* ಪ್ರಶಾಂತ ಭಟ್ ಕೋಟೇಶ್ವರ
response@134.209.153.225
ಒಂದು ಗ್ರಾಮದಲ್ಲಿ ಒಬ್ಬಳು ಅಜ್ಜಿ ವಾಸವಾಗಿದ್ದಳು. ಪ್ರತಿದಿನ ಆಕೆ ಕೆರೆಯಿಂದ ಎರಡು ಕೊಡಗಳಲ್ಲಿ ನೀರನ್ನು ತುಂಬಿ ಮನೆಯಲ್ಲಿ ಶೇಖರಿಸುತ್ತಿದ್ದಳು.
ಆದರೆ, ಆ ಎರಡು ಕೊಡಗಳಲ್ಲಿ ಒಂದು ತೂತಾದ ಕೊಡವಾಗಿತ್ತು. ಮನೆ ತಲುಪುತ್ತಿದ್ದಂತೆ ಆ ಕೊಡದ ನೀರು ಅರ್ಧವಾಗಿ ಕಡಿಮೆಯಾಗಿರುತ್ತಿತ್ತು.
ಸುಮಾರು ಒಂದು ವರ್ಷ ಕಳೆಯಿತು. ತೂತಾದ ಕೊಡಕ್ಕೆ ತನ್ನ ಬಗ್ಗೆ ನೆನೆದು ನಾಚಿಕೆ ಅನಿಸತೊಡಗಿತು.
ಒಳ್ಳೆಯ ಕೊಡ ಕೂಡಾ ತೂತಾದ ಕೊಡವನ್ನು ಹಿಯ್ಯಾಳಿಸತೊಡಗಿತು. ಗೇಲಿ ಮಾತುಗಳು ಮತ್ತು ಅವಮಾನದಿಂದ ತೂತಾದ ಕೊಡಕ್ಕೆ ತುಂಬಾ ಬೇಸರವಾಯಿತು. ನನ್ನಿಂದ ಯಾರಿಗೂ ಉಪಯೋಗವಿಲ್ಲ ಅಂತ ಕೊರಗುತ್ತಾ ತನ್ನನ್ನು ತಾನೇ ದ್ವೇಷಿಸತೊಡಗಿತ್ತು.
ಕೊನೆಗೆ ಆ ಕೊಡವು ಅಜ್ಜಿಯತ್ರ ಹೇಳಿತ್ತು – ಯಾರಿಗೂ ಬೇಡವಾದ, ಉಪಯೋಗ ಆಗದ ನನ್ನನ್ನು ನಾಶಮಾಡಿಬಿಡಿ.
ಅದಕ್ಕೆ ಅಜ್ಜಿಯು ಮುಗುಳ್ನಗುತ್ತಾ ಹೇಳುತ್ತಾರೆ – ನಾನು ನಿನ್ನನ್ನು ಕೊಂಡೊಯ್ಯುವಾಗ ನೀರು ತುಂಬಿ ಎತ್ತಿಕೊಂಡು ಹೋಗುವ ಬದಿಯನ್ನು ನೋಡು.
ಕೊಡವು ಆ ಕಡೆ ನೋಡಿದಾಗ ಹಚ್ಚ ಹಸಿರಾಗಿ ಬೆಳೆದು ನಿಂತ ಹೂಗಿಡಗಳು ಮತ್ತು ಸುವಾಸನೆ ಬೀರುತ್ತಾ ಅರಳಿ ನಿಂತಿರುವ ಹೂಗಳು…..!
ಅಜ್ಜಿ ಮುಂದುವರಿಸುತ್ತಾ – ನಿನಗೆ ತೂತಾಗಿದ್ದುದು ನನಗೆ ಮೊದಲೇ ಗೊತ್ತಿತ್ತು. ಆದ್ದರಿಂದಲೇ ನಿನ್ನನ್ನು ಎತ್ತಿಕೊಂಡು ಹೋಗುವ ಬದಿಯಲ್ಲಿ ಹೂಗಿಡಗಳನ್ನು ನೆಟ್ಟದ್ದು. ಆ ಸುಂದರವಾದ ಹೂ ಗಿಡಗಳಿಗೆ ಕಾರಣಕರ್ತ ನೀನೇ …
ಅಜ್ಜಿಯ ಮಾತನ್ನು ಕೇಳಿದ ತೂತಾದ ಕೊಡಕ್ಕೆ ತನ್ನ ಬೆಲೆ ಏನು ಅಂತ ಅರಿವಾಯಿತು.