Thursday, December 2, 2021

ಮನವ ಕಾಡುವ ‘ಕಾಮೋಲ’

Follow Us

| ದೀಪ್ತಿ ಭದ್ರಾವತಿ
response@134.209.153.225

ತೆ ಮತ್ತು ಕವಿತೆ ಎರಡರಲ್ಲಿಯೂ ಹಿಡಿತ ಸಾಧಿಸಿ ಬರೆಯುತ್ತಿರುವವರಲ್ಲಿ ಡಾ.ಅಜಿತ್ ಹೆಗಡೆ ಗಮನಾರ್ಹ ಹೆಸರು. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಇಡೀ ಲೋಕವನ್ನು ಚಿಕಿತ್ಸಕ ದೃಷ್ಟಿಯಿಂದಲೇ ನೋಡುತ್ತಾರೆ. ಮಾನವೀಯ ಸಂಬಂಧಗಳು, ಮನುಷ್ಯನ ಸಣ್ಣ ತನಗಳು ಮತ್ತು ಮನುಷ್ಯನ ಮನೋಸಹಜ ಗುಣಗಳನ್ನು ತಮ್ಮ ಬರಹಗಳ ಮೂಲಕ ಕಟ್ಟಿಕೊಡುತ್ತಾರೆ.
ಇವರ ಎರಡನೇ ಕಥಾ ಸಂಕಲನ”ಕಾಮೋಲ” ಶೀರ್ಷಿಕೆಯ ಮೂಲಕವೇ ಕುತೂಹಲ ಗರಿಗೆದರಿಸುವ ಇಲ್ಲಿನ ಬಹುತೇಕ ಕತೆಗಳು ಕಾಡದೆ ಬಿಡಲಾರವು. ಅದರಲ್ಲಿಯೂ ಮುಖ್ಯವಾಗಿ “ಕನ್ನಡಿಗಂಟದ ಬಿಂದಿ” “ಗುಪ್ತಗಮನ” “ವಿಮೋಚನೆ” ಕತೆಗಳು ಓದಿದ ಎಷ್ಟೋ ಹೊತ್ತಿನ ತನಕ ಕದಡುತ್ತಲೇ ಇರುತ್ತವೆ. “ಕನ್ನಡಿಗಂಟದ ಬಿಂದಿ” ಕತೆಯಲ್ಲಿ ಆಯ್ದುಕೊಂಡ ವಿಷಯ ವಸ್ತು ತೀರ ಹೊಸದು. ಬದುಕಿನ ಹುಡುಕಾಟದಲ್ಲಿ ಪ್ರಪಾತದ ಅಂಚಿನಲ್ಲಿ ಎಲ್ಲಿಯೋ ಬಿದ್ದು ಯಕಶ್ಚಿತ್ ಆಗಿ ಬಿಡಬಹುದಾದ ಎಲ್ಲ ಸ್ಥಿತಿಗಳನ್ನು ಮೀರಿ ಕತೆಯ ನಾಯಕಿ ತನ್ನೊಳಗಿನ ಬೆಳಕನ್ನು ತಾನೇ ಹುಡುಕಿಕೊಳ್ಳುತ್ತ ದಿವ್ಯವಾಗುವುದೆ ಈ ಕತೆಯ ಗಟ್ಟಿತನ.
“ಗುಪ್ತಗಮನ” ಕತೆ ಬಹಳಷ್ಟು ವೈದ್ಯಕೀಯ ಪರಿಭಾಷೆ ಇದೆ. ಗೆಳತಿಯ ಖಾಯಿಲೆಗೆ ಸ್ಪಂದಿಸುತ್ತ ಸಾಗುವ ಗೆಳೆಯನಿದ್ದಾನೆ. ಆದರೆ ಮಾಮೂಲಿಯಾದಂತ ಪ್ರೇಮದ ಧಾಟಿ ಹಿಡಿಯಬಹುದಾಗಿದ್ದ ಈ ಕತೆ ಇಷ್ಟವಾಗುವುದು ಅನಾಮಿಕ ವ್ಯಕ್ತಿಗಳಿಬ್ಬರ ನಿಷ್ಕಾರಣದ ಸ್ನೇಹದ ಕಾರಣಕ್ಕಾಗಿ, ಯಾವ ಸಂಬಂಧಗಳ ಚೌಕಟ್ಟಿಗೂ ಒಳಪಡದೆ ಒಬ್ಬರ ಸಲುವಾಗಿ ಒಬ್ಬರು ಬದುಕಲು ಹೊರಡುವ ಮನುಷ್ಯ ಸಹಜ ಬಾಂಧವ್ಯದಿಂದಾಗಿ.
ಇನ್ನು “ವಿಮೋಚನೆ” ಕೂಡ ಇದೇ ರೀತಿಯಾದಂತಹ ಕತೆ ಎಂದುಕೊಂಡರೂ ಇಲ್ಲಿ ನೆಚ್ಚಿಕೊಂಡ ಮನುಜ ಸಂಬಂಧಗಳ ಕರಾಳ ಮುಖಗಳು ಎದುರಾಗುತ್ತವೆ ಮತ್ತು ಅದೇ ಹೊತ್ತಿನಲ್ಲಿ ಇನ್ಯಾವುದೋ ಒಂದು ಜೀವ ತನಗೆ ಸಂಬಂಧವೇ ಪಡದ ಜೀವಿಯೊಂದರ ಸಲುವಾಗಿ ಹೊಯ್ದಾಡುತ್ತದೆ.
ಅದೇ ರೀತಿ ಇಷ್ಟವಾಗುವ ಇನ್ನೊಂದು ಕತೆಯೆಂದರೆ “sssssssಸಾಬೀತು” ಕಥಾ ನಾಯಕಿ ತನ್ನ ಉಬ್ಬು ಹಲ್ಲನ್ನು ಸರಿ ಪಡಿಸಿಕೊಳ್ಳುವ ಪರಿಪಾಡಲನ್ನು ಹೇಳುವ ಈ ಕತೆ. ಸ್ತ್ರೀಯರ ಸಂಕಟಗಳು, ಬದುಕಿನ ಹೋರಾಟಗಳು. ವಾಸ್ತವ ಬದುಕಿನಲ್ಲಿ ಅವರುಗಳ ಮೇಲಾಗುವ ದೌರ್ಜನ್ಯಗಳನ್ನು ಸೂಕ್ಷ್ಮವಾಗಿ ದಾಖಲಿಸುತ್ತ ಸಾಗುತ್ತದೆ. ಕೊನೆಗೆ ಈ ಎಲ್ಲದರ ನಡುವೆಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಮನೆ ಬಿಡುವ ಉಮಾ ದಿಟ್ಟ ಹೆಣ್ಣಿನ ಧ್ವನಿಯೊಂದರ ಪ್ರತೀಕದಂತೆ ಕಾಣಿಸುತ್ತಾಳೆ..
ಇನ್ನು “ಸೆಲೆ” “ಗೂಡು” “ಸೆಲೆಕ್ಟ್ ಆಲ್ ಡಿಲೀಟ್” ಹೀಗೆ ಇಲ್ಲಿ ಅನಾವರಣಗೊಂಡಿರುವ 14 ಕತೆಗಳು ಭಿನ್ನ ಭಿನ್ನ ಭಿತ್ತಿಗಳನ್ನು ಹೊಂದಿವೆ. ಕತೆಗಳ ಆವರಣಗಳಿಗೆ ಅನುಗುಣವಾಗಿ ಇಲ್ಲಿನ ಭಾಷೆಯೂ ಕೂಡ. ಕೆಲವೊಮ್ಮೆ, ಹವ್ಯಕ, ಕೆಲವೊಮ್ಮೆ ಉತ್ತರ ಕನ್ನಡ, ಕೆಲವೊಮ್ಮೆ ಧಾರವಾಡದ ಕನ್ನಡವನ್ನು ಮತ್ತು ಅದರ ನಡುವೆ ಶಿಷ್ಟ ಭಾಷೆಯನ್ನು ಸಮರ್ಥವಾಗಿ ಬಳಸಲಾಗಿದೆ.

ಮಂಗಳ ಪ್ರಕಾಶನ
ರಾಜರಾಜೇಶ್ವರಿ ನಗರ, ಬೆಂಗಳೂರು
ಬೆಲೆ:100 ರೂ.

(‘ಕಾಮೋಲ’ ಕಥಾಸಂಕಲನದಲ್ಲಿನ ಆಯ್ದ ಕತೆ)

ಹುತ

| ಡಾ. ಅಜಿತ್ ಹರೀಶಿ
ಕೊಂದುಕೊಳ್ಳಲು ಇರುವ ಮಾರ್ಗಗಳು ಯಾವುದು ಎಂದು ಗೂಗಲಿಸಿದೆ. ಅಲ್ಲಿ ಐದು ಉತ್ತಮ ಸಲಹೆಗಳು ಕಂಡವು. ಅವನ್ನು ನೋಟ್ ಮಾಡಿಕೊಂಡೆ. ಕಟ್ಟಡದ ಮೇಲಿಂದ ಬೀಳುವುದು, ರಕ್ತನಾಳಗಳನ್ನು ಕತ್ತರಿಸಿಕೊಳ್ಳುವುದು, ಸೇತುವೆ ಮೇಲಿಂದ ಕೆಳಕ್ಕೆ ಹಾರುವುದು, ವಿಷಸೇವನೆ, ನೇಣು ಹಾಕಿಕೊಂಡು ಸಾಯುವುದು ಎಂದು ಅದು ತೋರಿಸಿತ್ತು.
ಇವುಗಳಲ್ಲಿ ಯಾವುದೇ ಒಂದನ್ನು ಆಯ್ಕೆ ಮಾಡಿಕೊಳ್ಳುವುದೂ ಕಷ್ಟವಾಗಿ ಕಾಣಲಿಲ್ಲ. ಸಾಯಲು ಹೊರಟವನಿಗೆ ನೋವು ಭಾರವೇ? ಆದರೆ, ಸಾಯುವ ಮುಂಚೆ ಜರೂರಾಗಿ ಮಾಡುವ ಕೆಲಸಗಳಷ್ಟು ಬಾಕಿ ಇದ್ದವು. ಇನ್ಶುರೆನ್ಸ್ ಕ್ಲೈಮ್ ಆಗುವಂತಹ ಸಾವು ಆಗಬೇಕು. ಅದನ್ನೂ ಗೂಗಲಿಸಿದೆ. ಒಂದು ಅಜಮಾಸು ಐಡಿಯಾ ಸಿಕ್ಕಿತು. ಒಮ್ಮೆ ಇನ್ಶುರೆನ್ಸ್ ಬಾಂಡ್ ತೆಗೆದು ನೋಡಬೇಕೆನಿಸಿತು, ನೋಡಿದೆ‌. ಹಿಂದಿನ ದಿನವೇ ಕಂತು ಕಟ್ಟಲು ಕೊನೆಯ ದಿನವಾಗಿತ್ತು. ಆನ್ ಲೈನ್ ನಲ್ಲಿ ಪ್ರೀಮಿಯಂ ಕಟ್ಟಿದೆ.
ಡೈರಿಯಲ್ಲಿ ಹಣ ಕೊಡಬೇಕಾದವರ, ಪಡೆಯಬೇಕಾದ ವಿವರ ಬರೆದೆ. ಪೋಸ್ಟ್, ಬ್ಯಾಂಕ್, ಶೇರುಗಳಲ್ಲಿ ಇರುವ ಹೂಡಿಕೆಗಳನ್ನೆಲ್ಲಾ ನಮೂದಿಸಿದೆ. ನನ್ನ ಶುಭಾಶುಭ ಕಾರ್ಯಕ್ಕೆ ಸಂಪರ್ಕಿಸಬೇಕಾದವರು ಎಂಬ ಶೀರ್ಷಿಕೆ ನೀಡಿ ಆ ಪ್ರಮುಖರ ಹೆಸರುಗಳನ್ನು ಬರೆದೆ.
ಇನ್ಶುರೆನ್ಸ್ ಕ್ಲೈಮ್ ಆಗಲೇಬೇಕೆಂದರೆ ಆತ್ಮಹತ್ಯೆಗೆ ಶರಣಾದ ಯಾವುದೇ ರೀತಿಯ ಸುಳಿವೂ ಯಾರಿಗೂ ಸಿಗಬಾರದೆಂದು ಮತ್ತೊಮ್ಮೆ ಒಳಮನಸ್ಸಿನಲ್ಲಿ ಹೇಳಿಕೊಂಡೆ.
ಆಯ್ತಲ್ವ, ಈ‌ ಲೋಕದ ಯಾತ್ರೆ ಮುಗಿಸಲು ಹೊರಟವನ ತಲೆ ಎರಡು ತೆಂಗಿನ ಮರದುದ್ದ ಬೆಳೆಯದೇ ಹಗುರಾಗಿರಬೇಕು ಎಂದು ಉಲ್ಲಸಿತನಾಗಲು ಪ್ರಯತ್ನಿಸಿದೆ. ‌
ಶಾಸ್ತ್ರೀಯ ಸಂಗೀತ ಕೇಳಲೆತ್ನಿಸಿದೆ. ಭಾರತ ಕ್ರಿಕೆಟ್ಟಿನಲ್ಲಿ ಮೊದಲ ವಿಶ್ವಕಪ್ ಗೆದ್ದು ಸಂಭ್ರಮಿಸಿದ ಕ್ಷಣಗಳನ್ನು   ಯೂಟ್ಯೂಬ್ ನಲ್ಲಿ ನೋಡಿದೆ. ಊಹೂಂ.‌ ಟಾಮ್ ಅಂಡ್ ಜೆರ್ರಿ ಕೂಡಾ ನಗು ತರಿಸಲಿಲ್ಲ. ಕಡೆಗೆ, ಗೆಳೆಯ ಮತ್ತು ಲೇಖಕ ಮಹೇಶಚಂದ್ರನಿಗೆ ಫೋನಾಯಿಸಬೇಕೆನಿಸಿತು. ಮೂರು ಬಾರಿ ಪೂರ್ತಿ ಕರೆ ಹೋದರೂ ಆತ ಕಾಲ್ ರಿಸೀವ್ ಮಾಡಲಿಲ್ಲ. ‘ತಥ್’ ಎಂದು ಕಾಲನ್ನು ಜಾಡಿಸಿ ಕೆಲಸಕ್ಕೆ ಹೊರಡುವುದೆಂದು ಮನೆಯ ಹೊಸ್ತಿಲ ಬಳಿ ಬಲಗಾಲಿಟ್ಟು ಹೊರಬೀಳಲು ಹೊರಟವನು, ಹಾವು ತುಳಿದಂತೆ ಸರಕ್ಕನೆ ಕಾಲೆಳೆದು, ಎಡಗಾಲು ಮುಂದಿಟ್ಟು ಹೊರಟೆ. ಹಾಗೇ ಸುಮ್ನೆ ನಗು ಬಂತು. ಹೊರಬಿದ್ದವನಿಗೆ ರೋಹಿಣಿ ಮಗನನ್ನು ಶಾಲೆಗೆ ಬಿಡಲು ಹೋಗಿದ್ದು ನೆನಪಾಯಿತು. ನನ್ನ ಅಬ್ಸೆಂಟ್ ಮೈಂಡ್ ಬಗ್ಗೆ ನೆನೆದು ಮನೆಗೆ ಬೀಗ ಹಾಕುವಾಗಲೂ ಮತ್ತೊಂದಿಷ್ಟು ಮುಗುಳ್ನಗೆ ಬಂತು.
ಕಾರನ್ನು ಬಿಟ್ಟು ಬೈಕು ತೆಗೆದುಕೊಂಡು ಸೆಲ್ಫ್ ಸ್ಟಾರ್ಟರ್ ಬಟನ್ ಒತ್ತಿದ್ದಾಗಲೇ  ಮಹೇಶನ ಕರೆ ಬಂತು.
‘ಎಲ್ಲಿದ್ದೀಯಾ ಆದ್ವಿಕ್, ಎರಡು ಮಿಸ್ಡ್ ಕಾಲ್‌ ಇವೆ. ಒಂದು ಹೊಸಕಥೆ ಬರೀತಿದ್ದೆ. ಸೋ ಸೈಲೆಂಟ್  ಮೋಡ್, ಈಗ ನೋಡಿದೆ ಕಣೋ’.
‘ಇರಲಿ ಬಿಡೋ, ಇತ್ತ ಓಕೆ. ಅಂತಹ ಮಹತ್ವದ ವಿಷಯ ಏನಿಲ್ಲ. ಬೈ..’ ಎಂದು ಕಾಲ್ ಕಟ್ ಮಾಡುವಷ್ಟರೊಳಗೆ ಮಹೇಶ
‘ಫ್ರೀ ಇದ್ದರೆ, ನಮ್ಮನೆ ಹತ್ರ ಬಾರೋ… ಒಂದು ಕಡೆ ಹೋಗೋದಿದೆ’ ಎಂದ.
‘ಬರ್ತೇನೆ…’ ಕ್ಲುಪ್ತವಾಗಿ ಹೇಳಿದೆ.
ಬೆಂಗಳೂರಿನ ಟ್ರಾಫಿಕ್ನಲ್ಲಿ ಕಾರಾಗಿದ್ದರೆ ಅವನ ಮನೆಗೆ ಹೋಗಲು ಒಂದು ತಾಸು ಬೇಕಿತ್ತು. ಟೂ ವೀಲರ್ ನಲ್ಲಿ ಒಳರಸ್ತೆಗಳಲ್ಲಿ ನುಗ್ಗಿಸಿ ಅರ್ಧತಾಸಿಗೆ ಹೋಗಬಹುದೆನಿಸಿತು. ವೇಗ ಹೆಚ್ಚಿಸಿದರೆ ತನ್ನ ಗಂಟು ಹೋಗುವುದೇನು ಈ ಹೊತ್ತಿನಲ್ಲಿ ಎನಿಸಿ, ಮುಖ ಗಂಟಿಕ್ಕಿತು.
ವೇಗವಾಗಿ ಹೋಗುತ್ತಿದ್ದವ ಒಮ್ಮೆಲೆ ಬ್ರೇಕ್ ಹೊಡೆದು ಸಾವರಿಸಿಕೊಳ್ಳಲು ಕಾರಣವಾಗಿದ್ದು ನಾಲ್ಕೈದು ವರ್ಷದ ಒಂದು ಮಗು ರಸ್ತೆಯ ಮೇಲೆ ಬಂದಿದ್ದು. ಅವಳು, ತನ್ನ ಹಾರಿ ಹೋದ ಬಲೂನನ್ನು ಹಿಡಿಯುವ ಆತುರದಲ್ಲಿದ್ದಳು.
ಒಮ್ಮೆ ತಲೆ ಕೊಡವಿಕೊಂಡ ನನಗೆ, ಕ್ಷಣಾರ್ಧದಲ್ಲಿ ಸಾವೊಂದು ಸವರಿಹೋಗಿದ್ದನ್ನು ತಪ್ಪಿಸಿದ ಸಮಾಧಾನವಾಯಿತು.
ನಾನು ಸಾಯಲು ಹೊರಟವನು ನಿಜ. ಆದರೆ, ಇನ್ನೊಂದು ಪ್ರಾಣದ ಮೇಲೆ ಯಾವ ಹಕ್ಕೂ ಇಲ್ಲ ಅನಿಸಿತು.
ಬೈಕನ್ನು ನಿಧಾನ ಓಡಿಸಲು ಶುರು ಮಾಡಿದೆ. ಇದಕ್ಕೆ ಕಾದು ಕೂತಂತಿದ್ದ ವಿಚಾರಗಳು ಮಿದುಳಿಗೆ ಒಮ್ಮೆಲೇ ಸರ್ಜಿಕಲ್ ಸ್ಟ್ರೈಕ್ ಮಾಡಿದವು. ಹದಿಮೂರನೇ ವಯಸ್ಸಿನಲ್ಲಿ ಮೊಟ್ಟ ಮೊದಲ ಬಾರಿಗೆ ಭುಜಕ್ಕೆ ಮೈ ಆತುಕೊಂಡು ನಿಂತ ಹೇಮಾ ನೆನಪಾದಳು. ಮತ್ತೊಂದು ರಾತ್ರಿ, ಮಗ್ಗುಲಾಗಿ ಮಲಗಿದ್ದ ಆದ್ವಿಕನನ್ನು ಮಧ್ಯರಾತ್ರಿಯ ಹೊತ್ತಿಗೆ ಅದೇ ಕೋನದಲ್ಲಿ ಹಿಂಬದಿಯಿಂದ ಪ್ರವೇಶಿಸಲು ನೋಡಿದ ರಾಮನಾಥ ಚಿಕ್ಕಪ್ಪ ನೆನಪಾದರು.
ಸಂಪಿಗೆಹಣ್ಣು ಕೊಯ್ಯಲು ಹೋಗಿ ಮರದಿಂದ ಬಿದ್ದು, ನೆಲದ ಮೇಲೆ ಕೂತ ಸ್ಥಿತಿಯಲ್ಲೇ ಸ್ಥಾಪಿತನಾಗಿದ್ದು ನೆನಪಾಯಿತು. ಒಮ್ಮೆ ಉಸಿರು ನಿಂತು, ದೇಹವೇ ಸ್ತಬ್ಧವಾಗಿ  ಮೊದಲ ಬಾರಿ ಪ್ರಾಣ ಹೋದ ಅನುಭವ  ಆವರಿಸಿದ್ದು ಕಣ್ಣ ಮುಂದೆ ಬಂತು.
ಇನ್ನು ಚಲಿಸುವುದು ಅಸಾಧ್ಯವೆನಿಸಿ ಗೂಡಂಗಡಿಯ ಪಕ್ಕ ಗಾಡಿ ನಿಲ್ಲಿಸಿ ‘ಅರ್ಧ ಚಹಾ’ ಎನ್ನಲು ಹೋಗಿ, ನಾಲಿಗೆ ಕಚ್ಚಿಕೊಂಡು ‘ಒಂದು ಟೀ ಕೊಡಿ’ ಎಂದೆ.
***
ಅಸಲಿಗೆ ನನಗೆ ಇದೇ ಮೊದಲ ಬಾರಿಗೆ ಆತ್ಮಹತ್ಯೆಯ ಆಲೋಚನೆ ಬಂದುದಲ್ಲ. ಮೀಸೆ ಮೂಡುವ ಹೊತ್ತಿಗೆ ಮನೆಗೆ ಬಂದಿದ್ದ ಮಂಗಲೆಯನ್ನು ಏಕಾಂತ ಸಿಕ್ಕು ಅಪ್ಪಿಕೊಂಡಾಗ, ಕೊಸರಿದರೂ ಬಿಡದೇ, ನಾನು ಹಿಡಿತ ಸಡಿಲಿಸದೇ ಇದ್ದಾಗ, ಅವಳು ಕೆನ್ನೆಗೊಂದು ಫಟೀರನೇ ಏಟು ಕೊಟ್ಟು ಕಾಳಿಯಂತೆ ಕಣ್ಣು ಬಿಟ್ಟು ಹೋದಾಗ ಒಮ್ಮೆ ಅನಿಸಿತ್ತು. ಆ ಒಂದು ವಾರ ನಾನು ಮನುಷ್ಯನಾಗಿರಲಿಲ್ಲ. ಎಲ್ಲರ ಮುಖದಲ್ಲಿಯೂ ಮಂಗಲೆಯ ದೂರನ್ನು ಹುಡುಕುತ್ತಿದ್ದೆ. ಅದೆಲ್ಲಿಯೂ ಸಿಗಲಿಲ್ಲ. ಮತ್ತೆಂದೂ ಮಂಗಲೆಯನ್ನು ಮುಖಕೊಟ್ಟು ನೋಡುವುದು ಸಾಧ್ಯವಾಗದಿದ್ದುದು ಬೇರೆ ಮಾತು.
ಅಪ್ಪನ ಕಿಸೆಯಿಂದ ನೂರರ ಒಂದು ನೋಟನ್ನು ಕದ್ದು ಎಲ್ಲರೂ ಮಲಗಿದ ಮೇಲೆ ಗೆಳೆಯರ ಜೊತೆಗೂಡಿ ಮಾರಿಕಾಂಬೆಯ ಜಾತ್ರೆಗೆ ಹೋಗಿದ್ದು ಮತ್ತೊಂದು ತಪ್ಪು. ಆಮೇಲೆ ಅಲ್ಲಿ ಗಂಡಸಾಗುವ ಎರಡನೇ ಪ್ರಯತ್ನವಾಗಿ ಸಿಗರೇಟು ಸೇದಲು ಪ್ರಯತ್ನಿಸಿ ಅಸಾಧ್ಯ ಕೆಮ್ಮು ಬಂದಿದ್ದು ಮತ್ತು ಕೆಮ್ಮನ್ನು ಹೋಗಲಾಡಿಸಲು ಒಂದು ಗುಟುಕು ಬಿಯರ್ ಹೀರಿದ್ದು. ಮತ್ತು ಅದನ್ನು ಪಕ್ಕದ ಟೇಬಲ್ಲಿನಲ್ಲಿದ್ದ ಶಾಂತಣ್ಣ ನೋಡಿ ರೈಲುಬೋಗಿಗಳಂತೆ ಇದ್ದ ಊರಿನ ಮನೆಗಳ ಗೋಡೆಯ ಕಿವಿಗಳನ್ನು ದಾಟಿಸಿದಾಗಲೂ ಭೂಮಿಯು ಬಾಯ್ಬಿರಿದು ನುಂಗಬಾರದಾ ಅನ್ನಿಸಿತ್ತು.
ಪೇಟೆಯ ಎಲೈಟ್ ಇಸ್ಪೀಟ್ ಗುಂಪಿನ ಸದಸ್ಯನಾಗಿ ಒಳಪ್ರವೇಶ ಮಾಡಿದವ. ತೋಟಗಾರರ ಸೊಸೈಟಿಯಿಂದ ಬೆಳೆಯ ರಕಮು ಪಡೆದು ಹೋಗಿ ಕುಂತವ, ಕೈ ಖಾಲಿಯಾಗಿ, ಆಡಿಸುವವರ ಬಳಿಯೇ ಸಾಲ ಪಡೆದು ಅದನ್ನೂ ಕಳೆದು ಮನೆಗೆ ಹೋಗಿದ್ದೆ. ಅಪ್ಪನ ಪವರ್ ಆಫ್ ಅಟಾರ್ನಿ ದುರುಪಯೋಗ ಪಡಿಸಿಕೊಂಡು ಮನೆಗೆ ತಲುಪುವಾಗ ರಾತ್ರಿಯಾಗಿತ್ತು.  ಆವತ್ತೂ ನಾನಿನ್ನು ಬೆಳಗ ನೋಡಬಾರದೆಂದು ನಿರ್ಧರಿಸಿದ್ದೆ.
ಪ್ರೀತಿಸುವುದನ್ನು ಕಲಿಸಿ, ಲಾಲಿಸಿ, ಪಾಲಿಸಿ, ತೂತು ಬೀಳಲಿದ್ದ ಹಡಗನ್ನು ರಕ್ಷಿಸಿ ಕಡಲಿನಿಂದ ತೀರಕ್ಕೆ ತಂದ ವಿಮಲಾ, ಬಿಟ್ಟು ಹೋದದ್ದು ದ್ವೀಪದಲ್ಲಿ ಎಂದು ಗೊತ್ತಾದಾಗ ಖಿನ್ನತೆಗೆ ಜಾರಿ, ಮತ್ತೊಮ್ಮೆ ನನ್ನ ಸುಯಿಸೈಡಲ್ ಟೆಂಡೆನ್ಸಿ ಟ್ರಿಗರ್‌ ಆಗಿತ್ತು.
ಇವೆಲ್ಲವುಗಳ ಮರೆಯಲೆಂದೇ ಬೆಂಗಳೂರಿಗೆ ಓಡಿದ್ದಲ್ಲವೇ? ಪಲಾಯನವಲ್ಲವದು. ಮನೋವೈದ್ಯರ ಸಲಹೆಯ ಮೇರೆಗೆ ಸ್ಥಳ ಬದಲಾವಣೆ!
ಮೆಜೆಸ್ಟಿಕ್ಕಿನ ವಾಹನ ದಟ್ಟಣೆಯ ದಾಟಲಾಗದೇ ಅಳು ಒತ್ತರಿಸಿ ಬಂದು ನಿಂತಂತಾದಾಗ ಫಕ್ಕನೆ ನಕ್ಕವಳು ರೋಹಿಣಿ. ಕೈಸನ್ನೆಯಲ್ಲೇ ಸಾಗಬಹುದಾಗಿದ್ದ ದಾರಿ ತೋರಿದಳು. ಕವಲಾಗಬಹುದಾಗಿದ್ದ ಮಾರ್ಗ ಅವಳತ್ತಲೇ ಸಾಗಿತ್ತು.
ಇಬ್ಬರದೂ ನೌಕರಿ, ಸಾಹಿತ್ಯದ ಆಸಕ್ತಿ, ಸಮಾನ ಮನಸ್ಕತೆ ಸಪ್ತಪದಿ ತುಳಿಸಿತ್ತು. ಹೆರಿಗೆಯ ಹೊತ್ತಿನಲ್ಲಿ ರೋಹಿಣಿ ಕೆಲಸ ಬಿಟ್ಟಳು.
ಬೇಸಿಗೆ ರಜೆಯ ನಂತರದ ಶಾಲೆಗೆ ಹೋಗುವ ಮಕ್ಕಳ ಮನಸ್ಥಿತಿಯಂತೆ, ರೋಹಿಣಿ ಆಮೇಲೆ ಕೆಲಸದ ಬಗ್ಗೆ ಆಸಕ್ತಿ ಕಳೆದು ಕೊಂಡಿದ್ದಳು.
ನನಗೆ ಆಗಲೇ ಸಿಕ್ಕ ಭಡ್ತಿಗಳಿಂದಾಗಿ ಸಂಸಾರದ ಆರ್ಥಿಕಸ್ಥಿತಿಯ ಮೇಲೆ ಅದೇನೂ ಫರಕ್ಕು ಆಗಲಿಲ್ಲ.
ಸಂಬಳ ಏರುಗತಿಯಲ್ಲಿ ಇದ್ದಂತೆ, ಜವಾಬ್ದಾರಿಗಳು ಸಮಯವನ್ನು ಬೇಟೆಯಾಡತೊಡಗಿದವು. ಅವು ಮನೆಯನ್ನೂ ಹೊಕ್ಕು‌ ನಮ್ಮಿಬ್ಬರ ಮಧ್ಯೆ ಕುಳಿತು ಬಿಟ್ಟಿತ್ತು. ಇದು ರೋಹಿಣಿಯ ಸಿಡುಕಿಗೂ ಕಾರಣವಾಗಿತ್ತು. ದಾಂಪತ್ಯವನ್ನು ಹಿಡಿದಿಟ್ಟುಕೊಂಡ ಪಾಪು ಎಂಬ ವೈರ್ ಲೆಸ್ ತಂತು ಶಾಲೆ ಸೇರಿದ ಮೇಲೆ ಅವಳು ನಿರ್ಲಿಪ್ತಳಾದಳು. ಕ್ರಮೇಣ ಉಲ್ಲಸಿತಳಾಗತೊಡಗಿದ್ದಳು.
ನಾವಿಬ್ಬರೂ ನಮ್ಮ ಆದ್ಯತೆಯ ಕನ್ನಡಿಯ ಮುಂದೆ ನಿಂತಿದ್ದೆವು. ಕಾರ್ಪೋರೇಟ್ ಹುಲಿ ಸವಾರಿ, ಏಣಿ ಮತ್ತು ಪ್ರತಿಷ್ಠೆ ನನ್ನ ಗುರಿಗಳಾಗಿ ಸ್ಥಾಪಿತವಾಗಿದ್ದವು‌. ಅವಳಿಗೆ ಅವಳ ಪ್ರೀತಿಯ ಕನ್ನಡಿ ‘ಅವನು’ ಆಗತೊಡಗಿದ್ದ. ಸೂಕ್ಷ್ಮಗಳು ಸಿಗತೊಡಗಿದ್ದವು. ಅದಕ್ಕೆ ಪೂರಕವಾದ ಪ್ರೂಫುಗಳು ಮೇಜಿನ ಮೇಲೆ ಬಂದು ಬೀಳತೊಡಗಿದ್ದವು. ಕಾಲುಭಾಗ ಮಾತ್ರ ಸೇದಿದ ಸಿಗರೇಟ್ಸ್ ಆಶ್ ಟ್ರೇ ಒಳಗೆ ಹಲವು ದಿನಗಳು ಕಾಣಿಸುತ್ತಿದ್ದವು.
ಅಧಿಕಾರ, ಅಹಂಕಾರ ಮತ್ತು ಅಮಲು ಕ್ಲೂಲೆಸ್ ಕಿಲ್ಲಿಂಗ್ ಗೆ ನನ್ನ ಅಣಿಗೊಳಿಸಿತ್ತು. ಗ್ಲೌಸು ಧರಿಸಿ ತಯಾರಾಗಿದ್ದೆ. ಮುಗಿದೇ ಹೋಗಬಹುದಾಗಿದ್ದ ಅವಳ‌ ಕಥೆಯನ್ನು ತಡೆದದ್ದು ಪಾಪುವಿನ ಅಳು. ಅದು ಪ್ರತಿಧ್ವನಿಸಿ ತಲೆ ಗುಂಯ್ ಗುಡುತ್ತ, ಬಾರಿನ ಶಟರ್ಸ್ ಎಳೆಯುವ ಹೊತ್ತಿಗೆ ಹಲವು ವರ್ಷಗಳ ನಂತರ ಒಳ ಹೊಕ್ಕಿದ್ದೆ.‌
ಈ ಹೆಂಡಕ್ಕೆ ಒಂದು ವಿಚಿತ್ರ ಫಿಲಾಸಫಿ ಕೊಡುವ ಶಕ್ತಿಯಿದೆ. ಜೊತೆಗೆ ಕ್ರಿಮಿನಲ್ ಐಡಿಯಾವನ್ನು. ಹಾಗೆ ಹೊಳೆದದ್ದು; ನನ್ನನ್ನು ಕೊಂದು, ಅವಳನ್ನು ಮಾನಸಿಕವಾಗಿ ಸುಡುವುದು. ಹೀಗೆ ತಯಾರಾಗಿದ್ದು ಈ ಆತ್ಮಹತ್ಯೆಯ ಬ್ಲೂಪ್ರಿಂಟ್. ಎಷ್ಟು ಸೆನ್ಸಿಬಲ್ ಆಗಿ ನಾನು ನನ್ನನ್ನು ಕೊಂದುಕೊಳ್ಳುತ್ತೇನೋ ಅಷ್ಟು ಅವಳು ಸೆನ್ಸಿಟಿವ್ ಆಗುವಳೆಂಬ ಯೋಚನೆ ಬಂದು ಖುಷಿಯಾದೆ.
**
ಟೀ ಅಂಗಡಿಯವನಿಗೆ ದುಡ್ಡು ಕೊಟ್ಟು ಬೈಕಿನ ಬಟನ್ ಒತ್ತುವಾಗ ಅನಿಸಿತು. ಮದಿರೆಯ ಸಹಾಯವಿಲ್ಲದೆ ಆ ಲೇಖಕ ಗೆಳೆಯ ಮಹೇಶಚಂದ್ರನನ್ನು ಎದುರಿಸುವ ಧೈರ್ಯವಾಗದು.  ನೆಚ್ಚಿನ ಪರಾಗ ಬಾರಿನತ್ತ ಗಾಡಿ ಓಡಿಸತೊಡಗಿದೆ.
ಲಾರ್ಜು ಕರುಳು ಸೇರಿದಂತೆ ಚಾರ್ಜಾದ ಮನಸ್ಸು ಮರ್ಕಟವಾಗಿತ್ತು. ಇದೇ ಸರಿ ಎಂಬ ನಿರ್ಧಾರಕ್ಕೆ ಬಂದು ಬೇಗ ಅಲ್ಲಿಂದ ಹೊರಬಿದ್ದೆ.
ಮಹೇಶನ ಮನೆ ತಲುಪುವಷ್ಟರಲ್ಲಿ ಅವನೇ ಹೊರಬಂದು ವರಾಂಡದಲ್ಲಿ ಓಡಾಡುತ್ತಿದ್ದ.
‘ಕಥೆ ಮುಗಿತು ಕಣೋ. ಫೆಂಟಾಸ್ಟಿಕ್ ಎಂಡಿಂಗ್. ಬಹಳ ತೃಪ್ತಿ ಕೊಡ್ತು ಇದು. ಈ‌ ಖುಷಿಗೆ ನಮ್ಮ ಖಾಯಂ ಅಡ್ಡಾ ಜಗದೀಶ ದಾ ಡಾಭಾಕ್ಕೆ ಹೋಗೋಣ ನಡಿ. ಒಂದು ಲಾಂಗ್ ಡ್ರೈವ್ ಕೂಡಾ ಆಗುತ್ತೆ’ ಅಂತ ಕಾರು ಹೊರ ತೆಗೆದ. ಮೈಸೂರು ರಸ್ತೆಯ ಕಡೆ ನಮ್ಮ ಪಯಣ ಸಾಗಿತ್ತು. ಪದೇ ಪದೇ ಬರುತ್ತಿದ್ದ ಕರೆಯೊಂದನ್ನು ಅವನು ಕಟ್ ಮಾಡಿದ. ಕಡೆಗೆ ಕಾಲ್ ಸ್ವೀಕರಿಸದೇ ಸೈಲಂಟ್ ಮೋಡಿಗೆ ಹಾಕಿಟ್ಟ. ಸ್ವಲ್ಪ ಹೊತ್ತಿಗೆ ಸಿಗ್ನಲ್ಲಿನಲ್ಲಿ ನಿಂತವ ಮೆಸೇಜು ನೋಡಿ ನನ್ನತ್ತ ತಿರುಗಿ
‘ಈ ಪ್ರಕಾಶಕರದ್ದು ಒಂದು ಕಾಟ ಮಾರಾಯ. ಕಾಲ್ ಮಾಡಿ ಹೇಳಿ ಬಿಡ್ತೀನಿ. ಅವರಿಗೆ ನಿನ್ನ ಬಗ್ಗೆ ಗೊತ್ತು.
‘ಹಲೋ, ನಾನು ಮತ್ತು ಆದ್ವಿಕ್ ಪಾರ್ಟಿ ಮೂಡಿನಲ್ಲಿದ್ದೇವೆ. ಆಮೇಲೆ ಕಾಲ್ ಮಾಡ್ತೀನಿ ಸರ್….. ಅದೇ.. ನಾನು ಮತ್ತು ಅದ್ವಿಕ್…ಅರ್ಥ ಮಾಡಿಕೊಳ್ಳಿ…ಹಮ್… ನೆನಪಿದೆ….’ ಮಹೇಶ ಮೊಬೈಲ್ ಕಟ್ ಮಾಡುವಾಗ ಆ ಕಡೆಯ ಧ್ವನಿ ಮಾತಾಡುತ್ತಲೇ ಇದ್ದ ಹಾಗೆ ಭಾಸವಾಯಿತು.
‘ಇವತ್ತು ಎಣ್ಣೆನೂ ನಂದೇ, ಊಟಾನೂ ನಂದೇ’ ಉಮೇದಿಯಲ್ಲಿದ್ದ‌ ಮಹೇಶ.
‘ಯಾಕೋ ಮೂಡ್‌ ಸರಿ ಇಲ್ಲ ಕಣೋ. ನಿನ್ನೆ ರಾತ್ರಿ ಮತ್ತು ಈಗ ಬರ್ತಾ ತಗೊಂಡೆ’ ‌‌ಎಂದೆ.
ಅವನು ಕೇಳಲಿಲ್ಲ.
‘ಡ್ರೈವಿಂಗ್ ನಂದು. ನಿಂಗ್ಯಾಕೆ ತಲೆಬಿಸಿ’.
‘ಬೈಕ್ ನಿಮ್ಮನೆಯಲ್ಲೇ ಇದೆ ಕಣೋ’.
‘ಅದು ಅಲ್ಲೇ ಇರಲಿ ಬಿಡು. ಓಡಿ ಹೋಗತ್ತಾ?‌ ನಾನೇ ಡ್ರಾಪ್ ಕೊಡ್ತೀನಿ, ಚಿಂತೆ ಬಿಡು’.
‘ನಂಗ್ಯಾವ ಚಿಂತೆ ದೋಸ್ತ. ಎಲ್ಲಾ ನೀನೇ‌ ಆಗಿರುವಾಗ’. ಗಂಟಲು ಸ್ವಲ್ಪ ಕೈಕೊಟ್ಟಿತು. ಕ್ಯಾಕರಿಸಿ ಸರಿಪಡಿಸಿಕೊಂಡೆ.
ಮತ್ತೆರಡು ಲಾರ್ಜ್ ಗಳ‌ ನಂತರ ನನ್ನ ಶೈಲಿ ಬದಲಾಯಿತು. ಆ ಸ್ಥಿತಿಯಲ್ಲಿಯೂ ನನ್ನನ್ನು ನಾನೇ ಗುರುತಿಸುವಷ್ಟು. ನನ್ನ ಕಣ್ಣುಗಳು ಅವನ ಕಾರಿನ ಕೀಯ ಮೇಲೆ ನೆಟ್ಟಿತ್ತು. ಇಂತಹದ್ದೊಂದು ವಿಚಿತ್ರ ಖಯಾಲಿ ಮದ್ಯದ ಬಾಟಲಿಯು ಖಾಲಿಯಾಗುತ್ತಿದ್ದಂತೆ, ಹೊಕ್ಕಳ ಆಳದಿಂದ ಏಳುತ್ತಿದ್ದುದುಂಟು.
ಓಲಾಡುತ್ತಾ ಡಾಬಾದಿಂದ ಹೊರಡುವಾಗ ಕೀ ನನ್ನ ಕೈಯಲ್ಲಿತ್ತು. ಡ್ರೈವಿಂಗ್ ಸೀಟಿನಲ್ಲಿ ನಾನಿದ್ದೆ. ಜಪ್ಪಯ್ಯ ಅಂದರೂ ನಾನು ಏಳಲಿಲ್ಲ. ಆಮೇಲೆ ಅವನ ಸಮಾಧಾನಕ್ಕೆ ‘ಟೋಲ್ ಗೇಟ್ ವರೆಗೆ ಮಾತ್ರ ಕಣೋ. ಸಿಟಿ ಲಿಮಿಟ್ಟಿನಿಂದ ಮುಂದೆ ನೀನೇ ಡ್ರೈವ್ ಮಾಡಬಹುದು’ ಅಂದೆ. ಸ್ವಲ್ಪ ಕನ್ವಿನ್ಸ್ ಆದ‌.
‘ಬಾ ಇವತ್ತು ಅಮಲು‌ ಇಳಿಯುವವರೆಗೆ ನಮ್ಮ ಅಪಾರ್ಟಮೆಂಟಿನ ಈಜುಕೊಳದಲ್ಲಿ ಈಜಾಡೋಣ’  ಅಂದೆ.
‘ನಂಗೆ ಹೈಡ್ರೋಫೋಬಿಯಾ ಅಂತ ಗೊತ್ತಿದ್ದೂ ರೇಗಿಸ್ತಿಯೇನೋ’ ಮುಖ ಜೋತು ಹಾಕಿ ಕೇಳಿದ.
ಸ್ಪೀಡಾಮೀಟರ್‌ ನೂರಿಪ್ಪತ್ತು ಚುಂಬಿಸಿ ಬಿಟ್ಟು ಮಾಡತೊಡಗಿತು. ಇನ್ನೊಂದಿಷ್ಟು ಎಕ್ಸಲೇಟರ್ ಒತ್ತುತ್ತಾ ಕೇಳಿದೆ. ‘ಡೂ ಯು ವಾಂಟ್ ಟು ಹ್ಯಾವ್ ಥ್ರೀಸಮ್..?’
ಆತನ ಮುಖ ವಿಕಾರವಾಗುತ್ತಿತ್ತು. ನನ್ನ ಮುಖದ ವಿಲಕ್ಷಣತೆಯನ್ನು ಅವನು ಗುರುತಿಸಿದ್ದನಾ ಗೊತ್ತಿಲ್ಲ.
ಅವಳ ‘ಅವನನ್ನು’ ಬಲಿ ತೆಗೆದುಕೊಳ್ಳುವ ನಿರ್ಧಾರವನ್ನು  ಗ್ಲಾಸು ಇಳಿಸಿದ ಕಾರಿನಲ್ಲಿ ನುಗ್ಗುತ್ತಿದ್ದ ಗಾಳಿ ಬದಲಿಸಿತು.
‘ದೇವರ ಆಟ ಬಲ್ಲವರಾರು…’ ಗುನುಗುನಿಸುತ್ತಿದ್ದವ ಕ್ಷಣ ಮಾತ್ರ ಬ್ಲ್ಯಾಂಕ್ ಔಟ್ ಆಗಿದ್ದೆ.
ಕಾರು ಬಲಭಾಗದ ರಸ್ತೆವಿಭಜಕಕ್ಕೆ ಡಿಕ್ಕಿ ಹೊಡೆದು, ಎಡಭಾಗದ ಸೇತುವೆಯ ಕಡೆ ಸೈಡ್ ಆನ್ ಆಗಿ ಹೋಗತೊಡಗಿತ್ತು. ಅವನು‌ ಕೂಗಿದ ಹಾಗೆ ಕೇಳಿತ್ತು. ನಾನು ಕಾರಿನಿಂದ ಹೊರಗೆ ಸಿಡಿದು ಸೇತುವೆಯಿಂದ ಮೇಲೆ ಚಿಮ್ಮಿ ಬೀಳುತ್ತಲಿದ್ದೆ.
ಕೆಳಗೆ ಅರ್ಕಾವತಿ ನದಿ ಶಾಂತವಾಗಿ ಹರಿಯುತ್ತಿದ್ದಳು.

ಮತ್ತಷ್ಟು ಸುದ್ದಿಗಳು

Latest News

‘ಮಿರ್ಜಾಪುರ್’ ಖ್ಯಾತಿಯ ನಟ ಬ್ರಹ್ಮ ಮಿಶ್ರಾ ಮೃತದೇಹ ಪತ್ತೆ!

newsics.com ಮುಂಬೈ: 'ಮಿರ್ಜಾಪುರ್' ವೆಬ್ ಸೀರೀಸ್ ನಲ್ಲಿ ಲಲಿತ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ನಟ ಬ್ರಹ್ಮ ಮಿಶ್ರಾ ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನ ವರ್ಸೋವಾದಲ್ಲಿರುವ ಅವರ ಫ್ಲಾಟ್‌ ನಲ್ಲಿ ಅರೆ...

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ,...

ಒಮಿಕ್ರಾನ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ: ಡಾ. ಅಶ್ವತ್ಥ ನಾರಾಯಣ

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸರಕಾರ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದ್ದಾರೆ. ಇಬ್ಬರ ಸಂಪರ್ಕಿತರನ್ನು...
- Advertisement -
error: Content is protected !!