* ಪ್ರಸಾದ್ ಕುಲಕರ್ಣಿ ಸೂರ್ಯಸಖ
response@134.209.153.225
ಮಳೆ ಸುರಿಸುವ ಮೇಘ ಅವಳದಲ್ಲ, ಹುಚ್ಚು ಆವೇಗ. ತಿಳಿದಿದೆ ಆಕೆಗೆ, ಯಾವ ಕಲ್ಯಾಣಿಯ ಮೇಲೆ ಸುರಿಯಬೇಕು, ಯಾವುದರ ಮೇಲೆ ಸುಮ್ಮನೆ ಹಾಯಬೇಕೆಂದು. ಸುಮ್ಮನೆ ಹಾಯಬೇಕಾದ ನನ್ನೆದೆಯೆಂಬ ಕಲ್ಯಾಣಿಯಲ್ಲಿ ವಾರದಿಂದ ಧೋ ಮಳೆ. ಈ ಮಳೆಯ ದೆಸೆಯಿಂದ ಒಂದಷ್ಟು ಲವಲವಿಕೆ ಮೂಡಿದೆ ನನ್ನಲ್ಲಿ. ಮನಸ್ಸು ಮಿಂದು ಮಡಿಯಾಯಿತು.
ಇದು ಹೇಮಾ ಸದಾನಂದ ಅಮೀನ್ ಅವರ ಚೊಚ್ಚಲ ಎನಿಸದ ಚೊಚ್ಚಲ ಕವನ ಸಂಕಲನ ‘ಕಲ್ಯಾಣಿಯಲ್ಲಿ ಮಳೆ ‘ ಎಂಬ ಕೃತಿಯ ಕುರಿತು ನನ್ನ ಹನಿ ಹನಿ ಅನಿಸಿಕೆ. ಈ ಸಂಕಲನದ ಪ್ರಾರಂಭದಲ್ಲೇ ಮೌಲ್ಯಯುತವಾದ ಒಂದು ಮೌನವಿದೆ. ಓದುತ್ತ ಹೋದಂತೆ ನಾವು, ಗಾಳಿ, ನೀರು, ಮೋಡ, ಸಿಡಿಲುಗಳ ಭರಾಟೆಗೆ ಸಿಕ್ಕಿಕೊಳ್ಳುತ್ತೇವೆ. ಮತ್ತದನ್ನು ಆನಂದಿಸುತ್ತೇವೆ. ನಮ್ಮ ಅಹಂಕಾರದ ಪೊರೆ ಕಳಚಿ ಆರ್ದ್ರವಾಗುತ್ತೇವೆ. ಕವಯತ್ರಿ ವಿನಾಕಾರಣದ ಮಾತಿನ ಹರಳನ್ನೆಸೆದು ನಮ್ಮ ಮೌನಭಂಗವಾಗದಂತೆ ಕವಿತೆಗಳ ತೂಗಿಸಿ ಗೆದ್ದಿದ್ದಾರೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಲಾಗದ ಕವನ ಸಂಕಲನ ಇದು. ಆದರೆ ಈ ಕೃತಿ ತೀರದ ದಾಹ ಮೂಡಿಸುತ್ತದೆ. ಮತ್ತೆ ಮತ್ತೆ ತನ್ನತ್ತ ಸೆಳೆಯುತ್ತದೆ. ದಾಹ ಇಂಗುವುದೇ ಇಲ್ಲ. ನನ್ನ ದಾಹ ಇಂಗಿದ್ದರೆ ಈ ಪರಿಚಯ ಬರೆಯಲಾಗುತ್ತಲೇ ಇರಲಿಲ್ಲ. ಇದನ್ನು ಪೂರ್ತಿ ಓದಿದ ಬಳಿಕ ನನಗನಿಸಿದ್ದು; ನಾನು ಬರೆಯುವುದು, ಕಲಿಯುವುದು ಇನ್ನೂ ತುಂಬಾ ಇದೆ ಎಂದು.
ಇಲ್ಲಿನ ಕವಿತೆಗಳು ಅನುಭವ ಶ್ರೀಮಂತಿಕೆಯ ಜತೆಜತೆಗೆ ಒಂದಷ್ಟು ಕಲ್ಪನೆ, ಅದ್ಭುತ ಭಾಷೆಯ ಸಾಂಗತ್ಯದಿಂದ ಕಂಗೊಳಿಸಿವೆ. ಪದಗಳ ವೈಭವೀಕರಣವಾಗದೆ ಅಂತಃಕರಣ ತಟ್ಟುತ್ತವೆ. ಜಡಗಳಿಗೂ ಚೇತನ ನೀಡುವ ಭಾವ ಕಲ್ಯಾಣಿ ಇದು. ಕವಯತ್ರಿ ಮತ್ತು ಕವಿತೆಯ ನಡುವೆ ನಡೆಯುವ ತೀವ್ರ ಸಂಘರ್ಷದ ಫಲವೇ ಈ ಧಾರಾಕಾರ ಮಳೆಗೆ ಕಾರಣ. ಒಟ್ಟು ೫೭ ಕವಿತೆಗಳು, ಕೆಲವು ಹನಿ ಕವನಗಳ ಈ ಸಂಕಲನ ಓದುವಾಗ, ಪುಟ್ಟ ಬೆರಗು, ಒಂದು ಒಳನೋಟ, ಹೊಸದೊಂದು ಹೊಳಹು ಕಾಣಿಸುತ್ತದೆ. ಅನುಭೂತಿಗೂ ಬರುತ್ತದೆ. ಕೆಲವು ಸಾಲುಗಳು ತಾಕುತ್ತವೆ. ಚಿಂತನೆಗೆ ದೂಡುತ್ತವೆ. ವಾಸ್ತವದ ಪ್ರಖರ ಸೂರ್ಯನನ್ನೂ ಪರಿಚಯಿಸುತ್ತವೆ. ಗಾಲಿಬನ ಗಜಲಿನ ಮೇಲಾಣೆ ಕೆಲವು ಕವಿತೆಗಳು ಸಣ್ಣಗೆ ಬಳಕುತ್ತವೆ. ದಟ್ಟ ವಿಷಾದ, ಪುಟ್ಟ ಸಂಭ್ರಮ ಎರಡನ್ನೂ ಮೂಡಿಸುತ್ತವೆ.
ಈ ಕವನ ಸಂಕಲನವನ್ನೊಮ್ಮೆ ಎಡವಿಬಿಡಿ. ನಿಮ್ಮ ದುಃಖವ ತನ್ನೆದೆಗಾತು, ತಬ್ಬಿ, ತಟ್ಟಿ, ಚಪ್ಪರಿಸಿ ಮತ್ತೆ ತಾಯಿಯಂತೆ ತುತ್ತನಿಟ್ಟು, ಅರಿವಿನ ಹರಿವು ಹರಿಸುತ್ತದೆ. ಮುಳ್ಳಿನ ಬೆನ್ನಲ್ಲಿ ಹೂವಿನೆದೆಯ ಮಿದು ಸ್ಪರ್ಶ ನೀಡುತ್ತದೆ. ಹಿರಿಯ ಸಾಹಿತಿ ವಿದ್ಯಾಧರ ಮುತಾಲಿಕ್ ದೇಸಾಯಿ ಅವರ ಚೆಂದದ ಬೆನ್ನುಡಿ ಹಾಗೂ ಮುಂಬಯಿಯ ಕರ್ನಾಟಕ ಮಲ್ಲ ದೈನಿಕದ ಉಪ ಸಂಪಾದಕ, ಸಾಹಿತಿ ಶ್ರೀನಿವಾಸ ಜೋಕಟ್ಟೆಯವರ ಮುನ್ನುಡಿಯೊಂದಿಗೆ ಕಲ್ಯಾಣಿಯಲ್ಲಿ ಮಳೆ ತುಂಬಿದೆ. ನನ್ನ ಬೊಗಸೆಯಲ್ಲಿ… ಮಳೆ… ಹಿಡಿಸಿದ್ದಿಷ್ಟೆ. ನೀವೂ ಒಮ್ಮೆ ಕಲ್ಯಾಣಿಯ ಮಳೆಯಲ್ಲಿ ತೋಯ್ದು ಬನ್ನಿ.