Tuesday, July 5, 2022

‘ಲೇಖ ಮಲ್ಲಿಕಾ’ ಸಂಕಲನದಲ್ಲೇನಿದೆ?

Follow Us


♦ ಸುಮಾವೀಣಾ

ಉಪನ್ಯಾಸಕರು, ಬರಹಗಾರರು
newsics.com@gmail.com

‘ಲೇಖ ಮಲ್ಲಿಕಾ’ ಸಾಹಿತ್ಯಾತ್ಮಕ ಲೇಖನಗಳನ್ನು ಒಳಗೊಂಡ ಕೃತಿ ಸೆ.24ರಂದು ಬಿಡುಗಡೆಯಾಗಲಿದೆ. ಇಂದಿನ ದಿನಗಳಲ್ಲಿ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆ ಎಂಬುದೆಲ್ಲ ಮೇಲು ಮಾತು ಅನ್ನಿಸುತ್ತದೆ. ತಂತ್ರಜ್ಞಾನದ ನೆರವಿನಿಂದ ಸಾಹಿತ್ಯವನ್ನು ಆಸ್ವಾದಿಸುವ ಅನೇಕ ಮಾರ್ಗಗಳು ಈಗ ತೆರೆದುಕೊಂಡಿವೆ. ಈ ಕಾರಣದಿಂದ ಸಾಹಿತ್ಯವನ್ನು ಅನುಸಂಧಾನಿಸುತ್ತಿರುವರು ಸಾಹಿತ್ಯದ ವಿದ್ಯಾರ್ಥಿಗಳೇ ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರಗಳವರೂ ಇದ್ದಾರೆ. ಬರೆಯುತ್ತಿದ್ದಾರೆ ಕೂಡ.

“ಹೂಗಳು” ಬರೆ ನೋಡುವುದಕ್ಕಲ್ಲ! ಮುಡಿಯುವುದಕ್ಕಲ್ಲ! ಅದರಾಚೆಗೂ ನಮ್ಮ ಪ್ರಾಚೀನ ಕವಿಗಳು ಬೇರೆ ಬೇರೆ ಸಂದರ್ಭಕ್ಕೆ ಅನ್ವಯವಾಗುವಂತೆ ಹೂಗಳ ಹೆಸರುಗಳನ್ನು ಹೇಗೆ ಬಳಸಿಕೊಂಡಿದ್ದಾರೆ? ಆ ಮೂಲಕ ತಮ್ಮ ಭಾವನಾ ಲಹರಿಯನ್ನು ಕೃತಿಗಳ ಮೂಲಕ ಅನಾವರಣ ಮಾಡುವ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ನೋಡಿ ನನ್ನ ಬರಹವೆಂಬ ಕಿರುಬುಟ್ಟಿಯಲ್ಲಿ ತುಂಬಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ನಮ್ಮ ಜಾನಪದ ಸಾಹಿತ್ಯದಲ್ಲಂತೂ ಮೊದಲಿಗೆ ಮಲ್ಲಿಗೆಯ ಹೆಸರೇ ಕೇಳಿ ಬರುವಂಥದ್ದು ಸಂಸ್ಕೃತದಲ್ಲಿ ‘ಮಲ್ಲಿಕಾ’ ಕನ್ನಡಕ್ಕೆ ತದ್ಭವವಾದಾಗ ‘ಮಲ್ಲಿಗೆ’ ಆಗುತ್ತದೆ ಮತ್ತೆ ಮತ್ತೆ ಹೆಸರು ಕೇಳಿ ಬಂದಿರುವುದಕ್ಕೂ ಮೈಸೂರು ಮಲ್ಲಿಗೆಗೆ ಜಿ.ಐ ಟ್ಯಾಗ್ ಸಿಕ್ಕಿರುವುದಕ್ಕೂ ಎಲ್ಲೋ ನಮ್ಮ ನೆಲದ ಕಂಪು ಇನ್ನಷ್ಟು ಭದ್ರವಾಗಿದೆ ಅನ್ನಿಸಿತು. ಇಂದಿನ ಚಿಂತೆ ಮಾತ್ರವಲ್ಲದೆ ದೂರದೃಷ್ಟಿ ಕೂಡ ಇರಬೇಕು ಇಲ್ಲವಾದರೆ ಯಾವ ರೀತಿ ಅನಾಹುತಗಳು ಮನುಕುಲದ ವಿನಾಶಕ್ಕೆ ನಾಂದಿ ಹಾಡುತ್ತವೆ ಎಂಬುದನ್ನು ರನ್ನ ಕವಿಯ ಗದಾಯುದ್ಧ ಕೃತಿಯನ್ನು ಕುರಿತಾದ ಬರಹದಲ್ಲಿ ಬರೆದಿದ್ದೇನೆ.

ಕನ್ನಡದ ಮೊದಲ ಗದ್ಯ ಕೃತಿ ‘ವಡ್ಡಾರಾಧನೆ’ಯಲ್ಲಿ ಬರುವ ‘ಕಾರ್ತಿಕ ಋಷಿಯ ಕಥೆ’ “ಈಡಿಪಸ್ ಕಾಂಪ್ಲೆಕ್ಸನ್ನು” ಉಳ್ಳದ್ದು . ಅಂದಿನಿಂದ ಇಂದಿನವರೆಗೂ ಸಿಗ್ಮಂಡ್ ಫ್ರಾಯ್ಡ್ ಹೇಳಿದ ಮನಃಶಾಸ್ತ್ರಕ್ಕೆ ಸಂಬಂಧಿಸಿದ ಈ ಪರಿಭಾಷೆ ಕಾಲ ಬದಲಾದರೂ ಇದ್ದೇ ಇದೆ ಅದನ್ನು ಪಿ.ಕೆ. ರಾಜಶೇಖರ್ ಸಂಪಾದಿಸಿರುವ ‘ಪಿರಿಯಾಪಟ್ಟಣ ಕಾಳಗ’ ಮತ್ತು ಒ.ಎಲ್. ನಾಗಭೂಷಣ ಸ್ವಾಮಿಯವರ ‘ಕೆಂಪು ಮುಡಿಯ ಹೆಣ್ಣು’ ಕೃತಿಗಳನ್ನು ಇರಿಸಿಕೊಂಡು ಚರ್ಚಿಸುವ ಪ್ರಯತ್ನ ಮಾಡಿದ್ದೇನೆ.

ಜಾನಪದ ಸಾಹಿತ್ಯದಲ್ಲಿ “ಮಳೆ ನಕ್ಷತ್ರ”ಗಳನ್ನು ಅದೆಷ್ಟು ಚಂದ ಉಲ್ಲೇಖಿಸಿದ್ದಾರೆ! ಇಪ್ಪತ್ತೇಳು ಮಳೆನಕ್ಷತ್ರಗಳಿಗೂ ಅನ್ವಯವಾಗುವಂಥ ಗಾದೆಗಳನ್ನು ಒಟ್ಟು ಮಾಡುವುದರ ಜೊತೆಗೆ ಅವರ ಬವಣೆಯನ್ನೂ ಚಿಕ್ಕದಾಗೆ ಚರ್ಚಿಸಿದ್ದೇನೆ. ಆ ಕಾಲದಲ್ಲೇ ಸಾಹಿತ್ಯ ಪ್ರಕಾಶಕಿಯಾಗಿದ್ದ “ಅತ್ತಿಮಬ್ಬೆ”ಯ ವಿಚಾರವೂ ಇಲ್ಲಿದೆ. ಆಪ್ತಸಮಾಲೋಚನೆ ಎಂಬ ಪರಿಭಾಷೆ ಹೊಸದಲ್ಲ ನಾಗವರ್ಮನ ಕಾಲಕ್ಕೆ ಇದ್ದದ್ದು. ಶುಕನಾಸ ಎಂಬ ಮಂತ್ರಿ ರಾಜಕುಮಾರನಿಗೆ ಮಾಡುವ ಉಪದೇಶ ಇಂದಿಗೂ ಪ್ರಸ್ತುತ ವಯಸ್ಸಿನ ಅಹಮಿಕೆಯಲ್ಲಿ ತಂದೆತಾಯಿಗಳಿಗೆ ದುಃಖವನ್ನೆ ಕೊಡುತ್ತಿರುವ ಯುವಕರನ್ನು ಮನಸ್ಸಿನಲ್ಲಿರಿಸಿಕೊಂಡು ಲೇಖನವನ್ನು ಸಿದ್ಧಪಡಿಸಿದೆ. ನಮ್ಮ ಹಿರಿಯರು ಒಲೆ ಊಟ ಹಾಗುಎಲೆ ಊಟ ಸ್ವೀಕರಿಸಿ ಆರೋಗ್ಯವಾಗಿದ್ದರು. ಆದರೆ ನಾವು ವಿಷವೆಂದು ಗೊತ್ತಿದ್ದರೂ ವಿಷಯುಕ್ತ ಪ್ಲಾಸ್ಟಿಕ್ ಹಾಳೆಗಳನ್ನು ರಾಸಾಯನಿಕಯುಕ್ತ ಬಾಯಿ ರುಚಿಕೊಡುವ ಆಹಾರಕ್ಕೆ ಒಗ್ಗಿಕೊಂಡಿದ್ದೇವೆ . ಆದರೆ ಸರ್ವಜ್ಞ ದೇಸಿ ಆಹಾರ ಪದ್ಧತಿಯಲ್ಲಿರುವ ಗಮ್ಮತ್ತನ್ನು ತ್ರಿಪದಿಗಳ ಮೂಲಕ ಅವುಗಳನ್ನು ಬರಹದ ಮೂಲಕ ಓದುಗರನ್ನು ತಲುಪಿಸಿದ್ದೇನೆ.

“ವಚನಸಾಹಿತ್ಯ” ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ಎನ್ನುತ್ತಾರೆ. ಇವುಗಳು ಎಲ್ಲಾ ಕಾಲಕ್ಕೂ ಅನ್ವಯವಾಗುವಂಥದ್ದು ಇದರಲ್ಲಿ ವೈಚಾರಿಕತೆಯ ಹೂರಣದ ಜತೆಗೆ ಆದರ್ಶದ ಮಿಂಚೂ ಇದೆ. ಇವುಗಳನ್ನು ಅಕ್ಕಮಹಾದೇವಿ, ಅಕ್ಕನಾಗಮ್ಮನವರ ಕುರಿತಾದ ಲೇಖನದಲ್ಲಿ ಮತ್ತು ಭಾರತೀಯ ಸ್ವಾತಂತ್ರ್ಯ ಚರಿತ್ರೆಯ ಮುಂಬೆಳಕಾಗಿದ್ದ ಗಾಂಧಿ ಮತ್ತು ಶಾಸ್ತ್ರಿಯವರ ವಿಚಾರಧಾರೆಯೊಡನೆ ನೋಡಿದ್ದೇನೆ. ನಮ್ಮಲ್ಲಿ ಇಗೋಯಿಸಮ್ ಹೆಚ್ಚು. ಶ್ರೇಷ್ಠ ಕನಿಷ್ಟತಮ, ನಿಕೃಷ್ಟ ಭಾವನೆಗಳೇ ಎಷ್ಟೋ ಸಂದರ್ಭದಲ್ಲಿ ನಮ್ಮ ನೆಮ್ಮದಿ ಹಾಳು ಮಾಡುತ್ತಿವೆ. ಇದಕ್ಕೆ ನಮ್ಮ ಜಾನಪದ ಖಂಡಕಾವ್ಯದಲ್ಲಿಯೇ ಸುಳುಹು ಸಿಗುತ್ತದೆ. ಅದನ್ನು ‘ಉತ್ತರದೇವಿ’ಯ ಕಥೆಯೊಡನೆ ಅವಲೋಕಿಸಲು ಯತ್ನಿಸಿದ್ದೇನೆ. ಡಿವಿಜಿಯವರು ಎಂದರೆ ಮಂಕುತಿಮ್ಮನ ಕಗ್ಗದ ಮೂಲಕವೇ ಪರಿಚಿತರು. ಅವರ ಇನ್ನೊಂದು ಕೃತಿ ‘ಅಂತಃಪುರಗೀತೆ’ಗಳು ಕಲಾ ಲೋಕದಲ್ಲಿರುವವರಿಗೆ ಈ ಕೃತಿಯ ಪರಿಚಯವಿರುತ್ತದೆ ಆದರೆ ಕಲಾ ಲೋಕದಲ್ಲಿ ಆಸಕ್ತಿ ಇರುವವರಿಗೂ ಕೃತಿಯ ಪರಿಚಯವಾಗಬೇಕು ಜತೆಗೆ ಶಿಲ್ಪಗಳನ್ನು ಕೆತ್ತಿರುವ ಕವಿ ನವರಸಗಳನ್ನು ಒಡಮೂಡಿಸಿದ್ದಾನೆ. ಜತೆಗೆ ಡಿವಿಜಿಯವರು ಆ ಶಿಲ್ಪಗಳಿಗೆ ಹೊಂದಿಕೆಯಾಗುವಂತೆ ಹೇಗೆ ಸುಂದರವಾಗಿ ಬಿಡಿ ಕವಿತೆಗಳನ್ನು ಹೊಂದಿಸಿ ನೋಡುವ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ನೋಡುವ ಕಿರು ಪ್ರಯತ್ನವನ್ನು ಎರಡು ಲೇಖನಗಳಲ್ಲಿ ಮಾಡಿದ್ದೇನೆ.
ಕುವೆಂಪು, ಕೆ.ಎಸ್.ನ, ಜಿ.ಎಸ್ ಎಸ್ , ವೈದೇಹಿಯವರ ಬರಹಗಳು ಇಲ್ಲಿವೆ. ಅವರ ಸಾಹಿತ್ಯ ಸಾಧನೆ ಕುರಿತು ಬರೆಯುವುದು ಕಷ್ಟ ಸಾಧ್ಯ. ಓದಿದಷ್ಟೂ ನಿತ್ಯ ಹೊಸ ಹೊಳಹು ಮೂಡುತ್ತದೆ. “ಬೊಗಸೆ ಕಿರಿದು ಸಾಗರ ಹಿರಿದು” ಎಂಬಂತೆ ಅವರುಗಳ ಕುರಿತು ಕಿರಿದಾದ ನನ್ನ ಅಧ್ಯಯನ ವ್ಯಾಪ್ತಿಗೆ ಹೊಳೆದ ವಿಚಾರವನ್ನು ಓದುಗರ ಮುಂದೆ ಇಡುವ ಪ್ರಯತ್ನ ಮಾಡಿದ್ದೇನೆ. ಕುವೆಂಪುರವರ ವಿಚಾರಧಾರೆ ಇಂದಿಗೂ ಪ್ರಸ್ತುತ ಎಂಬ ಬರಹಕ್ಕೆ 2020ನೇ ಸಾಲಿನಲ್ಲಿ ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯಿಂದ ಆಯೋಜಿಸಲ್ಪಟ್ಟಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.
ಅಮ್ಮಂದಿರು ಎಂದರೆ “ಸುಖಸ್ವರೂಪಿಣಿಯರು” ಅಮ್ಮನ ಸ್ಥಾನ ನಿಭಾಯಿಸುವಾಗ ತನ್ನ ಮಕ್ಕಳು ಇತರ ಮಕ್ಕಳು ಎಂಬ ಭೇದ ಮಾಡಿದರೆ ಅನಾಹುತಗಳು ಘಟಿಸುತ್ತವೆ ಎಂಬುದನ್ನು ಸಾ.ರಾ. ಅಬೂಬಕರ್ ಅವರ ಕಥೆ ವಿವರಿಸುತ್ತದೆ. ನಾವೇನೇ ಮಾಡಿದರೂ ನಮಗೆ ಏನೇ ಸಿದ್ಧಿಸಿದರೂ ಅದು ಸರದಿಯಾನುಸಾರವೇ. ಸರದಿಯ ಎಂಬ ವಿಧಿಯ ಆಣತಿಯನ್ನು ಮೀರಲು ಸಾಧ್ಯವಿಲ್ಲ ಎಂಬುದನ್ನು ಕೃತಜ್ಞತೆ ಮನುಷ್ಯನಿಗಿರಬೇಕಾದ ಮೂಲ ಸಂಸ್ಕಾರ ಎಂಬುದನ್ನು ಪಂಪಭಾರತದ ಒಂದು ಪದ ಮತ್ತು ಜಾನಪದ ತ್ರಿಪದಿಗಳ ಮೂಲಕ ಅನುಸಂಧಾನಿಸಿದ್ದೇನೆ. ಮೊದಲೆ ಹೇಳಿದಂತೆ ಈ ಬರಹಗಳು ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಬೇರೆ ಬೇರೆ ಸ್ಟ್ರೀಮಿನವರಿಗೂ ದಕ್ಕಬೇಕು ಎಂಬ ಅಭಿಲಾಷೆಯಿಂದ ಆದಷ್ಟು ಸರಳವಾಗಿ ಬರೆಯಲು ಯತ್ನಿಸಿದ್ದೇನೆ.

ಮತ್ತಷ್ಟು ಸುದ್ದಿಗಳು

vertical

Latest News

ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ವರ್ಗಾ

newsics.com ಬೆಂಗಳೂರು: ಅಕ್ರಮಗಳ ಅಡ್ಡೆ ಎಂಬ ಕುಖ್ಯಾತಿಗೆ ಒಳಗಾಗಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ಅವರನ್ನು ವರ್ಗಾ ಮಾಡಲಾಗಿದೆ. ರಂಗನಾಥ್ ವಿರುದ್ಧ ಹಲವು ಆರೋಪಗಳು ಕೇಳಿ...

ಸಿಎಂ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಪ್ರಕರಣ: ಸಂಸದ ತೇಜಸ್ವಿ ಸೂರ್ಯ ವಿಚಾರಣೆ

newsics.com ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ. ದೆಹಲಿಯ ಅಶೋಕ್ ರಸ್ತೆಯಲ್ಲಿರುವ ಸಂಸದ ತೇಜಸ್ವಿ...

ದೇಶದಲ್ಲಿ ಹೊಸದಾಗಿ 13,086 ಕೊರೋನಾ ಸೋಂಕು ಪ್ರಕರಣ, 24 ಮಂದಿ ಸಾವು

newsics.com ನವದೆಹಲಿ: ದೇಶದಿಂದ ಕೊರೋನಾ ತೊಲಗಿಲ್ಲ. ಜನರ ನಿರ್ಲಕ್ಷ್ಯದಿಂದ ಮತ್ತೆ ವಕ್ಕರಿಸಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 13,086 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 12, 456 ಮಂದಿ...
- Advertisement -
error: Content is protected !!