- ಗುರು ಹಿರೇಮಠ ಇಳಕಲ್
ಈ ಸಂಜೆಯಲಿ
ಒಂದು ಮತ್ತೊಂದಾಗುವ ಸುಳಿವುಗಳನ್ನು
ತಂಗಾಳಿ ಹೊತ್ತು ತರುವುದು
ಕಡಲಿನ ದಡದಲಿ ನಡೆಯುವಾಗ
ನಾನಂತೂ ಊಹಿಸಿರಲಿಲ್ಲ.
ನೋಡಿ ನಕ್ಕ ಆ ದೈತ್ಯ ಅಲೆಗಳ
ಬಣ್ಣಬಣ್ಣದ ಮಾತುಗಳ ಅಂತಃಸತ್ಯವ
ಬಂಡೆಯ ಮೇಲೆ ಗೀಚಿ ಹೋಗುತ್ತಿದ್ದೆ..
ಏಕಾಂತದ ಆ ಮೌನಗಳು
ಕಡಲಿನ ಮಧ್ಯೆ ನಿಲ್ಲದಂತೆ
ನಗುತ ಹಾಕಿದ ಕೇಕೆ, ಅಟ್ಟಹಾಸ,
ಸಿಡಿಲಿಗೂ ಮೀರಿದಂತಿತ್ತು….
ಒಲವಿನ ಬುತ್ತಿ ಹಾಡಾಗಿ
ಹಡಗಿನ ಅವಶೇಷಗಳೊಂದಿಗೆ
ಜತೆಯಾಗಿ
ಮರಳಲಿ ಈಗಾಗಲೇ ಇತಿಹಾಸವಾಗಿವೆ..
ಅಲೆಮಾರಿಯಾಗಿ ತೋರಿ ಬರುವ
ಆ ಚಿಪ್ಪುಗಳಲಿ ನಾಳೆಗಳನ್ನ ವಂಚಿಸುವ
ಕುರಿತು ಮುತ್ತುಗಳು
ಟಿಪ್ಪಣಿಗಳನು ಬರೆದು ಕಳಿಸಿವೆ.
ಕೈ ಹಿಡಿದು ಕಡಲು ನೋಡಿದ
ಆ ಸಂಭ್ರಮದ ಪ್ರತಿ ಕ್ಷಣದ ನೆನಪುಗಳು
ಮುರಿದ ಮೆಟ್ಟಲುಗಳಾಗಿ ಈಗ
ಅಲೆಗಳಲಿ ರಾರಾಜಿಸುತ್ತಿವೆ…