– ನಂದಿನಿ ವಿಶ್ವನಾಥ ಹೆದ್ದುರ್ಗ
ಹೆಜ್ಜೆ ಕೊಳಕೆಂಬುದು ತಿಳಿದಿದ್ದರೂ
ತೊಳೆದ ನೆಲವನ್ನು ಮತ್ತೆ ಒರೆಸಿ
ಥಳಥಳಿಸುತ್ತೇವೆ
ನಾಳೆ ಬರುವ ಅವರ
ಸಲುವಾಗಿ.
ಬಂದವರು ಹೋದ ಮೇಲೆ
ಹೊಳೆದಿದ್ದ
ನೆಲದ ಮೇಲೆ ಹಾವು ಹೊರಳಿದ
ಹಾಗೆ ಇದು
ಒರೆಸಲಾಗದ ಕುರುಹು
ಭರಿಸಲಾಗದ ನೋವು!
ಸೆಜ್ಜೆಯೊಳಗೂ
ಉಜ್ಜಿ ಮೆತ್ತಿದ್ದ ದಾರಿಗುಂಟದ ಕೆಸರು.
ಎದೆ…
ಆಗ ತಾನೆ ಸಾರಿಸಿದ ಹಸಿ ನೆಲ.
ಹೀಗೆ
ಬಂದವರು
ಹಾಗೆ
ಹೋದ ಮೇಲೆ
ಮನ.. ತಳ ಒಡೆದ ತಪ್ಪಲೆ
ಉಳಿಯುವುದು ಇಲ್ಲಿ
ಬರೀ ಕಲೆ..!
ನಾವು ಹೆಂಗಸರೇ ಹೀಗೆ
ಹೊಸಿಲಿನೊಳಗಡೆ
ಹಠದ ಜೊತೆಗೆ
ಹಗೆಯ ಮೊಳಕೆ ಕಟ್ಟಿ
ದಣಿಯುತ್ತೇವೆ
ಉಸಿರುಗಟ್ಟಿ.
ಆಸರಕೆ
ಹೊಸಿಲಾಚೆ ಹೊರಟು
ನಿಂತು ಒಣಮರದ ಕೆಳಗೆ
ಬೇಡುತ್ತೇವೆ ನೆರಳು
ಭ್ರಮಿಸುತ್ತೇವೆ ಹೂ ಘಮಲು.
ಹಣ್ಣಿಗಾಗಿ
ಟೊಂಗೆ ತುದಿಯೇರಿ
ನೆಲಕುರುಳಿ ನಲುಗಿ
ಮನೆ
ತಲುಪಿ ಮಾಡುತ್ತೇವೆ ತಲಾಶು.
ಎಂದೋ ಇಟ್ಟು
ಮರೆತಿದ್ದ ಒಂದು
ಪಕಳೆ ಕಳಚಿದ್ದ ಹೂವು.
ನೆನಪು ನೀರೊಲೆಯ
ಉರಿಯೊಳಗೆ.
ಉಳಿಯುವುದು ಬರೀ ಬೇಗೆ
ನಾವು ಹೆಂಗಸರೇ ಹೀಗೆ
ಜೀನ್ಸು ತೊಟ್ಟು
ತೆಗೆಯುತ್ತೇವೆ ಜ್ವರಕ್ಕೆ ದೃಷ್ಟಿ.
ತುಂಡುಗೂದಲಿಗೇ
ದುಂಡು ಮಲ್ಲಿಗೆ ಗಿಡಿದು
ಓದುತ್ತೇವೆ ಪರಿಮಳದ
ಕವಿತೆ.
ಕಿವಿಯಿದ್ದರೆ
ಮೂರು ದಾರಿ ಕೂಡುವಲ್ಲೂ
ಪ್ರವರ ಬಿಚ್ಚುತ್ತೇವೆ.
ನಕ್ಕು ಮಾತಾಡಿದವನ
ದುಃಖಕ್ಕೆ ಬಿಡುವಾಗಿ
ಸೋಗನ್ನೆ ಮಾಗಿದ
ಮನವೆಂದು
ಒಳಗಿರಲಾಗದೆ ತಳಮಳಿಸಿ
ತಿರುವಿನಲಿ ದಿಕ್ಕು ಬದಲಿಸಿ
ದಯೆಗಾಗಿ ಗುಡಿಯ ನೋಡಿ..
ಕೊನೆಗಿಲ್ಲಿ ಉಳಿಯುವುದಾದರೂ ಏನು?
ಹೀಗೆ ತಳಮಳಿಸುವ ಹೃದಯವಷ್ಟೇ
ತನ್ನಲ್ಲಿ ತಾನು!