ಬಾ ಹೊಸ ವರ್ಷವೆ
ಹರ್ಷದ ಸ್ಪರ್ಶವೆ
ಹೊಂಗನಸುಗಳ ಹರಿಕಾರ..!
ತಾ ನವತಾರೆಯ
ಬೆಳಕಿನ ಧಾರೆಯ
ಎಳೆಯಲಿ ಜಗವು ಹೊಸ ತೇರ..!
ಮೇಘದ ಮಧುವನು
ನವಿಲಿಗೆ ಹನಿಸು..!
ಬಾಡಿದ ಕಾಡಿಗೆ
ಹಸಿರನು ಉಣಿಸು..!
ಬಿದಿರೆದೆ ಗಾಯದಿ
ಮುರಳಿಯು ಮೂಡಲಿ…
ತಳಿರೊಳು ಆಡುತ
ಕೋಗಿಲೆ ಹಾಡಲಿ..!
ಮಗುಚುತ ಭೇದದ
ಕೊಳೆ ಅಧ್ಯಾಯ..!
ಹೊಳೆಯಿಸು ಹೊಸ ಪುಟ
ಸಮತೆಯ ಧ್ಯೇಯ..!
ಹಿಗ್ಗಿಸು ಮಾನವ
ಜೀವನ ಪ್ರೀತಿ..!
ಬೆಳಗಲಿ ಮನ ಮನೆ
ಪ್ರಜ್ಞೆಯ ಪ್ರಣತಿ..!
- ಜಯಕವಿ, ಮೈಸೂರು