* ಅನಿರ್ಬನ್ ಪಾಂಡೆ
response@134.209.153.225
ಒಬ್ಬ ಶ್ರೀಮಂತ ತನ್ನ ತೋಟದಲ್ಲಿ ಬೆಳೆದಿದ್ದ ಒಂದು ಬಾಳೆಯ ಗೊನೆಯನ್ನು ತನ್ನ ತೋಟದಲ್ಲಿ ಕೆಲಸ ಮಾಡುವವನ ಕೈಯಲ್ಲಿ ಕೊಟ್ಟು ಇದನ್ನು ದೇವಸ್ಥಾನದಲ್ಲಿ ಕೊಟ್ಟು ಬಾ ಎಂದು ಹೇಳಿ ಕಳಿಸಿದನು.
ಆ ಕೆಲಸದವ ದಾರಿಯಲ್ಲಿ ತುಂಬಾ ಹಸಿವಾಗಿ ಎರಡು ಹಣ್ಣನ್ನ ತಿಂದು ಬಿಡುತ್ತಾನೆ. ಮಿಕ್ಕಿದ್ದನ್ನ ದೇವಸ್ಥಾನದಲ್ಲಿ ಕೊಟ್ಟು ಮನೆಗೆ ಹಿಂತಿರುಗುತ್ತಾನೆ.
ಅಂದು ರಾತ್ರಿ ದೇವರು ಆ ಶ್ರೀಮಂತನ ಕನಸಲ್ಲಿ ಬಂದು ನೀನು ಕಳುಹಿಸಿದ ಎರಡು ಹಣ್ಣನ್ನು ನಾನು ತಿಂದೆ, ತುಂಬಾ ಚೆನ್ನಾಗಿತ್ತು ,ಎಂದು ಹೇಳಿ ಮರೆಯಾಗಿ ಬಿಟ್ಟರು.
ದೇವರ ಮಾತನ್ನು ಕೇಳಿದ ಆ ಶ್ರೀಮಂತ ಕೋಪಗೊಂಡ. ನಾನು ಒಂದು ಗೊನೆ ಹಣ್ಣನಲ್ಲವೇ ದೇವರಿಗೆ ಕಳುಹಿಸಿದ್ದು, ಮತ್ತೆ ದೇವರು ಯಾಕೆ ಎರಡು ಹಣ್ಣನ್ನ ಮಾತ್ರ ತಿಂದೆ ಎಂದರು ಎಂದು.
ಕೋಪದಲ್ಲಿ ಆ ಕೆಲಸದವನನ್ನ ವಿಚಾರಿಸಿದರು ಆಗ ಕೆಲಸದವನು ವಿವರಿಸಿದ, ದಾರಿಯಲ್ಲಿ ಹಸಿವಾಗಿ ಎರಡು ಹಣ್ಣನ್ನ ನಾನೇ ಬುದ್ದಿ ತಿಂದಿದ್ದು, ನನ್ನನ್ನ ಕ್ಷಮಿಸಿ ಎಂದು .
ಆಗ ಆ ಶ್ರೀಮಂತನಿಗೆ ಅರ್ಥವಾಯಿತು ಕೆಲಸದವನು ತಿಂದ ಎರಡು ಹಣ್ಣು ಮಾತ್ರ ದೇವರಿಗೆ ಹೋಗಿ ಸೇರಿದೆ ಎಂದು. ಅಂದು ಒಂದು ವಿಷಯ ಅರ್ಥವಾಯಿತು ಆ ಶ್ರೀಮಂತನಿಗೆ ಒಬ್ಬ ಬಡವ ಅಥವಾ ಹಸಿದವನು ತಿಂದರೆ ಭಗವಂತ ತಿಂದ ಹಾಗೆ ಎಂದು.
ದೇವರ ಪ್ರತೀಕ ಗಳು ಎರಡು. ಒಂದು ಚಲ. ಇನ್ನೊಂದು ಅಚಲ. ಅಚಲ ಪ್ರತೀಕದಲ್ಲಿ ದೇವರನ್ನು ಕಾಣುವದಕ್ಕಿಂತಲೂ ಚಲ ಪ್ರತೀಕದಲ್ಲಿ ದೇವರನ್ನು ಕಾಣುವುದು ಹೆಚ್ಚು ಫಲಪ್ರದ.