Saturday, July 31, 2021

ಉತ್ತರಾಯಣದಲ್ಲಿ ಮೈ ಮರೆಯದ ಪ್ರಜ್ಞೆ

Follow Us

  • ಮಾಲಿನಿ ಗುರುಪ್ರಸನ್ನ.
    response@134.209.153.225

ನಗಿನ್ನೂ ಚೆನ್ನಾಗಿ ನೆನಪಿದೆ ನಾನೀ ಪುಸ್ತಕ ಮೊದಲು ಓದಿದ್ದು ಗೆಂಟಿಂಗ್ ಹೈಲ್ಯಾಂಡ್ಸ್ ನಲ್ಲಿ. ಆಗಷ್ಟೇ ಬಿಡುಗಡೆಯಾಗಿದ್ದ ಪುಸ್ತಕವನ್ನು ಸಮಯವಿದ್ದರೆ ಓದುವ ದುರಾಸೆಯಿಂದ ಪ್ರವಾಸಕ್ಕೂ ಹೊತ್ತುಕೊಂಡು ಹೋಗಿದ್ದೆ. ಸಂಜೆ 5 ಗಂಟೆಗೆ ಕತ್ತಲಾಗಿತ್ತು. ವಿಪರೀತ ಚಳಿ, ಗದಗುಟ್ಟಿಸುವ ಗಾಳಿ. ಎಲ್ಲರೂ ಇನ್‌ಡೋರ್ ಥೀಮ್ ಪಾರ್ಕ್ ನೋಡುತ್ತಿದ್ದಾಗ ಅಲ್ಲಿಂದ ಮೆಲ್ಲಗೆ ಕಳಚಿಕೊಂಡು ಒಬ್ಬಳೇ ರೂಮಿಗೆ ವಾಪಸ್ ಬಂದು ಓದಿದ ಪುಸ್ತಕವಿದು. ಗಂಡ ಮಕ್ಕಳು ವಾಪಸ್ ಬರುವಷ್ಟರಲ್ಲಿ ಕಣ್ಣು ಕೆಂಡ, ಮನಸ್ಸು ಭಾರ…ದಟ್ಟ ವಿಷಾದ. ಮೂವರನ್ನೂ ತಬ್ಬಿಕೊಂಡೇ ಬೆಳಗು ಮಾಡಿದ್ದೆ. ಮರುದಿನ ಬಟು ಕೇವ್ಸ್ ನೋಡಲು ಮೇಲೆ ಹೋಗದೆ ಕೆಳಗೆ ದೇವಸ್ಥಾನದ ಕಟ್ಟೆ ಮೇಲೆ ಕುಳಿತು ಮತ್ತೆ ಮತ್ತೆ ಓದಿ ಕಣ್ಣೀರಿಟ್ಟೆ. ಹೌದು…. ಈ ಉತ್ತರಾಯಣ ಈಗ ಕೈಗೆತ್ತಿಕೊಂಡರೂ ನನ್ನನ್ನು ಕರಗಿಸುತ್ತದೆ, ಕಣ್ಣೀರಿಡುವಂತೆ ಮಾಡುತ್ತದೆ.

ರಾಮಗಿರಿಯೆಂಬ ಊರಿನ ರಾಮಣ್ಣನವರ ಮಗಳು ರಾಜಲಕ್ಷ್ಮಿ ಈ ಕಾವ್ಯದ ಕೇಂದ್ರಬಿಂದು. ಕವಿಯ ಜೊತೆ ತುಂಬು ಸಂಸಾರ ನಡೆಸಿದವರು ಯಕೃತ್ತಿನ ವಿಕೃತಿಗೆ ಬಲಿಯಾಗಿದ್ದಾರೆ. ಅಗಲಿದ ಪತ್ನಿ ಕುರಿತ ಅಪರೂಪದ ಕಾವ್ಯ ಇದು. ಹೆಂಡತಿ ಸತ್ತ ಮೇಲೆ ಯಾರಾದರೂ ಬರೆದಿದ್ದಾರಾ? ನನ್ನ ಓದಿಗೆ ಸಿಕ್ಕಿಲ್ಲ. ಮಗ ಸತ್ತಾಗ ಬೀಚಿ ಬರೆದಿದ್ದರು. ನಂತರ ಅವರೇ ಅದನ್ನು ಓದಬೇಡಿ ಎಂದರು. ಪ್ರೀತಿಪಾತ್ರರನ್ನು ಕಳೆದುಕೊಂಡ ಕ್ಷಣದಲ್ಲಿ ಭಾವುಕತೆಗೆ ಪಕ್ಕಾಗಿರುತ್ತೇವೆ, ಏನೇನೋ ಸಂಕಟ..ಅನಿಸಿದ್ದನ್ನು ಕಾರಿರುತ್ತೇವೆ. ನಂತರ ಕಾರಿದ ಬಗ್ಗೆ ಒದ್ದಾಡುತ್ತೇವೆ.. ಹಾಳು ಭಾವುಕತೆ ಎಂದು ಶಪಿಸಿಕೊಳ್ಳುತ್ತೇವೆ. ಭಾವುಕರಾಗಿಯೂ ಮೈ ಮರೆಯದ ಪ್ರಜ್ಞೆ ಉತ್ತರಾಯಣದಲ್ಲಿದೆ.

ಹತ್ತಿರದವರ ಸಾವು ಎಂಥವರನ್ನೂ ಕಂಗಾಲಾಗಿಸಿಬಿಡುತ್ತದೆ. ಕವಿಯ ವಿಷಯವನ್ನೇ ತೆಗೆದುಕೊಂಡರೆ ಅವರು ತಾಯಿ, ಅಜ್ಜಿ ಇಬ್ಬರೂ ಇದ್ದಾಗಲೇ ಪತ್ನಿಯನ್ನು ಕಳೆದುಕೊಂಡವರು. ನಾವು ನೋಡಿದ ಮೊದಲ ಸಾವು ನಮ್ಮನ್ನು ಬೆಚ್ಚಿಬೀಳಿಸುತ್ತದೆ, ಇನ್ನಿಲ್ಲದಂತೆ ಕಾಡುತ್ತದೆ. ಅದೂ ಬದುಕಿನುದ್ದಕ್ಕೂ ಅಭೇದ್ಯ ಎನ್ನುವಂತೆ ಅಂಟಿಕೊಂಡಿದ್ದ ಆಪ್ತಜೀವದ್ದಾದರೆ ಕಳೆದು ಕೊಂಡವರು ಎಚ್ಚೆಸ್ವಿಯಂತಹಾ ಕವಿಯಾಗಿದ್ದರೆ ಉತ್ತರಾಯಣದಂತಹಾ ಅದ್ಭುತ ಕಾವ್ಯ ಹುಟ್ಟುತ್ತದೆ.

ಅಪರಿಚಿತ ಜೀವಗಳೆರಡನ್ನು ಒಂದೇ ಸೂರಿನಡಿ ಆಜೀವ ಪರ್ಯಂತ ಒಟ್ಟು ಮಾಡುವ ಈ ಮದುವೆ ಎಂಬ ಅದ್ಭುತ ಯಾವತ್ತೂ ನನಗೆ ಕುತೂಹಲದ ವಿಷಯ. ಭೌತಿಕ, ದೈಹಿಕ ಆಕರ್ಷಣೆಗಳ ರೋಮಾಂಚನ ಕಳೆದುಕೊಂಡ ನಂತರ ಅವರ ಸಹಬಾಳ್ವೆಯ ಸ್ವರೂಪ ನನಗೆಂದಿಗೂ ಅಧ್ಯಯನ ಯೋಗ್ಯವೆನಿಸುವ ಅಚ್ಚರಿ. ಪರಂಪರೆ ನೀಡಿದ ಪರಾವಲಂಬನೆ ಹೆಣ್ಣಿಗಿದ್ದರೆ ಸ್ವಾವಲಂಬಿಯೆಂಬ ಪರಂಪರಾನುಗತ ಅಭಿಮಾನ ಅಥವಾ ಅಹಂಕಾರ ಗಂಡಿಗಿರುತ್ತದೆ. ಇವೆರಡೂ ಇವರಿಬ್ಬರ ಸ್ವಯಾರ್ಜಿತ ದುಡಿಮೆಯಲ್ಲ, ಪರಂಪರೆ ನೀಡಿದ ಸೊತ್ತು. ಅವನು ನನ್ನನ್ನು ಸಾಕುತ್ತಿದ್ದಾನೆ ಎಂಬ ನಂಬಿಕೆ, ಇವಳನ್ನು ನಾನು ಕಾಪಾಡುತ್ತೇನೆ ಎಂಬ ಇವನ ವಿಶ್ವಾಸ ಎರಡೂ ಭಾವಗಳೂ ಸಮಾನಾಂತರವಾಗಿ ಅಥವಾ ಈ ಮದುವೆ ಎಂಬ ಪದವೇ ಬಹುತೇಕರ ದಾಂಪತ್ಯವನ್ನು ಪೊರೆಯುತ್ತಿರುತ್ತದೆ. ಬರಬರುತ್ತಾ ಈ ಸ್ವಾವಲಂಬೀ ಭಾವನೆಯ ಅಡಿಯಲ್ಲೇ ಗಂಡು ಪರಾವಲಂಬಿಯಾಗುತ್ತಾ ಹೋಗುವ….ಪರಾವಲಂಬಿತ ಮನಸ್ಥಿತಿಯಲ್ಲೇ ಹೆಣ್ಣು ಸ್ವಾವಲಂಬೀ ಬದುಕು ಸಾಗಿಸುವ ಪ್ರಕ್ರಿಯೆ ಅವರಿಗರಿವಿಲ್ಲದೇ ಸಂಭವಿಸುತ್ತಿರುತ್ತದೆ. ಅವರಿಬ್ಬರಲ್ಲಿ ಯಾರೇ ಮತ್ತೊಬ್ಬರನ್ನು ಅಗಲಿದರೂ ಹೈರಾಣಾಗುತ್ತಾರಾದರೂ ಹೆಣ್ಣು ತನ್ನ ಅವಲಂಬಿತ .ಮನೋಭಾವದ ಅಡಿಯಲ್ಲಿ ಹೇಗೋ ಸುಧಾರಿಸಿಕೊಳ್ಳುತ್ತಾಳೆ. ಗಂಡು ಮಾತ್ರ ಈ ಸ್ವಾವಲಂಬೀ ಭಾವದ ಹಿನ್ನಲೆಯಲ್ಲಿ ಹೊಂದಿಕೊಳ್ಳಲಾರದೆ ಚಡಪಡಿಸುತ್ತಿರುತ್ತಾನೆ. ‘ ಒಂದು ಲೋಟ ಕಾಫೀಗೂ ಕಷ್ಟ, ಅವಳಿದ್ದಾಗ ಹೀಗಿರಲಿಲ್ಲ.’ ಎಂದು ನಿಟ್ಟುಸಿರು ಬಿಡುವ ಹಿರಿಯ ಒಂಟಿ ಜೀವಗಳನ್ನು ನೋಡಿದ್ದೇನಾದರೂ ಅದು ಬರಿಯ ಕಾಫಿ ತಿಂಡಿಯ ಪ್ರಶ್ನೆ ಎಂದು ನನಗನ್ನಿಸುವುದಿಲ್ಲ. ತನ್ನ ಪರಾವಲಂಬಿತನದ ಅರಿವು ಮೂಡಿಸಿದ ಕೊರಗು ಅನ್ನಿಸುತ್ತದೆ.

ಉತ್ತರಾಯಣದ ಕವಿ ಶ್ರೀ ಸಂಸಾರಿ. ಆತನ ಸಂಸಾರ ತುಂಬು ಸಂಸಾರ. ರಾಮನೊಬ್ಬನೇ ಎಂದೂ ಬಾರನು ಮಣೆಗೆ ಎನ್ನುವ ಮೂಲಕ ರಾಮನ ಕುಟುಂಬ ಪ್ರೀತಿಯನ್ನು ಎತ್ತಿಹಿಡಿಯುತ್ತಾರೆ. ಅದಕ್ಕೆ ಸಾಕ್ಷಿ ಒಂದು ಗ್ರೂಪ್ ಫೋಟೋ ಸೆಶನ್. ಅವನನ್ನು ಸುತ್ತುವರಿದಿರುವವರ ಸಂಖ್ಯೆ ನೋಡಿ. ರಾಮ ಸೀತೆಯೆಂಬ ಪತಿ ಪತ್ನಿಯ ಅತ್ಯಾಪ್ತ ವರ್ತುಲ, ಅದರ ಸುತ್ತ ಅಣ್ಣತಮ್ಮಂದಿರು ಅವರ ಪತ್ನಿಯರ ಸಂಬಂಧದ ವರ್ತುಲ, ಆದ್ರ ಸುತ್ತ ಕಷ್ಟಕಾಲದಲ್ಲಿ ಹೆಗಲಿತ್ತ ಗೆಳೆಯರ ವರ್ತುಲ, ಸೇವಕರ ವರ್ತುಲ, ಕೊನೆಗೆ ಅವನ ಕರೆಗೇ ಕಾಯುತ್ತಿದ್ದು ನೆನೆದೊಡನೆ ಪ್ರತ್ಯಕ್ಷವಾಗುವ ಪುಟ್ಟ ಅಳಿಲು ಬಿಲ್ಲಿನ ಬದಲು ಅವನ ಹೆಗಲ ಮೇಲೆ. ಯಾರೊಬ್ಬರನ್ನೂ ಯಾರಿಗಾಗಿಯೂ ಕಡೆಗಣಿಸದ ವ್ಯಕ್ತಿತ್ವ ರಾಮನದ್ದು. ಹಾಗಾದರೆ ಸೀತೆ ತೊರೆದ ನಂತರಒಂದಾದರೂ ಗ್ರೂಪ್ ಫೋಟೋ ಬಂದಿದ್ದುಂಟೆ ರಾಮನದು? ಆ ಕೇಂದ್ರ ವರ್ತುಲವಿಲ್ಲದಿದ್ದರೆ ಈ ಎಲ್ಲವೂ ಜಾಳುಜಾಳೆ?ಶ್ರೀಸಂಸಾರಿಯ ರಾಮ ಕುಟುಂಬವ್ಯವಸ್ಥೆಯ ಪ್ರತಿನಿಧಿಯಾದರೆ ಶಿವರಾತ್ರಿ ಪದ್ಯದ ಶಿವ ಅಪ್ಪಟ ಪ್ರೇಮಿ. ನಮ್ಮ ಹಗಲು ರಾತ್ರಿಯ ಕಲ್ಪನೆಯನ್ನೇ ಒದ್ದು ಹಾರಿಸುತ್ತಾ ಶಿವೇ ಇದ್ದ ಕ್ಷಣವೇ ಅವನಿಗೆ ರಾತ್ರಿ ಎನ್ನುತ್ತದೆ ಈ ಪದ್ಯ. ಈ ಶಿವನ ರಾತ್ರಿಯೇ ಪಾರ್ವತಿ. ಚಂದ್ರದಂಡೆಯ ಮುಡಿದು, ನಕ್ಷತ್ರ ನೆಕ್‌ಲೇಸ್ ಧರಿಸಿದ ಕಾಳಿ ಹೆಣ್ಣಾದ ನನ್ನಲ್ಲಿ ಹೊಟ್ಟೆಕಿಚ್ಚು ಮೂಡಿಸುತ್ತಾಳೆ.
“ಚಂದ್ರ ಬೋಗುಣಿ ತುಂಬಾ ತುಳುಕಾಡುತಿರೆ ಇರುಳು,
ತಿರುಪೆ ಮುಗಿಸಿದ ಜೋಗಿ ಧವಳಗಿರಿ ಬಾಗಿಲಲಿ
ನಿಂತು ಮೆಲ್ದನಿಯಲ್ಲಿ ಉಸುರಿದನು:” ಶಂಕರೀ…
ತೆರೆಯೆ ಬಾಗಿಲು ಬೇಗ ಆಲೋಲ ನೇತ್ರೆಯೇ,
ನನ್ನಧರ ಪಾತ್ರೆಯೇ, ಬಿಲ್ವವನಧಾತ್ರಿಯೆ,
ಉರಿವ ಹಗಲಿಗೆ ತಂಪನೆರೆವ ಶಿವರಾತ್ರಿಯೇ”
ಮಾತಿನಲ್ಲೇ ಎಂತಹ ಶೃಂಗಾರ!! ಕುಟುಂಬ ವ್ಯವಸ್ಥೆಯಲ್ಲಿ ಅಳಿಲನ್ನೂ ಮರೆಯದ ರಾಮ, ಏಕಾಂತದಲ್ಲಿ ಶಿವೆಯನ್ನು ರಮಿಸುತ್ತಾ ಶೃಂಗಾರಕ್ಕೆ ಕರೆವ ಶಿವ ಒಬ್ಬ ಪರಿಪೂರ್ಣ ಗಂಡಿನ ಲಕ್ಷಣಗಳನ್ನು ತೋರುತ್ತಾರೆ. ಕವಿತೆ ಕವಿಯ ಮನೋಭಾವವನ್ನಲ್ಲವೇ ಸೂಚಿಸುವುದು?

ಇಂತಹ ಕವಿಯ ಜೀವನದಲ್ಲಿ ಬಿರುಗಾಳಿ ಬೀಸಿದೆ. ಆ ಮನೆಯಲ್ಲೀಗ ಗ್ರೂಪ್ ಫೋಟೋ ಸಡಗರವಿಲ್ಲ… ಬಾಗಿಲು ತೆರೆವ ಶೀವೆಯಿಲ್ಲ. ಅಲ್ಲಿರುವುದು ಬತ್ತಿ ಸುಟ್ಟು ಎಣ್ಣೆ …ಉದ್ವಿಗ್ನದೀಪ. ಅದೀಗ ನಿಷ್ಪಂದ ಶಾಂತ. ಅಲ್ಲೀಗ ನಡೆಯುತ್ತಿರುವುದು ನಿರಂತರ ನೆನಪಿನ ನಾಟಕ. ” ಮುಗಿಲಿಲ್ಲದೆ ಮಳೆ ಸುರಿಯುತ್ತಿದೆ…ಗಾಳಿಯಿಲ್ಲದೆ ಸೆರಗು ಹಾರುತ್ತಿದೆ… ಚಂದ್ರನಿಲ್ಲದ ಬೆಳದಿಂಗಳಿನಲ್ಲಿ ನಗುತ್ತಿದ್ದಾಳೆ ನನ್ನಾಕೆ – ಯಾವ ಗುರಿಯೂ ಇಲ್ಲದ ಕಟ್ಟಾ ಖಾಸಗಿ ನಗೆ” ಸಾವಿನ ಮನೆಯ ಸಶಕ್ತ ಚಿತ್ರಣವನ್ನು ಕಟ್ಟಿಕೊಡುವ ಕವಿಯನ್ನು ಕಾಡುವ ಅವಳ ಖಾಸಗೀ ನಗೆ ಓದುಗರನ್ನೂ ಕಾಡದೇ ಬಿಡುವುದಿಲ್ಲ. ಗಂಡ ಹೆಂಡತಿಯ ಮಧ್ಯೆ ಉಳಿವ ರಹಸ್ಯವಾದರೂ ಏನು? ಎಲ್ಲ ಎಲ್ಲವನ್ನೂ ತೆರೆದಿಟ್ಟು…ಬಿಚ್ಚಿಟ್ಟು…ಬಚ್ಚಿಟ್ಟಿದ್ದನ್ನು ಪರಸ್ಪರ ದೋಚಿಕೊಂಡ ನಂತರವೂ ಅವಳಲ್ಲಿನ್ನೂ ಉಳಿದಿರಬಹುದಾದ ಅವಳದ್ದೇ ಆದ ಕವಿಗೂ ಅಪರಿಚಿತವಾದ ಆ ಖಾಸಗಿ ನಗೆಯ ವೈಶಿಷ್ಟ್ಯ ನಮ್ಮನ್ನೂ ಕಾಡುತ್ತದೆ. ಏನಕ್ಕೆಲ್ಲ ನಗುತ್ತೇವೆ ….ಯಾರ್ಯಾರನ್ನೋ ಮೆಚ್ಚಿಸಲಿಕ್ಕಾಗಿ,. ಯಾರಿಂದಲೋ ಆಗಬೇಕಾಗಿರುವ ಕೆಲಸಕ್ಕಾಗಿ.. ಇಲ್ಲಾಕೆಗೆ ಯಾರನ್ನೂ ಮೆಚ್ಚಿಸುವ ಯಾರಿಗೋಸ್ಕರವೋ ನಗುವ ದರ್ದಿಲ್ಲ. ಅವಳಿಂದ, ಅವಳಿಗಾಗಿ, ಅವಳಿಗೋಸ್ಕರವೇ ನಗುತ್ತಿರುವ ನಗೆಯನ್ನು ಅರ್ಥೈಸಿಕೊಳ್ಳಲಾಗದೆ ಹಿಡಿಯಲಾಗದೆ ಅಸಹಾಯಕತೆಯಿಂದ ಕವಿ ಕುಸಿಯುತ್ತಾನೆ.

ಬಾ ಬಾ ಕಪ್ಪು ಹಕ್ಕಿಯೇ… ನಿನಗೆ ಯಾವತ್ತೂ ಹೀಗೆ
ಅನ್ನವಿಟ್ಟು ಕಾಯ್ದಿರಲಿಲ್ಲ. ಆತಂಕದಿಂದ ಕುದಿಯುತ್ತಿದ್ದಾರೆ
ನೆರೆದ ಹತ್ತೂ ಸಮಸ್ತರು.
ಒಲ್ಲೆನೆನಬೇಡ….ಹೀಗೆ ನಿಷ್ಕರುಣೆಯಿಂದ ತಲೆದೊನೆಯಬೇಡ
ಕುಪ್ಪಳಿಸಿ ಕುಪ್ಪಳಿಸಿ ಹತ್ತಿರ ಬಂದು ಮತ್ತೆ ಮತ್ತೆ ಹಿಂದಕ್ಕೆ ಜಿಗಿಯಬೇಡ.
ಸಾಮಾನ್ಯವಾಗಿ ಯಾರೂ ಕಾಗೆಗೆ ಅನ್ನವಿಟ್ಟು ಕಾಯುವುದಿಲ್ಲ…ಅದರ ಊಟದ ಬಗ್ಗೆ ಯೋಚಿಸುವುದಿಲ್ಲ. ಆದರೆ ಅವರೀಗ ಕಾಯುತ್ತಿರುವುದು ವಾಯಸದ ರೂಪದಲ್ಲಿ ಬರಬೇಕಾಗಿರುವ ತಮ್ಮ ಪತ್ನಿಗಾಗಿ. ಸಂಗಾತಿಯನ್ನು ಈ ರೂಪದಲ್ಲಿ ಕಲ್ಪಿಸಿಕೊಳ್ಳುವುದು ಎಷ್ಟು ಭಯಾನಕ. ಬರೀ ಅಷ್ಟಕ್ಕಾಗಿ ಬರೆದಿದ್ದಾರಾ ಈ ಸಾಲುಗಳನ್ನು? ‘ ಯಾವತ್ತೂ ನಿನಗೆ ಹೀಗೆ ಅನ್ನವಿಟ್ಟು ಕಾಯ್ದಿರಲಿಲ್ಲ’. ಯಾರಿಗೆ ಹೇಳುತ್ತಿದ್ದಾರೆ ಈ ಮಾತು ಎನ್ನಿಸಿ ಬೆಚ್ಚಿಬೀಳುವಂತಾಗುತ್ತದೆ. ವಾಯಸಕ್ಕೆ ಹೇಳಿದ್ದಾ ಅಥವಾ ತನ್ನನ್ನು ಬಿಟ್ಟು ಎಂದಿಗೂ ಮೊದಲು ಉಣ್ಣದ ಹೆಂಡತಿಗೆ ಹೇಳಿದ್ದಾ ? ಹತ್ತೂ ಸಮಸ್ತರಿಗೆ ಊಟ ಬಡಿಸಿ ಅವರೆಲ್ಲರೂ ಉಂಡ ನಂತರ ಒಂದಿಷ್ಟು ಅನ್ನ ಹೊಟ್ಟೆಗಿಳಿಸಿ ಉಳಿದ ಕೆಲಸ ಮಾಡುತ್ತಾ ಕಾಲಕಳೆದ ಬಗ್ಗೆ ಕವಿ ಹೇಳುತ್ತಿದ್ದಾರಾ? ಅವಳಿಗೆಂದೂ ಅನ್ನ ಬಡಿಸದ ತಮ್ಮ ಬಗ್ಗೆ ಮಾತನಾಡುತ್ತಿದ್ದಾರಾ? ಇಂದು ಅವಳಿಗೆ ಅವರೆಲ್ಲರಿಗಿಂತ ಮೊದಲು ಉಣ್ಣುವ ಭಾಗ್ಯ ಕಾಕ ರೂಪದಲ್ಲಿ. ಎಂಥಾ ವ್ಯಂಗ್ಯ.!! ನೆರೆದ ಹತ್ತೂ ಸಮಸ್ತರು ಕಾಯುತ್ತಿರುವುದು ನಂತರ ಆಗಲಿರುವ ಅವರ ಊಟಕ್ಕಾ? ಒಂದು ವೇಳೆ ಇವರ ಊಟದ ನಂತರ ಈ ಕ್ರಿಯೆ ನಡೆದಿದ್ದರೆ ಇಷ್ಟು ಆತಂಕದಿಂದ ಕಾಯುತ್ತಿದ್ದಾರಾ? ಬದುಕಿರುವವರೆಗೂ ಒಂದು ದಿನ ಇವರಿಗೆ ತಡ ಮಾಡದೆ ಬಂದು ಬಡಿಸುತ್ತಿದ್ದಳು ಇಂದೇಕೆ ಬರುತ್ತಿಲ್ಲ. ತಾನೆಂದೋ ಹೇಳಿದ ಸಣ್ಣ ಪುಟ್ಟ ಸುಳ್ಳುಗಳ ತಪ್ಪುಗಳ ನೆನಪು…. ” ಕ್ಷಮಿಸಿ ಸರ್ವಾಪರಾಧವನ್ನು ಮುಟ್ಟುಮಿಟ್ಟಿಗೆ ಅನ್ನ.” ಈ ಭಾಗ ಎಷ್ಟು ಅದ್ಭುತವಾಗಿ ಮೂಡಿಬಂದಿದೆ. ಸ್ವಲ್ಪ ವಾಚ್ಯವಾಗಿದ್ದರೂ ಕವನದ ದಿಕ್ಕು ತಪ್ಪುತ್ತಿತ್ತು. ಕವಿಯ ಅದ್ಭುತ ಸಂಯಮ ಹಾಗಾಗದಂತೆ ಕಾಯ್ದಿದೆ. ಹೆಂಡತಿ ಬಿಟ್ಟು ತೌರಿಗೆ ಹೋಗುವಾಗ ಹಾಗೇ ಹೋದಳೇ? ಫ್ಲಾಸ್ಕು, ಬಿಸಿ ಅಡುಗೆ..ಕಾಸಿದ ಹಾಲು..ಹಾಳು ಕಳಕಳಿ ಅಕ್ಕರಾಸ್ತೆ ಕವನದ ಸಾಲು. ಇಂತಹ ಸಣ್ಣಪುಟ್ಟ ವಿವರಗಳೇ ದಾಂಪತ್ಯದ ಸಶಕ್ತ ಚಿತ್ರಣವನ್ನು ಕಟ್ಟಿಕೊಟ್ಟಿರುವುದು. ಉದಾಹರಣೆಗೆ ನೋಡಿ…..
” ಪ್ಲೀಸ್ ಕಣ್ಮುಚ್ಚಿ ನೀವು. ಬಟ್ಟೆ ಬಿಚ್ಚಲಿಕ್ಕಿದೆ.
ಕಿಸಿದ ಲಂಗದ ಮೇಲೆ ಹೊಚ್ಚಹೊಸ ಸೀರೆ.
ಹೊಂಬಣ್ಣ ಚುಕ್ಕಿ ಮೈ ತುಂಬಾ ಗರಿ ಗರಿ ಬೇರೆ
ಮೊದಲಿಂದಲೂ ಅಷ್ಟೇ ಸುಳಿಗೆ ಬೈತಲೆ ಓರೆ.

ಬೆನ್ನ ಹಿಂದಿನ ಹುಕ್ಕು ಹಾಕಿಬಿಡಿ ಮತ್ತೆ. ಬಿಚ್ಚುವುದು
ಸುಲಭ- ಹಾಕುವುದಲ್ಲ ನೆನಪಿಡಿ. ಆಗೋ ಆಗೋ
ಅಲ್ಲಿಗೇಕೋಡುತ್ತೆ ಪೋಲಿ ಕೈ?
ಕಡಿವಾಣವೇ ಇಲ್ಲ ಕುದುರೆಗೆ. ಈಗೀಗ.
ಓದುತ್ತಿದ್ದಂತೆಯೇ ಓದುಗನ ತುಟಿಗಳಲ್ಲಿ ನಗೆ ಅರಳುತ್ತದೆ. ತನ್ನದೇ ಕಥೆಯೇನೋ ಎಂಬಷ್ಟು ಆಪ್ತವಾಗುತ್ತದೆ. ಹಾಗಂದುಕೊಂಡ ಮರುಕ್ಷಣವೇ ಈ ಕಾವ್ಯದಲ್ಲಿ ಸಂಭವಿಸಿರುವ ದುರಂತ ನೆನಪಾಗುತ್ತದೆ. ಇದೂ ನಮ್ಮಲ್ಲೂ ಸಂಭವಿಸಬಹುದೆಂಬ ಭಾವ ಹಟಾತ್ತನೆ ಆವರಿಸಿ ಬೆಚ್ಚಿಬೀಳಿಸುತ್ತದೆ. ಕವಿತೆ ಹತ್ತಿರವಾಗುವುದು ಆ ಕ್ಷಣದಲ್ಲೇ. ಕವಿಯ ಸಂಕಟ ನಮ್ಮದಾಗುವುದೂ ಆ ಕ್ಷಣದಲ್ಲೇ. ಬಣ್ಣದ ಬೀಜ ಬಿತ್ತುವ ಮನದನ್ನೆ ಬಿತ್ತಿದ್ದು ಮಂಚದ ಗುದುಮುರುಗಿಯಲ್ಲೊಡೆದ ಬಳೆ ಚೂರುಗಳೆಂಬ ಸುಖದ ಉಲುಹುಗಳನ್ನೇ? ಒಂದು ಕಾಲದಲ್ಲಿ ಉನ್ಮಾದ ಹುಟ್ಟಿಸುತ್ತಿದ್ದ, ಕಚಗುಳಿ ಇಡುತ್ತಿದ್ದ ಸಂಕೇತಗಳು ನೆನಪುಗಳು ಇಂದು ನೋವಿನ ನಿಟ್ಟುಸಿರಾಗುತ್ತಿದೆ, ಕಣ್ಣೀರಿನ ಕರ ಕೇಳುತ್ತಿವೆ. ಭಾವುಕರಾಗಿಯೂ ಎಚ್ಚರ ತಪ್ಪದೆ ವಿವರ ಕಟ್ಟಿಕೊಡುತ್ತಿರುವ ಕವಿ, ಓದುತ್ತಾ ಮತ್ತೆ ಮತ್ತೆ ಕಣ್ಣೀರಾಗುವ ಉತ್ತರಾಯಣದ ಉತ್ತರ ಹುಡುಕುವ ಓದುಗ……….

ಮದುವೆಯಾದಾಗ ದಕ್ಕಿದ್ದ ಬಿಗಿದ ತುಂಬು ಮೈ ತಿರುಗುಣಿ ಹಲ್ಲು ಹೀರಿ ಉಗಿದ ಕಬ್ಬಾಗಿದ್ದಾಗಲೂ ಬತ್ತಿದ ತೊರೆಯನ್ನೊತ್ಟಿಕೊಳ್ಳುವ, ಜಗ್ಗುವ ಬೊಜ್ಜು.. ಆರೆನೆರೆತ ಕುರುಚಲು ಮುಡಿಗಳ ನೇವರಿಸುವ ಕವಿ ನಮಗೆ ಅತ್ಯಾಪ್ತರಾಗುತ್ತಾರೆ. ರೋಗದ ಧಾಳಿಗೆ ಕಂಗೆಟ್ಟ ದೇಹವನ್ನು ಸೇವಾಯೋಗಕ್ಕೆ ಈಗಷ್ಟೇ ನನ್ನಿಷ್ಟ ದೈವ ತೆರೆದ ಸೇವಾಕ್ಷೇತ್ರ ಎಂದು ಗುರುತಿಸುತ್ತಾರೆ. ಅವಳ ನಿರ್ಗಮನದ ನಂತರ ಪುನರ್ಜನ್ಮದ ಸಾಧ್ಯತೆಗಳ ಪತ್ತೇದಾರಿಗೆ ಇಳಿಯುತ್ತಾರೆ. ಕೊನೆಯಿಲ್ಲದ ಪತ್ತೇದಾರಿ. ದಾಂಪತ್ಯದ ಉತ್ತುಂಗವನ್ನು ವರ್ಣಿಸುವಾಗ ಅವರು ಕೊಡುವ ಅದ್ಭುತ ಉಪಮೆ ‘ ದೇಹಗಳೀಗ ಗಾಂಧರ್ವರೀಸಾಡಿ ಹೋದ ಕೊಳಗಳ ಹಾಗೆ’.
ಮಳ್ಳಿ ಮೀನಿನ ಸುತ್ತ ಒತ್ತು ನೀರಿನ ಕವಚ
ಮಣ್ಣ ಗೋಳಕ್ಕೆ ಆಕಾಶ ಕವಚ!
ನಕ್ಷತ್ರದುಂಗುರಕ್ಕೆ ಇರುಳ ಶಾಪದ ಕವಚ;
ಲಿಂಗಕ್ಕಾಲಿಂಗನದ ನಿರ್ವಯಲ ಕವಚ!
ಛಂದಸ್ಸಿನಲ್ಲಿ ಬಂಧಿಸಿಟ್ಟರೆ ಮೃತ್ಯೂಭಯದಿಂದ ತಪ್ಪಿಸಿಕೊಳ್ಳಬಹುದೆಂದು ದೇವತೆಗಳೂ ಛಂದಸ್ಸಿನ ಒಳಗೆ ಪ್ರವೇಶಿಸುತ್ತಾರಂತೆ. ಈ ಕವಿತೆಯೂ ಛಂದಸ್ಸಿನೊಂದಿಗೆ ಮುಕ್ತಾಯವಾಗುತ್ತದೆ.
ಉತ್ತರಾಯಣ ಮುಕ್ತಾಯವಾದರೂ ನನ್ನ ದುಗುಡ, ಸಂಕಟ ಕಡಿಮೆಯಾಗಿರಲಿಲ್ಲ. ಸಾಮಾನ್ಯವಾಗಿ ಎಲ್ಲಿ ಹೋದರೂ ನನ್ನದೇ ಲಹರಿಯಲ್ಲಿ ತೇಲುತ್ತಿದ್ದ ನನ್ನನ್ನು ಇಡೀ ಪ್ರವಾಸದುದ್ದಕ್ಕೂ ಕುಟುಂಬದೊಡನೆ ಮಾನಸಿಕವಾಗಿಯೂ ಇರುವಂತೆ ಮಾಡಿದ್ದು ಉತ್ತರಾಯಣ. ಸಂಕಟ ಕಡಿಮೆಯಾದದ್ದು ವೈದೇಹಿ ಬಂದಮೇಲೆಯೇ.
ಉತ್ತರಾಯಣದ ಜರ್ಜರಿತ ದೇಹದ ನಾಯಕಿಯನ್ನು ಇಲ್ಲಿ ಪ್ರತಿಮೆಯನ್ನಾಗಿಸಿದ್ದಾರೆ

“ಬಿಚ್ಚು ಒಂದೊಂದಾಗಿ ಉಟ್ಟಿದ್ದ ತೊಟ್ಟಿದ್ದ ಎಷ್ಟೋ ಕಾಲದಿಂದಿಟ್ಟಿದ್ದ.
ಕಳಚಿ ಜೀವ ಹಿಂಡುವ ನೋವಿನಿಕ್ಕಟ್ಟ.
ಕಣ್ಣ ಹಳದಿಯ ಬಣ್ಣ, ಪರೆಪರೆ ಸುಕ್ಕ, ಕೆನ್ನೆಯ ಜೋಲ, ಬೆಳಕು
ಬತ್ತಿದ ಬತ್ತಿಯ ಗಿಮಿಟು ಕರುಕ.”
ಅವಳ ಅಗಲಿಕೆಯ ನೋವಿನಿಕ್ಕಟ್ಟನ್ನು ಬದಿಗೆಸೆವ ಕವಿ ಮತ್ತೆ ಅವಳ ಚಿತ್ರವನ್ನು ಅಳಿಸಿ ಬರೆಯುವುದು ಬೆಳಗಿನ ರತ್ನ ಕಿರಣಗಳಿಂದ, ಬಳಿಯುವ ಬಣ್ಣ ವಾದರೋ ನಟ್ಟಿರುಳ ಬೆಳದಿಂಗಳ ಬಿಳುಪು….ಆವಾಹಿಸುವುದು ಉಗುರು ಬೆಚ್ಚನೆಯ ಬಾಣಂತಿಯ ಮೈ ಬಿಸುಪು!!.

ಕೃತಿಯಾಗು ನನ್ನ ಮುದ್ದಿನ ಹೆಣ್ಣೆ, ದಟ್ಟ ರೆಪ್ಪೆಯ ಅನಿಮಿಷ ಕಣ್ಣೆ,
ಕಣ್ಣಲ್ಲಿ ಕಣ್ಣಿಟ್ಟು ನೋಡು ನನ್ನೆ.
ಮುಡಿದ ಹೂ ಬಾಡದ, ಬಿಸಿ ಮೈ ಬೆವರದ, ಯಾವತ್ತೂ ಸ್ಖಲಿಸದ,
ನನ್ನ ಮೈಯಿರದ ಮನದನ್ನೆ.”
ಅವಳನ್ನು ಕೃತಿಯಾಗಿಸಿದ್ದಾರೆ…ಅವಳೀಗ ಮೂಡಿದ ಹೂ ಬಾಡದ, ಬಿಸಿ ಮೈ ಬೆವರದ, ಯಾವತ್ತೂ ಸ್ಖಲಿಸದ ಮೈಯಿರದ ಮನದನ್ನೆ. ಇವೆಲ್ಲವೂ ದೇವತೆಯ ಲಕ್ಷಣಗಳು. ಹೀಗೆ ಅವಳನ್ನು ಪ್ರತಿಮೆಯಾಗಿಸಿ ಹಸಿವು ನಿದ್ದೆ ನೀರಡಿಕೆಗಳಿಲ್ಲದ ಮನದನ್ನೆಯನ್ನು , ನಿಜಾರ್ಥದಲ್ಲಿ ವೈದೇಹಿಯನ್ನು ಸೃಷ್ಟಿಸುತ್ತಾರೆ. ಉತ್ತರಾಯಣದ ಶಾಂತಿರಸ್ತು ಇಲ್ಲಿ ಶುಭಮಸ್ತುವಾಗಿದೆ. ಅವರೇ ಹೇಳುವಂತೆ ಸೀತೆ ವೈದೇಹಿಯಾಗದೆ ಉಜ್ಜೀವನದ ಉಪಾಯವೇ ಇರಲಿಲ್ಲ.

ಮತ್ತಷ್ಟು ಸುದ್ದಿಗಳು

Latest News

ಜೈಲಿನ ಗೋಡೆ ಕುಸಿದು 22 ಕೈದಿಗಳಿಗೆ ಗಾಯ

newsics.com ಭೋಪಾಲ್(ಮಧ್ಯಪ್ರದೇಶ): ಭಾರೀ ಮಳೆ ಹಿನ್ನೆಲೆಯಲ್ಲಿ ಬೀಡ್ ಜಿಲ್ಲೆಯ ಕಾರಾಗೃಹದ ಗೋಡೆ ಕುಸಿದು 22 ಕೈದಿಗಳು ಗಂಭೀರ ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗೆ 5.10ರ ಸುಮಾರಿಗೆ ಈ ಘಟನೆ ನಡೆದಿದೆ....

ಗಾಳಿಯ ರಭಸಕ್ಕೆ ಕಾಲೇಜಿನ ಗೇಟ್ ಬಿದ್ದು ಬಾಲಕ ಸಾವು

newsics.com ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ. ಕಾಲೇಜಿನ ಮುಖ್ಯ ಗೇಟ್ ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಪಟ್ಟಣದ ಇಂದಿರಾನಗರ ನಿವಾಸಿ ಸುಫೀಯಾನ ರಾಜು ಮುಲ್ಲಾ ಮೃತಪಟ್ಟ ಬಾಲಕ. ಗೇಟ್ ಮುಂದೆ ರಾಜು ಮುಲ್ಲಾ...

ಏರ್ ಇಂಡಿಯಾ ಎಕ್ಸ್’ಪ್ರೆಸ್ ವಿಮಾನದ ಕಿಟಕಿಯಲ್ಲಿ ಬಿರುಕು: ತುರ್ತು ಭೂ ಸ್ಪರ್ಶ

newsics.com ತಿರುವನಂತಪುರಂ: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕಿಟಕಿಯಲ್ಲಿ ಬಿರುಕು ಪತ್ತೆಯಾದ ಹಿನ್ನೆಲೆಯಲ್ಲಿ ಶನಿವಾರ ತಿರುವನಂತಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸೌದಿ ಅರೇಬಿಯಗೆ ಹೊರಟಿದ್ದ ವಿಮಾನ ತುರ್ತು ಭೂ...
- Advertisement -
error: Content is protected !!