* ಸ್ಮಿತಾ ಅಮೃತರಾಜ್, ಸಂಪಾಜೆ
response@134.209.153.225
‘ಬೊಗಸೆ ತುಂಬಾ ಕನಸು’ ನಾನು ಇತ್ತೀಚೆಗೆ ಓದಿದ ಡಾ. ಪ್ರಭಾಕರ ಶಿಶಿಲರ ಆತ್ಮಕಥನ. ದ. ಕ. ಜಿಲ್ಲೆಯ ಸುಳ್ಯ ತಾಲೂಕಿನ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅರ್ಥ ಶಾಸ್ತ್ರ ಉಪನ್ಯಾಸಕರಾಗಿ , ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ Œನಿವೃತ್ತಿ ಹೊಂದಿದ ಡಾ.ಶಿಶಿಲರದ್ದು ಬಹುಮುಖ ವ್ಯಕ್ತಿತ್ವ. ಈಗಾಗಲೇ ಇನ್ನೂರ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಅವರದು. ಒಬ್ಬ ಸಾಮಾನ್ಯ ಮನುಷ್ಯನ ಜೀವಿತಾವಧಿಯಲ್ಲಿ ಇಷ್ಟೆಲ್ಲಾ ನಿರಂತರವಾಗಿ ಬರೆಯಲು ಸಾಧ್ಯವಾ? ಅಂತ ಅಚ್ಚರಿಪಟ್ಟಿದ್ದೆ. ಅವರ ಬೊಗಸೆ ತುಂಬಾ ಕನಸನ್ನು ಕೈಗೆತ್ತಿಕೊಂಡು ಓದುತ್ತಾ ಹೋದ ಹಾಗೆ ಅವರ ಅಸಮಾನ್ಯ ವ್ಯಕ್ತಿತ್ವದ ಅನಾವರಣಗೊಳ್ಳುತ್ತಾ ಹೋಗುತ್ತದೆ. ಇಚ್ಚಾಶಕ್ತಿ ಮತ್ತು ನಿರಂತರ ಪರಿಶ್ರಮ ಇದ್ದರೆ ಈ ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದಕ್ಕೆ ಅವರ ಜೀವನ ಚರಿತ್ರೆಯೇ ಉದಾಹರಣೆ.
ಶಾಲೆಗೆ ಹೋಗಲು ಅಡೆತಡೆಗಳುಂಟಾದಾಗ ಶಾಲೆ ಕಲಿಯಬೇಕೆಂಬ ಕನಸು ಹೊತ್ತ ಹುಡುಗ, ಅಳಿಕೆಯಲ್ಲಿ ಬಾಣಸಿಗನಾಗಿಯೇ ಜೀವ ತೇಯ ಬೇಕಾಗಿದ್ದ ಬಾಲಕ, ಉಜಿರೆಯ ಅಸಾಧ್ಯ ಪೆÇೀಕರಿ ಹುಡುಗ, ಬಾಲ್ಯಕಾಲದಲ್ಲಿ ಅಪಾರ ದೈವಭಕ್ತನಾಗಿ ಭಜನೆ ಪೂಜೆಗಳಲ್ಲಿ ವ್ಯಸ್ತನಾಗ ಬೇಕಿದ್ದ ಯುವಕ, ಬದುಕಿನಲ್ಲಿ ಬಂದೊದಗಿದ ಬಡತನದ ನಿಕಷಕ್ಕೆ ಒಡ್ಡಿಕೊಳ್ಳುತ್ತಲ್ಲೇ ಗಟ್ಟಿಯಾಗುತ್ತಲೇ, ಶಾಲೆ ಕಲಿತದ್ದು, ರ್ಯಾಂಕು ಪಡೆದದ್ದು, ಅರ್ಥಶಾಸ್ತ್ರದ ಉಪನ್ಯಾಸಕನಾದದ್ದು, ಮೂಡನಂಬಿಕೆಗಳ ವಿರುದ್ದ ಪ್ರತಿಭಟಿಸುತ್ತಾ ಜನ ಕೆಂಗಣ್ಣಿಗೆ ಗುರಿಯಾದದ್ದು, ತನ್ನ ಸುತ್ತಮುತ್ತಲಿನವರಿಗೂ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಸಫಲರಾದದ್ದು, ಬದುಕಿನ ಎಲ್ಲಾ ಜಟಿಲ ಸಂದರ್ಭಗಳಲ್ಲೂ ಸಮಚಿತ್ತತೆಯನ್ನು ಆವಾಹಿಸಿಕೊಂಡದ್ದು ಎಲ್ಲಾ ಅನೂಹ್ಯ ಅಚ್ಚರಿಯೇ.
ಒಬ್ಬ ವ್ಯಕ್ತಿಯ ಇಂತಹ ರೋಚಕ ಕಥಾನಕಗಳು ಕಾಲದ ನಡಿಗೆಯ ವೇಗದಲ್ಲಿ ಅಳಿಸಿ ಹೋಗುವುದೇ ಹೆಚ್ಚು. ಇಂತಹ ಹೊತ್ತಿನಲ್ಲಿ ಆತ್ಮಕತೆಗಳು ಒಂದು ದಾಖಲೆಯಾಗುತ್ತಾ ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಳ್ಳಬಹುದು. ಬಹುಷ;ಬದುಕಿನಲ್ಲಿ ನಮಗೆ ಎದುರಾಗುವ ಅನೇಕ ಸಂಘರ್ಷಗಳು ಹೇಗೆ ನಮ್ಮನ್ನು ಸಮಾಜಮುಖಿಯನ್ನಾಗಿಸಬಲ್ಲವು ಅನ್ನುವುದಕ್ಕೆ ಡಾ. ಶಿಶಿಲರ ವ್ಯಕ್ತಿತ್ವ ಸಾಕ್ಷಿ ಒದಗಿಸ ಬಲ್ಲವು. ಅಂತರ್ಧರ್ಮೀಯ ವಿವಾಹ, ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧಕ್ಕೆ ಒತ್ತು ನೀಡುವುದು, ಜೀವಪರ ನಿಲುವಿನ, ಅಪ್ಪಟ ಮನುಷ್ಯ ಪ್ರೀತಿಯ, ಶುದ್ಧ ಅಂತ;ಕರಣದ ಮಾನವೀಯ ಸಂವೇದನೆಗಳನ್ನು ನಾವಿಲ್ಲಿ ಗಮನಿಸಬಹುದು.
ತನಗೆ ದಕ್ಕಿದ್ದನ್ನು ಬೇರೊಂದು ಬಗೆಯಲ್ಲಿ ಸಮಾಜಕ್ಕೆ ಕೊಡುವುದು, ಹಳ್ಳಿಗಾಡಿನ ಮಕ್ಕಳಿಗೆ ಕಬ್ಬಿಣದ ಕಡಲೆಯಾದಂತಹ ಆಂಗ್ಲ ಬಾಷೆಯಲ್ಲಿರುವ ಅರ್ಥಶಾಸ್ತ್ರವನ್ನು ತಮ್ಮ ದಿನನಿತ್ಯದ ಬದುಕಿಗೆ ತೀರಾ ಹತ್ತಿರ ತಂದು ಕನ್ನಡೀಕರಣಗೊಳಿಸಿದ್ದು ಅವರ ವೃತ್ತಿ ಬದುಕಿನ ಮೈಲಿಗಲ್ಲು. ಇನ್ನು ಅನೇಕ ಸೃಜನಶೀಲ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆಯನ್ನು ಕೊಟ್ಟಿರುವುದು, ಅನೇಕ ತಮ್ಮ ಶಿಷ್ಯಂದಿರ ಆಸಕ್ತಿಯನ್ನು ಗುರುತಿಸಿ ಅವರ ಬದುಕು ಬೆಳಗಿಸಿದ್ದು, ಇದೆಲ್ಲಾ ಅವರು ಸಮಾಜಕ್ಕೆ ನೀಡಿದ ಋಣ ಸಂದಾಯಗಳೆ.
ಬೊಗಸೆ ತುಂಬಾ ಕನಸುವಿನಲ್ಲಿ ಡಾ. ಶಿಶಿಲರು ತಾನು ಹಾದು ಬಂದ ಬದುಕಿನ ವಿವಿಧ ಘಟ್ಟಗಳನ್ನು, ಪಟ್ಟ ಕಷ್ಟ ಕೋಟಲೆಗಳನ್ನು ಸಹಜವಾಗಿ, ಸರಳವಾಗಿ , ಅಷ್ಟೇ ಲವಲವಿಕೆಯಿಂದ ನಿರೂಪಿಸುತ್ತಾ ಹೋಗುತ್ತಾರೆ. ಖುಷಿ, ಸಂಕಟ, ಕಷ್ಟ ಕೋಟಲೆಗಳು ಇರುವುದೇ ಬದುಕನ್ನು ಮತ್ತಷ್ಟು ಗಟ್ಟಿಗೊಳಿಸಲು ಎನ್ನುವ ಭಾವವನ್ನು ಓದುಗನ ಎದೆಯೊಳಗೆ ಉದ್ಧೀಪಿಸುವಂತೆ ಬರೆಯಬಲ್ಲರು. ಆತ್ಮವಿಶ್ವಾಸವೇ ಬದುಕಿನ ಸಫಲತೆಗೆ ರಹದಾರಿ ಅನ್ನುವಂತದ್ದನ್ನು ನಾವಿಲ್ಲಿ ಅನುಭವಿಸಲು ಸಾಧ್ಯ. ಮುದಗೊಳಿಸುವ ಭಾಷೆ, ಒಂದೇ ಓಘದಲ್ಲಿ ಓದಿಸಿಕೊಂಡು ಹೋಗುವ ಬರವಣಿಗೆಯ ಶೈಲಿ ನಮ್ಮನ್ನು ಅದೇ ವೇಗದಲ್ಲಿ ಓದಿಸಿಕೊಂಡು ಹೋಗುವಲ್ಲಿ ಸಫಲವಾಗಿದೆ.
ಒಂದು ಆತ್ಮಕಥನ ನಮ್ಮೊಳಗೆ ಭರವಸೆಯನ್ನು ಹುಟ್ಟಿಸಿ, ಚೇತೋಹಾರಿ ಅನುಭವ ನೀಡಿದರೆ ಅದು ಆ ಕೃತಿಯ ಗಟ್ಟಿತನ. ಅಂತಹ ಭಾವವನ್ನು ನಾವು ಬೊಗಸೆ ತುಂಬಾ ಕನಸು ವಿನಲ್ಲಿ ಪಡೆದುಕೊಳ್ಳಲು ಶಕ್ಯರಾಗಬಹುದು. ಈ ಎಲ್ಲಾ ಕಾರಣಕ್ಕಾಗಿ ಈ ಆತ್ಮಕಥಾನಕವನ್ನು ಓದುವ ಅನಿವಾರ್ಯತೆ ನಮಗಿದೆ.