- ಮಾರುತಿ ದಾಸಣ್ಣವರ
response@134.209.153.225
ಗೊಂದಲದ ರಣಭೂಮಿಯ
ರಕ್ತ ಮಾಂಸದ ಕೆಸರಲ್ಲಿ
ನನ್ನವೇ ಹೆಣಗಳ ಎಡವುತ್ತ ಹೊರಟ
ವೀರ ಯೋಧನು ನಾನು
ನನ್ನೆದೆಯ ನಾಲಿಗೆಗಳ
ಅಸಮಾಧಾನದ ಕಿಡಿಗಳು
ಬಾಣಗಳಾಗಿ ನನ್ನ ಬತ್ತಳಿಕೆಯಲ್ಲಿ
ಚಡಪಡಿಸುತ್ತಿದ್ದರೂ
ಪ್ರಯೋಗಿಸಲಾರದ
ಅಸಹಾಯ ಶೂರ..
ಒಲವಿನಾಕಾಶದಲ್ಲಿ ಅವಕಾಶಗಳ
ಹುಡುಕುತ್ತಿರುವ ಸಂಬಂಧಗಳ
ಕುಣಿಕೆಯಲ್ಲಿ ಬಂದಿಯಾಗಿ
ನನ್ನನ್ನೇ ಹೋಳು ಹೋಳಾಗಿ
ಕುಯ್ದು ಕೊಟ್ಟ
ದಾನಶೂರ..
ಒಳಹೊಕ್ಕ ಹುರುಪಿನಲಿ
ಹೊರಬರುವ ಹಾದಿಯ
ಕಳಕೊಂಡ ಹುಡುಗ ಬುದ್ಧಿಯ
ದುಡುಕುವೀರ..
ಮಲಗಿದ್ದಾನೆ
ಬೇಡವೆಂದರೂ ಮುಳ್ಳುಗಳ
ಹಾಸಿಗೆಯ ಮೇಲೆ
ಸಾಯಲೊಲ್ಲದ, ಬದುಕಲೂ ಆರದ ಅಜ್ಜ
ಆತ ಬದುಕೆಲ್ಲಿ
ಅವರಿವರಿಗಾಗಿ
ಸತ್ತದ್ದೇ ಹೆಚ್ಚು..
ಮಂಡಿಯೂರಿ ಕುಳಿತ ಅಪ್ಪ
ಕಣ್ಣೊರೆಸಿಕೊಳ್ಳುತ್ತಾನೆ
ಯಾರಿಗೂ ಕಾಣದಂತೆ
ಆತ ಪಡೆದದ್ದಕ್ಕಿಂತ
ಕಳಕೊಂಡದ್ದೇ ಹೆಚ್ಚು..
ಯಾರು ಯಾರಿಗೋ ಶಾಪ ಹಾಕುತ್ತಿದ್ದಾಳೆ
ನಿಗಿ ನಿಗಿ ಕೆಂಡದ ಮುಂದೆ
ಕೂತ ಅವ್ವ..
ಹಂಡೆಯಲ್ಲಿ ಕತ ಕತ ಕುದಿಯುತ್ತಿದೆ
ನೀರು…
ಹೋರಾಡದೇ ಹೊಲಸಾದ
ನನ್ನ ಮೈಯ ಜಳಕಕ್ಕೆ…
ಅಸ್ತ್ರ ಹಿಡಿದಿದ್ದಾಳೀಕೆ
ಯಾರಿಗೋ ಗೊತ್ತಿಲ್ಲ..
ಆಟವಾಡಲು ಕೊಡು ಎಂದು
ಮಗ ರಂಪ ಮಾಡುತ್ತಿದ್ದಾನೆ…