Saturday, December 2, 2023

ನಾರಾಯಣಾಚಾರ್ಯರು ಹಚ್ಚಿದ ಜ್ಞಾನದ ದೀಪ

Follow Us

ಚಿಂತಕ ನಾರಾಯಣಾಚಾರ್ಯರಿಗೆ ನುಡಿನಮನ

ಪೌರಾಣಿಕ, ಐತಿಹಾಸಿಕ ವಿಷಯಗಳನ್ನಾಧರಿಸಿದ ವಿದ್ವತ್ಪೂರ್ಣ ಗ್ರಂಥಗಳ ಲೇಖಕ, ಪ್ರಖರ ರಾಷ್ಟ್ರವಾದಿ ಚಿಂತಕ, ಚಿಂತನೆಗೆ ಹಚ್ಚುವಂತಹ ಪ್ರವಚನಕಾರರಾಗಿದ್ದ ಕೆ.ಎಸ್. ನಾರಾಯಣಾಚಾರ್ಯರು ಇಂದು ನಮ್ಮೊಂದಿಗಿಲ್ಲ. ಅವರು ಬೆಳಗಿಸಿದ ಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ.

♦ ಸುಮನಾ ಲಕ್ಷ್ಮೀಶ
newsics.com@gmail.com
ಇಂದಿನ ತಲೆಮಾರಿಗೆ ವೇದ ಸಂಸ್ಕೃತಿಯನ್ನು ಅತ್ಯಂತ ವಿಷದವಾಗಿ ಹಾಗೂ ಅಧಿಕಾರಯುತವಾಗಿ ಪರಿಚಯಿಸಿದ ಏಕೈಕ ವಿದ್ವಾಂಸರೆಂದರೆ ಡಾ. ಕೆ.ಎಸ್. ನಾರಾಯಣಾಚಾರ್ಯರು. ಅವರ “ವೇದ ಸಂಸ್ಕೃತಿ ಪರಿಚಯ’ ಮಾಲಿಕೆಯ ಉಪನ್ಯಾಸ ಕೇಳಿದವರಿಗೆ ವೇದ ಕಾಲದ ಪರಿಚಯ ಮಾತ್ರವಲ್ಲ, ಇಂದಿನ ಬದುಕಿಗೆ ಬೇಕಾದ ಹೊಳಹುಗಳೂ ಸಾಕಷ್ಟು ಸಿಗುತ್ತವೆ. ಮನುಷ್ಯ ತನ್ನ ಜೀವನದಲ್ಲಿ ಅರಿಯದೆಯೇ ಅನುಸರಿಸುವ ಅದೆಷ್ಟೋ ಮೌಢ್ಯಗಳ ಕುರಿತಾಗಿ ಅವರಷ್ಟು ಪರಿಣಾಮಕಾರಿಯಾಗಿ ತಿಳಿಯಪಡಿಸಿದವರು ಬೇರೊಬ್ಬರಿಲ್ಲ. ಇಂತಹ ಅರಿವಿನ ಚೇತನವೊಂದು ನಮ್ಮ ನಡುವೆ ಇರುವುದು ಅಗತ್ಯವಾಗಿತ್ತು. ಆದರೇನು ಮಾಡುವುದು? ನಾರಾಯಣಾಚಾರ್ಯರು ಇಂದು ನಮ್ಮೊಂದಿಗಿಲ್ಲ. ಈ ಮೂಲಕ ಭಾರತದ ಪ್ರಮುಖ ವಿದ್ವಾಂಸ, ಪ್ರವಚನಕಾರ, ಲೇಖಕರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ, ತಮ್ಮ ಸಾಹಿತ್ಯ ಮತ್ತು ಪ್ರವಚನದ ಮೂಲಕ ಅವರು ಮೂಡಿಸಿದ ಅರಿವು ಸಮಾಜದಲ್ಲಿ ಪ್ರಖರವಾಗಬೇಕಿದೆ.
ಪೌರಾಣಿಕ, ಐತಿಹಾಸಿಕ ವಿದ್ಯಮಾನಗಳ ಬಗ್ಗೆ ಅಧಿಕಾರಯುತವಾಗಿ ವಾದ ಮಂಡಿಸಬಲ್ಲ, ಬರೆಯಬಲ್ಲ, ಮಾತನಾಡಬಲ್ಲ ಸಾಮರ್ಥ್ಯ ಹೊಂದಿದ್ದ ನಾರಾಯಣಾಚಾರ್ಯರು ಕನ್ನಡ, ಇಂಗ್ಲಿಷ್, ಸಂಸ್ಕೃತ, ತಮಿಳು ಭಾಷೆಗಳಲ್ಲಿ 180ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಅವರು ಅತ್ಯಂತ ವೈಚಾರಿಕವಾಗಿ ಮಾತನಾಡಬಲ್ಲವರಾಗಿದ್ದರು. ಎಂಥದ್ದೇ ಪ್ರಬಲ ವಿರೋಧ ಎದುರಾದರೂ ತಮ್ಮ ಅರಿವಿಗೆ ಬಂದದ್ದನ್ನು ಮುಕ್ತವಾಗಿ ಹೇಳುವುದು ಅವರ ಸ್ವಭಾವವಾಗಿತ್ತು.
ಕನಕಪುರದ ಕೆ.ಎನ್.ಶ್ರೀನಿವಾಸ ದೇಶಿಕಾಚಾರ್ ಮತ್ತು ರಂಗನಾಯಕಮ್ಮ ಅವರ ಪುತ್ರನಾಗಿ 1933ರ ಅಕ್ಟೋಬರ್ 30ರಂದು ಜನಿಸಿದ್ದರು. ವೈಷ್ಣವ ಸಂಪ್ರದಾಯದ ವೈದಿಕ ವಿದ್ವಾಂಸರ ಕುಟುಂಬದ ಮಾತೃಭಾಷೆ ತಮಿಳು. ಆದರೆ, ನಾರಾಯಣಾಚಾರ್ಯರು ಕನ್ನಡ ಮತ್ತು ಸಂಸ್ಕೃತವನ್ನು ಬಾಲ್ಯದಿಂದಲೇ ಕರಗತ ಮಾಡಿಕೊಂಡರು. ಬಳಿಕ, ಇಂಗ್ಲಿಷ್ ಭಾಷೆಯಲ್ಲೂ ಪ್ರಾವೀಣ್ಯ ಪಡೆದುಕೊಂಡರು. ಬಾಲ್ಯದ ವಿದ್ಯಾಭ್ಯಾಸ ಕನಕಪುರದಲ್ಲಾದರೆ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎಸ್ಸಿ, ಬಳಿಕ ಬಿಎ ಆನರ್ಸ್ ಮಾಡಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. “ಡಬ್ಲ್ಯು.ಬಿ.ಯೇಟ್ಸ್ ಮತ್ತು ಟಿ.ಎಸ್. ಎಲಿಯಟ್ ರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿ ಪ್ರಭಾವ’ ಎನ್ನುವ ವಿಷಯದ ಬಗ್ಗೆ ಪ್ರಬಂಧ ಮಂಡನೆ ಮಾಡಿ ಪಿಎಚ್ ಡಿ ಪಡೆದರು. ಬಳಿಕ, ಅವರ ಕರ್ಮಭೂಮಿಯಾಗಿದ್ದುದು ಧಾರವಾಡ. ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಅದೇ ಕಾಲೇಜಿನ ಪ್ರಾಂಶುಪಾಲರಾಗಿ 1993ರಲ್ಲಿ ನಿವೃತ್ತಿ ಹೊಂದಿದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು.
ಬೇಂದ್ರೆ ಪ್ರೇರಣೆ
ಅಂದ ಹಾಗೆ, ನಾರಾಯಣಾಚಾರ್ಯರು ಬರವಣಿಗೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ವರಕವಿ ಡಾ. ದ.ರಾ.ಬೇಂದ್ರೆ ಅವರ ಪ್ರೇರಣೆಯಿಂದ. ಅದುವರೆಗೂ ಅವರು ಪ್ರವಚನದಲ್ಲೇ ತಮ್ಮ ವಿದ್ವತ್ತನ್ನು ವ್ಯಕ್ತಪಡಿಸುತ್ತಿದ್ದರು. ಬಳಿಕ, ಲೇಖನ, ವಿಮರ್ಶಾ ಗ್ರಂಥ, ವಿದ್ವತ್ಪೂರ್ಣ ಗ್ರಂಥಗಳನ್ನು ಬರೆದು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು. ವೇದ-ಪುರಾಣಗಳು, ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ಅವರಿಗೆ ವಿಶೇಷ ಪರಿಣಿತಿಯೂ ಇತ್ತು, ಆಸಕ್ತಿಯೂ ಅಪರಿಮಿತವಾಗಿತ್ತು. ಕೌಟಿಲ್ಯನ ಅರ್ಥಶಾಸ್ತ್ರ, ಸುಭಾಷ್ ಚಂದ್ರ ಬೋಸ್, ದ.ರಾ.ಬೇಂದ್ರೆ ಅವರ ಕುರಿತಾಗಿಯೂ ಕೃತಿಗಳನ್ನು ರಚಿಸಿದ್ದಾರೆ.
ವಿವಾದಕ್ಕೆ ಆಸ್ಪದ ನೀಡಿದ್ದ ವಾದಗಳು
ನಾರಾಯಣಾಚಾರ್ಯರು ಕೆಲವು ಬಹಳಷ್ಟು ಕೃತಿಗಳು ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದವು. “ವಾಲ್ಮೀಕಿ ಯಾರು?’ ಎನ್ನುವ ಪುಸ್ತಕದ ವಿರುದ್ಧವಂತೂ ಪ್ರತಿಭಟನೆಗಳೂ ನಡೆದಿದ್ದವು. ಬೇಡನಾಗಿದ್ದ ವಾಲ್ಮೀಕಿ ಕ್ರೌಂಚ ಪಕ್ಷಿಗಳನ್ನು ಬೇಟೆಯಾಡಿದ ಬಳಿಕ ಮಹರ್ಷಿಯಾಗಿ ಬದಲಾಗಿ ರಾಮಾಯಣ ಬರೆದರೆಂಬ ಇತಿಹಾಸವನ್ನು ನಾವು ಕೇಳಿದ್ದೇವೆ. ಆದರೆ, ಹಲವಾರು ಅಧ್ಯಯನಗಳ ಬಳಿಕ ನಾರಾಯಣಾಚಾರ್ಯರ ಹೇಳಿದ್ದೆಂದರೆ, ವಾಲ್ಮೀಕಿ ಬೇಡ ಕುಲದಲ್ಲಿ ಹುಟ್ಟಿದವರಲ್ಲ. “ಅವರು ತಮ್ಮನ್ನು ತಾವು ಬೇಡರೆಂದು ಎಲ್ಲಿಯೂ ಹೇಳಿಕೊಂಡಿಲ್ಲ. ಶ್ರೀರಾಮನಿಗೆ ಪರಿಚಯ ಮಾಡಿಕೊಳ್ಳುವ ಸಮಯದಲ್ಲಿ ಒಮ್ಮೆ ಮಾತ್ರ ಪ್ರಚೇತಸ ಎಂಬ ಮಹರ್ಷಿಯ ಹತ್ತನೇ ಮಗ ಎಂಬುದಾಗಿ ಹೇಳಿಕೊಳ್ಳುತ್ತಾರೆ, ಹೀಗಾಗಿ, ಅವರು ಬ್ರಾಹ್ಮಣ. ಬೇಡನೊಬ್ಬ ಏಕಾಏಕಿ ಬದಲಾಗಿ ಕಾವ್ಯ ಬರೆದ ಎನ್ನುವುದು ಹಾಸ್ಯಾಸ್ಪದ. ಅಲ್ಲದೆ, ರಾಮಾಯಣದಂತಹ ಕಾವ್ಯ ರಚನೆ ಮಾಡಲು ಸಾಹಿತ್ಯದ ಜ್ಞಾನ ಇರಲೇಬೇಕು. ದಿಢೀರನೆ ಮಹಾಕಾವ್ಯ ರಚನೆ ಮಾಡುವುದಕ್ಕೆ ಸಾಧ್ಯವಿಲ್ಲ’ ಎನ್ನುವ ವಾದವನ್ನು ಮುಂದಿಟ್ಟಿದ್ದರು. ಅಷ್ಟೇ ಅಲ್ಲದೆ, ರಾಮಾಯಣವನ್ನು ಆಸ್ವಾದಿಸಲು ಪದ, ಅಕ್ಷರ, ವೇದ ಜ್ಞಾನ, ಭಾಷಾ ತಜ್ಞತೆ ಮುಂತಾದ ವಿದ್ವಾಂಸರಾಗಿರಬೇಕು ಎಂದು ಸ್ವತಃ ವಾಲ್ಮೀಕಿಯೇ ಬರೆದುಕೊಂಡಿರುವಾಗ ಅವರು ಬೇಡ ಎನ್ನಲು ಯಾವುದೇ ಪುರಾವೆಯಿಲ್ಲ. ವಾಲ್ಮೀಕಿ ಸಮುದಾಯವನ್ನು ನೋಯಿಸುವುದು ನನ್ನ ಉದ್ದೇಶವಲ್ಲ’ ಎಂದೂ ಹೇಳಿದ್ದರು.
ಗಾಂಧಿಯನ್ನು ನಿಜವಾಗಿ ಕೊಂದಿದ್ದು ಯಾರು?
“ಗಾಂಧಿಯನ್ನು ನಿಜವಾಗಿ ಕೊಂದಿದ್ದು ಯಾರು?’ ಎನ್ನುವ ಕೃತಿಯೂ ಹಲವರ ಕಣ್ಣನ್ನು ಕೆಂಪಗಾಗಿಸಿದ್ದುದು ಸುಳ್ಳಲ್ಲ. ಈ ಕೃತಿಯ ಮೂಲಕ ಅವರು ಗಾಂಧಿಜಿ ಹತ್ಯೆಯ ಕುರಿತ ಅನೇಕ ಅನುಮಾನಗಳನ್ನು ತೆರೆದಿಟ್ಟಿದ್ದರು. “ಅಂದಿನ ಸರ್ಕಾರಕ್ಕೂ ಹಲವಾರು ಕಾರಣಗಳಿಂದ ಗಾಂಧಿ ತಲೆನೋವಾಗಿದ್ದರು. ಹೀಗಾಗಿ, ಅವರನ್ನು ಹತ್ಯೆ ಮಾಡಿಸಿ, ಗೋಡ್ಸೆ ತಲೆಗೆ ಆ ಆರೋಪ ಹೊರಿಸಿ, ಹಿಂದೂಗಳನ್ನು ಭಯೋತ್ಪಾದಕರೆಂದು ಬಿಂಬಿಸುವ ಯತ್ನ ನಡೆಸಲಾಯಿತು’ ಎನ್ನುವ ಅಂಶವನ್ನು ಬಹಳ ತಾರ್ಕಿಕವಾಗಿ ಹೇಳಿದ್ದಾರೆ. ತಮ್ಮ ಈ ವಾದಕ್ಕೆ ಪುಷ್ಟಿ ನೀಡುವ ಹಲವು ಅಂಶಗಳನ್ನೂ ವಿವರಿಸಿದ್ದಾರೆ.
ಹೀಗೆ, ಐತಿಹಾಸಿಕ ವಿಚಾರಗಳ ಕುರಿತು ವೈರುಧ್ಯಗಳ ನಡುವೆಯೂ ನಿರಂತರವಾಗಿ ತಮ್ಮ ನಿಲುವನ್ನು ಬಹಿರಂಗಪಡಿಸುತ್ತಿದ್ದರು. ಪ್ರಸ್ತುತ ರಾಜಕೀಯ ಸನ್ನಿವೇಶವನ್ನೂ ಅತ್ಯಂತ ದಿಟ್ಟವಾಗಿ ವಿಮರ್ಶೆ ಮಾಡುತ್ತಿದ್ದರು.
ವಿದ್ವನ್ಮಣಿ, ವೇದಭೂಷಣ, ಗಮನ ರತ್ನಾಕರ ಮುಂತಾದ ಬಿರುದುಗಳಿಗೆ ಪಾತ್ರರಾಗಿದ್ದ ನಾರಾಯಣಾಚಾರ್ಯರಿಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಡಿ.ಲಿಟ್ ಪದವಿ ನೀಡಿ ಪುರಸ್ಕರಿಸಿದೆ.
ವಿಶಿಷ್ಟಾದ್ವೈತ ತತ್ವದ ಬರವಣಿಗೆ
ಬೇಂದ್ರೆಯವರ ಬರವಣಿಗೆಯಲ್ಲಿರುವ ವಿಮರ್ಶಾ ಸೂತ್ರಗಳನ್ನು ಗುರುತಿಸಿ, ಅವುಗಳಿಗೆ ವ್ಯಾಖ್ಯಾನವನ್ನೂ ಬರೆದಿದ್ದರು. ಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿರುವ ಸೂತ್ರಗಳನ್ನು ಗುರುತಿಸಿದ ಏಕೈಕ ವಿದ್ವಾಂಸರೆಂದರೆ, ನಾರಾಯಣಾಚಾರ್ಯರು. ಅವರ ಬಹುತೇಕ ಬರಹಗಳು ವಿಶಿಷ್ಟಾದ್ವೈತ ತತ್ವಗಳನ್ನು ಆಧರಿಸಿವೆ.
ವೇದ ಸಂಸ್ಕೃತಿಯ ಪರಿಚಯ(10 ಸಂಪುಟ), ಶ್ರೀ ರಾಮಾವತಾರ ಸಂಪೂರ್ಣವಾದಾಗ, ಶ್ರೀ ರಾಮಾಯಣ ಪಾತ್ರ ಪ್ರಪಂಚ, ಶ್ರೀ ಮಹಾಭಾರತ ಪಾತ್ರ ಪ್ರಪಂಚ, ಆ ಹದಿನೆಂಟು ದಿನಗಳು, ರಾಜಸೂಯದ ರಾಜಕೀಯ, ರಾಜಸೂಯ ತಂದ ಅನರ್ಥ, ಶ್ರೀ ಕೃಷ್ಣಾವತಾರ (2 ಸಂಪುಟ), ಅಗಸ್ತ್ಯ, ದಶಾವತಾರ, ಮಹಾಮಾತೆ ಕುಂತಿ ಕಣ್ತೆರೆದಾಗ, ನಳ ದಮಯಂತಿ, ಆಚಾರ್ಯ ಚಾಣಕ್ಯ, ಚಾಣಕ್ಯ ನೀತಿ ಸೂತ್ರಗಳು, ರಾಮಾಯಣ ಸಂಪೂರ್ಣವಾದಾಗ, ಶ್ರೀ ರಾಮಾಯಣಸಾಹಸ್ರೀ (5 ಭಾಗ), ಶ್ರೀ ರಾಮಾಯಣದ ಮಹಾ ಪ್ರಸಂಗಗಳು, ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ದ, ಭಾರತೀಯ ಇತಿಹಾಸ ಪುರಾಣಗಳು, ಭಾರತ-ಇಸ್ಲಾಂ ಮತ್ತು ಗಾಂಧಿ, ಸಮಾಜ ಮತ್ತು ಆಧ್ಯಾತ್ಮೀಕರಣ, ಶ್ರೀ ಮಹಾಭಾರತ ಕಾಲ ನಿರ್ಣಯ, ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು (3 ಸಂಪುಟಗಳು), ರಾಷ್ಟ್ರಾವಲೋಕನ, ವನದಲ್ಲಿ ಪಾಂಡವರು, ವಾಲ್ಮೀಕಿ ಯಾರು?, ಗೀತಾರತ್ನನಿಧಿ, ಉದ್ಧವ ಗೀತಾ, ಸುಭಾಷರ ಕಣ್ಮರೆ, ಮಹಾಪ್ರಸ್ಥಾನ, ದೇವಕಿಯ ಚಿಂತನೆಗಳು, ಆಳ್ವಾರರು ಮತ್ತು ಹರಿದಾಸರು ಮುಂತಾದ ಕೃತಿಗಳು ಪ್ರಮುಖವಾಗಿವೆ. ಇಂಗ್ಲಿಷ್ ಮತ್ತು ತಮಿಳು ಭಾಷೆಗಳಲ್ಲೂ ಕೃತಿಗಳನ್ನು ರಚಿಸಿದ್ದಾರೆ.
ಅವರ ವೈಚಾರಿಕ ಪ್ರವಚನಗಳನ್ನು ಕೇಳುವ ಸುಯೋಗದಿಂದ ಇಂದು ವಂಚಿತರಾಗಿದ್ದೇವೆ. ಆದರೆ, ಅವರಿಲ್ಲದಿದ್ದರೂ ಅವರ ಕೃತಿಗಳು ನಮ್ಮನ್ನು ಉದ್ಧರಿಸುತ್ತವೆ.

ಮತ್ತಷ್ಟು ಸುದ್ದಿಗಳು

vertical

Latest News

ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಕ್ಕೆ ಅವಮಾನ: ಟ್ರಕ್‌’ಗೆ ತಾವೇ ಲಗೇಜ್‌ ಲೋಡ್‌ ಮಾಡಿದ ಆಟಗಾರರು

newsics.com ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ತುಂಬುತ್ತಿರುವ ವಿಡಿಯೋವೊಂದು ವೈರಲ್...

ರಾಜ್ಯದ 36 ಲಕ್ಷ ಮತದಾರರಿಗೆ ಚುನಾವಣಾ ಆಯೋಗ ನೋಟಿಸ್

newsics.com ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿರುವ ಅಥವಾ ಹೆಸರು ನಕಲು ಮಾಡಿರುವ 36 ಲಕ್ಷ ಮತದಾರರಿಗೆ ರಾಜ್ಯ ಚುನಾವಣಾ ಆಯೋಗವು ಭಾರತೀಯ ಅಂಚೆ ಮೂಲಕ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಹೆಚ್ಚುವರಿಯಾಗಿ, ಮುಂದಿನ...

ಅಸಲಿ ಚಿನ್ನದ ಜಾಗದಲ್ಲಿ ನಕಲಿ ಬಂಗಾರವಿಟ್ಟು ಗ್ರಾಹಕರಿಗೆ ವಂಚಸಿದ ಬ್ಯಾಂಕ್ ಸಿಬ್ಬಂದಿ

newsics.com ಚಿಕ್ಕಮಗಳೂರು: ಗ್ರಾಹಕರಿಗೆ ಬ್ಯಾಂಕ್‌ ಸಿಬ್ಬಂದಿ ಕೋಟ್ಯಂತರ ರೂಪಾಯಿ ವಂಚಿಸಿರುವ ಘಟನೆ ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದೆ. 6 ಕೋಟಿಗೂ ಅಧಿಕ ಹಣ ದುರುಪಯೋಗದ ಆರೋಪ...
- Advertisement -
error: Content is protected !!