Saturday, April 17, 2021

ಗ್ರಾಮೀಣ ಹುಡುಗರಿಗೆ ಬಂತು ಕಂಕಣಭಾಗ್ಯ

   ಕೊರೋನಾ ತಂದ ಸೌಭಾಗ್ಯ  

ಹಳ್ಳಿಯಲ್ಲಿ, ತನ್ನ ಜಮೀನು, ಮನೆ ನೋಡಿಕೊಂಡು ಇರುವ ಹುಡುಗ ಎಂದರೆ ಮೂಗು ಮುರಿಯುತ್ತಿದ್ದ ಹುಡುಗಿಗೆ ಈಗ ಆತನೇ ಉತ್ತಮ ಎನಿಸುತ್ತಿದೆ. ಕೊರೋನಾ ಲಾಕ್ ಡೌನ್ ಪರಿಣಾಮವಾಗಿ ನಗರದ ತನ್ನ ಒಂದೇ ಕೋಣೆಯ ಮನೆಯಲ್ಲಿ ಒಂದೂವರೆ ತಿಂಗಳು ಬಂಧಿಯಾಗಿದ್ದ ಅವಳಿಗೆ ಹೆಚ್ಚಿನ ಹಂಗುಗಳಿರದೆ ತನ್ನದೇ ಜಮೀನಿನಲ್ಲಿ ಮನಸೋ ಇಚ್ಛೆ ಓಡಾಡುವ ಸ್ವಾತಂತ್ರ್ಯವೇ ಮೇಲೆನಿಸುತ್ತಿದೆ.
                    
♦ ಸುಮನಾ ಲಕ್ಷ್ಮೀಶ
response@134.209.153.225
newsics.com@gmail.com

“ಹುಡುಗ ಚೆನ್ನಾಗಿ ಓದಿದ್ದಾನೆ, ನೋಡಲಿಕ್ಕೂ ತುಂಬ ಚೆನ್ನಾಗಿದ್ದಾನೆ. ಮನೆಯಲ್ಲಿ ಎಲ್ಲ ಬಗೆಯ ಅನುಕೂಲಗಳೂ ಇವೆ. ಪಾಲಕರು ಸಹ ಆಧುನಿಕ ಮನೋಭಾವದವರೇ. ಒಂದೇ ಸಮಸ್ಯೆಯೆಂದರೆ, ಆತ ಮನೆಯಲ್ಲೇ ಇರುತ್ತಾನೆ, ಜಮೀನು ಕೆಲಸ ನೋಡಿಕೊಳ್ಳುತ್ತಾನೆ. ಹಳ್ಳಿ ಮನೆಯಲ್ಲಿರಲು ಒಪ್ಪುವ ಹುಡುಗಿಯಿದ್ದರೆ ತಿಳಿಸಿ’ ಎಂದು ಕಂಡಕಂಡವರ ಬಳಿ ವಿಷಯ ತಿಳಿಸುತ್ತಿದ್ದರೂ ಆ ಹುಡುಗನಿಗೆ ಕಂಕಣಬಲವೇನಾದರೂ ಕೂಡಿಬಂದರೆ ಅದು ಆತನ ಅದೃಷ್ಟಕ್ಕೆ ಸಂಬಂಧಿಸಿದ ವಿಚಾರವೇ ಎನ್ನುವ ದಿನಗಳಿದ್ದವು. ಆದರೆ, ಇತಿಹಾಸ ಮರುಕಳಿಸುತ್ತದೆ ಎನ್ನುತ್ತಾರೆ. ಅದೀಗ ಕೊರೋನಾ ಮಾಯೆಯಿಂದ ನಿಜವಾಗುತ್ತಲಿರಬಹುದು! ಏಕೆಂದರೆ, ಕೊರೋನಾ ಲಾಕ್ ಡೌನ್ ನಗರದಷ್ಟು ಗ್ರಾಮೀಣ ಭಾಗವನ್ನು ತಟ್ಟಿಲ್ಲ. ಹೀಗಾಗಿ, ಈ ಬೇಸಿಗೆಯ ಕೊರೋನಾ ಆರ್ಭಟದಿಂದಾಗಿ ಹಳ್ಳಿ ಹುಡುಗರಿಗೆ ಬೆಲೆ ಬಂದಿದೆ.
ತಮಾಷೆಯಲ್ಲ, ಇದು ನಿಜಕ್ಕೂ ಸಾಮಾಜಿಕ ಸ್ಥಿತ್ಯಂತರಕ್ಕೆ ಸಣ್ಣದೊಂದು ಮುನ್ನುಡಿ ಬರೆಯಬಲ್ಲ ಸಂಗತಿಯಾಗಬಹುದು. ಏಕೆಂದರೆ, ಗ್ರಾಮೀಣ ಮೂಲದ ಬಹಳಷ್ಟು ಹೆಣ್ಣುಮಕ್ಕಳಿಗೆ ಈಗ ನಗರದ ವ್ಯಾಮೋಹ ಪೂರಾ ಇಳಿದಿದೆ. ಹಳ್ಳಿಯ ಹುಡುಗನನ್ನೇ ಮದುವೆಯಾಗುವುದು ಉತ್ತಮ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮೂಲದ ಪ್ರತಿಮಾ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಕಂಪನಿಯೊಂದರಲ್ಲಿ ಎಚ್ ಆರ್ ಆಗಿದ್ದಾಳೆ. ಉನ್ನತ ಫಾರ್ಮ ಕಂಪನಿ, ಉತ್ತಮ ಸಂಬಳ, ವೀಕೆಂಡ್ ಓಡಾಟಗಳು, ಆಗಾಗ ಊರಿನ ಭೇಟಿ, ತೋಟದಲ್ಲೊಂದು ಸೆಲ್ಫಿ, ಊರಿನ ಹಪ್ಪಳ, ಸಂಡಿಗೆ, ಹಲಸು, ಮಾವುಗಳ ಸರಬರಾಜು ನಡೆದಿತ್ತು, ಎಲ್ಲವೂ ಚೆನ್ನಾಗಿಯೇ ಇತ್ತು. ಯಾವಾಗ ಕೊರೋನಾ ಬಂದು ಇಡೀ ಜಗತ್ತೇ ಸ್ತಬ್ಧವಾಯಿತೋ ಆಗಿನಿಂದ ಪ್ರತಿಮಾಳ ಯೋಚನೆಯ ದಿಕ್ಕೇ ಬದಲಾಗಿದೆ. ಕಾರ್ಖಾನೆ ಮುಚ್ಚಿದ್ದರಿಂದ ವರ್ಕ್ ಫ್ರಾಮ್ ಹೋಮ್ ಅವಕಾಶವೂ ಇಲ್ಲ, ಸಿಂಗಲ್ ಬೆಡ್ ರೂಮ್ ಮನೆಯಲ್ಲಿ ಒಬ್ಬಳೇ ದಿನ ಕಳೆಯುವ ಪ್ರಸಂಗ. ಅನೇಕ ಸ್ನೇಹಿತೆಯರು ಮೂರ್ನಾಲ್ಕು ದಿನಗಳ ಮುನ್ನವೇ ಊರಿನ ಹಾದಿ ಹಿಡಿದಿದ್ದು ಈಕೆಗೆ ಗೊತ್ತಾಗಲೇ ಇಲ್ಲ. ಗೊತ್ತಾದ ಬಳಿಕ ಹಳಹಳಿಕೆಯೊಂದೇ ಉಳಿದಿದ್ದು.
ಯಾರಿಗೆ ಎಷ್ಟೆಲ್ಲ ವಿಡಿಯೋ ಕಾಲ್ ಮಾಡಿ ಮಾತನಾಡಿದರೂ ಸಮಾಧಾನವಿಲ್ಲ. ಅಪ್ಪ ಅಮ್ಮನ ಬಳಿ ಅತ್ತಿದ್ದೇ ಅತ್ತಿದ್ದು, ಈ ಮಧ್ಯೆ ಖಾಸಗಿ ವಾಹನ ಮಾಡಿಸಿಕೊಂಡಾದರೂ ಊರಿಗೆ ಹೋಗೋಣ ಎಂದರೆ ಅಲ್ಲಿ ಸಾಲುಕೇರಿಯ ಮನೆ. ಇಡೀ ಊರಿಗೆ ಕ್ವಾರಂಟೈನ್ ಭೀತಿ. ಹೇಗೋ ಕಷ್ಟಪಟ್ಟು ಕೊರೋನಾ ಸಂಕಷ್ಟದ ದಿನಗಳನ್ನು ಕಳೆದು ಈಗ ಊರನ್ನು ತಲುಪಿದ್ದಾಳೆ. ಆಕೆ ಮತ್ತೆ ತಿರುಗಿ ಬೆಂಗಳೂರಿಗೆ ಬರುವುದೇ ಅನುಮಾನ! ಅವಳಿಗೀಗ ತನ್ನಷ್ಟೇ ಚೆನ್ನಾಗಿ ಓದಿಕೊಂಡಿರುವ, ಹಳ್ಳಿಯಲ್ಲೇ ಇರುವ ಹುಡುಗನನ್ನೇ ಮದುವೆಯಾಗುವುದೇ ಬೆಟರ್ ಎನಿಸುತ್ತಿದೆ. ಪುಣೆಯಲ್ಲಿರುವ ಅವಳ ಅತ್ತಿಗೆ ಸುಷ್ಮಾ ತನ್ನ ಪುಟ್ಟ ಮಗಳನ್ನು ಮನೆಯಲ್ಲೇ ಕೂಡಿಹಾಕಿಕೊಂಡು ಅನುಭವಿಸುತ್ತಿರುವ ಕಷ್ಟವನ್ನು ಕಣ್ಣೀರಿನೊಂದಿಗೇ ಹೇಳುತ್ತಾಳೆ. ಜತೆಗೆ, ನೀನು ಹಳ್ಳಿಯಲ್ಲೇ ಇರುವ ಹುಡುಗನನ್ನು ಮದುವೆಯಾಗು ಎಂದು ಸಲಹೆಯನ್ನೂ ನೀಡುತ್ತಾಳೆ. ಹೀಗಾಗಿ, ಇವಳ ನಿಶ್ಚಯವೀಗ ದೃಢವಾಗುತ್ತಿದೆ.
ಅವಳದ್ದೇ ರೀತಿಯ ಇನ್ನೊಂದು ಕತೆ ರಮ್ಯಾಳದ್ದು. “ಸಣ್ಣ ಕೆಲಸವಾದರೂ ಸರಿ, ಎಲ್ಲರಂತೆ ಬೆಂಗಳೂರಿನಲ್ಲಿರುವ ಹುಡುಗನನ್ನೇ ಮದುವೆಯಾಗುತ್ತೇನೆ, ಹಳ್ಳಿಯ ಪಾಡು ನನಗಂತೂ ಬೇಡ, ಇಲ್ಲಿ ಅತ್ತೆ ಮಾವನ ಜತೆ ಹೊಂದಿಕೊಳ್ಳುವುದು ಯಾರಿಗೆ ಬೇಕು, ಅಲ್ಲಾದರೆ ಗಂಡನೊಂದಿಗೆ ಒಬ್ಬಳೇ ಇರಬಹುದು’ ಎಂದೆಲ್ಲ ಹೇಳುತ್ತಿದ್ದ ಅವಳಿಗೆ ಈಗ ತಮ್ಮೂರಿನ ನೆಲದಲ್ಲಿ ಸರ್ವಸ್ವತಂತ್ರವಾಗಿ ಓಡಾಡಿಕೊಂಡು, ತನ್ನ ಭೂಮಿಯಲ್ಲಿ ಕೆಲಸ ಮಾಡಿಕೊಂಡಿರುವ ಹುಡುಗನೇ ಸಾಕು ಎನಿಸುತ್ತಿದೆ.
ಹೌದು, ಕೊರೋನಾ ಲಾಕ್ ಡೌನ್ ದಿನಗಳು ಜನರ ಮನಸ್ಥಿತಿಯಲ್ಲಿ ಒಂದಿಷ್ಟು ಬದಲಾವಣೆ ತಂದಿರುವುದು ನಿಜ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!