* ದೀಪ್ತಿ ಭದ್ರಾವತಿ
response@gmail.com
ಕೆಂಪು ಕೊರಳ ಹಕ್ಕಿ
(ಕವನ ಸಂಕಲನ)
ಕವಿ: ಕಾವ್ಯ ಬೈರಾಗಿ
‘ಕಾವ್ಯ ಬೈರಾಗಿ’ ಎನ್ನುವ ಹೆಸರಿನೊಂದಿಗೆ ಕತೆ ಮತ್ತು ಕವಿತೆ ಎರಡರ ಕುರಿತಾಗಿ ಅಪಾರ ಒಲವನ್ನು ಇಟ್ಟುಕೊಂಡಿರುವ ಯುವ ಕವಿ ಶ್ರೀರಾಜ್ ಎಸ್.ಆಚಾರ್ಯ ಅವರಿಗೆ ಬೆಳಕಿನ ಕುರಿತಾಗಿ ಅಪಾರ ಹುಡುಕಾಟವಿದೆ. ಅದು ಒಳಗಿನ ಕತ್ತಲನ್ನು ಹೊರಗಿನ ನಿಶೆಯನ್ನು ಮೀರುವಂತಹ ಬೆಳಕು. ಅದೇ ಬೆಳಕನ್ನು ಅವರು ಮಾನವೀಯ ಸಂಬಂಧಗಳ ಹುಡುಕಾಟಗಳಲ್ಲಿಯೂ ತಮ್ಮದಾಗಿಸಿಕೊಳ್ಳುತ್ತಾರೆ. ಹೀಗಾಗಿ ಅವರ ಬಹುತೇಕ ಕವಿತೆಗಳಲ್ಲಿ ಬೆಳಕಿನ ಕಿಡಿಗಳು ಒಂದಲ್ಲ ಒಂದು ರೂಪದಲ್ಲಿ ಹೊರ ಹೊಮ್ಮುತ್ತಲೇ ಹೋಗುತ್ತದೆ. ಉದಾಹರಣೆಗೆ:
ಮನದ ದೀಪ ನರ್ತನಕೆ ಕತ್ತಲೆಯ ದಿಗ್ಬಂದನ
ಬೆಳಕಿನ ಹೆಜ್ಜೆ
ಪರಿಧಿ ದಾಟಲಿಲ್ಲ..! (ಕವನ ಪಕ್ಷಿ)
ಬಯಕೆ ಹೊತ್ತ ಬದುಕು
ಸೋತು ಬಿದ್ದಿದೆ..
ಕತ್ತಲು ಮೆಟ್ಟಿದ ದಾರಿಯಲ್ಲಿ
ಕಲ್ಯಾಣದ ದನಿ
ಬೆಳಕನ್ನೆಬ್ಬಿಸಬೇಕಿದೆ..! (ಕತ್ತಲು ಮೆಟ್ಟಿದ ದಾರಿ)
ಬೆಳಕಿನ ಹಿಂದಿನ ನೂರು ಕಥೆಗಳ
ಬಗೆಬಗೆಯ ಮುಖಗಳು (ಹಾಡು ಹಕ್ಕಿಗೆ ದನಿಗೂಡಿಸುತ್ತಿಲ್ಲ)
ಇಲ್ಲಿ ಕಿರಿಕಿರಿಯೂ ಸಹ್ಯ
ಬೆಳಕಿನ ಹೆಗಲೇರಿದ
ಭಾವನೆಗಳೆಲ್ಲೂ ಬಾಹ್ಯ (ಪದವಿಲ್ಲದ ಈ ಹಾಡಿಗೆ) ಅದೇ ರೀತಿ “ಮಾನಸ ಪೂಜೆ”, “ಸುಖ ಸಾರವ ಹಾಡಿದೆ” “ಹನಿ ತೈಲವಿರುವ ದೀಪ” “ದಣಿವಾಗುವ ತನಕ” ಹೀಗೆ..
ಇವರ ಕವಿತೆಗಳಲ್ಲಿನ ಬೆಳಕು ಕೆಲವೊಮ್ಮೆ ಬದುಕಿನ ದರ್ಶನ ಮಾಡಿಸುವಂತಿದ್ದರೆ ಕೆಲವೊಮ್ಮೆ ಕತ್ತಲ ಗೆರೆಗಳ ಮೀರಲಾಗದೆ ಅಲ್ಲಿಯೇ ನಿಲ್ಲುತ್ತದೆ. ಇಂತಹ ನಿಲ್ಲುವಿಕೆಗಳನ್ನು ಕೂಡ ಶ್ರೀರಾಜ್ ಒಪ್ಪಿಕೊಳ್ಳುತ್ತಲೇ ಅದನ್ನು ದಾಟುವ ಹೊಸ ದಾರಿಗಳ ಕುರಿತು ಆಲೋಚಿಸುತ್ತಾರೆ. ಜೀವನದ ವಿವಿಧ ಆಯಾಮಗಳನ್ನು ಕುತೂಹಲದ ಕಣ್ಣಿಂದ ನೋಡುತ್ತ. ಸರಳವಾಗಿ ಸೂಕ್ಷ್ಮವಾಗಿ ನಮ್ಮೆಡೆಗೆ ದಾಟಿಸುವ ಇವರು”ಹಸಿವು ಸತ್ತಿಲ್ಲ, “ಮೆಲು ದನಿಯ ಧಿಕ್ಕಾರ” ಎನ್ನುವಂತಹ ತುಸು ಆಕ್ರೋಶಭರಿತ ಕವಿತೆಗಳನ್ನು ಕೂಡ ಎದುರಿಗಿರಿಸುತ್ತಾರೆ. ಪದೇ ಪದೇ ಕಾಡುವ ಕಡಲು, ಬಿಸಿಲು, ದಾರಿ, ಹಕ್ಕಿ, ಮೋಡ, ಮಳೆ ಇವೆಲ್ಲವೂ ಇಲ್ಲಿಯ ಕವಿತೆಗಳ ಆವರಣಗಳಾಗಿವೆ. ಇವರ ಕಾವ್ಯಯಾನ ಹೀಗೆ ಮುಂದುವರೆಯಲಿ, ತನ್ಮಯಗೊಳಿಸುವ ಇನ್ನಷ್ಟು ಹೊಸ ಹೊಸ ಕವಿತೆಗಳು ಇವರೆಡೆಯಿಂದ ಬಂದು ಕಾವ್ಯಲೋಕವನ್ನು ಹಸಿರಾಗಿಸಲಿ ಎಂದು ಹಾರೈಸುವೆ.
ಆಯ್ದ ಕವನ……..
ಹಸಿವು ಬದುಕಿದೆ, ಸತ್ತಿಲ್ಲ
ಹಸಿವು ಬದುಕಿದೆ, ಸತ್ತಿಲ್ಲ
ಹಸಿವು ಸತ್ತಿಲ್ಲ
ಸ್ವಂತದ್ದಿರಬಹುದು
ಪರರದ್ದರಬಹುದು..
ಯಾರು ಎಷ್ಟನ್ನು ತಡೆದಿಡುತ್ತಾರೆ..?
ಎಷ್ಟನ್ನು ಮರೆಮಾಚುತ್ತಾರೆ..?
ಹಸಿವು ಬದುಕಿದೆ
ಹಾತೊರೆಯುವ
ಒಳಗಿನ ಹಸಿವಿನ ಜ್ವಾಲೆ..
ಒಂದು ಮೆಟ್ಟಿಲೇರಿದರೆ,
ಇನ್ನೊಂದು, ಮತ್ತೊಂದು
ಮಗದೊಂದು, ಏರುವ ಆಸೆ
ಎಲ್ಲವೂ ನನ್ನ ತೆಕ್ಕೆಯೊಳಗಿರಬೇಕು
ಹ್ಹು..ಹಸಿವು ಹಸಿವು ಸತ್ತಿಲ್ಲ
ನಿಮಗೆ ಹಸಿವು ದಹಿಸುವುದಿಲ್ಲ..
ಹ್ಹು ನನಗೂ ಕೂಡ
ಕತ್ತಲಲ್ಲಿ ಕಣ್ಣು ಹತ್ತಿರದ ದಾರಿ
ಎತ್ತರದ ಫಲ..!
ಮತ್ತದೇ ಹಸಿವು
ಅದೇನೋ ಬಯಕೆ ಅದೇ..
ಬೆತ್ತಲಿಗೂ ಹಸಿವು ಬೆಚ್ಚಗಿನ ಭಾವಕ್ಕೂ
ಎಲ್ಲಿಯೂ ತೃಪ್ತಿಯಿಲ್ಲ
ಬೆಳಕಿಗೆ ಹರಡಬೇಕೆಂಬ ಹಸಿವು
ಕತ್ತಲೆಗೂ ಕೂಡ..
ಗಟ್ಟಿ ಗಡ್ಡೆ ಕಟ್ಟಿದ ಮೌನಕ್ಕೂ
ಬೆಳೆಯಬೇಕೆಂವ ಹಸಿವು
ಹ್ಹು,.. ಹಸಿವು ಸತ್ತಿಲ್ಲ
ಹಸಿವು ಬದುಕಿನ ಅಸಲಿ ಆಟ
ಅಮೂರ್ತಗಳ ಅಸಮರ್ಪಕ ಸ್ಫೋಟ..
ಹಸಿವು ಸತ್ತಿಲ್ಲ..!
ನಿಮ್ಮಲ್ಲೇ ..ಬೇಡಿ ..ಕಣ್ಣುಬ್ಬಿಸಬೇಡಿ
ನನ್ನಲ್ಲೂ
ಹಸಿವು ಸತ್ತಿಲ್ಲ
ಬದುಕಿದೆ..