Wednesday, July 6, 2022

ಮೌಲ್ಯ ಹೇಳುವ ಆ ನೀಲಿ ಕಂಗಳ ಹುಡುಗಿ…

Follow Us

ತನ್ನ ನಡೆ- ನುಡಿಯ ಮೂಲಕ ಮಗಳಿಗೆ ಆದರ್ಶವಾಗಿ ನಿಂತು ಅವಳ ಜೀವನವನ್ನು ಕಟ್ಟಿಕೊಡುವ ರೀತಿ ಅದ್ಭುತ. ತಾನು ಕಲಿಸಿದ ಮೌಲ್ಯಗಳೆಂಬ ನೆಲಗಟ್ಟಿನ ಮೇಲೆ ಮಗಳ ಜೀವನದ ಸೌಧ ನಿರ್ಮಿಸಲ್ಪಟ್ಟಿದೆ ಎಂದು ಗೊತ್ತಾದ ಮೇಲೆ, ಅವಳ ಜೀವನದ ಮಹತ್ವದ ತಿರುವಿನ ಸಂದರ್ಭದಲ್ಲಿ ಅವಳ ನಿರ್ಧಾರವನ್ನು ಅವಳಿಗೇ ಬಿಟ್ಟು ಅವಳನ್ನು ಸಂತೈಸುವ ರೀತಿ ಇಷ್ಟ ಆಗುತ್ತದೆ.

              

♦ ಅನಂತ್ ಕಾಮತ್, ಬೆಳಂಬಾರ
newsics.com@gmail.com


 ಸ್ವಾ ತಂತ್ರ್ಯ ಮತ್ತು ಸ್ವೇಚ್ಛೆ ಇವುಗಳ ನಡುವೆ ಇರುವುದು ಕೂದಲೆಳೆಯಷ್ಟು ಅಂತರ. ಸ್ವಾತಂತ್ರ್ಯ ಯಾವತ್ತೂ ಮರ್ಯಾದೆಯ ಪರಿಧಿಯೊಳಗೆ ಇರುತ್ತದೆ. ಆ ಪರಿಧಿಯನ್ನು ಮೀರಿ ಹೊರನಡೆದರೆ ಅದು ಸ್ವೇಚ್ಛೆ ಅನ್ನಿಸಿಕೊಳ್ಳುತ್ತದೆ. ಇವೆರಡರ ನಡುವಿನ ಅಂತರವನ್ನು ಗುರುತಿಸುವಲ್ಲಿ ವಿಫಲವಾದ ಕಾರಣಕ್ಕೋ ಏನೋ ಯುವಜನತೆ ಸ್ವೇಚ್ಛೆಯನ್ನೇ ಸ್ವಾತಂತ್ರ್ಯಎಂಬುದಾಗಿ ಭ್ರಮಿಸಿ ದಾರಿ ತಪ್ಪುತ್ತಿರುವುದು.
ದಿವ್ಯಾ ಶ್ರೀಧರ್ ರಾವ್ ಅವರು “ಆ ನೀಲಿ ಕಂಗಳ ಹುಡುಗಿ” ಕಾದಂಬರಿಯಲ್ಲಿ ಇವೆರಡರ ನಡುವಿನ ವ್ಯತ್ಯಾಸವನ್ನು ಪಾತ್ರಗಳ ಮೂಲಕ ಚೆನ್ನಾಗಿ ವಿವರಿಸಿದ್ದಾರೆ. ಪುಟ್ಟಿ(ನಿರೂಪಕಿ) ಮತ್ತು ಅಕ್ಷು ಎರಡು ಪಾತ್ರಗಳು ಈ ಕಾದಂಬರಿಯ ಜೀವಾಳ. ಒಂದು ಪಾತ್ರ ಭದ್ರ ದಡಗಳಿರುವ ಪ್ರಶಾಂತ, ಸುಂದರ ನದಿಯ ಹಾಗೆ. ಜೀವನದ ಏರಿಳಿತಗಳಲ್ಲಿ ತನ್ನ ದಡಗಳೆಂಬ ಮರ್ಯಾದೆಯ ಮಿತಿಯನ್ನು ಮೀರದೆ ಆ ಪಾತ್ರದ ಬದುಕು ಸಾಗುತ್ತದೆ. ಪ್ರತಿ ನಿರ್ಧಾರವನ್ನೂ ಅಮ್ಮನ ಸಲಹೆಯೊಟ್ಟಿಗೆ, ತನ್ನ ವಿಮರ್ಶೆಯ ನಿಕಷಕ್ಕೊಡ್ಡಿ ಯೋಚಿಸಿ ಮುನ್ನಡೆಯುವ ರೀತಿ ಓದುಗನಿಗೆ ಸಂತೋಷ ತಂದುಕೊಡುತ್ತದೆ.
ಇನ್ನೊಂದು ಪಾತ್ರ ಹಾಗಲ್ಲ. ಅದು ಮಳೆಗಾಲದಲ್ಲಿ ಮಾತ್ರ ಹರಿಯುವ ಹುಚ್ಚು ಹೊಳೆಯ ಹಾಗೆ. ಅದು ದಡದ ಪರಿವೆಯೇ ಇಲ್ಲದೆ ಎಲ್ಲೆಂದರಲ್ಲಿ ಹೇಗೆ ನುಗ್ಗುತ್ತದೋ ಹಾಗೆ ತನ್ನ ಮರ್ಯಾದೆಯ ಅಥವಾ ಭವಿತವ್ಯದ ಪರಿವೆಯೂ ಇಲ್ಲದೆ ಸ್ವೇಚ್ಛೆಯಿಂದ ವಿಹರಿಸುವ ಜೀವನ. ಎಲ್ಲವನ್ನೂ ಅನುಭವಿಸಬೇಕೆನ್ನುವ ತಹತಹಿಕೆ. ಆಕರ್ಷಣೆಗಳೇ ಪ್ರೀತಿ ಎಂದು ಭಾವಿಸಿ, ಅದರ ಬೆನ್ನತ್ತಿ, ತನ್ನ ದುರಾಸೆಗಳನ್ನೂ ಕಾಮನೆಗಳನ್ನೂ ಪೂರೈಸಿಕೊಳ್ಳುವ ಧಾವಂತ, ಇವೆಲ್ಲ ನೋಡಿದಾಗ ಈಗಿನ ಬಹುಪಾಲು ಯುವಜನತೆಯ ಮನಸ್ಥಿತಿಯನ್ನೇ ಪಾತ್ರವಾಗಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ ಎನ್ನಬಹುದು. ಮಗಳು ಮಾಡುವ ತಪ್ಪುಗಳನ್ನು ತಿದ್ದುವ ಬದಲು ಪ್ರತಿ ಸಲವೂ ಅದನ್ನು ಸಮರ್ಥಿಸಿಕೊಳ್ಳುತ್ತಾ ಮಗಳ ಜೀವನದ ಸಂಕಷ್ಟಗಳಿಗೆ ಕಾರಣವಾಗುವ ತಾಯಿ, ಮಗಳಿಗಾಗಿ ಬೇರೆಯವರ ಜೀವನದ ಸಂತೋಷವನ್ನೂ ಕಸಿಯಲು ಹಿಂಜರಿಯದ ಆ ಮನಸ್ಥಿತಿ ನನಗೆ ರಾಮಾಯಣದ ಕೈಕೆಯಿಯನ್ನು ನೆನಪಿಸಿದ್ದು ಸುಳ್ಳಲ್ಲ.
ಇನ್ನು ಇಡೀ ಕಾದಂಬರಿಗೆ ಕಲಶರೂಪದಲ್ಲಿ ಇರುವುದು ನಿರೂಪಕಿಯ ಅಮ್ಮನ ಪಾತ್ರ. ಲೇಖಕನೊಬ್ಬ ವಾಸ್ತವವನ್ನು, ಕಥೆಯನ್ನು ಬರೆಯುತ್ತಾ ಅದರ ಜತೆಜತೆಗೆ ಅದರ್ಶಗಳನ್ನೂ ಪ್ರಪಂಚಕ್ಕೆ ನೀಡಬೇಕಂತೆ. ಆ ಆದರ್ಶಗಳು ಓದುಗನ ಮನಸ್ಸನ್ನು ಅವನಿಗರಿವಿಲ್ಲದ ಹಾಗೆ ವಿಕಸಿತಗೊಳಿಸುತ್ತದೆ. ಲೇಖಕಿ ಅಮ್ಮನ ಪಾತ್ರದ ಮೂಲಕ ಕಾದಂಬರಿಗೆ ಮತ್ತು ಓದುಗರಿಗೆ ಈ ನಿಟ್ಟಿನಲ್ಲಿ ನ್ಯಾಯ ಒದಗಿಸಿದ್ದಾರೆ.
ತನ್ನ ನಡೆ- ನುಡಿಯ ಮೂಲಕ ಮಗಳಿಗೆ ಆದರ್ಶವಾಗಿ ನಿಂತು ಅವಳ ಜೀವನವನ್ನು ಕಟ್ಟಿಕೊಡುವ ರೀತಿ ಅದ್ಭುತ. ತಾನು ಕಲಿಸಿದ ಮೌಲ್ಯಗಳೆಂಬ ನೆಲಗಟ್ಟಿನ ಮೇಲೆ ಮಗಳ ಜೀವನದ ಸೌಧ ನಿರ್ಮಿಸಲ್ಪಟ್ಟಿದೆ ಎಂದು ಗೊತ್ತಾದ ಮೇಲೆ, ಅವಳ ಜೀವನದ ಮಹತ್ವದ ತಿರುವಿನ ಸಂದರ್ಭದಲ್ಲಿ ಅವಳ ನಿರ್ಧಾರವನ್ನು ಅವಳಿಗೇ ಬಿಟ್ಟು ಅವಳನ್ನು ಸಂತೈಸುವ ರೀತಿ ಇಷ್ಟ ಆಗುತ್ತದೆ. ಆ ಪಾತ್ರದ ಮೂಲಕ ಹೇಳಿಸಿದ ಪ್ರತಿ ಮಾತುಗಳೂ ಓದುಗನ ಮನಸ್ಸನ್ನು ತಟ್ಟುತ್ತದೆ. ಆ ಪಾತ್ರವೊಂದನ್ನು ನಮ್ಮಲ್ಲಿ ನಾವೇ ಹುಟ್ಟಿಸಿಕೊಂಡು ಬಿಟ್ಟರೆ ಜೀವನದ ಅನೇಕ ಪ್ರಶ್ನೆಗಳಿಗೆ ಅದು ಉತ್ತರವನ್ನು ನೀಡಬಲ್ಲದು.
“ಆ ನೀಲಿ ಕಂಗಳ ಹುಡುಗಿ” ಯಾರು..? ಅವಳಿಗೂ ನಿರೂಪಕಿಗೂ ಇರುವ ಸಂಬಂಧ ಏನು..? ಅವರಿಬ್ಬರ ಜೀವನ ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ..? ನಿಜವಾದ ಪ್ರೀತಿ ಗೆಲ್ಲುತ್ತಾ..? ಹೀಗೆ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಉತ್ತರವನ್ನೂ ಕೊಡುತ್ತಾ ಸಾಗುವ ಕಾದಂಬರಿಯ ಕ್ಲೈಮ್ಯಾಕ್ಸ್ ತುಂಬಾ ರೋಚಕವಾಗಿದೆ. ಪುಸ್ತಕ ಓದಿ ಮುಗಿಸುವಾಗ ಕಣ್ಣಂಚು ತೇವವಾಗಿರುತ್ತದೆ.
“ಓ ಹೆಣ್ಣೇ ನೀನೆಷ್ಟು ಗಟ್ಟಿಗಿತ್ತಿ” ಸರಣಿ ಲೇಖನಗಳ ಮೂಲಕ ಓದುಗರಿಗೆ ಪರಿಚಯವಾದ ದಿವ್ಯಾ ಶ್ರೀಧರ್ ರಾವ್ ಅವರು ‘ಕರ್ಣ ವೃಷಾಲಿ’ ಎಂಬ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಇವರ ಚೊಚ್ಚಲ ಕಾದಂಬರಿ ಇದಾದರೂ ಅದನ್ನು ಓದುವಾಗ ಬರಹದ ಪ್ರಬುದ್ಧತೆ ಇದು ಮೊದಲ ಕಾದಂಬರಿ ಅನ್ನುವ ಅನುಭವ ಖಂಡಿತ ನೀಡದು. ಎಲ್ಲರೂ ಓದಬಹುದಾದ, ಓದಲೇಬೇಕಾದ ಕಾದಂಬರಿ.
ಓದುವಾಗ ಕಾದಂಬರಿಯಲ್ಲಿ ನೀವೊಂದು ಪಾತ್ರವಾಗಿ, ಓದಿದ ನಂತರ ಕಾದಂಬರಿಯ ಪಾತ್ರಗಳು ನಿಮ್ಮೊಂದಿಗೆ ಕೆಲ ದಿನಗಳವರೆಗಾದರೂ ಬದುಕುವುದಂತೂ ಸತ್ಯ.

‘ಆ ನೀಲಿ ಕಂಗಳ ಹುಡುಗಿ’
ಆರ್ಯ ಪ್ರಕಾಶನ
ಮೊಬೈಲ್ – 9590252456
divyarao1986@rediffmail.com

ಮತ್ತಷ್ಟು ಸುದ್ದಿಗಳು

vertical

Latest News

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ, ...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...
- Advertisement -
error: Content is protected !!