ಪರಿಸರದಲ್ಲಿ ಪ್ಲಾಸ್ಟಿಕ್ ಎಂಬ ಪೆಡಂಭೂತ ಎಡೆಬಿಡದೆ ಹೆಮ್ಮಾರಿಯಂತೆ ಕಾಡುತ್ತಿದೆ… ವಾರಗಳ ಹಿಂದೆ ಓದಿದ ನೆನಪು, ಹಸುವಿನ ಹೊಟ್ಟೆಯಿಂದ 52 ಕೆಜಿ ಪ್ಲಾಸ್ಟಿಕ್ಕನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯಲಾಯಿತೆಂದು… ಹಸುವಿಗೇನೋ ಪ್ಲಾಸ್ಟಿಕ್ನಿಂದ ಆಹಾರವನ್ನು ಬೇರ್ಪಡಿಸಿ ತಿನ್ನಲು ಬುದ್ಧಿ ಇಲ್ಲ ಅಂದುಕೊಳ್ಳೋಣ ಆದರೆ ಮಹಾ ಬುದ್ಧಿವಂತನಾದ ಭೂಮಿಯ ಮೇಲಿನ ಸಕಲ ಜೀವ ಚರಾಚರಗಳಲ್ಲಿ ಅಮಿತ ಬುದ್ಧಿಮತ್ತೆಯನ್ನು ಹೊಂದಿರುವ ಮನುಷ್ಯ ಪ್ರಾಣಿಯು ದಿನಾಲೂ ಪ್ಲಾಸ್ಟಿಕ್ ತಿನ್ನುತ್ತದೆ ಎಂದರೆ ಆಶ್ಚರ್ಯವಲ್ಲದೇ ಮತ್ತೇನು ಅಲ್ಲವೇ!??
ಪ್ಲಾಸ್ಟಿಕ್ ನ ವಿಂಗಡನೆ…
ಪ್ಲಾಸ್ಟಿಕ್ಕುಗಳನ್ನು ಅವುಗಳ ಗುಣಕ್ಕೆ ಅನುಸಾರವಾಗಿ ಥರ್ಮೊ ಪ್ಲಾಸ್ಟಿಕ್ಕುಗಳು, ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್ಕುಗಳು, ಎಲಾಸ್ಟೊಮರುಗಳು ಎಂಬುದಾಗಿ ವಿಂಗಡಿಸಲಾಗಿದೆ.. ಶಾಖಕ್ಕೆ ಮೆದುವಾಗುವ, ಅಚ್ಚುಹೊಯ್ದ ಬಳಿಕ ಗಡುಸಾಗುವ, ಪುನಃ ಶಾಖಕ್ಕೆ ಮೆದುವಾಗಿ ಅಚ್ಚುಹೊಯ್ಯಲು ಯೋಗ್ಯವಾಗುವ ಗುಣವಿರವವು ಥರ್ಮೊಪ್ಲಾಸ್ಟಿಕ್ಕುಗಳು…. ಉತ್ಪತ್ತಿ ಸ್ಥಿತಿಯಲ್ಲಿ ಮೆದುವಾಗಿದ್ದು ಅಚ್ಚುಹೊಯ್ದ ತರುವಾಯ ಪುನಃ ಮೆದುವಾಗದ, ಗಡಸು ಪ್ಲಾಸ್ಟಿಕ್ಕುಗಳು ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್ಕುಗಳು.. ರಬ್ಬರಿನಂತೆ ಸ್ಥಿತಿಸ್ಥಾಪಕ ಗುಣವಿರುವವು ಎಲಾಸ್ಟೊಮರುಗಳು, ರಾಸಾಯನಿಕ ಕ್ರಿಯೆಯ ಮೂಲಕ ಅಚ್ಚು ಹೊಯ್ಯಬಹುದಾದಂಥವು ಕೆಮಿಸೆಟ್ಟಿಂಗ್ ಪ್ಲಾಸ್ಟಿಕ್ಕುಗಳು, ಇವನ್ನು ಅತಿಕಡಿಮೆ ಉಷ್ಣತೆಯಲ್ಲಿ ಅಚ್ಚುಹೊಯ್ಯಬಹುದು…
ಬಿಸಿಬಿಸಿ ಊಟಕ್ಕೆ ಉಪ್ಪಿನಕಾಯಿ ಪ್ಲಾಸ್ಟಿಕ್…
ನಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯು ಹಾಸುಹೊಕ್ಕಾಗಿದೆ.. ಪ್ಲಾಸ್ಟಿಕ್ ಬ್ರಶ್, ಪ್ಲಾಸ್ಟಿಕ್ ಸ್ಪೂನ್ , ಪ್ಲಾಸ್ಟಿಕ್ ತಟ್ಟೆ, ಕುಡಿಯುವ ಬಾಟಲಿಗಳು , ಊಟದ ಡಬ್ಬಿಗಳು, ಸಾಮಾನಿನ ಡಬ್ಬಿಗಳು, ಬಕೆಟ್ ಗಳು ತಲೆ ಬಾಚಣಿಗೆ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಪ್ಲಾಸ್ಟಿಕ್… ಸರ್ವಂ ಪ್ಲಾಸ್ಟಿಕ್ ಮಯಂ…ಇದಕ್ಕೆ ಪರ್ಯಾಯವೇ ಇಲ್ಲ ಅನ್ನುವ ಮಟ್ಟಿಗೆ ನಾವಿಂದು ಅವಲಂಬಿತರಾಗಿಬಿಟ್ಟಿದ್ದೇವೆ… ಹಿಂದಿನ ಕಾಲದಲ್ಲಿ ತಂಬಿಗೆಗಳು ತಾಮ್ರದ ಕೊಡ ಮಡಿಕೆಗಳು ಎಲ್ಲಾ ಪ್ರಕೃತಿಯಲ್ಲಿ ಸಿಗುವ ವಸ್ತುಗಳಿಂದಲೇ ಮಾಡಲ್ಪಟ್ಟಿತ್ತು..ಆರೋಗ್ಯಕ್ಕೂ ಪ್ರತಿಕೂಲ ಪರಿಣಾಮ ಬೀರದೆ ಉಪಕಾರಿಯಾಗಿತ್ತು…ಈ ಪ್ಲಾಸ್ಟಿಕ್ ಎಂಬ ಮಹಾಮಾರಿ ಬಂದಾಗಿನಿಂದ ಕರಗದ ಈ ಜಡವಸ್ತು ಪರಿಸರವನ್ನು ನಾಶ ಮಾಡುತ್ತಿರುವ ಜೊತೆಗೆ ಜೀವಚರಗಳನ್ನು ಅನಾರೋಗ್ಯಕ್ಕೀಡು ಮಾಡುತ್ತಿದೆ…ಇಂತಹ ಎಷ್ಟೋ ಬಾರಿ ಪ್ಲಾಸ್ಟಿಕ್ಕನ್ನು ಬ್ಯಾನ್ ಮಾಡಿದರು ಸಹ ಪ್ಲಾಸ್ಟಿಕ್ ಅನ್ನು ಉಪಯೋಗಿಸುತ್ತಲೇ ಇದ್ದೇವೆ.. ಗಂಡ ಮಕ್ಕಳ ಡಬ್ಬಿಗೆ ಬಿಸಿಬಿಸಿಯಾಗಿ ತಿನ್ನಿರೆಂದು ಉನ್ನತ ಗುಣಮಟ್ಟದ ಪ್ಲಾಸ್ಟಿಕ್ ಡಬ್ಬಿಯಲ್ಲಿ ಆಹಾರವನ್ನು ಕಳಿಸುತ್ತೇವೆ.. ಆ ತಾಪಮಾನಕ್ಕೆ ಕ್ರಮೇಣ ಕರಗುವ ಪ್ಲಾಸ್ಟಿಕ್ ಆಹಾರದಲ್ಲಿ ಬೆರೆತುಬಿಡುತ್ತದೆ..
ಮೈಕ್ರೋಪ್ಲಾಸ್ಟಿಕ್ ಅಂದ್ರೇನು?
ಪ್ಲಾಸ್ಟಿಕ್ಕಿನ ಸಣ್ಣ ತುಣುಕುಗಳು ಮೈಕ್ರೋ ಪ್ಲಾಸ್ಟಿಕ್ಸ್ ಎಂದು ಕರೆಯಲಾಗುವ ಹಾನಿಕಾರಕ ಕಣಗಳು ಎಲ್ಲಾಕಡೆ ಅಡಗಿವೆ… ಉಸಿರಾಡುವ ಗಾಳಿಯಲ್ಲಿ ಸಮುದ್ರದಾಳದ ಮರಳಿನಲ್ಲಿ ಹಾಗೆ ಅದು ನಮ್ಮ ದೇಹದೊಳಗೆ ಕರಗಲಾರದ ಪದರವನ್ನು ರಚಿಸುತ್ಯಿದೆ.. ಈ ಮೈಕ್ರೋ ಪ್ಲಾಸ್ಟಿಕ್ ನ ಅತಿಸೂಕ್ಷ್ಮ ಕಣಗಳು ಐದು ಮಿಲಿಮೀಟರ್ ಗಿಂತಲೂ ಸಣ್ಣದಾಗಿದ್ದು ವಿಷಪೂರಿತವಾಗಿದೆ.. ನ್ಯಾಷನಲ್ ಓಶನಿಕ್ ಅಂಡ್ ಅಟ್ಮಾಸ್ಪಿಯರಿಕ್ ಅಡ್ಮಿನಿಸ್ಟ್ರೇಷನ್ ( NOAA)
ನಡೆಸಿದ ಸಂಶೋಧನೆಯಲ್ಲಿ ಇದು ಕಂಡುಬಂದಿದೆ.. ಇದು ಬರಿಗಣ್ಣಿಗೆ ಕಾಣದಾಗಿದ್ದು, ಸೂಕ್ಷ್ಮದರ್ಶಕದ ಸಹಾಯದಿಂದ ಮಾತ್ರ ಕಾಣಬಹುದಾಗಿದೆ.. ಒಬ್ಬ ಮನುಷ್ಯ ತನಗರಿವಿಲ್ಲದಂತೆ ಅಂದಾಜು ಒಂದು ವರ್ಷದಲ್ಲಿ 39,000 ದಿಂದ 52000 ಮೈಕ್ರೋ ಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾನೆ ಎಂಬುದು ನಿಜವಾಗಿಯೂ ಆಘಾತಕಾರಿ ಸಂಗತಿಯೇ ಸರಿ..
ಈ ಮೈಕ್ರೋ ಪ್ಲಾಸ್ಟಿಕ್ ಕಣಗಳು ನಾವು ಬಳಸುವ ಉಪ್ಪು, ಸಮುದ್ರದಾಳದಲ್ಲಿ ಪದರರಚಿಸಿದ್ದು, ಮರಳಿನಲ್ಲಿ ನೀರಿನಲ್ಲಿ ಬೆರೆತುಹೋಗಿದೆ.. ಜಲಚರಗಳಲ್ಲಿ ಹೇರಳವಾಗಿದ್ದು ಆಹಾರಗಳಲ್ಲಿ ಅಂದರೆ ನೀರು, ಸಕ್ಕರೆ, ಆಲ್ಕೋಹಾಲ್ ಹಾಗೂ ಜೇನುತುಪ್ಪ ಗಳಲ್ಲೂ ಕಂಡು ಬಂದಿದೆ..
ಮೈಕ್ರೋ ಪ್ಲಾಸ್ಟಿಕ್ ನ ದಿನನಿತ್ಯ ಸೇವನೆ…
ನಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ಲಾಸ್ಟಿಕ್ ಒಂದು ಕರಗದ ಪಚನ ಕ್ರಿಯೆಗೆ ಒಳಪಡದ ಅಪಾಯಕಾರಿ ವಸ್ತು ಈ ಮೈಕ್ರೋ ಪ್ಲಾಸ್ಟಿಕ್ ನ ಕಣಗಳು, ಜಠರ ಹಾಗೂ ಸಣ್ಣ ಕರುಳುಗಳಲ್ಲಿ ತನ್ನದೇ ಆದ ವಿಶಿಷ್ಟ ಪದರವನ್ನು ನಿರ್ಮಾಣ ಮಾಡಿಕೊಳ್ಳುತ್ತದೆ.. ಇದರಿಂದ ಆಹಾರದಲ್ಲಿರುವ ವಿಟಮಿನ್ ಪ್ರೊಟೀನ್ ಗಳು ಆಹಾರದಿಂದ ಸರಿಯಾಗಿ ಹೀರಲ್ಪಡುವುದಿಲ್ಲ.. ದೇಹದೊಳಗಿನ ಹಲವಾರು ಗ್ರಂಥಿಗಳು ರಸವನ್ನು ಸ್ರವಿಸಲು, ಪಚನಕ್ರಿಯೆ ಹೀರುವಿಕೆ, ವಿಸರ್ಜನೆ ಎಲ್ಲದರ ಸಮಸ್ಯೆ ತಲೆದೋರುತ್ತದೆ ಪ್ಲಾಸ್ಟಿಕ್ನಿಂದ ಹಲವಾರು ರೋಗಗಳು ದೇಹದಲ್ಲಿ ಮನೆ ಮಾಡುತ್ತವೆ.. ಎಣ್ಣೆ ಬಳಸುವುದರಿಂದ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತದೆ ಎಂಬ ಕಾರಣಕ್ಕೆ ನಾವು ಕಬ್ಬಿಣದ ಕಾವಲಿಯಿಂದ ನಾನ್ ಸ್ಟಿಕ್ ಕಾವಲಿಯತ್ತ ವಾಲಿದ್ದೇವೆ.. ಟೆಫ್ಲಾನ್ ಸಹ ಪ್ಲಾಸ್ಟಿಕ್ ನ ಇನ್ನೊಂದು ರೂಪ ಎಂದು ನಾವಿನ್ನು ಮನಗಂಡಂತಿಲ್ಲ..ಸುಡುಸುಡು ಚಪಾತಿ ದೋಸೆಯ ಜೊತೆ ಲಘುವಾಗಿ ಕರಗಿದ PTFE( Polytetrafluoroethylene)
ಅನ್ನು ತಿನ್ನುತ್ತೇವೆ.. ಹೆಚ್ಚು ಹೊತ್ತು ಪ್ಲಾಸ್ಟಿಕ್ ಬಾಟಲಿಯಲ್ಲಿಟ್ಟ ನೀರು ಮೈಕ್ರೋ ಪ್ಲಾಸ್ಟಿಕ್ ಅನ್ನು ಹೊಂದಿರುತ್ತದೆ…
ಆದಷ್ಟು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಯಂತ್ರಿಸೋಣ.. ಆರೋಗ್ಯದ ಜೊತೆಗೆ ಪರಿಸರ ರಕ್ಷಣೆಯನ್ನು ಮಾಡೋದು ಪ್ಲಾಸ್ಟಿಕ್ ನಿಂದ ಮುಕ್ತಿ ಪಡೆಯೋದೆ ನಮ್ಮ ಧ್ಯೇಯವಾಗಲಿ…
ಅರ್ಚನಾ ಎಚ್..