- ಹೊ.ರಾ. ಪರಮೇಶ್, ಹೊಡೇನೂರು
response@134.209.153.225
ಅದೊಂದು ದಿನ ಆ ಬಡ ರೈತನು ಮಾರಿದ ಕೆಲವು ಬಡಕಲು ಹಸುಗಳನ್ನು ಕೊಂಡೊಯ್ಯಲು ದಲ್ಲಾಳಿಯು ಟ್ರಕ್ ನ್ನು ತಂದು ನಿಲ್ಲಿಸಿಕೊಂಡಿದ್ದ. ರೈತನ ಕೊಟ್ಟಿಗೆಯ ಪಕ್ಕದ ಸಣ್ಣ ಗುಡ್ಡಕ್ಕೆ ಟ್ರಕ್ ತನ್ನ ಹಿಂದಿನ ಭಾಗವನ್ನು ಆನಿಸಿಕೊಂಡಿತ್ತು. ರೈತನು ಐದಾರು ದನಗಳನ್ನು ದಲ್ಲಾಳಿ ಮತ್ತು ಇತರ ಸ್ಥಳೀಯರ ಸಹಕಾರದಿಂದ ಟ್ರಕ್ ಗೆ ಹತ್ತಿಸಿದ್ದನು. ಆ ಹಸುಗಳೆಲ್ಲ ಅಸಹಾಯಕವಾಗಿ ಮನೆಯ ಬಾಗಿಲು ಕಡೆಗೆ ಅಂಬಾ….ಎಂದು ಅರಚುತ್ತಿರುವುದನ್ನು ನೋಡಿದ ರೈತನ ಹೆಂಡತಿ ಜಯಮ್ಮ ಸೀರೆಯಂಚಿನ ಸೆರಗಿನಿಂದ ಕಣ್ಣೀರು ಒರೆಸಿಕೊಳ್ಳುತ್ತಾ ಬಿಕ್ಕಳಿಸುತ್ತಿದ್ದಳು. ಕೊನಯದಾಗಿ ಮುದ್ದಾದ ಬಿಳಿಯ ಕರುವನ್ನು ಟ್ರಕ್ ಗೆ ಹತ್ತಿಸುವಾಗ ದುಃಖ ತಡೆಯಲಾಗದೆ ಜಯಮ್ಮ ತನ್ನ ಗಂಡನಿಗೆ ಗೋಗರೆಯುತ್ತಾ “ಇದೊಂದು ಕರುವನ್ನಾದರು ಬಿಟ್ಟು ಬಿಡಿ, ಹೇಗಾದರೂ ಮಾಡಿ ನಾನು ಸಾಕುತ್ತೇನೆ” ಎನ್ನುತ್ತಾ ರೋದಿಸಿದಳು. ಹೆಂಡತಿಯ ಕಣ್ಣೀರಿಗೆ ಕರಗದ ರೈತನು ಅವಳನ್ನು ಬೈಯ್ಯುತ್ತ, “ಹಾಲು ಕುಡಿಯುವ ಕರುವನ್ನು ಹೇಗೆ. ಸಾಕೋಕಾಗುತ್ತೆ, ಬಾಯಿ ಮುಚ್ಕೊಂಡು ಇರು” ಎಂದು ಹೇಳಿ ಅದನ್ನೂ ಟ್ರಕ್ ಗೆ ಹತ್ತಿಸಿದನು. ಕಡೆಗೆ ದಲ್ಲಾಳಿಯವನು ಕೊಟ್ಟ ಹಣವನ್ನು ತೆಗೆದುಕೊಂಡು ಹೆಂಡತಿಯನ್ನು ಮನೆಯೊಳಗೆ ಎಳೆಯುತ್ತ ಬಾಗಿಲು ಹಾಕಿಕೊಂಡನು.
ದನಗಳನ್ನು ನಿರ್ಜೀವ ಸಾಮಾನುಗಳಂತೆ ತುರುಕಿ ತುಂಬಿಕೊಂಡ ದಲ್ಲಾಳಿಯ ಟ್ರಕ್ , ತಗ್ಗು ದಿಣ್ಣೆಗಳಿಂದ ಕೂಡಿದ ಕಚ್ಚಾ ರಸ್ತೆಯಲ್ಲಿ ಭರ್ರನೆ ನಗರದ ಕಡೆಗೆ ಹೊರಟಿತ್ತು. ಪುಟ್ಟ ಟ್ರಕ್ ನಲ್ಲಿ ನಿಲ್ಲಲು ಆಗದೆ, ಮಲಗಲೂ ಅವಕಾಶ ಇಲ್ಲದೆ, ಅತ್ತಿಂದಿತ್ತ ಇತ್ತಿಂದತ್ತ ಬೀಳುತ್ತಿದ್ದ ಏಳುತ್ತಿದ್ದ ದನಗಳು ತಮ್ಮ ತಮ್ಮಲ್ಲೇ ಗೋಳು ಹಂಚಿಕೊಂಡು ನೋವು ಅನುಭವಿಸುತ್ತಿದ್ದವು. ಮುದಿ ಹಸುವೊಂದು “ನೋಡಿ ಮಕ್ಕಳೇ, ನಮ್ಮ ಬಾಳು ಹೀಗೆ ಗೋಳಾಗುತ್ತದೆ ಅಂತಾ ಗೊತ್ತಿದ್ದರೆ ಖಂಡಿತಾ ದನವಾಗಿ ಹುಟ್ಟುತ್ತಿರಲಿಲ್ಲ. ರೈತನ ಮನೇಲಿರೊ ಪುಟ್ಟ ಬೆಕ್ಕಿನ ಥರ ಹುಟ್ಟಿದ್ದರೂ ಅವರಿವರನ್ನು ಹೆದರಿಸಿಕೊಂಡು, ಕದ್ದು ಹಾಲು ಕುಡಿಯುತ್ತ, ಕಂಡ ಕಂಡ ಇಲಿಗಳನ್ನು ತಿನ್ನುತ್ತಾ ಆರಾಮವಾಗಿರಬಹುದಿತ್ತು. ಏನು ಮಾಡೋದು, ಎಲ್ಲಾ ನಮ್ಮ ದೌರ್ಭಾಗ್ಯ!” ಎಂದಿತು. ಇದನ್ನು ಕೇಳಿದ ಮತ್ತೊಂದು ಹಸು “ನಮ್ಮ ಮಾಲೀಕ ನಮ್ಮನ್ನು ಯಾಕೆ ಇವರ ಜೊತೆ ಕಳಿಸುತ್ತಿದ್ದಾರೆ?” ಎಂದು ಮುಗ್ಧವಾಗಿ ಕೇಳಿತು. ಇನ್ನೊಂದು ಹಸು ವೇದನೆಯಿಂದಲೇ “ಅಯ್ಯೋ ಪೆದ್ದು, ಅಷ್ಟು ಗೊತ್ತಿಲ್ವ, ವಯಸ್ಸಾದ ಮೇಲೆ ನಾವು ಹಾಲು ಕೊಡೊಲ್ಲ, ದುಡಿಮೆ ಮಾಡೋಕಾಗೊಲ್ಲ , ಮೇವು ಕೊಟ್ಟು ನಮ್ಮನ್ನು ನೋಡಿಕೊಂಡರು ಪ್ರಯೋಜನ ಇಲ್ಲ ಅಂತ ಮಾರಿಬಿಟ್ಟಿದ್ದಾರೆ.” ಎಂದು ತಿಳಿಸಿತು. ಆಗ ಅಲ್ಲಿಯೆ ನರಳುತ್ತಿದ್ದ ಕರು ನೋವಿನ ನಡುವೆಯು ಕುತೂಹಲದಿಂದ ” ನಮ್ಮನ್ನು ಕರೆದುಕೊಂಡು ಹೋಗಿ ಈ ದಲ್ಲಾಳಿ ಏನು ಉಪಯೋಗ ಪಡೆದುಕೊಳ್ಳೋಕ್ಕಾಗುತ್ತದೆ?” ಎಂದು ಮುಗ್ಧತೆಯಿಂದ ಪ್ರಶ್ನೆ ಮಾಡಿತು. ಆಗ ಮುದಿ ಹಸು ದುಃಖದಿಂದ ” ನಮಗೆ ಇದು ಕೊನೆ ಪ್ರಯಾಣ, ಈ ದಲ್ಲಾಳಿ ಕಸಾಯಿಖಾನೆಗೆ ಮಾರಿಬಿಡುತ್ತಾರೆ. ಅವರು ನಮ್ಮನ್ನು ಕೊಂದು ಮಾಂಸವನ್ನು ಹೋಟೆಲ್ ಗಳಿಗೆ, ಜನರಿಗೆ ಮಾರಿ ಲಾಭ ಮಾಡ್ಕೋತಾರೆ. ಬೇಸಾಯ ಮಾಡೋಕೆ ಯಂತ್ರೋಪಕರಣಗಳು ಬಂದ ಮೇಲೆ ಇತ್ತೀಚೆಗೆ ನಮ್ಮನ್ನು ಸಾಕೋ ರೈತರು ತುಂಬಾ ಕಡಿಮೆ ಆಗಿದಾರೆ. ಪೌಡರ್ ಹಾಲು ಕುಡಿಯೋ ಅಭ್ಯಾಸ ಬೆಳಿಸ್ಕೊಂಡಿರೋದ್ರಿಂದ ನಮ್ಮನ್ನು ಸಾಕೋ ಉಪ ಕಸುಬನ್ನು ಬಿಟ್ಟು ಬಿಟ್ಟಿದಾರೆ” ಅಂತ ಹೇಳಿದ ತಕ್ಷಣ ಎಲ್ಲಾ ಹಸುಗಳು ಬೆಚ್ಚಿದವು. ಅದರಲ್ಲೂ ಪ್ರಪಂಚವನ್ನು ಇನ್ನೂ ಪೂರ್ತಿಯಾಗಿ ಕಂಡಿಲ್ಲದ ಪುಟ್ಟ ಕರುವು “ಅಯ್ಯೋ… ನಾನು ಸಾಯ್ತೀನ…ನನ್ನನ್ನು ಕೊಲ್ತಾರಾ….!?”ಎನ್ನುತ್ತ ಅಳತೊಡಗಿತು. ಈ ಕಂದನ ಸಂಕಟವನ್ನು ಕಂಡು ಉಳಿದ ಹಸುಗಳೆಲ್ಲವೂ ಮಮ್ಮಲ ಮರುಗಿದವು. “ನಮಗಂತೂ ವಯಸ್ಸಾಯ್ತು, ನಾವು ಸತ್ರೇ ನಷ್ಟವೇನಿಲ್ಲ, ಪಾಪ! ಈ ಪುಟ್ಟ ಕರುವನ್ನಾದರು ಬದುಕಿಸಬೇಕು” ಎಂದು ಆಲೋಚನೆ ಮಾಡಿದವು.
ದಾರಿ ಮಧ್ಯದ ಡಾಭಾವೊಂದರಲ್ಲಿ ದಲ್ಲಾಳಿ ಊಟ ಮಾಡಲು ಗಾಡಿಯನ್ನು ರಸ್ತೆಯ ಒಂದು ಅಂಚಿನಲ್ಲಿ ನಿಲ್ಲಿಸಿ ಒಳಗೆ ನಡೆದನು. ಪುಟ್ಟ ಕರುವನ್ನು ಉಳಿಸಬೇಕೆಂದು ಕಾಯುತ್ತಿದ್ದ ಹಸುಗಳೆಲ್ಲವು ಆ ಕರುವಿಗೆ “ಹೇಗಾದರೂ ಉಪಾಯದಿಂದ, ಎಲ್ಲಿಯಾದರೂ ಮರೆಯಾಗಿ ಬದುಕಿಕೋ ಹೋಗು” ಎಂದು ಬುದ್ಧಿ ಹೇಳುತ್ತಾ, ಎರಡೂ ಕಡೆಯಿಂದ ತಲೆಯಲ್ಲಿ ಎತ್ತಿ ಕರುವನ್ನು ಟ್ರಕ್ ನಿಂದ ಕೆಳಗೆ ಬೀಳಿಸಿದವು. ಸ್ವಲ್ಪ ನೋವಾದರೂ ತಡೆದುಕೊಂಡ ಕರು ಕೃತಜ್ಞತೆಯಿಂದ ಸಾವಿನ ಕಡೆಗೆ ಹೋಗುವ ತನ್ನ ಪರಿವಾರದ ಬಂಧುಗಳಿಗೆ ಕಣ್ಣಿನಲ್ಲಿಯೇ ನಮಸ್ಕರಿಸಿತು. ಇದನ್ನು ನೋಡುತ್ತಾ ಕಂಬನಿಗರೆಯುತ್ತಿದ್ದ ಹಸುಗಳು ಕಿವಿಗಳನ್ನು ಆಡಿಸುವ ಮೂಲಕ ಶುಭ ಕೋರಿದವು. ಹಾಗೆಯೇ ತಮ್ಮ ಭವಿಷ್ಯ ನೆನೆಯುತ್ತ ಭಯಪಡತೊಡಗಿದವು. ಹಿರಿಯರ ನೆರವಿನಿಂದ ಜೀವದಾನ ಪಡೆದ ಕರುವು, ತಲೆ ಮರೆಸಿಕೊಳ್ಳಲು ರಸ್ತೆಯಿಂದ ದೂರವಾಗಿ ಕಾಡಿನ ಕಡೆಗೆ ಸಾಗಿತು.
“ಬದುಕಿದೆಯಾ ಬಡ ಜೀವವೇ” ಎಂದುಕೊಂಡು ಹಸಿವಿನಿಂದ ಬಳಲಿದ್ದ ಕರು ಕಾಡಿನೊಳಗಿನ ಹುಲ್ಲನ್ನು ಆಯ್ದು ಮೇಯುತ್ತಾ ಹೊಟ್ಟೆ ತುಂಬಿಸಿಕೊಂಡಿತು. ಪಕ್ಕದಲ್ಲಿ ಹರಿಯುತ್ತಿದ್ದ ಕಿರುಗಾಲುವೆಯಲ್ಲಿ ನೀರು ಕುಡಿದು ಮರದ ನೆರಳಿನಲ್ಲಿ ಮಲಗಿಕೊಂಡು,ಮೇವು ಮತ್ತು ತನ್ನ ಹಿರಿಯರ ಕಷ್ಟವನ್ನು ಮೆಲುಕು ಹಾಕುತ್ತಾ ಹಾಗೇ ಆಯಾಸದ ನಿದ್ರೆಗೆ ಜಾರಿತು.
ಅಷ್ಟು ಹೊತ್ತಿಗೆ ಸೂರ್ಯನು ತನ್ನ ಅಸ್ತಮಾನದ ಅವಸರದಲ್ಲಿ ಪಶ್ಚಿಮ ಘಟ್ಟಗಳ ಸಂದಿನ ಮೂಲಕ ಮರೆಯಾಗತೊಡಗಿದ್ದ. ಕತ್ತಲಾವರಿಸುವ ಸೂಚನೆ ಕಂಡು ಹುಲಿಯೊಂದು ಕಾಡಿನ ಕಡೆಯಿಂದ ಆಹಾರಕ್ಕಾಗಿ ಹಳ್ಳಿಯ ಕಡೆ ಸಾಗಿ ಬರುತ್ತಿತ್ತು. ಅದೇ ಮಾರ್ಗದಲ್ಲಿ ಮರದಡಿ ಮಲಗಿದ್ದ ಕರುವಿನ ಉಸಿರಾಟದ ವಾಸನೆ ಗ್ರಹಿಸಿದ ಹುಲಿರಾಯನು ತನಗೆ ಇವತ್ತಿನ ಬೇಟೆ ನಿರಾಯಾಸವಾಗಿ ದೊರಕಿತೆಂದು ಖುಷಿಪಡುತ್ತ ಆ ಕರುವಿನ ಬಳಿಗೆ ಬಂದಿತು. ಆಯಾಸದಿಂದ ಗಾಢ ನಿದ್ರೆಗೆ ಜಾರಿದ್ದ ಕರುವು ಮಲಗಿರುವ ಪರಿಯನ್ನು ಗಮನಿಸಿದ ಹುಲಿಗೆ ಒಮ್ಮೆಲೇ ಅದರ ಮೇಲೆ ದಾಳಿ ಮಾಡಲು ಮನಸ್ಸಾಗಲಿಲ್ಲ. ನಿದ್ರೆ ಮುಗಿಸಿ ಏಳುವ ತನಕವೂ ಕಾಯೋಣ ಎಂದುಕೊಂಡು ಅದರ ಪಕ್ಕದಲ್ಲಿ ನಿಶ್ಯಬ್ದವಾಗಿ ಕಾಲುಗಳನ್ನು ಮುಂಚಾಚಿಕೊಂಡು ಕರುವನ್ನೇ ನೋಡುತ್ತಾ ಕುಳಿತುಕೊಂಡಿತು.
ಸ್ವಲ್ಪ ಹೊತ್ತಿನ ನಂತರ ಕರುವು ಕನವರಿಸುತ್ತ “ಅಮ್ಮಾ…ನೀನು ನನ್ನನ್ನು ಈ ಕಾಡಿನಲ್ಲಿ ಬಿಟ್ಟು ಹೋದೆ, ಈಗ ನಾನು ಹೇಗೆ ಬದುಕಲೀ… ಯಾರಾದರೂ ನನ್ನನ್ನು ಕೊಂದುಬಿಟ್ಟರೆ… ಆ ಕಸಾಯಿಖಾನೆಗೇ ನಾನೂ ಬರಬೇಕಿತ್ತು. ನಿನ್ನ ಜೊತೆಯಲ್ಲಿಯೇ ಸಾಯಬಹುದಿತ್ತು. ಅಯ್ಯೋ ದೇವರೇ ಯಾಕಾದರೂ ನನ್ನನ್ನು ಹಸುವಿನ ಕರುವಾಗಿ ಹುಟ್ಟಿಸಿದೆ. ಒಂದು ಹುಲಿಯಾಗಿಯಾದರೂ ಹುಟ್ಟಿದ್ದರೆ ಶಕ್ತಿಯಿಂದ, ಧೈರ್ಯದಿಂದ, ಇತರ ಪ್ರಾಣಿಗಳನ್ನು ಕೊಂದಾದರೂ ಹೊಟ್ಟೆ ಹೊರೆದುಕೊಳ್ಳುತ್ತಿದ್ದೆ. ಈಗೇನು ಮಾಡಲೀ….” ಎನ್ನುತ್ತ ಗಳಗಳನೆ ಕಣ್ಣೀರು ಸುರಿಸುತ್ತಲೇ ಎಚ್ಚರವಾಯಿತು. ಕತ್ತಲಾವರಿಸಿರುವುದನ್ನು ಕಂಡು ಮತ್ತಷ್ಟು ಭಯದಿಂದ ಜೋರಾಗಿ ಅಳತೊಡಗಿತು. ಕರುವಿನ ಈ ಆಕ್ರಂದನವನ್ನು ಕಂಡ ಹುಲಿಗೆ ಕರುಳು ಕಿವುಚಿದಂತಾಯಿತು. ಆ ಪುಟ್ಟ ಕರುವಿನ ಅಸಹಾಯಕತೆಯನ್ನು ಕಂಡು ತುಂಬಾ ಮರುಕಪಟ್ಟಿತು. ಹೇಗಾದರೂ ಅದಕ್ಕೆ ಧೈರ್ಯ ಹೇಳಬೇಕು,ಸಹಾಯ ಮಾಡಬೇಕು, ಎಂದುಕೊಂಡು ಮೆಲ್ಲನೆ ಕರುವಿನ ಮೇಲೆ ಮುಂಗಾಲುಗಳಿಂದ ನೇವರಿಸುತ್ತ ” ಧೈರ್ಯವಾಗಿರು, ನಾನು ಹುಲಿರಾಯ. ಆಹಾರಕ್ಕಾಗಿ ಮಾತ್ರ ನಾನು ಇತರೆ ಪ್ರಾಣಿಗಳನ್ನು ಬೇಟೆಯಾಡುವೆ. ನರಮಾನವರಂತೆ ದ್ವೇಷಕ್ಕಾಗಿ, ಮಾರಾಟಕ್ಕಾಗಿ, ದುರಾಸೆ ದುರ್ಬಳಕೆಗಾಗಿ ಯಾರನ್ನೂ ಕೊಲ್ಲುವುದಿಲ್ಲ. ನಾನು ನಿನಗೆ ಸಹಾಯ ಮಾಡುವೆ…”ಎಂದು ಸಮಾಧಾನಪಡಿಸಿತು.
ಮೊದಲಿಗೆ ಹೆದರಿಕೊಂಡ ಕರುವು ಹುಲಿರಾಯನು ಹೇಳಿದ ಸಮಾಧಾನದ ಮಾತುಗಳಿಂದ ಧೈರ್ಯ ತಂದುಕೊಂಡು ತನ್ನ ಕಷ್ಟವನ್ನೆಲ್ಲಾ ವಿವರಿಸಿತು. ಕರುವಿನ ಕರುಣಾಜನಕವಾದ ಕತೆಯನ್ನು ಕೇಳಿದ ಹುಲಿಯು ಕರುವನ್ನು ಕರೆದುಕೊಂಡು ಪಕ್ಕದ ಗ್ರಾಮದ ಕಡೆಗೆ ನಡೆಯಿತು. ಅಲ್ಲಿ ಊರ ಗೌಡನೊಬ್ಬನ ದನದ ಕೊಟ್ಟಿಗೆಯೊಳಗೆ ಪ್ರವೇಶಿಸಿತು. ಹುಲಿಯನ್ನು ನೋಡಿ ಭಯಪಟ್ಟ ಹಸುಗಳೆಲ್ಲವೂ ಒಮ್ಮೆಲೇ ಅಂಬಾ…ಎನ್ನುತ್ತಾ ಚೀರಿಕೊಂಡವು. ಆ ಸದ್ದು ಕೇಳಿ ಓಡೋಡಿ ಬಂದ ಊರ ಗೌಡನು ಹುಲಿಯನ್ನು ಕಂಡು ತಾನೂ ಭಯದಿಂದ ಓಡಲು ಮುಂದಾದನು. ಅವನನ್ನು ತಡೆದ ಹುಲಿರಾಯನು ” ಗೌಡಾ… ಹೆದರಬೇಡ, ನಾನು ನಿನ್ನಷ್ಟು ದುಷ್ಟನಲ್ಲ. ಯಾವುದೇ ತೊಂದರೆ ಕೊಡುವುದಿಲ್ಲ. ಯಾವ ಹಸುವನ್ನೂ ಕೊಲ್ಲುವುದಿಲ್ಲ. ಆದರೆ ನನಗೊಂದು ಮಾತು ಕೊಡಬೇಕು.” ಎಂದು ಘರ್ಜಿಸುತ್ತಲೇ ಹೇಳಿತು. ನಾನು ಮತ್ತು ನನ್ನ ದನಕರುಗಳು ಉಳಿದರೆ ಸಾಕು ಎಂದುಕೊಂಡ ಗೌಡನು “ಹೇಳು ಹುಲಿರಾಯ, ಅದು ಯಾವ ಮಾತಾದರೂ ಸರಿಯೆ, ತಪ್ಪದೆ ನಡೆಸಿಕೊಡುತ್ತೇನೆ” ಎಂದನು. ಆಗ ಹುಲಿಯು ತನ್ನ ಜೊತೆಗಿದ್ದ ಕರುವನ್ನು ತೋರಿಸುತ್ತಾ “ಈ ತಬ್ಬಲಿ ಕರುವಿಗೆ ನಿನ್ನ ಕೊಟ್ಟಿಗೆಯಲ್ಲಿ ಆಶ್ರಯ ನೀಡಬೇಕು. ಅದನ್ನು ತುಂಬಾ ಚೆನ್ನಾಗಿ ಸಾಕಬೇಕು. ಎಲ್ಲಾ ದನಕರುಗಳ ಜೊತೆಗೆ ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು. ಇದಕ್ಕೆ ನೀನು ಒಪ್ಪಿಕೊಂಡರೆ ನಿನಗಾಗಲೀ, ನಿನ್ನ ಇತರೆ ದನಕರುಗಳಿಗಾಗಲಿ ಯಾವುದೇ ತೊಂದರೆ ಕೊಡುವುದಿಲ್ಲ. ಈ ಷರತ್ತಿಗೆ ನೀನು ಒಪ್ಪುವೆ ತಾನೆ” ಎಂದಿತು ಹುಲಿರಾಯ. ‘ಒಂದು ದುಷ್ಟ ಪ್ರಾಣಿಯು ಒಳ್ಳೆಯ ಒಪ್ಪಂದಕ್ಕೆ ತಾನಾಗಿಯೇ ಮುಂದಾಗಿದೆ. ಜೊತೆಗೆ ತನಗೂ, ತನ್ನ ದನಕರುಗಳಿಗೂ ಹಾನಿ ಮಾಡುವುದಿಲ್ಲ ಎನ್ನುತ್ತಿರುವಾಗ ಒಪ್ಪದೆ ಇರುವುದು ಮೂರ್ಖತನವಾದೀತು’ ಎಂದು ಯೋಚಿಸಿದ ಊರಗೌಡನು ಹುಲಿರಾಯನಿಗೆ “ತಪ್ಪದೆ ಕರುವನ್ನು ಪೋಷಿಸಿಕೊಂಡು, ಅದರ ಸಂತತಿಯನ್ನೂ ಮುಂದೆ ಸಲಹಿಕೊಳ್ಳುತ್ತೇನೆ” ಎಂಬ ವಚನವನ್ನು ನೀಡಿದನು. ಆಗ ಹುಲಿಯು ” ನಾನು ಪಕ್ಕದ ಕಾಡಿನಲ್ಲಿಯೆ ವಾಸಿಸುತ್ತಿದ್ದೇನೆ. ನಿತ್ಯವೂ ಬಂದು ಗಮನಿಸುತ್ತೇನೆ, ಈ ಕರುವಿನ ಆರೈಕೆಯಲ್ಲಿ ಒಂಚೂರು ಕೊರತೆಯಾದರೂ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಅಷ್ಟೇ ಅಲ್ಲ, ನಿಮ್ಮ ಊರಿನ ಯಾರ ಮನೆಯಲ್ಲಿಯೂ ಯಾವುದೇ ದನಕರುಗಳನ್ನೂ ಕಸಾಯಿಖಾನೆಗೆ ಕಳಿಸಬಾರದೆಂಬ ಕಟ್ಟಪ್ಪಣೆ ಮಾಡಿಸು.” ಎಂದು ಹೇಳಿ, ಜೊತೆಗೆ ಬಂದ ಮುದ್ದು ಕರುವನ್ನು ಅಪ್ಪಿ ಮುದ್ದಾಡಿತು. ಹುಲಿಯು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಕರುವೂ ಪ್ರೀತಿಯಿಂದ ವಂದಿಸಿತು. ಒಂದು ಒಳ್ಳೆಯ ಕಾರ್ಯ ಮಾಡಿದ ತೃಪ್ತಿಯಿಂದ ಹೊರಟ ಹುಲಿಯು ಕತ್ತಲಿನಲ್ಲಿಯೇ ಕಣ್ಣರೆಯಾಗಿ ಕಾಡಿನೊಳಗೆ ಹೋಯಿತು.
ಇತ್ತ ಊರಗೌಡನು ತಾನು ಚಿಕ್ಕವನಾಗಿದ್ದಾಗ ಕೇಳಿದ “ಪುಣ್ಯಕೋಟಿಯ ಕತೆ”ಯನ್ನು ಮನದಲ್ಲೇ ಸ್ಮರಿಸಿಕೊಂಡನು. ಮುಂದೆ ಆ ಕರುವಿನ ಜೊತೆಗೆ ಎಲ್ಲಾ ದನಕರುಗಳನ್ನೂ ಬಹಳ ಖುಷಿಯಿಂದ ನೋಡಿಕೊಳ್ಳುತ್ತಲೇ, ಊರಿನ ಜನರೆಲ್ಲರೂ ಹಾಗೆಯೇ ಬಾಳುವಂತೆ ಜಾಗ್ರತೆ ವಹಿಸಿದನು.