- ಅರ್ಚನಾ ಎಚ್. ಬೆಂಗಳೂರು
ಸತೀಶ ಬಡತನದಲ್ಲೇ ಬೆಂದ ಹುಡುಗ..ಅವನ ಆಸೆಗಳೋ ಮುಗಿಲೆತ್ತರದವು…ಬಿಡುವಿನ ವೇಳೆ ಸಿಕ್ಕಾಗಲೆಲ್ಲಾ ಅವನ ಕನಸುಗಳು ರೆಕ್ಕೆ ಬಿಚ್ಚಿ ಹಾರಲು ಪ್ರಾರಂಭಿಸುತ್ತಿದ್ದವು…ತಾನು ಹಾಗಿದ್ದರೆ ಹೇಗಿರುತ್ತಿತ್ತು!?ಹೀಗಿದ್ದರೆ ಹೇಗಿರುತ್ತಿತ್ತು!? ಎಂಬ ಕಲ್ಪನೆಗಳಲ್ಲೇ ಕಾಲ ಕಳೆಯುತ್ತಿದ್ದ..ಹೀಗಾಗಿ ಏಕಾಗ್ರತೆಯ ಕೊರತೆಯಿಂದಶಾಲೆಯಲ್ಲಿ ಯಾವಾಗಲೂ ಕಡಿಮೆ ಅಂಕ ಪಡೆಯುತ್ತಿದ್ದ..
ಸತೀಶನ ಕುಟುಂಬ ದಿನಾಲು ಹಾಲು ಮಾರಿ ಬಂದ ಕಾಸಿನಲ್ಲಿ ಜೀವನ ಸಾಗಿಸುತ್ತಿತ್ತು.. ಒಂದು ದಿನ, ಹೀಗಿರುವಾಗ ಸತೀಶನ ತಂದೆಗೆ ಆರೋಗ್ಯ ಹದಗೆಟ್ಟಿತು… ಆದ ಕಾರಣ ಅಂದಿನ ಹಾಲು ಮಾರುವ ಜವಾಬ್ದಾರಿ ಸತೀಶನ ಹೆಗಲ ಮೇಲೆ ಬಿತ್ತು…ಸತೀಶ ತಲೆಯ ಮೇಲೆ ಹಾಲಿನ ಪಾತ್ರೆ ಹೊತ್ತು ಹಾಲು ಮಾರಲು ಹೊರಟ… ಹಗಲುಗನಸು ಕಾಣುವುದರಲ್ಲಿ ಆತ ನಿಸ್ಸೀಮನಾದ್ದರಿಂದ ದಾರಿಯುದ್ದಕ್ಕೂ ಕನಸು ಕಾಣುತ್ತಾ ಮಾರುಕಟ್ಟೆಯ ದಾರಿ ಹಿಡಿದ.. ಅವನ ಕನಸಿನ ರೆಕ್ಕೆಗಳು ಗರಿಕೆದರಿದವು… ” ನಾನು ಈ ಹಾಲನ್ನೆಲ್ಲಾ ಮಾರಿ, ಬಂದ ಹಣದಲ್ಲಿ ಸ್ವಲ್ಪವೂ ಖರ್ಚು ಮಾಡದೇ ,ಇನ್ನೊಂದು ಹಸು ತರುತ್ತೇನೆ..ಆಗ ಮನೆಯಲ್ಲಿ ಎರಡು ಹಸುಗಳಾಗುತ್ತದೆ, ಹಾಗೆಯೇ ಜಾಸ್ತಿ ಹಾಲು ಸಿಗುತ್ತದೆ…ಅದನ್ನೆಲ್ಲಾ ಮಾರಿ, ಮತ್ತೆ ಇನ್ನಷ್ಟು ಹಸುಗಳನ್ನು ತರುತ್ತೇನೆ..ದೊಡ್ಡ ಗೋಶಾಲೆ ಕಟ್ಟುತ್ತೇನೆ…ದೊಡ್ಡ ದೊಡ್ಡ ಹಂಡೆ ಭರ್ತಿ ಹಾಲು..!!. ಮೊಸರು ಬೆಣ್ಣೆ ತುಪ್ಪ ಮಾರಿ ಬೇಗ ಶ್ರೀಮಂತನಾಗುತ್ತೇನೆ..ಆಕಾಶಕ್ಕೆ ಮುಟ್ಟುವಷ್ಟು ಎತ್ತರದ ಮನೆ ಕಟ್ಟುತ್ತೇನೆ… ” ಎಂದುಕೊಳ್ಳುತ್ತಾ ಆಕಾಶದ ಕಡೆ ಮುಖ ಮಾಡಿ ನಡೆಯಲು ಪ್ರಾರಂಭಿಸಿದ..ಎದುರಿಗಿದ್ದ ಕಲ್ಲು ಎಡವಿ, ಮೇಲಿದ್ದ ಹಾಲಿನ ಪಾತ್ರೆ ನೆಲಕ್ಕುರುಳಿ, ಹಾಲು ನೆಲಕ್ಕೆ ಚೆಲ್ಲಿತು.. ಅವನೂ ಮುಗ್ಗರಿಸಿ ಬಿದ್ದ… ಹತಾಶೆಯಿಂದ ಮನೆ ದಾರಿ ಹಿಡಿದ..ಅಂದು ಮನೆಯಲ್ಲಿ ಯಾರಿಗೂ ಊಟವಿರಲಿಲ್ಲ..ತಾಯಿಗೆ ನಡೆದ ಘಟನೆಯನ್ನೆಲ್ಲಾ ವಿವರಿಸಿದ.. ಆಗ ಅವನ ತಾಯಿ, ” ಮಗೂ, ಕನಸು ಕಾಣಬೇಕು ನಿಜ! ಆದರೆ ಕನಸಿನ ಗುಂಗಿನಲ್ಲೇ ಇದ್ದರೆ, ಮಾಡುವ ಕೆಲಸದಲ್ಲಿ ಏಕಾಗ್ರತೆ ಇಲ್ಲದಿದ್ದರೆ, ಯಾವ ಕೆಲಸವೂ ಫಲ ಕಾಣಲಾರದು.. ಪರಿಶ್ರಮ, ಶ್ರದ್ಧೆ, ಆಸಕ್ತಿ, ಏಕಾಗ್ರತೆ ಇದ್ದರೆ ಮಾತ್ರ ಹಿಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ..ಜೀವನದಲ್ಲಿ ನಮ್ಮ ಕನಸುಗಳೆಲ್ಲಾ ಸಾಕಾರಗೊಳ್ಳುತ್ತವೆ..ಇನ್ಮುಂದೆ ಮನಸಿಟ್ಟು ಕೆಲಸ ಮಾಡು, ಈಗ ಮಲಗು” ಎಂದಳು..
ಅಂದಿನಿಂದ ಸತೀಶ ಹಗಲುಗನಸು ಕಾಣುವುದನ್ನು ಬಿಟ್ಟು, ಮನಸಿಟ್ಟು ಏಕಾಗ್ರತೆಯಿಂದ ಕೆಲಸ ಮಾಡುತ್ತಿದ್ದ..ಶಾಲೆಯಲ್ಲಿ ಮನಸಿಟ್ಟು ಪಾಠ ಕೇಳುತ್ತಿದ್ದ.. ಪರೀಕ್ಷೆ ಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣನಾದ…ತಂದೆಗೆ ಕೆಲಸದಲ್ಲೂ ನೆರವಾದ…