ಗಂಗಾಧರ್ ಅಡ್ಡೇರಿ, ಪ್ರಜಾವಾಣಿ ಪತ್ರಿಕೆಯ ಅಡ್ಡನೋಟ ಅಂಕಣದ ಕಾಯಂ ವ್ಯಂಗ್ಯಚಿತ್ರಕಾರರು. ಸದಾಶಿವ ಸೊರಟೂರು ಇವರ ಹಲವು ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿದ್ದರು. ಅವರ ಅಕಾಲಿಕ ಸಾವು ಅಕ್ಷರಶಃ ಎಂದೆಂದಿಗೂ ತುಂಬಲಾರದ ನಷ್ಟ.
ಅಗಲಿದ ಗೆಳೆಯನಿಗೆ
ನುಡಿನಮನ
♦ ರಾಘವೇಂದ್ರ ಬೀಜಾಡಿ
ಗಾಯಕರು,ಸಂಯೋಜಕರು
newsics.com@gmail.com
ಗಂಗಾಧರ್ ಅಡ್ಡೇರಿ ಅವರೋರ್ವ ವ್ಯಂಗ್ಯಚಿತ್ರಕಾರರಾಗಿದ್ದರೂ ಅವರನ್ನು ನೇರವಾಗಿ ನೋಡಿದಾಗ ಹಾಗನ್ನಿಸುತ್ತಲೇ ಇರಲಿಲ್ಲ. ಮೃದು ಮಾತುಗಾರ. ಎಲ್ಲರೊಡನೆಯೂ ಹೊಂದಿಕೊಳ್ಳುವ ವ್ಯಕ್ತಿಯಾಗಿದ್ದರು. ವಿಷಯಗಳ ಬಗ್ಗೆ ಖಚಿತ ಅಭಿಪ್ರಾಯ ಉಳ್ಳವರಾಗಿದ್ದರು.. ಹಾಗಾಗಿಯೇ ಅವರ ವ್ಯಂಗಚಿತ್ರ ಕೇವಲ ವ್ಯಂಗ್ಯವಾಗಷ್ಟೆ ಇರದೆ ಚಿಂತನೆಗೆ ಈಡು ಮಾಡುವಂತೆ ಇದ್ದವು. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾಗ ನಾವಿಬ್ಬರೂ ಆಂಗ್ಲ ತರಬೇತಿಯೊಂದರಲ್ಲಿ ಭೇಟಿಯಾಗಿದ್ದೆವು. ಸುಮಾರು ಒಂದು ತಿಂಗಳ ತರಬೇತಿ. ಆಗಲೇ ನನಗೆ ಅಡ್ಡೇರಿಯವರ ಪರಿಚಯವಾಗಿದ್ದು. ನಂತರ ಅವರು ಪ್ರೌಢಶಾಲಾ ಶಿಕ್ಷಕರಾಗಿ ಹೊಸಕೋಟೆಗೆ ಬಂದರು. ನಾನು ವರ್ಗಾವಣೆಗೊಂಡು ಆನೇಕಲ್ ಕಡೆಗೆ ಬಂದೆ. ಪೋನ್ ಮುಖಾಂತರ ನಮ್ಮ ನಿರಂತರ ಸಂಪರ್ಕವಿರುತ್ತಿತ್ತು. ಇತ್ತೀಚೆಗಷ್ಟೆ ಮಧು ಕೋಡನಾಡು ಅವರ ‘ಇಹನೊಬ್ಬ ನಾರಾಯಣ…’ ಎಂಬ ಹಾಡೊಂದಕ್ಕಾಗಿ ನನಗೆ ಹಲವಾರು ವ್ಯಂಗ್ಯಚಿತ್ರಗಳನ್ನು ಬರೆದುಕೊಟ್ಟಿದ್ದರು.
ಅದಕ್ಕೆ ಗೌರವ ಸಂಭಾವನೆಯನ್ನೂ ತೆಗೆದುಕೊಳ್ಳಲಿಲ್ಲ ಅವರು. ಮುಂದೆ ತೆಗೆದುಕೊಳ್ತೇನೆ ಸರ್. ನಿಮ್ಮ ಜತೆ ಕೆಲಸ ಮಾಡಿದ್ದೇ ಖುಷಿ ಎಂದು ಮಾತು ಹಾರಿಸಿಬಿಟ್ಟಿದ್ದರು. ಮಾತು ತಪ್ಪಿದ್ದೀರಿ ಅಡ್ಡೇರಿಯವರೇ. ನಿಜವೆಂದರೆ ಬರೆಯಲು ಸಾಧ್ಯವೇ ಆಗದಷ್ಟು ದುಃಖವಾಗಿದೆ. ಕೇವಲ ಒಂದು ತಿಂಗಳ ಹಿಂದಷ್ಟೆ… ಮತ್ತೊಂದು ಹಾಡಿನ ಬಗ್ಗೆ ಚರ್ಚೆ ಮಾಡಿದ್ದೆವು.. ಅಡ್ಡೇರಿ ಇದ್ದಾರೆ ಎಂದರೆ ಅರ್ಥಪೂರ್ಣ ಸಮಯ ಕಳೆಯುವಿಕೆ ಇರುತ್ತಿತ್ತು. ಆದರೆ ಈಗ ಅವರೇ ಕಳೆದುಹೋಗಿದ್ದಾರೆ… ಈ ಸಮಯವೇ ಅರ್ಥಹೀನ ಅನ್ನಿಸ್ತಾ ಇದೆ… ಈ ಕೊರೋನಾಕ್ಕೆ ಇನ್ನೆಷ್ಟು ಬಲಿ ಬೇಕು.. ಅದರಲ್ಲೂ ಅಡ್ಡೇರಿಯವರಂತಹ ಕ್ರಿಯಾತ್ಮಕ ವ್ಯಕ್ತಿಗಳನ್ನು ಕಳೆದುಕೊಂಡಾಗ ಸಮುದಾಯಕ್ಕೆ ಆಗುವ ನಷ್ಟ ಭರಿಸಲಾರದ್ದಂತದ್ದು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಅವರ ವ್ಯಂಗ್ಯಚಿತ್ರ ಬದಾಗ ಸಂತಸಪಡುತ್ತಿದ್ದ ನಮಗೆ ಅದೇ ಪತ್ರಿಕೆಗಳಲಿ ಅವರ ಸಾವಿನ ಸುದ್ದಿ ಬಂದಿರುವುದನ್ನು ಕಂಡರೆ ಇದು ವಿಧಿಯ ಕ್ರೂರ ವ್ಯಂಗ್ಯವೆನಿಸದೆ ಇರಲಾರದು. ಅಡ್ಡೇರಿಯವರ ಆತ್ಮಕ್ಕೆ ಶಾಂತಿಯ ಕೋರುತ್ತಾ…. ಸಾಕು ಸಾಕು ಇನ್ನು ಈ ಮಾರಣಹೋಮ.. ಕೊರೋನಾ ತೊಲಗಲಿ ಎಂಬುದೊಂದೇ ಪ್ರಾರ್ಥನೆ.