Monday, November 29, 2021

ಮಳೆ ಎಲ್ಲಿ ಸಿಗುತ್ತೆ?

Follow Us

* ಸೋಮು ಕುದರಿಹಾಳ , ಶಿಕ್ಷಕರು
response@134.209.153.225
newsics.com@gmail.com

ಶಾಲೆಗೆ ಸೂಟೀ ಇದ್ದ ದಿವಸ ಸಂದೀಪ ಮತ್ತು ಪ್ರದೀಪ ಇಬ್ಬರಿಗೂ ಕೆರೆ ಬಯಲು ಆಟದ ಮೈದಾನ ಆಗಿಬಿಟ್ಟಿತ್ತು. ಟೈರ್ ಗಾಡಿ ತಗಂಡು ಆಡಾಕ ಹೋದರು ಅಂದ್ರ ಹೊತ್ತು ಮುಣುಗಿದರೂ ಮನಿ ಸೇರ್ತಿದ್ದಿಲ್ಲ. ಸಂದೀಪ ಸ್ವಲ್ಪ ತುಂಟ ಮತ್ತು ಕಿಡಿಗೇಡಿ ಬುದ್ಧಿಯವನು. ಪ್ರದೀಪ ಯಾವಾಗಲೂ ಸೌಮ್ಯ ಸ್ವಭಾವದ ಹಾಗೂ ಹುಡುಕಾಟದ ಮನೋಭಾವದವನಾಗಿದ್ದ. ಇಬ್ಬರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರಿರುತ್ತಿರಲಿಲ್ಲ.
ಕೆರೆಯ ಬಯಲಿನಲ್ಲಿ ದನ ಮೇಯಿಸುತ್ತ ಕುಳಿತಿದ್ದ ಅಜ್ಜನನ್ನು ಮಾತನಾಡಿಸಿದ ಸಂದೀಪ ‘ಅಜ್ಜ.. ಕೆರ್ಯಾಗ ನೀರ ಇಲ್ಲ. ಇಲ್ಲಿ ಹೆಂಗ್ ಮೇಯ್ತಾವು ದನ? ಏನ್ ತಿಂತಾವು?’ ಎಂದು ಕೇಳಿದ. ‘ಎನ್ ಮಾಡೋದಪ ಮಕ್ಕಳ ಮಳಿ ಹೋತು ಬೆಳಿ ಹೋದ್ವು. ಒಣಗಿದ ಕೆರ್ಯಾಗ ಕಸ ಕಡ್ಡಿ ತಿಂತಾವು ದನಗಳು ಪಾಪ’ ಅಂದ ಅಜ್ಜನನ್ನು ಸಂದೀಪ ‘ಮತ್ತ ನೀರು ಎಲ್ಲಿ ಕುಡುಸ್ತಿ ದನಗೊಳಿಗೆ? ಎಂದು ಕೇಳಿದ. ‘ಅದೋ ಅಲ್ಲಿ ನೋಡ್ರಲ್ಲಿ. ಗುಂಡ್ಯಾಗ ಸ್ವಲ್ಪ ನಿಂತಾವಲ್ಲ ಅವ ನೀರು ಕುಡಿತಾವು’ ಎಂದು ಅಷ್ಟು ದೂರ ಕೈ ತೋರಿಸಿದ. ಅಷ್ಟು ದೂರವೂ ಹನಿ ನೀರಿನ ಹಸಿಗುರುತು ಕಾಣಲಿಲ್ಲ. ಈಗೀಗ ಒಣಗಿದ ನೀರಿನ ಗುಂಡಿಗಳಲ್ಲಿ ಭೂಮಿ ತಾಯಿಯ ಒಡೆದ ಪಾದಗಳಂತೆ ನೆಲದ ಬಿರುಕುಗಳು ಕಾಣುತ್ತಿದ್ದವು.
‘ಅಯ್ಯೋ ಅಜ್ಜ ಆ ನೀರು ಕುಡಿಸ್ಬ್ಯಾಡ. ಅದರಾಗ ಮೀನು ಸತ್ತಾವು. ಅಂದರ ನೀರು ಕೆಟ್ಟು ಹೋಗ್ಯಾವಜ್ಜ. ದನ ಸಾಯಿಸ್ತಿ ಬಿಡು ನೀನು’ ಅಂದ ಪ್ರದೀಪ. ‘ಹುಡುಗ್ರಾ ಈಗ ದನಗೊಳು ಏನ್ ಬದುಕ್ಯಾವೇನು?’ ಎಂಬ ಅಜ್ಜನ ಮಾತು ಹುಡುಗರಿಗೆ ಅರ್ಥವಾಗಲಿಲ್ಲ. ‘ಕೆರ್ಯಾಗಿನ ಎಲ್ಲಾ ನೀರನ್ನ ದನಗೊಳು ಕುಡಿದಾವೇನಜ್ಜ’ ಅಂದ ಸಂದೀಪ. ‘ಮಗನೇ ಬಾ ಇಲ್ಲಿ. ಕೆರ್ಯಾಗ ನೀರು ಬಂದಿದ್ರಲ್ಲ ಕುಡಿಯೋದು? ಮೂರ್ನಾಕು ವರ್ಷದಿಂದ ನೆಟ್ಟಗ ಮಳಿ ಬಂದಿಲ್ಲ ಕೆರಿ ತುಂಬಿಲ್ಲ’ ಅನ್ನುತ್ತ ಸಂದೀಪನ ತಲೆ ನೇವರಿಸಿದ ಅಜ್ಜ. ‘ಅಲ್ಲಜ್ಜ ಈ ಮಳಿ ಎಲ್ಲಿಂದ ಬರ್ತೈತಿ ಅಂತ ಹೇಳವಲ್ಲಿ ನೀನು’ ಎಂಬ ಪ್ರದೀಪನ ಮಾತಿಗೆ ನಗುತ್ತಾ ‘ಎಲ್ಲಿಂದ ಬರ್ತೈತಿ ಅಂದ್ರ ಆಕಾಶದಿಂದ ಬರುದಿಲ್ಲೇನು?’ ಎಂದು ಮರುಪ್ರಶ್ನೆ ಹಾಕಿ ‘ಮನಿಗೆ ಹೋಗ್ರೀ ಹೊತ್ತಾತು. ಬಿಸ್ಲಾಗ ಭಾಳೊತ್ತು ಆಡಬಾರದು.’ ಎಂದು ಕಳಿಸಿದ.
ಮಾರನೇ ದಿನ ಶಾಲೆಗೆ ಬಂದು ‘ಸಾರ್ ನಮ್ಮೂರಿನ ದನ ಕಾಯೋ ಅಜ್ಜ ಮಳಿ ಇಲ್ಲ ಅಂತ ಕೆರ್ಯಾಗ ನೀರಿಲ್ಲ ಅಂದ ಖರೇ ಏನ್ರಿ?’ ಎಂದು ಕೇಳಿದರು. ‘ಹೌದು ಅದರಲ್ಲೇನಿದೆ ತಪ್ಪು’ ಎಂದು ಉತ್ತರಿಸಿದರು ಶಿಕ್ಷಕರು. ‘ಮತ್ತ ಅಜ್ಜ ಹೇಳ್ಯಾನ್ರಿ ಆಕಾಶದಿಂದ ಮಳಿ ಬರ್ತೈತಿ ಅಂತ. ಅಷ್ಟು ದೊಡ್ಡ ಆಕಾಶ ಇದ್ದರೂ ಯಾಕ ಮಳಿ ಬರಂಗಿಲ್ರಿ?’ ಎಂದು ಕೇಳಿದ ಪ್ರದೀಪ. ‘ಅಜ್ಜ ಹೇಳಿದ್ದು ಸರಿ ಇದೆ. ಆದರೆ ಆಕಾಶದಲ್ಲಿ ಮೋಡಗಳಾಗಿ ಮಳೆ ಬರುತ್ತೆ’ ಎಂದು ಹೇಳಿದ ಶಿಕ್ಷಕರು ಮಕ್ಕಳ ಕುತೂಹಲ ಕಂಡು ಖುಷಿಯಾದರು. ಶಾಲೆ ಸೂಟಿಯಿದ್ದ ಮತ್ತೊಂದು ದಿನ ಅದೇ ಕೆರೆಯ ಹತ್ತಿರ ಆಟ ಆಡಲು ಹೋದಾಗ ಅರೆ ಬೋಳಾಗಿದ್ದ ತೂತುಬಿದ್ದ ಕೊಡೆಯಂತಿದ್ದ ಜಾಲಿಯ ಮರದ ನೆರಳಲ್ಲಿ ಕುಂತಿದ್ದ ಅಜ್ಜನಿಗೆ ‘ಅಜ್ಜ ನೀ ಹೇಳಿದ್ದೆಲ್ಲ ಆಕಾಶದಿಂದ ಮಳಿ ಬರುತ್ತಂತ. ಅದು ಹಂಗಲ್ಲ. ಮಾಡಗಳಿಂದ ಮಳಿ ಬರುತ್ತ’ ಅಂದ ಪ್ರದೀಪ. ‘ಹೌದಪ, ನಿಮ್ಮ ಗುರುಗಳು ಹೇಳಿದ್ದು ಖರೆ ಅದ’ ಅಂದ ಅಜ್ಜ. ಸಂದೀಪ ಮತ್ತೆ ಪ್ರಶ್ನಿ ಕೇಳಿದ ‘ಅಜ್ಜ ಮತ್ತ ನಮ್ಮೂರಾಗ ಯಾಕ ಮಾಡಗಳಿಲ್ಲ?’ ‘ನನಗೇನೋ ಗೊತ್ತಪ ತಮ್ಯಾ? ಅಲ್ಯಾದೋ ಊರಾ ಇರ್ತಾವಂತ! ಅಲಲಿ ಭಾಳ ಮಳಿ ಅಕ್ಕೈತಂತ! ಅವರು ಪುಣ್ಯ ಮಾಡ್ಯಾರ ನೋಡು’ ಅಂದ ಅಜ್ಜನ ಮಾತಿಗೆ ಪ್ರದೀಪ ಅದು ಯಾ ಕಡೆ ಐತಜ್ಜ ಊರು?’ ಎಂದು ಕೇಳಿದ. ‘ಯಾಕ? ಹೋಕಿರೇನು?’ ಎಂದು ಅಚ್ಚರಿ ವ್ಯಕ್ತಪಡಿಸಿದ ಅಜ್ಜ. ‘ಹೌದಜ್ಜ ನಮಗೆ ಮಳಿ ನೋಡೊ ಆಸೆ ಆಗೇತಿ. ಹೋಗಿ ನೋಡಿ ಬರ್ತಿವಿ.’ ಅಂದು ಹೋಟೇಬಿಟ್ಟರು.
ಸ್ವಲ್ಪ ದೂರ ಹೋದಮ್ಯಾಲೆ ಹೊಲದಾಗ ಕೆಲಸ ಮಾಡೊರು ಕಂಡ್ರು. ಅಲ್ಲಿ ಕಾಲುವೆದಾಗ ನೀರು ಹರಿತಿದ್ವು. ಅವರನ್ನು ಮಾತಾಡಿಸಿದ ಹುಡುಗರಿಗೆ ‘ಇಲ್ಲಿಂದ ಮೈಲು ದೂರದಾಗ ಹೊಳಿ ಐತಿ ಅಲ್ಲಿಂದ ನೀರು ಬರ್ತಾವು’ ಅಂತಾ ರೈತ ಹೇಳಿದ್ದಕ್ಕ ಖುಷಿಯಾಗಿ ಪ್ರದೀಪ ‘ಹೋಳ್ಯಾಗ ನೀರದಾವು ಅಂದರ ಇಲ್ಲಿ ಮಳಿ ಆಕೈತೇನು’ ಅಂತ ಕೇಳಿದ. ‘ಇಲ್ಲಿ ಅವಾಗವಾಗ ಅಕೈತಿ. ಆದರ ಭಾಳ ಮಳಿ ಆಗುವ ಕಡೆಯಿಂದ ಹೊಳಿಗೆ ನೀರು ಬರ್ತಾವು’ ಅಂದ ರೈತ. ‘ಭಾಳ ಮಳಿ ಎಲ್ಲಿ ಆಕೈತಿ’ ಅಂತ ಕೇಳಿದ್ದಕ್ಕ ‘ಹೊಳಿ ದಂಡಿಗುಂಟ ಹೋದರ ನಿಮಗ ಸಿಗುತ್ತ’ ಅಂದ ರೈತ. ‘ಆತು ನಾವು ಹೋಕಿವಿನ್ನ’ ಅಂದ ಹುಡುಗರನ್ನ ನಿಲ್ಲಿಸಿದ ರೈತ ತನ್ನ ಬುತ್ತಿಗಂಟು ಕೊಟ್ಟ. ಹೋದರು ಹೋದರು ಇಬ್ಬರೂ ನಡೆದು ನಡೆದು ಸಾಕಾದ್ರೂ ಬಿಡಲಿಲ್ಲ ಹಂಗ ಹೋದರು. ಹಸಿವಾದಂಗಾಗಿ ಒಂದು ಮರದ ನೆರಳಾಗ ಬುತ್ತಿಗಂಟು ಬಿಚ್ಕೆಂಡು ಕುಂತರು. ಗಾಡಿ ಎಲ್ಲ ಕೆಸರಾದ ಟ್ರ್ಯಾಕ್ಟರ್ ನೋಡಿದ ಪ್ರದೀಪ ‘ಸಂದೀಪ ಇಲ್ಲಿ ನೀರು ಜಾಸ್ತಿ ಇರಬಹುದು ಅನಸಾಕತ್ತೈತಿ ಯಾಕಂದ್ರ ಭತ್ತ ಬೆಳಿತಾರಿಲ್ಲಿ. ಭತ್ತ ಬೆಳೆಯೊ ಕಡೆ ಟ್ರ್ಯಾಕ್ಟರ ಮಾತ್ರ ಹಿಂಗಿರ್ತಾವು’ ಅಂದ. ಉಣ್ಣುವುದನ್ನು ಬಿಟ್ಟು ಓಡಿದ ಸಂದೀಪ ‘ಅಣ್ಣಾ ಇಲ್ಲಿ ಭತ್ತ ಬೆಳಿತಿರೇನು? ಅಷ್ಟು ನೀರು ನಿಮಗ ಎಲ್ಲಿಂದ ಬರುತ್ತ?’ ಅಂದ.
‘ಇಲ್ಲಿಂದ ಸ್ವಲ್ಪ ದೂರದಲ್ಲಿ ಡ್ಯಾಮ್ ಕಟ್ಟಿದಾರೆ ಅಲ್ಲಿಂದ ನೀರು ಬರುತ್ತೆ’ ಎಂಬ ಅವರ ಉತ್ತರದಿಂದ ಸಮಾಧಾನವಾಗದ ಪ್ರದೀಪ ‘ಡ್ಯಾಮ್ ಅಂದರೇನಣ್ಣ? ಮೋಡ ಇರ್ತಾವಾ ಅಲ್ಲಿ? ಮಳಿ ಸಿಗುತ್ತಾ ಅಲ್ಲಿ?’ ಎಂದು ಕೇಳಿದ್ದಕ್ಕ ಟ್ರ್ಯಾಕ್ಟರ್‍ನವನು ನಗುತ್ತ ‘ಡ್ಯಾಮ್ ಅಂದರೆ ನೀರು ಸಂಗ್ರಹಿಸೋ ಆಣೆಕಟ್ಟು. ಹೆಚ್ಚು ಮಳಿ ಆಗುವ ಕಡೆಯಿಂದ ಹರಿದು ಬರುವ ನೀರನ್ನು ಸಂಗ್ರಹ ಮಾಡಿರುತ್ತಾರೆ’ ಅಂದ. ‘ಹೆಚ್ಚು ಮಳಿ ಎಲ್ಲಿ ಅಕೈತಿ ಅದನ್ನ ಹೇಳ್ರಿ ಅಣ್ಣೋರ ನಮಗೆ’ ಅಂದ ಸಂದೀಪ. ‘ಇಲ್ಲಿಂದ ದೂರ ಹೋಗಬೇಕು. ಈ ಹೊಳೆಗೆ ನೀರು ಬರೋದು ಅಲ್ಲಿ ಮಳೆ ಆದಾಗಲೇ’ ಎಂದು ಹೇಳಿದಾಗ ಪ್ರದೀಪ ‘ಇವರ ಮಾತುಗಳ ಬ್ಯಾರೆ ಅದಾವ. ಅಂದರ ನಾವು ಭಾಳ ದೂರ ಬಂದೀವಿ. ಹೋಗೆಬಿಡನ ನಡಿ ಹೊಳಿದಂಡಿಗುಂಟ’ ಅಂದ.
ಬಹಳಷ್ಟು ದೂರ ಹೋದ ಸಂದೀಪ ಪ್ರದೀಪನಿಗೆ ಧುಮ್ಮಿಕ್ಕಿ ಹರಿಯುವ ಹೊಳಿ ಕಾಣ್ತು. ಹಂಗ ಅಡ್ಡಾಡ್ಕೋತ ಹೋದವರಿಗೆ ಅಲ್ಲೊಂದು ಇಲ್ಲೊಂದು ಮನಿ ಕಂಡ್ವು. ದೊಡ್ಡ ದೊಡ್ಡ ಮರಗಳು, ಸೂರ್ಯನ ಬಿಸಿಲು ನೆಲನ ಕಾಣಂಗಿಲ್ಲ ಹಂಗೆ ಕಾಡಿರುತ್ತೆ ಅಂತ ಮೇಷ್ಟ್ರು ಹೇಳಿದ ಮಾತು ನೆನಪಾಗಿ ಅದನ್ನು ಕಣ್ಣಾರೆ ಕಂಡ ಖುಷಿ, ಈಗ ಕಡ್ಕೊಂಡು ಧೊಪ್ಪನ ಬೀಳ್ತವನ ಬಿಡು ಅನ್ನಂಗ ಕರ್ರನ್ನ ಮಾಡ, ಬಿಟ್ಟಂಗಲ್ಲ ಬಂದಂಗಲ್ಲ ಐದು ನಿಮಿಷ ಬರೋದು ಹತ್ತು ನಿಮಿಷ ಬಿಡೋದು ಮಾಡೋ ಮಳಿ ನೋಡಿ ಇಬ್ಬರಿಗೂ ಎಲ್ಲಿಲ್ಲದ ಆನಂದ. ಅಲ್ಲಿನ ಸಾಲಿ ಹುಡುಗರು ಕೈಯಲ್ಲಿ ಕೊಡಿ, ರಸ್ತೆ ಮೇಲಿನ ಚಿಲಕುಗಟ್ಟಿದ ನೀರು, ಅದರಲ್ಲಿ ಮಕ್ಕಳು ಕಾಲಿಟ್ಟು ಕುಣಿದಾಡುವುದು, ಆ ಹುಡುಗರು ನಡೆಯುವಾಗ ಅವರ ಚಪ್ಪಲಿಗಳಿಂದ ಸಿಡಿಯುವ ನೀರು ಬೆನ್ನಿನ ಮೇಲಿನ ಅಂಗಿಯ ಮೇಲೆ ಚಿತ್ರ ಬಿಡಿಸಿ ತಲೆಯ ಮೇಲೆ ಹಾರಿಹೋಗುವುದನ್ನು ನೋಡುತ್ತ ಅಚ್ಚರಿಗೊಂಡ ಸಂದೀಪ ಮತ್ತು ಪ್ರದೀಪ ಇಬ್ಬರಿಗೂ ಬಾಯಲ್ಲಿ ನೀರೇ ಚಿಮ್ಮಿತ್ತು.
ಇವರಿಬ್ಬರನ್ನೂ ಕಂಡ ಅಲ್ಲಿನ ಹುಡುಗರು ‘ಎಂತ..? ಎಂತಕ್ಕ ಹಾಗ್ ನೋಡೂದು?’ ಎಂದು ಕೇಳಿದರು. ‘ಆ.. ಅ..’ ಎಂದು ಬಾಯಿಬಿಡುತ್ತ ಏನು ಅರ್ಥವಾಗದವರಂತೆ ನಿಂತುಬಿಟ್ಟರು ಸಂದೀಪ ಮತ್ತು ಪ್ರದೀಪ. ಅವರಲ್ಲೊಬ್ಬ ‘ಯಾವ ಊರು ನಿಮ್ಮದು?’ ಎಂದ. ‘ನಮ್ಮದ್ರ್ಯಾ ಬಯಲ ಸೀಮಿ’ ಅಂದ ಸಂದೀಪ. ‘ಬಯಲು ಸೀಮೆ! ಎಂತದು ಮಾರ್ರೇ? ಎಂತಕ್ ಬಂದಿದ್ದು ಇಲ್ಲಿ? ಎಂದು ಕೇಳಿದ ಮತ್ತೊಬ್ಬ. ‘ಮಳಿ ನೋಡಾಕ್ ಬಂದಿದ್ವಿರಿ’ ಎಂದ ಪ್ರದೀಪನ ಮಾತಿನಿಂದ ಆ ಹುಡುಗರೆಲ್ಲರೂ ನಕ್ಕರು. ‘ಮಳಿ ನೋಡಿಲ್ಲವಾ? ಎಂತ ಜನ ನೀವು? ಯಾಕೆ ಅಲ್ಲಿ ಮಳೆ ಬರುವುದಿಲ್ಲವೋ?’ ಎಂದು ಕೇಳಿದರು. ‘ಇಲ್ರಿ ಬರಲ್ರಿ’ ಅಂದರು ಇಬ್ಬರೂ ಒಬ್ಬರಾಗಿ. ‘ಎಂತಕ್ಕ ಬರೂದಿಲ್ಲ ಗೊತ್ತುಂಟಾ? ನಿಮ್ಮೂರಲ್ಲಿ ಮರಗಿಡಗಳಿಲ್ಲ. ಇದ್ದವನ್ನೆಲ್ಲ ಕಡಿದು ಬಿಟ್ಟಿರಿ. ಇಲ್ಲಿ ನೋಡಿ ಎಂತ ಕಾಡುಂಟು. ಅದಕ್ಕೆ ಹೀಗೆ ಮಳೆ ಬರೋದಿಲ್ಲಿ’ ಎಂದ ಒಬ್ಬ ಹುಡುಗ ‘ಬರ್ರೋ ಮಳೆ ಹೆಚ್ಚಾಗ್ತಾ ಉಂಟು. ಮನೆ ಸೇರುವ’ ಅನ್ನುತ್ತಿದ್ದಂತೆ ಎಲ್ಲ ಹುಡುಗರು ಮನೆಯ ಕಡೆ ಹೋದರು. ಮಳೆ ಹುಡುಕುತ್ತಾ ಹೋದ ಸಂದೀಪ ಮತ್ತು ಪ್ರದೀಪನಿಗೆ ಮಳಿ, ಮೋಡ ಮತ್ತು ಕಾಡು ಕಂಡು ಅಲ್ಲೇ ಇರಬೇಕು ಅನಿಸಿದ್ದು ಸುಳ್ಳಲ್ಲ.

ಮತ್ತಷ್ಟು ಸುದ್ದಿಗಳು

Latest News

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು...

ಒಮಿಕ್ರೋನ್ ಭೀತಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ

newsics.com ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಒಮಿಕ್ರೋನ್ ಹರಡುವ ಭೀತಿಯ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದ್ದು,...

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ

newsics.com ಬೆಂಗಳೂರು: ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 5 ನಗರ ಸಭೆ,...
- Advertisement -
error: Content is protected !!