ಬಂದಿಯನ್ನು ವಾದದಲ್ಲಿ ಸೋಲಿಸಿ ತಂದೆಯನ್ನು ಬಿಡಿಸಿಕೊಂಡು ಹಿಂದಿರುಗುವಾಗ ಕಹೋಳನು ಮಗನ ಬಗ್ಗೆ ಹೆಮ್ಮೆಪಟ್ಟು ಆತನಿಗೆ ‘ಮಧುವಿಲಾ’ ನದಿಯಲ್ಲಿ ಮುಳುಗಿ ಏಳುವಂತೆ ಹೇಳುತ್ತಾನೆ. ಅಷ್ಟಾವಕ್ರನು ಹಾಗೆ ಮಾಡಲು ವಕ್ರತೆ ಮಾಯವಾಗುತ್ತದೆ. ಮಧುವಿಲಾ ನದಿ ಅಂಗವನ್ನು ಸರಿಪಡಿಸಿದ್ದಕ್ಕಾಗಿ ‘ಸಮಂಗಾ’ ಎಂದು ಹೆಸರು ಪಡೆಯುತ್ತದೆ.
♦ ಬಾಬು
newsics.com@gmail.com
ಉ ದ್ದಾಲಕ ಋಷಿಯ ಆಶ್ರಮದಲ್ಲಿ ವೇದಾಧ್ಯಯನ ಮಾಡಿದ ಕಹೋಳನು ಗುರುಪುತ್ರಿಯಾದ ಸುಜಾತೆಯನ್ನು ವಿವಾಹವಾಗುತ್ತಾನೆ. ಗರ್ಭಿಣಿಯಾದ ಪತ್ನಿಯ ಮುಂದೆ ವೇದಮಂತ್ರಗಳನ್ನು ಕಹೋಳನು ಪಠಿಸುತ್ತಿರಲು ಅಪಸ್ವರ ಬಂದುಬಿಡುತ್ತದೆ. ಆಗ ಗರ್ಭದಲ್ಲಿದ್ದ ಶಿಶು ನಕ್ಕುಬಿಡುತ್ತದೆ. ಅಪಮಾನಿತನಾದ ಕಹೋಳನು ಮಗನನ್ನು ‘ಅಷ್ಟಾವಕ್ರನಾಗಿ ಜನಿಸು’ ಎಂದು ಶಪಿಸುತ್ತಾನೆ. ಹಾಗಾಗಿ ಮಗು ಎಂಟು ಕಡೆ ಡೊಂಕಿರುವ ದೇಹದ ಕುರೂಪಿಯಾಗಿ ಜನಿಸುತ್ತದೆ. ನೋಡಲಾಗದಷ್ಟು ಕುರೂಪಿಯಾಗಿದ್ದ ಆದರೆ ಜನ್ಮತಃ ಬ್ರಹ್ಮಜ್ಞಾನಿಯಾಗಿದ್ದ ಈತನು ಅಷ್ಟಾವಕ್ರನೆಂದೇ ಹೆಸರಾಗುತ್ತಾನೆ.
ಈತನ ತಂದೆ ಕಹೋಳನನ್ನು ಜನಕರಾಯನ ಆಸ್ಥಾನದಲ್ಲಿ ಪಂಡಿತನಾಗಿದ್ದ ಬಂದಿ ಎಂಬಾತ ವಾದದಲ್ಲಿ ಸೋಲಿಸಿ ವರುಣನಿಗೆ ಬಲಿ ನೀಡಲು ಬಂಧಿಸಿ ಇಟ್ಟಿರುತ್ತಾನೆ. ತಂದೆಯನ್ನು ಬಿಡಿಸಿಕೊಂಡು ಬರಲು ಆಸ್ಥಾನಕ್ಕೆ ಬಂದ ಅಷ್ಟಾವಕ್ರನನ್ನು ನೋಡಿ ಆಸ್ಥಾನಿಕರು ನಗಲಾರಂಭಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಅಷ್ಟಾವಕ್ರನೂ ಗಹಗಹಿಸಿ ನಗುತ್ತಾನೆ. ಅಚ್ಚರಿಗೊಂಡ ಜನಕರಾಯ ಹೀಗೇಕೆ ಎಂದು ಕೇಳಲು ‘ನಿನ್ನದು ಮೇಲಿನ ಚರ್ಮಕ್ಕೆ ಬೆಲೆ ಕೊಡುವ ಚಮ್ಮಾರರ ಸಭೆ, ಪಂಡಿತರ ಸಭೆಯಲ್ಲ, ಆ ಚಮ್ಮಾರರಿಂದ ನೀನು ಏನು ತಾನೆ ಜ್ಞಾನ ಪಡೆಯಲು ಸಾಧ್ಯ? ಅದಕ್ಕಾಗಿ ನಕ್ಕೆ’ ಎನ್ನುತ್ತಾನೆ ಅಷ್ಟಾವಕ್ರ.
ನಂತರ ಬಂದಿಯನ್ನು ವಾದದಲ್ಲಿ ಸೋಲಿಸಿ ತಂದೆಯನ್ನು ಬಿಡಿಸಿಕೊಂಡು ಹಿಂದಿರುಗುವಾಗ ಕಹೋಳನು ಮಗನ ಬಗ್ಗೆ ಹೆಮ್ಮೆಪಟ್ಟು ಆತನಿಗೆ ‘ಮಧುವಿಲಾ’ ನದಿಯಲ್ಲಿ ಮುಳುಗಿ ಏಳುವಂತೆ ಹೇಳುತ್ತಾನೆ. ಅಷ್ಟಾವಕ್ರನು ಹಾಗೆ ಮಾಡಲು ವಕ್ರತೆ ಮಾಯವಾಗುತ್ತದೆ. ಮಧುವಿಲಾ ನದಿ ಅಂಗವನ್ನು ಸರಿಪಡಿಸಿದ್ದಕ್ಕಾಗಿ ‘ಸಮಂಗಾ’ ಎಂದು ಹೆಸರು ಪಡೆಯುತ್ತದೆ.