
♦ ನಂದಿನಿ ಹೆದ್ದುರ್ಗ
response@134.209.153.225
newsics.com@gmail.com
ಆ ದೊಡ್ಡ ಆಟದ ಬಯಲಲ್ಲಿ
ಎಲ್ಲೆಲ್ಲೂ ದುಂಡುದುಂಡಾದ ಕಲ್ಲು.
ಹೊಸದಾಗಿ ಬಂದ ಮಗುವಿಗಚ್ಚರಿ.
ಕೇಳಿತು..”ಯಾಕಿಲ್ಲಿ ಕಲ್ಲೆಲ್ಲಾ ಗೋಲಿ.?”
ಕೇಳಿತೇ ನಿಟ್ಟುಸಿರು?
ಊರ ಜೀವಗಳ ದಾಹ ನೀಗಿಸಿದ ಜಾಗವದು;
ಇದೀಗ ಮಕ್ಕಳಾಟದ ಬೆವರು
ಉಗಿದ ಉಗುಳೇ
ಅದರ ಬಾಯಿಗೆ ನೀರು.
ಭಾರಿ ಭಾರಿ ಕರಿಯ ಹೆಬ್ಬಾವು ರಸ್ತೆ.
ಒಂದರ ಪಕ್ಕದಲೊಂದು;
ಮೇಲೆ ಹರಿದಾಡುತ್ತಿವೆ ಇರುವೆ ಗೊದ್ದಗಳಂತೆ ವಾಹನಗಳು ಸಾಲು ಸಾಲು.
ಪಕ್ಕದಲ್ಲೇ ಸತ್ತು ಮಲಗಿವೆ ಶತಮಾನದ ನೆನಪುಗಳು.
ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿದೆ ಶ್ರಾದ್ಧ.
ಗೊತ್ತೇ ನಿಮಗೆ?
ಸಣ್ಣಪುಟ್ಟ ಮಣ್ಣ ರಸ್ತೆ ದೇಶದ ಪ್ರಗತಿಗೆ ವಿರುದ್ಧ.
ಎದೆಹಾಲು ಬಾಟಲಿಗೆ ತುಂಬುವಾತುರದಲ್ಲಿ
ಬೆಟ್ಟದೆದೆಗೆ ಚೂರಿ ಇರಿತ.
ಭಾರಿ ಕೊರೆತ;
ಜೀವಜಲದ ಮೇಲ್ಸೆಳೆತ.
ಎಳೆದಷ್ಟೂ ಉಳಿಯುವುದಿಕೆ
ಒಳಗಿದೆಯೇ ಅಕ್ಷಯಪಾತ್ರೆ?
ಮೇಲಿಂದ ಜೀವಜಲ ಸುರಿಯಬೇಕೆನಲು ಕಾಡೆಲ್ಲಾ ಬೋಳುಬೋಳು;
ತೇಗಬೀಟೆಯ ಬಾಗಿಲಿಲ್ಲದ ಮನೆ.
ಛೇ!
ಅದೇನು ಚಂದ?
ಬೆಟ್ಟ ಬರಿದಾದರೆ ಆಗಲಿ ಬಿಡಿ
ಕಟ್ಟುವೆವು ನಾವು ಕಸದ ಬೆಟ್ಟವೊಂದನ್ನು.
ಉಸಿರಾಡಲು ಹಸಿರೇ ಏಕೆ ಬೇಕು?
ಆಕ್ಸಿಜನ್ ಸಿಲಿಂಡರ್ ಸಾಕು;
ಮಳೆಚಕ್ರ ಇನ್ಯಾಕೆ.?
ಮೋಡದ ಬೀಜವಿದೆ ನಮಗೆ ಬಿತ್ತುವುದಕೆ.
ನರಲೋಕದಲ್ಲಿ ನಡೆಯಲಿ ಅಭಿವೃದ್ಧಿಯ ದರ್ಬಾರು;
ಬಾಯಾರಿದಾಗ ನೀರೇ ಯಾಕೆ?
ಇಲ್ಲವೇ ಎಲ್ಲೆಡೆ ಬಾರು.
ನಡೆಯಲಿ ಕಾರುಬಾರು…!