Saturday, April 17, 2021

ಸಲೀಸಾಗಿ ‘ಉರುಳುವ ಗಾಲಿಗೆ ಹಿಡಿಯುತ ಕೋಲು’

ಸುನೀತಾರವರ ಉರುಳುವ ಗಾಲಿಯು, ಪುಟಾಣಿ ಮುಗ್ಧ ಮನಸ್ಸುಗಳನ್ನು ಸಹಜವಾಗಿ ಅರಳಿಸುವ ಮನೆ, ಶಾಲೆ, ಹೂ, ಪ್ರಾಣಿ, ಹಬ್ಬ, ಜಾತ್ರೆ, ಮಳೆ, ಆಟಗಳು, ಹಳ್ಳಿ, ಪರಿಸರ, ದೇಶ, ಭಾಷೆ… ಹೀಗೆ ನೀತಿಪೂರಕವಾಗಿ, ಮನೋರಂಜನಾತ್ಮಕವಾಗಿ, ಕಲಿಯುವಿಕೆಗೆ ಪೂರಕ ಲಯಗಳ ಮೂಲಕ ತನ್ನ ಕವನಗಳನ್ನು ಉರುಳಿಸುತ್ತಾ ಸಾಗಿದೆ.

    ಬುಕ್ ಲೋಕ   


✍️ ಕಾವ್ಯ ಎಸ್.

ಹವ್ಯಾಸಿ ಬರಹಗಾರರು
newsics.com@gmail.com


 ಹಿ ರಿಯ ಸಾಹಿತಿ ಡಾ.ನಾ.ಡಿಸೋಜರವರ “ಕವಿ ಬೆಳೆದ ಹಾಗೆ ಆತ ಪರಿಪೂರ್ಣನಾಗುತ್ತಾನೆ. ಆ ಬಗೆಯ ಎಲ್ಲಾ ಲಕ್ಷಣಗಳು ಸುನೀತಾರವರಿಗಿದೆ” ಎಂಬ ಮುನ್ನುಡಿಯನ್ನು ಲೇಪಿಸಿಕೊಂಡು ಉರುಳುತಲಿರುವ ‘ಉರುಳುವ ಗಾಲಿಗೆ ಹಿಡಿಯುತ ಕೋಲು’ ಮಕ್ಕಳ ಕವನ ಸಂಕಲನವು 62 ಕವನಗಳನ್ನು ತನ್ನ ಉರುಳುವ ಗಾಲಿಗೆ ಹಿಡಿದಿದೆ.
ಬಿಡುವಿಲ್ಲದ ಜೀವನದ ಜಂಜಾಟಗಳಲ್ಲಿ ಮಕ್ಕಳಾಗಿ, ಮಕ್ಕಳ ಮನಸ್ಥಿತಿಯೊಳಗೆ ಹೊಕ್ಕು, ಮುಗ್ಧತೆಯನ್ನು ಇಣುಕಿನೋಡಿ ಕವನಗಳಾಗಿಸುವುದು, ಎಂಥವರಿಗೂ ತುಸು ತ್ರಾಸಕ್ಕೆ ತಳ್ಳುವ ಸಂಗತಿಯೇ. ಅಂತಹ ಸಂಗತಿಗಳನ್ನೆಲ್ಲಾ ಬದಿಗೊತ್ತಿ ಸುನೀತಾ ಅವರು, ತಮ್ಮ ಮಕ್ಕಳಿಗಾಗಿ, ಮುಗ್ಧ ಮನದ ಮೊಗ್ಗುಗಳಿಗಾಗಿ ‘ಉರುಳುವ ಗಾಲಿಗೆ ಹಿಡಿಯುತ ಕೋಲು’ ಎಂಬ ಉತ್ತಮ ಪ್ರಯತ್ನವನ್ನು ನಮ್ಮ ಮುಂದಿಟ್ಟಿದ್ದಾರೆ.
ಉರುಳುವ ಗಾಲಿಯು, ಪುಟಾಣಿ ಮುಗ್ಧ ಮನಸ್ಸುಗಳನ್ನು ಸಹಜವಾಗಿ ಅರಳಿಸುವ ಮನೆ, ಶಾಲೆ, ಹೂ, ಪ್ರಾಣಿ, ಹಬ್ಬ, ಜಾತ್ರೆ, ಮಳೆ, ಆಟಗಳು, ಹಳ್ಳಿ, ಪರಿಸರ, ದೇಶ, ಭಾಷೆ… ಹೀಗೆ ನೀತಿಪೂರಕವಾಗಿ, ಮನೋರಂಜನಾತ್ಮಕವಾಗಿ, ಕಲಿಯುವಿಕೆಗೆ ಪೂರಕ ಲಯಗಳ ಮೂಲಕ ತನ್ನ ಕವನಗಳನ್ನು ಉರುಳಿಸುತ್ತಾ ಸಾಗಿದೆ.
ಮೇಲಿನಿಂದ ನೂಲಿನ ಹಾಗೆ
ಬೀಳುವೆ ಹೇಗಣ್ಣಾ?
ಯಾರು ಅಲ್ಲಿ ನೇಯ್ಗೆ ಕೆಲಸ
ಮಾಡುತ್ತಿರುವರು?
‘ಮಳೆಯಣ್ಣ’ ಕವನದಲ್ಲಿ ಲೇಖಕಿಯೆ ಮಗುವಾಗಿ – ಮಳೆಯನ್ನು ನೂಲಾಗಿ ಕಾಣುವ ಚಿಂತನೆ ವಿಭಿನ್ನ. ಮಳೆ ಬೀಳುವಿಕೆಯಲ್ಲಿ ನೇಯ್ಗೆ ಕೆಲಸದ ಕಲ್ಪನೆ, ಮಳೆ ಹನಿಯನ್ನು ಬಣ್ಣವಿಲ್ಲದ ಬಿಂದುವಾಗಿ ಕಾಣುವುದು, ಹನಿಗಳು ಡಿಕ್ಕಿ ಹೊಡೆಯುವಿಕೆಯ ಭಾವ- ಇವು ಕವಿ ಮನಕ್ಕೆ ಮಾತ್ರ ಸಾಧ್ಯವಾದೀತು ಎಂಬುದು ನನ್ನ ಭಾವನೆ.
ಮನೆ ಮನಗಳ ಬೆಸುಗೆಯಾಸೆಗೆ
ಹೃದಯ ಹಣತೆಯ ಹಚ್ಚಿಟ್ಟ ಭಾಷೆ
ನಮ್ಮ ಕನ್ನಡ ಎಷ್ಟು ಸುಂದರ
ಇಲ್ಲಿ ಲೇಖಕಿಯು ಕನ್ನಡ ಭಾಷೆಯ ಮೇಲಿನ ಅಭಿಮಾನ, ಪ್ರೀತಿಗೆ ತಮ್ಮ ಕವನವನ್ನು ಬೆಸುಗೆಯಾಗಿಸಿದ್ದಾರೆ.
ಕಪ್ಪು ಬಣ್ಣದ ಪರದೆಯೂ
ಬಿಳಿಯ ಸೀಮೆಸುಣ್ಣವೂ
ಕರಿಹಲಗೆಗದು ಸಮವಸ್ತ್ರವೂ
ಬರೆದು ಅಳಿಸಿ ಬರೆದು ಅಳಿಸಿ
ಎದೆಯೊಳಗೆಲ್ಲಾ ಇಳಿಯುತ್ತೆ
ಶಾಲೆಯಲ್ಲಿ ಮಕ್ಕಳ ಕಲಿಕೆ, ಕರಿಹಲಗೆಯ ಮೇಲಿನ ಬರವಣಿಗೆಯಿಂದ ಪಕ್ವತೆ ಪಡೆಯುವುದನ್ನು ಲೇಖಕಿ ಸುಂದರವಾಗಿ ಕರಿಹಲಗೆಗೆ ಬಿಳಿಯ ಸಮವಸ್ತ್ರ ತೊಡಿಸುವ ಮೂಲಕ ಕವನದ ಸಾಲುಗಳನ್ನು ಚೆಂದಗಾಣಿಸಿದ್ದಾರೆ.
ಒಳ್ಳೆಯ ಗೆಳೆಯರ ಸೇರಿಕೊಂಡು
ಬಾಳು ಚೆಂದ ಮಾಡು ಕಂದ
ಎಲ್ಲರೊಳಗೊಂದಾಗಿ ನೀನು
ಮಡಿಲ ಮುತ್ತಾಗು
ಈ ನಾಡಿನ ಸ್ವತ್ತಾಗು
ಲೇಖಕಿ ಮೂಲತಃ ಶಿಕ್ಷಕಿಯಾಗಿರುವುದರಿಂದ ತಮ್ಮ ಮಕ್ಕಳಲ್ಲಿ ಅಪೇಕ್ಷಿಸುವ ಸದ್ಗುಣ, ಆಚಾರ-ವಿಚಾರ, ವಿನಯಗಳಿಂದ ಮಡಿಲ ಮುತ್ತಾಗಿ, ಸ್ವತ್ತಾಗಿ ಬಾಳಿರಿ ಎಂದು ಆಶಿಸಿದ್ದಾರೆ.
ಹಳ್ಳಕ್ಕೆ ಬಿದ್ದ ಕಸಿವಿಸಿಯೇನು
ಬಿದ್ದರೂ ಎದ್ದು ಓಡೂ
ಬದುಕು ಹಾಗೆಯೇ ನೋಡು
ಸುಲಭದಿ ಸಿಕ್ಕ ಈ ಚಕ್ರ, ಕೋಲು
ಕವನ ಸಂಕಲನದ ಆಶಾಭಾವದ ಶೀರ್ಷಿಕೆ ಹೊತ್ತಿರುವ ‘ಹಿಡಿಯುತ ಕೋಲು ‘ಕವಿತೆಯಲ್ಲಿ ಲೇಖಕಿ, ಹೊರಗೆ ಹೋದ ಮಗ ಸಮಯವಾದರೂ ಇನ್ನೂ ಬಾರದಿದ್ದನ್ನು ಕಂಡು ತಾಯಂದಿರು ಪಡುವ ಸಹಜವಾದ ಆತಂಕ, ಚಕ್ರವನ್ನು ನಾಗರೀಕತೆಯ ಸಂಕೇತವಾಗಿ, ಕೋಲನ್ನು ನಿಯಂತ್ರಣದ ಸಂಕೇತವಾಗಿ ಬಳಸಿ, ಬದುಕಿನಲ್ಲಿ ಸೋಲು ಸಹಜ, ಅದನ್ನು ಕೊಡವಿ ನಿಂತು, ಬದುಕಿನಲ್ಲಿ ಆಹ್ವಾನಿಸುವ ಅವಕಾಶಗಳನ್ನು ಬಳಸಿ ಬೆಳೆಯುವ ಆಶಯದೊಂದಿಗೆ, ಶರವೇಗದಲ್ಲಿ ಉದಯಿಸುತ್ತಿರುವ ಇಂದಿನ ನಾಗರಿಕತೆಯನ್ನು ಪರಿಸರದ ಅರಿವಿನಿಂದ, ನಾಗರೀಕತೆಯ ರಕ್ಷಣೆಯನ್ನು ಹಿಡಿಯುವ ಕೋಲಾಗಿ ಹಾಗೆ ಜೀವನದ ಸೋಲು – ಗೆಲುವಿನ ಚಕ್ರಕ್ಕೆ, ಆಶಾಭಾವದಿಂದ ಸೆಟೆದು ನಿಲ್ಲುವ ಕೋಲನ್ನು ಹಿಡಿಯಿರಿ ಎಂಬುದನ್ನು ಆಟದ ಮೂಲಕ ವ್ಯಕ್ತಪಡಿಸಿರುವುದು ಅವರ ಕವಿತ್ವ ಭಾವಕ್ಕೆ ಉತ್ತಮ ಉದಾಹರಣೆ.
ಅಮ್ಮ ಅಮ್ಮ ರಜೆಯಲಿ ನಾನು
ತಾತನ ಮನೆಗೆ ಹೋಗುವೆನು
ಸುಡು ಸುಡು ಬಿಸಿಲಿನ ರಜೆಯನು ನಾನು
ಮರದ ನೆರಳಲಿ ಕಳೆಯುವೆನು
ಆಧುನೀಕತೆಯ ಆಡಂಬರ, ಭರಾಟೆಗಳಲ್ಲಿ ಮಕ್ಕಳಲ್ಲಿರುವ ಮುಗ್ಧತೆ ದಿನೇ ದಿನೇ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ರಜೆಯ ಮಜಾ ಕವಿತೆ, ನಮ್ಮನ್ನು ಬಾಲ್ಯಕ್ಕೆ ಮತ್ತೊಮ್ಮೆ ಅಟ್ಟಿದ ಅನುಭವ ಮತ್ತು ಇಂದಿನ ಮಕ್ಕಳಿಗೆ ನಾವು ಕಳೆದ ಬಾಲ್ಯವನ್ನು ಚುಟುಕಾಗಿ ತಿಳಿಸಲು ಒಂದು ಉತ್ತಮ ಸಾಧನ ಈ ಕವಿತೆ.
ಕೆಲವು ಕವಿತೆಗಳಲ್ಲಿ ಪ್ರಾರಂಭದ ಸಾಲುಗಳಲ್ಲಿ ತುಡಿಯುವ ಲಯ, ಭಾವ, ಕವಿತೆಯ ಕೊನೆಯವರೆಗೂ ಮಿಡಿಯುವಂತಿರಬೇಕಿತ್ತು ಎಂಬುದು ನನಗೆ ಲೇಖಕಿಯ ಕವನಗಳನ್ನು ಓದಿದಾಗ ಲಘುವಾಗಿ ಮಿಡಿದ ಭಾವಾನಿಸಿಕೆ.
“ಪುಸ್ತಕದಲ್ಲಿರುವ ಕೆಲವು ಪದ್ಯಗಳನ್ನಾದರೂ ಶಾಲಾ ವಿದ್ಯಾರ್ಥಿಗಳು, ರಾಗವಾಗಿ ಹಾಡಿದರೆ ನನ್ನ ಪ್ರಯತ್ನ ಸಫಲವಾಗುವುದು” ಎಂಬ ಭಾವದೊಂದಿಗೆ, ತಮ್ಮ ಶಿಶುಗೀತೆಗಳನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ದಿನನಿತ್ಯ ಹಾಡುವುದನ್ನು ಕೇಳುತ್ತಾ ಲೇಖಕಿ ಸಾರ್ಥಕ್ಯ ಭಾವ ಕಾಣುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಉತ್ತಮವಾದ ಯಶಸ್ಸು ಓದುಗರ ವಿಮರ್ಶೆ, ಪರಾಮರ್ಶೆ, ಹಾರೈಕೆಗಳ ಮೂಲಕ ಒಲಿದು ಬರಲಿ.

===
ಮಕ್ಕಳ ಕವನ ಸಂಕಲನ: ಉರುಳುವ ಗಾಲಿಗೆ ಹಿಡಿಯುತ ಕೋಲು
ಲೇಖಕಿ: ಸುನೀತಾ ಕುಶಾಲನಗರ
ಪ್ರಕಾಶನ: ಬರಹ ಪಬ್ಲಿಷಿಂಗ ಹೌಸ್, ಬೆಂಗಳೂರು
ಬೆಲೆ: ಒಂದು ನೂರು ರೂಪಾಯಿ
ಸಂಪರ್ಕ: 9902362234 / 9448102158

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!