
♦ ಸುಮನಾ ಲಕ್ಷ್ಮೀಶ
response@134.209.153.225
newsics.com@gmail.com
93ನೇ ಹುಟ್ಟುಹಬ್ಬ ಸಂಭ್ರಮ
ಪ್ರೀತಿ, ವಾತ್ಸಲ್ಯದ ಮೂಲಕವೇ ಪ್ರಕೃತಿಯ, ಜಗತ್ತಿನ ಬೆರಗನ್ನು ತುಂಬಿಕೊಟ್ಟ ಕವಿ ಚನ್ನವೀರ ಕಣವಿ. ಅವರಿಗೆ ಇಂದು (ಜೂನ್ 28) 93ನೇ ಹುಟ್ಟುಹಬ್ಬ ಸಂಭ್ರಮ. ಈ ನೆಪದಲ್ಲಿ, ನವಿರಾದ ಗೀತೆಗಳ ಮೂಲಕ ಕವಿತೆಗಳಲ್ಲಿ ಆಸಕ್ತಿ ಮೂಡುವಂತೆ ಮಾಡಿದ ಹಿರಿಯ ಕವಿಗೆ ನಮನ.
===
ಅ ದು ಪ್ರಾಥಮಿಕ ಶಾಲೆ ಓದುತ್ತಿದ್ದ ಸಮಯ. ದೂರದರ್ಶನದಲ್ಲಿ, ಇಬ್ಬರು ಹುಡುಗಿಯರು ಸೈಕಲ್ ಮೇಲೆ ಸವಾರಿ ಮಾಡುತ್ತ “ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ…’ ಎಂದು ಹಾಡುತ್ತ ಬರುತ್ತಿದ್ದರೆ ರೋಮಾಂಚನವಾಗುತ್ತಿತ್ತು. ಅವರಂತೆಯೇ ಸೈಕಲ್ ಓಡಿಸುತ್ತ ಹಾಡುವ ಉತ್ಸಾಹ ಪುಟಿಯುತ್ತಿತ್ತು. ಇದೊಂದೇ ಅಲ್ಲ, “ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ’ ಎನ್ನುವ ಗೀತೆಯ ಮಾಧುರ್ಯ ಮನಸ್ಸನ್ನೆಲ್ಲ ಆವರಿಸಿ ಮಧುರವಾದ ಅನುಭೂತಿ, ತುಂತುರು ಮಳೆಯೂ ಶ್ರುತಿ ಹಿಡಿದು ಸುರಿಯುತ್ತದೆಯೇ ಎನ್ನುವ ಬೆರಗು ಮೂಡುತ್ತಿತ್ತು. “ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ ಜಯಭಾರತಿ..’ ಹಾಡಂತೂ ಧಮನಿಗಳಲ್ಲಿ ದೇಶಭಕ್ತಿಯ ಸುಧೆ ಹರಿಸುತ್ತಿತ್ತು. ಹತ್ತು, ಹನ್ನೊಂದು ವರ್ಷಕ್ಕೆಲ್ಲ ಒಂದು ಸುಂದರವಾದ ಪ್ರಪಂಚವನ್ನು ಕಟ್ಟಿಕೊಡುವಲ್ಲಿ ಈ ಮಧುರವಾದ ಹಾಡುಗಳು ಯಶಸ್ವಿಯಾಗುತ್ತಿದ್ದವು ಎಂದರೆ ಅದು ಕವಿಯ ಅಂತಃಸತ್ವವನ್ನು ತೋರುತ್ತದೆ. ಹೀಗೆ, ನಾದಮಯ ಗೀತೆಗಳ ಮೂಲಕ ಕವಿತೆಗಳಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿರುವ ಆ ಕವಿ ಚನ್ನವೀರ ಕಣವಿ.
ಓ ಆಷಾಢ ನೀ ಆಡಿಸಿ ಆಡಬ್ಯಾಡ
ಬೀಸಿ ಬಡಿ ಬರಿ ತಿದ್ದಿ ತೀಡಬ್ಯಾಡ…
ಆಷಾಢದ ಮೇಲಿನ ಈ ಕವನ ಚನ್ನವೀರ ಕಣವಿಯವರ ನೆನಪನ್ನು ಆಷಾಢದ ಗಾಳಿಯಂತೆಯೇ ನುಗ್ಗಿ ತರುತ್ತದೆ. ಆಷಾಢವೆಂದರೆ ನೂತನ ದಂಪತಿಗಳಿಗೆ ವಿರಹದ ಕಾಲ. ದಂಪತಿ ಆಷಾಢವನ್ನು ಬೈದುಕೊಳ್ಳುತ್ತಿದ್ದರೆ ಇವರು ಮಾತ್ರ ಹಾಯಾಗಿ “ಬೀಸಿ ಬಡಿ, ಬರಿ ತಿದ್ದಿ ತೀಡಬ್ಯಾಡ’ ಎನ್ನುತ್ತಾರೆ! ಆಷಾಢ ಕವನದ ಮೂಲಕ ಈ ಸಮಯದ ವಾತಾವರಣವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸಿದ್ದ ಕಣವಿಯಯವರು ನಮ್ಮ ನಡುವಿನ ಮಹಾನ್ ಚೇತನ.
ಇವರ ಕವಿತೆಗಳಲ್ಲಿ ಹಸಿರು ಹುಲ್ಲು ಮಕಮಲ್ಲಾಗುತ್ತದೆ! ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿ ಹೂ ಮುಡಿದು ಮದುಮಗಳ ಹೋಲುತ್ತದೆ! ಹುಲ್ಲೆಸಳು ಮುತ್ತು ಹನಿಗಳ ಮಿಂಚು ಸೊಡರಿನಲಿ ಆರತಿಯನ್ನು ಬೆಳಗುತ್ತದೆ! ಇಂಥದ್ದೊಂದು ರಮ್ಯವಾದ ಲೋಕದಲ್ಲಿ ತೇಲಲು ಯಾವ ಭಾವಜೀವಿ ತಾನೇ ಬಯಸುವುದಿಲ್ಲ?
ಕಣವಿಯರ ಅಬ್ಬರವಿಲ್ಲದ ಮೆಲುದನಿಯ ಗೀತೆಗಳು ನಾದವಾಗುತ್ತವೆ, ನಾದದ ಸೊಬಗಿಗೆ ಒತ್ತು ನೀಡುತ್ತವೆ, ಜೀವನಪ್ರೀತಿಯನ್ನು ಪದಪದಗಳಲ್ಲೂ ಎತ್ತಿ ತೋರುತ್ತ ಸಾಗುತ್ತವೆ. ಪ್ರಕೃತಿ, ಪ್ರೀತಿ, ವಾತ್ಸಲ್ಯ, ಮಳೆ, ಭೂಮಿ, ಸಹನೆ ಇಂಥ ನಮ್ಮದೇ ಜೀವನದ ವಿಷಯಗಳನ್ನು ಲಾಲಿತ್ಯವುಳ್ಳ ಕವಿತೆಯ ಸಾಲುಗಳ ಮೂಲಕ ನೀಡುತ್ತ ಒಂದು ತಲೆಮಾರಿನ ಯುವಜನರನ್ನು ಕವಿತೆಯತ್ತ ಸೆಳೆದ ಕೀರ್ತಿ ನಿಸ್ಸಂಶಯವಾಗಿ ಕಣವಿಯವರಿಗೂ ಸಲ್ಲುತ್ತದೆ. 93ರ ವಯಸ್ಸಿನ ಚನ್ನವೀರರು ಇನ್ನೂ ಬಹಳಷ್ಟು ಕಾಲ ಇಂಥದ್ದೇ ಕವಿತೆಗಳ ಮೂಲಕ ನಮ್ಮೊಳಗನ್ನು ಬೆಳಗಲಿ ಎಂಬುದೇ ನಮ್ಮಂಥ ಕಿರಿಯರ ಬಯಕೆ.