Tuesday, December 5, 2023

108 ವರ್ಷಗಳ ಹಿರಿಯಜ್ಜ ಪ್ರೊ.ವೆಂಕಟಸುಬ್ಬಯ್ಯ

Follow Us

ಕನ್ನಡದ ಭಾಷಾ ತಜ್ಞ, ನಿಘಂಟು ತಜ್ಞ, ಶತಾಯಿಷಿ, ಶಬ್ದಬ್ರಹ್ಮ ಎಲ್ಲರ ಪ್ರೀತಿಯ ಪ್ರೊ.ವೆಂಕಟಸುಬ್ಬಯ್ಯನವರು ಇಹಲೋಕ ತೊರೆದಿದ್ದಾರೆ. ಚೈತನ್ಯದ ಚಿಲುಮೆಯಾಗಿ, ಭಾಷೆಯ ಬೆಳವಣಿಗೆಗೆ ಮಹತ್ವದ ಕಾಣಿಕೆ ನೀಡಿದ್ದ ಹಿರಿಯಜ್ಜ ಜಿ.ವಿ. ನಿಘಂಟು ರಚನೆಯಂಥ ಕಾರ್ಯಗಳ ಮೂಲಕ ಭಾಷೆಗೆ ಮಹತ್ವದ ಕೊಡುಗೆ ನೀಡಿದವರು. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಸಹೃದಯ, ಮಾನವೀಯ ಚೇತನವಾಗಿದ್ದರು ಜಿ.ವಿ.

ನುಡಿನಮನ

♦ ವಿಧಾತ್ರಿ
newsics.com@gmail.com

ಭಾಷೆಯೊಂದರ ಉಳಿವು-ಬೆಳವಣಿಗೆಗೆ ನಿಘಂಟು ರಚನೆಯಂಥ ಮಹತ್ವದ ಕಾರ್ಯ ಬೇರೆ ಇರಲಿಕ್ಕಿಲ್ಲ. ಯಾವುದೇ ಭಾಷೆಯಾದರೂ ಬಳಕೆಗೆ ಸಂಬಂಧಿಸಿದ ಒಂದಿಷ್ಟು ಗೊಂದಲ ಇದ್ದೇ ಇರುತ್ತದೆ. ಉದಾಹರಣೆಗೆ: ಕೂಲಂಕುಶವೋ, ಕೂಲಂಕಷವೋ ಎನ್ನುವುದು. ಇವೆಲ್ಲ ಭಾಷೆಗೆ ಸಂಬಂಧಿಸಿ ಬಹು ಸೂಕ್ಷ್ಮ ಹಾಗೂ ಮುಂದಿನ ಪೀಳಿಗೆಗೆ ಭಾಷೆ ಕಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ್ದಾಗಿರುತ್ತದೆ. ಇಂಥ ಗೊಂದಲ ನಿವಾರಿಸುವ ಕೆಲಸ ಮಾಡುವ ಮೂಲಕ ಕನ್ನಡ ಭಾಷೆಗೆ ಮಹತ್ತರ ಕೊಡುಗೆ ನೀಡಿರುವವರು ಪ್ರೊ.ಜಿ.ವೆಂಕಟಸುಬ್ಬಯ್ಯ. ಇದಕ್ಕಾಗಿ “ಶಬ್ದಬ್ರಹ್ಮ’ ಎಂದೇ ಕನ್ನಡಿಗರಿಂದ ಪ್ರೀತಿಯಿಂದ ಕರೆಸಿಕೊಂಡ ಶತಾಯುಷಿ ವೆಂಕಟಸುಬ್ಬಯ್ಯನವರು. ಏಪ್ರಿಲ್ 19ರಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. 108 ವರ್ಷಗಳ ಕಾಲ ತುಂಬು ಜೀವನ ನಡೆಸುವ ಜತೆಗೆ ಸಮಾಜಕ್ಕೆ ಅಪಾರ ಕೊಡುಗೆ ಸಲ್ಲಿಸುವ ಮೂಲಕ ಸಾರ್ಥಕವಾಗಿ ಬಾಳಿದ್ದಾರೆ.
ಇಗೋ ಕನ್ನಡ:
1991ರ ಸಮಯ. “ಪ್ರಜಾವಾಣಿ’ ಪತ್ರಿಕೆಯಲ್ಲಿ “ಇಗೋ ಕನ್ನಡ’ವೆಂಬ ಅಂಕಣದ ಮೂಲಕ ಭಾಷಾ ಬಳಕೆಗೆ ಸಂಬಂಧಿಸಿದ ಕಾಲಂ ಆರಂಭವಾಗಿತ್ತು. ಆರಂಭಿಸಿದ ಕೆಲವೇ ಸಮಯದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಈ ಅಂಕಣ, ಭಾಷಾ ಬಳಕೆಗೆ ಸಂಬಂಧಿಸಿದ ಬಹಳಷ್ಟು ಗೊಂದಲ ಬಗೆಹರಿಸಿ ಭಾಷೆಯ ಕುರಿತು ಸ್ಪಷ್ಟತೆ ನೀಡಿತು. ಬರಹಗಾರರು, ಪತ್ರಕರ್ತರು, ವಿಶ್ವವಿದ್ಯಾಲಯಗಳಲ್ಲಿ ಪ್ರಬಂಧ ಮಂಡಿಸುವವರು, ಭಾಷಾ ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಿತ್ತು. ಬಳಿಕ ಇದೇ ಹೆಸರಲ್ಲಿ ಸಾಮಾಜಿಕ ನಿಘಂಟನ್ನೂ ಹೊರತಂದರು. ಇದು ಸಹ ಸಾಕಷ್ಟು ಜನಪ್ರಿಯವಾಗಿದೆ. ಕನ್ನಡ ಭಾಷೆಯ ಬಳಕೆಗೆ ಸಂಬಂಧಿಸಿ “ಇಗೋ ಕನ್ನಡ’ವನ್ನೇ ಆಧಾರವಾಗಿ ಬಳಸಲಾಗುತ್ತದೆ. ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿಯೂ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಭಾಷೆಯ ಬೆಳವಣಿಗೆಗೆ ಇಷ್ಟೆಲ್ಲ ಕೊಡುಗೆ ನೀಡಿದ ಹಿನ್ನೆಲೆಯಲ್ಲಿಯೇ ಅವರಿಗೆ 2017ನೇ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿತ್ತು.

ಭಾಷೆ ಕೆಲಸಕ್ಕೆ ಗುರುಗಳೇ ಪ್ರೇರಣೆ
1913ರ ಆಗಸ್ಟ್ 23ರಂದು ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ ಜನಿಸಿದ್ದ ವೆಂಕಟಸುಬ್ಬಯ್ಯ ಅವರ ತಂದೆ ಗಂಜಾಂ ತಿಮ್ಮಣ್ಣಯ್ಯ. ಮೈಸೂರು ಅರಮನೆಯ ವಿದ್ವಾಂಸರಾಗಿದ್ದವರು. ತಾಯಿ ಸುಬ್ಬಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲೇ ಜರುಗಿತು. ಬಳಿಕ, ಮಧುಗಿರಿಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದರು. ಇಂಟರ್ ಮೀಡಿಯೇಟ್ ಮತ್ತು ಆನರ್ಸ್ ಅನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಿದರು. 1937ರಲ್ಲಿ ಎಂಎ ಪದವಿ, 1939ರಲ್ಲಿ ಬಿಟಿ ಪದವಿ ಪಡೆದರು.
ಬಿಎಂ ಶ್ರೀಕಂಠಯ್ಯ ಅವರ ಶಿಷ್ಯರಾಗಿದ್ದ ವೆಂಕಟಸುಬ್ಬಯ್ಯ ಅವರಿಗೆ ಕನ್ನಡದ ಕೆಲಸ ಮಾಡಲು ಗುರುಗಳೇ ಪ್ರೇರಣೆಯಾಗಿದ್ದರು. ಎಂಎ ಪದವಿಯ ಮೌಖಿಕ ಪರೀಕ್ಷೆಗೆ ಬಿಎಂಶ್ರೀ ಬಂದಿದ್ದರು. ವೆಂಕಟಸುಬ್ಬಯ್ಯ ಸೇರಿದಂತೆ ಇಬ್ಬರೇ ವಿದ್ಯಾರ್ಥಿಗಳಿದ್ದುದು. ಆಗ ಬಿಎಂಶ್ರೀ ಅವರು “ನೀವು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೀರಿ. ಆದರೆ, ನಿಮ್ಮ ಕೆಲಸ ಇಲ್ಲಿಗೆ ಮುಗಿಯುವುದಿಲ್ಲ. ಇನ್ನು ಶುರುವಾಗುತ್ತದೆ. ನಮಗೆ ವಯಸ್ಸಾಯಿತು. ಕನ್ನಡದ ಕೆಲಸವನ್ನು ನಿಮ್ಮ ಕೈಯಲ್ಲಿಡುತ್ತಿದ್ದೇವೆ’ ಎಂದು ಹೇಳಿದ್ದರು. ಇದೇ ಅವರಿಗೆ ಭಾಷೆಯ ಕೆಲಸಕ್ಕೆ ಪ್ರೇರಣೆ ನೀಡಿತು.
ಇಷ್ಟೇನಾ ನೂರು ವರ್ಷವೆಂದರೆ…!
ತಮಗೆ ನೂರು ವರ್ಷ ಸಂದಿದ್ದ ಸಂದರ್ಭದಲ್ಲಿ ಅವರು ಹೇಳಿದ್ದ ಮಾತೊಂದು ವಿಶಿಷ್ಟ. “ನೂರು ವರ್ಷಗಳಾಗಿಹೋದವೇ ಎಂದು ಅಚ್ಚರಿಯಾಗುತ್ತಿದೆ. ನೂರು ವರ್ಷ ಅನ್ನೋದು ಇಷ್ಟು ಬೇಗ ಆಗಿ ಹೋಗುತ್ತದೆಯೇ? ಇಷ್ಟೇನಾ ನೂರು ವರ್ಷ ಎಂದರೆ..?’ ಎಂದು ಅಚ್ಚರಿಪಟ್ಟಿದ್ದರು. “ನಾನು ಇನ್ನೂ ಕೆಲಸ ಮಾಡಬೇಕಿತ್ತು. ನನಗಿದ್ದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅವಕಾಶ ಕೆಲವೆಡೆ ಸಾಧ್ಯವಾಗಲಿಲ್ಲ’ಎಂದಿದ್ದರು.
ದಾಂಪತ್ಯ ಜೀವನ:
ತಮ್ಮ 21ನೇ ವಯಸ್ಸಿಗೆ ಸೋದರ ಸಂಬಂಧಿ ಲಕ್ಷ್ಮೀ ಅವರನ್ನು ಮದುವೆಯಾಗಿದ್ದರು ಜಿ.ವಿ. ಆಗ ಲಕ್ಷ್ಮೀ ಅವರಿಗೆ ಕೇವಲ 11 ವರ್ಷ. 11 ವರ್ಷದ ಬಾಲೆಯ ಕೈ ಹಿಡಿದು “ನಾನೆಂದರೆ ನಿನಗೆ ಇಷ್ಟವೇ? ಮದುವೆಯಾಗುತ್ತೀಯ?’ ಎಂದು ಕೇಳಿದಾಗ ಅವರು ಮುಖಮುಖ ನೋಡಿದ್ದನ್ನು ನೆನಪಿಸಿಕೊಂಡು ನಗುತ್ತಿದ್ದರು ಜಿ.ವಿ. ಸಂದರ್ಶನವೊಂದರಲ್ಲಿ ಇದನ್ನವರು ಹಂಚಿಕೊಂಡಿದ್ದರು. ಮದುವೆಯಾದ ಬಳಿಕ ತುಂಬು ಸಂಸಾರದಲ್ಲಿ ಲಕ್ಷ್ಮೀ ಅವರ ಸಹಕಾರವನ್ನು ಎಂದಿಗೂ ಸ್ಮರಿಸಿಕೊಳ್ಳುತ್ತಿದ್ದರು. “ನನ್ನ ಹೆಂಡತಿ ಎಂದರೆ ಹೊಂದಾಣಿಕೆ. ಆ ಶಬ್ದ ಲಕ್ಷ್ಮೀಯಿಂದಲೇ ಬಂದಿದೆ’ ಎನ್ನುತ್ತ ಹನಿಗಣ್ಣಾಗಿದ್ದರು.
‘ನನಗೆ ಅತ್ಯಂತ ಪ್ರಿಯವಾದ ಕನ್ನಡ ಶಬ್ದ ಹೊಂದಾಣಿಕೆ. ಈ ಶಬ್ದದ ಅರ್ಥವನ್ನು ಮಾಡಿಸಿಕೊಟ್ಟಾಕೆ ನನ್ನ ಹೆಂಡತಿ. ಆಕೆ ಹೊಂದಾಣಿಕೆಗೆ ಪರ್ಯಾಯ ಹೆಸರು.’
ಈ ದಂಪತಿಗೆ ಎರಡು ಗಂಡು, ಎರಡು ಹೆಣ್ಣುಮಕ್ಕಳು. ಲಕ್ಷ್ಮೀ ಅವರು ಆಗಿನ ಕಾಲಕ್ಕೇ ಎಲ್ ಎಸ್ ಪಾಸು ಮಾಡಿದ್ದರು. ಜಿವಿ ಅವರ ಕೃತಿಗಳ ಮೊದಲ ವಿಮರ್ಶಕಿ ಹಾಗೂ ಓದುಗ ಅವರೇ ಆಗಿದ್ದರು. 75ಕ್ಕೂ ವರ್ಷಕ್ಕೂ ಹೆಚ್ಚು ಕಾಲ ದಾಂಪತ್ಯ ಜೀವನವುಂಡಿದ್ದ ಜಿ.ವಿ.ಲಕ್ಷ್ಮೀ 2016ರಲ್ಲಿ ನಿಧನರಾಗಿದ್ದರು.
ಕಿರಿಯರಿಗೆ ಮಾರ್ಗದರ್ಶನ:
ಹಿರಿಯರು, ಕಿರಿಯರು ಎಂದು ಭೇದವಿಲ್ಲದೆ ಎಲ್ಲರೊಂದಿಗೂ ಆತ್ಮೀಯವಾಗಿ, ಸರಳವಾಗಿ ಬೆರೆಯುತ್ತಿದ್ದ ವೆಂಕಟಸುಬ್ಬಯ್ಯ ಅವರು ತಮ್ಮ ಎಷ್ಟೇ ಅಧ್ಯಯನದ ನಡುವೆಯೂ ಕಿರಿಯರಿಗೆ ಮಾರ್ಗದರ್ಶನ ಮಾಡಿದವರು. ಪತ್ರಿಕಾ ಕಚೇರಿಗಳಲ್ಲಿ ಭಾಷೆಯ ಬಳಕೆಗೆ ಸಂಬಂಧಿಸಿ ಯಾವುದೇ ಗೊಂದಲವುಂಟಾದರೂ ಸೀದಾ ಕರೆ ಹೋಗುತ್ತಿದ್ದುದು ವೆಂಕಟಸುಬ್ಬಯ್ಯನವರಿಗಾಗಿತ್ತು. ಈ ದೃಶ್ಯ ಅಂದಿನ ದಿನಗಳಲ್ಲಿ ಸಾಮಾನ್ಯವಾಗಿತ್ತು. ಯಾರೇ ಕರೆ ಮಾಡಿದರೂ ಅವರ ಗೊಂದಲ ಬಗೆಹರಿಸಿ, ತಾಳ್ಮೆಯಿಂದ ತಿಳಿಸುವುದು ಅವರಿಗೆ ಅತ್ಯಂತ ಪ್ರಿಯವಾದ ಕೆಲಸವಾಗಿತ್ತು.
ವಿವಿಧ ಹುದ್ದೆಗಳು:
ಹೊಸಗನ್ನಡ ಅರುಣೋದಯದ ಕಾಲವನ್ನು ಕಂಡವರು ವೆಂಕಟಸುಬ್ಬಯ್ಯ. ಕನ್ನಡದಲ್ಲಿ ನಡೆದ ಎಲ್ಲ ರೀತಿಯ ಪ್ರಯೋಗಗಳಿಗೆ ಸಾಕ್ಷಿಯಾದವರು. ಮಂಡ್ಯದ ಪ್ರೌಢಶಾಲೆಯೊಂದರಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು, ಮಹಾರಾಜ ಕಾಲೇಜಿನ ಅಧ್ಯಾಪಕ ಹುದ್ದೆ, ಬೆಂಗಳೂರು ಹೈಸ್ಕೂಲ್, ವಿಜಯಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿಕೊಂಡು ಪ್ರಾಧ್ಯಾಪಕರಾಗಿ ಬಳಿಕ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿ 1973ರಲ್ಲಿ ನಿವೃತ್ತಿಯಾದರು.
ಸಾರ್ವಜನಿಕ ಸೇವೆಯಲ್ಲಿ ಸಕ್ರಿಯ
ವಿದ್ಯಾರ್ಥಿಯಾಗಿದ್ದಾಗಲೇ “ಬಾಲ ಕರ್ನಾಟಕ’ ಸಂಘ ರಚನೆ ಮಾಡಿದ್ದ ವೆಂಕಟಸುಬ್ಬಯ್ಯನವರು, ಮಹಾರಾಜಾ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಹಲವಾರು ಕೃತಿ ರಚನೆ ಮಾಡಿ ಗಮನ ಸೆಳೆದಿದ್ದರು. ಬೆಂಗಳೂರಿಗೆ ಬಂದ ನಂತರ ಅವರ ಸಾರ್ವಜನಿಕ ಚಟುವಟಿಕೆ ದ್ವಿಗುಣಗೊಂಡಿತು. ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ನಿಘಂಟು ಸಮಿತಿ ಸದಸ್ಯರಾಗಿ, ಕನ್ನಡ ವಿಶ್ವಕೋಶ ಸಮಿತಿಯ ಸದಸ್ಯರಾಗಿ, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಭಾಷೆಗೆ ಸಂಬಂಧಿಸಿದ ವಿವಿಧ ಕಾರ್ಯಗಳಲ್ಲಿ ಏಕಕಾಲದಲ್ಲಿ ಮಗ್ನರಾಗುವುದು ಅವರ ಅತ್ಯಂತ ಸಹಜ ಕ್ರಿಯೆಯಾಗಿತ್ತು.
ಶಬ್ದಬ್ರಹ್ಮ:
ಕನ್ನಡದಲ್ಲೊಂದು ನಿಘಂಟನ್ನು ತರಲು ಜಿವಿ ಅವರಿಗೆ ಮೊದಲಿನಿಂದಲೂ ಆಸಕ್ತಿಯಿತ್ತು. 1943ರಲ್ಲಿ ಡಿ.ಎಲ್.ನರಸಿಂಹಾಚಾರ್ಯರು ನಿಘಂಟಿಗೆ ಶಬ್ದಗಳನ್ನು ಆರಿಸುವುದಕ್ಕೆ ಜಿ.ವಿ.ಅವರನ್ನೂ ಒಬ್ಬರನ್ನಾಗಿ ಆಯ್ಕೆ ಮಾಡಿದ್ದರು. ದೈನಂದಿನ ಭಾಷೆ, ಹಳೆಗನ್ನಡ, ಹೊಸಗನ್ನಡದಿಂದ ನಿಘಂಟಿಗೆ ಬೇಕಾದ ಶಬ್ದಗಳನ್ನು ಆಯ್ಕೆ ಮಾಡುವುದು ಇವರ ಕೆಲಸವಾಗಿತ್ತು. ಮುಂದೆ. ಎ.ಆರ್.ಕೃಷ್ಣಶಾಸ್ತ್ರಿಗಳು ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರಾಗಿದ್ದಾಗ ಅವರ ಆಸಕ್ತಿ ಗುರುತಿಸಿ ಮನೆಗೆ ಕರೆಸಿಕೊಂಡು ಪ್ರತ್ಯೇಕವಾಗಿ ಸಂಸ್ಕೃತ ನಿಘಂಟು, ವೈದಿಕ ನಿಘಂಟು, ಯಾಸ್ಕನ ನಿರುಕ್ತವನ್ನು ಹೇಳಿಕೊಟ್ಟರು. ಜಿ.ವಿ.ಅವರಿಗೂ ಅಪಾರ ಆಸಕ್ತಿ. ಮುಂದೆ ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರೂ ಆದರು.
ಜಿ.ವಿ. ಎಂದರೆ…
ರಾಮಕೃಷ್ಣ ಸ್ಟೂಡೆಂಟ್ ಹೋಮ್ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದ್ದಾರೆ. ಬಡ ಮಕ್ಕಳಿಗೆ ಬಿಡುವಿನ ಸಮಯದಲ್ಲಿ ಪಾಠ ಹೇಳಿ ಅವರ ಪ್ರೀತಿ ಸಂಪಾದಿಸಿದ್ದರು.
“ಇಡೀ ದೇಶದಲ್ಲಿ ಒಂದೇ ಮಾದರಿಯ ಶಿಕ್ಷಣ ಇರಬೇಕು. ಇಂಗ್ಲಿಷ್ ಮಾಧ್ಯಮ ಬೇಡ. ಅದರಿಂದ ಭಾಷೆ ಖಂಡಿತವಾಗಿ ಕಲಿಯಲು ಸಾಧ್ಯವಿಲ್ಲ. ಅದಕ್ಕೆ ಬೇರೆ ಮಾದರಿಯ ಕಲಿಕೆ ಬೇಕು’ ಎಂದು ಪ್ರತಿಪಾದಿಸುತ್ತಿದ್ದರು.
ಕೃತಿಗಳು-ಪ್ರಶಸ್ತಿಗಳು:
ನಯಸೇನ, ಅನುಕಲ್ಪನೆ (ವಿಮರ್ಶೆ), ವಿಕಾಸ, ಕಾವ್ಯಲಹರಿ, ಕಾವ್ಯಸಂಪುಟ (ಸಂಪಾದನೆ), ಶಂಕರಾಚಾರ್ಯ, ಕಬರೀ, ಲಿಂಡನ್ ಜಾನ್ಸನ್ (ಅನುವಾದ), ರಾಬಿನ್ಸನ್ ಕ್ರೂಸೋ, ಕವಿ ಜನ್ನ, ಚಾವುಂಡರಾಯ (ಮಕ್ಕಳ ಕೃತಿಗಳು), ನಳಚಂಪು ಸಂಗ್ರಹ, ಅಕ್ರೂರ ಚರಿತ್ರೆ ಸಂಗ್ರಹ, ಕರ್ಣ ಕರ್ಣಾಮೃತ ಮುಂತಾದ 60ಕ್ಕೂ ಅಧಿಕ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಪಂಪ, ರಾಜ್ಯೋತ್ಸವ, ಸಾಹಿತ್ಯ ಅಕಾಡೆಮಿ, ಶಂಬಾ ಪ್ರಶಸ್ತಿ, ಸೇಡಿಯಾಪು, ಅನಕೃ ಪ್ರತಿಷ್ಠಾನ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 2011ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಮತ್ತಷ್ಟು ಸುದ್ದಿಗಳು

vertical

Latest News

ವಿಜಯೇಂದ್ರ ಪತ್ನಿ ಸಹೋದರನ ಮನೆ ಮೇಲೆ ಲೋಕಾಯುಕ್ತ ದಾಳಿ

Newsics.com ಕಲಬುರಗಿ : ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ನಿ ಸಹೋದರ ಡಾ ಪ್ರಭುಲಿಂಗ ಮಾನ್ಕರ್ ಅವರ ಮನೆ...

ಭಾರತದಲ್ಲಿ 75 ಲಕ್ಷಕ್ಕೂ ಅಧಿಕ ವಾಟ್ಸ್ ​ಆ್ಯಪ್ ಅಕೌಂಟ್ ಬ್ಯಾನ್

Newsics.com ನವದೆಹಲಿ : ಮೆಟಾದ ತ್ವರಿತ ಮೆಸೇಜಿಂಗ್ ಪ್ಲಾಟ್​ಫಾರ್ಮ್ ವಾಟ್ಸ್​ಆ್ಯಪ್ ಭಾರತದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 75 ಲಕ್ಷಕ್ಕೂ ಅಧಿಕ ವಾಟ್ಸ್​ ಆ್ಯಪ್ ಖಾತೆಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ. 2021 ಬಳಕೆದಾರರ ಸುರಕ್ಷತ...

ತೆಲಂಗಾಣದ ನೂತನ ಸಿಎಂ ಇವರೇ : ನಾಳೆಯೇ ಪ್ರಮಾಣ ವಚನ..!!

Newsics.com ಹೈದರಾಬಾದ್ : ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಇದೀಗ ಬಂದ ಮಾಹಿತಿ ಪ್ರಕಾರ, ರೇವಂತ್ ರೆಡ್ಡಿ ಅವರನ್ನೇ...
- Advertisement -
error: Content is protected !!