- ಕಲ್ಲೇಶ್ ಕುಂಬಾರ್
response@134.209.153.225
‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ’ ಕವನ ಸಂಕಲನ
ಲೇಖಕರು: ಸುಮಿತ್ ಮೇತ್ರಿ
‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ’ ಕವಿತೆ, ಕವಿಯೊಬ್ಬನ ಭಾವಕೋಶದಲ್ಲಿ ಲೋಕದ ವಿದ್ಯಮಾನಗಳ ಕುರಿತಾಗಿ ನಡೆಯುವ ಮಂಥನದಿಂದ ಕವಿತೆಯೊಂದು ಅರಳುವ ಪರಿಯನ್ನು ಅನನ್ಯವಾಗಿ ಕಟ್ಟಿಕೊಡುತ್ತದೆ. ಕವಿತೆಯೆಂದರೆ ಕವಿಯನ್ನು ಆವರಿಸಿದ ಮೌನದೊಳಗಿನ ಬೀಜ! ಅದು, ಆತನ ಧ್ಯಾನಸ್ಥ ಸ್ಥಿತಿಯಲ್ಲಿಯೇ ಹೂವಾಗಿ ಅರಳಬೇಕು; ಕವಿಯ ಒಳಗಿನ ಮಂಥನದಲ್ಲಿ ಭಾವನೆಗಳು ಉದ್ದೀಪನಗೊಂಡು ಹೊರಗಿನ ಅಭಿವ್ಯಕ್ತಿಯಾಗಬೇಕು! ಆಗ, ಅದು ಕೇವಲ ಕವಿತೆ ಎನಿಸದೇ ಸುಂದರವಾದ ಕಲಾಕೃತಿ ಎಂದೆನಿಸುತ್ತದೆ. ಮತ್ತು ಅಂಥ ಕವಿತೆ ಓದುಗನ ಮನದಲ್ಲಿ ಸದಾ ನಿಲ್ಲುತ್ತದೆ!..
..ಇಲ್ಲಿ, ಕವಿ (ಸುಮಿತ್) ಆಕಾಶಕ್ಕೆ ಉಗುಳುವುದನ್ನು ಬಿಡಬೇಕು ಎಂದು ಹೇಳಿರುವುದಕ್ಕೂ ಒಂದು ಕಾರಣವಿದೆ. ಅಂತೆಯೇ, ಕವಿತೆಯ ವಿಚಾರದಲ್ಲಿ ಕವಿಗೆ ಆಮೆ ಮತ್ತು ಮೊಲದ ಕಥೆಯನ್ನು ಅವರು ನೆನಪಿಸುತ್ತಾರೆ! ಅಹಂಮಿಕೆಯಿಂದ ಹೊರತಾದ ಮಗುವಿನ ಮುಗ್ಧತೆಯನ್ನು ಅಳವಡಿಸಿಕೊಂಡು, ಕವಿತೆಯ ಮುಂದೆ ಶರಣಾದಾಗ ಮಾತ್ರ ಕವಿತೆ ಕೈ ಹಿಡಿಯುತ್ತದೆ. ಹೀಗಾಗಿ, ಕವಿತೆಯೆಂದರೆ ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ – ಎಂದು ಹೇಳಿರುವ ಅವರ ಮಾತುಗಳು ಕವಿಯಾಗಿ ಸುಮಿತ್ ಮಾಗಿದ್ದಾರೆ ಎಂಬ ಭರವಸೆಯನ್ನು ಮೂಡಿಸುತ್ತವೆ..!
(ಸುಮಿತ್ ಮೇತ್ರಿ ಅವರ ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ’ ಕವನ ಸಂಕಲನದಲ್ಲಿನ ಒಂದು ಕವಿತೆ)
ಥಟ್ ಅಂತ
ಬರೆದು ಕೊಡುವ ರಶೀದಿಯಲ್ಲ ಕವಿತೆ
ಥಟ್ ಅಂತ ಬರೆದು
ಕೊಡುವ ರಶೀದಿಯಲ್ಲ ಕವಿತೆ
ಕಾಯಬೇಕು ಹೂವು ಅರಳುವ
ಸೂರ್ಯ ಉದಯಿಸುವ ಘಳಿಗೆಗೆ
ಹಿಡಿಯಲು ಹವಣಿಸಲೇಬಾರದು
ಬಿಡುಗಡೆಯ ಭಾಗ್ಯಕ್ಕೆ
ಬಯೋಡೇಟಾ ಬೇಕೇನು?
ಅವ್ಯಕ್ತ!
ನೆನಪಿರಬಹುದು
‘ಆಮೆ ಮತ್ತು ಮೊಲದ ಕಥೆ’
ಮುಳ್ಳಾಗಿ ಚುಚ್ಚುವ ಅಹಂ
ತರಹೇವಾರಿ ಸರ್ಪನೃತ್ಯ ದಕ್ಕದು
ಅನಾಮಧೇಯ ಬೀಸುವ
ತಂಗಾಳಿಯಂತೆ ಸಾಗಬೇಕು
ಆಕಾಶಕ್ಕೆ ಉಗಿಯುವುದು ಬಿಡಬೇಕು
ಮಾತಾಗಬೇಕಿದೆ ಕವಿತೆ
ಧ್ಯಾನಸ್ಥ ಸ್ಥಿತಿ,
ಅವ್ಯಕ್ತ!
# ಸುಮಿತ್ ಮೇತ್ರಿ