- ವಾಕ್ ಸಿದ್ಧಿ
ಹಂಬಲ
ಬಣ್ಣ ಬಣ್ಣಗಳ ಸರಣಿ ಬಲ್ಪುಗಳಲಂಕಾರದಿ ಜಗಮಗ ಬೆಳಗುತಿವೆ ಬಂಗಲೆಗಳ ಅಂಗಳ..!
ಗುಡಿಸಲ ಮುಂದೆ ಹಚ್ಚಿಟ್ಟ ಹಣತೆಗಳಿಗೋ ಗಾಳಿಯ ದಾಳಿ ಎದುರಿಸಿ ಬೆಳಗುವ ಹಂಬಲ!!
ಅಹಮಿಕೆ
ಅಹಮಿಕೆಯೆಂಬ ಬಲೂನಿನ ಬುಡಕೆ
ಚುಚ್ಚಿದಾಗ ನಿಜದ ಸೂಜಿಮಣಿ..!
ಜೋರು ಸದ್ದುಮಾಡಿ ಹೆದರಿಸುವುದು
ಗಾಳಿತುಂಬಿದ್ದ ದುರಹಂಕಾರದ ದ್ವನಿ…!!
ಕಂದರ
ಬೆಂದಷ್ಟೂ ಗಟ್ಟಿಯಾಗಿ ಇಟ್ಟಿಗೆಯಾದ ಮಣ್ಣು ಚೆಂದಗಾಣಿಸಿತು ಮನೆಮಂದಿರಗಳ ಹಂದರ..!
ನೊಂದಷ್ಟೂ ದಿಟ್ಟವಾಗಿ ಬದುಕುವ ಹೆಣ್ಣು ತುಂಬಲೇಬೇಕು ಮನಗೊಂದಲಗಳ ಕಂದರ..!!
ತಪ್ಪೊಪ್ಪು
ಆತ್ಮೀಯರ ತಪ್ಪುಗಳ ಕುರಿತು ಅರಿವಿದ್ದರೂ
ದೇವರಂತೆ ಇದ್ದುಬಿಡು ಹೇಳದೆ ಸುಮ್ಮನೆ..!
ತಿಪ್ಪೆಯ ಮೇಲರಳಿದ ಹೂವಿನಂದ ಮರೆತು
ಬುಡ ಕೆದಕಿದಷ್ಟೂ ಸಹಿಸಲಾಗದ ವಾಸನೆ..!!
ಸಂಹಿತೆ
ಅನ್ಯರ ಸರಿ ತಪ್ಪುಗಳ ಕುರಿತು ಅವರವರ
ಮೂಗಿನೇರಕ್ಕೆ ಆಡಿಕೊಳ್ಳುವವರಿಗಿಲ್ಲ ಕೊರತೆ.!
ಎಲ್ಲರಿಗೂ ಇದ್ದರೆಷ್ಟು ಚೆಂದ ತನ್ನಂತೆ ಪರರೆಂದು
ಅರಿತು ನಡೆಯುವ ವಿವೇಕದ ನೀತಿ ಸಂಹಿತೆ..!!