- ಅರ್ಚನಾ ಎಚ್
ತಣ್ಣಗಿದ್ದು ಬಿಡು ದಯಮಾಡಿ
ಮಾತುಗಳ ಅಗ್ನಿಪರ್ವತ
ಸ್ಫೋಟಿಸಲಣಿಯಾಗಿದೆ…
ನಿನ್ನಟ್ಟಹಾಸಗಳನೆಲ್ಲಾ ಗರ್ಭದಲೇ
ಅವಿಚಿಟ್ಟು ಕೊತ ಕೊತ ಕುದಿಯುತ್ತನೇ ಇದೆ.!
ಸುಮ್ಮನಿದ್ದು ಬಿಡು
ಲಾವಾ ಚಿಮ್ಮಬಹುದು
ಸೂರ್ಯನ ಹೊರಮೈಯ
ತಾಪಮಾನಕ್ಕಿಂತ
ನಾಲ್ಕು ಪಟ್ಟು ಹೆಚ್ಚೇ ಇರಬಹುದು ಅದರುಷ್ಣ..
ಹತ್ತಿರಾಗುವ ಉದ್ಧಟತನವೇ!?
ಅದರೂರ್ಜದ ಅರಿವಿಲ್ಲ ನಿನಗೆ…
ಬೆಂಕಿಯ ಘನಶೇಷ ಸಿಗದು ಲವಲೇಶ….
ಸುಮ್ಮನಿದ್ದು ಬಿಡು..
ಲಾವಾ ಚಿಮ್ಮಬಹುದು
ಕಾಡಿಸಿ ಬೇಡಿಸಿ ಕಣ್ಣೀರಿಟ್ಟ ದಿನಗಳ
ಎಣಿಕೆಯಷ್ಟೂ ಬೆರಳಲಿವೆ..
ಬೆಣ್ಣೆ ಕಾಸಿ ತುಪ್ಪ ತೆಗೆವುದೂ ಗೊತ್ತು…!
ಹದಕ್ಕೆ ತರಲು ದಿನವೂ ತೊಳಸಿ
ಸಂಸಾರದ ಸೌಟು..!
ಪಾಕ ಬೆಲ್ಲದ್ದಾದರೂ ಬರೇ ಘಾಟು..!!
ಸುಮ್ಮನಿದ್ದು ಬಿಡು
ಲಾವಾ ಚಿಮ್ಮಬಹುದು…
ಈ ದಿನಗಳಲಂತೂ ಸುಮ್ಮನಿದ್ದು ಬಿಡು
ಮನಸ್ಥಿಮಿತ ತಾಳ ತಪ್ಪುತ್ತದೆ…
ಇಂಪಾದ ಕಂಠ ಅರುಚಿದರೆ ಸಿಡಿಲೇ!!
ತಿಂಗಳುಗಟ್ಟಲೆ ಗರ್ಭದಲೇ ಅದುಮಿಟ್ಟ
ಲಾವಾ ಹೀಗೂ ಸ್ಫೋಟಿಸತ್ತದೆ..
ಕೆನ್ನೀರಾಗಿ…! ಕಟ್ಟೆಯೊಡೆದು ಅಂಡ ಸಿಡಿದು…
ಸುಮ್ಮನಿದ್ದು ಬಿಡು
ಲಾವಾ ಚಿಮ್ಮಬಹುದು….