* ಮಧು ಬಿರಾದಾರ
response@134.209.153.225
ಓದು ಸಾಕು
ಹರಾಮಿ ಚರಿತ್ರೆಯ ಪುಟಗಳನ್ನು
ಮೊದಲ ಪುಟದಿಂದಲೇ ಆರಂಭ
ರಕ್ತಪಾತ ಮೋಸ ವಂಚನೆ
ಹಿಂಸೆಯ ಉಗ್ರ ಬಕಾಸುರತನ
ಬಣ್ಣ ಸಂಕೇತ ಘೋಷ ವಾಕ್ಯ
ಹೊತ್ತು ಕುಣಿಯಬೇಕು ಕತ್ತಿಯಂತೆ
ಪ್ರಾಸ ವಿನ್ಯಾಸದಲ್ಲಿ ಬಗೆ ಬಗೆ ರೂಪಕದಲ್ಲಿ
ವರ್ಣಿಸುತ್ತಾರೆ “ದೇವಮಾನ”ವರೆಂದು
ಹಾಗೆಯೇ ಕುಣಿತದಲ್ಲಿ ಸಾಗುತ್ತಲಿರಬೇಕು ಬಲಿಪೀಠದವರೆಗೆ
ಇಲ್ಲಿ ಬಾಯ್ತೆವಲಿಗಿ
ತೋಳ್ಬಲದ ತೆವಲಿಗೆ ತೊಡೆ ತೆವಲಿಗೆ
ಏನೆಲ್ಲವೂ ಸಂಭವಿಸಲು ಸಾಧ್ಯ
ನಾವು ಯಾರನ್ನು ದೂರಲಿಲ್ಲ
ದಂಡಯಾತ್ರೆ ಆಕ್ರಮಣ
ನಮ್ಮ ರಕ್ತದಲ್ಲಿ ಯಾವತ್ತೂ ಚಿಮ್ಮಲಿಲ್ಲ
ವಿಚಿತ್ರವೆಂದರೆ,
ನಮ್ಮ ಮನೆಗೆ ಬಂದ ಅತಿಥಿ ಯಜಮಾನನಾದ
ನಾವು ಗುಲಾಮರಾದೆವು
ವರ್ತಮಾನಕ್ಕೂ ಇತಿಹಾಸಕ್ಕೂ ಅಷ್ಟೇನು ವ್ಯತ್ಯಾಸವಿಲ್ಲ
ಶಾಲೆಯಲ್ಲಿ ಬೋಧಿಸಿದ 70 ವರ್ಷಗಳ ಗಿಳಿ ಪಾಠವೆ
ಜ್ಞಾನವೆನ್ನಲಾಗಿದೆ. ಹಾಗೆಂದು ಕರೆಯುತ್ತೇವೆ ಕೂಡ
ನಿಜವಾದ ಜ್ಞಾನ ಅಧಿಕಾರ ಪಶುಪಾಲಕರ ತಲೆಗಷ್ಟೇ ಮೆತ್ತಿದೆ
ಪಾಪ,
ಬಾಬಾನ ಒಂಟಿ ಹೋರಾಟಕ್ಕೆ ದಕ್ಕಿದ್ದು ಗಿಳಿಪಾಠವಷ್ಟೆ
ವಿಸ್ಮೃತಿಗೊಳಗಾದ ಕರಿಯರು ನಾವು
ಅವರೆಲ್ಲ ಸೇವೆ ಮಾಡಲು
ಗುಲಾಮರಾಗಲು
ನಾವಷ್ಟೆ ಅರ್ಹರು
ಹಾಗೆಂದು ನಿಯಮವಿದೆ
ಅವರ ಕಣ್ಣಳತೆ ಮೀರಿದರೆ
ದೇಶ ದ್ರೋಹಿಗಳೆಂಬ ಬಿರುದು ಬಳುವಳಿ
ಗಡಿಪಾರೆಂಬ ವಿಶೇಷ ಪ್ರವಾಸಿ ಪ್ಯಾಕೇಜ್
ಮಾತು ಬಾರದ
ಎಂದೂ ಒಂದಾಗದ ಕಪ್ಪು ಕೈಗಳು
ತಮ್ಮ ಶಿಲುಬೆ ತಾವೇ ಹೊತ್ತು ನಡೆಯಬೇಕು
ಮರುಭೂಮಿಯ ಗೋರಿ ಕಡೆಗೆ
ಇನ್ನಾದರೂ
ಚರಿತ್ರೆಯ ಅವಘಡ ಗ್ರಹಿಸಿ
ವರ್ತಮಾನ ರೂಪಿಸಲಾದರೂ
ಇತಿಹಾಸ ಓದಬೇಕು
ಮನುಷ್ಯ ಮನುಷ್ಯರೊಂದಿಗೆ
ನಡೆಸಿದ ಯುಗ ಯುಗಗಳ ಹೋರಾಟ
ತಿಳಿಯಲಾದರೂ ಓದಲೇಬೇಕು
ಬಾ ಮಗು
ಕೈಗೆ ಮೆತ್ತಿದ ರಕ್ತ ಬೆನ್ನಿಗಿರಲಿ
ಕಣ್ಣೆದುರಿನ ಅಕ್ಷರ ದೀಪ
ಯುಗದ ಕತ್ತಲೆ ಸರಿಸಿ ಉರಿಯುತ್ತಿರಲಿ…