- ರಾಜ್ ಆಚಾರ್ಯ
ಕವಿತೆ ಬರೆಯುವುದೇಕೆ
ನಿಲ್ಲಿಸಿದೆ ಎಂದೇಕೆ ಕೇಳಿದೆ
ಖಾಲಿ ಹಾಳೆಗಳ ತುಂಬೆಲ್ಲ
ಮತ್ತದೇ ನಿಶ್ಯಬ್ಧ ಪದಗಳು
ತನಿಯೊಡೆಯದ ಭಾವ
ಸವೆದ ಪೆನ್ನಿನ ನಿಬ್ಬಿಗು
ಮೂಡದ ಮಸಿಯ ಬೆರಗು
ನಿಷ್ಪ್ರಂಪಚದ ಪಲಕುಗಳು
ನಿನ್ನ ಹಸಿ-ಬಿಸಿ ನೆನಪುಗಳಿಗೆ
ಮೊದಲಿನ ಮಾದಕತನವಿಲ್ಲ
ಮನೆಯಂಗಳದ ಮಲ್ಲಿಗೆ
ಮೊಗ್ಗುಗಳೇಕೆ ಅರಳುತಿಲ್ಲ
ಸಂಜೆಗಣ್ಣಿನ ನೋಟಕೆ
ಈಗೀಗ ಪೊರೆಬಂದಂತಿದೆ
ಕಾಲಚಕ್ರದ ಉರುಳಿಗೆ
ಕೊರಳನೊಡ್ಡಿ ಬರಿದಾದೆ
ಬರೆಯದೆ ನನಗೇ ನಾನೇ
ನಿನಗೆ ಹೇಳದೆ-ಕೇಳದೆ
ಹೀಗೆಯೇ ಸುಮ್ಮನಾದೆ