Wednesday, August 4, 2021

ಕಾಡಜ್ಜನ ಕಾಡು

Follow Us

  • ಸೋಮು ಕುದರಿಹಾಳ
    response@134.209.153.225

ಕಾಡಿಗೆ ಅಂಟಿಕೊಂಡೇ ಇದ್ದ ಒಂದು ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕಾಡಜ್ಜ ಸೌದೆ ಮಾರಿ ಜೀವನ ಸಾಗಿಸುತ್ತಿದ್ದ. ಅದರಲ್ಲಿಯೇ ಸ್ವಲ್ಪ ಹಣ ಉಳಿಸಿ ಸಸಿಗಳನ್ನು ತಂದು ನೆಡುತ್ತಿದ್ದ. ತಂದು ನೆಟ್ಟ ಗಿಡಗಳು ಬೆಳೆದು ಕಾಡಿಗೆ ಕಾಡೇ ಬೆರಗಾಗುವಂತೆ ಆಗಿತ್ತು. ಇದರಿಂದ ಕಾಡಿಗಾಗಲಿ ಕಾಡಜ್ಜನಿಗಾಗಲಿ ನಷ್ಟವೇನೂ ಇರಲಿಲ್ಲ. ಕೊಟ್ಟು ತೆಗೆದುಕೊಳ್ಳುವ ಕೊಡುಕೊಳಿ ಉತ್ತಮವಾಗಿಯೇ ಇತ್ತು. ತನ್ನ ಜೀವನ ನಿರ್ವಹಣೆಗೆ ಬೇಕಾಗುವಷ್ಟು ಹಣಕ್ಕಾಗಿ ತಾನು ಬೆಳೆಸಿದ ಮರಗಳನ್ನೇ ಕಡಿದು ಸೌದೆಯನ್ನು ಮಾರಾಟ ಮಾಡಿಕೊಂಡು ಹೋಗುತ್ತಿದ್ದ. ಇದ್ದಕ್ಕಿದ್ದಂತೆ ಅರಣ್ಯ ಇಲಾಖೆ ಈ ಕಾಡನ್ನು ರಕ್ಷಿತಾರಣ್ಯವೆಂದು ಘೋಷಣೆ ಮಾಡಿತು. ಗಿಡಮರಗಳನ್ನು ಕಡಿಯದಂತೆ ಕಟ್ಟುನಿಟ್ಟಾದ ನಿಯಮದಿಂದ ಕಾಡಜ್ಜನ ಕೈಕಟ್ಟಿ ಹಾಕಿದಂತಾಯಿತು.
ಹೇಗೋ ಸಂಗ್ರಹದಲ್ಲಿ ಒಣಗಿಸಿಟ್ಟಿದ್ದ ಸೌದೆಯನ್ನು ಮಾರಿ ಕೆಲದಿನಗಳನ್ನು ದೂಡಿದ. ವಾರ ಕಳೆದಂತೆ ಕಾಡಜ್ಜನಿಗೆ ಅನ್ನ ನೀರಿಗಾಗಿ ಬವಣೆಯಾಯಿತು. ಗುಡಿಸಲಿನ ಬಿದಿರು ಗೊಡೆಗೆ ಒರಗಿ ಆಕಾಶಕ್ಕೆ ಉಸಿರು ಚೆಲ್ಲಿ ಕುಳಿತಿದ್ದ ಕಾಡಜ್ಜನಿಗೆ ಮಾವಿನ ಮರ ಬೇವಿನ ಮರಗಳ ಟೊಂಗೆಗಳು ಕಂಡವು. ಆ ಎರಡು ಮರಗಳು ಗುಡಿಸಲಿನ ಎಡಬಲಕ್ಕಿದ್ದವು. ಜೀವದ ಉಸಿರು ಎದೆಯೊಳಗೆ ಸುಳಿದಾಡಿದಂತಾಯಿತು. ತಕ್ಷಣವೇ ಎದ್ದು ಕೊಡಲಿ ಕತ್ತಿಯನ್ನು ತಂದು ಯೋಚಿಸತೊಡಗಿದ. ಕಾಡಜ್ಜ ಯಾವಾಗಲೂ ಮರ ಕಡಿದರೆ ಪೂರ್ತಿ ಮರ ಉರುಳಿಸುತ್ತಿರಲಿಲ್ಲ. ಮರದಿಂದ ಬಾಗಿದ್ದ ಅಥವಾ ಬೀಳುವಂತಿದ್ದ ಟೊಂಗೆಗಳನ್ನಷ್ಟೇ ಕಡಿಯುತ್ತಿದ್ದ. ವಾರದಿಂದ ಅರೆಬರೆ ಉಂಡು ಉಪಾವಾಸವಿದ್ದು ಬಳಲಿದ್ದ ಕಾಡಜ್ಜನಿಗೆ ಮರುದಿನ ಗುರುವಾರವೆಂಬುದು ಹಾಗೂ ಆ ದಿನ ಸಂತೆ ಎಂಬುದೂ ತಕ್ಷಣ ಹೊಳೆಯಿತು. ಸಂತೆಯ ದಿನ ಎಲ್ಲ ವಹಿವಾಟಿನಂತೆ ಸೌದೆ ವ್ಯಾಪಾರವೂ ಜೋರಾಗಿಯೇ ಇರುತ್ತಿತ್ತು ಹಾಗೂ ಆ ದಿನ ಬೆಲೆ ಸ್ವಲ್ಪ ಜಾಸ್ತಿ ಆದರೂ ನಡೆಯುತ್ತಿತ್ತು. ಹಸಿವು ಕಾಡಜ್ಜನ ವಯೋಸಹಜ ಮರೆವು ಮರೆಸಿ ಹುಷಾರಾಗಿರುವಂತೆ ಮಾಡಿತ್ತು.
ಎಲೆಗಳೆಲ್ಲ ಉದುರಿ ಬೋಳು ಬೋಳಾಗಿದ್ದ ಬೇವಿನ ಮರದ ಟೊಂಗೆಯನ್ನು ಕಡಿಯುವುದೋ ಮುಂಬರುವ ದಿನಗಳ ನಂತರ ಹಣ್ಣು ಕೊಡುವ ಮಾವಿನಮರದ ಟೊಂಗೆಯನ್ನು ಕಡಿಯುವುದೋ ಅಂದುಕೊಳ್ಳುತ್ತಾ ಗುಡಿಸಲ ಬಳಿ ಇದ್ದ ಒರಟು ಕಲ್ಲಿಗೆ ಕೊಡಲಿ ಮಸೆಯುತ್ತಿದ್ದ. ಇದನ್ನು ಗಮನಿಸಿದ ಬೇವಿನ ಮರ ಎಲ್ಲಿ ತನ್ನನ್ನೇ ಮೊದಲು ಕಡಿದುಬಿಡುತ್ತಾನೇನೊ ಎಂಬ ಭಯದಿಂದ ‘ಕಾಡಜ್ಜ ನನ್ನನ್ನು ಕಡಿಯಬೇಡ, ಚಳಿಗಾಲದಲ್ಲಿ ಎಲೆಗಳು ಉದುರುವುದು ಸಹಜ ಅಲ್ಲವೇ? ಇನ್ನು ಕೆಲವೇ ದಿನಗಳಲ್ಲಿ ಹಚ್ಚಹಸಿರು ತುಂಬಿಕೊಂಡು ಬಿಸಿಲು ಕಾಲಕ್ಕೆ ನಿನಗೆ ನೆರಳಾಗುತ್ತೇನೆ. ಆ ಮಾವಿನಮರವನ್ನೇ ಕಡಿದು ಬಿಡು’ ಎಂದಿತು. ತಕ್ಷಣವೇ ಮಾತನಾಡಿದ ಮಾವಿನಮರ ‘ಅಜ್ಜ ನಾನು ಹಣ್ಣನ್ನೂ ನೆರಳನ್ನೂ ಕೊಡುತ್ತೇನೆ ಆ ಬೇವಿನಮರವನ್ನೇ ಕಡಿ’ ಎಂದು ಚುಟುಕಾಗಿ ಹೇಳಿ ಸುಮ್ಮನಾಯಿತು.
ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡ ಕಾಡಜ್ಜ ಗುಡಿಸಲೊಳಗೆ ಹೋಗಿ ಗಟಗಟ ನೀರು ಕುಡಿದು ಉಸಿರು ನುಂಗಿದ. ಈ ಮರಗಳನ್ನಾದರೂ ಯಾಕೆ ಕಡಿಯಲಿ? ಈ ಗುಡಿಸಲಾದರೂ ಯಾಕೆ ಬೇಕು? ಅನ್ನುತ್ತಾ ಅದರಲ್ಲಿದ್ದ ಬಿದಿರು ಗಳಗಳನ್ನು ಹಿರಿಯತೊಡಗಿದ. ಇವನ್ನೇ ಮಾರುತ್ತೇನೆ, ಈ ಕೊಡಲಿ ಕತ್ತಿಗಳನ್ನೆ ಮಾರಿಬಿಡುತ್ತೇನೆ! ಆ ಹಣದಲ್ಲಿ ಈ ವಾರದ ಬದುಕು ಮುಗಿಯಲಿ ಎಂದು ಗೊಣಗುತ್ತಿದ್ದ ಕಾಡಜ್ಜನ ಮೈಯೆಲ್ಲಾ ಬೆವರು. ಆತನ ಸಂಕಟ ನೋವನ್ನು ಅರ್ಥ ಮಾಡಿಕೊಂಡ ಮರವೊಂದು ಜೋರು ಸಪ್ಪಳ ಮಾಡುತ್ತಾ ದೊಪ್ಪನೆ ಬಿದ್ದಿತು. ಹೋಗಬೇಡವೆಂದು ಆತನ ದಾರಿಗೆ ಅಡ್ಡ ನಿಂತಿತು. ಕಂಡರೂ ಕಾಣದಂತೆ ಕೇಳಿದರೂ ಕೇಳಿದಂತೆ ಕಾಡಜ್ಜ ಹೆಜ್ಜೆ ಹಾಕತೊಡಗಿದ.

ಮತ್ತಷ್ಟು ಸುದ್ದಿಗಳು

Latest News

16 ವರ್ಷದ ಬಾಲಕಿಯ ಅತ್ಯಾಚಾರಗೈದು ಕೊಲೆ

newsics.com ಕೋಲಾರ : ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತನೊಬ್ಬ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ‌ಮಾಡಿದ ಘಟನೆ ಕೋಲಾರದ ಮಾಲೂರು ಬಳಿ ನಡೆದಿದೆ....

ವಾಟ್ಸ್’ಆ್ಯಪ್ ನಲ್ಲಿನ್ನು ಒಂದು ಬಾರಿ ಫೋಟೋ, ವಿಡಿಯೋ ನೋಡಿದ ಬಳಿಕ ಮಾಯ

newsics.com ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ ಹೊಸ ಫೀಚರ್ ಪರಿಚಯಿಸಿದೆ. ಈ ಬಾರಿ View Once ಎನ್ನುವ ಆಯ್ಕೆ ಪರಿಚಯಿದೆ. ವಾಟ್ಸ್ಆ್ಯಪ್ ಮೂಲಕ ಫೋಟೊ ಮತ್ತು ವಿಡಿಯೊಗಳನ್ನು view Once ಆಯ್ಕೆಯ ಮೂಲಕ...

29 ನೂತನ ಸಚಿವರ ಪ್ರಮಾಣ ವಚನ, ಭುಗಿಲೆದ್ದಿದೆ ಸ್ಥಾನ ವಂಚಿತರ ಆಕ್ರೋಶ

newsics.com ಬೆಂಗಳೂರು:  ದೆಹಲಿಯಲ್ಲಿ ಒಂದು ವಾರ ಕಾಲ ನಡೆದ ಸಮಾಲೋಚನೆ ಬಳಿಕ ಅಂತಿಮವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 29 ಸದಸ್ಯರು ಸಚಿವರಾಗಿ ಪ್ರಮಾಣ ವಚನ...
- Advertisement -
error: Content is protected !!