Wednesday, October 5, 2022

ಅಕ್ಷರ ಬೆಳೆಗಾರ

Follow Us

‘ರವಿ ಬೆಳಗೆರೆ ಇನ್ನಿಲ್ಲ’ ಎನ್ನುವ ಸುದ್ದಿಯನ್ನು ಅಕ್ಷರಲೋಕಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ತಮ್ಮ ಬದುಕಿನ ಅಷ್ಟೂ ಘಟನೆಗಳನ್ನು ಯಥಾವತ್ತಾಗಿ ಮುಂದಿಟ್ಟು, ಸರಿ-ತಪ್ಪುಗಳ ವಿಮರ್ಶೆಗೇ ಹೋಗದಂತೆ ಬದುಕಿದ ಶ್ರೇಷ್ಠ ಬರಹಗಾರ, ಬರಹದಲ್ಲೇ ಮೋಡಿ ಮಾಡಿದ ಮೋಡಿಗಾರ ರವಿ ಬೆಳಗೆರೆ. ಅಕ್ಷರವನ್ನೇ ಉಸಿರಾಗಿಸಿಕೊಂಡು ಅಕ್ಷರ ಯಜ್ಞ ಮಾಡುತ್ತಲೇ ಇಹಲೋಕ ತ್ಯಜಿಸಿದ ‘ಅಕ್ಷರ ಬ್ರಹ್ಮ’, ‘ಅಕ್ಷರ ಬೆಳೆಗಾರ’ ಬೆಳಗೆರೆಗೆ ಪ್ರೀತಿಯ ನಮನ.

    ಅಕ್ಷರವಿ’ಗೆ ನುಡಿನಮನ    


  ಯುವ ಮನಸುಗಳಲ್ಲಿ ಕನಸು ಬಿತ್ತಿದ ಅಕ್ಷರ ಬ್ರಹ್ಮ   


♦ ಸುಮನಾ ಲಕ್ಷ್ಮೀಶ
newsics.com@gmail.com


 ರವಿ ಬೆಳಗೆರೆ … ಸಾವಿರಾರು ಯುವ ಕಂಗಳಲ್ಲಿ ಕನಸುಗಳನ್ನು ಬಿತ್ತಿದ್ದ ಹೆಸರು. “ಹಾಯ್ ಬೆಂಗಳೂರು’, “ಓ ಮನಸೇ’ಗಳ ಮೂಲಕ ಹದಿಹರೆಯದ ತಲ್ಲಣಗಳು, ಪ್ರೀತಿ-ಪ್ರೇಮಗಳ ಕತೆಗಳನ್ನು ಅದ್ಭುತವಾಗಿ ತೆರೆದಿಟ್ಟ ಕನಸುಗಾರ. ಪ್ರೀತಿಯಲ್ಲಿ ಯಾವುದೂ ತಪ್ಪಲ್ಲ ಎನ್ನುವಂತೆ ತನ್ನದೇ ಬದುಕಿನ ಲೋಕವನ್ನು ಓದುಗರ ಮುಂದೆ ತೆರೆದಿಟ್ಟು ಖಾಸಗಿಯನ್ನೂ ಸಾರ್ವತ್ರಿಕಗೊಳಿಸಿದ ವಿಚಿತ್ರ ಜೀವ. ಅಮ್ಮ ಪಾರ್ವತಿ, ಪತ್ನಿ ಲಲಿತಾ, ಮಕ್ಕಳ ಹೆಸರುಗಳು ಯುವ ಮನಸ್ಸುಗಳಿಗೆ ತಮ್ಮದೇ ಮನೆಯ ಒಡಹುಟ್ಟಿದವರ ಹೆಸರುಗಳಂತೆ ಚಿರಪರಿಚಿತವಾಗಿತ್ತು. ಅಷ್ಟರಮಟ್ಟಿಗೆ ರಾಜ್ಯಾದ್ಯಂತ ಹವಾ ಸೃಷ್ಟಿಸಿದ್ದ ಬರಹಗಾರ.
ಮಾತಿನ ಮೋಡಿಗಾರ…
ರವಿ ಬೆಳಗೆರೆ…ಅದೆಷ್ಟು ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನದಲ್ಲಿ ನೆಲೆನಿಂತರೋ ಲೆಕ್ಕವಿಲ್ಲ. ಮೊಟ್ಟಮೊದಲು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಡೈರಿಯ ಮೂಲಕ ಅವರ ಕಂಠ ಎಲ್ಲರಿಗೂ ಪರಿಚಿತವಾಯಿತು. ಮಾತಿಗೆ ನಿಂತರೆ ಅದ್ಭುತ ವಾಕ್ಪಟು. ಯಾವುದೇ ಕತೆಯನ್ನಾದರೂ ಸೊಗಸಾಗಿ, ಮನಮುಟ್ಟುವಂತೆ, ಕೇಳುಗರು ತಾವೂ ಅದನ್ನು ಅನುಸರಿಸಲೇಬೇಕು ಎನ್ನುವ ನಿರ್ಧಾರ ತಳೆಯುವಂತೆ ಮಾಡುತ್ತಿದ್ದ ಮೋಡಿಗಾರ. ಅವರ ಸ್ಫೂರ್ತಿಯಿಂದಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಹುಡುಗ-ಹುಡುಗಿಯರಿಗೆ ಲೆಕ್ಕವಿಲ್ಲ. ಸಾಹಿತ್ಯದತ್ತ ಒಲವು ಬೆಳೆಸಿಕೊಂಡವರ ಸಂಖ್ಯೆಯೂ ಕಡಿಮೆಯಿಲ್ಲ. ಕನ್ನಡದ ಸ್ಟಾರ್ ಬರಹಗಾರ ಹಾಗೂ ಪತ್ರಕರ್ತ ರವಿ ಬೆಳಗೆರೆ ಬರೆದಿದ್ದೆಲ್ಲವೂ ಅದ್ಭುತ ಲೋಕವೇ. ಮಾರಾಟದಲ್ಲಿ ಅವರ ಪುಸ್ತಕಗಳು ದಾಖಲೆ ಸೃಷ್ಟಿಸುತ್ತಿದ್ದವು. ಕೊನೆಗೆ ತಮ್ಮದೇ ಪುಸ್ತಕದ ಅಂಗಡಿಯನ್ನೂ ತೆರೆದು ಯಶಸ್ವಿಯಾದವರು.
‘ಹಾಯ್ ಹಲೋ ನಮಸ್ತೆ ನಾನು ನಿಮ್ಮ ರವಿ ಬೆಳೆಗೆರೆ…’ ಎನ್ನುತ್ತಾ ಭೂಗತ ಲೋಕದ ಕರಾಳ ರಕ್ತ ಸಿಕ್ತ ಕಥೆಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ತಮ್ಮ ಅನುಭವ ಸಾರವನ್ನು ಯುವ ಮನಸ್ಸುಗಳಿಗೆ ಮನೋಲ್ಲಾಸವಾಗುವಂತೆ ತಮ್ಮ ಪ್ರೀತಿಯ ನುಡಿಗಳನ್ನು ಹೇಳುತ್ತ… ಭಯೋತ್ಪಾದನೆ, ಭೂಗತ ಇತಿಹಾಸ, ಕ್ರೈಂ ಸ್ಟೋರಿ, ಹತ್ಯಾ ಕಥನ, ಬದುಕು ಕಲಿಸಿಕೊಟ್ಟ ಜೀವನ ಪಾಠ, ವಿರಹ ವೇದನೆ, ಪ್ರೇಮ ಪತ್ರಗಳು, ಕವನ ಸಂಕಲನ… ಹೇಳುತ್ತಾ ಹೋದರೆ ಒಂದೇ ಉಸಿರಿನಲ್ಲಿ ಹೇಳಲಾರದಷ್ಟು ಸಾಧನೆ. ಬರವಣಿಗೆಯ ಮೆರವಣಿಗೆ ಮೂಲಕ ಬೆರಗು ಮೂಡಿಸುವಂತಹ ಅಕ್ಷರ ಸಾಮ್ರಾಜ್ಯ ಕಟ್ಟಿದ್ದು ಸಣ್ಣ ಸಾಧನೆಯಲ್ಲ.
ಜಾತಿಯ ಕಾಲಮ್ಮೇ ಇರಲಿಲ್ಲ…!
ಅವರ ಕನಸಿನ ಪ್ರಾರ್ಥನಾ ಶಾಲೆಯ ವಿಚಾರದಲ್ಲಂತೂ ಅವರು ಸೃಷ್ಟಿಸಿದ್ದು ಅಕ್ಷರ(ಶಃ) ಕ್ರಾಂತಿ. ಬೆಂಗಳೂರಿನಂಥ ನಗರದಲ್ಲಿ ಅತ್ಯಂತ ನಾಮಿನಲ್ ಎನ್ನುವಂಥ ದರದಲ್ಲಿ ಸಾಮಾನ್ಯರ ಮಕ್ಕಳೂ ಅತ್ಯುತ್ತಮ ಶಾಲೆಯಲ್ಲಿ ಓದುವ ವಾತಾವರಣ ನಿರ್ಮಿಸಿದವರು. ಜಾತಿಯ ರಾಜಕಾರಣ, ಜಾತಿಕಾರಣವನ್ನು ಬಲವಾಗಿ ದ್ವೇಷಿಸುತ್ತಿದ್ದ ಅವರು ತಮ್ಮ ಶಾಲೆಯ ಅರ್ಜಿ ಫಾರಂನಲ್ಲಿ ಜಾತಿಯ ಕಾಲಂಅನ್ನೇ ಕೈಬಿಟ್ಟಿದ್ದುದು ಅತ್ಯಂತ ಮಹತ್ವವಾದ ನಡೆಯಾಗಿತ್ತು.
“ಬೆಳಗೆರೆ ಕಚೇರಿಯಲ್ಲೇ ಇರ್ತಾರಂತೆ, ಅವರು ಮನೆಗೇ ಹೋಗೋದಿಲ್ವಂತೆ. ಅವರಿಗೆ ಎರಡನೇ ಮದುವೆಯಾಗಿದೆಯಂತೆ, ಮಗನೂ ಇದ್ದಾನಂತೆ’ ಎಂಬೆಲ್ಲ ಸುದ್ದಿಗಳು ಹರಡುವುದಕ್ಕೆ ಅವಕಾಶವೇ ಇಲ್ಲದಂತೆ ತಾನೇ ಎಲ್ಲವನ್ನೂ ಜಗಜ್ಜಾಹೀರುಗೊಳಿಸಿಕೊಂಡು ಬದುಕಿದ ಧೀರ.
ಸಾರ್ಥಕ ಬರಹಗಾರ…
ರವಿ ಜನಿಸಿದ್ದು ಬಳ್ಳಾರಿಯಲ್ಲಿ, 1958ರ ಮಾರ್ಚ್ 15ರಂದು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಬರಹದಲ್ಲಿ ಅದ್ಭುತ ಹಿಡಿತ ಹಾಗೂ ಒಲವನ್ನು ಹೊಂದಿದ್ದರಿಂದ ಬೆಂಗಳೂರಿಗೆ ಬಂದು ಕೆಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಬಳಿಕ, 1995ರಲ್ಲಿ “ಹಾಯ್ ಬೆಂಗಳೂರು’ ಶುರು ಮಾಡಿದರು. ಕನ್ನಡ ಪತ್ರಿಕೋದ್ಯಮದಲ್ಲಿ ಲಂಕೇಶ್ ಪತ್ರಿಕೆಗಿಂತಲೂ ಹೊಸ ಅಲೆಯನ್ನೇ ಸೃಷ್ಟಿಸಿದ ಕಪ್ಪು ಸುಂದರಿ “ಹಾಯ್ ಬೆಂಗಳೂರು’. ನಂತರ “ಓ ಮನಸೇ’ ಪಾಕ್ಷಿಕವನ್ನೂ ಆರಂಭಿಸಿದರು. ಮನಸುಗಳು, ಯುವ ಕನಸುಗಳು, ಪ್ರೇಮ-ಪ್ರೀತಿ-ಪ್ರಣಯಗಳಿಗೆ ಸಂಬಂಧಿಸಿದ ಲೇಖನ, ಕತೆಗಳನ್ನೇ ನೀಡಿದರೂ ಅದು ನೀಡುತ್ತಿದ್ದ ಅನುಭವಕ್ಕೆ ಸರಿಸಾಟಿಯಿಲ್ಲ. ಅದನ್ನೋದಿಯೇ ಎಷ್ಟೋ ಹೈದರು ಸರಿದಾರಿಗೆ ಬಂದ ಉದಾಹರಣೆಗಳೂ ಇದ್ದವು. ಹುಡುಗಿಯ ಹಿಂದೆ ಬಿದ್ದು ಜೀವನ ಕಳೆದುಕೊಳ್ಳಲು ಸಿದ್ಧರಾದವರು ಮರಳಿ ದಾರಿಗೆ ಬಂದವರೂ ಇದ್ದರು. ಒಬ್ಬ ಬರಹಗಾರನ ಸಾರ್ಥಕತೆ ಎಂದರೆ ಇದೇ ಅಲ್ಲವೇ?
ಖಾಸ್ ಬಾತ್, ಬಾಟಮ್ ಐಟಮ್ ಅಂಕಣಗಳು ರವಿಗೆ ತಂದುಕೊಟ್ಟ ಖ್ಯಾತಿ ಅಪಾರ. ತನಿಖಾ ವರದಿ, ಅಪರಾಧ ವರದಿಗಳಲ್ಲಿ ಪಳಗಿದ್ದ ಅವರು ಯುದ್ಧ ಭೂಮಿಗೂ ತೆರಳಿ ವರದಿ ಮಾಡಿದ್ದರು.
ಕಾದಂಬರಿಗಳ ಸರದಾರ…
ಬೆಳಗೆರೆ 12ಕ್ಕೂ ಕಾದಂಬರಿಗಳನ್ನು ಬರೆದಿದ್ದಾರೆ. ಹಲವು ಕಾದಂಬರಿಗಳನ್ನು ಅನುವಾದಿಸಿದ್ದಾರೆ. ನಿರಂತರವಾಗಿ ಬರೆಯುತ್ತಿದ್ದರೂ ಬರಹಗಳ ಮೋಡಿಯನ್ನು ಕಳೆದುಕೊಳ್ಳದ ಅಪರೂಪದ ಲೇಖಕ. ಮಾಂಡೋವಿ, ಸರ್ಪ ಸಂಬಂಧ, ಹೇಳಿ ಹೋಗು ಕಾರಣ, ಗಾಡ್ ಫಾದರ್, ಕಾಮರಾಜ ಮಾರ್ಗ, ಹಿಮಾಗ್ನಿ ಓದಲೇಬೇಕೆನ್ನುವಷ್ಟು ಚೆಂದ ಬರೆದಿದ್ದಾರೆ. ವಿವಾಹ, ಟೈಮ್ ಪಾಸ್, ರಾಜರಹಸ್ಯ, ನಕ್ಷತ್ರ ಜಾರಿದಾಗ, ಕಂಪೆನಿ ಆಫ್ ವುಮನ್, ಹಂತಕಿ ಐ ಲವ್ ಯೂ ಮುಂತಾದ ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಈ ಎಲ್ಲ ಕೃತಿಗಳು ಅತ್ಯುತ್ತಮವಾಗಿ ಮಾರಾಟಗೊಂಡ ಟಾಪ್ ಹತ್ತರ ಸಾಲಿನಲ್ಲೇ ಇರುತ್ತಿದ್ದವು ಎನ್ನುವುದು ವಿಶೇಷ.
ರವಿ ಅವರಿಗೆ ರಾಜ್ಯೋತ್ಸವ, ಕರ್ನಾಟಕ ಮಾಧ್ಯಮ ಅಕಾಡೆಮಿ, ಜೀವಮಾನದ ಸಾಧನೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ. ಅಕ್ಷರವನ್ನೇ ಉಸಿರಾಗಿಸಿಕೊಂಡು ಅಕ್ಷರ ಯಜ್ಞ ಮಾಡುತ್ತಲೇ ಇಹಲೋಕ ತ್ಯಜಿಸಿದ ‘ಅಕ್ಷರ ಬ್ರಹ್ಮ’, ‘ಅಕ್ಷರ ಬೆಳೆಗಾರ’ ಬೆಳಗೆರೆಗೆ ಪ್ರೀತಿಯ ನಮನ.

ಮತ್ತಷ್ಟು ಸುದ್ದಿಗಳು

vertical

Latest News

ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ; ನಗರದಲ್ಲಿ ಬಿಗಿ ಭದ್ರತೆ

newsics.com ಮೈಸೂರು; ಐತಿಹಾಸಿಕ ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಗರದ ಸುತ್ತಮುತ್ತ ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು,ನಿಯೋಜಿಸಲಾಗಿದೆ. ಸಂಜೆ 05:07 ರಿಂದ 5.18ರ ವರೆಗೆ ಸಲ್ಲುವ...

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...
- Advertisement -
error: Content is protected !!