Monday, March 1, 2021

ವನಸುಮಗಳ ನೋವು ನಲಿವಿನ ಡೇರಿಯಾ

  ‘ಕಾಡ ಕಸ್ತೂರಿ’ಯ ಬೆನ್ನತ್ತಿ…  

ಜೋಯ್ಡಾ, ಅದ್ಭುತ ಊರು. ಹಸಿರಿನ ತವರು. ಉತ್ತರ ಕನ್ನಡ ಜಿಲ್ಲೆಯ ಅತಿ ಹಿಂದುಳಿದ ತಾಲೂಕು. ಈ ತಾಲೂಕಿನ ಊರುಗಳೆಲ್ಲವೂ ನಗರ ಸಂಸ್ಕೃತಿಯಿಂದ ಬಲು ದೂರ ದೂರ. ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಕೆಲ ಕಾಲವಾದರೂ ದೂರ ಇರಬೇಕೆಂದರೆ ಈ ತಾಲೂಕಿನತ್ತ ಮುಖ ಮಾಡಬೇಕು. ಇಂಥ ಪ್ರದೇಶದಲ್ಲಿ ಕುಣಬಿ ಸಮುದಾಯ ಕಟ್ಟಿಕೊಂಡ ಬದುಕು, ಸಂಸ್ಕೃತಿ ಅಚ್ಚರಿ, ಅನನ್ಯ. ಈ ಕುಣಬಿ ಸಮುದಾಯದ ಒಳ ಹೊರಗನ್ನು ತೆರೆದಿಡುವ ಪುಸ್ತಕ ಕಾಡ ಕಸ್ತೂರಿಯನ್ನು ಪತ್ರಕರ್ತ, ಸೃಜನಶೀಲ ಬರಹಗಾರ ಧಾರವಾಡದ ಪ್ರಸನ್ನ ಕರ್ಪೂರ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕ ಜೋಯ್ಡಾದ ಡೇರಿಯಾದಲ್ಲಿ ಫೆ.14 ರಂದು ಲೋಕಾರ್ಪಣೆಗೊಳ್ಳಲಿದೆ. ಈ ನಿಟ್ಟಿನಲ್ಲಿ ಡೇರಿಯಾ ಸುತ್ತ ಒಂದು ನೋಟ.
  ಬುಕ್ ಲೋಕ  

♦ ಡಾ. ಮಹಾಂತೇಶ ಬಿರಾದಾರ, ವಿಜಯಪುರ

newsics.com@gmail.com

 ನಾ ವಿಂದು 21ನೇ ಶತಮಾನದಲ್ಲಿದ್ದೇವೆ. ಮಾತೆತ್ತಿದರೆ ಡಿಜಿಟಲ್ ಕ್ರಾಂತಿ, ಕೈಗಾರೀಕರಣ ನೆಪದಲ್ಲಿ ಅಭಿವೃದ್ಧಿಯ ಭ್ರಾಂತಿ ಮಧ್ಯೆ ಜೀವಿಸುತ್ತಿದ್ದೇವೆ. ಆದರೆ ಇಂದಿಗೂ ನಮ್ಮ ದೇಶದಲ್ಲಿ ಅದೆಷ್ಟೋ ಜನಾಂಗಗಳು ಸಮಾಜದ ಮುಖ್ಯವಾಹಿನಿಗೆ ಬಂದೇ ಇಲ್ಲ ಎನ್ನುವುದು ಮತ್ತು ತರುವ ಪ್ರಾಮಾಣಿಕ ಯತ್ನವೂ ನಡೆದಿಲ್ಲ ಎನ್ನುವುದು ವಿಪರ್ಯಾಸ.
ನಿಜವಾದ ಮಣ್ಣಿನ ಮಕ್ಕಳು ಎಂದು ಕರೆಸಿಕೊಳ್ಳಲು ಯೋಗ್ಯತೆ ಹೊಂದಿರುವ ಕಾಡಿನ ತಪ್ಪಲಲ್ಲಿ ಇದ್ದರೂ ಸ್ಪಂದನಶೀಲ ಗುಣದೊಂದಿಗೆ ಸಾಂಸ್ಕೃತಿಕ ಸಿರಿವಂತಿಕೆ, ಪಾರಂಪರಿಕ ಜ್ಞಾನದ ಭಂಡಾರವನ್ನೇ ಹೊತ್ತ ಅನೇಕ ಸಮುದಾಯಗಳು ನಮ್ಮ ಸುತ್ತಮುತ್ತ ಇವೆ. ಇವರ ಬದುಕು ನಿಸರ್ಗದ ಕೊಡುಗೆ. ಪ್ರಕೃತಿ ಮಾತೆಯ ಮಡಿಲಲ್ಲಿ ನಿತ್ಯಹರಿದ್ವರ್ಣದ ಕಾಡಿನ ನಿತ್ಯ ಒಡನಾಡಿಗಳಿವರು. ಇವರ ಸಂಪ್ರದಾಯ, ಹಿನ್ನೆಲೆ, ಆಚರಣೆ ಎಲ್ಲವೂ ವಿಭಿನ್ನ, ವಿಶಿಷ್ಟ ಹಾಗೂ ಸ್ವಾರಸ್ಯಕರ.
ಇವರು ನಮ್ಮವರೇ. ಪರಂಪರಾನುಗತವಾಗಿ ನಮ್ಮ ಸಂಸ್ಕೃತಿಯ ರಕ್ಷಕರು. ಆದರೆ ನಮ್ಮ ಮಧ್ಯೆ ಇದ್ದೂ ಅವರು ಬಹುಪಾಲು ಜನರಿಗೆ ಅಪರಿಚಿತರು. ಮಣ್ಣಿನ ಮಕ್ಕಳಾಗಿದ್ದರೂ ನೆಲದ ಒಡೆಯರಾಗಿರದ ಅತಂತ್ರರು. ಇವರೇ ಕುಣಬಿ ಎಂಬ ಬುಡಕಟ್ಟು ಸಮುದಾಯದವರು. ದಟ್ಟ ಕಾಡಿನಲ್ಲಿ ಇರುವ ಇವರಿಗೆ ಅಂಟಿದ್ದು ದಟ್ಟ ದಾರಿದ್ರ್ಯ.
ಅರಣ್ಯರೋದನ…
ಸಂವಿಧಾನಬದ್ಧ ಬುಡಕಟ್ಟು ಮಾನ್ಯತೆ ಸಿಗದೆ ಇಂದಿಗೂ ಕಾಡುವಾಸಿಗಳಾಗಿ, ಮೂಲಸೌಕರ್ಯ ವಂಚಿತರಾದ ಕುಣಬಿ ಸಮುದಾಯ ದೇಶದ ವಿವಿಧೆಡೆ ವಿವಿಧ ರಾಜ್ಯಗಳಲ್ಲಿ ಹಂಚಿ ಹೋಗಿದ್ದು, ಅವರನ್ನು ಒಗ್ಗೂಡಿಸಲು, ಅವರ ಸಂಸ್ಕೃತಿ ಎತ್ತರಿಸಲು ಹಾಗೂ ಏಳ್ಗೆಗಾಗಿ ಈ ಸ್ಪಂದನಶೀಲ ಜನಾಂಗದ ಅಭಿವೃದ್ಧಿಗೆ ದುಡಿಯುಲು ತಾವು ದೇಶಪ್ರೇಮಿ ಭಾರತವಾಸಿಗಳಾಗಿ ಆದಿವಾಸಿಗಳ ಹಕ್ಕು ಸ್ಥಾಪಿಸಲು ಮುಂದಾಗುತ್ತಿದ್ದಾರೆ. ಆದರೆ ಇದು ಅರಣ್ಯರೋದನವಾಗಿದೆ.
ದೇಶದ ವಿವಿಧೆಡೆ ಹಬ್ಬಿಕೊಂಡಿರುವ ಈ ಕುಣಬಿ ಸಮುದಾಯದಂತೆ ಬಹಳಷ್ಟು ಸಮುದಾಯಗಳು ಮಾನವಶಾಸ್ತ್ರೀಯ ಅಧ್ಯಯನದ ಪ್ರಕಾರ ಈಗಲೂ ತಮ್ಮನ್ನು ಬುಡಕಟ್ಟೆಂದು ಪರಿಗಣಿಸಲು ಸಂವಿಧಾನಬದ್ಧ ಸೌಲಭ್ಯಗಳು ಸಿಗಬೇಕೆಂದು ಒತ್ತಾಯಿಸುತ್ತಿದ್ದರೂ ಸಂಬಂಧಪಟ್ಟ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಂಥ ಕಾನೂನುಬದ್ಧ ಬೇಡಿಕೆಗಳನ್ನು ಈಡೇರಿಸಿಲ್ಲ.
ಸಸ್ಯರಾಶಿಯ ಬೀಡು…
ಅದು ದಟ್ಟ ಕಾಡು, ಅಪಾರ ಸಸ್ಯರಾಶಿಯ ಬೀಡು, ಹುಲಿ.. ಚಿರತೆ.. ಕಾಡು ನಾಯಿಗಳ ತಾಣ. ಎಲ್ಲೆಲ್ಲೂ ಹಚ್ಚಹಸಿರು ದಾರಿಯ ಇಕ್ಕೆಲಗಳಲ್ಲಿ ಹಸಿರು ಹೊದ್ದ ಪರ್ವತಶ್ರೇಣಿ. ಅಲ್ಲಲ್ಲಿ ಕಾಣುವ ಭತ್ತದ ಗದ್ದೆಗಳು, ಮಳೆ ಮಧ್ಯೆಯೇ ಭತ್ತ ನಾಟಿ ಮಾಡುವ ಜನರು ಅಪರಿಚಿತರಾದರೂ ಕಂಡೊಡನೆ ಪ್ರೀತಿಯಿಂದ ಮಾತನಾಡಿಸುವ ಅಕ್ಕರೆಯ ಜನರ ಜೀವನಶೈಲಿ ಎಂಥವರಲ್ಲಿಯೂ ಉತ್ಸಾಹ ಪುಟಿದೇಳಿಸುತ್ತದೆ.
ಬಹುತೇಕರಿಗೆ ಗೊತ್ತಿಲ್ಲದ ಜಲಪಾತಗಳಿರುವ ಪಶ್ಚಿಮಘಟ್ಟದ ಸಾಲಿನಲ್ಲಿರುವ ರಮಣೀಯ ಪರ್ವತ ಶ್ರೇಣಿ ಆಹ್ಲಾದಕರ ಪರಿಸರದಲ್ಲಿ ಹಚ್ಚು ಹಸಿರಿನ ದಟ್ಟ ಕಾಡಿನೊಳಗೆ ಒಬ್ಬರೇ ನಡೆಯುತ್ತ ಹೊರಟರೆ ಸಿಗುವ ಸಂತಸ ಅವರ್ಣನೀಯ. ದಿನ ಬೆಳಗಾದರೆ ಮೊಬೈಲ್ ಸದ್ದು ಇಲ್ಲವೇ ವಾಹನಗಳ ಕರ್ಕಶ ಕೇಳಿ ಸಾಕಾಗಿ ಏಕಾಂತ ಬಯಸುವ ವ್ಯಕ್ತಿಗಳಿಗೆ ಇಷ್ಟಪಡೋದು ಈ ಪ್ರಕೃತಿ ಸೌಂದರ್ಯ ಮತ್ತು ಕಾಡಿನ ಮೌನ.
ಮೌನದ ಮದ್ಯದ ಹಸಿರನ್ನು ಕಣ್ತುಂಬಿಸಿಕೊಳ್ಳುತ್ತಾ ಸಾಗಿದರೆ ಮೈಮರೆಯುವುದು ಖಚಿತ. ಮಂದವಾದ ಮಳೆ ಮೋಡಗಳು ಎಂಥವರ ಮನದಲ್ಲೂ ಭಾವನೆಗಳನ್ನು ತೂರಿಸಿ ಜೀವರಸವನ್ನು ದಾರಿ ಮಧ್ಯೆ ಹಸಿರೆಲೆಗಳು ಮುಖಕ್ಕೆ ಮುತ್ತಿಕ್ಕುತ್ತವೆ. ಮೈ ಮನಸ್ಸು ಪ್ರಕೃತಿಯ ಈ ಸಿರಿ ನೋಡಿ ಕುಣಿದು ಭೂದೇವಿಗೆ ನಮಿಸುತ್ತದೆ.
ಡೇರಿಯಾ ಎಂಬ ಸುಂದರಿಯ ಸೌಂದರ್ಯ ವರ್ಣನಾತೀತ. ಪದಗಳಿಗೆ ಸೀಮಿತಗೊಳಿಸಲಾಗದು. ಅಂಥ ಚೆಲುವು ಅವಳದು. ಒಮ್ಮೆ ಇವಳನ್ನು ನೋಡಿದರೆ ಸಾಕು, ನವಿಲಿನ ನಡಿಗೆ ಹಂಸದ ಹೊಳಪಿನಲ್ಲಿ ಸದಾ ಕಣ್ಣಮುಂದೆ ಬಂದು ನಿಲ್ಲುತ್ತಾಳೆ. ಹಸಿರು ತೊಟ್ಟ ಈ ಚೆಲುವೆಯ ಒಡಲಲ್ಲಿ ಶ್ರಮದ ಜೀವನ ನಡೆಸುತ್ತಿರುವ ಕುಣಬಿಗಳ ಜೀವನಶೈಲಿ ಆತಿಥ್ಯದ ಪರಿ ಎಂಥವರನ್ನೂ ಬೆರಗುಗೊಳಿಸುತ್ತದೆ. ಬಡತನದಲ್ಲಿಯೂ ಉಕ್ಕುವ ಜೀವನೋತ್ಸಾಹ. ಹೃದಯ ಸಾಂಸ್ಕೃತಿಕ ಸಿರಿತನ ಅನನ್ಯ.
ಸಂತಸ ಅಪರಿಮಿತ…
ಡೇರಿಯಾ ಅದ್ಭುತ ಊರು. ನೆಲಜಲ ಪ್ರೀತಿಯ ಪರಿಸರ ಪ್ರೇಮಿಗಳು, ಚಿಂತಕರು ಇಷ್ಟಪಡುವ ಗ್ರಾಮವೂ ಇದು. ಇಲ್ಲಿನ ಕೃಷಿ ಸಂಸ್ಕೃತಿಯಲ್ಲಿರುವ ನೈತಿಕತೆ, ಸಹಬಾಳ್ವೆ ಮತ್ತು ಬದ್ಧತೆ ಎಲ್ಲೂ ಸಿಗದು. ಸ್ವಾವಲಂಬನೆ, ಸುಸ್ಥಿರ ಬದುಕಿನ ಹತ್ತಾರು ದಾರಿಗಳು ಇಲ್ಲಿವೆ. ಕಾರ್ಪೋರೇಟ್ ಜಗತ್ತಿನ ಕಬಂಧಬಾಹುವಿನ ಕಾಕದೃಷ್ಟಿಗೆ ಈ ಗ್ರಾಮ ಬಿದ್ದಿಲ್ಲ. ಹಣದ ಆಸೆಗೆ ಜೋತು ಬಿದ್ದು ಊರು ತೊರೆದು ಊರಿನ ಬೇರು ಕಳಚಿಕೊಳ್ಳಲು ಇಲ್ಲಿನ ಯುವಕರು ಸಿದ್ಧರಿಲ್ಲ ಎನ್ನುವುದು ಹೆಮ್ಮೆಯ ಸಂಗತಿ.
ಸಹಜ ನೀರು, ಸಹಜ ಹಾಗೂ ಶುದ್ಧ ಗಾಳಿ, ಸಹಜ ಅನ್ನ ತಿಂದು ಜೀವನ ಸಾಗಿಸುತ್ತಿರುವ ಕೊನೆಯ ತಲೆಮಾರು ಇದು ಎಂದರೂ ಉಪೇಕ್ಷೆಯಾಗದು. ಕಷ್ಟ, ಸವಾಲು, ಬಡತನ, ಹಸಿವು, ಮುಗ್ಧತೆ ಮಧ್ಯೆ ಹುಟ್ಟದ ಇಲ್ಲಿನ ಜನರ ಜೀವಪರ ಮನಸ್ಥಿತಿ ನಿಜಕ್ಕೂ ಅನುಕರಣೀಯ. ಬದಲಾವಣೆಯ ಸರಮಾಲೆಯ ವೇಗದ ಗಾಳಿ ಈ ಹಳ್ಳಿಗೆ ಇನ್ನೂ ಸೋಕಿಲ್ಲ. ಸಹಜತೆ ಮತ್ತು ಸರಳತೆಯನ್ನು ಅಪ್ಪಿಕೊಂಡು ಒಪ್ಪಿಕೊಂಡು ಬದುಕು ಸಾಗಿಸುತ್ತಿರುವ ಈ ಕುಣಬಿಗಳ ಕಾಡುಪ್ರೀತಿ ಅಪರೂಪ ಮತ್ತು ಅನನ್ಯ.
ಬೆಳೆ- ಬೆಲೆ ಸ್ಥಿತ್ಯಂತರ, ಕಾಡುಪ್ರಾಣಿಗಳ ಕಾಟ, ಜಾಗತಿಕ ತಾಪಮಾನ, ಕೂಲಿ ಕಾರ್ಮಿಕರ ಕೊರತೆ ಹೀಗೆ ಅನೇಕ ಸಮಸ್ಯೆಗಳ ಮಧ್ಯೆ ಮನೆಗೆ ಬಂದವರನ್ನೆಲ್ಲಾ ಸಂತೈಸುವ ಎಲ್ಲೂ ಸಂಕಷ್ಟಗಳನ್ನು ತೋಡಿಕೊಳ್ಳದೇ ಸುಸ್ಥಿರ ಬದುಕಿನ ಜೀವದಾರಿಯಲ್ಲಿ ಸಾಗುತ್ತಿದೆ.
ಕೃಷಿ ಆಧರಿತ ಜೀವನಶೈಲಿ ನೆಲದ ಮೂಲ ಸಂಸ್ಕೃತಿಯನ್ನು ಕಾಣುತ್ತಿರುವವರು ಇವರು. ಕುಟುಂಬ ಸಂಬಂಧ, ಹಬ್ಬಗಳ ಆಚರಣೆ, ವಿಶಿಷ್ಟ ಆಹಾರ ಪದ್ಧತಿ, ವೇಷ ಭೂಷಣ, ಜನಪದ ನಂಬಿಕೆಗಳು, ಗಿಡಮೂಲಿಕೆ, ಸಸ್ಯ ಪ್ರಾಣಿ ಸಂಬಂಧಗಳು ಹೀಗೆ ಎಲ್ಲವೂ ಸುವ್ಯವಸ್ಥೆಯ ಚೌಕಟ್ಟಿನಲ್ಲಿ ಇರುವುದು ವಿಶೇಷ. ಆಧುನಿಕತೆಯ ಸೆಳೆತ ಎಷ್ಟೇ ಇದ್ದರೂ ಈ ಗ್ರಾಮದ ಯುವಕರು ದೇಹ ಮತ್ತು ಮನಸ್ಸನ್ನು ತಮ್ಮೂರಿನ ನೆಲದಲ್ಲಿ ಇಟ್ಟುಕೊಂಡವರು. ಕೃಷಿಯೊಂದೇ ಸತ್ಯ ಉಳಿದದ್ದು ಮಿಥ್ಯ ಎಂಬ ನಗ್ನ ಸತ್ಯ ಅರಿತು ಬಾಳಬಂಡಿಯ ನೊಗ ಹೊತ್ತವರಿವರು.
ಮಾದರಿ ಬದುಕು…
ಬದುಕಿನ ವಾಸ್ತವದ ದರ್ಶನ ಮಾಡಿಸಿದ ಕೊರೋನಾಗೆ ನಾವೆಲ್ಲಾ ಥ್ಯಾಂಕ್ಸ್ ಹೇಳಲೇಬೇಕು. ಆತ್ಮವಿಮರ್ಶೆಗೆ ದಾರಿ ಮಾಡಿಕೊಟ್ಟ ಈ ಕಾಯಿಲೆ ನೀಡಿದ ಕಾಣಿಕೆಯಿಂದ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿದೆ. ಕಣ್ಣಿಗೆ ಕಾಣದ ಈ ವೈರಸ್ ಇಡೀ ಜಗತ್ತನ್ನು ಕತ್ತಲೆಗೆ ತಳ್ಳಿದೆ. ನಾವು ಅಂದುಕೊಂಡಿರುವ ಸಾಧನೆ, ಸಂಶೋಧನೆ, ಅಭಿವೃದ್ಧಿ ಎಲ್ಲವೂ ಇದೆರೆದುರು ಮಖಾಡೆ ಮಲಗಿದೆ. ಕೊಳ್ಳುಬಾಕ ಸಂಸ್ಕತಿ, ದುಂದುವೆಚ್ಚವೇ ಜೀವನಸುಖ ಅಂದುಕೊಂಡವರ ಲೆಕ್ಕಾಚಾರ ಬುಡಮೇಲಾಗಿದೆ. ನಮ್ಮ ವೇಗಕ್ಕೆ ಬ್ರೇಕ್ ಬಿದ್ದಿದೆ. ಆದರೆ ಇದರ ಎಫೆಕ್ಟ್ ಗ್ರಾಮಗಳಲ್ಲಿ ಕಂಡುಬಂದದ್ದು ತುಂಬಾ ಕಡಿಮೆ. ಇದಕ್ಕೆ ಉತ್ತಮ ನಿದರ್ಶನ ಡೇರಿಯಾ ಗ್ರಾಮ.
ಈ ಹಳ್ಳಿಯ ಮನೆಯಂಗಳದಲ್ಲೀಗ ಸೌಹಾರ್ದ ಹಾಗೂ ಅವಿಭಕ್ತ ಕೌಟುಂಬಿಕ ಜೀವನದ ಸೊಗಡು ಕಾಣುತ್ತಿದೆ. ಸಂಬಂಧ ಸಹವಾಸಗಳ ಮಧ್ಯೆ ಸ್ವಯಂ ಶಿಸ್ತು ಬಂದಿದೆ. ನಗರಗಳು ಕುಲಗೆಡುವುದನ್ನು ನೋಡಿದ್ದ ಇಲ್ಲಿನ ಜನ ಎಚ್ಚೆತ್ತುಕೊಂಡಿದ್ದಾರೆ. ಗ್ರಾಮದ ಕೆಲವರು ಉದ್ಯೋಗ ಬಯಸಿ ನಗರಕ್ಕೆ ಹೋದರೂ ಊರಿನ ನಂಟು ಬಿಟ್ಟಿಲ್ಲ. ಪರಿಸ್ಥಿತಿ ಕೈಮೀರುವ ಮುನ್ನವೇ ಸ್ವಗ್ರಾಮಕ್ಕೆ ತೆರಳಿದ್ದಾರೆ. ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಳ್ಳಿಯ ಮಣ್ಣೇ ಪರಮಸುಖ ಎಂದರಿತು ಬಾಳುತ್ತಿದ್ದಾರೆ. ನಾಗರಿಕ ಜಗತ್ತಿನ ಪಾಲಿಗೆ ಅಜ್ಞಾತರಾಗಿ ಇದ್ದೂ ಇಲ್ಲದಂತೆ ಬದುಕುವ ಈ ವನಕುಸುಮಗಳ ಜೀವನಶೈಲಿ ಎಲ್ಲರಿಗೂ ಮಾದರಿ.

————-
ಕಾಡ ಕಸ್ತೂರಿ…
ಜೊಯಿಡಾ ತಾಲೂಕು ಕುಣಬಿ ಅಭಿವೃದ್ಧಿ ಸಂಘ ಮತ್ತು ಸನ್ ಫಾರ್ಮಾ ಸಹಯೋಗದಲ್ಲಿ ಫೆ.14ರಂದು ಬೆಳಗ್ಗೆ 10.30ಕ್ಕೆ ಕುಂಬಾರವಾಡಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸನ್ನ ಕರ್ಪೂರ ವರ ಕಾಡ ಕಸ್ತೂರಿ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ. ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಹಾಗೂ ಶಾಸಕ ನೆಹರೂ ಓಲೇಕಾರ ಕಾರ್ಯಕ್ರಮ ಉದ್ಘಾಟಿಸುವರು. ಈ ಪುಸ್ತಕಕ್ಕೆ ಅಕ್ಷರ ಮಾಂತ್ರಿಕ ದಿವಂಗತ ರವಿ ಬೆಳಗೆರೆಯವರ ಮುನ್ನುಡಿಯಿದೆ.

ಮತ್ತಷ್ಟು ಸುದ್ದಿಗಳು

Latest News

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...

ಶೂಟಿಂಗ್ ವೇಳೆ ಸ್ವಲ್ಪದರಲ್ಲೇ ಅಪಾಯದಿಂದ ಪಾರದ ರಿಷಬ್ ಶೆಟ್ಟಿ

newsics.com ಹಾಸನ: ನಟ ರಿಷಬ್ ಶೆಟ್ಟಿ ಚಿತ್ರೀಕರಣದ ವೇಳೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಬೇಲೂರು ಬಳಿ ಚಿತ್ರೀರಣ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೀರೋ ಚಿತ್ರದ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಗೆ ಬೆಂಕಿ...
- Advertisement -
error: Content is protected !!