಗಾನ ಕಲಾವಿದ ಕ್ಯಾದಗಿ ಮಹಾಬಲೇಶ್ವರ ಭಟ್ ಅವರ ಮೂಲಕ ಸಿದ್ದಾಪುರಕ್ಕೆ ಹೋಗಿ, ಅಲ್ಲಿಂದ ಸೀದಾ ಮಂಡ್ಲಿಕೊಪ್ಪದಲ್ಲಿರುವ ಹೆಗಡೆಯವರ ಮನೆಗೇ ಹೋದರು. ಅಕ್ಷರಶಃ ಕಾಲು ಹಿಡಿದುಕೊಂಡರು. ಆಗ ಹೆಗಡೆಯವರು ಗಂಭೀರವಾಗಿ ಹೇಳಿದರು: ನೀವು ಪತ್ರಕ್ಕೆ ಉತ್ತರ ನೀಡಿದ್ದಿದ್ದರೆ ಪ್ರಕರಣ ಇಲ್ಲಿಯವರೆಗೆ ಮುಂದುವರಿಯುತ್ತಿರಲಿಲ್ಲ. ಆದರೆ ನೀವು ಹಾಗೆ ಮಾಡಲಿಲ್ಲ. ಪ್ರಸಂಗ ಕರ್ತ ಸ್ವತಃ ಪತ್ರಬರೆದರೂ ಉತ್ತರಿಸದೇ ಅಸಡ್ಡೆ ತೋರಿಸಿದಿರಿ, ಅದಕ್ಕಾಗಿ ಹೀಗೆ ಮಾಡುವುದು ಅನಿವಾರ್ಯವಾಯಿತು. ನೋಡಿ, ಪ್ರಸಂಗ ಕವಿಯನ್ನು ಅವಜ್ಞೆಗೊಳಪಡಿಸುವುದು ಯೋಗ್ಯರ ಲಕ್ಷಣ ಅಲ್ಲ. ಅದು ನಾನಿರಬಹುದು ಅಥವಾ ಪಾರ್ತಿಸುಬ್ಬ ಇರಬಹುದು. ಕವಿಯ ಉಲ್ಲೇಖದಿಂದ ಪ್ರದರ್ಶನದ ಘನತೆ ಜಾಸ್ತಿಯಾಗುತ್ತದೆ ಎಂದು ಬುದ್ದಿ ಹೇಳಿದರು.
ಆಮೇಲೆ ತಾವೇ ಸ್ವತಃ ಪೋಲಿಸ್ ಸ್ಟೇಷನ್ಗೆ ದೂರವಾಣಿ ಕರೆಮಾಡಿ, ಮುಚ್ಚಳಿಕೆ ಬರೆಸಿ ಕಳಿಸಿ ಎಂದೂ ಸೂಚಿಸಿದರು. ಏಕೆಂದರೆ ಹೆಗಡೆಯವರ ದೃಷ್ಟಿಯಲ್ಲಿ ಅದು ವಿಷಯಾಧಾರಿತ ಜಗಳ. ಯಕ್ಷಗಾನ ಕವಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸುವುದು ಮುಖ್ಯವಾಗಿತ್ತು.
ಈ ಪ್ರಹಸನದ ನಂತರ ಯಕ್ಷಗಾನವಲಯದಲ್ಲಿ ಪ್ರಸಂಗಕರ್ತರ ಕುರಿತಾದ ಅಲಕ್ಷ್ಯ ಸ್ವಲ್ಪಮಟ್ಟಿಗೆ ಕಡಿಮೆಯಾಯಿತಾದರೂ ಕಡೆಗಣನೆ ಮುಂದುವರಿದಿರುವುದು ಮಾತ್ರ ವಿಪರ್ಯಾಸ.
ಅದೇನೋ ಸರಿ, ಈ ಘಟನೆಯ ನಂತರ ಬೇಗಾರ್ ಮತ್ತು ಹೆಗಡೆಯವರ ಸಂಬಂಧ ಏನಾಯಿತು?…

…….

ಅಣ್ಣ ಮಹಾಬಲ
– ಎಂ ಎ ಹೆಗಡೆ ಜೀವನ ಭಾವನ ಸಾಧನ
ಲೇ: ರಾಜಶೇಖರ ಜೋಗಿನ್ಮನೆ
ಪ್ರ: ತೇಜು ಪಬ್ಲಿಕೇಷನ್ಸ್ , ಬೆಂಗಳೂರು
ಪುಟಗಳು: 160+4. ಬೆಲೆ: 150 ರೂ.
ಸಂಪರ್ಕ: 9844048406 (ಕೃಷ್ಣ)

ಮತ್ತಷ್ಟು ಸುದ್ದಿಗಳು

vertical

Latest News

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ...

ಗ್ಯಾರಂಟಿ ಜಾರಿ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್

Newsics.com ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದ ಬೆನ್ನಲ್ಲೇ ಮದ್ಯದ ಬೆಲೆಯನ್ನು ದುಪ್ಪಟ್ಟು ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಕರೆಂಟ್ ಬಿಲ್ ದರ ಏರಿಕೆ ಬಳಿಕ...

ಚಂಡಮಾರುತ: ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

Newsics.com ನವದೆಹಲಿ: ಅರಬ್ಬೀ ಸಮುದ್ರದ ಕರಾವಳಿ ಭಾಗದಲ್ಲಿ ಭಾರೀ ಆತಂಕ ಮೂಡಿಸಿರುವ ಬಿಪರ್ಜೋಯ್ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದ್ದು ಉತ್ತರ ಈಶಾನ್ಯದೆಡೆಗೆ ಚಲಿಸಲಿದೆ...
- Advertisement -
error: Content is protected !!