- ಎಂ.ಆರ್. ಕಮಲ
ಅಯ್ಯೋ ಸೀದ ವಾಸನೆ !
ಅಡುಗೆ ಮನೆಯಲ್ಲಿ ಇಣುಕುತ್ತಾಳೆ.
ಒಲೆ ಆರಿದೆ, ಕುದಿಸಿದ್ದ ಹಾಲು ತಣ್ಣಗಾಗಿದೆ
ಹಿಂದು, ಮುಂದಿನ ಬಾಗಿಲಿಂದ ತೂರಿ ಬಂತೋ ಏನೋ
ಅದ್ಯಾವಾಗ ಈ ಮನೆಯ ಮೂಲೆ ಮೂಲೆ ತುಂಬಿಕೊಂಡಿತು
ಯಾವ ವಾಸನೆಯಿದು? ಪರಿಚಿತ ಅಷ್ಟೇ ಅಪರಿಚಿತ!
ನೆರೆಮನೆಯ ಗೆಳತಿಯನ್ನು ಕೇಳುತ್ತಾಳೆ
ಏನು ವಾಸನೆಯಿದು, ನಿಮ್ಮ ಮನೆಯದೇ?
`ಇಲ್ಲ, ಒಲೆ ಆರಿದೆ, ಕುದಿಸಿದ್ದ ಸಾರು ತಣ್ಣಗಾಗಿದೆ’
ಎಲ್ಲಿಂದ ಬರುತ್ತಿದೆ? ಯಾವ ಮನೆಗೆ ಬೆಂಕಿ ಹೊತ್ತಿದೆ
ಮಲ್ಲಿಗೆಯ ಬಳ್ಳಿ, ಮೊಗ್ಗು, ಹೂವು ಎಲ್ಲ ಸುಟ್ಟಂತಿದೆ!
ಅಯ್ಯೋ ಸೀದ ವಾಸನೆ!
ಬೀದಿ ಬೀದಿಯೇ ವಾಸನೆಯ ಮೂಲ ಹುಡುಕುತ್ತಿದೆ
ಬಟ್ಟ ಬಯಲು, ಮರ, ಗಿಡ, ರಸ್ತೆ, ಕೇರಿ ಕೇರಿ
ಎಲ್ಲ ಕಡೆಯೂ ಹಬ್ಬಿದೆ, ಪರಿಚಿತ ಅಷ್ಟೇ ಅಪರಿಚಿತ
ದಿಕ್ಕೆಟ್ಟು ಓಡುತ್ತಾಳೆ, ಕಂಡವರನ್ನೆಲ್ಲ ಕೇಳುತ್ತಾಳೆ
ಸೀದ ಕೂದಲು, ಸುಟ್ಟ ಮುಖ,ಗುಳಿ ಕಣ್ಣ
ಹೆಣ್ಣೊಬ್ಬಳು ಎದುರು ಬಂದು ಕೇಳುತ್ತಾಳೆ.
`ನನ್ನ ಸುಟ್ಟ ಗಾಯಗಳು ಮಾಯಬೇಕಿದೆ,
ಕೂದಲು, ಕಣ್ಣಿಗೆ ಹೊಳಪು ನೀಡಬೇಕಿದೆ
ವಾಸನೆಯಿರದ ಮನೆಯ ಸಾಸುವೆಯ ತರಬಲ್ಲೆಯಾ?’