Saturday, January 28, 2023

‘ರತಿಯ ಕಂಬನಿ’ ಕೆನ್ನೆಗಿಳಿದು ಕರೆಗಟ್ಟುವ ಮುನ್ನ…

Follow Us


♦ ನಂದಿನಿ ಹೆದ್ದುರ್ಗ
newsics.com@gmail.com

ಹೂದಳದ ತುದಿಯಲ್ಲಿ
ಹೊಯ್ದಾಡಿದ ಎಳೆಬೆಳಕ
ಕೋಲು ನೀನು
ಪಟಗುಡುವ ಚಿಟ್ಟೆ ಹುಟ್ಟಿಸಿದ
ಲುಟುಪುಟು ಸದ್ದು ನಾನು…
‘ಎಲ್ಲವೂ ಸರಿ ಇದ್ದರೆ ನಾನು ಇನ್ನೆನೋ ಆಗುತ್ತಿದ್ದೆ’ ಎಂದುಕೊಳ್ಳುವ ಹೊತ್ತಿನಲ್ಲೇ ಸರಿ ಇಲ್ಲದ ಎಲ್ಲವೂ ಎದೆಯೊಳಗೆ ಹದವಾಗಿ ಕುದಿ ಬಂದು ಇನ್ನೂ ತಾಳಲಾರೆ ಎನ್ನುವಾಗೆಲ್ಲಾ ಉಕ್ಕುತ್ತದೆ.
ಹೀಗೆ ಉಕ್ಕಿದ್ದು ಹಾಳೆಯೊಳಗೆ ಮೊಳೆತು ಬೆಳೆದು ನನ್ನ ನಾಳೆಗಳಿಗೆ ಬೆಳಕಾಗುತ್ತದೆ ಎಂಬರಿವು ಅಷ್ಟು ವರ್ಷದ ಹಿಂದೆಯೇ ಇದ್ದಿದ್ದರೆ ಎಂಬಿತ್ಯಾದಿ ಉತ್ತರವಿಲ್ಲದ ಅಸಂಬದ್ಧ ಪ್ರಶ್ನೆಗಳು ನನ್ನ ಹಾದು ಹೋಗುವಾಗೆಲ್ಲಾ ಸುಮ್ಮನೆ ಮುಗುಳ್ನಗುವೆ.
ಅಪ್ಪ ಅಮ್ಮನಿಂದ ಬಳುವಳಿಯಾಗಿ ಬಂದ ಕೃಷಿ ಜೀನ್ಸಿನ ತಾಯಿ ಬೇರು ನನ್ನಾಳದ ಆಳಕ್ಕೆ ಇಳಿದು ಇನ್ನಿಲ್ಲದ ಉತ್ಸಾಹದಲ್ಲಿ ಕಾಫಿತೋಟ ನಿಭಾಯಿಸ ಹೊರಟವಳಿಗೆ ‘ಸುಟ್ಟಲ್ಲದೇ ಮುಟ್ಟೇನು’ ಎಂಬುವಂತೆ
‘ಇನ್ನಾರು ತಿಂಗಳು ನೀನೇ ತೋಟಕ್ಕೆ ಹೋದರೆ ಒಂದಾಳೂ ಬರಂಗಿಲ್ಲ ನೋಡು’ಅಂತ ದೊಡ್ಡ ದನಿಯಲ್ಲಿ ಗದರಿ ಮನೆವಾರ್ತೆಗೆ ಮೀಸಲಿಟ್ಟಿದ್ದು ಮನೆಯವರು.
ಹಠ ಹಿಡಿದು ಹಸು ಸಾಕಿದವಳನ್ನು ಕಾಲ ಕವಲು ದಾರಿ ತೋರಿಸಿ ‘ಇದೋ..ಈ ಬದಿಗೆ ಹೊರಳು. ಬೆಳಕಿದೆ ಇಲ್ಲಿ ‘ ಎಂದು ಕರೆದಿತ್ತು.
ಈಗ..
ಈ ಹೊತ್ತಿನಲ್ಲಿ ಯಾವುದಕ್ಕೆ ಋಣಿಯಾಗಲಿ ನಾನು.?
ಕಾಲಕ್ಕಾ..ಕಾಲ ಹೆಣೆದ ಜಾಲಕ್ಕಾ?
ಬಾಳು ತೋರಿದ ಕರುಣೆ ಕೌರ್ಯಗಳೆಲ್ಲವೂ ಹದಗೊಂಡು ಕವಿತೆಯಾದ ಹೊತ್ತಾವುದು ಎಂದರೆ ಉತ್ತರವಿಲ್ಲ ನನ್ನಲ್ಲಿ.
‘ಕವಿತೆ ಬರೆಯುವಾಗ ನೀನು ಬಹಳ ಚಂದ’ಎಂದ ಯಾವುದೋ ಒಂದು ಧ್ವನಿ ನನ್ನ ಬರಹದ ಬನಿ.
‘ನೀವಿರುವ ಪರಿಸರವೇ ಕವಿತೆ ಬರೆಸುತ್ತದೆ’
ಎನ್ನುವ ಮಾತು ಕೇಳಿದಾಗೆಲ್ಲಾ ನಾನು ತಬ್ಬಿಬ್ಬಾಗುತ್ತೇನೆ.
ನನ್ನ ಕಾಫಿ ತೋಟ, ಹಸಿರು ವನರಾಶಿ,ಕೆರೆಕಟ್ಟೆ,ಶಾಂತ ತೃಪ್ತ ಪರಿಸರ,ಅಮ್ಮನ‌ ಮನೆಯೆಂಬ ಮೂರು ಬೆಟ್ಟದ ತಪ್ಪಲಿನ ಸ್ವರ್ಗ,ನಾಕು ಹೆಜ್ಜೆ ಇಟ್ಟರೆ ಸಿಕ್ಕುವ ಲೋಕದ ಅತಿ ದೈವೀಕ ಚೆಲುವಿನ ಪಾರ್ವತಮ್ಮನ ಬೆಟ್ಟ…
ಇದಾವುದೂ ಇಲ್ಲೀವರೆಗೆ ನನ್ನಿಂದ ಒಂದು ಸಾಲೂ ಬರೆಸಿಲ್ಲ.
ನನ್ನ ಅಟ್ಟದ ಪುಟ್ಟ ಕೋಣೆಯಲ್ಲಿ ವರ್ಷವಿಡೀ ಸಹಬಾಳ್ವೆ ನಡೆಸುವ ಪಣತೊಟ್ಟ ಪುಟಾಣಿ ಕಂಬಳಿ ಹುಳುಗಳು ನನ್ನ ‘ಬರವಣಿಗೆಯ ಹೊತ್ತಿನ ಸಂಗಾತಿಗಳು’
ಜೀವಮಾನವಿಡಿ ನಿನ್ನ ಬಿಟ್ಟುಹೋಗೆವೆಂಬ ಈ ಕರಿಕರಿಜೀವಿಗಳು ನನ್ನ ಭಾವಕೋಶದೊಳಗೆ ಬುಳಬುಳ ಓಡಾಡಿ ಸ್ವಸ್ಥ ಜಾಗ ಹುಡುಕಿ ಕೋಶ ಕಟ್ಟುತ್ತವೆ.ಅವು ಚಿಟ್ಟೆಯಾಗುವ ಹೊತ್ತಿನಲ್ಲಿ ನಿಮ್ಮಂಗಳದ ಹೂದೋಟಕ್ಕೆ ಬಿಟ್ಟುಕೊಟ್ಟಿದ್ದೇನೆ.
‘ಎಷ್ಟು ಕೊಡುತ್ತಾರೆ ಒಂದು ಕವಿತೆಗೆ’ಎಂಬ ಪರಿಸರದಲ್ಲಿರುವ ನಾನು ಕವಿತೆಗೆ ಕಾಸು ಹುಟ್ಟುವುದಿಲ್ಲ ಎಂದಾಗ ಪಕಪಕ ನಕ್ಕವರಿದ್ದಾರೆ.
‘ಹೊತ್ತು ಹೋಗಲು ಗೀಚುವುದೇ’ ಎಂಬ ಮಾತಿಗೆ ಉತ್ತರಿಸುತ್ತಾ ‘ಹೊತ್ತು ಓಡುವ ವೇಗಕ್ಕೆ ಬೆರಗಾಗಿದ್ದೇನೆ ಇತ್ತಿಚೆಗೆ’ ಎಂದರೆ ಅಚ್ಚರಿಗೊಳ್ಳುತ್ತಾರೆ.
ಹೇಗಿದ್ದೀರಾ ಎನ್ನುವ ಲೋಕಾರೂಢಿ ಪ್ರಶ್ನೆಗೆ ಬಹಳ ಸುಖವಾಗಿದ್ದೇನೆ ಎಂದುತ್ತರಿಸುವಾಗ ನನ್ನ ಸ್ವರದ ಪ್ರಾಮಾಣಿಕತೆ ‌ನನಗೆ ಖುಷಿ‌ಕೊಟ್ಟಿದೆ.
ಕವಿತೆ ನನಗೆಲ್ಲವನ್ನೂ ಕೊಟ್ಟಿದೆ.
ಹಾಗಿದ್ದರೂ ಕಾವ್ಯವೆಂದರೆ ಏನು.?
ಒಂದೇನಾದರೂ ಬರೆದಾದ ಮೇಲೆ ಇದು ಕವಿತೆಯಾಗಿದೆಯಾ ಎನ್ನುವ ನನ್ನ ಸಂದೇಹಕ್ಕೆ ಉತ್ತರಿಸಿಕೊಳ್ಳಲು ಮೊದಲ ದಿನದಂತೇ ಪೇಚಾಡುತ್ತೇನೆ.ಬರೆದಾದ ಮೇಲೆ ಬಹುಶಃ ಇದು‌ ನನ್ನ ಕೊನೆಯ ಕವಿತೆಯಿರಬಹುದು ಎಂಬಾತಂಕ ಹುಟ್ಟಿ ಬೆವರುತ್ತೇನೆ.ಬರೆದ ಕವಿತೆಯನ್ನು ನನ್ನ ಗುರುಗಳಿಗೆ‌ ಕಳಿಸಿ ಕಾಯುವಾಗೆಲ್ಲಾ ಕಾಲ ನಿಧಾನವಾಗುತ್ತದೆ ನನ್ನ ಪಾಲಿಗೆ.ಸಿಗಬಹುದಾದ ಬೈಗುಳಗಳ ಎದುರು ನೋಡುತ್ತಿದ್ದಾಗಲೇ ಅಲ್ಲಲ್ಲಿ ಹೊಗಳಿಕೆಯ ಕೋಲ್ಮಿಂಚು ನನ್ನ ಬದುಕಿಸಿಕೊಳ್ಳುತ್ತದೆ.
ಆದರೆ…
ಕವಿತೆ ಕಳೆದುಹೋದ ಹೊತ್ತಿನಲ್ಲಿ ವ್ಯಸ್ತೆ ನಾನು.
ಸಾಲೊಂದು ಮೂಡದೇ ಹೋದರೆ ನನ್ನ ಸುಖ ಕಾಣೆಯಾಗುತ್ತದೆ.
ಬರೆದ ಅದದೇ ಭಾವಗಳು ಮತ್ತೆಮತ್ತೆ ಕವಿತೆಯಾಗಲು ತವಕಿಸುವಾಗಲೂ ತಳ್ಳದೆ ಒಳಗೊಳ್ಳುತ್ತೇನೆ.
ಹಾಗಿದ್ದರೂ
” ಕವಿತೆ ..ಬಿಟ್ಟು ಹೋಗದಿರು ಮತ್ತೆ”ಎಂದು ಮುದ್ದುಗದರುತ್ತಲೇ ಯಾಕಿಷ್ಟು ಹಚ್ಚಿಕೊಳ್ಳಬೇಕಿತ್ತು ಎಂಬ ಕಳವಳವೂ ಎದಿರಾಗಿದೆ.
ಕವಿಗೋಷ್ಠಿಗೆ ಆಯ್ಕೆ ಬಂದಾಗ,ಪತ್ರಿಕೆಗಳು ಕವಿತೆ ಕೇಳಿದಾಗ,ವಿಷಯ ಕೊಟ್ಟು ಕವಿತೆ ಕೇಳಿದಾಗ ನಾನು ಇಲ್ಲಿವರೆಗೂ ಒಂದೂ ಚಂದದ ಕವಿತೆಯನ್ನೇ ಬರೆದಿಲ್ಲ ಎಂಬರಿವಾಗಿ ಅಹಮ್ಮು ಒಡೆಯುತ್ತದೆ.
ನನ್ನ ಒಲುಮೆಗೆ ಹುಟ್ಟಿಕೊಂಡ ಪದ್ಯಗಳಾವುದನ್ನೂ ನಾನು ಅನಾಥವಾಗಿಸಿಲ್ಲ.
ಬರೆದದ್ದೆಲ್ಲವೂ ಲೋಕಕ್ಕೆ ತೋರಬೇಕಿಲ್ಲ.
ಸತ್ಯ.
ಆದರೆ,ಅತ್ತ ಕವಿತೆಗಳನ್ನು,ಹಠ ಹಿಡಿದ ಕವಿತೆಗಳನ್ನು ಆಡಿಕೊಳ್ಳಲು ಅಟ್ಟುತ್ತೇನೆ.
ಇನ್ನೂ ಉಪ್ಪುತುಪ್ಪ ಬೇಕೆನ್ನುವವು ಮಡಿಲಲ್ಲೇ ಇವೆ.
ಹೊಳೆವ ಕವಿತೆ ಎಂದವರ ನೆರಳಿಗೇ ಹೊಸತೇನಿಲ್ಲದ ಕವಿತೆ
ಎನಿಸಿಕೊಂಡಿದ್ದೂ ಇದೆ.ಹೊಗಳಿದಷ್ಟೇ ತೆಗಳಿದವರೂ ನನ್ನ ಹಾದಿಯ ಬೆಳಕಾಗಿದ್ದಾರೆ.
”ಇನ್ನೂ ಎಷ್ಟು ಕಾಲ ‘ಅವನ’ ಕವಿತೆಗಳನ್ನೇ ಬರೆಯುತ್ತೀ” ಎಂದು ನನ್ನ ಕವಿ ಮಿತ್ರಮಿತ್ರೆಯರು ಕಾಲೆಳೆದಾಗೆಲ್ಲಾ ಪ್ರೇಮ‌ ನನ್ನ ಕವಿತೆಗಳಲ್ಲಿ ಇಳಿಯುವ ಪರಿಗೆ ಋಣಿಯಾಗಿದ್ದೇನೆ.
‘ಮತ್ತೆ ಮೊದಲಿನ ಸಂಕಲನದಂತೆ ನಿನ್ನ ಸುತ್ತಲೇ ಸುತ್ತಿದ್ದೀಯಾ’
ಎಂದು ನಿಮ್ಮಂಗಳಕ್ಕೆ ಬಂದ ಚಿಟ್ಟೆ ಚಾಡಿ ಹೇಳಿದರೆ ನನ್ನಾಣೆ.ಕೊನೆಯ ಸತ್ಯವೊಂದಿದೆ.
ಇಲ್ಲಿರುವ ಯಾವ ಕವಿತೆಗಳೂ ನಾನು ಬರೆದವು ಎನ್ನಲು ದಿಗಿಲಿದೆ ನನಗೆ.
‘ಕಾಲ ಬರೆಸಿದ ಕವಿತೆಗಳು’ ಇವು.
ಒಡತಿಯೆಂದು ನನ್ನ ಮೀಸಲಿಟ್ಟಿವೆ ಅಷ್ಟೇ.

……………
ಭಾನುವಾರ (ಸೆ.19) ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಎನ್.ಆರ್. ಕಾಲೊನಿಯ ಬಿಎಂಶ್ರೀ ಸಭಾಭವನದಲ್ಲಿ ಕವಯತ್ರಿ, ಲೇಖಕಿ ನಂದಿನಿ ಹೆದ್ದುರ್ಗ ಅವರ ‘ರತಿಯ ಕಂಬನಿ’ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ.

ಮತ್ತಷ್ಟು ಸುದ್ದಿಗಳು

vertical

Latest News

ನಟ ನಂದಮೂರಿ ತಾರಕ ರತ್ನ ಬೆಂಗಳೂರಿಗೆ ಶಿಫ್ಟ್

newsics.com  ವಿಜಯವಾಡ: ತೀವ್ರ ಅಸ್ವಸ್ಥರಾಗಿರುವ ನಟ ನಂದಮೂರಿ ತಾರಕ ರತ್ನ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅವರನ್ನು ದಾಖಲಿಸಲಾಗಿದೆ. ಆಂಧ್ರ...

ಗಣರಾಜ್ಯೋತ್ಸವದಿನದಂದು ಪ್ರಧಾನಿ ಮೋದಿಯ ರಕ್ಷಣೆ ಹೊಣೆ ಹೊತ್ತ ಮಂಗಳೂರಿನ ಐಪಿಎಸ್ ಅಧಿಕಾರಿ

newsics..com  ಮಂಗಳೂರು: ಜನವರಿ 26ರಂದು ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಹಿಂದೆ ನಿಂತು ಎಲ್ಲವನ್ನು ಹದ್ದು ಕಣ್ಣಿನಿಂದ ವೀಕ್ಷಿಸುತ್ತಿದ್ದ ಪೊಲೀಸ್ ಅಧಿಕಾರಿ ಮೂಲತ: ಮಂಗಳೂರಿನವರು. ಮಾಜಿ ಮೇಯರ್ ಶಂಕರ್ ಭಟ್...

ನನಗೆ ನಿದ್ದೆ ಬರುತ್ತಿದೆ, ದಯವಿಟ್ಟು ರೈಡ್ ಕ್ಯಾನ್ಸಲ್ ಮಾಡಿ ಎಂದ ಉಬರ್ ಚಾಲಕ

newsics.com ಬೆಂಗಳೂರು: ವೆಬ್ ಆಧಾರಿತ ಸೇವೆ ನೀಡುವ ಕಾರು ಚಾಲಕರು ದಿನದ 24 ಗಂಟೆಯೂ ಅಲರ್ಟ್ ಆಗಿರುತ್ತಾರೆ. ಕೆಲವೊಮ್ಮೆ ಇಲ್ಲದ ಕಾರಣ ನೀಡಿ ಅಂತಿಮ ಕ್ಷಣದಲ್ಲಿ ರೈಡ್ ಕ್ಯಾನ್ಸಲ್ ಮಾಡುತ್ತಾರೆ. ಇದು...
- Advertisement -
error: Content is protected !!