* ದೀಪ್ತಿ ಭದ್ರಾವತಿ
response@134.209.153.225
ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಬರೆಯುತ್ತಿರುವ ಯುವ ಬರಹಗಾರರ ನಡುವೆ ಶ್ರೀದೇವಿ ಕೆರೆಮನೆ ಎದ್ದು ಕಾಣುವ ಹೆಸರು. ಅದು ಗಜಲ್ ಇರಬಹುದು, ಕಾವ್ಯ ಇರಬಹುದು. ಅಂಕಣ ಬರಹ ಅಥವಾ ಇನ್ನಿತರೆ ಯಾವುದೇ ಪ್ರಕಾರಗಳಿರಬಹುದು, ಶ್ರೀದೇವಿ ಅವುಗಳನ್ನು ಸಶಕ್ತವಾಗಿ ಓದುಗರಿಗೆ ತಲುಪಿಸುತ್ತಾರೆ. ಆ ಹಾದಿಗೆ ಮತ್ತೊಂದು ಸೇರ್ಪಡೆ ಅವರ ಮೊದಲ ಕಥಾಸಂಕಲನ ‘ಬಿಕ್ಕೆಹಣ್ಣು.’
ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ವಿಭಿನ್ನ ಭಿತ್ತಿಗಳು ಇಲ್ಲಿನ ಕತೆಗಳ ವಿಶೇಷತೆ. ಮಾನವೀಯ ಕಾಳಜಿ ನೆಲೆಗಳು ಬಹುತೇಕ ಕತೆಗಳ ಮೂಲ ದ್ರವ್ಯ. ಉತ್ತರ ಕನ್ನಡದ ಆಡುಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡಿರುವ ಶ್ರೀದೇವಿ, ನಾವು ಕಾಣದ ಉತ್ತರ ಕನ್ನಡ ಜಿಲ್ಲೆಯನ್ನು, ಅಲ್ಲಿನ ಜನರ ಬದುಕನ್ನು, ಸಂಘರ್ಷಗಳನ್ನು ಸಮಗ್ರವಾಗಿ ಕಟ್ಟಿಕೊಡುತ್ತಾರೆ. ಸರಳ ಭಾಷೆ ಇಲ್ಲಿನ ಕತೆಗಳ ಹೆಚ್ಚುಗಾರಿಕೆ. ಅದೇ ಕಾರಣಕ್ಕೆ ಬೆನ್ನುಡಿ ಬರೆದಿರುವ ರಾಜು ಹೆಗಡೆಯವರು, `ಕಥೆಗಾರ್ತಿ ಇಲ್ಲಿ ಉಪಮಾನ, ರೂಪಕಗಳ ಗೊಡವೆಗೆ ಹೋಗದೆ ಕತೆ ಹೇಳಿದ್ದಾಳೆ’ ಎನ್ನುತ್ತಾರೆ.
ಈ ಸಂಕಲನದ ಮೊದಲ ಕತೆ ನೇವಿ ಮತ್ತು ಕೊನೆಯ ಕತೆ ಆಪ್ತಬಾಂಧವ ಈ ಎರಡೂ ಕತೆಗಳು ನೌಕಾನೆಲೆಗಳು ನೆಲೆಗೊಂಡ ನಂತರದ ಜನರ ಬದುಕನ್ನು, ಅವರುಗಳ ಹೊಯ್ದಾಟವನ್ನು ಒಳತೋಟಿಗಳನ್ನು ಹಿಡಿದಿಡುತ್ತವೆ. ಅದರಂತೆ ಅಮೀನ ಮತ್ತು ದೋಸೆ ಈ ಎರಡೂ ಕತೆಗಳು ಮನುಷ್ಯರ ಸಣ್ಣತನಗಳನ್ನು, ಅಮಾನವೀಯ ಗುಣಗಳನ್ನು ಕಟ್ಟಿ ಕೊಡುತ್ತವೆಯಾದರೂ ಆ ನಡುವಲ್ಲೊಂದು ಮನುಷ್ಯ ಪ್ರೀತಿಯ ಸೊಡರನ್ನು ಹಚ್ಚಿಡುವ ಯತ್ನ ಮಾಡುತ್ತವೆ.
ಅದೇ ರೀತಿ ರಶ್ನಿ ಮತ್ತು ಈ ಸಂಬಂಧಕ್ಕೊಂದು ಹೆಸರು ಬೇಕೆ ಕತೆಗಳು ನೈಜ ಪ್ರೇಮದ ಪರಿಧಿಯನ್ನೇ ಬೇರೊಂದೆಡೆಗೆ ನಿಲ್ಲಿಸಿ ನೋಡುತ್ತವೆ. ಇಲ್ಲಿ ಬರುವ ರತ್ನ, ಮಂಜ, ಗಂಗೆ ಅಮೀನಬ ಶಂಕರ-ಪಾರ್ವತಿ ಈ ಎಲ್ಲರೂ ಒಂದಲ್ಲ ಒಂದು ತರದಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತ ಹೋಗುತ್ತಾರೆ. ಸಾಮಾನ್ಯವಾಗಿ ಸ್ತ್ರೀಯರ ಬರವಣಿಗೆಗಳಲ್ಲಿ ಕಂಡುಬರುವ ಸ್ತ್ರೀ ಸಂವೇದನೆ ಕೆಲವೊಂದು ಕತೆಗಳಲ್ಲಿ ಕಂಡುಬಂದರೂ ಅದರ ಆಚೆಗಿನ ತಾವು ಕಂಡ ಬಾಲ್ಯದ ಜಗತ್ತಿನ ಜತೆಜತೆಗೆ ಪ್ರಸ್ತುತ ದಿನಮಾನಗಳನ್ನು ತಮ್ಮ ಸೂಕ್ಷ್ಮ ಕಣ್ಣುಗಳಿಂದ ಹೆಕ್ಕಿ ಓದುಗರ ಎದೆಯಲ್ಲಿ ತಣ್ಣಗೆ ಇಳಿಸುತ್ತಾರೆ.
ಬಿಕ್ಕೆಹಣ್ಣು (ಕಥಾಸಂಕಲನ)
ಲೇಖಕರು: ಶ್ರೀದೇವಿ ಕೆರೆಮನೆ
ಪ್ರಕಾಶಕರು: ಹೂವಿನ ಹೊಳೆ ಪ್ರಕಾಶನ
ಬೆಲೆ: 90 ರೂ.
===
(ಶ್ರೀದೇವಿ ಕೆರೆಮನೆಯವರ ಬಿಕ್ಕೆಹಣ್ಣು ಕಥಾಸಂಕಲನದಿಂದ ಆಯ್ದ ಕತೆ)
ನೇವಿ
ಸಮುದ್ರದ ಎದುರಿಗಿದ್ದ ಪುಟ್ಟ ಗುಡಿಸಲಿನ ಗಿಡ್ಡ ಬಾಗಿಲಿನಲ್ಲಿ ಕುಳಿತ ರತ್ನ ಬೆಳ್ಳಂಬೆಳಿಗ್ಗೆಯೇ ಕಡಲಲ್ಲಿ ಕಣ್ಣಿಟ್ಟು ಕಲ್ಲಾಗಿದ್ದಳು. ಇತ್ತ ಕಡೆಯ ಲಕ್ಷವೇ ಇರಲಿಲ್ಲ. ತೊಡೆಯ ಮೇಲೆ ಆಡುತ್ತಿದ್ದ ಪುಟ್ಟ ಮಗು ಸೆರಗು ಸರಿಸಿ ಹಾಲಿಗಾಗಿ ಹಂಬಲಿಸುತ್ತಿದ್ದರೂ ಕುಡಿಸಬೇಕೆಂಬ ಪ್ರಜ್ಞೆಯೂ ಇಲ್ಲದೇ ಕಲ್ಲಾಗಿ ಹೋಗಿದ್ದಳು. ಗಂಡ ಮಂಜು ಬೋಟಿಗೆ ಹೋಗಿ ಆಗಲೇ ನಾಲ್ಕು ದಿನವಾಗಿತ್ತು. ನಿನ್ನೆಯೇ ಬರಬೇಕಾಗಿದ್ದ ಗಂಡ ಇನ್ನೂ ಬರಲಿಲ್ಲ ಎಂಬುದೇ ಆಕೆಯ ಚಿಂತೆಗೆ ಕಾರಣ. ಹುಟ್ಟು-ಸಾವು ಯಾವುದೂ ಭೂಮಿಯ ಮೇಲಲ್ಲ, ಎಲ್ಲವೂ ಕಡಲದೇವಿಯ ಆಶೀರ್ವಾದದಿಂದ ಎಂದುಕೊಂಡವಳು ಆಕೆ. ಆದರೂ ಏನೋ ತಳಮಳ. ಎಲ್ಲೋ ಆಡಲು ಹೋಗಿದ್ದ ಮಗಳು ಶಾರದಾ “ಅಮ್ಮಾ ಹಸವಿ ಆತಿದೇ; ಉಣ್ಣುಕೆ ಇಕ್ಕೇ” ಎಂದಾಗ ಬೆಚ್ಚಿ ಬಿದ್ದು ಅವಳತ್ತ ನೋಡಿದ ರತ್ನಾ “ಇದೊಂದ ಹುಟ್ಟೀದು, ಕತ್ತೆಗೆ ವಯಸ್ಸಾದಂಗ್ ಆದ್ರೂ ಇನ್ನೂ ಸಣ್ಣ ಮೊಗಾ ಅಂತೀದು. ನೀನೇ ಹಾಕಂಡ್ ತಿನ್ನೂಕಾಗೂದಿಲ್ಲಾ?” ಎಂದು ಧ್ವನಿ ಎತ್ತರಿಸಿ ಮತ್ತೆ ತನ್ನದೇ ಆಲೋಚನೆಯಲ್ಲಿ ಮುಳುಗಿ ಹೋದಳು. “ದೆಯ್ಯ ಬಡಿದೀದು ಈ ಅವ್ವಿಗೆ” ಮುಖ ತಿರುಗಿಸಿದ ಶಾರದಾ ತಾಟೆಳೆದು ಮಡಿಕೆಯಲ್ಲಿ ಉಳಿದಿದ್ದ ತಣ್ಣಿ ಅನ್ನಕ್ಕೆ ನೀರು ಸುರುವಿಕೊಂಡು, ಒಲೆಕಟ್ಟೆಯ ಮೇಲಿದ್ದ ಒಣಮೀನನ್ನು ಚಪ್ಪರಿಸಿಕೊಂಡು ಊಟ ಮಾಡತೊಡಗಿದಳು. ಅವಳು ಊಟ ಮಾಡಿ ಪಾಟಿಚೀಲ ಎತ್ತಿಕೊಂಡು ಶಾಲೆಗೆ ಹೋದರೂ ರತ್ನಾಳಿಗೆ ಆ ಕಡೆ ಲಕ್ಷವಿರಲಿಲ್ಲ. ಯಾಕೋ ಎದೆಯಲ್ಲಿ ಮೀನು ಕೊಯ್ಯುವ ಹರಿತಾದ ಚಾಕು ಆಡಿಸಿದ ಅನುಭವ. “ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ..” ಎರಡು ಮನೆ ಆಚೆಗಿರುವ ಶಂಕ್ರಣ್ಣನ ಮನೆಯಲ್ಲಿ ರೇಡಿಯೋ ಕಿರ್ರೋ ಮರ್ರೋ ಹಾಡುತ್ತಿದ್ದುದು ಕೇಳಿಸುತ್ತಿತ್ತು ಮೊದಲೆಲ್ಲ ಆ ಹಾಡಿಗೆ ತನ್ನ ಧ್ವನಿಯನ್ನೂ ಸೇರಿಸುತ್ತಿದ್ದ ರತ್ನಾ ಈಗ ಅರ್ಥವಾಗದಂತೆ ಕುಳಿತಿದ್ದಳು. “ಶಂಕ್ರಣ್ಣಾ ಸೌಂಡ್ ದೊಡ್ಡ ಮಾಡೋ” ಎಂದು ಹಿಂದೆಲ್ಲ ವರಾತೆ ಹಚ್ಚುತ್ತಿದ್ದ ರತ್ನಾ ಈಗ ‘ಈ ±ಂಕ್ರಣ್ಣನಿಗೆ ಬೇರೆ ಕೆಲಸ ಇಲ್ಲ, ಇಷ್ಟು ದೊಡ್ಡದಾಗಿ ¸ತ್ತ ಮನೆಲಿ ಮೈಕೋ ಹಾಕಿದ ಹಾಗೆ ಹಚ್ಚಿದ್ದಾನೆ’ ಎಂದು ಒಳಗೊಳಗೇ ಗೊಣಗಿಕೊಂಡಳು. ಅಯ್ಯೋ ಕೊಕ್ಕಡ ದೇವಾ, ಇದೆಂತಾ ಆಗೀದು ನಂಗೆ? ನಾ ಯಾಕೆ ಸತ್ತ ಮನಿ ಸುದ್ದಿ ಹೇಳ್ಖಂತಿವೆ? ಹಂಗೆಲ್ಲ ಇವ್ರು ಹೊರ್ಗೆ ಹೋದಾಗೆ ಹಂಗಲ್ಲಾ ಮಾತ್ಯಾಕೆ ನನ್ನ ಬಾಯಿಂದ ಬತ್ತೇ ಈದು? ಹಾಳಾಗ್ಲಿ ನನ್ನ ಬಾಯಿ” ಎಂದು ತನ್ನನ್ನೇ ತಾನು ಶಪಿಸಿಕೊಳ್ಳುತ್ತ ಮನಸ್ಸು ಒಂದಿಷ್ಟು ನೆಮ್ಮದಿಯಾದೀತು ಎಂದುಕೊಳ್ಳುತ್ತ ರೇಡಿಯೋದ ಹಾಡಿನ ಕಡೆ ಗಮನ ಕೊಟ್ಟಳು. ‘ರೇಡಿಯೋ ಇರೂದು ನಿಮಗೆ ಹಾಡು ಕೇಳೂಕಲ್ಲ, ಕಡ್ಲಲ್ಲಿ ಯಾವಾಗ ತೂಫಾನ್ ಆಗೂದು ಅಂದ್ ಕೇಳೂಕೆ’ ಎಂಬ ಶಂಕ್ರಣ್ಣನ ಮಾತನ್ನು ನೆನಪಿಸಿಕೊಳ್ಳುತ್ತಿರುವಾಗಲೇ ರೇಡಿಯೋ ಒಮ್ಮೆಲೆ ಹಾಡು ನಿಲ್ಲಿಸಿ, ‘ಮೀನುಗಾರರಿಗೆ ಸೂಚನೆ- ಸಮುದ್ರದಲ್ಲಿ ತೂಫಾನು ಏಳುವ ಸಂಭವವಿದ್ದು ಇನ್ನು ಇಪ್ಪತ್ನಾಲ್ಕು ಗಂಟೆಗಳ ಕಾಲ ಯಾರೂ ಸಮುದ್ರಕ್ಕೆ ಇಳಿಯದಿರಲು ಹವಾಮಾನ ಇಲಾಖೆ ಸೂಚಿಸಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿದಿದ್ದು ಗಾಳಿ ಉತ್ತರಾಭಿಮುಖವಾಗಿ ಬೀಸುತ್ತಿದೆ. ಅಂಕೋಲಾ, ಕಾರವಾರ ಹಾಗೂ ಗೋವಾದ ಸಮುದ್ರ ತೀರಕ್ಕೆ ತೂಫಾನ್ ಅಪ್ಪಳಿಸುವ ಸಂಭವವಿದೆ ಎಂದು ಹವಾಮಾನ ತಜ್ಞರು ಸೂಚಿಸಿದ್ದಾರೆ.’ ಎಂದು ಬಿತ್ತರಿಸತೊಡಗಿದಾಗ ರತ್ನಾ ಒಮ್ಮೆಲೆ ಚಳಿ-ಜ್ವರ ಬಂದಂತೆ ನಡುಗತೊಡಗಿದಳು.
ಎದ್ದು ಹೊರಬಂದರೆ ಅಲ್ಲಲ್ಲೇ ಗುಂಪು. “ರಾಮೂನೂ ಹೋಗ್ಯಾ…. ಸಂಗ್ತಿಗೆ ಮಂಜು, ಶಿವು, ರಾಜು. ನಾಕೂ ಜನಾನೂ ನೆನ್ನೆನೇ ಬಿಟ್ಕುಂಡೆ ಬರೂದ್ ಬಿಟ್ಕುಂಡೆ…” ಪಕ್ಕದ ಮನೆಯ ಲಲಿತಾ ಇವಳನ್ನು ನೋಡಿ ಧ್ವನಿ ತಗ್ಗಿಸಿದಳು. ಆದರೆ ಇವಳನ್ನು ನೋಡದ ಸರೋಜಾ, “ಅತ್ಯಾಸೆ ಅಂಬುದು ಇದ್ಕೆ ನೋಡ. ನಿನ್ನೆನೇ ನಾಗಪ್ಪಣ್ಣಂಗೆ ಸಿಕ್ಕಿರ್ ಕಂಡಾ. ಬರ್ರೋ ಹೋಗೂನಿ ಅಂದ್ರೆ ಮತ್ತೂ ಮುಂದೆ ನೋಡ್ಕುಂಡೆ ಬತ್ತೀವು ಅಂದ್ರ ಕಂಡಾ.” ರಾಗ ಮಾಡಿ ಹೇಳುತ್ತಿದ್ದುದನ್ನು ಕೇಳಿ ಇನ್ನೇನು ತಲೆತಿರುಗಿ ಬೀಳುತ್ತೇನೆ ಎನ್ನಿಸಿ ತಿರುಗಿ ಒಳಗೆ ಬಂದು ಕುಳಿತಳು. ಅಲ್ಲೇ ಮಲಗಿದ್ದ ಎರಡು ವರ್ಷದ ಮಗ ಸೆರಗು ಎಳೆಯ ತೊಡಗಿದಾಗ ಎರಡು ಹೊಡೆದು ಎದೆಗವಚಿಕೊಂಡಳು. ಹೊಡೆತದ ನೋವಿಗೆ “ಹಾ….” ಎಂದು ಬಾಯಿ ತೆರೆದಿದ್ದ ಮಗು ಒಮ್ಮೆಲೆ ಬಾಯಿಗೆ ಅಮೃತ ಸಿಕ್ಕಿದಂತೆ ಬಾಯಿ ಮುಚ್ಚಿದಾಗ, “ಹಡಬೆ, ಯಾರಿದ್ರೇನು? ಸತ್ರೇನು? ನಿಂಗೊಂದು ಸೀಬೂಕೆ ಸಿಕ್ರೆ ಆಯ್ತು…” ಗೊಣಗುತ್ತ ಮತ್ತೆ ತನ್ನದೇ ಚಿಂತೆಯಲ್ಲಿ ಮುಳುಗಿದಳು.
ಯಾಕೋ ಕಣ್ಣು ಕಟ್ಟಿ ಬಯಲಲ್ಲಿ ಬಿಟ್ಟಂತಾಯಿತು ರತ್ನಾಳಿಗೆ. ಸಮುದ್ರದಲ್ಲಿ ಬಿಟ್ಟರೆ ಈಜುಕೊಂಡಾದರೂ ಬದುಕಬಹುದಿತ್ತು ಎನ್ನಿಸಿ ಕಣ್ಣಲ್ಲಿ ನೀರುಕ್ಕಿ ಬಂತು. ಎದೆಯ ಸಂಕಟ ಹೇಳಿಕೊಳ್ಳಲು ತನ್ನವರು ಎನ್ನುವವರು ಯಾರೂ ಇಲ್ಲ. ಊರಲ್ಲಾದ್ರೆ ಆಚೆಗೆ-ಈಚೆಗೆ ಎಲ್ಲರೂ ಸಂಬಂಧಿಕರೇ. ಕಾಕಾ, ಮಾಮಾ,ಅತ್ತೆ, ಚಿಗವ್ವ ಎನ್ನುತ್ತ ಎಲ್ಲರ ಮನೆ ಹೊಕ್ಕು ಬಳಸಿ ರೂಢಿಯಿತ್ತು. ಈ ಊರಿಗೆ ಬಂದು ಎಂಟು ವರ್ಷವಾಗುತ್ತಿದ್ದರೂ ಯಾರ ಮನೆಯಲ್ಲೂ ಹೊಕ್ಕು ಬಳಸಿ ರೂಢಿ ಇಲ್ಲ. ಎಲ್ಲರಲ್ಲೂ ಏನೋ ಒಂದು ಅಂತರ. ಮೇಲ್ನೋಟಕ್ಕೆ ಚೆನ್ನಾಗೇ ಮಾತನಾಡುತ್ತಿದ್ದರೂ ಕಣ್ಣಿಗೆ ಕಾಣದ ಏನೋ ಒಂದು ಅದೃಶ್ಯ ಗೋಡೆ ನಮ್ಮೆಲ್ಲರ ನಡುವಿದೆ ಎಂದು ರತ್ನಾ ಎಷ್ಟೊ ಬಾರಿ ಯೋಚಿಸುತ್ತಿದ್ದಳು. “ಥೂ… ದರಿದ್ರ ನೇವಿಯವರು…”ಕ್ಯಾಕರಿಸಿ ಉಗಿಯಬೇಕೆನಿಸಿತು.”ನಮ್ಮ ಜೀವ್ನಾ ಎಲ್ಲಾ ಹಾಳ್ ಮಾಡಿ ದೇಸಾ ಕಾಯೂರಂತೆ. ಬೇವಾರ್ಸಿಗಳು… ನಮ್ಮ ಬದುಕು ಇರ್ವಿಗೆ ಕಾಂಬೂದೇ ಇಲ್ಲ..” ಆಡಬಾರದು ಎಂದುಕೊಂಡ ಕೆಟ್ಟ ಬೈಗುಳಗಳೆಲ್ಲ ನಾಲಿಗೆಯ ತುದಿಯಲ್ಲಿ ಬಂದು ನಿಂತಂತಾಗಿ ಗಂಟಲು ಕಟ್ಟಿ ಕೆಮ್ಮಲಾರಂಭಿಸಿದಳು. ತಮ್ಮೂರು ಸಂಕ್ರೂಭಾಗದ ನೆನಪಾಗಿ ಕೊರಳುಬ್ಬಿ ಬಂತು. ಅಲ್ಲಿಯ ಕಡಲಾದರೂ ಎಂತಹದ್ದು…. ಇಲ್ಲಿನ ಹಾಗೆ ರಭಸವಿಲ್ಲ. ಅಬ್ಬರವೂ ಇಲ್ಲ. ಹೆಂಗಸರೂ ಬೋಟಿಗೆ ಹೋಗಬಹುದು. ಅಷ್ಟು ಚಂದದ ಕಡಲು. ನೇವಿಯವರು ಏನೋ ಮಾಡ್ತಾರಂತೆ ಎಂದು ತಾನು ಚಿಕ್ಕವಳಿದ್ದಾಗಿಂದಲೂ ಕೇಳಿಬರುತ್ತಿದ್ದ ಮಾತು ತನ್ನ ಮದುವೆ ಆದ ಎರಡೇ ವರ್ಷಕ್ಕೆ ‘ನಮ್ಮೂರಿನ ಕೆಲವರಿಗೆ ಹಾರವಾಡ, ಕೆಲವರಿಗೆ ಚಿತ್ತಾಕುಲದಲ್ಲೇ ಜಾಗ ಕೊಟ್ಟೀರಂತೆ. ಈ ತಿಂಗಳಲ್ಲೇ ಊರು ಬಿಡ್ಬೇಕಾತೀದು. ಯಾರ್ಯಾರಿಗೆ ಯಾವ್-ಯಾವ್ ಊರು ನೋಡ್ಕಣಿ” ಊರ ಮುಖಂಡ ದುರ್ಗಣ್ಣ ಒಂದು ದಿನ ಮನೆಮನೆಗೆ ಹೋಗಿ ಹೇಳಿದ್ದ. ಯುವಕ ಸಂಘದವರೆಲ್ಲ ಯಾರ್ಯಾರು ಎಲ್ಲೆಲ್ಲಿ ಎಂದು ಲೀಸ್ಟ ತಂದಿದ್ದರು. ಊರು ಇಬ್ಬಾಗವಾದಂತೆ ಕುಟುಂಬವೂ ಇಬ್ಬಾಗವಾಗಿ ಅಣ್ಣ ಹಾರವಾಡಕ್ಕೆ ಹೋದರೆ ತಮ್ಮನಿಗೆ ಚಿತ್ತಾಕುಲದಲ್ಲಿ ‘ಪ್ಲಾಟ ಅಲಾಟ್’ ಆಗಿತ್ತು. ರತ್ನಾ-ಮಂಜು ಮನಸ್ಸಿಲ್ಲದ ಮನಸ್ಸಿನಿಂದ ಹಾರವಾಡಕ್ಕೆ ಬಂದು ಗೂಡು ಕಟ್ಟಿಕೊಂಡಿದ್ದರು. ರತ್ನಾಳ ಮನೆಯ ಅಕ್ಕ ಪಕ್ಕ ಸಂಕ್ರೂಭಾಗದವರೊಬ್ಬರೂ ಇರಲಿಲ್ಲ. ಅರ್ಗಾ, ಚಂಡಿಯಾದಿಂದ ಬಂದವರೇ ಅಲ್ಲಿದ್ದರಿಂದ ರತ್ನಾಳಿಗೆ ಬಹಳಷ್ಟು ಸಲ ಊರ ಮಧ್ಯದಲ್ಲಿದ್ದರೂ ಏಕಾಂಗಿತನ ಕಾಡುತ್ತಿತ್ತು. ಸಂಕ್ರೂಭಾಗ ನೆನಪಾಗುತ್ತಿದ್ದಂತೆ ಅವ್ವಿಯ ನೆನಪಾಯಿತು. ದಪ್ಪಗೆ, ಬೆಳ್ಳಗಿದ್ದ ಅವ್ವಿ ಮೀನುಮುಟ್ಟಿ ಹೊತ್ತು ನಡೆಯುತ್ತಿದ್ದರೆ ಅದೇನು ಚಂದ. ತಟ್ಟನೆ ಅಪ್ಪ ಕೂಡ ನೆನಪಾದ. ‘ಅಯ್ಯೋ ಅಪ್ಪ ಕೂಡ ಹಿಂಗೇ… ತಾನು ಶಾರಿಯಷ್ಟು ದೊಡ್ಡವಳಿದ್ದಾಗಲೇ ಅಲ್ಲವೇ ಗೋವಾದಲ್ಲಿ ಬೋಟಿಗೆಂದು ಹೋದವ ಸಮುದ್ರದಲ್ಲಿ ಬಿದ್ದು ಬಿಟ್ಟಿದ್ದು…? ‘ಅವಂದೇ ತಪ್ಪು’ ಸಾಹುಕಾರರು ಒಂದಿಷ್ಟು ಹಣ ಕೊಟ್ಟು ಕೈತೊಳೆದುಕೊಂಡಿದ್ದರು. ಎರಡನೇ ಕ್ಲಾಸಿಗೆ ಹೋಗುತ್ತಿದ್ದ ತಾನು ಅವ್ವಿಗೆ ಸಹಾಯ ಮಾಡಲೆಂದು ಬಲೆಗೆ ಬಿದ್ದ ಮೀನು ಬಿಡಿಸಲು ಹೋಗಿದ್ದು? ನಂತರ ಶಾಲೆಗೆ ಹೋಗಲು ಆಗಿರಲೇ ಇಲ್ಲ. “ರತ್ನಾ ಹುಶಾರೀದು. ಶಾಲೆಗೆ ಕಳಿಸೇ” ಅವ್ವಿಗೆ ಪದೇ ಪದೇ ಹೇಳಿಕಳುಹಿಸಿದ ಅಂಕೋಲಾದ ಸುಮಿತ್ರಬಾಯೋರಿಗೆ “ಏನು ಮಾಡೂಕಾತೀದೂ ಬಾಯೋರೇ? ಇದ್ರ ಅಪ್ಪ ಇದ್ರೆ ಚಂದಾ ಓದಿಸ್ತಿದ್ದ. ಈಗ್ಗೆ ಹೊಟ್ಟಿಗೆ ತುಂಬ್ಸೂದೇ ಕಷ್ಟ. ಬಲೆಗೆ ಹೋದ್ರೆ ದಿನಕ್ಕೆ ಐವತ್ತು ರೂಪಯಿ ಆತಿದು.. ನಾನರೂ ಎಂತಾ ಮಾಡ್ಲೆ? ಹೆಣ್ಣ್ ಹೆಂಗ್ಸೂ..” ಎಂದು ಕಣ್ಣೀರಿಟ್ಟ ಅವ್ವಿಗೆ ಏನು ಹೇಳುವುದಂದೇ ಗೊತ್ತಾಗದೇ ಸುಮ್ಮನಾಗಿದ್ದರು. ‘ಅಂದ್ರೆ ಈಗ ಶಾರಿ ಪರಿಸ್ಥಿತಿಯೂ ತನ್ನ ಹಾಗೇ ಆಗಬಹುದೇ..?’ ಯೋಚಿಸಿದ ರತ್ನಾಳಿಗೆ ಒಮ್ಮೆಲೇ ಶಾರದಾಳನ್ನು ನೋಡಬೇಕೆನ್ನಿಸಿತು. “ಶಾರೀ…ಶಾರೀ…” ಬಾಯಿ ಹರಿದು ಹೋಗುವಷ್ಟು ಜೋರಾಗಿ ಕಿರುಚಿದರೂ ಶಾರದಾ ಓಗುಡದಿದ್ದಾಗ, “ಹಡಬೆಗೆ ಹುಟ್ಟಿದ್ದು. ಎಲ್ಲಿಗೆ ಹೋಯ್ತು? ಒಂದ್ ನಿಮ್ಸಾನೂ ಮನೆಲಿ ಇರೂದಿಲ್ಲ. ಬರ್ಲೆ. ಹಬ್ಬ ಆಡಸ್ತೆ..” ತನ್ನ ನೋವನ್ನೆಲ್ಲ ಅವಳ ಮೇಲೆ ಎರಚುವಂತೆ ಕೂಗತೊಡಗಿದಳು.
“ರತ್ನಾ, ಏನೇ ಆಗಿದು ನಿಂಗೆ? ಆ ಮೊಗ ಆವಾಗ್ಲೇ ಶಾಲೆಗೆ ಹೋಯ್ತಲ್ಲೇ…?” ಪಕ್ಕದ ಮನೆಯ ರಾಮಕ್ಕ ಅನುಕಂಪದಿಂದ ನೋಡುತ್ತ ಹೇಳಿದಾಗ ತಟ್ಟನೆ ತನ್ನ ಮರೆಗುಳಿಗೆ ತನಗೇ ನಾಚಿಕೆಯೆನಿಸಿ ರತ್ನಾ ಒಳಗೆ ಬಂದು ಮತ್ತದೇ ಯೋಚನೆಯಲ್ಲಿ ಕುಳಿತಳು.
ಫಕ್ಕನೆ ಗಾಬಿತವಾಡಾದ ಪಾಂಡು ನೆನಪಾಗಿದ್ದ. ಹಿಂದಿನ ವರ್ಷ ಇದೇ ಹೊತ್ತಿಗೇ ಅಲ್ಲವೇ ಅವನು ಕಡಲ ಪಾಲಾಗಿದ್ದು? ಬೇಡ ಎಂದರೂ ಸಂಗಡ ಇದ್ದವರ ಮಾತು ಕೇಳದೇ “ಮುಂದೆ ಜಾಗೆ ಬಿದ್ದಿದೂ..” ಎನ್ನುತ್ತ ಹೋದವ ಬಂಡೆಗೆ ಬೊಟ್ ಬಡಿದು ಕಡಲಲ್ಲಿ ಬಿದ್ದವ ಎರಡು ದಿನಗಳ ನಂತರ ಕೇಣಿ ದಂಡೆಯಲ್ಲಿ ಸಿಕ್ಕಿದ್ದ. ಮುಚ್ಚಿದ ಕಣ್ಣಿನ ಎದುರು ಮೀನುಗಳು ಅರೆಬರೆ ತಿಂದ ಪಾಂಡುವನ ದೇಹವೇ ಕಂಡಂತಾಗಿ ಬೆಚ್ಚಿ ಬಿದ್ದ ರತ್ನಾಳಿಗೆ ವಾಕರಿಕೆ ಬಂದಂತಾಗಿ ಎದ್ದು ನಿಂತಳು. ಅಷ್ಟರಲ್ಲೇ ಶಾಲೆಯಿಂದ ಬಂದ ಶಾರದಾಳಿಗೂ ವಿಷಯ ಗೊತ್ತಾಗಿತ್ತು. ಹೊಟ್ಟೆ ಹಸಿದು ಚುರುಗುಡುತ್ತಿದ್ದರೂ ತಿಂಡಿ ಬೇಕೆಂದು ಕೇಳುವ ಧೈರ್ಯ ಇಲ್ಲದೇ ಅವ್ವಿಯ ತೆಕ್ಕೆಗೆ ಕುಳಿತ ಶಾರದಾ,”ಅದೇ ಅವ್ವಿ, ಯಾವುದೋ ಬೋಟ್ ಬತ್ತೀದು. ನೋಡ್ಖಂಡು ಬತ್ತೆ.” ಎಂದು ಹೋದವಳು ತುಸು ತಡವಾಗಿಯೇ ಬಂದಳು. ಒಳಗೆ ಬಂದ ಮಗಳು ಏನಾದರೂ ಸುದ್ದಿ ಕೊಟ್ಟಾಳೆನೋ ಎಂದು ಕಣ್ಣರಳಿಸಿದ ರತ್ನಾಳಿಗೆ ಕಂಡಿದ್ದು ಮಗಳ ಸಪ್ಪೆ ಮುಖವೇ. “ಅದು ನಾಗಪ್ಪಣ್ಣ-ಸಂಕ್ರಣ್ಣ ಇದ್ದ ಬೋಟು.” ಎಂದ ಮಗಳು ತನ್ನಿಂದೇನೋ ಮುಚ್ಚಿಡುತ್ತಿದ್ದಾಳೆ ಎಂಬುದು ರತ್ನಾಳಿಗೆ ಅರ್ಥವಾಗಿ ಹೋಯ್ತು. “ಏನಾಯ್ತೇ..? ಗನಾತ್ನಾಗಿ ಹೇಳೇ.” ಗೋಗರೆಯುವಂತೆ ಕೇಳಿದಳು. “ಏನಿಲ್ಲವ್ವಿ. ಅವ್ರಿಗೂ ಅಪ್ಪ ಇದ್ದ ಬೋಟು ಕಾಣೆಲಾಕಂಡಾ..” ಎಂದ ಶಾರದಾ ಮತ್ತೇನೋ ಮುಚ್ಚಿಡುತ್ತಿದ್ದಾಳೆ ಎಂದು ತೀವೃವಾಗಿ ಅನ್ನಿಸಿದರೂ ಮತ್ತೆ ಕೇಳುವ ಧೈರ್ಯ ಸಾಲದೇ ಗೋಡೆಗೊರಗಿ ಕಣ್ಣು ಮುಚ್ಚಿದಳು.
“ರತ್ನಾ…ರತ್ನಾ…” ಮಂಜ ಕರೆದಂತಾಗಿ ನೋಡಿದರೆ ನಿಜಕ್ಕೂ ಆತ ಮಂಜನೇ. “ಆ ನೇವಿಯೋರು ಅವರ ಸಮುದ್ರಕ್ಕೆ ಹೋಗಿದ್ರು ಅದ್ಕಂಡೆ ಹಿಡ್ಕಂಬಿಟ್ಟಿದ್ರೂ. ಕಾಲಿಗೆ ಬಿದ್ದು ಬೇಡಕಂಡ್ರೂ ಬಿಡೂದಿಲ್ಲ. ಅವರ ಆಫೀಸರ್‍ಗೆ ಹೇಳಿ ಕೇಸ್ ಹಾಕ್ತಾರ್ ಕಂಡಾ. ಅವರದ್ದೇ ಕೋರ್ಟನಲ್ಲೇ ಇಚಾರ್ಣೆ ಮಾಡುರಂತೆ.ಮುಗೂಕೆ ತಿಂಗಳಾಗೂದು. ಮನಿಗೂ ಒಂದ್ ಮಾತು ಹೇಳೂಕೆ ಬಿಡೂದಿಲ್ಲ. ಜೈಲಲ್ಲೇ ಇರಬೇಕ್ ಕಂಡಾÀ’ ಮಂಜು ಏನೋ ದೊಡ್ಡ ಅನಾಹುತ ಆದ ಹಾಗೆ ಏದುಸಿರು ಬಿಡುತ್ತ ಹೇಳುತ್ತಿದ್ದ. “ಮೀನೀಗೆ ಹೋದವ್ರು ಅಂದ್ಕುಂಡೆ ಖಾತ್ರಿ ಆದ್ರೆ ಮಾತ್ರೆ ಬಿಡ್ತಾರ್ ಕಂಡಾ. ಇಲ್ಲಾ ಅಂದ್ರೆ ಜೀವಮಾನವಿಡೀ ಜೈಲಲ್ಲೇ…. ಅದ್ಕೆ ಹೆಂಡ್ತಿಗೆ ಆರಾಂ ಇಲ್ಲಾ ಅಂದ್ಕುಂಡೆ ಕೈ-ಕಾಲ್ ಹಿಡ್ಕುಂಡೆ ಹ್ಯಾಂಗರೂ ತಪ್ಪಿಸ್ಕಂಡ್ ಬಂದೋ. ಮತ್ತೆ ಈ ಬದಿಗೆ ಬಂದ್ರೆ ನೋಡ್ಕಣಿ ಅಂದೆ ವಾರ್ನ ಮಾಡಿ ಕಳ್ಸರ್… ಬೋಳಿಮಕ್ಳ…” ಮಂಜು ಸುಸ್ತಾದ ಹಾಗೆ ಹೇಳುತ್ತಿದ್ದರೆ ರತ್ನಾ ನೆಲಕ್ಕೆ ಕೈ ಬಡಿಯುತ್ತ “ ಈ ನೇವಿಯೋರ ವಂಸ ನಿರ್ವವಂಸ ಆಗೋಗ್ಲೆ. ಸರ್ವನಾಸ ಆಗೋಗ್ಲೆ. ನಮ್ಮೂರಿಗೆ ಬಂದ್ಕುಂಡೆ ನಮಗೇ ಹೇಳ್ತೀರು. ಈ ಕಡಲೇನು ಅವರ ಅಪ್ಪಂದಾ ಬರಬೇಡ ಅನ್ನೂಕೆ..ನಮ್ಮೂರಿಗೆ ಬಂದ್ಕುಂಡೆ, ನಮ್ಮ ಕಡ್ಲನ್ನೆಲ್ಲಾ ತಾಂವ್ ತಗಿಂಡೆ… ಈಗ್ಗೆ ನಮ್ಗೇ ಬರಬ್ಯಾಡ ಅಂತೀರೂ. ಅದೆಂಗ್ ಆಗೂದು? ನಮ್ಮ ಅಪ್ಪ ಅಜ್ಜ, ಅವ್ರ ಅಜ್ಜನ ಕಾಲ್ದಿಂದ್ಲೂ ನಾವಿಲ್ಲೇ ಇದ್ದೋರು. ಇದೇ ಕಡ್ಲಲ್ಲೇ ಆಡ್ಕಂಡು ಬೆಳ್ದೋರು ಇವ್ರಾವ್ ಬಾಜಿ ರಾಯರೂ ನಮ್ಗೆ ಬೇಡ ಅನ್ನೋರೂ. ಈ ನೇವಿಯೋರ್ಗೇ ಅದ್ಯಾವ್ದೋ ದೇಸಾ ಕಂಡಲ್ಲಾ.. ಅವ್ರು ಬಾಂಬ್ ಹಾಕೇ ಬಿಟ್ರ ಆಯ್ತಿತ್ತು.” ಎನ್ನುತ್ತ ಶಾಪ ಹಾಕತೊಡಗಿದಳು.
“ಏಯ್ ರತ್ನಾ…. ಇದೇನೇ ಹಿಂಗೆ ಮನಿಕಂಡೀರಿ..? ಬಾಗ್ಲೂ ಹಾಕದಂಗೆ..” ಯಾರೋ ಅಲುಗಾಡಿಸಿದಂತಾಗಿ ಕಣ್ಣು ತೆರೆದರೆ ಎದುರಿಗೆ ಮಂಜ ನಿಂತಿದ್ದ. ‘ಅಂದರೆ ನಾನೀಗ ಕಂಡಿದ್ದೆಲ್ಲ ಕನಸೇ..’ ಎನ್ನುತ್ತ ಎದ್ದು ಕುಳಿತಳು. “ಆ ನೇವಿಯೋರು ದೇವರಂಗೇ ಬಂದ್ರು. ಕಡಲಲ್ಲೇ ತೂಫಾನು. ನಾವು ಮುಣುಗೇ ಹೋಗೂರು. ಆ ನೇವಿಯೋರ ಹಡಗು ನಮ್ಮ ಬೋಟ್‍ನ್ನು ಕಟ್ಕೊಂಡು ಎಳ್ಕುಂಡೇ ಬಂದ್ರು.” ಎನ್ನುತ್ತ ಆಗ ತಾನೆ ಎದ್ದು ಕುಳಿತು “ಅಪ್ಪಾ..” ಎಂದು ತೊಡೆಯೇರಿದ ಶಾರದಾಳನ್ನು ಮಡಲಿಗೆಳೆದುಕೊಳ್ಳುತ್ತ ಹೇಳುತ್ತಿದ್ದರೆ ರತ್ನಾ ಈಗ ತಾನೆ ನೇವಿಯವರಿಗೆ ಹಿಗ್ಗಾಮುಗ್ಗಾ ಶಾಪ ಹಾಕಿದ್ದಕ್ಕಾಗಿ ಕೆನ್ನೆ ತಟ್ಟಿಕೊಳ್ಳುತ್ತಿದ್ದಳು. “ನಾ ಬಂದೆ ಅಂದ್ಕುಂಡೆ ಹರಕೆ ಹೇಳ್ಕಂತಿದ್ದೀಯೇನೇ? ಮುಂದಿನ ವರ್ಷ ಕೊಕ್ಕಡದೇವ್ರಿಗೆ ದೊಡ್ಡ ಬಾಳಿಕೊನಿ ಕೊಡ್ವನಿ..” ಮಂಜು ಹೆಂಡತಿಯನ್ನೇ ಪ್ರೀತಿಯಿಂದ ನೋಡಿದ. ಬೆಳಿಗ್ಗೆಯಿಂದ ಮಕ್ಕಳ ಹೊಟ್ಟೆಗೇ ಹಾಕದಿದ್ದುದು ನೆನಪಾಗಿ “ಏನಾರೂ ಮೀನು ಉಳಿದೀದೇ? ಒಂದು ಕುದಿಲಾನಾದ್ರೂ ಮಾಡಿ ಬಿಡ್ತೆ. ಬ್ಯಾಗ ಉಣ್ಣುಕಾಗುದು.” ಎನ್ನುತ್ತ ರತ್ನ ಮೆಟ್ಟುಗತ್ತಿ ಹಿಡಿದು ಮೀನು ಕೊಯ್ಯಲು ಹೊರಟಳು.