Wednesday, May 18, 2022

ಪ್ರಭಂಜನನ ಅಳಲು

Follow Us

ರೋಹಿತಾದ್ರಿಯ ಕೆಳಗಡೆಯ ಬಯಲಿನಲ್ಲಿ ನಂದನೆಂಬ ಒಬ್ಬ ಗೊಲ್ಲನು ಮನೆಮಾರು ಕಟ್ಟುಕೊಂಡು ವಾಸಮಾಡುತ್ತಿದ್ದನು. ಅದು ಅವನ ಹಿರಿಯರ ಆಸ್ತಿ. ಅವನಲ್ಲಿ ಕೆಲವು ಹಸುಗಳಿದ್ದವು.


♦ ಬಸವರಾಜ ಧಾರವಾಡ
newsics.com @gmail.com ಪ್ರ ಭಂಜನನೆಂಬ ಒಬ್ಬ ರಾಜನಿದ್ದ. ಅವನಿಗೆ ಬೇಟೆಯಾಡುವುದೆಂದರೆ ಬಹಳ ಇಷ್ಟ. ಅನ್ನ ನೀರನ್ನು ಬೇಕಾದರೆ ಬಿಟ್ಟಾನು, ಆದರೆ ಬೇಟೆಯಾಡುವುದನ್ನು ಬಿಡಲಾರನು. ಅದು ಅವನಿಗೆ ಒಂದು ಹವ್ಯಾಸವೇ ಆಗಿತ್ತು. ಬೇಟೆಗೆ ಹೋಗುವಾಗ ಮಂತ್ರಿ ಪರಿವಾರದವರು ಇರಲೇಬೇಕೆಂಬ ನಿಯಮವಿರಲಿಲ್ಲ. ಒಬ್ಬನೇ ಆದರೂ ಅವನು ಬೇಟೆಯಾಡಲು ಹೋಗುತ್ತಿದ್ದನು.
ಒಂದು ದಿನ ಬೇಟೆಗೆಂದು ಅವನು ಕಾಡಿಗೆ ಹೋಗಿದ್ದನು. ಒಬ್ಬನೇ ಆದುದರಿಂದ ಹೆಚ್ಚಿನ ವಸ್ತುಗಳಾವುವನ್ನೂ ಅವನು ಕೊಂಡುಹೋಗಿರಲಿಲ್ಲ. ಬಿಲ್ಲು ಮತ್ತು ಬಾಣಗಳನ್ನು ಮಾತ್ರ ತೆಗೆದುಕೊಂಡಿದ್ದನು. ಬೇಟೆಗಾಗಿ ಕಾಡಿನಿಂದ ಕಾಡಿಗೆ ಅಲೆದಾಡಿದನು. ಆದರೆ ದುರದೃಷ್ಟವೆಂಬಂತೆ ಯಾವುದೇ ಒಂದು ಕಾಡೆಮ್ಮೆ, ಕಾಡ್ಕೋಣ, ಕಡವೆ, ಜಿಂಕೆಯಾಗಲಿ ಅವನ ಕಣ್ಣಿಗೆ ಬೀಳಲಿಲ್ಲ. ಉದಾಸೀನತೆಯಿಂದಲೇ ಮುಂದೆ ಹೋಗುತ್ತಿರುವಾಗ ಸ್ವಲ್ಪ ದೂರದಿಂದ ಸರಕ್ಕೆಂಬ ಸದ್ದು ಕೇಳಿಸಿದಂತಾಯಿತು. ಸದ್ದು ಬಂದ ಕಡೆಗೇ ನೆಟ್ಟ ದೃಷ್ಟಿಯಿಂದ ನೋಡತೊಡಗಿದನು ಪ್ರಭಂಜನ. ನೋಡುತ್ತಿದ್ದಂತೆಯೇ ಬಿಲ್ಲನ್ನೆತ್ತಿ, ಅದಕ್ಕೆ ಬಾಣವನ್ನು ಜೋಡಿಸಿ ಹೊಡೆದೇಬಿಟ್ಟ. ಬಾಣ ಗುರಿ ಸೇರಿತು. ಅದೇ ಕಡೆಯಿಂದ ಬೇಂ ಎಂಬ ಚೀರಾಟದ ದನಿಯೂ ಕೇಳಿಸಿತು. ಪ್ರಭಂಜನನಿಗೆ ಸಂತೊಷವೇ ಸಂತೋಷ. ಈಗಲಾದರೂ ಒಂದು ಒಳ್ಳೆಯ ಬೇಟೆ ಸಿಕ್ಕಿತಲ್ಲ ಎಂದು. ಅದು ಜಿಂಕೆಯೇ ಇರಬೇಕೆಂದು ಭಾವಿಸಿ ಅಲ್ಲಿಗೆ ಅವಸರ ಅವಸರವಾಗಿ ಹೋದನು. ಹೋಗಿ ನೋಡುತ್ತಾನೆ, ಜಿಂಕೆಯೇನೋ ಅಹುದು. ಆದರೆ ಬಾಣಕ್ಕೆ ಗುರಿಯಾಗಿ ಬಿದ್ದುದು ಮರಿಜಿಂಕೆ, ತನ್ನ ಅಮ್ಮನ ಹಾಲು ಕುಡಿಯುತ್ತಿದ್ದ, ಹುಟ್ಟಿ ಮೂರೇ ಮೂರು ದಿನವಾದ ಎಳೆಜಿಂಕೆ, ಅದರ ಕಡೆವಾಯಿಂದ ಕುಡಿದ ಹಾಲು ನೊರೆಸಹಿತ ಹೊರಗೆ ಸೋರುತ್ತಿತ್ತು. ರಾಜನು ಬಿಟ್ಟ ಬಾಣ ಅದರ ಎದೆಯಲ್ಲಿ ನೆಟ್ಟು ಆ ಗಾಯದಿಂದ ರಕ್ತ ಬುಳಬಳನೆ ಹೊರಬರುತ್ತಿತ್ತು. ಮಾತ್ರವಲ್ಲ, ಬಾಣದ ಹೊಡೆತಕ್ಕೆ ನೆಲದ ಮೇಲೆ ಬಿದ್ದು ಅದು ವಿಲವಿಲನೆ ಒದ್ದಾಡುತ್ತಿತ್ತು . ಅಷ್ಟರಲ್ಲಿ ರಾಜನು ಆ ಸ್ಥಳಕ್ಕೆ ತಲುಪಿದನು. ಅವನನ್ನು ನೋಡಿದ್ದೇ ತಡ, ತಾಯಿಜಿಂಕೆಗೆ ಕೋಪ ಎಲ್ಲಿಂದ ಬಂತೋ, ತನ್ನ ಪುಟ್ಟ ಕಂದನನ್ನು ಕಳೆದುಕೊಂಡ ದುಃಖ ಬೇರೆ, ಅದು ಸಿಟ್ಟಿನಿಂದ ರಾಜನನ್ನು ದುರುಗುಟ್ಟಿ ನೋಡುತ್ತ ಅವನನ್ನು ಉದ್ದೇಶಿಸಿ, ರಾಜಾ, ನೀನು ರಾಜನಾಗಿದ್ದು ಎಂತಹ ಅಧರ್ಮದ ಕೆಲಸವನ್ನು ಮಾಡಿಬಿಟ್ಟೆ! ಹಾಲು ಕುಡಿಯುವ ಈ ಮರಿಯನ್ನು ಕೊಂದುಬಿಟ್ಟೆಯಲ್ಲ ಥೂ! ನೀನು ಮಾಂಸಾಹಾರಿಯಾದ ಹುಲಿಯಾಗಿ ಮರುಹುಟ್ಟನ್ನು ಪಡೆ ಎಂದು ಶಪಿಸಿಬಿಟ್ಟಿತು.
ಶಾಪದ ಆ ಮಾತನ್ನು ಕೇಳಿದ ರಾಜನಿಗೆ ತಲೆತಿರುಗಿದಂತಾಯಿತು. ಅವನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ತನ್ನ ಎರಡೂ ಕೈಗಳನ್ನು ಜೋಡಿಸಿ, ಮೊಣಕಾಲೂರಿ ಹರಿಣೀ, ಆದುದು ಆಗಿಹೋಯಿತು. ನನ್ನಿಂದ ತಪ್ಪಾಯಿತು. ಹಾಲು ಕುಡಿಯುವ ನಿನ್ನ ಕಂದನನ್ನು ಕೊಂದು ಬಿಟ್ಟೆ, ದಮ್ಮಯ್ಯ ಎಂದು ಬೇಡಿಕೊಳ್ಳುತ್ತಿದ್ದೇನೆ. ನನಗೆ ಕ್ಷಮೆಯನ್ನು ಕೊಟ್ಟು ಬಿಡು ಎಂದು ಬೇಡಿಕೊಂಡನು.
ಪ್ರಭಂಜನನ ದೈನ್ಯಭಾವವನ್ನು ನೋಡಿ ಜಿಂಕೆಯ ಕೋಪ ಆರಿಹೋಯಿತು. ಅದು ರಾಜಾ, ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಳ್ಳಲು ಬರುವುದಿಲ್ಲ, ನೀನು ಅದನ್ನು ಅನುಭವಿಸಲೇ ಬೇಕು. ಆದರೆ ನಿನಗೆ ನಿನ್ನ ತಪ್ಪಿನ ಅರಿವಾಯಿತಲ್ಲ! ಅದಕ್ಕಾಗಿ ಪಶ್ಚಾತ್ತಾಪಪಡುತ್ತಿರುವೆಯಲ್ಲ! ಇದೋ ಹುರಿಶಾಪ, ಕೆಲವು ವರ್ಷಗಳು ಕಳೆದ ಮೇಲೆ ಈ ದಾರಿಗಾಗಿ ನಂದಾ ಎಂಬ ಒಂದು ಗೋವು ಬರುತ್ತದೆ. ಅದರ ಮೂಲಕ ನಿನ್ನ ಶಾಪ ವಿಮೋಚನೆಯಾಗುತ್ತದೆ”ಎಂದು ಹುರಿಶಾಪವನ್ನುಕೊಟ್ಟಿತು.
ಜಿಂಕೆಯ ಶಾಪದಂತೆ ಪ್ರಭಂಜನನು ಹುಲಿಯಾಗಿ ಜನ್ಮವನ್ನು ಪಡೆದನು. ಆ ಹುಲಿ ಅದೇ ರೋಹಿತಾದ್ರಿಯಲ್ಲಿ ವಾಸಿಸುತ್ತ ಸಿಕ್ಕಿದ ಮೃಗಗಳನ್ನು ಕೊಂದು ತಿನ್ನುತ್ತ ಜೀವಿಸುತ್ತ ಇತ್ತು. ಹೆಚ್ಚಾಗಿ ಅದರ ವಾಸ ಆ ರೋಹಿತಾದ್ರಿಯ ಈಶಾನ್ಯಭಾಗದ ಅರಣ್ಯದಲ್ಲಿ, ಅಲ್ಲಿದ್ದ ಒಂದು ಗುಹೆಯಲ್ಲಿ.
ರೋಹಿತಾದ್ರಿಯ ಕೆಳಗಡೆಯ ಬಯಲಿನಲ್ಲಿ ನಂದನೆಂಬ ಒಬ್ಬ ಗೊಲ್ಲನು ಮನೆಮಾರು ಕಟ್ಟುಕೊಂಡು ವಾಸಮಾಡುತ್ತಿದ್ದನು. ಅದು ಅವನ ಹಿರಿಯರ ಆಸ್ತಿ. ಅವನಲ್ಲಿ ಕೆಲವು ಹಸುಗಳಿದ್ದವು. ಅವುಗಳ ಪೈಕಿ ಒಂದರ ಹೆಸರು “ನಂದಾ” ಎಂದಾಗಿತ್ತು.
ಒಂದು ದಿನ ಅವನ ಹಸುಗಳು ಮೇಯುತ್ತ ಬೆಟ್ಟದ ತುದಿಯಲ್ಲಿಗೆ ತಲುಪಿದವು. ಹೊಟ್ಟತುಂಬ ಹುಲ್ಲನ್ನು ತಿಂದು ಹಿಂತಿರುಗಿದವು. ಆ ಹಿಂಡಿನಲ್ಲಿದ್ದ “ನಂದಾ” ಮಾತ್ರ ಹಿಂಡಿನಿಂದ ತುಂಬ ಹಿಂದೆ ಉಳಿಯಿತು. ಅದೇ ಸಂದರ್ಭದಲ್ಲಿ ಬೆಟ್ಟದ ತಪ್ಪಲಿನಲ್ಲಿದ್ದ ಶಾಪಗ್ರಸ್ತವಾದ ಹುಲಿ ಅದನ್ನು ನೋಡಿತು. ಎಷ್ಟಾದರು ಅದು ಕ್ರೂರ ಪ್ರಾಣಿಯಲ್ಲವೇ? ತನ್ನ ಹುಟ್ಟುಗುಣ ಅದರ ಮನಸ್ಸಿನಲ್ಲಿ ಮರುಕಳಿಸಿತು. ಅದು ದನವನ್ನು ಕೊಂದು ತಿನ್ನಲು ಆಲೋಚಿಸಿ ದನದ ಹತ್ತಿರ ಬಂತು ದನವನ್ನು ನೋಡಿ ಬಾಲಬಿಚ್ಚಿ ಒಮ್ಮೆ ಮೇಲೆಕ್ಕೆ ಎತ್ತಿತು. ನಾಲಗೆಯನ್ನು ಹೊರಹಾಕಿ ಬಾಯಿಚಪ್ಪರಿಸಿತು. ದನ ಅದರ ಕ್ರೂರದೃಷ್ಟಿಯನ್ನು ನೋಡಿ ಬೆಚ್ಚಿ ಗಾಬರಿ ಪಟ್ಟಿತು. ತನ್ನ ಹಿಂಡಿನ ಒಂದೇ ಒಂದು ದನವಾಗಲೀ, ಕರುವಾಗಲೀ, ಎತ್ತಾಗಲೀ ಅಲ್ಲಿ ಇರಲಿಲ್ಲ. ಎಲ್ಲವೂ ತಮ್ಮ ವಾಸಸ್ಥಳಕ್ಕೆ ಹೋಗಿಬಿಟ್ಟಿದ್ದವು.
ಹುಲಿಯ ಎದುರಿಗೆ ಸಿಕ್ಕಿದ” ನಂದಾ” ಸಹ ಬೇಗನೆ ಹೋಗಿ ತನ್ನ ಹಿಂಡನ್ನು ಸೇರುವ ಆತುರದಲ್ಲಿ ಇತ್ತು. ಆದರೆ ಅದನ್ನು ಹುಲಿ ಅಡ್ಡಗಟ್ಟಿ ನಿಲ್ಲಿಸಿ. “ಎಲೈ ಗೋವೇ, ಎಲ್ಲಿಗೆ ಹೋಗುವೆ?” ಎಂದು ಪ್ರಶ್ನಿಸಿತು.
“ಹುಲಿಯಣ್ಣ, ನೋಡು ಸಂಜೆಯಾಗುತ್ತಿದೆ. ನನ್ನ ಜತೆಯ ಸಂಗಡಿಗರೆಲ್ಲ ಹೋಗಿ ಬಿಟ್ಟರು, ತಡವಾಗುತ್ತಿದೆ . ದಾರಿಬಿಡು” ನಂದಾ ವಿನಯದಿಂದ ಬೇಡಿಕೊಂಡಿತು.
“ಇಲ್ಲ, ನಿನ್ನನ್ನು ನಾನು ಬಿಡಲಾರೆ, ನೀನು ನನಗೆ ಆಹಾರವಾಗಿ ಸಿಕ್ಕಿರುವೆ, ನಿನ್ನನ್ನು ಕೊಂದು ತಿಂದೇ ಸಿದ್ಧ”. ಎನ್ನುತ್ತ ಹುಲಿ ಬಾಯಿ ಆಕಳಿಸಿ ಸೆಟೆದು ನಿಂತಿತು.
ಆಗ ಇನ್ನಷ್ಟು ಹೆದರಿದ ನಂದಾ, “ಹುಲಿರಾಯಾ, ನನ್ನನ್ನು,ನೀನು ಈಗ ಕೊಲ್ಲಬೇಡ, ನಾನು ಕೊಟ್ಟಿಗೆಗೆ ಹೋಗಿ ಹಸಿದುಕೊಂಡಿರುವ ನನ್ನ ಮುದ್ದು ಕಂದನಿಗೆ ಹಾಲುಣಿಸಿ ಬರುತ್ತೇನೆ. ಆಗ ನೀನು ನನ್ನನ್ನು ಕೊಲ್ಲಬಹುದು, ತಿಂದು ತೃಪ್ತಿಪಟ್ಟುಕೊಳ್ಳಬಹುದು” ಎಂದು ಬೇಡಿಕೊಂಡಿತು.
“ನೀನು ಹೇಳುವ ಮಾತು ತೀರ ಸುಳ್ಳು, ಪ್ರಾಣದ ಮೇಲೆ ಆಸೆ ಇರುವವರು ಪುನ: ಬರುತ್ತಾರೆಯೇ?”
ಇಲ್ಲ ಹುಲಿಯಣ್ಣಾ. ಇದೋ ನಿನಗೆ ಭಾಷೆ ಕೊಡುತ್ತೇನೆ, ದೇವರ ಆಣೆಯಿಟ್ಟು ಹೇಳುತ್ತೇನೆ, ಖಂಡಿತವಾಗಿಯೂ ಮರಳಿ ನಾನು ಬರುತ್ತೇನೆ.”. ಎಂದು ನಂದಾ ಹೇಳಿತು. ಹುಲಿಗೆ ಅದೇನೇನೋ ನಂದಾ ಗೋವಿನ ಬಗ್ಗೆ ಭರವಸೆ ಮೂಡಿತು. “ಹೋಗಿ ಬೇಗನೆ ಬಾ ನಾನಿಲ್ಲಿ ಕಾಯುತ್ತ ಇರುತ್ತೇನೆ.” ಎಂದಿತು.
ಹುಲಿಯಿಂದ ಅಪ್ಪಣೆಯನ್ನು ಪಡೆದುಕೊಂಡ ನಂದಾ ಗೋವು ಓಡಿ ಓಡಿ ತನ್ನ ಕೊಟ್ಟಿಗೆಗೆ ಬಂದು ಕರುವಿಗೆ ಹಾಲನ್ನು ಉಣ್ಣಿಸಿತು. ಆಮೇಲೆ ತನ್ನ ಕರುವಿನೊಡನೆ ಕಂದಾ ನಾನು ಇಂದು ಇಲ್ಲಿಗೆ ಬರುವಾಗ ಬೆಟ್ಟದಲ್ಲಿ ಒಂದು ಹುಲಿ ಅಡ್ಡಗಟ್ಟಿ ನಿಂತು ನನ್ನನ್ನು ತಿನ್ನಲು ಬಂತು ನಾನು ಅದಕ್ಕೆ ಹಿಂತಿರುಗಿ ಬರುವ ಭಾಷೆಯನ್ನು ಕೊಟ್ಟು ಬಂದಿರುತ್ತೇನೆ. ಆದುದರಿಂದ ಕೊಟ್ಟ ಭಾಷೆಯಂತೆ ನಾನೀಗಲೇ ಹುಲಿಯ ಬಳಿಗೆ ಹೋಗುತ್ತೇನೆ, ನೀನು ಇಲ್ಲಿ ನಮ್ಮ ಈ ಬಳಗದೊಂದಿಗೆ ಸುಖವಾಗಿ ಇರು ಎಂದಿತು.
ಆಗ ಕರು ಅಮ್ಮಾ, ನೀನು ಮಾತ್ರ ಹೋಗಿ ಆ ಹುಲಿಯ ಬಾಯಿಗೆ ಏಕೆ ತುತ್ತಾಗಬೇಕು, ನಾನೂ ಬರುತ್ತೇನೆ, ನನ್ನನ್ನೂ ಆ ಹುಲಿ ತಿನ್ನಲಿ, ನನಗೆ ಅನುಮತಿ ಕೊಡು ಎಂದಿತು.
ಬೇಡ ಕಂದಾ, ನೀನು ಇನ್ನೂ ತುಂಬ ಚಿಕ್ಕವನು, ತುಂಬ ಸಮಯ ಬದುಕಲಿರುವೆ. ಲೋಕಕ್ಕೆ ಉಪಕಾರ ಮಾಡಲಿರುವೆಎಂದು ನಂದಾ ಅಡ್ಡಿಪಡಿಸಿತು.
ಆದರೆ ಕರು ಬಿಡಬೇಕಲ್ಲ, ಅದು ತಾನೂ ಬಂದೇ ತೀರುತ್ತೇನೆ ಎಂದು ಹಟ ಹಿಡಿಯಿತು. ಅದರ ಹಟವನ್ನು ತಡೆಯಲಾರದೆ ನಂದಾ ಕೊನೆಯಲ್ಲಿ ಒಪ್ಪಿಗೆಯನ್ನು ಕೊಟ್ಟಿತು. ತನ್ನೊಂದಿಗೆ ಕರುವನ್ನೂ ಕರೆದುಕೊಂಡು ಬಂದು ಹುಲಿಯ ಮುಂದುಗಡೆ ನಿಂತು ಹುಲಿಯಣ್ಣ, ಇದೋ ಕೊಟ್ಟ ಭಾಷೆಯಂತೆ ಬಂದಿರುತ್ತೇನೆ. ನೀನಿನ್ನು ನನ್ನನ್ನು ತಿನ್ನಬಹುದು ಎಂದಿತು.
ನಂದಾ ಗೋವಿನ ಮಾತನ್ನು ಕೇಳಿ ಹುಲಿಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಅದು ನಂದಾಗೋವನ್ನು ನೋಡುತ್ತ ನಿಂತಿತು. ಆಗ ಇದ್ದಕ್ಕಿದ್ದಂತೆ ಅದರ ದೇಹ ಪ್ರಭಂಜನ ರಾಜನ ದೇಹವನ್ನು ಪಡೆಯಿತು. ಅಷ್ಟರಲ್ಲಿ ಧರ್ಮನೂ ಪ್ರತ್ಯಕ್ಷನಾಗಿ ನಂದಾ, ಮಾತಿನಂತೆ ನಡೆದು ಒಳ್ಳೆಯ ಕೆಲಸವನ್ನೇ ಮಾಡಿದೆ. ಏನು ವರ ಬೇಕೋ ಕೇಳು, ಕೊಡುತ್ತೇನೆ ಎಂದನು.
ಧರ್ಮಪುರುಷಾ, ನನಗೆ ನನ್ನ ಮಗನೊಡನೆ ಉತ್ತಮಪದವನ್ನು ಕರುಣಿಸು. ಈ ಸ್ಥಳವು ಮುನಿಗಳಿಗೆ ಧರ್ಮದರ್ಶನವನ್ನು ಕೊಡುವ ಪುಣ್ಯ ಸ್ಥಳವಾಗಲಿ. ನಂದಾ ತನ್ನ ಅಭಿಲಾಷೆಯನ್ನು ನಿವೇದಿಸಿತು.
ಹಾಗೆಯೇ ಆಗಲಿ” ಎಂದು ಧರ್ಮನು ಸಮ್ಮತಿಸಿದ. ನಂದಾಗೋವು ವರವನ್ನು ಪಡೆದು ಸತ್ಯಲೋಕಕ್ಕೆ ತೆರಳಿತು. ಪ್ರಭಂಜನನು ಪುನಃ ರಾಜನಾಗಿ ಸತ್ಯಧರ್ಮಪ್ರಕಾರ ರಾಜ್ಯಭಾರ ಮಾಡತೊಡಗಿದ. ನಂದಾ(ಸರಸ್ವತೀ)ನದಿ ಮೊದಲು ಇದ್ದಲ್ಲಿಂದ ದಕ್ಷಿಣಕ್ಕೆ ಹರಿದು ಲೋಕಪಾವನೆಯಾಯಿತು.

ಮತ್ತಷ್ಟು ಸುದ್ದಿಗಳು

Latest News

2 ಖಾಸಗಿ ಬಸ್ಸುಗಳ ನಡುವೆ ಅಪಘಾತ ; ವಿಡಿಯೋ ವೈರಲ್

newsics.com ತಮಿಳುನಾಡು: ರಾಜ್ಯದ ಸೇಲಂನಲ್ಲಿ 2 ಖಾಸಗಿ ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ್ದು ಮೂವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಬಸ್ ಚಾಲಕ ಸೇರಿದಂತೆ ಸೀಟಿನಲ್ಲಿದ್ದ ಪ್ರಯಾಣಿಕರು...

ಪಿ ಎಸ್ ಐ ಅಕ್ರಮ ನೇಮಕಾತಿ: ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

newsics.com ಕಲಬುರಗಿ: ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಪ್ರಭು ಹಾಗೂ ಶರಣಪ್ಪ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕಲಬುರಗಿಯ ಮೂರನೇ ಜೆ ಎಂ ಎಫ್ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ...

ಉಪ್ಪಿನ ಕಾರ್ಖಾನೆ ಗೋಡೆ ಕುಸಿದು 12‌ ಕಾರ್ಮಿಕರು ಸಾವು

newsics.com ಅಹಮದಾಬಾದ್: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಗೋಡೆ ಕುಸಿದು ಬುಧವಾರ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್‌ನ ಮೊರ್‌ಬಿ ಜಿಲ್ಲೆಯ ಹಲ್‌ವಾಡ್ ಕೈಗಾರಿಕಾ ಪ್ರದೇಶದ ‘ಸಾಗರ್ ಸಾಲ್ಟ್ ಫ್ಯಾಕ್ಟರಿ’ಯಲ್ಲಿ ಈ ದುರಂತ ಸಂಭವಿಸಿದೆ. ಗುಜರಾತ್‌ನ ಕೈಗಾರಿಕಾ ಸಚಿವ ಬೃಜೇಶ್...
- Advertisement -
error: Content is protected !!