Saturday, December 10, 2022

ಅನೂಹ್ಯ ತಿರುವುಗಳ ‘ಕೊನೆಯ ಅಂಕ’

Follow Us

♦ ಅಂಜನಾ ಹೆಗಡೆ
newsics.com@gmail.com

‘ಒಂದು ನಾಟಕದ ಕೊನೆಯ ಅಂಕ’ ವಿಷ್ಣು ಭಟ್ ಅವರ ಮೊದಲನೆಯ ಕಥಾಸಂಕಲನ. ಸಾಮಾನ್ಯವಾಗಿ ಮೊದಲ ಸಂಕಲನವೆಂದರೆ ಅದು ಧಾವಂತದ ಧಾಟಿಯಲ್ಲಿರುವುದೇ ಜಾಸ್ತಿ; ಬಾಲ್ಯದಲ್ಲಿ ನೋಡಿದ ವ್ಯಕ್ತಿಗಳು, ಕಣ್ಣೆದುರು ನಡೆದ ಘಟನೆಗಳು, ಹದಿಹರೆಯದ ಪ್ರೀತಿ-ಪ್ರೇಮ, ಕಾಮದಂತಹ ಅನುಭವಗಳು ಕಥೆಯರೂಪ ಪಡೆದುಕೊಳ್ಳುವುದು ಸಾಮಾನ್ಯವೆನ್ನಬಹುದಾದ ಸಂಗತಿ. ಅದಕ್ಕೆ ವ್ಯತಿರಿಕ್ತವಾಗಿ ಕಥೆಗಾರ ಇಲ್ಲಿ ಆಯ್ದುಕೊಂಡಿರುವುದು ಜೀವರಾಶಿಗಳನ್ನು ತಲ್ಲಣಗೊಳಿಸಬಲ್ಲ, ಜಿಜ್ಞಾಸೆಗೆ ದೂಡಬಲ್ಲಂತಹ ಸಾವಿನ ಕಥಾವಸ್ತುವನ್ನು. ಸಾವು ಹೇಗೆ ಮನುಷ್ಯ ಸಂಬಂಧಗಳನ್ನು ಇದ್ದೂ ಇಲ್ಲದಂತಾಗಿಸಿಬಿಡುತ್ತದೆ ಹಾಗೂ ಕಡಿದುಕೊಳ್ಳಲೇಬೇಕಾದ ಅನುಬಂಧಗಳನ್ನು ಕೂಡಾ ಹೇಗೆ ಅನುನಯಗೊಳಿಸುತ್ತದೆ ಈ ಎರಡೂ ಸಂದಿಗ್ಧಗಳನ್ನೂ ಇಲ್ಲಿ ಸಮರ್ಥವಾಗಿ ನಿಭಾಯಿಸಿರುವುದನ್ನು ಕಾಣಬಹುದು.


 ವಿಷ್ಣು ಭಟ್ ಹೊಸ್ಮನೆ 
ಸಾವು ಎಂದಾಕ್ಷಣ ಅಲ್ಲೊಂದು ಅನಾಥಪ್ರಜ್ಞೆ, ನೋವು-ಮರುಕಗಳು, ಧಾರ್ಮಿಕತೆ ಎಲ್ಲವೂ ಸೇರಿ ಓದುಗರ ಮನಸ್ಸಿನಲ್ಲಿ ವಿಲಕ್ಷಣವೆನ್ನಿಸಬಹುದಾದ ವಾತಾವರಣ ಸೃಷ್ಟಿಯಾಗಿಬಿಡುವ ಅಪಾಯ ತಪ್ಪಿದ್ದಲ್ಲ. ಈ ಕಥೆಗಳ ವಿಶೇಷತೆಯೆಂದರೆ ಇಲ್ಲಿ ಯಾವುದೇ ಭಾವಾತಿರೇಕಗಳಿಲ್ಲ; ಸಾವು-ನೋವುಗಳನ್ನು ವೈಭವೀಕರಿಸುವ ಹುಸಿಪ್ರಯತ್ನಗಳಿಲ್ಲ. ಸಾವಿಗೊಂದು ಘನತೆ, ಹೊಸದೊಂದು ಆಯಾಮ, ಘಾಸಿಗೊಳಿಸದ ಸಣ್ಣದೊಂದು ವಿಷಾದ ಎಲ್ಲವೂ ಅಚ್ಚುಕಟ್ಟಾಗಿ ಕಣ್ಣಿಗೆ ಕಟ್ಟುವಂತಿವೆ. ಪ್ರತಿಯೊಂದು ಕಥೆಯೂ ನಮ್ಮೆದುರೇ ಸಂಭವಿಸುವ ಬದುಕಿನ ನಾಟಕವಾಗಿ, ಕೊನೆಯ ಅಂಕದಲ್ಲೊಂದು ಅನೂಹ್ಯವಾದ ತಿರುವು ಪಡೆದುಕೊಂಡು, ಸಾವಿನಾಚೆಗೂ ನಡೆಯಬಹುದಾದ ನಾಟಕವೊಂದರ ಆದಿಯಂತೆ ಭಾಸವಾಗುತ್ತ, ಓದುಗರ ತಾರ್ಕಿಕ ನಿಲುವುಗಳನ್ನು ತಲೆಕೆಳಗು ಮಾಡುತ್ತ, ಸಾವಿನ ಕುರಿತಾದ ನಂಬಿಕೆ-ಅಪನಂಬಿಕೆಗಳನ್ನು ಪ್ರಶ್ನಿಸುವ ಕೆಲಸವನ್ನೂ ಸರಾಗವಾಗಿ ಮಾಡುತ್ತ ನಮ್ಮೊಳಗೇ ಬೆಳೆಯತೊಡಗುತ್ತದೆ.
ಈ ಕಥೆಗಳ ಪ್ರಮುಖವಾದ ಆಕರ್ಷಣೆಯೆಂದರೆ ಇವು ತಮ್ಮ ವ್ಯಾಪ್ತಿಯನ್ನೆಲ್ಲೂ ಮೀರದೇ ಇರುವುದು. ಸಣ್ಣಕಥೆಗಳೆಂದರೆ ಹೀಗಿರಬೇಕು ಎನ್ನುವಷ್ಟರ ಮಟ್ಟಿಗೆ ಚುರುಕಾದ ಸಂಭಾಷಣೆಗಳು, ವಿಕ್ಷಿಪ್ತವಾಗಿದ್ದೂ ಆಭಾಸವೆನ್ನಿಸದ ಪಾತ್ರಗಳು, ಎಣಿಕೆ ಮೀರಿದ ಘಟನೆಗಳು ಎಲ್ಲವೂ ಸೇರಿ ಇವುಗಳಿಗೊಂದು ಆಕರ್ಷಕವಾದ ಚೌಕಟ್ಟನ್ನು ಒದಗಿಸಿವೆ. ‘ಪಯಣ’ ಕಥೆಯ ವಾಸುದೇವರಾಯರಾಗಲೀ, ‘ಚಿದಂಬರನ ರಹಸ್ಯ’ದ ಚಿರುವಾಗಲೀ, ‘ಅಪರಾಜಿತ’ದ ನಳಧರ್ಮನಾಗಲೀ ಓದುಗನ ಸಂವೇದನೆಯ ಆಚೆ ನಿಂತು ಏನನ್ನೋ ಹೇಳಲು ಹವಣಿಸುತ್ತಿರುವ ಗೊಂದಲ ಇಲ್ಲೆಲ್ಲೂ ಇಲ್ಲ. ‘ಹಸನ್ಮುಖಿ’ಯ ಸೋಮಕೇಶ, ‘ಛಾಯಾಚಿತ್ರ’ ಕಥೆಯ ಭಾಸ್ಕರ, ‘ವಾಲಿಮೋಕ್ಷ’ದ ಸುಬ್ರಾಯ ಭಾಗವತರು ಎಲ್ಲರೂ ನಾಟಕದ ಪ್ರಮುಖ ಪಾತ್ರಧಾರಿಯ ನಟನೆಯನ್ನು ಸರಾಗಗೊಳಿಸುತ್ತ ತಮ್ಮತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವಲ್ಲಿ ಸಫಲರಾಗುತ್ತಾರೆ.
‘ಹೊಸ ಮನೆ’ಯಲ್ಲೊಂದು ಕೊಸ್ಕಾಯ್ ಮರ ಕಳೆದುಹೋದ ಕಾಲಕ್ಕೆ ನಮ್ಮನ್ನು ಕರೆದೊಯ್ಯುತ್ತದೆ; ‘ಊದಬತ್ತಿ’ಯ ನವಿರಾದ ಹಾಸ್ಯವೂ, ಭಯದ ಛಾಯೆಯೂ ಒಟ್ಟೊಟ್ಟಿಗೇ ನಮ್ಮನ್ನು ಆವರಿಸಿಕೊಳ್ಳುತ್ತದೆ; ‘ಒಂದು ನಾಟಕದ ಕೊನೆಯ ಅಂಕ’ದ ಮಾಧವಿಯ ಭಾವಚಿತ್ರ ನಮ್ಮ ಮನದ ಭಿತ್ತಿಯ ಮೇಲೂ ನೇತಾಡುತ್ತದೆ; ‘ಬಂಧಮುಕ್ತ’ದ ಬಾಣ ಸದ್ದುಮಾಡದೇ ನಮ್ಮ ಎದೆಗೂ ನಾಟುತ್ತದೆ. ‘ತದ್ರೂಪಿ’ ಕಥೆಯ ಅಪೂರ್ವ, ‘ಪರಂಧಾಮ’ದ ಸದಾನಂದರಾಯರು, ‘ಬಿಂಬ’ದ ತಿಮ್ಮಣ್ಣ ಭಟ್ಟರು, ‘ಸಂಕಲ್ಪ’ದ ಭಾನುಮತಿ ಇವರೆಲ್ಲರ ಆತಂಕ, ಗೊಂದಲ, ಬೇಸರಗಳೆಲ್ಲವೂ ನಮ್ಮದೂ ಆಗುತ್ತ ತಾದಾತ್ಮ್ಯ ಭಾವವೊಂದು ಆವರಿಸಿಕೊಳ್ಳುತ್ತದೆ.
ಸಾವಿನಂತಹ ಸವಾಲಿನ ವಿಷಯವಸ್ತುವನ್ನು ಕಥೆಗಳನ್ನಾಗಿಸಿ ರಂಗಸ್ಥಳಕ್ಕಿಳಿಯುತ್ತಿರುವ ವಿಷ್ಣು ಭಟ್ ಅವರ ನಾಟಕ ಹೊಸ ದಾಖಲೆಗಳನ್ನು ಸೃಷ್ಟಿಸಲಿ ಎಂದು ಹಾರೈಸುವೆ.

ಕಥಾ ಸಂಕಲನ : ಒಂದು ನಾಟಕದ ಕೊನೆಯ ಅಂಕ
ಪ್ರಕಾಶನ : ಗೋಮಿನಿ ಪ್ರಕಾಶನ
ಲೇಖಕ : ವಿಷ್ಣು ಭಟ್ ಹೊಸ್ಮನೆ
ಬೆಲೆ : 100/- ರೂಪಾಯಿ
ಪ್ರತಿಗಳಿಗೆ ಸಂಪರ್ಕಿಸಿ : +91 99866 92342

ಮತ್ತಷ್ಟು ಸುದ್ದಿಗಳು

vertical

Latest News

ಡಿಸೆಂಬರ್ 15ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ

newsics.com ಬೆಂಗಳೂರು:  ಗುಜರಾತ್ ಚುನಾವಣೆ ಬಳಿಕ ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯದತ್ತ ದೃಷ್ಟಿ ನೆಟ್ಟಿದೆ. ಇದರ ಮೊದಲ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ...

ಕಾರ್ಕಳ ಬಳಿ ಭೀಕರ ಅಪಘಾತ: ದಂಪತಿ, ಮಗು ಸಹಿತ ಮೂವರ ಸಾವು

newsics.com ಮಂಗಳೂರು:  ಉಡುಪಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ  ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕಾರ್ಕಳದ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಮೈನೇರು ಎಂಬಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು...

ಇಂಡಿಗೋ ವಿಮಾನದಲ್ಲಿ ಹರಿದ ಸೀಟು: ಪೇಟಿಎಂ‌ ಸಿಇಒಗೆ ಅಚ್ಚರಿ!

newsics.com ಮುಂಬೈ: ನೀವು ಬಸ್‌ನಲ್ಲೋ, ಆಟೋದಲ್ಲೋ ಹರಿದ ಸೀಟುಗಳನ್ನು ನೋಡಿರಬಹುದು. ಆದರೆ ವಿಮಾನದಲ್ಲೂ ಹರಿದ ಸೀಟಿನ ಚಿತ್ರವನ್ನು ಪೇಟಿಎಂ ಸಿಇಒ Paytm CEO ಹಂಚಿಕೊಂಡಿದ್ದಾರೆ. 'ಈ ಏರ್‌ಲೈನ್‌ನಲ್ಲಿ ಮಾತ್ರ ಇಂತಹ ಹರಿದ ಸೀಟನ್ನು ಮೊದಲು ನೋಡಲಾಗಿದೆ'...
- Advertisement -
error: Content is protected !!