• ಪ್ರಭಾಕರ ತಾಮ್ರಗೌರಿ ಗೋಕರ್ಣ
newsics.com@gmail.com
ಹುಣ್ಣಿಮೆಯ ದಿನ
ಬಾನಿನಲ್ಲಿ ಇಣುಕಿ ನೋಡಿದೆ
ಅಸಂಖ್ಯ ನಕ್ಷತ್ರಗಳು ಮಿನುಗುತ್ತಿದ್ದವು
ಬಂಜೆ ಮೋಡಗಳು
ಸಂತಸದಿಂದ ರೆಕ್ಕೆ ಬಿಚ್ಚಿ ಹಾರಾಡುತ್ತಿದ್ದವು
ತುಂಬು ಮೊಗದ ಚಂದ್ರ
ನಕ್ಕು ನಲಿಯುತ್ತಿದ್ದ
ಸಾಗರ ಸಂತಸದಿಂದ
ಉಕ್ಕಿ ಭೋರ್ಗೆರೆಯುತ್ತಿತ್ತು
ಅದೇ ಕಡಲ ಮೊರೆತದ ಅಲೆಗಳು
ಶೃತಿಯಾಗಿ ತೇಲಿಬರುತ್ತಿತ್ತು
ಎಂಥ ಉತ್ಸಾಹ !
ತುಟಿಯಂಚಿನಲ್ಲಿ ಬೆಳದಿಂಗಳ ನಗೆ
ಮುಂಗುರುಳು ಅತ್ತಿತ್ತ ಓಲಾಡುತ್ತಿತ್ತು
ಕಣ್ಣು , ಮುಂಗುರುಳು ಹೊಳೆ ಹೊಳೆದು
ಬಿಳಿ ಹಾಳೆಯ ಮೇಲೆ ಪದ್ಯವಾಯಿತು
ಮುಗುಳು ನಗೆ
ಮೋಡಗಳು ಪದ್ಯವಾದವು
ಪದ್ಯವಾಗಬೇಕೆಂದು ನನಗೂ ಅನ್ನಿಸಿತು
ಕೂಡಲೇ, ಕಡಲ ಕನ್ನಡಿಯೊಳಗೆ
ಇಣುಕಿ ನೋಡಿದೆ
ನನ್ನ ಬಿಂಬ ಎಲ್ಲೂ ಕಾಣಲಿಲ್ಲ
ನಾನು ಪದ್ಯವಾಗಲಿಲ್ಲ
ನನ್ನ ಬಿಂಬ ಕಡಲ ಸುಳಿಯೊಳಗೆ
ಸಿಕ್ಕು ಲೀನವಾಯಿತು