Saturday, April 17, 2021

ಬೋನ್ಸಾಯ್ ಬಂಧ

Samatha R
♦ ಸಮತಾ ಆರ್.
ಶಿಕ್ಷಕಿ
response@134.209.153.225
newsics.com@gmail.com
 
ಸ್ವಂತ ಮನೆಯಾದ್ದರಿಂದ ಯಾವ ಓನರ್ ನ ಭಯವೂ ಇಲ್ಲದೆ ಹೊಸ ಹೊಸ ಕುಂಡಗಳು ಗಿಡಗಳನ್ನು ತಂದು ನೆಟ್ಟು ಬೆಳೆಸಿ ಸಂಭ್ರಮಪಟ್ಟಿದ್ದಾಯಿತು. ಗೊಬ್ಬರ ಮಾತ್ರ ಅದೇ. ಹಣ್ಣು, ತರಕಾರಿ ಸಿಪ್ಪೆ, ಅಕ್ಕಿ ತೊಳೆದ ನೀರೇ.
ಕೆಲವೇ ತಿಂಗಳಲ್ಲಿ ಕುಂಡಗಳಲ್ಲಿದ್ದ ಅಲಂಕಾರಿಕ ಗಿಡಗಳನ್ನು ಹಿಂದಕ್ಕೆ ತಳ್ಳಿ, ಗೊಬ್ಬರದಲ್ಲಿದ್ದ ಹಣ್ಣು, ತರಕಾರಿಗಳ ಬೀಜಗಳು ಮೊಳೆತು ಸೊಕ್ಕಿ ಬೆಳೆದು ನಿಂತವು.

===

 

ತ್ತೀಚೆಗೆ ಎಲ್ಲರಲ್ಲೂ ಹಬ್ಬಿರುವ ಒಂದು ಧೋರಣೆ ಎಂದರೆ ಓದು ಮುಗಿಸಿ, ಕೆಲಸ ಹಿಡಿದು, ಮದುವೆಯಾಗಿ, ಮಕ್ಕಳು ಮಾಡಿಕೊಂಡು, ಮನೆ ಕಟ್ಟಿ, ಕಾರ್ ತಗೊಂಡು, ಮಕ್ಕಳನ್ನು ಚೆನ್ನಾಗಿ ಸಾಕಿ ಮತ್ತೆ ಅವರನ್ನು ಅದೇ ಚಕ್ರಕ್ಕೆ ತಳ್ಳಿ ನಾವು ನಿರಾಳ ವಾಗುವುದೇ ಜೀವನ ಎಂಬಂತಾಗಿದೆ.
ನಾನು ಮತ್ತೆ ನನ್ನ ಗಂಡನೂ ಸಹ ಇದಕ್ಕೆ ಹೊರತಾಗಿಲ್ಲ. ಕೆಲಸ, ಮಕ್ಕಳು ಎಲ್ಲಾ ಆದ ಬಳಿಕ ನಿಯಮಾನುಸಾರವಾಗಿ ಎಂಬಂತೆ ದೊಡ್ಡ ನಗರದಲ್ಲೊಂದು ಸೈಟ್ ಖರೀದಿಸಿ, ಲೋನ್ ಮಾಡಿ ಮನೆ ಕಟ್ಟಿಸಿ, ಕಂತುಗಳಲ್ಲಿ ಸಾಲ ತೀರಿಸುತ್ತ, ಏರುತ್ತಾ ಇಳಿಯುತ್ತಾ ಜೀವನ ಸಾಗುತ್ತಿದೆ.
ಹೊಸಮನೆ ಕಟ್ಟಿದರೆ ಸಾಲದು, ಅದಕ್ಕೆ ಸಂಬಂಧಿಸಿದ ನೂರೆಂಟು ದಾಖಲೆಗಳನ್ನು ಹೊಂದಿಸಿಟ್ಟುಕೊಳ್ಳುವುದು ಒಂದು ದೊಡ್ಡ ಸಾಹಸವೇ ಸರಿ. ಅದರಂತೆ ಮನೆ ಕಟ್ಟಿಯಾದ ಬಳಿಕ ಮಹಾನಗರ ಪಾಲಿಕೆಗೆ ನಿರ್ಮಾಣ ದೃಢೀಕರಣಕ್ಕಾಗೀ ಅರ್ಜಿ ಸಲ್ಲಿಸಿದಾಗ, ಮನೆಯ ಪರಿಶೀಲನೆಗಾಗಿ ಇಬ್ಬರು ಎಂಜಿನಿಯರ್ ಗಳು ಒಂದು ದಿನ ಬಂದರು.
ಬಂದವರು ಮನೆಯ ನಕ್ಷೆ, ಅಳತೆ ಪಟ್ಟಿ ಹಿಡಿದು ಮನೆಯ ಹಿಂದೆ ಮುಂದೆ ಎಲ್ಲ ತಿರುಗಿ, ಅಳೆದು ಸುರಿದು ಏನೇನೋ ಬರೆದುಕೊಂಡಿದ್ದು ಆಯಿತು. ಹೋಗುವ ಮುನ್ನ ಅವರಲ್ಲೊಬ್ಬರು ನನ್ನ ಗಂಡನೊಂದಿಗೆ ಮಾತನಾಡುತ್ತ “ಏನ್ ಸಾರ್, ಒಂದು ಕರಿಬೇವಿನ ಗಿಡಕ್ಕೂ ಜಾಗವಿಲ್ಲದಂತೆ ಮನೆ ಕಟ್ಟಿಬಿಟ್ಟಿದ್ದೀರಿ, ಸುತ್ತ ಎಲ್ಲ ಟೈಲ್ಸ್ ಹಾಕಿಸಿಬಿಟ್ಟಿದ್ದೀರಿ, ಏಕೆ ಒಂದಿಷ್ಟು ಹಸಿರು ಬೇಡವೇ ” ಎಂದು ನಗಾಡಿದರು.
ಅದಕ್ಕಿವರು “ಒಂದು ಚದರ ಅಡಿಗೆ ಕೊಟ್ಟಿರುವ ದುಡ್ಡಿನಲ್ಲಿ ಇಡೀ ಜೀವಮಾನಕ್ಕಾಗುವಷ್ಟು ಕರಿಬೇವು ಬರುತ್ತದೆ ಬಿಡಿ ಸಾರ್, ಯಾಕೆ ಸುಮ್ಮನೆ ಜಾಗ ದಂಡ ಮಾಡುವುದು” ಎಂದು ನಕ್ಕರು. ಕೇಳುತ್ತಾ ನಿಂತ ನನ್ನ ಕಣ್ಣೆದುರು ನೆನಪಿನ ಹಸಿರು ಚಾಪೆಯೊಂದು ಬಿಚ್ಚಿಕೊಳ್ಳುತ್ತಾ ಹೋಯಿತು.
ನಾನು ಹುಟ್ಟಿ ಬೆಳೆದು, ಬಾಲ್ಯ ಕಳೆದು, ಓದು ಮುಗಿಸಿ ಮದುವೆಯಾದದ್ದು ಎಲ್ಲಾ ಒಂದು ಕೈಗಾರಿಕಾ ನಗರದಲ್ಲಿ.
ಆ ಊರಿನ ಕಬ್ಬಿಣದ ಕಾರ್ಖಾನೆಯಲ್ಲಿ ಎಂಜಿನಿಯರ್ ಆಗಿದ್ದ ಅಪ್ಪನಿಗಾಗಿ ನೀಡುತ್ತಿದ್ದ ಕ್ವಾರ್ಟಸ್ಗಳಲ್ಲೆ ನಮ್ಮ ಹಲವು ವರ್ಷಗಳ ವಾಸ.
ಕಾರ್ಖಾನೆಯ ಕ್ವಾರ್ಟರ್ಸ್ ಗಳ ವಿಶೇಷತೆ ಎಂದರೆ ಯಾವುದೇ ಬಡಾವಣೆಯ ಕ್ವಾರ್ಟರ್ಸ್ ಗಳಾಗಲಿ ಅವು ಹೊಂದಿರುತ್ತಿದ್ದ ವಿಶಾಲವಾದ ಅಂಗಳ ಮತ್ತು ಹಿತ್ತಿಲುಗಳು, ಅವುಗಳಲ್ಲಿ ಬೆಳೆದಿರುತ್ತಿದ್ದ ಹೂ ಹಣ್ಣುಗಳ ಮರಗಳು ಮತ್ತು ತರಕಾರಿ ತೋಟಗಳು. ಹಾಗೆಯೇ ನಮ್ಮ ಮನೆಯೂ ಕೂಡ ಸಾಕಷ್ಟು ವಿಶಾಲವಾದ ಅಂಗಳ ಮತ್ತು ಹಿತ್ತಲು ಅವುಗಳಲ್ಲಿ ಹಲವು ಮರಗಿಡಗಳನ್ನು ಹೊಂದಿತ್ತು. ರಜೆಯಲ್ಲಿ ಬಿಡುವಿನಲ್ಲಿ ಅಕ್ಕ-ಪಕ್ಕ ಎಲ್ಲಾ ಸುತ್ತಿ ಚಂದ ಕಂಡ ಗಿಡಗಳನ್ನೆಲ್ಲ ಕಾಡಿ ಬೇಡಿ ತಂದು ನೆಟ್ಟು ಬೆಳೆಸುವುದೇ ಒಂದು ಸುಖ.
ಹೀಗೆ ಒಂದು ದಿನ ಸಂಜೆ ಸುತ್ತುವಾಗ ನಮ್ಮ ಮನೆಯ ಸಾಲಿನಲ್ಲಿ ಕೊನೆಯಲ್ಲಿದ್ದ ಮನೆಯ ಕೈತೋಟದ ಗಿಡಗಳ ಮೇಲೆ ನನ್ನ ಕಣ್ಣು ಬಿತ್ತು. ಎಷ್ಟೊಂದು ತರತರಹದ ಕುಂಡಗಳಲ್ಲಿ ಎಷ್ಟೊಂದು ಬಗೆಬಗೆಯ ಗಿಡಗಳು, ಬಣ್ಣಬಣ್ಣದ ಎಲೆಗಳು, ಹೂಗಳು ರಾಶಿರಾಶಿಯಾಗಿ ಸುರಿದು ನಿಂತಿದ್ದವು. ನೋಡುವ ಆಸೆಯಿಂದ ಮನೆ ಗೇಟ್ ದಾಟಿ, ಒಳ ಹೋಗಿ ಬಾಗಿಲು ತಟ್ಟಿದಾಗ, ಹೊರಬಂದ ಮನೆಯವರ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ.”ಆಂಟಿ ನಿಮ್ಮ ತೋಟ ನೋಡಬಹುದಾ” ಎಂದಿದ್ದಕ್ಕೆ ಅವರು, ” ಅದಕ್ಕೇನಂತೆ, ಧಾರಾಳವಾಗಿ ನೋಡು” ಎನ್ನುತ್ತಾ ತಾವು ಕೂಡ ಜತೆಯಲ್ಲಿ ಬಂದರು.
ಹಾಗೆ ತೋಟ ಸುತ್ತುತ್ತಿರುವಾಗ, ಅಲ್ಲಿಯೇ ಒಂದು ಕಲ್ಲು ಬೆಂಚಿನ ಮೇಲೆ ಒಂದು ಗಿಡ ಬೇರುಗಳನೆಲ್ಲಾ ಚೆಲ್ಲಿಕೊಂಡು ನಿಂತಿತ್ತು. ಕುತೂಹಲದಿಂದ ಬಳಿ ಹೋಗಿ ನೋಡಿದರೆ… ಅರೆ ವಾಹ್, ಅದೊಂದು ಪುಟ್ಟ ಆಲದ ಮರ, ಕ್ಯಾಲೆಂಡರ್ ಬುದ್ಧನ ಚಿತ್ರದಲ್ಲಿ ಇರುತ್ತದಲ್ಲ, ಸುತ್ತ ಬಿಳಲು ಬಿಟ್ಟುಕೊಂಡು ಛತ್ರಿ ಹರಡಿಕೊಂಡು ನಿಂತಿರುವ ಮರ, ಅದೇ ಮರ. ಆದರೆ ಚಿಕ್ಕದು ಅಷ್ಟೇ. ಒಂದು ಬುದ್ಧನ ಮೂರ್ತಿ ಅದರ ಬುಡದಲ್ಲಿ ಇಟ್ಟರೆ ಸಾಕಿತ್ತು, ಸಾಕ್ಷಾತ್ ಕ್ಯಾಲೆಂಡರ್ ಬುದ್ಧನೆ ಕಣ್ಣೆದುರು ಬಂದಂತಾಗುತ್ತಿತ್ತು.

“ಅಯ್ಯೋ ದೇವರೇ! ಕುಂಡದಲ್ಲಿ ಮರವೇ!” ಎಂದ ನನ್ನ ಉದ್ಗಾರ ಕೇಳಿ ನಸುನಕ್ಕ ಆಂಟಿ, “ಯಾಕೆ ನಿನಗೆ ಬೋನ್ಸಾಯ್ ಗಳ ಬಗ್ಗೆ ಗೊತ್ತಿಲ್ವಾ” ಎಂದರು.
“ಓದಿ ಗೊತ್ತು ಅಷ್ಟೇ, ಇದೇ ಮೊದಲು ನಿಜವಾಗಿ ನೋಡುತ್ತಿರುವುದು”, ಎಂದೆ. ಆಂಟಿ ಬೊನ್ಸಾಯ್ ಇತಿಹಾಸ, ಮಾಡುವ ವಿಧಾನ ಎಲ್ಲಾ ವಿವರಿಸುತ್ತ ,ಅವರ ಸಂಗ್ರಹದಲ್ಲಿದ್ದ ಬೋನ್ಸಾಯ್ ಕಿತ್ತಳೆ ,ನಿಂಬೆ, ಅರಳಿ , ಬೋಗನ್ ವಿಲ್ಲಾ ಇತ್ಯಾದಿಗಳನ್ನು ಪರಿಚಯಿಸಿದರು. ಸರಿ ನನ್ನ ತಲೆಯಲ್ಲಿ ಆಗಲೇ ಬೋನ್ಸಾಯ್ ಕೀಟ ಹೊಕ್ಕು ಗುಯ್ಗುಡಲಾರಂಭಿಸಿತು.

ಮಾರನೇ ದಿನದಿಂದಲೇ ಬೋನ್ಸಾಯ್ ಮಾಡುವ ಸಾಹಸ ಶುರುವಾಗಿ, ಅದಕ್ಕೆಂದೇ ಇರುವ ಎರಡಿಂಚು ಎತ್ತರದ ತಳದಲ್ಲೆ ಎರಡು ರಂಧ್ರಗಳು ಇರುವ ಕುಂಡ ಖರೀದಿಸಿ ತಂದೆ.
ಈಗ ಎದುರಾದ ಪ್ರಶ್ನೆ ಯಾವ ಗಿಡ ಬೋನ್ಸಾಯ್ ಮಾಡುವುದು??

ಮನೆಯ ಅಂಗಳ ಹಿತ್ತಲುಗಳನ್ನು ಹುಡುಕಿದರೆ ಕಂಡದ್ದು ಎಲ್ಲವೂ ಎತ್ತರೆತ್ತರಕ್ಕೆ ಬೆಳೆದು, ಹರಡಿ ನಿಂತ, ದೊಡ್ಡ ದೊಡ್ಡ ಮರಗಳೇ. ಅದರಲ್ಲೂ ಮನೆಯೆದುರಿನ ಮಾವಿನ ಮರವಂತೂ ಗೊಮಟೇಶ್ವರನಂತೆ ಅಷ್ಟೆತ್ತರಕ್ಕೆ ಬೆಳೆದುನಿಂತು ತುದಿಯ ಒಂದು ಕೊಂಬೆಯಲ್ಲಿ ಮಾತ್ರ ಹಣ್ಣು ಬಿಟ್ಟು “ಬನ್ನಿ ಕೀಳಿ ನೋಡೋಣ” ಎಂದು ನಮ್ಮನ್ನೆಲ್ಲ ಅಣಕಿಸುತ್ತಿತ್ತು. ಬದಿಯ ಅಂಗಳದಲ್ಲಿದ್ದ ಹುಣಸೆಮರ ಕವಲು ಕವಲಾಗಿ ಒಡೆದು “ಮೆರಿ ಗೋ ರೌಂಡ್” ಗುಡಾರದಂತೆ ಹರಡಿ ನಿಂತಿತ್ತು. ಅದರ ಚಿಗುರು ಚೋಟು, ಕಾಯಿ, ಹಣ್ಣಿನ ನೆನಪಿಗೆ ಈಗಲೂ ಹಲ್ಲು ಝುಂ ಎನ್ನುತ್ತದೆ. ಅದಕ್ಕೆ ಕಟ್ಟಲಾಗಿದ್ದ ಉಯ್ಯಾಲೆಯಲ್ಲಿ ನಾನು ಒಂದು ದಿನ ಕುಳಿತು, ಮಜವಾಗಿ ತೂಗುತ್ತಿರುವಾಗ, ಉಯ್ಯಾಲೆ ಕಿತ್ತು ಹೋಗಿ, ನಾನು ನೆಲಕ್ಕೆ ಡಬ್ ಎಂದು ಬಿದ್ದು, ಹೆಗಲಿಗೆ ಕಲ್ಲೊಂದು ಚುಚ್ಚಿ ಆದ ಗಾಯದ ಗಂಟು ಈಗಲೂ ಕೈಗೆ ಸಿಗುತ್ತದೆ.

ಹಸಿರು ತುಂಬಿ ತುಳುಕುವ ಹಲಸು ಹಿರಳಿ ಮರಗಳು ಕಣ್ಣಿಗೆ ಹಬ್ಬವೆನಿಸಿದರು, ಹಣ್ಣು ಕಾಯಿ ಬಿಡದೆ ನಮ್ಮಜ್ಜಿ ಕೈಯಲ್ಲಿ “ಗೊಡ್ಡು ಮುಂಡೇವು” ಅಂತ ಬೈಯಿಸಿಕೊಳ್ಳುತ್ತಿದ್ದವು. ಅವರು ಹೇಳಿದಂತೆ ಅಮಾವಾಸ್ಯೆ ರಾತ್ರಿಯಂದು ಎರಡಕ್ಕೂ ಮೊಳೆ ಹೊಡೆದಿದ್ದರೂ ಜಪ್ಪಯ್ಯ ಅಂದಿರಲಿಲ್ಲ.
ಬೇಲಿಯ ಮೂಲೆಯಲ್ಲಿದ್ದ ಹೆಸರು ತಿಳಿಯದ ವಿದೇಶಿ ಮರವೊಂದು ಮೈಗೆಲ್ಲ ಮದರಂಗಿ ಹಚ್ಚಿಕೊಂಡಂತೆ, ಕೆಂಪು ಕೆಂಪು ಹೂಗಳನ್ನು ಎಲೆ ಕಾಣದಂತೆ ಬಿಟ್ಟು, ತಿಂಗಳುಗಟ್ಟಲೆ ಓಲಾಡುತ್ತ ನಿಂತಿರುವಾಗ, ಗಂಟೆಗಟ್ಟಲೆ ಅದನ್ನೇ ನೋಡುತ್ತಾ ಲೋಕ ಮರೆತ ದಿನಗಳು ಎಷ್ಟೋ ಇವೆ. ಇವುಗಳಷ್ಟೆ ಅಲ್ಲದೆ, ಉದ್ದಾತಿಉದ್ದದ ತೆಂಗಿನ ಮರ, ಮಾರುದ್ದ ಗೊನೆ ಬಿಡುತ್ತಿದ್ದ ಬಾಳೆ ಮರಗಳ ಹಿಂಡ್ಲು, ಬೇಲಿಯುದ್ದಕ್ಕೂ ಇದ್ದ ಬೇವಿನ ಮರಗಳು ಇವು ಯಾವುವೂ ಬೋನ್ಸಾಯ್ ಆಗಲು ಲಾಯಕ್ಕಾಗಿರಲಿಲ್ಲ. ಹಾಗಾಗಿ ಅವೆಲ್ಲವನ್ನೂ ಲಿಸ್ಟ್ ನಿಂದ ತೆಗೆದುಹಾಕಿದೆ.

ಹಾಗೂ ಹೀಗೂ ಹುಡುಕಿದಾಗ ಹಿತ್ತಲ ತಿಪ್ಪೆಯಲ್ಲಿ ಎಂದೋ ತಿಂದು ಬಿಸಾಡಿದ ವಾಟೆಗಳಿಂದ ಹುಟ್ಟಿದ್ದ ಮಾವಿನ ಸಸಿಗಳು ಕಂಡವು. ಅವುಗಳಲ್ಲಿ ಸುಮಾರಾಗಿ ಬೆಳೆದಿದ್ದ ಒಂದು ಗಿಡ ಆರಿಸಿಕೊಂಡು, ನಂತರ ಆಂಟಿ ಹೇಳಿದ್ದಂತೆ, ಆ ಗಿಡದ ಬೇರನ್ನು ಒಂದಿಂಚು ಬಿಟ್ಟು ಕತ್ತರಿಸಿ, ರೆಂಬೆ ಕೊಂಬೆ ಗಳನ್ನೆಲ್ಲಾ ಟ್ರಿಂ ಮಾಡಿ, ಸುತ್ತ ತಂತಿ ಬಿಗಿದು, ಕುಂಡದ ತಳದ ರಂಧ್ರಗಳ ಮೂಲಕ ಹಾಯಿಸಿ ಗಿಡವನ್ನು ಕುಂಡಕ್ಕೆ ಭದ್ರವಾಗಿ ಬಂಧಿಸಿದೆ.
ಕುಂಡ ಹಿಡಿಸಿದಷ್ಟು ಮಣ್ಣು ತುಂಬಿ, ಪೆಬ್ಬಲ್ಗಳಿಂದ ಅಲಂಕರಿಸಿ ಮನೆಯ ಹೊಸಿಲ ಬಳಿಯಿಟ್ಟೆ.

ನಾನು ಮಾಡುತ್ತಿದ್ದ ಎಲ್ಲವನ್ನೂ ಸುಮ್ಮನೆ ಗಮನಿಸುತ್ತಿದ್ದ ನಮ್ಮಪ್ಪ ಬಳಿ ಬಂದು “ಅದ್ಯಾಕಪ್ಪ, ಆ ಗಿಡಕ್ಕೆ ಅಷ್ಟೊಂದು ಹಿಂಸೆ ಕೊಡುತಿದ್ದೀಯ, ಸುಮ್ಮನೆ ಅದರ ಪಾಡಿಗೆ ಅದು ನೆಲದಲ್ಲೇ ಬೆಳೆಯಲು ಬಿಡಬಾರದಿತ್ತ ಅಂದಿದ್ದಕ್ಕೆ, “ಅಣ್ಣ, ತಿಪ್ಪೇಲೆ ಇದ್ದಿದ್ರೆ ನೀನು ಒಂದು ದಿನ ಅದನ್ನು ಕಿತ್ತು ಹಾಕುತ್ತಿದ್ದೆ, ಈಗ ನಾನು ಅದನ್ನ ಚೆಂದದ ಬೋನ್ಸಾಯ್ ಮಾಡ್ತೀನಿ ನೋಡ್ತಿರು” ಅಂದೆ. “ಏನಾದರೂ ಮಾಡ್ಕೋ, ನಿನಗ್ಯಾರು ಬುದ್ಧಿ ಹೇಳ್ತಾರೆ? ಒಳ್ಳೆ ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಂಗೆ ಆಡ್ತಿದೀಯ”ಎಂದು ಬೈದು ಅಲ್ಲಿಂದ ಹೋದರು.

ಆದರೆ ದಿನಗಳು ಉರುಳಿದರೂ ಆ ಗಿಡದಲ್ಲಿ ಯಾವ ಚಿಗುರೂ ಇಲ್ಲ, ಕಳೆಯೂ ಇಲ್ಲಾ. ನನಗೋ ಯಾವಾಗ ಅದು ಬೆಳೆಯಲಾರಂಭಿಸುವುದೋ, ಯಾವಾಗ ಅದಕ್ಕೆ ಬೇಕಾದ ಶೇಪ್ ಕೊಡುವೆನೋ ಅನ್ನುವ ಕಾತರ. ಆದರೆ ಅದು ಸುಮ್ಮನೆ ಅಮಾಯಕನಂತೆ ನೆಟ್ಟಾಗ ಹೇಗಿತ್ತೋ ಹಾಗೇ ಇತ್ತು.

ಒಂದು ದಿನ ಕಾಲೇಜಿನಿಂದ ಬಂದು ನೋಡಿದ್ರೆ ಬಾಗಿಲ ಬಳಿಯ ಚರಂಡಿಯಲ್ಲಿ ಬೊನ್ಸಾಯ್ ಕುಂಡ ಒಡೆದು ಚೂರು ಚೂರಾಗಿ ಬಿದ್ದಿದೆ. ಗಿಡವೋ ನಾಪತ್ತೆ. ಅಷ್ಟರಲ್ಲಿ ಅಣ್ಣ ಬಂದು ಹೇಳಿದ್ದು “ಕತ್ತೆ, ಇನ್ನೊಂದು ಸಾರಿ ಬೋನ್ಸಾಯ್ ಗೀನ್ಸಾಯ್ ಎಂದು ಗಿಡಗಳಿಗೆ ಹಿಂಸೆ ಕೊಟ್ಟರೆ ನೋಡು. ಆ ಗಿಡದ ಕಷ್ಟ ನೋಡಲಾರದೆ, ಹೋದರೆ ಒಮ್ಮೆಗೆ ಹೊರಟು ಹೋಗಲಿ, ಎಂದು ತೆಗೆದುಹಾಕಿದೆ. ಬೇಕಾದರೆ ನೆಲದಲ್ಲಿ ಎಷ್ಟು ಬೇಕಾದರೂ ಗಿಡ ನೆಟ್ಟು ಬೆಳೆಸು, ಬೋನ್ಸಾಯ್ ಎಂದು ಗಿಡಗಳ ಜೀವ ತಿಂದರೆ ನನಗಾಗದು” ಎಂದು ಗರ್ಜಿಸಿದ ರಭಸಕ್ಕೆ ನಾನು ಬೇರೆ ದಾರಿಯಿಲ್ಲದೆ ನನ್ನ ಬೋನ್ಸಾಯ್ ಯೋಚನೆಯನ್ನೇ ತಿಪ್ಪೆಗೆ ಎಸೆದು ತೆಪ್ಪಗಾಗಬೇಕಾಯಿತು.

ನಂತರ ಕಾಲೇಜ್ ಮುಗಿಸಿ, ಮದುವೆ, ಕೆಲಸ ಅಂತೆಲ್ಲ ದೂರದ ಮಲೆನಾಡಿನ ಊರೊಂದಕ್ಕೆ ಬಂದು ನೆಲೆಯೂರಿದ್ದಾಯಿತು. ಇಲ್ಲಿ ಎಲ್ಲಿ ನೋಡಿದರಲ್ಲಿ ಹಸಿರೋಹಸಿರು.
ಆದರೆ ನಾವಿದ್ದ ಬಾಡಿಗೆ ಮನೆಯಲ್ಲಿ ಅಂಗಳದ ಒಂದಿಂಚು ಬಿಡದೆ ಗಾರೆ ಹಾಕಿ ಗಿಡ ಮರ ಏನೂ ಇರಲಿಲ್ಲ.
ವರ್ಷಗಟ್ಟಲೆ ಗಿಡಮರಗಳ ಮಧ್ಯೆ ಬೆಳೆದ ಜೀವಕ್ಕೆ ಸಮಾಧಾನವಿಲ್ಲ. ಒಂದಿಷ್ಟು ಕುಂಡಗಳಲ್ಲಿ ಆದರೂ ಗಿಡಗಳನ್ನು ಹಾಕಿಕೊಂಡು ಖುಷಿಪಡೋಣ ಎಂದರೆ ಮನೆ ಬಾಡಿಗೆಗೆ ಕೊಡುವಾಗಲೇ ಮನೆ ಓನರ್ “ಕುಂಡ ಗಿಂಡ ಎಲ್ಲಾ ಇಟ್ಟು ಮನೆ ಸುತ್ತ ಗಾರೆ ಎಲ್ಲ ಕಿತ್ತುಹಾಕಬಾರದು” ಎಂದು ಕರಾರು ಮಾಡಿದ್ದರಿಂದ ಕುಂಡಗಳನ್ನು ಇಡುವಂತಿರಲಿಲ್ಲ.
ಆಗ ನನ್ನ ಗಂಡ ಒಂದು ಉಪಾಯ ಹೇಳಿಕೊಟ್ಟರು. “ಮನೆಗೆ ಅಕ್ಕಿ ತರುವ ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ಮಣ್ಣು ತುಂಬಿಸಿ ಗಿಡನೆಟ್ಟು ನೋಡು. ಚೀಲಗಳು ಹಗುರ , ಗಾರೆ ಏನು ಕಿತ್ತು ಹೋಗದು” ಎಂದರು.
ಅದರಂತೆ ಚೀಲಗಳಿಗೆ ಮಣ್ಣು ತುಂಬಿಸಿ ಗಿಡ ನೆಟ್ಟು, ಹಣ್ಣು ತರಕಾರಿ ಗೊಬ್ಬರ, ಅಕ್ಕಿ ತೊಳೆದ ನೀರುಣಿಸಿ ಬೆಳೆಸಿದ ನನ್ನ ಗಿಡಗಳು ಸುಖವಾಗಿ, ಸೊಂಪಾಗಿ, ಬೆಳೆದು ಹೂ ತಳೆದಾಗ ನನಗೆ ಹಿಗ್ಗೋ ಹಿಗ್ಗು.

ಒಮ್ಮೆ ಮನೆಯ ಸಿಂಟೆಕ್ಸ್ ಟ್ಯಾಂಕ್ ಕ್ಲೀನ್ ಮಾಡಿಸುವಾಗ ನೋಡಿದರೆ, ಒಂದು ಆಲದ ಗಿಡ ಬೇರು ಬಿಟ್ಟುಕೊಂಡು ಸಿಂಟೆಕ್ಸ್ ಟ್ಯಾಂಕ್ ಅನ್ನು ಭದ್ರವಾಗಿ ಆವರಿಸಿ ಬೆಳೆದುಕೊಂಡಿತ್ತು. ಕ್ಲೀನ್ ಮಾಡುವವ ಬೇರುಗಳನ್ನೆಲ್ಲ ಬಿಡಿಸಿ ಆಲದಮರದ ಹಿಡಿತದಿಂದ ಸಿಂಟೆಕ್ಸ್ ಟ್ಯಾಂಕನ್ನು ಮುಕ್ತಿಗೊಳಿಸಿ, ಆಲದ ಮರದ ಅವಶೇಷವನ್ನೆಲ್ಲಾ ಹೊರಗೆಸೆದ. ಒಂದು ತುಂಡಿನಲ್ಲಿ ಒಂದೆರಡು ಎಲೆ, ಒಂದಿಷ್ಟು ಬೇರು ಅಂಟಿಕೊಂಡಿದ್ದನ್ನು ತಂದು ಕುತೂಹಲಕ್ಕಾಗೀ ಒಂದು ಚಿಕ್ಕ ಪ್ಲಾಸ್ಟಿಕ್ ಡಬ್ಬದಲ್ಲಿ ನೆಟ್ಟೆ. ಎಷ್ಟೇ ತಿಂಗಳು ಕಳೆದರೂ ಇರುವ ಎರಡು ಎಳೆಗಳನ್ನು ಹಿಡಿದುಕೊಂಡು ಹಾಗೇ ಇತ್ತು. ಡಿಸೆಂಬರ್ ನಲ್ಲಿ, ಇದ್ದ ಆ ಎರಡೂ ಎಲೆಗಳು ಉದುರಿ ಹೋದಾಗ ಬೇಸರವಾಗಿ ಆ ಕಡೆ ನೋಡುವುದನ್ನೆ ಬಿಟ್ಟುಬಿಟ್ಟೆ.
ಬೇಸಿಗೆ ರಜೆಯಲ್ಲಿ ಗಿಡಗಳನ್ನು ಸರಿ ಮಾಡುವಾಗ ನೋಡಿದರೆ ಆಲದ ಗಿಡ ಎರಡು ಎಲೆಗಳನ್ನು ಚಿಗುರಿಸಿ ನಗುತ್ತಿದೆ!

ಇಷ್ಟರಲ್ಲಿ ದೂರದೂರಿನಲ್ಲಿ ಮನೆ ಮಾಡಿ ಊರ ಬಿಡುವ ಅನಿವಾರ್ಯತೆ ಎದುರಾಯಿತು. ನನ್ನೆಲ್ಲಾ ಗಿಡಗಳನ್ನು ಸಾಗಿಸಲು ಲಾರಿಯಲ್ಲಿ ಜಾಗ ಸಾಲದೆ, ಎಲ್ಲಾ ಗಿಡಗಳನ್ನು ಭಾರವಾದ ಮನಸ್ಸಿನಿಂದ ಶಾಲೆಯ ಕೈ ತೋಟಕ್ಕೆ ದಾನ ಮಾಡಿದ್ದಾಯಿತು. ಜತೆಯಲ್ಲಿ ಬಂದದ್ದು ಚಿಕ್ಕ ಡಬ್ಬದ ಆಲದ ಗಿಡವೊಂದೆ.

ಹೊಸ ಊರಿನ, ಹೊಸ ಮನೆಯೂ ಕೂಡ ಗಾರೆ ಗಚ್ಚಿನ, ಗರಿಕೆ ಬೆಳೆಯಲೂ ಮಣ್ಣಿಲ್ಲದ ಜಾಗ. ಹಾಗೆಂದು ಸುಮ್ಮನಿರಲಾದೀತೇ? ಸ್ವಂತ ಮನೆಯಾದ್ದರಿಂದ ಯಾವ ಓನರ್ ನ ಭಯವೂ ಇಲ್ಲದೆ ಹೊಸ ಹೊಸ ಕುಂಡಗಳು ಗಿಡಗಳನ್ನು ತಂದು ನೆಟ್ಟು ಬೆಳೆಸಿ ಸಂಭ್ರಮಪಟ್ಟಿದ್ದಾಯಿತು. ಗೊಬ್ಬರ ಮಾತ್ರ ಅದೇ. ಹಣ್ಣು, ತರಕಾರಿ ಸಿಪ್ಪೆ, ಅಕ್ಕಿ ತೊಳೆದ ನೀರೇ.
ಕೆಲವೇ ತಿಂಗಳಲ್ಲಿ ಕುಂಡಗಳಲ್ಲಿದ್ದ ಅಲಂಕಾರಿಕ ಗಿಡಗಳನ್ನು ಹಿಂದಕ್ಕೆ ತಳ್ಳಿ, ಗೊಬ್ಬರದಲ್ಲಿದ್ದ ಹಣ್ಣು, ತರಕಾರಿಗಳ ಬೀಜಗಳು ಮೊಳೆತು ಸೊಕ್ಕಿ ಬೆಳೆದು ನಿಂತವು. ಮಾವು, ಸೀಬೆ, ದಾಳಿಂಬೆ, ಕಿತ್ತಳೆ, ನಿಂಬೆ ಎಲ್ಲವೂ ಕುಂಡಗಳಲ್ಲೇ. ಅಲಂಕಾರಿಕ ಗಿಡಗಳು ಇವುಗಳೊಂದಿಗೆ ಸೆಣಸಲಾರದೆ ಒಂದೊಂದಾಗಿ ಕಣ್ಮರೆಯಾದವು. ಇರಲಿ ನೋಡೋಣ ಇವೇ ಬೆಳೆದುಕೊಳ್ಳಲಿ, ಹೇಗೆ ಬೆಳೆಯ ಬಹುದು ಎಂಬ ಕುತೂಹಲದಿಂದ ಕುಂಡಗಳಲ್ಲೆ ಮರವಾಗುವ ಗಿಡಗಳನ್ನು ಬೆಳೆಸುತ್ತಿದ್ದು ಕಾಯುತ್ತಿದ್ದೇನೆ.

ಇಷ್ಟಾಗುವಷ್ಟರಲ್ಲಿ ನನ್ನ ಆಲದಮರ ಹತ್ತಾರು ಎಲೆಗಳನ್ನು ಬೆಳೆಸಿಕೊಂಡು, ತಾನಿದ್ದ ಚಿಕ್ಕ ಡಬ್ಬ ಮುಚ್ಚುವಂತೆ ಬೇರಿಳಿಸಿ ಕೊಂಡು, ಕಾಂಡವನ್ನು ಕಬ್ಬಿಣವನ್ನಾಗಿಸಿಕೊಂಡಿದೆ. ಅದ್ಯಾವಾಗ ಅದನ್ನು ನೆಟ್ಟು ಹತ್ತು ವರ್ಷಗಳಾದವೋ ತಿಳಿಯದು, ಆಗಲೇ ಬಿಳಲುಗಳನ್ನು ಬೆಳೆಸಲು ಸಿದ್ಧವಾಗುತ್ತಿದೆ.

ಒಮ್ಮೊಮ್ಮೆ ನನ್ನೊಂದಿಗೆ ಮಾತನಾಡುವಾಗ ನನ್ನ ಆಲ “ಅಕ್ಕ, ಒಂಚೂರು ಬಿಸಿಲಿಗಿಡೇ” ಎಂದರೆ ಬಿಸಿಲು ತೋರಿಸುವೆ. “ಹತ್ತು ವರ್ಷಕ್ಕೆ ಹತ್ತೆಲೆ ಸಾಕೇನೆ?” ಎಂದರೆ, “ಇನ್ನೇನೂ, ನೀನು ಕೊಟ್ಟಿರುವ ಹಿಡಿ ಮಣ್ಣಲ್ಲಿ ನೂರೆಲೆ ಮಾಡ್ಲ” ಎಂದು ತಿರುಗಿಸಿ ಕೇಳ್ತಾಳೆ.

“ಹಿಂಗೇ ಜಂಭ ಮಾಡ್ತಾ ಇರು, ನಿನ್ನ ರೆಂಬೆ ಕೊಂಬೆ ಎಲ್ಲ ಟ್ರಿಮ್ ಮಾಡಿ ಬಿಡ್ತೀನಿ” ಎಂದು ಹೆದರಿಸಿದರೆ “ನೀನೇನೆ ಮಾಡಿದ್ರು ನನ್ನ ಎಲೆ ಚಿಗುರುವುದನ್ನು ನಿಲ್ಲಿಸಲಾರೆ, ಬೇರಿಳಿಸುವುದನ್ನು ನಾ ಬಿಡಲಾರೆ, ನೋಡ್ತಾ ಇರು ಒಂದು ದಿನ ನನ್ನ ಮೈ ಕೈ ಎಷ್ಟು ಗಟ್ಟಿಯಾಗುತ್ತೆ ಅಂದ್ರೆ ನಿನ್ನ ಕತ್ತರಿ ಚಾಕುಗಳ ಬಾಯಿಯೇ ಮೊಂಡಾಗಿ ಮುರಿದು ಹೋಗುತ್ತೆ” ಎಂದು ನಗುತ್ತಾಳೆ.
“ಹಾಗೆ ನಗ್ತಾ ಇರು, ಒಂದಿನ ನಿನ್ನ ಹಲ್ಲುಗಳನೆಲ್ಲ ಉದುರಿಸಿಬಿಡ್ತೀನಿ” ಎಂದರೆ,”ಹೌದಾ!” ಎಂದು ಇನ್ನೂ ನಳನಳಿಸಿ ನಗುತ್ತ ಅಣಕಿಸುತ್ತಾಳೆ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!