ಕೆಲ ದಿನಗಳ ಹಿಂದೆ ಲೇಖಕಿ, ಯೂ ಟ್ಯೂಬರ್ ಶುಭಶ್ರೀ ಭಟ್ಟ್ ಅವರ ಲಲಿತ ಪ್ರಬಂಧಗಳ ಸಂಕಲನ ‘ಹಿಂದಿನ ನಿಲ್ದಾಣ’ ಅನಾವರಣಗೊಂಡಿತು. ಈ ಪುಸ್ತಕವನ್ನೇಕೆ ಬರೆದೆ, ಬರೆಯಲು ಪ್ರೇರಣೆ ಏನು, ಯಾತಕ್ಕಾಗಿ ಓದುಗರು ಈ ಪುಸ್ತಕ ಓದಬೇಕು ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜತೆಗೆ ಕೃತಿಯಲ್ಲಿನ ಪುಟ್ಟ ಪ್ರಬಂಧವೂ ಇದೆ.
ನಾನೇಕೆ ಪುಸ್ತಕ ಬರೆದೆ?
♦ ಶುಭಶ್ರೀ ಭಟ್ಟ
ಲೇಖಕಿ, ಯೂ ಟ್ಯೂಬರ್
newsics.com@gmail.com
ಪುಸ್ತಕ ಬರೆಯಬೇಕೆಂದು ಇದನ್ನೆಲ್ಲ ಬರೆದಿರಲಿಲ್ಲ. ಮನದಲ್ಲಿದ್ದ ಕೆಲವು ಘಟನೆಗಳಿಗೆ, ಕೆಲವು ಕಥೆಗಳಂತಹ ವಿಷಯಗಳಿಗೆ, ಇವೆಲ್ಲದರ ಕೇಂದ್ರಬಿಂದುವಾದ ನನ್ನಜ್ಜಿ ಕೊಟ್ಟ ಅಕ್ಷರಗಳಿಗೆ ಹೆರಿಗೆ ಮಾಡಿಸಬೇಕಿತ್ತು. ಅದಕ್ಕೆ ಬರೆದೆ, ಬಿಡಿ ಬಿಡಿಯಾಗಿ ಬರೆದಿಟ್ಟಿದ್ದೆ. ಅದನ್ನು ಪುಸ್ತಕ ಮಾಡುತ್ತೇನೆ ಅಂತ ಒಬ್ಬರು ಪ್ರಕಾಶಕರು ಮುಂದೆ ಬಂದಾಗ ಸ್ವಲ್ಪ ಗಂಭೀರವಾಗಿ ಬರೆದೆ. ಅದನ್ನೆಲ್ಲ ಸೇರಿಸಿ ಮುನ್ನುಡಿ-ಬೆನ್ನುಡಿಯನ್ನೆಲ್ಲ ಬರೆಸಿಕೊಂಡು, ಡಿಟಿಪಿ ಮುಖಪುಟವನ್ನೂ ಮಾಡಿಸಿ ಪುಸ್ತಕ ಬರುತ್ತದೆಯೆಂದು ಕಾದು ಕುಳಿತಾಗ ವಿಧಿಯಾಟವಾಡಿತ್ತು. ಲಾಕ್ಡೌನ್ ಇಂದ ಆ ಪ್ರಕಾಶಕರಿಗೆ ನನ್ನ ಪುಸ್ತಕ ಹೊರತರಲು ಸಾಧ್ಯವಾಗಲಿಲ್ಲ. ಬಹುಶಃ ಈ ಪುಸ್ತಕವೆಲ್ಲ ನನ್ನದಲ್ಲ ಅಂದುಕೊಂಡು ದೂರವೇ ಇದ್ದೆ. ಆದರೆ ನನ್ನ ಸ್ನೇಹಿತರು ಸುಮ್ಮನಿರಲಿಲ್ಲ, ಹಠ ಮಾಡಿ ನನ್ನ ಪುಸ್ತಕದ ಡ್ರಾಫ್ಟ್ ಅನ್ನು ವೀರಲೋಕಕ್ಕೆ ಕಳಿಸುವಂತೆ ನೋಡಿಕೊಂಡರು. ವೀರಲೋಕದ ಆಯ್ಕೆ ಸಮಿತಿ ಅದನ್ನು ಆಯ್ಕೆ ಕೂಡ ಮಾಡ್ತು. ಕನಸು ಮನಸಿನಲ್ಲಿಯೂ ಎಣಿಸಿರದ ರೀತಿಯಲ್ಲಿ, ಅದ್ಭುತ ವೇದಿಕೆಯಲ್ಲಿ ಪುಸ್ತಕ ಬಿಡುಗಡೆಯಾಯ್ತು. ಕಾರ್ಯಕ್ರಮದಲ್ಲಿ ಮುಂದೆ ಕುಳಿತ ಅಪ್ಪನ ಕಣ್ಣಲ್ಲಿ ಖುಶಿಯ ಕೋಲ್ಮಿಂಚು ನೋಡಿದ ನನಗೂ ಸಾರ್ಥಕ ಭಾವ. ಅದಕ್ಕಾಗಿ ವೀರಲೋಕ ಶ್ರೀನಿವಾಸ ಅವರಿಗೆ ನಾನು ಸದಾ ಆಭಾರಿ. ಅಂತೂ ಹೀಗೆಲ್ಲ ಪುಸ್ತಕ ಬಿಡುಗಡೆಯಾಗಿ ಮೇಲಿರುವ ನನ್ನಜ್ಜಿಗೆ ಅಂತೂ ಅಕ್ಷರದ ಅಕ್ಷತೆ ಹಾಕುವ ಯೋಗ ಕೂಡಿ ಬಂತು ಅನ್ನುವುದರೆ ಜೊತೆಗೆ ಸಾಹಿತ್ಯ ಪ್ರೇಮಿಗಳನೇಕರ ಅಕ್ಕರೆಯೂ ನನಗೆ ದಕ್ಕಿದ್ದು ಬಹಳ ಸಮಾಧಾನ ತಂದಿದೆ.
ಬರೆಯುವಾಗಿನ ಸನ್ನಿವೇಶ, ಮನಸ್ಥಿತಿ?
ಕೆಲವೊಂದು ಬರೆಯುವಾಗ ಅವಳ (ಅಜ್ಜಿ) ಬೊಚ್ಚುನಗೆ ಕಣ್ಮುಂದೆ ಹಾಯುತ್ತಿತ್ತು. ಅವಳ ಒರಟು ಕೈಯ ಸ್ಪರ್ಶಕ್ಕೆ ಮನ ಹಾತೊರೆಯುತ್ತಿತ್ತು. ಕೊಬ್ಬರಿ ಎಣ್ಣೆ, ಅಮೃತಾಂಜನ, ದಾಂಬರು ಗುಳಿಗೆ (ನುಸಿಗುಳಿಗೆ) ಎಲ್ಲವೂ ಬೆರೆತ ಕಮಟು ವಾಸನೆಯಿದ್ದರೂ ನೆಮ್ಮದಿಯ ನಿದ್ರೆ ತರುತ್ತಿದ್ದ ಅವಳ ಹಾಸಿಗೆಯಲ್ಲಿದ್ದ ಬೆಚ್ಚನೆಯ ಭಾವ ನೆನಪಾಗುತ್ತಿತ್ತು. ಕಾಡುವ ಅವಳ ನೆನಪುಗಳು, ಅವಳು ಹೇಳಿದ ಕಥೆಗಳನ್ನೆಲ್ಲ ಅಕ್ಷರಕ್ಕಿಳಿಸಿದಾಗ ಮಾತ್ರ ಎದೆಯ ಭಾರವೊಂದು ಇಳಿದಂತಾಗಿ ನಿರಾಳವಾಗುತ್ತಿದ್ದೆ.
ಇನ್ನೂ ಕೆಲವೊಂದನ್ನು ಬರೆಯುವಾಗ ಅವಳ ಕಿಟಿಕಿಟಿ ನಗುವಿನ ಅಲೆ, ತುಂಟತನದಲಿ ಕಿಚಾಯಿಸಿ ಮಳ್ಳು ನಗೆಯಾಡಿದ ಘಲ್ ಘಲ್ ಅನ್ನುವ ಶಬ್ದ ಕಿವಿಯಲ್ಲಿ ರಿಂಗಣಿಸುತ್ತಿತ್ತು. ಶತಮಡಿಯ ಅವಳನ್ನು ಬೇಕಂತಲೇ ಕೆಣಕಿ ಕಿಚಾಯಿಸುವಾಗ ಅವಳ ಹುಸಿಕೋಪವ ನೆನಪಾಗಿ ತುಟಿಯಂಚಲಿ ನಗು ಮೂಡುತ್ತಿತ್ತು. ಅವೆಲ್ಲವೂ ಅಕ್ಷರಗಳಾಗಿ ಅರಳಿದಾಗ ಒಂಚೂರು ನೆಮ್ಮದಿಯ ಭಾವ. ಒಟ್ಟಿನಲ್ಲಿ ಅವಳ ನೆನಪಿನ ಹಾಯಿದೋಣಿಯಲ್ಲಿ ಏರುತ್ತಾ-ಇಳಿಯುತ್ತ ಹಿಂದಿನ ನಿಲ್ದಾಣವ ತಲುಪಿದೆ ಎಂಬ ಬೆಚ್ಚನೆಯ ಭಾವದಲ್ಲಿ ಇದ್ದೇನೆ.
ಪ್ರೇರಣೆ ಏನು?
ಬಹುಶಃ ಅನೇಕ ಕಾರಣಗಳಿದೆ ಇದಕ್ಕೆ. ಮೊದಲ ತೊದಲು ಪ್ರಕಟವಾದಾಗ ನನ್ನಜ್ಜಿ ದಿನಾ ಸಂಜೆಮುಂದೆ ದಣಪೆಯಲ್ಲಿ ನಿಂತು ದಾರಿಯಲ್ಲಿ ಹೋಗಿ ಬರುವವರಿಗೆಲ್ಲ ‘ಏಯ್ ನೋಡಾ ನಮ್ಮನೆ ಕೂಸಿಂದ್ ಬರ (ಬರಹ) ಬಂದದೆ ಪೇಪರಲ್ಲಿ’, ‘ನಿಂಗ್ ಗುತ್ತಿದ್ದನಾ ನಮ್ಮನೆ ಶುಭಂದು ಬರ (ಬರಹ) ಬಂಜು ಪೇಪರಲ್ಲಿ’ ಎಂದು ಗಟ್ಟಿ ಸ್ವರದಲ್ಲಿ ಹೇಳುತ್ತಾ ನಿಲ್ಲುತ್ತಿದ್ದಳು. ‘ಸಾಕು ಬಾರೆ ಮಾರಾಯ್ತಿ’ ಅಂದರೂ ಕಿವಿಗೊಡದೆ ವಾರಗಟ್ಟಲೆ ಪ್ರಚಾರ ಮಾಡಿ ಊರವರ ತಲೆತಿಂದ ಖುಶಿಯಲ್ಲಿ ಮಿಂದೆದ್ದ ಅಜ್ಜಿಯ ಸಡಗರ ನನಗೆ ಮತ್ತೆ ಬರೆಯಬೇಕೆಂಬ ಪ್ರೇರಣೆ ಕೊಟ್ಟದ್ದು. ನಂತರದಲ್ಲಿ ನನ್ನ ಬರಹಗಳು ಪ್ರಕಟವಾದಾಗ, ಪತ್ರಿಕೆಯವರು ಕರೆ ಮಾಡಿದಾಗ, ಪುಟ್ಟ ಸಂಭಾವನೆ ಕಳುಹಿಸಿಕೊಟ್ಟಾಗ, ಅದನ್ನು ಜನ ಗುರುತಿಸಿದಾಗಲೆಲ್ಲ ಸಂಭ್ರಮದಲ್ಲಿ ಕಣ್ತುಂಬಿಕೊಂಡು ಮಿಂಚುಗಣ್ಣಾಗುತ್ತಿದ್ದ (ಈಗಲೂ) ಅಪ್ಪ ಮತ್ತು ಅಮ್ಮನ ಖುಶಿಯೇ ನನಗೆ ಸದಾ ಬರೆಯಲು ಪ್ರೇರೆಪಿಸುವುದು. ಇನ್ನು ನನ್ನ ಬರವಣಿಗೆಯ ಪ್ರಗತಿ ತಂಗಿ-ತಮ್ಮನಿಗೂ ಮತ್ತು ನನ್ನ ಕುಟುಂಬದವರಿಗೂ ಅದು ಹೆಮ್ಮೆಯ ವಿಚಾರ. ನಾನು ಬರೆಯುವುದನ್ನು ನೋಡಿ ‘ಅಮಾ ಹೋಂವರ್ಕ ಮಾಡ್ಕ’ ಎಂದು ಮುದ್ದಾಗಿ ಉಲಿಯುವ ಮಗನೂ ನನ್ನ ಬರವಣಿಗೆಯ ದೀವಟಿಗೆಗೆ ಆರದ ಎಣ್ಣೆ. ಮಾಲಿನಿ ಅಕ್ಕ, ಸಿಂಧೂ ಅಕ್ಕ, ಚೊಕ್ಕಾಡಿ ಸರ್, ಶ್ರೀಧರಮೂರ್ತಿಸರ್, ಕುಂಟಿನಿ ಸರ್, ಜೋಗಿ ಸರ್, ಶ್ರೀತಲಗೇರಿ, ಮೇಘನಾ, ಅಜಿತ್ ಹರೀಶಿ, ವಿಷ್ಣು ಭಟ್ ಹೊಸ್ಮನೆ, ರಾಜಕುಮಾರ ಮಡಿವಾಳರ್ ಮುಂತಾದವರ ಭರಪೂರ ಪ್ರೀತಿಯೂ, ನನ್ನ ಕಥೆಕೂಟ, ಕಾವ್ಯಕೇಳಿ ಕುಟುಂಬಸ್ಥರ ಅಕ್ಕರೆಯ ಪ್ರೋತ್ಸಾಹವೂ, ಅಭಿರುಚಿ, ನುಡಿತ, ಕಲಾಬಳಗ, ಪಾರಿಜಾತ ಪರಿವಾರದ ಸದಸ್ಯರೆಲ್ಲರ ಮಮತೆಯೂ ನನಗೆ ಬರೆಯಲು ಸ್ಪೂರ್ತಿ. ಕಳೆದವಾರ ಅಷ್ಟು ದೊಡ್ಡ ವೇದಿಕೆಯಲ್ಲಿ ಅನೇಕ ದಿಗ್ಗಜರ ಸಮ್ಮುಖದಲ್ಲಿ ನನ್ನ ಚೊಚ್ಚಲ ಪುಸ್ತಕವನ್ನು ಧೈರ್ಯದಿಂದ ಬಿಡುಗಡೆ ಮಾಡಿ ಮತ್ತೆ ಬರೆಯುತ್ತಲೇ ಇರಬೇಕೆಂಬ ಆಸೆಯನ್ನು ಬಲವಾಗಿಸಿದ ವೀರಲೋಕ ಶ್ರೀನಿವಾಸ ಸರ್ ಮತ್ತು ತಂಡ ನನಗೆ ಬರೆಯುವುದಕ್ಕೆ ಮತ್ತಷ್ಟು ಪ್ರೇರಣೆ. ಹಾಗೆಯೇ ಈಗೀಗ ಬಿಡುವಿಲ್ಲದ ಕೆಲಸದ ನಡುವೆ ಬರೆಯಲು ಅಕ್ಷರವೆ ಸಿಗದೆ ಒದ್ದಾಡುವಾಗ ಕರೆ ಮಾಡಿ ಲೇಖನ ಬರೆಸಿಕೊಳ್ಳುವ ವಿದ್ಯಾರಶ್ಮಿ ಮೇಡಂ (ವಿಜಯ ಕರ್ನಾಟಕ), ರೂಪಶ್ರೀ ಕಲ್ಲಿಗನೂರು (ಕೆಂಡಸಂಪಿಗೆ), ಪರಮೇಶ್ವರ್ ಭಟ್ (ನ್ಯೂಸಿಕ್ಸ್.ಡಾಟ್.ಕಾಂ) ಇವರೆಲ್ಲರ ಪ್ರೇರಣೆಯೂ ನಾನು ಬರೆಯುತ್ತಲೇ ಇರಲು ಪ್ರೇರಣೆ. ಕೊನೆಯದಾಗಿ ಬರವಣಿಗೆ ನನಗೆ ನನ್ನೆದೆಯ ಹಳವಂಡಗಳನ್ನು ಹೊರಹಾಕುವ ಸಾಧನವಾದ್ದರಿಂದ. ಬರೆದಷ್ಟು ಹಗುರಾಗಿ ಬದುಕಲು ಕಾರಣವಾಗುವ ಬರವಣಿಗೆ ನನಗೆ ಅತೀ ದೊಡ್ಡ ಪ್ರೇರಣೆ.
ಪುಸ್ತಕದಲ್ಲೇನಿದೆ?
ಪುಸ್ತಕದಲ್ಲಿ ನಾ ಕಳೆದ ಸುಂದರ ಬಾಲ್ಯವಿದೆ, ಅದು ಕೇವಲ ನನ್ನದಲ್ಲದೇ ನಿಮ್ಮದೂ ಆಗಿರಬಹುದು. ಅಲ್ಲೊಬ್ಬ ಅಬ್ಬೆಯೆಂಬ ಪುಸ್ತಕದ ಮಳ್ಳಿರುವ ಅಜ್ಜಿಯಿದ್ದಾಳೆ, ಅವಳು ಪಡಿಪಾಟಲು ಪಟ್ಟ ಕಥೆಯಿದೆ, ಅಂತಹುದೇ ಅಜ್ಜಿಯೂ ನಿಮ್ಮವಳೂ ಆಗಿರಬಹುದು. ಹೀಗೆ ಅಜ್ಜಿಯ ಬಾಯಲ್ಲಿ ನಾ ಕೇಳಿದ, ನಾನೇ ನೋಡಿದ ಅನೇಕ ಮುಗ್ದಜೀವಗಳ ಕಥೆಯಿದೆ. ಎಲ್ಲವನ್ನೂ ನಾನೇ ಹೇಳಿಬಿಟ್ಟರೆ ಸ್ವಾರಸ್ಯವೆಲ್ಲಿ ಉಳಿತದೆ? ಅದನ್ನು ನೀವೂ ಓದಿ, ಆ ಅನುಭವಗಳನ್ನು ನಿಮ್ಮದಾಗಿಸಿಕೊಂಡರೆ ನನಗೂ ಸಂತೋಷ.
ಯಾವ ವರ್ಗದ ಜನ ಓದಲೇಬೇಕು?
ನಾನು ಬರೆಯುವಾಗ ಯಾವುದೋ ವರ್ಗದ ಓದುಗರಿಗಾಗಿಯೋ, ಯಾವುದೋ ಪಕ್ಷ ಪಂಗಡಗಳ ಓದುಗರಿಗಾಗಿಯೋ ಖಂಡಿತ ಬರೆಯಲಿಲ್ಲ. ಮೊನ್ನೆ ನಮ್ಮೂರಿನಲ್ಲಿ ನನ್ನ ಪುಸ್ತಕವ ಓದಿದ ವೈದ್ಯರೊಬ್ಬರು “ಇದನ್ನು ಮಕ್ಕಳೂ ಸಹ ಓದಬಹುದು ಶುಭಶ್ರೀ, ಇದಕ್ಕೆ ಪಂತಿಭೇದವಿಲ್ಲ” ಎಂದು ಹೇಳಿದಾಗ ನನಗೂ ಸಮಾಧಾನವಾಯ್ತು. ಹೀಗಾಗಿ ಮಕ್ಕಳಿಂದ ಹಿಡಿದು ಓದಲು ಆಸಕ್ತಿಯಿರುವ ವೃದ್ದರ ತನಕ ಯಾರೇ ಓದಬಹುದು ಎಂಬುದು ನನ್ನ ಅಭಿಪ್ರಾಯ.
ಪುಸ್ತಕ ಖರೀದಿ ಹೇಗೆ?
ಪುಸ್ತಕವನ್ನು ವೀರಲೋಕ ಪ್ರಕಾಶನದವರು ಬಹಳ ಅಚ್ಚುಕಟ್ಟಾಗಿ ಕಳುಹಿಸಿಕೊಡ್ತಾರೆ. ಯಾರಿಗಾದರೂ ಈ ಪುಸ್ತಕ ಓದಬೇಕು ಅಥವಾ ಈ ಪುಸ್ತಕವನ್ನು ಉಡುಗೊರೆ ಕೊಡಬೇಕು ಅನಿಸಿದರೆ ವೀರಲೋಕದವರನ್ನು ಸಂಪರ್ಕಿಸಿ ಅವರು ವಾರದೊಳಗೆ ಪುಸ್ತಕ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.
ಅವರ ದೂರವಾಣಿ ಸಂಖ್ಯೆ: 7022122121
————
ಪುಸ್ತಕದ ಆಯ್ದ ಭಾಗ
ಕರಿ ಕೂದಲ (ವ್ಯಾ)ಮೋಹ
ಅವಳಿಗೆ ತನ್ನ ತುಂಬು ತಲೆಗೂದಲಿನ ಮೇಲೆ ವಿಪರೀತ ಮೋಹ. ಚಿಕ್ಕವಳಿದ್ದಾಗಿನಿಂದ ಕರುಳ ಬಳ್ಳಿಯನ್ನು ಪೋಷಿಸುವ ತಾಯಂತೆ ಶಿರಬಳ್ಳಿಯನ್ನು ಆರೈಕೆ ಮಾಡುತ್ತಿದ್ದಳಂತೆ. ಮೈನೆರೆಯದೆಯೇ ಮದುವೆಯಾಗಿ ಗಂಡನ ಮನೆಗೆ ಬಂದು ತಲೆಭಾರದ ಹೊರೆ ಕೆಲಸಗಳ ನಡುವೆಯೇ ಕೂದಲ ಪೋಷಣೆ ತಪ್ಪಿಸಿರಲಿಲ್ಲ ಅವಳು. ಮೂರು-ನಾಕು ವರುಷದ ನಂತರ ಬಂಜೆಪಟ್ಟ ಕಳೆದು ಸಾಲು-ಸಾಲಾಗಿ ಮೂರು ಮುತ್ತನ್ನು ಹೆತ್ತ ಬಾಣಂತನದಲ್ಲಿ ಉದುರಿದ ಕೂದಲನ್ನು ಕಂಡೂ ಕಣ್ಣೀರಿಕ್ಕುತ್ತಿದ್ದಳಂತೆ. ಬಾಣಂತನದ ನಂತರ ಚಿಗುರೊಡೆಯತೊಡಗಿದ ಕೂದಲ ಬೇರನ್ನು ಕಂಡು ಕಣ್ಣಲ್ಲಿ ಖುಶಿಯ ನವಿಲು ಕುಣಿಸಿಕೊಂಡು ನಲಿಯುತ್ತಿದ್ದವಳಿಗೊಂದು ತತ್ತರಿಸುವ ಆಘಾತವೊಂದು ಕಾದಿತ್ತು. ಅವಳ ಬಡ ಬದುಕಿನ ಒಲವಿನಾಸರೆಯ ಜೀವಸಖ ಪಟ್ಟಿಗದ್ದೆಯ ಅರಲೊಳಗೆ ಜಾರಿಬಿದ್ದು, ಮೂಗೊಳಗೆಲ್ಲ ಅರಲು ಸೇರಿ ಸರಿಯಾದ ಪ್ರಥಮ ಚಿಕಿತ್ಸೆಯೂ ದೊರೆಯದೇ ಅಸುನೀಗಿದ್ದ. ತನ್ನೊಡೆಯ ಕೃಷ್ಣನನ್ನು ಕಳೆದುಕೊಂಡ ಅವನೊಡತಿ ನೋವು ಸಹಿಸಲಾರದೇ ಬಾವಿಗೆ ಹಾರಿಯೇ ಬಿಟ್ಟಿದ್ದಳು. ಆದರೆ ಅವಳ ಆಯುಷ್ಯಬಲದಿಂದ ಯಾವುದೋ ಊರ ಪುಣ್ಯಾತ್ಮನ ಸಮಯೋಚಿತ ಬುದ್ಧಿಯಿಂದ ಬಾವಿಯಿಂದ ರಕ್ಷಿಸಲ್ಪಟ್ಟಳು. ಅಂದೆನಾದರೂ ಅಚಾತುರ್ಯವಾಗಿದ್ದರೆ ನಾನಿಂದು ದಣಪೆಯೊಳಗಣ ಅಕ್ಷರಮೋಹಿ ಸಾವಿತ್ರಬ್ಬೆಯ ಸಾಂಗತ್ಯದಿಂದ ವಂಚಿತಳಾಗಿ ಬೆಳೆಯಬೇಕಿತ್ತು.