Wednesday, May 18, 2022

ಬದಲಾದ ಬೇಟೆಗಾರ

Follow Us

ನೀನು ಹೋಗಿ ನಿನ್ನ ಬಂಧುಗಳಿಗೆ ತಿಳಿಸಿ ಹೇಳು. ವನಸಂಪತ್ತನ್ನು, ವನ್ಯಜೀವಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡುವುದಾದರೆ ಮಾತ್ರ ನಾವು ನಿನ್ನನ್ನು ಬಿಡುತ್ತೇವೆ..” ಎಂದು ಹೇಳಿದಾಗ ಬೇಟೆಗಾರನು ಅದಕ್ಕೆ ಒಪ್ಪಿಕೊಂಡನು. ಎಲ್ಲರೂ ಆನಂದದಿಂದ ತಮ್ಮ ಮನೆಯನ್ನು ಸೇರಿಕೊಂಡರು. ಮುಂದೆ ಆ ಬೇಟೆಗಾರ ಒಕ್ಕಲುತನ ಮಾಡಲು ಪ್ರಾರಂಭ ಮಾಡಿದ. ಕಾಡನ್ನು ಕಾಪಾಡಿ ಬೆಳೆಸಿದ.

    ಕಲರವ    


ಮಲಿಕಜಾನ್ ಶೇಖ್, ಅಕ್ಕಲಕೋಟ, ಸೊಲ್ಲಾಪುರ

newsics.com@gmail.com


 ಹೀ ಗೊಂದು ‘ಗುಲ್ ಮಹೆಕ್’ ಎಂಬ ಕಾಡು. ಆ ಕಾಡಿನಲ್ಲಿ ಮೊಲ, ನಾಗರಹಾವು ಮತ್ತು ಗರುಡ ವಾಸವಾಗಿದ್ದವು. ಕಾಡಿನ ಒಂದು ಕಡೆಗೆ ಮೊಲ ಹುಲ್ಲಿನ ಪೊದೆಯಲ್ಲಿ ಒಂದು ಮನೆ ಮಾಡಿಕೊಂಡು ತನ್ನ ಮಕ್ಕಳೊಂದಿಗೆ ಸುಖವಾಗಿ ಬಾಳುತಿತ್ತು. ಇತ್ತ ಕಾಡಿನ ಮಧ್ಯದಲ್ಲಿ ‘ಗುಲ್ ಮಹೆಕ್’ ಸರೋವರದ ದಂಡೆಯ ಬಿಲದಲ್ಲಿ ನಾಗರಹಾವು ವಾಸಿಸುತ್ತಿತ್ತು. ಸುತ್ತಲಿನ ಎಲ್ಲ ಪಶುಪಕ್ಷಿಗಳು ಬಂದು ಈ ಸರೋವರದಲ್ಲಿ ನೀರು ಕುಡಿದು ತಮ್ಮ ದಣಿವನ್ನು ಹಗುರ ಮಾಡಿಕೊಳ್ಳುತ್ತಿದ್ದವು. ಈ ಸರೋವರದಿಂದಲೆ ಆ ಕಾಡಿಗೂ ಸಹ ‘ಗುಲ್ ಮಹೆಕ್’ ಎಂಬ ಹೆಸರು ಬಂದಿರಬಹುದು. ಪಕ್ಷಿಗಳ ರಾಜ ಗರುಡನು ಅಲ್ಲಿಯ ಎತ್ತರವಾದ ಪರ್ವತದ ಮೇಲೆ ನೆಲೆಸಿ ಕಾಡನೆಲ್ಲ ವಿಕ್ಷಿಸುತ್ತಿದ್ದನು.
ಹೀಗಿರುವಾಗ, ಒಂದು ದಿನ ಅಲ್ಲಿ ಬೇಟೆಗಾರನು ಬೇಟೆಯ ಶೋಧದಲ್ಲಿ ಬಂದನು. ಆತ ತನ್ನ ತೀಕ್ಷ್ಣವಾದ ಬಾಣದಿಂದ ಹಾಯಾಗಿ ಹುಲ್ಲು ತಿನ್ನುತ್ತಿದ್ದ ಜಿಂಕೆಗೆ ಗುರಿಯಿಟ್ಟು ಬಾಣ ಬಿಟ್ಟನು. ಅದು ನೇರವಾಗಿ ಜಿಂಕೆಯ ಎದೆಗೆ ತಾಗಿತು. ಆಗ ಜಿಂಕೆ ನೆಲದ ಮೇಲೆ ಬಿದ್ದು ಒದ್ದಾಡುತ್ತಾ, ಕಿರಿಚಲು ಪ್ರಾರಂಭಿಸಿತು. ಅದೇ ಸಮಯಕ್ಕೆ ತನ್ನ ಮಕ್ಕಳಿಗೆ ಆಹಾರಕ್ಕಾಗಿ ಬಂದ ಮೊಲವು ಇದನ್ನು ಕೇಳಿ, ಗಾಬರಿಗೊಂಡು ಒಮ್ಮೇಲೆ ‘ಟಣ್..’ ಎಂದು ನೆಗೆದು ತನ್ನ ಮನೆಯತ್ತ ಓಡಲು ಪ್ರಾರಂಭಿಸಿತು. ಈ ಓಡುತ್ತಿರುವ ಮೊಲವನ್ನು ನೋಡಿದ ಬೇಟೆಗಾರ, “ಆಹಾ..! ಇನ್ನೊಂದು ಬೇಟೆ ಸಿಕ್ಕಿತ್ತಲ್ಲಾ..! ನಾನು ಹೊಡೆದ ಬಾಣದಿಂದ ಈ ಜಿಂಕೆ ಪ್ರಾಣ ಬೀಡುವದು ಖಚಿತ. ಅಲ್ಲಿಯವರೆಗೆ ಆ ಬೇಟೆಯನ್ನು ತರುತ್ತೇನೆ..” ಎಂದು ಹೇಳುತ್ತಾ ಬೇಟೆಗಾರನು ತನ್ನ ಬಿಲ್ಲನ್ನು ಮೊಲದತ್ತ ಮಾಡಿ ಅದರ ಹಿಂದೆ ಧಾವಿಸಲು ಪ್ರಾರಂಭಿಸಿದನು. ಬೇಟೆಗಾರನು ತನ್ನತ್ತ ಬರುವುದನ್ನು ನೋಡಿದ ಮೊಲವು ತಕ್ಷಣ ತನ್ನ ದಾರಿಯನ್ನು ಬದಲಿಸಿ ‘ಗುಲ್ ಮಹೆಕ್’ ಸರೋವರದತ್ತ ಓಡಲು ಪ್ರಾರಂಭಿಸಿತು. ಕಾರಣ ಈ ಕ್ರೂರ ಬೇಟೆಗಾರ ತನ್ನ ಮನೆಯತ್ತ ಬಂದರೆ ಮಕ್ಕಳನ್ನು ಸಹ ಕೊಲ್ಲಬಹುದೆಂಬ ಭಯ ಅದಕ್ಕಿತ್ತು.
ದಾರಿಯುದ್ದಕ್ಕೂ ಬೇಟೆಗಾರನು ಮೊಲ ನೋಡಿದ ತಕ್ಷಣ ಬಾಣ ಬಿಡುತ್ತಿದ್ದನು. ಅವುಗಳಿಂದ ತಪ್ಪಿಸಿಕೊಂಡು ಅದು ಮುಂದಕ್ಕೆ ಓಡುತ್ತಿತ್ತು. ಕೊನೆಗೆ ಆ ಮೊಲವು ‘ಗುಲ್ ಮಹೆಕ್’ ಸರೋವರದ ದಂಡೆಯಲ್ಲಿಯ ನಾಗರಹಾವಿನ ಹತ್ತಿರ ಬಂದು ಅದರ ಹಿಂದೆ ಅವಿತುಕೊಂಡಿತು. ನಾಗರಹಾವು ಆಗ ತಾನೆ ಭಕ್ಷಣೆ ಮಾಡಿ ವಿಶ್ರಾಂತಿ ಪಡೆದುಕೊಳ್ಳುತ್ತಿತ್ತು. ಮೊಲದ ಸ್ಪರ್ಶದಿಂದ ಒಮ್ಮೆಲೇ ಎಚ್ಚರವಾಗಿ ನೋಡಿದರೆ, ಎದುರಿಗೆ ಬಿಲ್ಲು ಹೂಡಿ ನಿಂತುಕೊಂಡ ಬೇಟೆಗಾರ ಮತ್ತು ಇತ್ತ ಪ್ರಾಣದ ಭಿಕ್ಷೆ ಬೇಡುತ್ತಿರುವ ಮೊಲ. ಆಗ ನಾಗರಹಾವು ಒಮ್ಮೆಲೇ ಬೇಟೆಗಾರನತ್ತ ತಿರುಗಿ ಹೆಡೆ ಎತ್ತಿ ನಿಂತು ಮೊಲಕ್ಕೆ ತನ್ನ ಹಿಂದೆ ನಿಂತುಕೊಳ್ಳಲು ಹೇಳಿತು.
ಎದುರಿಗೆ ನಾಗರಹಾವು ನೋಡಿದ ಬೇಟೆಗಾರ ತಕ್ಷಣ ನಿಂತು, ಕ್ರೋದಿತನಾಗಿ, “ಎಲೆ…. ಎ… ನಾಗರಹಾವೇ… ನನ್ನ ದಾರಿಯಿಂದ ದೂರ ಸರಿ; ಅದು ನನ್ನ ಬೇಟೆ, ನನಗೆ ಬಿಟ್ಟುಕೋಡು..” ಎಂದು ಹೇಳಿದ. ಈ ಮಾತಿಗೆ ಹಾವು ಕೂಡ ಭುಸುಗುಡುತ್ತಾ, “ಲೋ„„ ಕ್ರೂರ ಬೇಟೆಗಾರನೆ, ನಾನು ನಿನ್ನಷ್ಟು ನೀಚ ಆಸೆಯುಳ್ಳವನಲ್ಲ; ನಾನು ಇದೀಗ ಭಕ್ಷಣೆ ಮಾಡಿದ್ದೇನೆ. ಈ ಹೊತ್ತಿನ ಹೊಟ್ಟೆ ತುಂಬಿತು, ಇನ್ನೇನಿದ್ದರೂ ಸಂಜೆಯೆ ಬೇಟೆ„„” ಎಂದು ಹೇಳಿತು. ಆಗ ಬೇಟೆಗಾರ ಬಾಣ ಬಿಗಿಯುತ್ತಾ, “ಎಲೆ„„ ಹಾವೆ, ಬೇಡ ನಿನ್ನ ಕಪಟ ನಾಟಕ. ಸ್ವಂತ ಮನೆ ಕಟ್ಟಿಕೊಳ್ಳದ ನೀನು, ಇನ್ನೂ ತಾನಾಗಿಯೇ ಬಂದ ಬೇಟೆಯನ್ನು ಬಿಟ್ಟು ಕೊಡುತ್ತೀಯಾ„„. ಸುಮ್ಮನೆ ನನ್ನ ಬೇಟೆಯನ್ನು ನನಗೆ ಒಪ್ಪಿಸು, ಇಲ್ಲದಿದ್ದರೆ ನಿನ್ನನ್ನು ಕೂಡ ಈ ಬಾಣದಿಂದ ಕೊಂದು ಹಾಕುವೆ..” ಎಂದು ಮುಂದಡಿಯಿಟ್ಟ. ಈ ಮಾತನ್ನು ಕೇಳಿದ ನಾಗರಹಾವು ನಗುತ್ತಾ ಹೇಳುತ್ತದೆ, “ಎಲೆ„„ ಬುದ್ಧಿವಂತ ಮನುಷ್ಯನೆ, ನನಗೆ ಮನೆ ಕಟ್ಟಿಕೊಳ್ಳಲು ಯಾವ ಅವಯವಗಳಿಲ್ಲ, ಅದಕ್ಕೆ ಎಲ್ಲಿಯಾದರೂ ಇದ್ದು ಬದುಕುತ್ತೇನೆ. ಆದರೆ ನೀನು ಮಾತ್ರ, ನಿನ್ನ ಮನೆಗಾಗಿ ಇಡೀ ಪ್ರಾಣಿ ಸಂಕುಲವನ್ನೇ ಸಂಕಟದಲ್ಲಿ ಸಿಲುಕಿಸಿದಿಯಲ್ಲಾ..? ವ್ಹಾ, ಎಂತಹ ಬುದ್ಧಿವಂತ ಪ್ರಾಣಿ ನೀನು..!” ಆಗ “ನನ್ನ ಬುದ್ಧಿ ಬಗ್ಗೆ ಮಾತನಾಡುತ್ತೀಯಾ, ನಿನ್ನನ್ನು ಮುಗಿಸಿಬಿಡುತ್ತೇನೆ..” ಎಂದು ಬೇಟೆಗಾರ ಬಾಣ ಬಿಡಲು ಸಿದ್ಧನಾದ. ಆಗ ಹಾವು, “ಎ„„.. ಬೇಟೆಗಾರನೆ„„, ಸುಮ್ಮನೆ ಹೊರಟು ಹೋಗು ಇಲ್ಲಿಂದ; ಈ ಮೊಲವು ನನ್ನ ಹತ್ತಿರ ಪ್ರಾಣ ಭಿಕ್ಷೆ ಕೇಳಿ ಬಂದಿದೆ. ನನ್ನ ಪ್ರಾಣ ಹೋದರೂ ಸರಿ, ನಾನು ಅದರ ಜೀವವನ್ನು ಕಾಪಾಡುತ್ತೇನೆ” ಎಂದು ಹೇಳುತ್ತಾ ಮತ್ತಷ್ಟು ಸಿಟ್ಟಿನಿಂದ ಭುಸುಗುಟ್ಟಿತು.
ಬೇಟೆಗಾರನು ಹಾವನ್ನು ಹೊಡೆಯುವುದಕ್ಕಾಗಿ ಬಿಲ್ಲಿನಿಂದ ಬಾಣ ಬಿಡುವ ಸಮಯಕ್ಕೆ, ಭರ್ರ„„ ಎಂದು ಗರುಡ ಅಲ್ಲಿಗೆ ಬಂದಿತು. ಬೇಟೆಗಾರನ ಕೈಯಲ್ಲಿದ್ದ ಬಿಲ್ಲನ್ನು ತನ್ನೆರಡು ಕಾಲಿನಿಂದ ಕಿತ್ತುಕೊಂಡು ಸರೋವರದಲ್ಲಿ ಬಿಸಾಕಿತು. ಹೂಡಿದ ಬಾಣವು ಗುರಿ ತಪ್ಪಿ ಕಲ್ಲಿಗೆ ತಾಗಿತು. ಅಷ್ಟರಲ್ಲಿಯೆ ಹಾವು ಸಳ„„ ಸಳನೆ ಬಂದು ಬೇಟೆಗಾರನ ಕಾಲಿಗೆ ಸುತ್ತಿಕೊಂಡು ಅವನ ಮುಖದತ್ತ ಹೆಡೆ ಎತ್ತಿ ನಿಂತಿತು. ಗರುಡ ಅವನ ನೆತ್ತಿಯ ಮೇಲೆ ಕೂತುಕೊಂಡಿತು.
ಆಗ ಗರುಡ ಬೇಟೆಗಾರನಿಗೆ ಹೇಳಿತು, “ಬೇಟೆಗಾರನೆ„„, ನಾನು ನಿನ್ನನ್ನು ನಿತ್ಯವೂ ನೋಡುತ್ತೇನೆ, ನಿನ್ನ ಮನೆಯನ್ನು ನೋಡಿದ್ದೇನೆ. ನಿನ್ನ ಮನೆಯಲ್ಲಿ ನಿನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳು ಮಾತ್ರ ಇರುವರು. ನಿನಗೆ ಮತ್ತು ಅವರಿಗೆ ಎಷ್ಟು ಬೇಕು ಅಷ್ಷನ್ನೆ ನೀನು ಬೇಟೆಯಾಡಬೇಕಿತ್ತು. ನೀನು ಧನಿಕನಾಗಬೇಕೆಂಬ ದುರಾಸೆಯಿಂದ ಮನಬಂದಂತೆ ಬೇಟೆ ಆಡುತ್ತಿದ್ದೀಯಾ.. ನಿನಗೆ ಪಾಠ ಕಲಿಸಬೇಕೆಂದು ಕಾದು ಕುಳಿತಿದ್ದೆ, ಇಂದು ಆ ಸಮಯ ಬಂದಿದೆ. ನಾಗರಾಜನೆ ಕಚ್ಚು ಇವನಿಗೆ, ಕೊಂದು ಬಿಡೋಣ ಇವನನ್ನು..” ಆಗ ಬೇಟೆಗಾರನು ವಂಚನೆಯ ಧ್ವನಿಯಲ್ಲಿ ಹಾವಿಗೆ, “ಎ„„ ಹಾವೇ, ಈ ಗರುಡ ನಿನ್ನನ್ನು ಮೂರ್ಖನನ್ನಾಗಿ ಮಾಡುತ್ತಿದ್ದಾನೆ. ನನ್ನನ್ನು ಕೊಲ್ಲಿಸಿ, ನಿಮ್ಮಿಬ್ಬರನ್ನು ತಿನ್ನುವ ಹುನ್ನಾರ ಹೂಡಿದ್ದಾನೆ. ನನ್ನ ಮಾತನ್ನು ಕೇಳು; ನನಗೆ ಆ ಬಿಲ್ಲನ್ನು ತಂದು ಕೊಡು, ಇವನ್ನು ಮುಗಿಸುತ್ತೇನೆ..” ಎಂದು ಹೇಳುತ್ತಾನೆ. ಆಗ ಗರುಡ, “ಬೇಟೆಗಾರನೆ„„, ನಾನು ನಿಮ್ಮ ಮನುಷ್ಯರಂತಹ ವಿಶ್ವಾಸದ್ರೋಹಿ ಅಲ್ಲ. ಅಲ್ಲಿ ನೋಡು, ನೀ ಬಾಣ ಹೊಡೆದ ಜಿಂಕೆಯನ್ನು ನಾನು ಬದುಕಿಸಿದ್ದೇನೆ” ಎಂದು ಹೇಳಿದಾಗ ಬೇಟೆಗಾರನಿಗೂ ಆಶ್ಚರ್ಯವಾಯಿತು.
ಅಷ್ಟರಲ್ಲಿ ಜಿಂಕೆ ಮತ್ತು ಮೊಲ ಎರಡು ಬೇಟೆಗಾರನ ಎದುರಿಗೆ ಬಂದವು. ಮೊಲ ಹೇಳಿತು, “ಬೇಟೆಗಾರನೆ, ಈ ಧರೆಯ ಉಗಮದಿಂದ ಹಿಡಿದು ಸಾವಿರಾರು ವರ್ಷಗಳಿಂದ ನಾವೆಲ್ಲಾ ಇಲ್ಲಿ, ನಮಗೆ ಬೇಕಾದಷ್ಷನ್ನು ಮಾತ್ರ ಬಳಿಕೆ ಮಾಡಿಕೊಂಡು ಬದುಕುತ್ತಿದ್ದೇವೆ, ನಮ್ಮ ಮುಂದಿನ ಪಿಳಿಗೆಗೆ ಈ ವನವನ್ನು ಕಾಪಾಡಿಕೊಂಡು ಹೋಗುತ್ತಿದ್ದೇವೆ.” ಅದಕ್ಕೆ ಜಿಂಕೆಯು ಧ್ವನಿಗೂಡಿಸುತ್ತಾ, “ನಿಮ್ಮಂತಹ ನೀಚ ಮನುಷ್ಯರಿಂದಲೆ ಇಂದು ನಮಗೆ ಬದುಕಲು ಸಹ ಜಾಗವಿಲ್ಲದ್ದಂತಾಗಿದೆ, ಮನಬಂದಂತೆ ಬೇಟೆಯಾಡಿದ ನಿಮ್ಮಿಂದ ನಾವು ನಮ್ಮ ಎಷ್ಟೊ ಗೆಳೆಯರನ್ನು ಮತ್ತು ಅವರ ವಂಶವನ್ನೆ ಕಳೆದುಕೊಂಡಿದ್ದೇವೆ. ನಾಗರಾಜನೆ ಬಿಡಬೇಡ, ಈ ಮನುಷ್ಯನೆಂಬ ಪ್ರಾಣಿಯೆ ಜಗತ್ತಿನಲ್ಲಿ ಎಲ್ಲಕ್ಕಿಂತ ಕ್ರೂರವಾದ, ಮೋಸತನದ, ವಂಚನೆಯ, ದ್ವೇಷದ ಪ್ರಾಣಿ..” ಎಂದು ನೋವು ಹೊರಹಾಕಿತು.
ಈ ಮಾತನ್ನು ಕೇಳಿದ ಹಾವಿಗೆ ಮತ್ತಷ್ಟು ಸಿಟ್ಟು ಬಂದು ಕಚ್ಚುವುದಕ್ಕಾಗಿ ಹತ್ತಿರ ಬಂದಾಗ; ಬೇಟೆಗಾರನು ಕೈ ಜೋಡಿಸಿ, “ನನ್ನನ್ನು ಕ್ಷಮಿಸಿರಿ. ನನ್ನಿಂದ ಬಹುದೊಡ್ಡ ಅಪರಾಧವಾಯಿತು. ನಿಮ್ಮೆಲ್ಲರಿಗೆ ಮತ್ತು ಈ ಕಾಡಿಗೆ ಬಹಳ ತೊಂದರೆ ಕೊಟ್ಟೆ, ದಯವಿಟ್ಟು ಕ್ಷಮಿಸಿರಿ. ನಿಮ್ಮೆಲ್ಲರನ್ನು ಬದಕಲು ಬಿಡುತ್ತೇನೆ..” ಎಂದು ವಿನಂತಿಸಿಕೊಂಡನು. ಇವನ ಬದಲಾವಣೆಯ ಮಾತನ್ನು ಕೇಳಿದ ಗರುಡರಾಜನು, “ನಾಗರಾಜನೆ, ಈ ಬೇಟೆಗಾರನಿಗೆ ತನ್ನ ತಪ್ಪಿನ ಅರಿವಾಗಿದೆ. ಇವನನ್ನು ಕ್ಷಮಿಸೋಣ, ಆದರೆ ಒಂದು ಷರತ್ತಿನ ಮೇಲೆ ಮಾತ್ರ. ನೀನು ಹೋಗಿ ನಿನ್ನ ಬಂಧುಗಳಿಗೆ ತಿಳಿಸಿ ಹೇಳು. ವನಸಂಪತ್ತನ್ನು, ವನ್ಯಜೀವಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡುವುದಾದರೆ ಮಾತ್ರ ನಾವು ನಿನ್ನನ್ನು ಬಿಡುತ್ತೇವೆ..” ಎಂದು ಹೇಳಿದಾಗ ಬೇಟೆಗಾರನು ಅದಕ್ಕೆ ಒಪ್ಪಿಕೊಂಡನು. ಎಲ್ಲರೂ ಆನಂದದಿಂದ ತಮ್ಮ ಮನೆಯನ್ನು ಸೇರಿಕೊಂಡರು. ಮುಂದೆ ಆ ಬೇಟೆಗಾರ ಒಕ್ಕಲುತನ ಮಾಡಲು ಪ್ರಾರಂಭ ಮಾಡಿದ. ಕಾಡನ್ನು ಕಾಪಾಡಿ ಬೆಳೆಸಿದ.

ಮತ್ತಷ್ಟು ಸುದ್ದಿಗಳು

Latest News

ಪಿ ಎಸ್ ಐ ಅಕ್ರಮ ನೇಮಕಾತಿ: ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

newsics.com ಕಲಬುರಗಿ: ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಪ್ರಭು ಹಾಗೂ ಶರಣಪ್ಪ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕಲಬುರಗಿಯ ಮೂರನೇ ಜೆ...

ಉಪ್ಪಿನ ಕಾರ್ಖಾನೆ ಗೋಡೆ ಕುಸಿದು 12‌ ಕಾರ್ಮಿಕರು ಸಾವು

newsics.com ಅಹಮದಾಬಾದ್: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಗೋಡೆ ಕುಸಿದು ಬುಧವಾರ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್‌ನ ಮೊರ್‌ಬಿ ಜಿಲ್ಲೆಯ ಹಲ್‌ವಾಡ್ ಕೈಗಾರಿಕಾ ಪ್ರದೇಶದ ‘ಸಾಗರ್ ಸಾಲ್ಟ್ ಫ್ಯಾಕ್ಟರಿ’ಯಲ್ಲಿ ಈ ದುರಂತ ಸಂಭವಿಸಿದೆ. ಗುಜರಾತ್‌ನ ಕೈಗಾರಿಕಾ ಸಚಿವ ಬೃಜೇಶ್...

ಕನ್ನಡ ಕಲಿಕೆಗೆ‌ ಬಂತು ಸರ್ಕಾರಿ ಇ- ಪೋರ್ಟಲ್

newsics.com ಬೆಂಗಳೂರು: ಕನ್ನಡ ಕಲಿಯುವವರಿಗಾಗಿ ಸರ್ಕಾರಿ ಇ‌- ಕನ್ನಡ ಪೋರ್ಟಲ್ ಅಸ್ತಿತ್ವಕ್ಕೆ ಬಂದಿದೆ. ಇದರಿಂದ ಕರ್ನಾಟಕ ಹಾಗು ಹೊರಗೆ ವಾಸಿಸುತ್ತಿರುವ ಕನ್ನಡೇತರರು ಸರ್ಕಾರಿ ವೆಬ್ ಸೈಟ್‌ನಲ್ಲಿ ಕನ್ನಡ ಕಲಿಯಬಹುದು. ಇ-ಕನ್ನಡ ಪೋರ್ಟಲ್‌ಗೆ ಹೋಗಿ ಆನ್‌ಲೈನ್...
- Advertisement -
error: Content is protected !!