- ತೇಜಶ್ರೀ ಜ.ನಾ.
ಮಾತು, ಹೆಣದ ಮೇಲಣ ಹಕ್ಕಿ
ಕೂತು ದಣಿವಾರಿಸಿಕೊಳ್ಳುತ್ತಿದೆ
ಕತ್ತು ಕೊಂಕಿಸಿ ನಿರುಕಿಸಿ
ಒದ್ದೆ ಪುಕ್ಕಗಳ ಸಂದಿ,
ದಿಕ್ಕು ತಪ್ಪಿದ ದಿನದ ಆಯಾಸ
ಕೆರೆದುಕೊಳ್ಳುವ ಮಾತು
ಹೆಣದ ಮೇಲಣ ಹಕ್ಕಿ
ಇಂದೆಂಬುದು ನಾಳೆಯ ಕಾಲ್ಕೆಳಗಿನ ಹೆಣ
ಸಂದಿಗೊಂದಿ ಹತ್ತಿ ಇಳಿದು
ಎಷ್ಟೋ ಹೆಜ್ಜೆ ನಡೆದ ದಾರಿಯಲ್ಲೆ ನಡೆದು
ನಿಂತದ್ದು ನಡೆಯಾದರೆ, ನಡೆದದ್ದು ನಡೆಯಷ್ಟೇ ಅಲ್ಲ
ಲೋಕಕ್ಕೆ ಕಾಣುವುದೆಂಬುದು ಕಂಡಿಲ್ಲ
ಕಾಣುವುದಿಲ್ಲವೆಂದು ಮಾಡಿದ್ದು ಗುಲ್ಲು;
ಹೆಣ ತೇಲುತ್ತಿದೆ,
ಆಳದಲ್ಲಿ ಮರಳು ಮತ್ತು ನೀರು
ಒಂದರ ಮಡಿಲಲ್ಲಿ ಇನ್ನೊಂದು ಮಲಗಿವೆ
ಶತಶತಮಾನಗಳಿಂದ ಹಕ್ಕಿ ನಿಂತಿರುವುದು
ಮಾತು ಬಸಿದ ಹೆಣದ ಮೇಲೆ.